ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರಸಂತೆ: ಕಲಾಸಿರಿಯಾನ

Last Updated 7 ಜನವರಿ 2019, 6:30 IST
ಅಕ್ಷರ ಗಾತ್ರ

ಗಾಂಧೀಜಿ ಕನ್ನಡಕದೊಳಗೆ ಕಾಲಿಟ್ಟಿದ್ದೇ, ಸರಳತೆಯ ಗಾಂಧಿನೋಟಹೊತ್ತು. ಆದರೆ ಅಲ್ಲಿದ್ದಿದ್ದು ವರ್ಣರಂಜಿತ ಕಲಾಕೃತಿಗಳು. ಸಹಜತೆಯೇ ಮೈವೆತ್ತಂಥ ಕೃತಿಗಳು.ಕಣ್ತುಂಬಿಕೊಂಡಷ್ಟೂ ಬಣ್ಣಗಳು. ಹೆಜ್ಜೆಹಾಕಿದಷ್ಟೂ ಹೊಸತನದ ನೋಟ. ಅಲ್ಲಿದ್ದ ಕಲಾ ಸೊಬಗನ್ನು ಕಣ್ತುಂಬಿಕೊಂಡು ಬೆರಗಾಗಿ ನಿಂತಲ್ಲೇ ನಿಂತ ಜನರು. ನಾದೋಪಾಸನ ತಂಡದ ಇಂಪಾದ ಸಂಗೀತ. ಕುರ್ಚಿಯ ಮೇಲೆ ಕೂತು ಕತ್ತು ಎತ್ತಿ ರಾಣಿಯಂತೆ ಪೋಸು ಕೊಡುತ್ತಿದ್ದ ಪೋರ, ಪೋರಿಯರು, ಸುಂದರನಾರಿಯರು. ಎಂಥವರನ್ನೂ ಕೈಬೀಸಿ ಕರೆಯುತ್ತಿದ್ದ ಕಲಾಕೃತಿಗಳು...

ಚಿತ್ರಸಂತೆಯ ದರ್ಶನ. ಮಾಗಿಯ ಚಳಿಯನ್ನು ಬೆಳ್ಳನೆ ಕ್ಯಾನ್ವಾಸ್‌ನಲ್ಲಿ ಬಣ್ಣ ಬಣ್ಣದಲ್ಲಿ ಬಿಡಿಸಿಟ್ಟ ಕೃತಿಗಳು ಕಲಾಸಕ್ತರಲ್ಲಿ ಬೆಚ್ಚನೆಯ ಭಾವ ಮೂಡಿಸಿದವು. ನೆರಳು ಬೆಳಕಿನ ವರ್ಣ ಸಂಯೋಜನೆ, ಜಲ, ತೈಲ, ಆಕ್ರೆಲಿಕ್ ಮಾಧ್ಯಮದಲ್ಲಿ ಕೃತಿಗಳು ಒಂದನ್ನೊಂದು ಮೀರಿಸುತ್ತಿದ್ದವು.

ಕಲೆ ಮತ್ತು ಕಲಾರಾಧಕನ ನೆಂಟಸ್ತನದ ಮಾತುಗಳು ನಡೆದವು. ಕೊಡು ಕೊಳ್ಳುವಿಕೆಯ ಚೌಕಾಸಿಯ ಮಾತುಗಳು ಇಲ್ಲಿಯೂ ಬಿಟ್ಟಿರಲಿಲ್ಲ. ಪರಿಷತ್ತಿನ ಗೇಟಿನಲ್ಲಿ ಕೋಲು ಹಿಡಿದಿದ್ದ ಗಾಂಧಿ ತಾತ ಈ ಮಾತುಗಳಿಗೆ ಕಿಸಕ್ಕನೆನಕ್ಕರು. ಈ ನಗುವನ್ನು ಮೊಬೈಲ್ ಸೆಲ್ಫಿಗಳು ಸೆರೆಹಿಡಿದವು.

ಚಿತ್ರಸಂತೆಯನ್ನು ಗಾಂಧಿಜೀ ಅವರಿಗೆ ಅರ್ಪಿಸಲಾಗಿತ್ತು. ಹೀಗಾಗಿಯೇ,ಸಂತೆಯ ಸುತ್ತಮುತ್ತಲೂ ಓಡಾಡುತ್ತಿದ್ದವು ಗಾಂಧಿ ಮನಸುಗಳು.

ಸಾವಿರಾರು ಮಂದಿ ಕಲಾವಿದರು, ಸಾವಿರಕ್ಕೂ ಅಧಿಕ ಮಳಿಗೆಗಳಲ್ಲಿ ನಿಂತು ತಮ್ಮ ನೆಚ್ಚಿನ ಕಲೆಯನ್ನು ಪ್ರದರ್ಶಿಸುತ್ತಾ, ಜನರಿಗೆ ಅವುಗಳ ಬಗ್ಗೆ ವಿವರಿಸುತ್ತಾ ಒಳಗೊಳಗೆ ಖುಷಿ ಪಡುತ್ತಿದ್ದದ್ದು ಅವರ ಮುಖದಲ್ಲಿ ಕಾಣುತ್ತಿತ್ತು.ಇನ್ನು, ವರ್ಷದ ಮೊದಲ ತಿಂಗಳ ಮೊದಲ ವಾರದಲ್ಲಿ ನಡೆಯುವ ಈ ಸಂತೆಯನ್ನು ಕಣ್ತುಂಬಿಕೊಳ್ಳುವ ಕಾತುರದಿಂದ ಬಂದ ಸಾರ್ವಜನಿಕರಿಗಂತೂ ನಿರಾಸೆಯಾಗಲಿಲ್ಲ. ಕಣ್ಣು ಕೋರೈಸುವಷ್ಟು ವಿವಿಧ ಕಲಾಕೃತಿಗಳು ಅಲ್ಲಿದ್ದವು. ಅವುಗಳನ್ನು ಕಂಡು ಫುಲ್ ಫಿದಾ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನರ ಸಂಭ್ರಮಹೇಳತೀರದಂತಿತ್ತು.

ನಗರವನ್ನು ಆವರಿಸಿದ್ದ ಚಳಿ ನಿಧಾನವಾಗಿ ದೂರವಾಗಿತ್ತು. ಎಳೆ ಬೀಸಿಲು ದೇಹಕ್ಕೆ ಹಿತ ಅನುಭವ ನೀಡುತ್ತಿತ್ತು. ಆಗಲೇ ನೋಡಿ, ಜನಸಾಗರ ಚಿತ್ರಸಂತೆಗೆ ತಂಡೋಪತಂಡವಾಗಿ ಹರಿದು ಬಂದಿದ್ದು. ಕುಮಾರಕೃಪಾ ರಸ್ತೆ ಸೇರಿದಂತೆ ಅದರ ಆಸುಪಾಸಿನ ಬಹತೇಕ ರಸ್ತೆಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಆ ಎಲ್ಲ ರಸ್ತೆಗಳ ಪಾದಚಾರಿ ಮಾರ್ಗಗಳನ್ನು ಅದಾಗಲೇ ಆವರಿಸಿದ್ದ ಕಲಾವಿದರು ತಮ್ಮ ಕಲಾಕೃತಿಗಳಿಗೆ ಚೌಕಟ್ಟು ನೀಡಿ ಒಂದರ ಮೇಲೊಂದರಂತೆ ಜೋಡಿಸಿದ್ದರು.

ತಮಿಳುನಾಡಿನ ಮಧುರೈ ಬಳಿಯ ಅಳಗಿರಿ ದೇಗುಲದ ಚಿತ್ರವೊಂದು ದೊಡ್ಡ ಚೌಕಟ್ಟಿನೊಂದಿಗೆ ಜನರನ್ನು ಆಕರ್ಷಿಸುತ್ತಿತ್ತು. ಆ ದೇಗುಲದ ಪ್ರವೇಶದ್ವಾರ, ದ್ವಾರದ ಬಳಿ ಪೂಜಾ ಸಾಮಗ್ರಿ ಅಂಗಡಿಗಳು, ಹಿಂದೆ ಸೊಗಸಾಗಿ ಕಾಣುತ್ತಿದ್ದ ಕಾನನದ ಹಸಿರು ಸೊಬಗು... ಆ ಇಡೀ ಚಿತ್ರವೂ ಒಂದರೆ ಕ್ಷಣ ಅಳಗಿರಿ ದೇಗುಲಕ್ಕೆ ಕರೆದೊಯ್ದ ಭಾವ ಮೂಡಿಸುತ್ತದೆ ಮನದಲ್ಲಿ. ಆ ಕಲಾಕೃತಿನೋಡಿದ ಯಾರಿಗೇ ಆಗಲಿ ಮನೆಗೆ ಕೊಂಡೊಯ್ಯಬೇಕುಎನಿಸದಿರದು. ಅದೇ ವೇಳೆ, ಬೆಲೆ ಕೇಳಿ ದಂಗಾಗುತ್ತಿದ್ದರು.

ಕಲಾವಿದ ಗೋಕುಲಮ್ ವಿಜಯ್ ಚಿತ್ರಿಸಿದ ಆ ಕಲಾಕೃತಿಯ ಬೆಲೆ ಬರೋಬ್ಬರಿ ₹ 12 ಲಕ್ಷ. ‘ಒಮ್ಮೆ ದೇವಸ್ಥಾನಕ್ಕೆ ಹೋಗಿದ್ದೆ. ದೇವರ ದರ್ಶನ ಮಾಡಿಕೊಂಡು ಹೊರಬಂದು ನಿಂತಿದ್ದೆ. ಹೊರಾಂಗಣ ನೋಟ ಮನದಲ್ಲಿ ಹಾಗೆಯೇ ಅಚ್ಚಳಿಯದ ಸ್ಥಾನ ಗಿಟ್ಟಿಸಿತ್ತು. ಸತತ ಒಂದು ವರ್ಷದ ಪರಿಶ್ರಮದಲ್ಲಿ ಅಂದು ಕಂಡ ಚಿತ್ರವನ್ನು ಬಣ್ಣದ ಚಿತ್ರಿಸಿದೆ’ ಎನ್ನುವಾಗ ಅವರ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು.

ಇಷ್ಟದ ಕಲಾಕೃತಿಗಳನ್ನು ಕೈಯಲ್ಲಿ ಹಿಡಿದು ಅದರ ಬಗ್ಗೆ ಕಲಾವಿದನಿಂದ ಕೇಳಿ ತಿಳಿದುಕೊಳ್ಳುತ್ತಿದ್ದ ಕೆಲವರು ಬೆಲೆ ಕೇಳಿ ದಂಗಾಗುತ್ತಿದ್ದರೆ, ಇನ್ನು ಕೆಲವರು ಕಲೆಗೆ ಮನಸೋತು ಸಾವಿರಾರು ರೂಪಾಯಿ ನೀಡಿ ಖರೀದಿಸುತ್ತಿದ್ದರು. ಪುಟಾಣಿ ಮಕ್ಕಳಿಂದ ಹಿಡಿದು ಎಲ್ಲ ವಯೋಮಾನದವರು ಚಿಂತ್ರಸಂತೆಯು ನಮ್ಮದೇ ಎನ್ನುವಂತೆ ಸುತ್ತಾಡುತ್ತಿದ್ದರು.

ಇಡೀ ಚಿತ್ರಸಂತೆ ಸುತ್ತಾಡಿ ದಣಿದ ಮೇಲೆ ಹೊಟ್ಟೆಯೂ ತಾಳ ಹಾಕದೆ ಇರುತ್ತದೆಯೇ. ಅದಕ್ಕಾಗಿ ಪರಿಷತ್ತಿನ ಆವರಣದಲ್ಲಿ ವಿವಿಧ ಖಾದ್ಯಗಳು ಕಾದಿದ್ದವು. ಪಕ್ಕದಲ್ಲೇ ರಾಜಸ್ಥಾನದ ವಿವಿಧ ಬಗೆಯ ಹಪ್ಪಳ ಹಸಿವು ತಣಿಸುತ್ತವೆ.

ಗಾಂಧಿ ಕುಟೀರದಲ್ಲೊಂದು ಸುತ್ತು

ಚಿತ್ರಕಲಾ ಪರಿಷತ್ತು ಆವರಣದಲ್ಲಿ ಗಾಂಧಿ ಕುಟೀರ ಸ್ಥಾಪಿಸಲಾಗಿದೆ. ಬಿದಿರು ಮರಗಳನ್ನು ಗೋಡೆಯಾಗಿಸಿ, ಹೆಂಚುಗಳಿಂದ ಛಾವಣಿ ನಿರ್ಮಿಸಿದ್ದ ಆ ಕುಟೀರದಲ್ಲಿ ಗಾಂಧೀಜಿ ಅವರ ಅಪರೂಪದ ಚಿತ್ರಗಳು ಹಾಕಲಾಗಿದೆ. ಕುಟೀರ ಪ್ರವೇಶದ್ವಾರದ ಎಡಭಾಗದಲ್ಲಿ ಹತ್ತಿಯಿಂದ ನೂಲು ತೆಗೆಯುವ ಚರಕ ಹಾಗೂ ಬಲಭಾಗದಲ್ಲಿ ಥೇಟ್ ಗಾಂಧಿಯಂತೆ ಕಾಣುವ ವ್ಯಕ್ತಿಯೊಬ್ಬರು ಜನರು ಆಕರ್ಷಿಸುತ್ತಿದ್ದರು.

**

ವರ್ಷಕ್ಕೊಮ್ಮೆ ಸಾಕೇ?

‘ಹತ್ತು ವರ್ಷಗಳಿಂದ ಈ ಸಂತೆಗೆ ಬರುತ್ತಿದ್ದೇನೆ. ಚಿತ್ರಸಂತೆಗೆ ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಬರುತ್ತಾರೆ. ಎಲ್ಲ ಮಾದರಿಯ ಕಲಾವಿದರಕಲಾ ಪ್ರದರ್ಶನಕ್ಕೆ ಇದು ಉತ್ತಮ ವೇದಿಕೆ. ಕಲೆಯನ್ನೇ ವೃತ್ತಿಯಾಗಿಸಿಕೊಂಡ ಅದೆಷ್ಟೋ ಕಲಾವಿದರಿಗೆ ಸಂತೆಯಿಂದ ಅನುಕೂಲವಾಗುತ್ತದೆ. ಇಂತಹ ಸಂತೆಗಳು ವರ್ಷಕ್ಕೊಮ್ಮೆ ಸಾಕೇ?. ಆಗಾಗ ನಡೆಯುತ್ತಿದ್ದರೆ ಕಲಾವಿದರಿಗೆ ಹಾಗೂ ಕಲಾಭಿಮಾನಿಗಳಿಗೆ ಅನುಕೂಲವಾಗುತ್ತದೆ

–ದಿವ್ಯಾ, ಶೇಷಾದ್ರಿಪುರ

**

ಕಲೆಗೆ ಪ್ರಚಾರ ಸಿಗುತ್ತದೆ

ಸುಮಾರು ಹತ್ತು ವರ್ಷಗಳ ಹಿಂದೆ ಚಿತ್ರಸಂತೆ ನೋಡಲು ಬಂದಿದ್ದೆ. ಅದಾದ ಬಳಿಕ ಪ್ರತಿವರ್ಷವು ಸಂತೆಯಲ್ಲಿ ಪಾಲ್ಗೊಂಡು ವರ್ಲಿ ಕಲಾಕೃತಿಗಳನ್ನು ಪ್ರದರ್ಶಿಸುತ್ತಿದ್ದೇನೆ. ಬಹುತೇಕರು ನಮ್ಮ ಮಳಿಗೆಗೆ ಬಂದು ವರ್ಲಿ ಕಲೆಯ ಬಗ್ಗೆ ತಿಳಿದುಕೊಂಡು ಹೋಗುತ್ತಾರೆ. ಹೀಗಾಗಿ, ಇಲ್ಲಿ ವ್ಯಾಪಾರಕ್ಕಿಂತ ಎಲ್ಲ ಕಲೆಗಳಿಗೆ ಪ್ರಚಾರ ಹಾಗೂ ಪ್ರೋತ್ಸಾಹ ಸಿಗುತ್ತದೆ. ಇದೇ ಖುಷಿಯ ವಿಚಾರ.

–ವೀಣಾ ಪ್ರದೀಪ್, ಕಲಾವಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT