ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುವ್ಯವಸ್ಥಿತ ಹಾಗೂ ಸಮಗ್ರ ವಾದ್ಯ ಸಂಗೀತ

Published : 27 ಸೆಪ್ಟೆಂಬರ್ 2024, 13:47 IST
Last Updated : 27 ಸೆಪ್ಟೆಂಬರ್ 2024, 13:47 IST
ಫಾಲೋ ಮಾಡಿ
Comments

ಯದುಗಿರಿ ಯತಿರಾಜ ಮಠದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಯತಿರಾಜ ಜೀಯರ್‌ ಸ್ವಾಮೀಜಿ ಅವರು ತಮ್ಮ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಸುಪರಿಚಿತರಾಗಿದ್ದಾರೆ.

ವೈವಿಧ್ಯಮಯ ಅವಿರತ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಮಠದಲ್ಲಿ ಉತ್ಸಾಹ, ಲವಲವಿಕೆ ಮತ್ತು ಜೀವಂತ ಕಳೆಯನ್ನು ಪುನಃ ಪ್ರತಿಷ್ಠಾಪಿಸಿದ್ದಾರೆ. ಶ್ರೀಗಳ 75ನೇ ಅಮೃತ ಮಹೋತ್ಸವ ಮತ್ತು 10ನೇ ಚಾತುರ್ಮಾಸ ವ್ರತದ ಮಂಗಳ ಕಾರ್ಯಕ್ರಮವನ್ನು ಔಚಿತ್ಯಪೂರ್ಣವಾಗಿ ಸಂಪನ್ನಗೊಳಿಸಿದರು. ಸೀಮೋಲ್ಲಂಘನೆಯ ಅಂಗವಾಗಿ ಉತ್ಕೃಷ್ಟ ಸ್ಯಾಕ್ಸಾಫೋನ್‌ ಕಲಾವಿದ ಕದ್ರಿ ಗೋಪಾಲನಾಥ್‌ ಮತ್ತು ಆರ್‌.ಎ.ರಮಾಮಣಿ ಅವರ ಶಿಷ್ಯ ಶ್ರೀಧರ್‌ ಸಾಗರ್‌ ಅವರ ವ್ಯವಸ್ಥಿತ ಮತ್ತು ಸಮಗ್ರತೆಯ ವಾದ್ಯ ಸಂಗೀತ ಕಛೇರಿ ಮನ ಸೆಳೆಯಿತು.

ಸ್ಥಾಪಿತವಾದ ವಾದ್ಯ ಸಂಗೀತ ಸಂಪ್ರದಾಯ ಮತ್ತು ಅನುಭವ ಜನ್ಯ ಜ್ಞಾನ ಸಂಗ್ರಹಣೆಯೊಂದಿಗೆ ಪ್ರತಿ ಸಂಗೀತ ವಾದ್ಯಕ್ಕೂ ಎಲ್ಲಾ ವೃತ್ತಿಪರ ವಾದ್ಯ ಸಂಗೀತಗಾರರು ಏನೇನು ಮಾಡಬಹುದೆಂಬುದರ ಪ್ರಮಾಣಿತ ನಿಯತಾಂಕಗಳು ಆ ಕಛೇರಿಯಲ್ಲಿ ತುಂಬಿ ಬಂದಿದ್ದು ಗಣನೀಯ. ಇವುಗಳು ವಿಶಿಷ್ಟವಾಗಿ ವ್ಯಾಪ್ತಿ, ನಮ್ಯತೆ, ಸಹಿಷ್ಣುತೆ, ನಿಖರತೆ ಮತ್ತು ವಿಸ್ತೃತ ತಂತ್ರಗಳ ನಿರೀಕ್ಷೆಗಳನ್ನು ಒಳಗೊಂಡಿರುತ್ತವೆ ಮತ್ತು ಅವು ಪ್ರಾಯೋಗಿಕವಾಗಿ ಸಾಧ್ಯವಾದವುಗಳ ಸಂಯೋಜನೆಯನ್ನು ಪ್ರತಿಬಿಂಬಿಸುತ್ತವೆ, ಶ್ರೀಧರ್‌ ಅವರ ವೃತ್ತಿಪರ ನುಡಿಸಾಣಿಕೆ ಸಫಲತೆಯನ್ನು ಕಂಡುಕೊಳ್ಳುತ್ತದೆ.

ಗುರುಗಳ ದಿವ್ಯ ಸನ್ನಿಧಿ, ಆಪ್ತ ವಾತಾವರಣ, ಅಪ್ಯಾಯಮಾನವಾಗಿದ್ದ ಪಕ್ಕವಾದ್ಯ ಸಹಕಾರ(ಪದ್ಮನಾಭ ಅವರ ಪಿಟೀಲು ಮತ್ತು ಕುಮಾರ್‌ ಅವರ ಮೃದಂಗ) ಮತ್ತು ಸುನಾದದ ಪ್ರಸರಣ ಮನಗೆದ್ದ ಅಂಶಗಳು. ಭೌಳಿ ರಾಗದ ಅಣ್ಣಮಾಚಾರ್ಯರ ʼಶ್ರೀಮನ್ನಾರಾಯಣʼ ಕೃತಿಯೊಂದಿಗೆ ಕಛೇರಿಯ ಶುಭಾರಂಭ. ಬಹಳ ಅಪರೂಪಕ್ಕೆ ಕೇಳಿಬರುವ ಸ್ವಾತಿ ತಿರುನಾಳರ ʼಜಯ ಜಯ ಪದ್ಮನಾಭʼ ಶ್ರವಣಾನಂದವನ್ನು ಕಲ್ಪಿಸಿತು. ವಾದ್ಯ ಸಂಗೀತವಾದರೂ ಅವರ ಗಾಯನಶೈಲಿ ವಾದನದಿಂದ ಸಾಹಿತ್ಯ ಶುದ್ಧಿ ಗಮನ ಸೆಳೆಯುವಂತಹುದು. ʼಮನಸಾಎಟುಲೊ”(ಮಲಯಮಾರುತ) ವಿನಿಕೆಯನ್ನು ಹದಗೊಳಿಸಿದ ನಿರೂಪಣೆ. ಚಿರಪರಿಚಿತ ರಾಗಗಳನ್ನು ಬಿಟ್ಟು ಕಳ್ಯಾಣ ವಸಂತ ರಾಗ ವಿಸ್ತಾರ ಮತ್ತು ʼನಾದಲೋಲುಡೈʼ ಕೀರ್ತನೆಯ ವಿಶದೀಕರಣದ ಮೂಲಕ ಅವರು ಶ್ರೋತೃಗಳಿಗೆ ಸವಿಶೇಷ ಆನಂದವನ್ನು ಕಲ್ಪಿಸಿದರು. ಸ್ವರವಿಸ್ತಾರವಂತೂ ವಾದ್ಯ ಪ್ರವೃತ್ತಿಗೆ ಇಂಬು ಕೊಟ್ಟಿತು. ಪುರಂದರದಾಸರ ʼಗೋವಿಂದಾ ನಿನ್ನ ನಾಮವೇ ಚಂದʼ ಹರಿಕಾಂಭೋಜಿ ರಾಗ ಜನ್ಯ ಜನಸಮ್ಮೋದಿನಿ ರಾಗದಲ್ಲಿ ರಸಿಕರನ್ನು ಭಕ್ತಿ, ಭಾವ ಮತ್ತು ನಾದದಲ್ಲಿ ತೇಲಾಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT