ಸೋಮವಾರ, ಸೆಪ್ಟೆಂಬರ್ 20, 2021
20 °C

ಧವಳ ಕುಂಚ | ಮುಂಗೈ ಕಳೆದುಕೊಂಡರೂ ಮೂಲೆ ಸೇರದ ಕಲಾವಿದನ ಕಥೆ

ವಿಶಾಖ ಎನ್. Updated:

ಅಕ್ಷರ ಗಾತ್ರ : | |

Prajavani

ಇನ್‌ಸ್ಟಾಗ್ರಾಂನಲ್ಲಿ ಕಲಾವಿದನೊಬ್ಬ ಮಾಡಿದ ಸಿನಿಮಾ ನಟ–ನಟಿಯರ ಸ್ಕೆಚ್‌ಗಳನ್ನು ನೋಡಿ ಚಿರಂಜೀವಿ ಸರ್ಜಾ ಹಿಂದೊಮ್ಮೆ ಪ್ರತಿಕ್ರಿಯಿಸಿದ್ದರು. ತನ್ನದೂ ಅಂಥದೊಂದು ಸ್ಕೆಚ್ ಸಿಗುವಂತಾಗಲಿ ಎಂದು ಬಯಸಿದ್ದರು. ಆ ಕಲಾವಿದನಿಗೋ ಕೈತುಂಬ ಕೆಲಸ. ಮುಂದೊಂದು ದಿನ ಸ್ಕೆಚ್ ಮಾಡಿಕೊಟ್ಟರಾಯಿತು ಎಂದು ಸುಮ್ಮನಿದ್ದರು. ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ಮೃತಪಟ್ಟರೆನ್ನುವುದು ಗೊತ್ತಾದದ್ದೇ ಕಲಾವಿದ ಕಲ್ಲವಿಲಗೊಂಡರು. ತಾವು ಸಿದ್ಧಪಡಿಸಿದ ಚಿರಂಜೀವಿ ಸರ್ಜಾ ಸ್ಕೆಚ್‌ ಅನ್ನು ಕೊನೆಗೂ ಚಿಂರಂಜೀವಿ ಮನೆ ತಲುಪಿಸಿದ್ದಾಯಿತು. ಶ್ವೇತಾ ಪ್ರಸಾದ್ ಎಂಬುವವರು ಇಂಥದೊಂದು ಕೆಲಸಕ್ಕೆ ಬೆನ್ನುತಟ್ಟಿದರು.

ಇಂಥ ಮಾನವೀಯ ಪ್ರಕರಣದಲ್ಲಿ ಭಾಗಿಯಾಗಿರುವ ಕಲಾವಿದನ ಹೆಸರು ಧವಳ್ ಖತ್ರಿ. ಗುಜರಾತ್‌ನ ಅಹಮದಾಬಾದ್ ನಿವಾಸಿ. ಮುಂಗೈಗಳೇ ಇಲ್ಲದಿದ್ದರೂ ಬ್ರಶ್ ಹಿಡಿದು ಅವರು ಚಕಚಕನೆ ಸ್ಕೆಚ್‌ ಮಾಡುವುದನ್ನು ಕಂಡವರ ಎದೆ ಮಿಡಿಯತೊಡಗುತ್ತದೆ.

ಹದಿಮೂರನೇ ವಯಸ್ಸಿನಲ್ಲಿ ಎಲ್ಲರಂತೆ ಶಾಲಾ ವಿದ್ಯಾರ್ಥಿಯಾಗಿ ಆರೋಗ್ಯವಾಗಿಯೇ ಇದ್ದ ಧವಳ್, ಅಕಸ್ಮಾತ್ತಾಗಿ ಹೈಟೆನ್ಷನ್‌ ವೈರ್‌ಗಳನ್ನು ಕೈಲಿ ಹಿಡಿದುಬಿಟ್ಟರು. ಆಗ ಆದ ವಿದ್ಯುದಾಘಾತ ಅವರ ಮುಂಗೈಗಳನ್ನು ಕಸಿದುಕೊಂಡಿತು. ಯಾರ ಬಳಿಯೂ ಕಲಿಯದೇ ತಂತಾನೇ ಅವರು ಬ್ರಶ್ ಹಿಡಿದರು. ಸ್ಕೆಚ್‌ಗಳನ್ನು ಬಿಡಿಸಲಾರಂಭಿಸಿದರು. 2003ರಲ್ಲಿ ಆದ ಅವಘಡ ಬದುಕನ್ನೇ ಮುಳುಗಿಸಿತು ಎಂದುಕೊಂಡವರೂ ಬೆರಗಿನಿಂದ ನೋಡುವಂತೆ ಅವರೀಗ ಬೆಳೆದಿದ್ದಾರೆ.

‘ಎಂಟರ್‌ಟೇನ್‌ಮೆಂಟ್‌ ಕೆ ಲಿಯೇ ಕುಛ್ ಭೀ ಕರೇಗಾ’, ‘ಇಂಡಿಯಾ ಗಾಟ್ ಟ್ಯಾಲೆಂಟ್’ ತರಹದ ಟಿ.ವಿ ಶೋಗಳಲ್ಲಿ ಧವಳ್ ಪ್ರತಿಭೆ ಕಂಡವರು ಅನೇಕರು. ಹಿಂದಿ ಚಿತ್ರರಂಗದ ನಟ–ನಟಿಯರು ಈ ಕಲಾವಿದನನ್ನು ಪ್ರೋತ್ಸಾಹಿಸಲು ಅಂಥ ಜನಪ್ರಿಯ ಕಾರ್ಯಕ್ರಮಗಳೇ ಕಾರಣ. ಸೋನಾಕ್ಷಿ, ಫರ್ಹಾ ಖಾನ್, ಅನು ಮಲ್ಲಿಕ್, ಕಪಿಲ್ ಶರ್ಮ, ನವಜೋತ್ ಸಿಂಗ್ ಸಿದ್ದು, ಅಮಿತಾಭ್ ಬಚ್ಚನ್. ಸಚಿನ್ ತೆಂಡೂಲ್ಕರ್... ಹೀಗೆ ಘಟಾನುಘಟಿಗಳ ಸ್ಕೆಚ್‌ಗಳನ್ನೆಲ್ಲ ಮಾಡಿರುವ ಧವಳ್, ಕೆಲವರನ್ನು ಖುದ್ದು ಭೇಟಿ ಮಾಡಿ ಅವನ್ನು ನೀಡಿರುವುದು ವಿಶೇಷ.

‘ಎ3’ ಸೈಜಿನ ಸ್ಕೆಚ್ ರಚಿಸಿಕೊಡಲು ಧವಳ್ ಹತ್ತರಿಂದ ಹದಿನೈದು ದಿನ ತೆಗೆದುಕೊಳ್ಳುತ್ತಾರೆ. ಅಳತೆಗೆ ತಕ್ಕಂತೆ ಶುಲ್ಕ ಪಡೆಯುವ ಅವರಿಗೆ ಅತಿ ದೊಡ್ಡ ಸ್ಕೆಚ್‌ಗಳನ್ನು ಮಾಡಲು ಸುದೀರ್ಘಾವಧಿ ಬೇಕು. ‘ಯುನಿಕ್ ಆರ್ಟಿಸ್ಟ್ ಫೌಂಡೇಷನ್’ ಎಂಬ ಸರ್ಕಾರೇತರ ಸಂಸ್ಥೆಯನ್ನೂ ನಡೆಸುತ್ತಿರುವ ಧವಳ್‌, ದಕ್ಷಿಣ ಭಾರತೀಯ ಚಿತ್ರನಟ–ನಟಿಯರ ಸ್ಕೆಚ್‌ಗಳನ್ನು ಮಾಡಲು ಉತ್ಸುಕರಾಗಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಲಾಕ್‌ಡೌನ್‌ಗೆ ಮೊದಲು ಅವರು ಕನ್ನಡದ ನಟಿ ರಚಿತಾ ರಾಮ್ ಅವರ ಸ್ಕೆಚ್‌ ಮಾಡಿಕೊಟ್ಟರು.

ಅಹಮದಾಬಾದ್‌ನಲ್ಲಿ ಇರುವ ಈ ಕಲಾವಿದನಿಗೆ ಇಲ್ಲಿನ ನಟ–ನಟಿಯರ ಸ್ಕೆಚ್‌ ಮಾಡುವ ಕೆಲಸ ಹಚ್ಚುವಲ್ಲಿ ದಾವಣಗೆರೆಯ ಅಖಿಲೇಶ್ ಎಂಬ ಯುವಕನ ಪಾತ್ರವಿದೆ. ಆಕಸ್ತರ ಸಂಪರ್ಕ ಒದಗಿಸಿ, ಈ ಕೆಲಸವನ್ನು ಅವರು ಆಗುಮಾಡುತ್ತಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ಅವರ ಪರಮ ಅಭಿಮಾನಿ ಎಂದು ಹೇಳಿಕೊಳ್ಳುವ ಕಲಾವಿದನಿಗೆ ಧನುಷ್, ಅಲ್ಲು ಅರ್ಜುನ್ ತರಹದ ನಟರ ಸ್ಕೆಚ್‌ಗಳನ್ನು ಮಾಡಬೇಕೆಂಬ ಬಯಕೆಯೂ ಇದೆ.

‘ಹೃದಯದಿಂದ ಕೆಲಸ ಮಾಡುವೆ. ಈಗಲೂ 200 ಸ್ಕೆಚ್‌ಗಳನ್ನು ಮಾಡಬೇಕಿದೆ. ಅಷ್ಟು ಪ್ರೀತಿಯನ್ನು ಅನೇಕರು ತೋರುತ್ತಿದ್ದಾರೆ’ ಎನ್ನುವ ಧವಳ್‌ಗೆ ಲಾಕ್‌ಡೌನ್‌ ಏನೇನೂ ಬದಲಾವಣೆ ತಂದಿಲ್ಲ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು