ಶನಿವಾರ, ಮೇ 15, 2021
29 °C

ಯಕ್ಷ ಜಗತ್ತಿನ ಸವ್ಯಸಾಚಿ‌

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಬಸವೇಶ್ವರರ ಜೀವನ ಚರಿತ್ರೆಯನ್ನು ಯಕ್ಷರಂಗಕ್ಕೆ ತಂದ ದತ್ತಮೂರ್ತಿ ಭಟ್‌ ಅವರದು ಬಹುಮುಖ ಪ್ರತಿಭೆ. ಈ ಪ್ರಸಂಗ ದ್ವಿಶತಕ ಬಾರಿಸಿ ಮುಂದೆ ಹೊರಟಿದೆ. ಯಕ್ಷಗಾನದಲ್ಲಿ ಹೊಸ ಪ್ರಯೋಗಗಳನ್ನು ಮಾಡಲು ಭಟ್ಟರ ಮನಸ್ಸು ಸದಾ ತುಡಿಯುತ್ತದೆ...

ಬಡಗುತಿಟ್ಟಿನ ಯಕ್ಷಗಾನವನ್ನು ಪ್ರಸಿದ್ಧರ ಚರಿತ್ರೆಯ ಪ್ರಸಂಗಗಳೊಂದಿಗೆ ಬೆಸೆದು ಉತ್ತರ ಕರ್ನಾಟಕ ಹಾಗೂ ಹಳೆಯ ಮೈಸೂರು ಪ್ರಾಂತ್ಯಗಳಲ್ಲೂ ಜನಪ್ರಿಯರಾದವರು ಶಿವಮೊಗ್ಗ ಡಿವಿಎಸ್‌ ಶಿಕ್ಷಣ ಸಂಸ್ಥೆಯ ಸಂಸ್ಕೃತ ಉಪನ್ಯಾಸಕ ವಿದ್ವಾನ್‌ ದತ್ತಮೂರ್ತಿ ಭಟ್‌.

12ನೇ ಶತಮಾನದ ಶರಣ ಚಳವಳಿಯ ರೂವಾರಿ ಜಗಜ್ಯೋತಿ ಬಸವೇಶ್ವರರ ಜೀವನ ಚರಿತ್ರೆಯನ್ನು ಯಕ್ಷಗಾನದ ಮೂಲಕ ಪ್ರಸ್ತುತಪಡಿಸಿ ಉತ್ತರ ಕರ್ನಾಟಕದಲ್ಲಿ ಹೊಸ ಅಲೆ ಸೃಷ್ಟಿಸಿದ್ದಾರೆ. ಅಸಮಾನತೆ, ಜಾತಿ ವ್ಯವಸ್ಥೆ, ಮೌಢ್ಯಗಳ ವಿರುದ್ಧ, ಧರ್ಮದ ಕಟ್ಟುಪಾಡುಗಳ ವಿರುದ್ಧ ಹೊಸ ಭಾಷ್ಯ ಬರೆದ ಶರಣರ ಬದುಕಿನ ಪ್ರಸಂಗಗಳನ್ನು ಒಳಗೊಂಡ ಯಕ್ಷಗಾನ ಪ್ರಸಂಗ 257 ಪ್ರದರ್ಶನ ಕಂಡಿದೆ. ಅದೇ ರೀತಿ ನಾಥ ಪರಂಪರೆಯ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಆದಿಚುಂಚನಗಿರಿ ಕ್ಷೇತ್ರದ ಕಥಾನಕವನ್ನು ಯಕ್ಷಗಾನಕ್ಕೆ ಅಳವಡಿಸಿ, ಹಳೆಯ ಮೈಸೂರು ಪ್ರಾಂತ್ಯಗಳ ಜನರನ್ನು ಯಕ್ಷಗಾನದತ್ತ ಸೆಳೆದಿದ್ದಾರೆ. ಇದುವರೆಗೂ ಆದಿಚುಂಚನಗಿರಿ ಪ್ರಸಂಗ 68 ಪ್ರದರ್ಶನಗಳನ್ನು ಪೂರೈಸಿದೆ.

12ನೇ ಶತಮಾನದ ಪ್ರಸಿದ್ಧ ವಚನಕಾರ್ತಿ ಅಕ್ಕಮಹಾದೇವಿ. ಶಿವಮೊಗ್ಗ ಜಿಲ್ಲೆಯ ಉಡುತಡಿಯ ಅಕ್ಕ ಲೌಕಿಕ ಜೀವನ ತೊರೆದು ಅಲೌಕಿಕದತ್ತ ಸಾಗಿದವರು. ಮಲ್ಲಿಕಾರ್ಜುನನನ್ನೇ ತನ್ನ ಪತಿ ಎಂದು ಘೋಷಿಸಿಕೊಂಡು ಹುಟ್ಟುಡುಗೆಯಲ್ಲೇ ಅನುಭವ ಮಂಟಪದತ್ತ ಪಯಣ ಬೆಳೆಸಿದ್ದರು. ಅವರ ವಚನಗಳು ಇಂದಿಗೂ ಸಮಾಜದ ಡೊಂಕು ತಿದ್ದುವಂತಹ ಕಾಲಾತೀತ ಗುಣವನ್ನು ಹೊಂದಿದಂಥವು. ಅಂಥ ಅಕ್ಕ ಮಹಾದೇವಿಯ ಚರಿತ್ರೆಯನ್ನು ಯಕ್ಷಗಾನಕ್ಕೆ ಅಳವಡಿಸಿರುವುದು ಅವರ ಪ್ರವೃತ್ತಿಯ ಕ್ರಿಯಾಶೀಲತೆಗೆ ಸಾಕ್ಷಿ. ಈ ಪ್ರಸಂಗ ಈಗಷ್ಟೆ ಆರಂಭವಾಗಿದ್ದು, ಎರಡು ಪ್ರದರ್ಶನ ಕಂಡಿದೆ. ದಾಸಶ್ರೇಷ್ಠ ಕನಕದಾಸರ ಕಥಾ ಪ್ರಸಂಗವನ್ನೂ ಯಕ್ಷಗಾನಕ್ಕೆ ಅಳವಡಿಸುವ ಕೆಲಸ ಸದ್ದಿಲ್ಲದೇ ಸಾಗಿದೆ.

ಬಹುತೇಕ ಪ್ರಸಂಗಗಳಲ್ಲಿ ಸ್ವತಃ ದತ್ತಮೂರ್ತಿ ಭಟ್ಟರೇ ಅಭಿನಯಿಸಿರುವುದು ವಿಶೇಷ. ಅವರು ಆವಾಹಿಸಿಕೊಂಡ ಹನುಮಂತ, ಅಶ್ವತ್ಥಾಮ, ರಾಮ, ಈಶ್ವರ, ಗವಿ ಗಂಗಾಧರೇಶ್ವರ, ಬಸವೇಶ್ವರ, ಕೌಶಿಕ, ಕನಕದಾಸರ ಪಾತ್ರಗಳು ಯಕ್ಷಗಾನ ರಂಗಭೂಮಿಯ ಪ್ರೇಕ್ಷಕರ ಹೃದಯ ಗೆದ್ದಿವೆ.

ಯಕ್ಷಗಾನ ಕಲಾವಿದರಾಗಷ್ಟೆ ಅಲ್ಲದೇ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ, ದಕ್ಷಿಣ ಭಾರತ ಸಾಂಸ್ಕೃತಿಕ ಸಮಿತಿಯ ನಿರ್ದೇಶಕರಾಗಿ, ಪದವಿಪೂರ್ವ ಶಿಕ್ಷಣ ಮಂಡಳಿ ಸಂಸ್ಕೃತ ಭಾಷಾ ವಿಷಯದ ಪಠ್ಯಪುಸ್ತಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ಪ್ರಖರ ವಾಗ್ಮಿ, ನಿರೂಪಕ, ಸಂಘಟಕ, ನಾಟ್ಯಶ್ರೀ ಕಲಾ ತಂಡದ ಸಂಚಾಲಕರಾಗಿಯೂ ಛಾಪು ಮೂಡಿಸಿದ್ದಾರೆ. ಅವರ ಸೇವೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ‘ಯಕ್ಷ ಭೂಷಣ’ ‘ಕರ್ನಾಟಕ ಸೇವಾ ರತ್ನ’ ’ಪರೋಪಕಾರ ಪುರಂದರ’ ‘ಯಕ್ಷ ಬಸವ ರತ್ನ’ ’ಅಭಿನವ ಅಶ್ವತ್ಥಾಮ’ ಪ್ರಶಸ್ತಿಗಳಿಗೆ ಪುರಸ್ಕೃತರಾಗಿದ್ದಾರೆ.

ಬಾಲ್ಯ ಕಳೆದ ಸಾಗರ ತಾಲ್ಲೂಕು ತಾಳಗುಪ್ಪ ಸಮೀಪದ ಬಂಜಗಾರುವಿನಲ್ಲಿ ನೋಡುತ್ತಿದ್ದ ಯಕ್ಷಗಾನ ಪ್ರದರ್ಶನಗಳಿಂದ ಪ್ರಭಾವಿತನಾಗಿ 15ನೇ ವಯಸ್ಸಿಗೆ ಬಣ್ಣ ಹಚ್ಚಿದ್ದೆ. ಅಲ್ಲಿಂದ ಆರಂಭವಾದ ಪಯಣ ಇಂದಿಗೂ ಮುಂದುವರಿದಿದೆ. ಬಸವೇಶ್ವರರ ಚರಿತ್ರೆ ಇಷ್ಟೊಂದು ಪ್ರದರ್ಶನಗಳನ್ನು ಕಂಡಿರುವುದು ದಾಖಲೆ. ಉತ್ತರ ಕರ್ನಾಟಕ ಜನರನ್ನು ಆ ಮೂಲಕ ತಲುಪಿದ ಸಂತಸವಿದೆ. ಆದಿಚುಂಚನಗಿರಿ ಮಹಾತ್ಮೆ ಹಳೆ ಮೈಸೂರು ಪ್ರಾಂತ್ಯದ ಜನರ ಮನ್ನಣೆ ಗಳಿಸಿದೆ. ಉಪನ್ಯಾಸಕ ವೃತ್ತಿಯ ಜತೆಗೆ ಪ್ರವೃತ್ತಿಯ ಕನಸುಗಳನ್ನು ಮೂರು ದಶಕಗಳಿಂದ ವಿಶ್ರಮಿಸಿದೇ ಪಸರಿಸಿರುವೆ ಎಂದು ನಡೆದ ಹಾದಿಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಪತ್ನಿ ಸುಜಾತಾ ಭಟ್‌ ಸಹಕಾರವಿಲ್ಲದೇ ವೃತ್ತಿಯ ಜತೆ ಪ್ರವೃತ್ತಿಯ ಕನಸು ಚಿಗುರೊಡೆಸುವುದು ಸಾಧ್ಯವಿರಲಿಲ್ಲ. ಮಗಳು ನವ್ಯಾ ಭಟ್‌ ಗಾಯನದ ಜತೆ ಯಕ್ಷಗಾನದಲ್ಲೂ ಹೆಜ್ಜೆ ಮೂಡಿಸುತ್ತಿದ್ದಾರೆ. ನಾಡಿನ ಹಲವು ಮಠಾಧೀಶರು, ಜನಪ್ರತಿಧಿಗಳು, ಅಧಿಕಾರಿಗಳು ಸಂಘಸಂಸ್ಥೆಗಳ ಸಹಕಾರ ಇಂತಹ ಪ್ರಯೋಗಗಳ ಸಾಕಾರಕ್ಕೆ ನೆರವಾಗಿದೆ ಎಂದು ವಿನಯದಿಂದ ಸ್ಮರಿಸುತ್ತಾರೆ ದತ್ತಮೂರ್ತಿ ಭಟ್‌.

ಅವರ ಹಲವು ಯಕ್ಷಗಾನ ಕಥಾ ಪ್ರಸಂಗಗಳು ಪ್ರದೇಶ, ಜಾತಿ, ಧರ್ಮರಹಿತವಾಗಿ ಅಪಾರ ಜನಮನ್ನಣೆ ಗಳಿಸಿವೆ. ಸ್ವಾರ್ಥ, ಮೋಸ, ವಂಚನೆ ವಿರುದ್ಧ ಸದಾ ಧ್ವನಿ ಎತ್ತುವ ಅವರು ನೇರ, ನಿಷ್ಠೂರವಾದಿಗಳು. ತಮಗೆ ಒಪ್ಪದ ಯಾವುದೇ ವಿಷಯ, ವ್ಯಕ್ತಿತ್ವವನ್ನು ಖಂಡಿಸುವ, ತಾವು ನಂಬಿದ ತತ್ವ, ಸಿದ್ಧಾಂತ ಬಿಟ್ಟುಕೊಡದ ಅಪರೂಪದ ಕಲಾವಿದ ಎಂಬ ಹಿರಿಮೆಯೂ ಅವರದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು