ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾಭಿರುಚಿಯ ಅನಾವರಣ

ರಾಜ್ಯಮಟ್ಟದ ಆರ್ಯವೈಶ್ಯ ಸಾಂಸ್ಕೃತಿಕ ಸಂಭ್ರಮ
Last Updated 7 ಜನವರಿ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ಆರ್ಯವೈಶ್ಯ ಜನಾಂಗ ಎಂದರೆ ಕೇವಲ ವ್ಯಾಪಾರ, ವ್ಯವಹಾರಗಳಿಗಷ್ಟೇ ಸೀಮಿತ ಎನ್ನುವ ಕಾಲವೊಂದಿತ್ತು. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ಮುಕ್ತವಾಗಿ ತನ್ನನ್ನು ಒಡ್ಡಿಕೊಂಡಿರುವ ಈ ಸಮಾಜ ಈಗ ಎಲ್ಲ ರಂಗಗಳಲ್ಲಿಯೂ ಛಾಪು ಮೂಡಿಸಿದೆ. ತಕ್ಕಡಿ ಹಿಡಿದ ಕೈ ಲೇಖನಿಯನ್ನೂ ಹಿಡಿದಿದೆ. ಅಂತೆಯೇ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಗಳಿಗೂ ಕೊಡುಗೆ ನೀಡುತ್ತಿದೆ. ಈ ಮಾತಿಗೆ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ರಾಜ್ಯಮಟ್ಟದ ‘ಕರ್ನಾಟಕ ಆರ್ಯವೈಶ್ಯ ಸಾಂಸ್ಕೃತಿಕ ಸಂಭ್ರಮ’ ಸಾಕ್ಷಿಯಾಗಿತ್ತು.

ಆರ್ಯವೈಶ್ಯ ಜನಾಂಗದವರಲ್ಲಿ ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅಕ್ಕರೆ, ಒಲವು, ಅಭಿರುಚಿ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ ಹುಟ್ಟಿಕೊಂಡ ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್‌ಗೆ ಈಗ 13ರ ಹರೆಯ. ಈಗಾಗಲೇ ಸ್ವಂತ ಖರ್ಚಿನಲ್ಲಿ ಐದು ಸಾಹಿತ್ಯ ಸಮ್ಮೇಳನ ನಡೆಸಿರುವ ಪರಿಷತ್ತು ಈ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಆಯೋಜಿಸಿತ್ತು.

ಕರಗ ಕುಣಿತದಲ್ಲಿ ಸಂಭ್ರಮದ ಹೆಜ್ಜೆ...

18ರಿಂದ 50 ವರ್ಷದವರೆಗಿನ 160 ಮಹಿಳೆಯರು ಮತ್ತು 20 ಪುರುಷ ಕಲಾವಿದರು ಸಾದರಪಡಿಸಿದ ಪ್ರತಿಭೆಗೆ ಕಲಾಕ್ಷೇತ್ರ ಸಾಕ್ಷಿಯಾಯಿತು.

ವಾಸವಿ ವನಿತಾ ಸಂಘ, ಕನ್ನಿಕಾ ಪರಮೇಶ್ವರಿ ಮಹಿಳಾ ಸಂಘಗಳ ಮಹಿಳಾ ಸದಸ್ಯರ ಜಾನಪದ ಝೇಂಕಾರ, ವೀರಭದ್ರ ಕುಣಿತ, ಪೂಜಾ ಕುಣಿತ, ಸೋಮನ ಕುಣಿತ, ಪಟಕುಣಿತ, ಕಂಸಾಳೆ,ಕರಗ, ಹಾಲಕ್ಕಿ ಸುಗ್ಗಿ ಕುಣಿತ, ಡೊಳ್ಳು ಕುಣಿತ, ಕೋಲಾಟ ಮೈನೆವಿರೇಳಿಸಿದವು.

ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಆರ್ಯವೈಶ್ಯ ಜನಾಂಗದ ಕಲಾವಿದರು ನುಡಿಸಿದ ಚಂಡೆವಾದನ, ಹಾಡಿದ ಶಿಶುನಾಳ ಶರೀಫರ ತತ್ವಪದಗಳು, ಕೀರ್ತನೆ, ಕಾವ್ಯ, ಗಾನ, ಕುಂಚ ಕಾರ್ಯಕ್ರಮ ಪ್ರೇಕ್ಷಕರನ್ನು ಭಾವಲೋಕಕ್ಕೆ ಕರೆದೊಯ್ದವು.

ಪರಿಷತ್‌ ಗೌರವ ಅಧ್ಯಕ್ಷ ಟಿ.ಎ.ಪಿ. ನಾಗರಾಜ ರಚಿಸಿದ ‘ಕಾವ್ಯ ಸಿಂಚನ‘ ಮತ್ತು ‘ಸ್ವರ್ಣಕಾರನ ಹೃದಯಗೀತೆ’ ಕೃತಿಗಳು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಂಡವು. ಈಗಾಗಲೇ ಪರಿಷತ್ತು 25 ಪುಸ್ತಕಗಳನ್ನು ಪ್ರಕಟಿಸಿದೆ. ಇಡೀ ದಿನ ನಡೆದ ಕಾರ್ಯಕ್ರಮಗಳು ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿಯ ಬಗ್ಗೆ ವೈಶ್ಯ ಸಮಾಜ ಹೊಂದಿರುವ ಪ್ರೀತಿ ಮತ್ತು ಕಲಾ ಅಭಿರುಚಿಗೆ ಸಾಕ್ಷಿಯಾಗಿತ್ತು.

ಚೆಂಡೆ ಪ್ರದರ್ಶಿಸಿದ ಸಾಗರದ ವೈಷ್ಣವಿ ಕಲಾ ತಂಡ

ಸಮಾಜದ ಪ್ರತಿಭೆಗಳನ್ನು ಪರಿಚಯಿಸುವ ಪ್ರಯತ್ನ
ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು 13ನೇ ವಸಂತಕ್ಕೆ ಕಾಲಿಟ್ಟಿದೆ. ಇದು ಹದಿಹರೆಯದ ಕಾಲ. ಇಡೀ ದೇಶದಲ್ಲಿ ಯಾವುದೇ ಒಂದು ಸಮುದಾಯ ಜಾತಿಗೆ ಸಂಬಂಧಿಸಿದಂತೆ ಸಾಹಿತ್ಯ ಪರಿಷತ್ತು ಸ್ಥಾಪಿಸಿದ ನಿದರ್ಶನಗಳಿಲ್ಲ. ಆ ಹೆಗ್ಗಳಿಕೆ ನಮ್ಮದು. ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡ ನಾಡು, ನುಡಿಯ ಬಗ್ಗೆ ವೈಶ್ಯ ಸಮುದಾಯಕ್ಕೆ ಇರುವ ಅಭಿಮಾನ, ಅಕ್ಕರೆ ಮತ್ತು ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸವನ್ನು ಪರಿಷತ್ತು ಮಾಡುತ್ತಿದೆ.
–ಟಿ.ಎ.ಪಿ. ನಾಗರಾಜ, ಗೌರವ ಅಧ್ಯಕ್ಷರು
–ಕೆ.ಎಲ್‌. ನಟರಾಜ, ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT