ಗುರುವಾರ , ಡಿಸೆಂಬರ್ 12, 2019
27 °C

ಎಚ್‌ಐವಿ ಸೋಂಕಿತರ ‘ಆಶಾ’ಕಿರಣ

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

Deccan Herald

‘ಆ ರೇಳು ವರ್ಷಗಳ ಹಿಂದೆ ಒಂದು ತಪ್ಪು ಮಾಡಿದ್ದೆ. ಈಗ ಮದುವೆ ನಿಶ್ಚಯವಾಗಿದೆ, ಭಯವಾಗುತ್ತಿದೆ. ನನಗೆ ಏಡ್ಸ್‌ ಇರಬಹುದಾ?’, ಮದುವೆಯಾದ ನಂತರ ಗಂಡನಿಗೆ ಏನೋ ಕಾಯಿಲೆ ಬಂದು ಹೋಗಿಬಿಟ್ರು, ಅವರು ಲಾರಿ ಡ್ರೈವರ್‌ ಆಗಿದ್ರು, ಅದೇ ಕಾಯಿಲೆಯಿಂದ ಸತ್ತಿದ್ದರೆ !, ನನಗೂ ಇರಬಹುದಾ?, ಅಪಘಾತವಾದಾಗ ಬೇರೆಯವರಿಂದ ರಕ್ತ ಪಡೆದಿದ್ದೇನೆ, ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದೇನೆ, ಸೂಜಿಯಿಂದ ಸೋಂಕು ಬರುತ್ತದಾ?, ಇದು ಹೆಬ್ಬಾಳದ ಆನಂದನಗರದಲ್ಲಿರುವ ‘ಆಶಾ ಫೌಂಡೇಷನ್‌’ನ ಎಚ್‌ಐವಿ– ಏಡ್ಸ್‌ ಸಹಾಯವಾಣಿಗೆ ಬರುತ್ತಿರುವ ಆತಂಕದ ಕರೆಗಳು.

ಆಶಾ ಫೌಂಡೇಷನ್‌ ಸ್ವಯಂಸೇವಾ ಸಂಸ್ಥೆ ಕಳೆದ 20 ವರ್ಷಗಳಿಂದ ಎಚ್‌ಐವಿ ಸೋಂಕಿತರಿಗೆ ಚಿಕಿತ್ಸೆ, ಮಾರ್ಗದರ್ಶನ, ಆಪ್ತಸಮಾಲೋಚನೆ, ಪುನರ್ವಸತಿ, ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಎಚ್‌ಐವಿ– ಏಡ್ಸ್‌ ಸೋಂಕಿತರ ನೆರವಿಗೆಂದು 10 ವರ್ಷಗಳ ಹಿಂದೆ ಸಂಸ್ಥೆ ಆರಂಭಿಸಿದ ಸಹಾಯವಾಣಿ ಸಂಖ್ಯೆಗೆ ದೇಶದೊಳಗಿಂದ ಮಾತ್ರವಲ್ಲ, ದೂರದ ದುಬೈನಿಂದಲೂ ಕರೆಗಳು ಬರುತ್ತಿವೆ!

‘ಪ್ರತಿದಿನ 5ರಿಂದ 15 ಕರೆಗಳು ಬರುತ್ತಿವೆ. ಅವುಗಳಲ್ಲಿ ಶೇ 90ರಷ್ಟು ಪುರುಷರಿಂದಲೇ ಬರುತ್ತಿದೆ. ಅದರಲ್ಲೂ 19ರಿಂದ 35 ವಯೋಮಾನದ ಹುಡುಗರ ಕರೆಗಳೇ ಹೆಚ್ಚು. ಕೆಲವರು ಅನುಮಾನ ಪರಿಹರಿಸಿಕೊಳ್ಳಲು ಕರೆ ಮಾಡುತ್ತಾರೆ. ಕೆಲವರು ಪಾಸಿಟಿವ್‌ ಇರುತ್ತಾರೆ. ಕೆಲವೊಮ್ಮೆ ಪಾಸಿಟಿವ್‌ ಇರುವ ವ್ಯಕ್ತಿಗಳ ಸಂಬಂಧಿಗಳು ಕರೆ ಮಾಡುತ್ತಾರೆ. ಮಹಿಳೆಯರ ಕರೆಗಳು ತೀರಾ ಕಡಿಮೆ’ ಎಂದು ಸಂಸ್ಥೆಯ ಸ್ಥಾಪಕಿ ಡಾ. ಗ್ಲೋರಿ ಅಲೆಕ್ಸಾಂಡರ್‌ ಹೇಳುತ್ತಾರೆ.

‘ಕರೆ ಮಾಡಿದವರಿಗೆ ಪೋನ್‌ ಮೂಲಕವೇ ಮಾಹಿತಿ ನೀಡುತ್ತೇವೆ. ಮೊದಲು ಎಚ್ಐವಿ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡುತ್ತೇವೆ. ಪರೀಕ್ಷೆ ಮಾಡಿಸಿದಾಗ ಪಾಸಿಟಿವ್‌ ಬಂದವರು ಮಾತ್ರ ಎಆರ್‌ಟಿ ತೆಗೆದುಕೊಳ್ಳುವಂತೆ ಸಲಹೆ ನೀಡುತ್ತೇವೆ. ನಮ್ಮಲ್ಲಿಗೆ ಕರೆ ಮಾಡಿದವರಲ್ಲಿ ಶೇ 4ರಷ್ಟು ಮಂದಿ ಮಾತ್ರ ಇಲ್ಲಿಗೆ ಬರುತ್ತಾರೆ. ಉತ್ತರ ಕರ್ನಾಟಕದಿಂದ ಹೆಚ್ಚು ಜನ ಇಲ್ಲಿಗೆ ಬರುತ್ತಾರೆ. ಇಲ್ಲಿ ಆಪ್ತ ಸಮಾಲೋಚನೆ, ಪರೀಕ್ಷೆಗಳು, ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ’ಎನ್ನುತ್ತಾರೆ ಆಶಾದ ವೈದ್ಯೆ ಡಾ. ಪ್ರಿಯಾಂಕಾ. 

ಇಲ್ಲಿಗೆ ಬಂದಿರುವ 775 ಮಹಿಳೆಯರಲ್ಲಿ ಎಚ್‌ಐವಿ ಸೋಂಕಿರುವುದು ಪತ್ತೆಯಾಗಿತ್ತು. ಅವರಲ್ಲಿ 642 ಮಂದಿಗೆ ಜನಿಸಿದ ಮಕ್ಕಳಲ್ಲಿ ಸೋಂಕು ಇರಲಿಲ್ಲ. ಜನಿಸುವಾಗ ಸೋಂಕಿರುವ ಮಕ್ಕಳ ಪ್ರಮಾಣ 30% ರಿಂದ 2.3%ಗೆ ಇಳಿಕೆಯಾಗಿದೆ ಎಂದು ಅವರು ಹೇಳುತ್ತಾರೆ.

‘ಎಚ್ಐವಿ ಪೀಡಿತ ಮಹಿಳೆಯರಲ್ಲಿ ಶೇ 80 ಮಹಿಳೆಯರಿಗೆ ಮದುವೆಯ ನಂತರ ಸೋಂಕು ಕಾಣಿಸಿಕೊಂಡವರು. ಅವರದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವವರೇ ಹೆಚ್ಚು. ಮದುವೆಯಾಗಿ ಗರ್ಭಿಣಿಯಾದ ನಂತರ ರಕ್ಷ ಪರೀಕ್ಷೆ ಮಾಡಿದಾಗ ಎಚ್‌ಐವಿ ಸೋಂಕಿರುವುದು ಪತ್ತೆಯಾಗಿರುತ್ತದೆ. ಅವರಿಗೆ ತಕ್ಷಣವೇ ಕೌನ್ಸೆಲಿಂಗ್‌ ಜೊತೆಗೆ ಎಆರ್‌ಟಿ ಮಾತ್ರೆಗಳನ್ನು ನೀಡಲಾಗುತ್ತದೆ. ಇದರಿಂದಾಗಿ ಮಗುವಿಗೆ ಸೋಂಕು ಹರಡುವುದು ತಪ್ಪುತ್ತದೆ. ಮಗುವಿಗೆ 6 ವಾರ, 6ತಿಂಗಳು, 1 ವರ್ಷ, ಒಂದೂವರೆ ವರ್ಷದಲ್ಲಿ ಹೀಗೆ ನಾಲ್ಕು ಬಾರಿ ರಕ್ತದ ಪರೀಕ್ಷೆ ನಡೆಸಲಾಗುತ್ತದೆ. ಆ ಸಂದರ್ಭದಲ್ಲಿ ನೆಗೆಟಿವ್‌ ಬಂದರೆ ನಂತರ ಸೋಂಕು ಹರಡುವ ಸಾಧ್ಯತೆ ಇಲ್ಲ. ಈ 20 ವರ್ಷಗಳಲ್ಲಿ ನಾನು ಚಿಕಿತ್ಸೆ ನೀಡಿದ ಎಚ್‌ಐವಿ ಸೋಂಕಿತ ಗರ್ಭಿಣಿಯರಿಗೆ ಜನಿಸಿದ ಮಕ್ಕಳಿಗೆ ಸೋಂಕು ಬಂದ ಉದಾಹರಣೆ ಇಲ್ಲ. ತಾಯಿಯಿಂದ ಮಗುವಿಗೆ ಸೋಂಕು ಹರಡದಂತೆ ಯಾವ ಮುಂಜಾಗ್ರತೆ ವಹಿಸಬೇಕು ಎಂಬ ಬಗ್ಗೆಯೂ ಇಲ್ಲಿ ತಿಳಿಸಿಕೊಡುತ್ತೇವೆ. ಇದುವರೆಗೆ 1,38,000 ಸೋಂಕಿತ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು ಡಾ. ಗ್ಲೋರಿ ಹೇಳುತ್ತಾರೆ.

ತರಬೇತಿ

ಎಚ್‌ಐವಿ ಏಡ್ಸ್‌ ಸೋಂಕಿತರ ನೆರವಿಗೆ ಬರುವ ಸ್ವಯಂಸೇವಕರಿಗೆ ಉಚಿತ ತರಬೇತಿ ನೀಡಲಾಗುತ್ತದೆ. ಆಪ್ತ ಸಮಾಲೋಚನೆ ಮಾಡುವುದು, ಪರೀಕ್ಷೆಗಳನ್ನು ನಡೆಸುವುದು ಮುಂತಾದ ತರಬೇತಿ ನೀಡಲಾಗುತ್ತದೆ. ಇಲ್ಲಿಯವರೆಗೆ 140 ದಾದಿಯರು– ಆಪ್ತ ಸಮಾಲೋಚಕರಿಗೆ ತರಬೇತಿ ನೀಡಲಾಗಿದೆ. 1709 ವೈದ್ಯರಿಗೆ ತರಬೇತಿ ನೀಡಲಾಗಿದೆ. 15,000 ಸಮುದಾಯ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ.  

ರಾಜ್ಯದ 18 ಆಸ್ಪತ್ರೆಗಳು

ಆಶಾ ಜೊತೆ ಕೈಜೋಡಿಸಿವೆ. ಅಂತಹ ಆಸ್ಪತ್ರೆಯ ಸಿಬ್ಬಂದಿಗೆ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವುದು, ಚಿಕಿತ್ಸೆ ನೀಡುವ ಬಗ್ಗೆ ತರಬೇತಿ ನೀಡಲಾಗಿದೆ. ಸೋಂಕಿತ ಮಹಿಳೆಯರಿಗೆ ಮುಜುಗರ ಉಂಟಾಗದಂತೆ ಆಸ್ಪತ್ರೆಯ ಸಿಬ್ಬಂದಿ ನಡೆದುಕೊಳ್ಳುವುದು,  ನಿರ್ಲಕ್ಷ್ಯ ಧೋರಣೆ ತೋರದಿರುವ ಬಗ್ಗೆ ಖಾತ್ರಿಪಡಿಸಲಾಗುತ್ತದೆ. ಇದರಿಂದಾಗಿ ನವಜಾತ ಶಿಶುಗಳಿಗೆ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ.

ಪುನರ್ವಸತಿ

ಯುವ ವಿಧವೆಯರು ಮತ್ತು ನಿರ್ಗತಿಕ ಸೋಂಕಿತ ಮಹಿಳೆಯರಿಗೆ ಆಶಾ ಫೌಂಡೇಷನ್‌ ಪುನರ್ವಸತಿ ಕಲ್ಪಿಸುತ್ತಿದೆ. ಇಲ್ಲಿಯವರೆಗೆ 40 ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿ ನೀಡಲಾಗಿದೆ. 60 ಮಹಿಳೆಯರಿಗೆ ಉದ್ಯೋಗ ಒದಗಿಸಲಾಗಿದೆ. 22 ಮಂದಿಗೆ ಸಾಲ ಒದಗಿಸಲಾಗಿದೆ. ಐದು ಸ್ವ ಸಹಾಯ ಗುಂಪುಗಳನ್ನು ಮಾಡಲಾಗಿದೆ. 

‘ದೇಶದಲ್ಲಿ ಹತ್ತು ವರ್ಷಗಳಿಂದೀಚೆಗೆ ಏಡ್ಸ್‌ನಿಂದ ಸಾಯುವವರ ಪ್ರಮಾಣ ತುಂಬಾ ಕಡಿಮೆಯಾಗಿದೆ ಎನ್ನುತ್ತವೆ ದಾಖಲೆಗಳು. ಹಿಂದೆ ರೋಗ ಪತ್ತೆಯಾಗದೇ, ಚಿಕಿತ್ಸೆ ಪಡೆಯದೇ ಸಾಯುತ್ತಿದ್ದರು. ಈಗ ಸರ್ಕಾರ ಇಡೀ ದೇಶದಲ್ಲಿ ಉಚಿತವಾಗಿ ಎಆರ್‌ಟಿ ಮಾತ್ರೆಗಳನ್ನು ನೀಡುತ್ತಿದೆ. ಇದರಿಂದಾಗಿ ಮಧುಮೇಹ, ರಕ್ತದೊತ್ತಡದ ರೀತಿಯಲ್ಲಿಯೇ ಇದೂ ಒಂದಾಗಿದೆ. ದೇಶದಲ್ಲಿ ಹೊಸ ಸೋಂಕಿತರ ಪ್ರಮಾಣ 1000ಕ್ಕೆ 5 ಇದೆ. ಇದು ಆಶಾದಾಯಕ ಅಂಶ’ ಎಂದು ಡಾ. ಗ್ಲೋರಿ ಹೇಳುತ್ತಾರೆ.

ಸಹಾಯವಾಣಿ

ವೈದ್ಯ ದಂಪತಿ ಡಾ. ಗ್ಲೋರಿ ಮತ್ತು ಡಾ. ಅಲೆಕ್ಸಾಂಡರ್ ಥೋಮಸ್‌ 1998ರಲ್ಲಿ ‘ಆಶಾ ಫೌಂಡೇಷನ್‌’ ಆರಂಭಿಸಿದ್ದಾರೆ. 2008ರಲ್ಲಿ ಒಂದು ಸಹಾಯವಾಣಿ ಸಂಖ್ಯೆ ಇತ್ತು. ಅದು ಧ್ವನಿಮುದ್ರಿತ ವ್ಯವಸ್ಥೆ ಒಳಗೊಂಡಿತ್ತು. ಕರೆ ಮಾಡಿದವರ ಧ್ವನಿ ರೆಕಾರ್ಡ್‌ ಆಗಿರುತ್ತಿತ್ತು. ಆ ವ್ಯಕ್ತಿಗಳನ್ನು ಸಂಸ್ಥೆಯ ಸಿಬ್ಬಂದಿ ಸಂಪರ್ಕಿಸಿ ಮಾಹಿತಿ ಪಡೆಯುತ್ತಿದ್ದರು. 2011ರಿಂದ ನೇರ ಸಹಾಯವಾಣಿ ಸಂಖ್ಯೆ 080–23543333/ 23542222 ಆರಂಭಿಸಲಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಇದು ಕಾರ್ಯ ನಿರ್ವಹಿಸುತ್ತದೆ.

ಕ್ಯಾಂಪ್ ರೇನ್‌ಬೊ

ಇದೊಂದು ವಿಶಿಷ್ಟ ಕಾರ್ಯಕ್ರಮ. ಎಚ್‌ಐವಿ ಸೋಂಕಿತ ಮಕ್ಕಳಲ್ಲಿ ಅನೇಕರಿಗೆ ತಮಗಿರುವ ಕಾಯಿಲೆಯ ಬಗ್ಗೆ ಮನೆಯವರು ತಿಳಿಸಿರುವುದಿಲ್ಲ. ಅವರಲ್ಲಿ ಅನೇಕ ಅನುಮಾನಗಳಿರುತ್ತದೆ. ಮನೆಗೆ ಸಂಬಂಧಿಗಳು ಯಾಕೆ ಬರುವುದಿಲ್ಲ, ಪಕ್ಕದ ಮಕ್ಕಳು ನಮ್ಮ ಜೊತೆ ಯಾಕೆ ಆಟಕ್ಕೆ ಬರಲ್ಲ? ಇಂಥಾ ಪ್ರಶ್ನೆಗಳು ಮಕ್ಕಳನ್ನು ಕಾಡುತ್ತಿರುತ್ತದೆ. ಇದಕ್ಕೆಂದೇ ರೂಪಿಸಿದ ಕಾರ್ಯಕ್ರಮ ರೇನ್‌ಬೊ.

ಬೇರೆ ಬೇರೆ ಜಿಲ್ಲೆಯಲ್ಲಿ ಎಆರ್‌ಟಿ ಪಡೆಯುತ್ತಿರುವ ಸೋಂಕಿತ ಮಕ್ಕಳನ್ನು ಒಂದೆಡೆ ಸೇರಿಸಿ ಐದು ದಿನ ವಿವಿಧ ಚಟುವಟಿಕೆಯ ಮೂಲಕ ಕಾಯಿಲೆಯ ಬಗ್ಗೆ, ಮಾತ್ರೆ ತೆಗೆದುಕೊಳ್ಳುವ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಲಾಗುತ್ತದೆ. ಮಂಡ್ಯ, ಬಿಡದಿ, ಮೈಸೂರು, ತುಮಕೂರು, ಕೋಲಾರಗಳಲ್ಲಿ ಇಂಥಾ ಶಿಬಿರಗಳನ್ನು ನಡೆಸಲಾಗಿದೆ. ಸುಮಾರು 400 ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಹರೆಯದವರಿಗೆ ಆರೋಗ್ಯ ಶಿಕ್ಷಣ

ಆಶಾ ಫೌಂಡೇಷನ್ ಹದಿಹರೆಯದ ಮಕ್ಕಳಿಗೆ ಆರೋಗ್ಯ ಕಾಳಜಿಯ ಬಗ್ಗೆ ಶಿಕ್ಷಣವನ್ನೂ ನೀಡುತ್ತಿದೆ. ದೇಶದ ವಿವಿಧ ರಾಜ್ಯಗಳ 325 ಶಾಲೆಗಳಲ್ಲಿ ಎಚ್ಐವಿ ಏಡ್ಸ್‌ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಗೆಳೆತನ, ಮಾದಕ ವಸ್ತುಗಳು, ಮದ್ಯಪಾನ, ಧೂಮಪಾನ ಮುಂತಾದ ಚಟಗಳಿಗೆ ಆಗುವ ತೊಂದರೆಗಳ ಬಗ್ಗೆ ಶಾಲೆಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದುವರೆಗೆ 10ರಿಂದ 16 ವಯೋಮಾನದ 57,000 ಮಕ್ಕಳು ಈ ಕಾರ್ಯಕ್ರಮದ ಭಾಗವಾಗಿದ್ದಾರೆ.

ಪ್ರತಿಕ್ರಿಯಿಸಿ (+)