ಗುರುವಾರ , ಏಪ್ರಿಲ್ 15, 2021
30 °C
ಕರಾವಳಿಯಲ್ಲಿ ನವರಾತ್ರಿಯ ವೈಭವ

PV Web Exclusive | ತುಳುನಾಡಿನಲ್ಲಿ ‘ಪಿಲಿ’ ಗರ್ಜನೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಕುಣಿದು ಹರಕೆಯೊಪ್ಪಿಸಿ ಬದುಕಿನ ಜಂಜಾಟಗಳಿಂದ ಹಗುರಾಗುವ ನೂರಾರು ಮಂದಿ, ಇದನ್ನು ನೋಡಿ ನಿರಾಳರಾಗುವ ಸಹಸ್ರಾರು ಮಂದಿ ತುಳುನಾಡಿನ ‘ಹುಲಿ’ ಗರ್ಜನೆ ಕೇಳಿ ಪುಳಕಿತರಾಗಿದ್ದಾರೆ. ಮೈಸೂರಿನ ದಸರಾದಷ್ಟೇ ಮಂಗಳೂರಿನ ದಸರಾ, ಹುಲಿವೇಷ ನರ್ತನ ಪ್ರಸಿದ್ಧಿ ಪಡೆದಿದೆ. ಕರಾವಳಿ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ, ವೇಷಕಟ್ಟಿ ದೇವಿಯೆದುರು ಶರಣಾಗುವ ಈ ಜನಪದೀಯ ಆಚರಣೆಯ ನಿರೂಪಣೆ ಈ ಬರಹ.

ತುಳುನಾಡಿಗರಲ್ಲಿ ತಿಂಗಳ ಹಿಂದೆ ಸಣ್ಣ ದುಗುಡವಿತ್ತು. ಕೋವಿಡ್–19 ಸಾಂಕ್ರಾಮಿಕ ಕಾಯಿಲೆಯ ಕಾರಣ ವೇಷ ಕಟ್ಟಲು ಆಡಳಿತ ಅನುಮತಿ ನೀಡದಿದ್ದರೆ, ಶತಮಾನಗಳಿಂದ ನಡೆದುಕೊಂಡು ಬಂದ ಪರಂಪರೆಗೆ, ಕೋವಿಡ್ ಮುಳ್ಳಾಗಬಹುದೇ ಎಂಬ ಆತಂಕವಿತ್ತು. ಸಾಮಾಜಿಕ ಸೌಹಾರ್ದ ಗಟ್ಟಿಗೊಳಿಸುವ ‘ಹುಲಿವೇಷ’ ಹಬ್ಬದ ಆಚರಣೆಗೆ ಒಪ್ಪಿಗೆ ನೀಡುವಂತೆ, ಇಡೀ ಸಮುದಾಯದ ಒಗ್ಗಟ್ಟಿನ ಮನವಿಗೆ ಮಣಿದು ಜಿಲ್ಲಾಡಳಿತ, ದೇವಿಯೆದುರು ಹರಕೆಯೊಪ್ಪಿಸಲು ಷರತ್ತುಬದ್ಧ ಅನುಮತಿ ನೀಡಿದೆ. ಈಗ ತುಳುನಾಡಿಗರ ಸಂಭ್ರಮಕ್ಕೆ ಪಾರವೇ ಇಲ್ಲ. ಮನದಲ್ಲಿ ಅನುರಣಿಸುತ್ತಿದ್ದ ‘ಟೆಟ್ಟೆರೆ..ಟೆಟ್ಟೆರೆ...’, ಕಿವಿಗಡಚಿಕ್ಕುವ ತಾಸೆ ಡೋಲು ಮಾರ್ದನಿಸುತ್ತಿದೆ.

ನವರಾತ್ರಿಯ ಮೊದಲ ದಿನದಿಂದ ಪ್ರಾರಂಭವಾಗುವ ಹುಲಿವೇಷ ಕುಣಿತ (ತುಳುವಿನಲ್ಲಿ ಪಿಲಿವೇಷ) ವಿಜಯದಶಮಿ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ. ಜಾತಿ, ಮತದ ಭೇದವಿಲ್ಲದೇ ಎಲ್ಲ ಸಮುದಾಯಗಳು ಈ ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದು ಕುಡ್ಲದ ವಿಶೇಷ.

ತಾಯಿಯೊಬ್ಬಳು ತನ್ನ ಮಗುವಿಗೆ ಅನಾರೋಗ್ಯವಾದಾಗ ಮಂಗಳಾದೇವಿಯ ಬಳಿ, ‘ನನ್ನ ಮಗು ಹುಷಾರಾದರೆ, ನಿನ್ನ ರಥೋತ್ಸವದ ವೇಳೆ ಮಗುವಿಗೆ ಹುಲಿವೇಷ ಹಾಕಿಸಿ, ಹತ್ತು ಮನೆಗಳೆದುರು ಕುಣಿಸುತ್ತೇನೆ’ ಎಂದು ಪ್ರಾರ್ಥಿಸಿಕೊಂಡಿದ್ದಳಂತೆ. ಆ ತಾಯಿಯ ಪ‍್ರಾರ್ಥನೆಯಂತೆ ಮಗು ಗುಣಮುಖ ಹೊಂದಿತಂತೆ. ತಾಯಿ ತನ್ನ ಮಗುವಿಗೆ ವೇಷ ಕಟ್ಟಿ ಮಂಗಳಾದೇವಿಯ ಸಮ್ಮುಖದಲ್ಲಿ ಕುಣಿಸಿದಳಂತೆ. ಈ ಜನಪದೀಯ ಕಥೆಯನ್ನು ಆಧರಿಸಿ, ನಡೆಯುವ ಸಾಂಪ್ರದಾಯಿಕ ಹುಲಿವೇಷ ನರ್ತನವು, ಶತಮಾನಗಳಿಂದ ನಡೆದುಕೊಂಡು ಬಂದಿದೆ. ಈಗಲೂ ಮನೆ ಮಕ್ಕಳಿಗೆ ಅಸೌಖ್ಯವಾದರೆ, ‘ಹುಲಿವೇಷ ಕಟ್ಟಿಸುತ್ತೇನೆ’ ಎಂದು ಹರಕೆ ಹೊತ್ತುಕೊಳ್ಳುವವರು, ನವರಾತ್ರಿಯಲ್ಲಿ ಮಕ್ಕಳಿಗೆ ವೇಷ ಕಟ್ಟಿ, ಹರಕೆ ತೀರಿಸಿ, ಕೃತಾರ್ಥರಾಗುತ್ತಾರೆ.

ಇದನ್ನೂ ಓದಿ: ಹುಲಿವೇಷದ ಕುಣಿತವೂ ಕಸರತ್ತಿನ ಸಂಭ್ರಮವೂ


ಮಂಗಳೂರಿನ ಕದ್ರಿ ದೇವಾಲಯದ ಎದುರು ಹುಲಿವೇಷಧಾರಿಗಳ ತಂಡ (ಸಂಗ್ರಹ ಚಿತ್ರ)

‘ಅನಾದಿ ಕಾಲದಿಂದಲೂ ಹರಕೆಯ ರೂಪದಲ್ಲಿ ಹುಲಿವೇಷ ಕಟ್ಟುವುದು ಇಲ್ಲಿನ ಸಂಪ್ರದಾಯ. ಅಸುರರನ್ನು ಕೊಂದು ದೇವಿ ಹುಲಿಯ ಮೇಲೆ ಹೋಗುತ್ತಾಳೆ. ಹೀಗಾಗಿ, ದೇವಿಯ ವಾಹನವಾಗಿರುವ ಹುಲಿಯ ವೇಷ ಕಟ್ಟುವುದು ನಮ್ಮ ಧಾರ್ಮಿಕ ನಂಬಿಕೆ. ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಸಹ ಸಾಂಕೇತಿಕವಾಗಿ ದೇವಿಯೆದರು ಹುಲಿವೇಷ ನರ್ತನ ಮಾಡಿ, ಕುಡ್ಲದ ಮಂದಿ ಆಚರಣೆಯನ್ನು ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಈಗ ಕೋವಿಡ್–19 ಕಾಲದಲ್ಲಿ ಇದು ನಿಲ್ಲಬಾರದು ಎಂಬುದು ನಮ್ಮ ಅಪೇಕ್ಷೆಯಾಗಿತ್ತು. ಅದು ಸಾಕಾರವಾಗಿದೆ’ ಎನ್ನುತ್ತಾರೆ ಮಂಗಳಾದೇವಿ ಶೋಭಾಯಾತ್ರೆ ಸಮಿತಿ ಅಧ್ಯಕ್ಷ ದಿಲ್‌ರಾಜ್ ಆಳ್ವ.

‘ಕುಸ್ತಿ ಮನೆಯ ಕುಣಿತಕ್ಕೂ, ಹುಲಿವೇಷ ನರ್ತನಕ್ಕೂ ಸಾಮ್ಯತೆಯಿದೆ. ಹುಲಿವೇಷದ ‘‍ಪೌಲ್‌’ ಅಂದರೆ, ಜಿಮ್ನಾಸ್ಟಿಕ್‌ನಂತೆ ದೇಹವನ್ನು ಬಾಗಿಸುವ ಕಲೆ. 14 ಪೌಲ್‌ಗಳಲ್ಲಿ ಪ್ರತಿ ಪೌಲ್‌ಗೂ ವಿಶಿಷ್ಟತೆಯಿದೆ. ಧಾರ್ಮಿಕ ಭಾವದಿಂದ ವೇಷ ಕಟ್ಟುವವರು ‘ಹುಲಿ’ಯಾಗಿ ದೇವರ ಜತೆ ಅನುಸಂಧಾನ ನಡೆಸುತ್ತಾರೆ. ಆಧುನಿಕತೆಯ ಸೆಳವಿನಲ್ಲೂ ಸಾಂಪ್ರದಾಯಿಕ ಹುಲಿವೇಷ ವರ್ಷದಿಂದ ವರ್ಷಕ್ಕೆ ಹೆಚ್ಚು ಹೆಚ್ಚು ಯುವಜನರನ್ನು ಆಕರ್ಷಿಸುತ್ತಿದೆ. ಕುಡ್ಲದ ಇನ್ನೊಂದು ವಿಶೇಷವೆಂದರೆ, ಹಿಂದೂಗಳ ಜತೆ ಕ್ರೈಸ್ತರು, ಮುಸ್ಲಿಮರು ಸಹ ಹುಲಿವೇಷ ಹಾಕುತ್ತಾರೆ. ಜಾತಿ, ಮತದ ಚೌಕಟ್ಟನ್ನು ಅಳಿಸುವ ಈ ಜಾನಪದ ಕಲೆ ನಮ್ಮ ಹೆಮ್ಮೆ’ ಎನ್ನುವಾಗ ಅವರಿಗೆ ಕುಡ್ಲದ ಕಲೆಯ ಬಗ್ಗೆ ಅಭಿಮಾನ ಉಕ್ಕುತ್ತದೆ.

ಹಿಂದೆ ಹುಲಿ, ಕರಡಿ, ಸಿಂಹ, ಜೋಡಿವೇಷ, ಸ್ತ್ರೀವೇಷ, ಚುಂಗುಡಿ ವೇಷ, ರಾಕ್ಷಸ ಪಾತ್ರಧಾರಿಗಳೆಲ್ಲ ಹಾದಿ–ಬೀದಿಗಳಲ್ಲಿ ಕಾಣುತ್ತಿದ್ದರು. ಈಗ ಉಳಿದ ವೇಷಗಳು ಕೊಂಚ ಕಡಿಮೆಯಾಗಿವೆ. ಇಂದಿನ ಬಣ್ಣದ ಪೇಂಟ್‌ಗಳು, ಹಿಂದಿನ ಪ್ರಾಕೃತಿಕ ಬಣ್ಣವನ್ನು ಬದಿಗೆ ಸರಿಸಿವೆ. ಆಧುನಿಕತೆಯ ಸೋಂಕು ತಾಗಿದರೂ, ಮೂಲ ಕಲೆ ತನ್ನತನವನ್ನು ಉಳಿಸಿಕೊಂಡಿದೆ ಎಂಬುದು ಅವರ ವಾದ.

ಇದನ್ನೂ ಓದಿ: ಹುಲಿವೇಷ ಧರಿಸಿದ ದೈವದ ನರ್ತನೆ


ಹುಲಿವೇಷಗಳ ಆಕರ್ಷಕ ನರ್ತನ (ಸಂಗ್ರಹ ಚಿತ್ರ)

ವೇಷ ಕಟ್ಟುವುದು ಸುಲಭವಲ್ಲ..

‘ಹುಲಿವೇಷದ ಊದು (ಮುಹೂರ್ತ) ಹಾಕುವುದು ಗಣೇಶ ಚತುರ್ಥಿ ವೇಳೆಗೆ. ವೇಷ ಕಟ್ಟುವವರು, ಪೇಂಟ್ ಮಾಡುವವರು, ಬ್ಯಾಂಡ್‌ನವರು, ಸಮಿತಿಯ ಪ್ರಮುಖರೆಲ್ಲ ಆ ವೇಳೆಗೆ ಹಾಜರಾಗಬೇಕು. ಅಲ್ಲಿಂದ ನವರಾತ್ರಿಯವರೆಗೆ ಒಂದು ತಿಂಗಳು ತಂಡದ ಸದಸ್ಯರಲ್ಲಿ ಯಾರಿಗೂ ಸೂತಕ ಅಥವಾ ಇನ್ನಾವುದೇ ತೊಂದರೆ ಬರಬಾರದು ಎಂದು ದೇವರ ಅನುಗ್ರಹ ಪಡೆಯುವ ಪ್ರಕ್ರಿಯೆ ಇದು. ಅಲ್ಲಿಂದ ತಾಲೀಮು ಶುರುವಾಗುತ್ತದೆ. ಪರಿಣಿತರರು ಪೌಲ್ ಹೇಳಿಕೊಡುತ್ತಾರೆ. ಸುಮಾರು ಅರ್ಧ ಕ್ವಿಂಟಲ್ ಭಾರದ ಅಕ್ಕಿಮುಡಿಯನ್ನು ಹಲ್ಲಿನಲ್ಲಿ ಕಚ್ಚಿ ಬಿಸಾಡುವ, ಮರಳು ತುಂಬಿಸಿದ ಗೋಣಿಚೀಲವನ್ನು ಕಚ್ಚಿ ಎಸೆಯುವ ರೋಮಾಂಚಕಾರಿ ಕಸರತ್ತಿನ ತಾಲೀಮು ನಡೆಯುತ್ತದೆ’ ಎಂದು ಕುತೂಹಲದ ಸಂಗತಿಯನ್ನು ಬಿಚ್ಚಿಟ್ಟರು ಮಂಗಳಾದೇವಿ ತಂಡದ ಪ್ರಮುಖ ಅನಿಷ್ ಬೋಳಾರ್. 

‘ವೇಷ ಹಾಕುವವರಿಗೆ ಮಾಂಸಾಹಾರ, ಮದ್ಯಸೇವನೆ ನಿಷಿದ್ಧ. ಕುಡ್ಲದಲ್ಲಿ 50ಕ್ಕೂ ಹೆಚ್ಚು ಹುಲಿವೇಷ ತಂಡಗಳು ಸಕ್ರಿಯವಾಗಿವೆ. ನಮ್ಮದು ಕೊನೆಯ ಮೂರು ದಿನಗಳ ಪ್ರದರ್ಶನ. ಆಯುಧಪೂಜೆಯ ಮೊದಲದಿನ ಸಡಗರ ಇಮ್ಮಡಿಸುತ್ತದೆ. ಮುಸ್ಸಂಜೆಯಿಂದ ಬಣ್ಣ ಬಳಿಯಲು ಶುರು ಮಾಡಿದರೆ, ಎಲ್ಲ ಹುಲಿಗಳು ಸಜ್ಜಾಗುವಷ್ಟರಲ್ಲಿ ಬೆಳಕು ಹರಿಯುತ್ತದೆ. ಒಂದು ಹುಲಿ ಅಣಿಯಾಗಲು ಕನಿಷ್ಠ ಮೂರು ತಾಸು ಬೇಕು. ಹುಲಿಗಳ ತಂಡ ಹೊರಡುವ ಮುನ್ನ ಮುಖಗವಚವನ್ನು ಪೂಜಿಸಬೇಕು. ಧಾರ್ಮಿಕ ವಿಧಿಗಳು ಪೂರ್ಣಗೊಂಡ ಮೇಲೆ ಹಿರಿಯರು ವೇಷಧಾರಿಗಳಿಗೆ ಕುರಿ ಉಣ್ಣೆಯ ಟೊಪ್ಪಿ ತೊಡಿಸುತ್ತಾರೆ. ಅಲ್ಲಿಂದ ಮಂಗಳಾದೇವಿ, ಮಾರಿಯಮ್ಮ, ಮುಖ್ಯಪ್ರಾಣ ದೇವರೆದುರು ಕುಣಿತದ ಸೇವೆ ನಡೆಯುತ್ತದೆ’ ಎಂದ ಅವರು ಬಣ್ಣದ ಹಿಂದಿನ ಶ್ರಮವನ್ನು ವಿವರಿಸಿದರು.

ವೇಷಧಾರಿಗಳಿಗೆ ಬಣ್ಣ ಹಚ್ಚುವ ಕಲಾವಿದ ಉಮೇಶ ಬೋಳಾರ್ ಅವರು ಕರಾವಳಿಯ ಹುಲಿವೇಷವನ್ನು ವಿದೇಶದಲ್ಲೂ ಪರಿಚಯಿಸಿ ಸೈಎನಿಸಿಕೊಂಡವರು. ಫ್ರಾನ್ಸ್, ಜರ್ಮನಿಯಲ್ಲಿ ಹುಲಿವೇಷ ಪ್ರದರ್ಶನ ಪ್ರಶಂಸೆ ಪಡೆದಿದೆ ಎಂದು ಅವರು ಅಭಿಮಾನದಿಂದ ಹೇಳಿಕೊಂಡರು.

ಇದನ್ನೂ ಓದಿ: ಇಷ್ಟಾರ್ಥ ಸಿದ್ಧಿಗಾಗಿ ಹುಲಿವೇಷ


ಹುಲಿವೇಷಧಾರಿಗಳ ಕಸರತ್ತು (ಸಂಗ್ರಹ ಚಿತ್ರ)

ಈ ಬಾರಿ ಪಿಲಿವೇಷ ತಪ್ಪಿತು...

‘ಬಾಲ್ಯದಲ್ಲಿ ಹುಲಿಯ ಸೆಳೆತಕ್ಕೆ ಒಳಗಾಗಿ, ವೇಷಧಾರಿಗಳ ಹಿಂದೆ ಮೈಲುಗಟ್ಟಲೆ ದೂರು ಓಡುತ್ತ ಹೋಗುತ್ತಿದ್ದ ಆ ಆಕರ್ಷಣೆ ಇಂದು ಕೂಡ ಕೊಂಚವೂ ಕುಂದಿಲ್ಲ. ಹುಲಿವೇಷಕ್ಕೆಂದೇ ಪ್ರತಿ ವರ್ಷ ಸೌದಿ ಅರೇಬಿಯಾದಿಂದ ಊರಿಗೆ ಬರುತ್ತಿದ್ದೆ. ಸರ್ಕಲ್‌ಗಳಲ್ಲಿ ನಿಂತು ಹುಲಿವೇಷಧಾರಿಗಳ ಫೋಟೊ ಕ್ಲಿಕ್ಕಿಸುತ್ತಿದ್ದೆ. 10 ವರ್ಷಗಳಿಂದ ತಪ್ಪದೇ 10 ದಿನ ರಜೆ ಹಾಕಿ ಊರಿಗೆ ಬರುತ್ತಿದ್ದ ನನಗೆ ಈ ಬಾರಿ ಹಬ್ಬದ ಸಡಗರ ತಪ್ಪಿದ ಬೇಸರ. ವಾಪಸ್ ತೆರಳಲು ವಿಮಾನ ಟಿಕೆಟ್ ಸಿಗದ ಕಾರಣ ಊರಿಗೆ ಬರಲಾಗಿಲ್ಲ’ ಎಂದು ನಂದಿಗುಡ್ಡೆಯ ಮಹಮ್ಮದ್ ಆಸಿಫ್ ಬೇಸರಿಸಿಕೊಂಡರು. ಅವರು, ತಾವು ಕಳೆದ ವರ್ಷ ಕ್ಲಿಕ್ಕಿಸಿದ ಚಿತ್ರಗಳನ್ನು ‘ಪ್ರಜಾವಾಣಿ’ಗಾಗಿ ಕಳುಹಿಸಿದ್ದಾರೆ.

ಕೋವಿಡ್‌–19 ಅಡ್ಡಿ...

ಮಂಗಳೂರು ದಸರಾ, ಶಾರದಾ ಉತ್ಸವಗಳಲ್ಲೂ ಹುಲಿವೇಷಗಳ ರೂಪಕಗಳು ಮಿಂಚುತ್ತವೆ. ವೇಷಧಾರಿಗಳಿಗೆ ನೋಟಿನ ಮಾಲೆ ಹಾಕಿ, ಪ್ರೇಕ್ಷಕರು ಪ್ರೋತ್ಸಾಹಿಸುತ್ತಾರೆ. ಕೆಲವು ತಂಡಗಳು ಎದೆಯ ಮೇಲೆ ‘ಶಾರಾದಾ ಹುಲಿ’ ಎಂದು ಎದೆಯ ಮೇಲೆ ಬರೆದುಕೊಳ್ಳುತ್ತವೆ. ಹರಕೆ ಹೊತ್ತವರು ಹೆಚ್ಚಾಗಿ ಈ ರೀತಿ ಬರೆದುಕೊಳ್ಳುತ್ತಾರೆ. ಇಲ್ಲಿನ ಹುಲಿವೇಷ ಎಷ್ಟು ಪ್ರಸಿದ್ಧವೆಂದರೆ, ಉಳ್ಳವರು ತಂಡಗಳನ್ನು ಮನೆ ಬಾಗಿಲಿಗೆ ಕರೆಯಿಸಿ, ಕುಣಿತವನ್ನು ಸಂಭ್ರಮಿಸುತ್ತಾರೆ. ಕಳೆದ ಕೆಲವು ವರ್ಷಗಳ ಹಿಂದೆ ಬೆಂಗಳೂರಿನ ಕೆಪಿಎಲ್‌ ಆಟದ ವೇಳೆಯೂ ಮಂಗಳೂರಿನ ಹುಲಿವೇಷ ಸದ್ದುಮಾಡಿತ್ತು. ನವರಾತ್ರಿಯ ವೇಳೆ ಮಂಗಳೂರಿನಲ್ಲಿ ‘ಪಿಲಿನಲಿಕೆ’ ಹುಲಿವೇಷ ಸ್ಪರ್ಧೆಯೂ ನಡೆಯುತ್ತದೆ. ಈ ಬಾರಿ ಕೋವಿಡ್ ಕಾರಣಕ್ಕೆ ಇವಕ್ಕೆಲ್ಲ ಮಂಕು ಕವಿದಿದೆ.

ಇದನ್ನೂ ಓದಿ: ಬನ್ನಂಜೆ ಸಂಜೀವ ಸುವರ್ಣ ಬರಹ | ಹುಲಿ ವೇಷದಲ್ಲಿ ಬೆಕ್ಕಿನ ಹೆಜ್ಜೆಗಳು


ಮಂಗಳೂರಿನ ಹುಲಿವೇಷದ ವಿಶಿಷ್ಟ ನೃತ್ಯ (ಚಿತ್ರ: ಮಹಮ್ಮದ್ ಆಸಿಫ್)

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು