ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಹಮನಿ’ಯರ ಚೆಂದನೆಯ ಚಿತ್ರಗಳು..

Last Updated 30 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಬೀದರ್:ದಕ್ಷಿಣ ಭಾರತದ ಕಾಶ್ಮೀರ, ಪಾರಂಪರಿಕ ನಗರಿ, ಸ್ಮಾರಕಗಳ ತವರೂರು, ಬಹಮನಿ ರಾಜ ಸಂಸ್ಥಾನದ ರಾಜಧಾನಿ. ಹೀಗೆ ಒಂದೊಂದೇ ‘ಐಡೆಂಟಿಟಿ’ ಗಳನ್ನು ಪಟ್ಟಿ ಮಾಡಿ ಹಲವು ದಿನಗಳೇ ಆಗಿದ್ದವು. ಇನ್ನಷ್ಟು ಮಾಹಿತಿ ಸಂಗ್ರಹಿಸಲು ರಾಜ್ಯದ ನಕ್ಷೆಯ ತುತ್ತುದಿಯಲ್ಲಿ ಇರುವ ಈ ನಗರಕ್ಕೆ ಮೊನ್ನೆಮೊನ್ನೆಯಷ್ಟೇ ಕಾಲಿಟ್ಟೆ. ಬೆಳಂಬೆಳಿಗ್ಗೆ ಪ್ರೀತಿಯ ಸ್ವಾಗತ ನೀಡಿದ್ದು ಅಲ್ಲಿನ ದಟ್ಟ ಮಂಜು ಮತ್ತು ಚಳಿ. ಬೆಚ್ಚಗಾಗಿಸಿದ್ದು ಅಲ್ಲಿನ ಬಿಸಿಬಿಸಿ ಚಹಾ!

ಬಸ್ ನಿಲ್ದಾಣ ಮುಂಭಾಗದ ಉಡುಪಿ ಹೋಟೆಲ್‌ನಲ್ಲಿ ಹಬೆಯಾಡುತ್ತಿದ್ದ ಚಹಾವನ್ನು ಪುಟ್ಟ ಲೋಟದಲ್ಲಿ ಹೀರುತ್ತ ಕ್ಯಾಮೆರಾದಲ್ಲಿ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದ ನನ್ನನ್ನು ಮಥೀನ್ ತಡೆದ. ‘ಇದಕ್ಕಿಂತ ಚೆಂದನೆ ಚಿತ್ರಗಳು ಬೇರೆಡೆ ಸಿಗುತ್ತವೆ. ಅಲ್ಲಿ ಕರೆದೊಯ್ಯುವೆ ಬನ್ನಿ’ ಎಂದ. ತನ್ನ ಬೈಕ್‌ ಮೇಲೆ ಕೂರಿಸಿಕೊಂಡ ಆತ ನೇರ ಕರೆದೊಯ್ದಿದ್ದು ಬೀದರ್ ಹೊರವಲಯದಲ್ಲಿ ಮಂಜು ಹೊದ್ದುಕೊಂಡಿದ್ದ ಅಸ್ಟೂರು ಎಂಬ ಸ್ಥಳಕ್ಕೆ.

ಗುಡ್ಡದ ಮೇಲಿನ ಪ್ರದೇಶದಲ್ಲಿ ಬೀದರ್‌ನ ಜನರು ಬದುಕು ಕಟ್ಟಿಕೊಂಡಿದ್ದನ್ನು ಮತ್ತು ಸುತ್ತಮುತ್ತಲೂ ಇರುವ ಇಳಿಜಾರಿನ ರಸ್ತೆಗಳನ್ನು ತೋರಿಸಿದ ಆತ, ‘ಈ ಊರಿಗೆ ಮಾಲಿನ್ಯದ ಗಾಳಿ ಇನ್ನೂ ತಟ್ಟಿಲ್ಲ. ಬೆಟ್ಟಗುಡ್ಡಗಳಿಂದ ಸದಾ ಹಿತ, ತಂಪಾದ ಗಾಳಿ ಬೀಸುತ್ತದೆ’ ಎಂದ. ನಂತರ ರಸ್ತೆ ಬದಿ ಇರುವ ಸಾಲು ಕಟ್ಟಡಗಳತ್ತ ಬೊಟ್ಟು ಮಾಡಿದ. ‘ಇವು ಬಹಮನಿ ಸಂಸ್ಥಾನದ ಪ್ರಾಚೀನ ಸ್ಮಾರಕಗಳು’ ಎಂದ.

ಒಂದು ಕಟ್ಟಡ ವಿಜಯಪುರದ ಗೋಲಗುಮ್ಮಟದ ನೆನಪು ತಂದರೆ, ಮತ್ತೊಂದು ನಾಗರಹಾವು ಹೆಡೆ ಎತ್ತಿ ನಿಂತಂತೆ ಕಂಡಿತು. ಹತ್ತಿರ ಹೋಗಿ, ಸೂಕ್ಷ್ಮವಾಗಿ ಗಮನಿಸಿದಾಗ, ಇವೆಲ್ಲವೂ ಬಹಮನಿ ಸಂಸ್ಥಾನದ ದೊರೆಗಳ ಗೋರಿಗಳು ಎಂಬುದು ಅರಿವಿಗೆ ಬಂತು. ಎಲ್ಲವೂ 14ನೇ ಶತಮಾನದವು. 600 ವರ್ಷಗಳಿಂದ ಇತಿಹಾಸದ ಸಂಕೇತವಾಗಿ ಗಟ್ಟಿಯಾಗಿ ನಿಂತಿವೆ. ಸ್ವಲ್ಪವೂ ಅಳುಕಿಲ್ಲ.

ಅಲ್ಲಿನ ಅಹಮದ್ ಶಾಹ್ ಅಲ್ ವಾಲಿಯ ಗೋರಿಯು ಕುತೂಹಲವಷ್ಟೇ ಮೂಡಿಸಲಿಲ್ಲ, ಅಚ್ಚರಿಗೂ ಕಾರಣವಾಯಿತು. ಬಹಮನಿ ಸಂಸ್ಥಾನದ ಒಂಬತ್ತನೇ ದೊರೆಯಾಗಿ 13 ವರ್ಷ (1422-1436) ಆಳ್ವಿಕೆ ನಡೆಸಿದ ಅಹಮದ್ ಶಾಹ್‌ನ ಈ ಗೋರಿಯು ಅತ್ಯಂತ ಪ್ರಾಚೀನ ಸ್ಮಾರಕಗಳಲ್ಲಿ ಒಂದು. ಹವಾಮಾನ, ಚೆಂದನೆ ವಾತಾವರಣದಿಂದ ಖುಷಿಯಾದ ಅಹಮದ್ ಶಾಹ್ 1430ರಲ್ಲಿ ಸಂಸ್ಥಾನದ ರಾಜಧಾನಿಯನ್ನು ಗುಲ್ಬರ್ಗಾದಿಂದ ಬೀದರ್‌ಗೆ ವರ್ಗಾಯಿಸಿದ.

ಹಲವು ನೈಸರ್ಗಿಕ ವೈಪರಿತ್ಯ ಮತ್ತು ದಾಳಿಗಳಿಗೆ ತುತ್ತಾಗಿಯೂ ದೃಢವಾಗಿ ನಿಂತಿರುವ ಇಂಡೋ-ಇಸ್ಲಾಮಿಕ್ ಶಿಲ್ಪಕಲೆಯ ಈ ಗೋರಿಯು ಪರ್ಶಿಯನ್ ಕಲೆಯ ದಟ್ಟ ಪ್ರಭಾವವನ್ನು ಹೊಂದಿದೆ. ಇದರ ಒಳಾವರಣದ ಗೋಡೆಗಳ ಮೇಲೆ ಅಚ್ಚಳಿಯದ ಬಗೆಬಗೆ ಬಣ್ಣಗಳ ಸಂಗಮವಿದೆ. ಸ್ಮಾರಕ ನಿರ್ವಹಣೆ, ಸ್ವಚ್ಛತೆ ವೇಳೆ ಕೆಲ ಕಡೆ ಬಣ್ಣ ಮಾಸಿದ್ದರೆ, ಇನ್ನೂ ಕೆಲ ಕಡೆ ಬಣ್ಣ ಯಥಾಸ್ಥಿತಿಯಲ್ಲಿದೆ.

ಚೌಕಾಕಾರದಲ್ಲಿ ಇರುವ ಈ ಸ್ಮಾರಕ ಮೂರು ಸಾಲುಗಳ ಕಮಾನಿನ ಗೋಲಗುಮ್ಮಟ ಹೊಂದಿದೆ. ಗೋಡೆಗಳ ಮೇಲಿನ ಸುಂದರ ಲಿಪಿ, ಬರವಣಿಗೆ ಮತ್ತು ವಿಶಿಷ್ಟ ಚಿತ್ರಕಲೆಯು ಅಧಾತ್ಮ ದೃಷ್ಟಿಯಿಂದ ದೇವನು ಒಬ್ಬನೇ ಎಂಬ ಸಂದೇಶ ಸಾರುತ್ತವೆ. ಪುಟಾಣಿ ಬಾಗಿಲು ಮೂಲಕ ಒಳ ಹೋಗಿ ಸ್ಮಾರಕದ ಒಳ ಆವರಣ ವೀಕ್ಷಿಸಬಹುದು. ಅಲ್ಲಲ್ಲಿ ಪಳೆಯುಳಿಕೆಯಂತೆ ಉಳಿದಿರುವ ಚಿತ್ರಕಲೆ ನೋಡಬಹುದು. ಈ ಗೋರಿ ಸಮೀಪದಲ್ಲೇ ಆತನ ಪತ್ನಿಯ ಗೋರಿಯಿದೆ.

ಇದರ ಪಕ್ಕದಲ್ಲೇ ಇರುವ ಎರಡನೇ ಸುಲ್ತಾನ್ ಅಲಾವುದ್ದೀನ್ ಅಹಮದ್ ಶಾಹ್‌ನ (1426-1458) ಗೋರಿಯು ಕೊಂಚ ಭಿನ್ನ. ಪರ್ಶಿಯನ್, ಮೊಗಲ್ ಚಿತ್ರಕಲೆಯ ಪ್ರಭಾವ ಹೊಂದಿರುವ ಈ ಸ್ಮಾರಕ ಸಹ ಚೌಕಾಕಾರದಲ್ಲಿದ್ದು, ಸುಂದರ ಕಮಾನುಗಳನ್ನು ಹೊಂದಿದೆ. ಕಪ್ಪು, ನೀಲಿ ಬಣ್ಣದ ಕಲ್ಲುಗಳ ಅಂಚುಗಳು ಸ್ಮಾರಕದ ಸುತ್ತಲೂ ಇದ್ದು, ಅವುಗಳ ಆಕರ್ಷಣೆ ಹೆಚ್ಚಿಸಿವೆ.

ಇದರ ಬದಿಯಲ್ಲೇ ಇರುವ ಸುಲ್ತಾನ್ ಹುಮಾಯುನ್‌ನ ಗೋರಿಯು ಈ ಎಲ್ಲಾ ಗೋರಿಗಳಿಂದ ವಿಭಿನ್ನ ಮತ್ತು ವಿಶಿಷ್ಟವಾದದ್ದು. ಇತಿಹಾಸದ ಪುಟಗಳಲ್ಲಿ ಕ್ರೂರ ರಾಜನೆಂದೇ ದಾಖಲಾಗಿರುವ ಹುಮಾಯುನ್ ಆಳ್ವಿಕೆ ನಡೆಸಿದ್ದು ಬರೀ ಐದು (1458-1463) ವರ್ಷ. ಈ ಗೋರಿಯ ಕಮಾನು ಕೊಂಚ ಅಗಲವಾಗಿದ್ದು. ವಿಜಯಪುರದ ಆದಿಲ್‌ಶಾಹಿ ಮತ್ತು ಬರೀದಿ ಶೈಲಿ ಹೋಲುತ್ತದೆ.ಗೋಡೆಗಳು 13 ಅಡಿಯಷ್ಟು ದಪ್ಪವಿದ್ದು, ಜೊತೆಗೆ ಮೆಟ್ಟಿಲುಗಳಿರುವುದು ವಿಶೇಷ.

ಹುಮಾಯುನ್ ಗೋರಿ ನಿರ್ಮಾಣಕ್ಕೆ ಅತ್ಯಂತ ಕಡಿಮೆ ತೂಕದ ಇಟ್ಟಿಗೆಗಳನ್ನು ಬಳಕೆ ಮಾಡಲಾಗಿತ್ತು. ಅವು ನೀರಿನಲ್ಲಿ ತೇಲುವಷ್ಟು ಹಗುರ! ಸಿಡಿಲು ಬಡಿದು ಗೊಮ್ಮಟದ ಅರ್ಧಭಾಗವು ಹಾನಿಯಾಗಿದ್ದು, ಇನ್ನೂ ಅರ್ಧ ಭಾಗವು ಯಥಾಸ್ಥಿತಿಯಲ್ಲಿದೆ. ಹೀಗೆ ಅಪೂರ್ಣ ಸ್ಥಿತಿಯಲ್ಲಿರುವ ಸ್ಮಾರಕವು ಹೆಚ್ಚು ಆಕರ್ಷಿಸುತ್ತದೆ. ಶತಮಾನಗಳ ಸಾರವನ್ನು ಹೇಳುತ್ತದೆ.

ಅದೇ ಆವರಣದಲ್ಲಿ ಇರುವ ಮಲ್ಲಿಕಾ-ಎ-ಜಹಾನ್ (ಜಗತ್ತಿನ ರಾಣಿ) ಗೋರಿ ಮತ್ತು ಇನ್ನೊಂದೆರಡು ಗೋರಿಗಳನ್ನು ನೋಡಿ ಅಲ್ಲಿಂದ ನಿರ್ಗಮಿಸುವಾಗ ಮಧ್ಯಾಹ್ನ 12 ಆಗಿತ್ತು. ‘ಇಲ್ಲಿನ ಜನ ಇವುಗಳನ್ನು ಉರ್ದುವಿನಲ್ಲಿ ಮಕಬರಾ ಬದಲು ಅಸ್ಟೂರ್ ದರ್ಗಾಗಳೆಂದು ಕರೆಯುತ್ತಾರೆ. ಅವರು ನಿತ್ಯವೂ ಪ್ರಾರ್ಥನೆ ಸಲ್ಲಿಸುತ್ತಾರೆ. ವರ್ಷಕ್ಕೊಮ್ಮೆ ಇಲ್ಲಿ ಉತ್ಸವವೂ ನಡೆಯುತ್ತದೆ’ ಎನ್ನುತ್ತ ಮಥೀನ್ ಬೀದರ್‌ನತ್ತ ಕರೆದೊಯ್ದ. ದಾರಿಯಲ್ಲಿ ಚೌಕಂಡಿ ದರ್ಗಾ ತೋರಿಸಿದ.

ಬೀದರ್‌ನಲ್ಲಿ ಹಿರಿಯರಾದ ಬಾಬುರಾವ್ ಹೊನ್ನಾ, ಎಸ್‌.ಎಂ.ಖಾದ್ರಿ, ಮನ್ಸೂರ್ ಖಾದ್ರಿ ಭೇಟಿಯಾದರು. ‘‍ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯವರು ಅನುದಾನ ಸದ್ಬಳಕೆ ಮಾಡಿಕೊಂಡು ಆಸಕ್ತಿಯಿಂದ ಸಂರಕ್ಷಿಸಬೇಕು. ಸಮರ್ಪಕವಾಗಿ ನಿರ್ವಹಿಸಬೇಕು. ಸ್ಮಾರಕಗಳ ಕುರಿತು ಪ್ರವಾಸಿಗರಿಗೆ ಮಾಹಿತಿ ನೀಡಲು ಗೈಡ್‌ಗಳನ್ನು ನೇಮಿಸಿದರೆ, ಇನ್ನೂ ಹೆಚ್ಚಿನ ಅನುಕೂಲ’ ಎಂದರು. ಅಲ್ಲಿಂದ ಬಸ್‌ನ್ನೇರಿ ಕಲಬುರ್ಗಿಗೆ ತಲುಪುವ ಹೊತ್ತಿಗೆ ಸಂಜೆಯಾಗಿತ್ತು.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT