ಯಕ್ಷಗಾನದ ಯುಗ ಪ್ರವರ್ತಕ, ಗಾನ ಕೋಗಿಲೆ ಎಂದು ಪ್ರಸಿದ್ಧರಾದವರು ಕಂಚಿನ ಕಂಠದ ಕಾಳಿಂಗ ನಾವಡರು. ಯಕ್ಷರಂಗದಲ್ಲಿ ಕೆಲವೇ ವರ್ಷ ಮಿಂಚಿ ಮರೆಯಾದರೂ ಹೊಸ ಕ್ರಾಂತಿಯನ್ನೇ ಮಾಡಿದವರು. ಅವರು ಗತಿಸಿ 29 ವರ್ಷಗಳು ಸಂದರೂ ಇಂದಿಗೂ ಯಕ್ಷ ಪ್ರೇಮಿಗಳ ಮನದಲ್ಲಿ ನೆಲೆಸಿರುವುದು ಅವರ ಹೆಗ್ಗಳಿಕೆ.

ಇಂತಹ ಮಹಾನ್ ಕಲಾವಿದ ನನ್ನ ಚಿಕ್ಕಪ್ಪ ಎಂಬ ಹೆಮ್ಮೆ ನನಗೆ. ಜೊತೆಗೆ, ಅವರ ಅನುಪಸ್ಥಿತಿಯೂ ನನ್ನನ್ನು ಕಾಡುತ್ತಾ ಇರುತ್ತದೆ.

ನನ್ನ ತಂದೆ ಆನಂದ ನಾವಡರು ಕಾಳಿಂಗ ನಾವಡರ ಹಿರಿಯ ಅಣ್ಣ. ನನ್ನಮ್ಮ ಯಶೋದಾ ಅವರಿಗೆ ಪ್ರೀತಿಯ ಅತ್ತಿಗೆ. ಚಿಕ್ಕಪ್ಪ ಮನೆಯಲ್ಲಿದ್ದರೆ ಸಾಕು ನಮಗೆ ಅಪರಿಮಿತ ಆನಂದ. ಅವರು ಮಾಡುವ ಮಂಗ ಚೇಷ್ಟೆಗಳು, ಮನೆಯವರನ್ನೆಲ್ಲ ಮಾಡುವ ಅನುಕರಣೆ ನಮ್ಮನ್ನು ನಗೆಗಡಲಲ್ಲಿ ತೇಲಿಸುತ್ತಿತ್ತು. ತಿಳಿಸಾರು– ಅನ್ನ ಅವರಿಗೆ ಇಷ್ಟವಾದ ಭೂರಿ ಭೋಜನ. ನನ್ನ ಅಮ್ಮ ಮಾಡುತ್ತಿದ್ದ ತಿಳಿಸಾರು ಅವರಿಗೆ ತುಂಬಾ ಇಷ್ಟ. ಅಮ್ಮನ ಬಗ್ಗೆ ಅವರಿಗೆ ಅಪಾರವಾದ ಗೌರವ ಹಾಗೂ ಭಕ್ತಿ.

ಬೇಸಿಗೆಯಲ್ಲಿ ಊಟದ ವೇಳೆ ಬಿಸಿ ಬಿಸಿ ಸಾರು, ಅನ್ನ ಸೇವಿಸುವಾಗ ಅವರ ಬೆನ್ನ ಮೇಲೆ ಮೂಡುವ ಬೆವರ ಹನಿಗಳನ್ನು ಒರೆಸುವ ಕೆಲಸ ನನ್ನದು. ಆ ಬೆನ್ನು ಒರೆಸುವಾಗ ಆಗುತ್ತಿದ್ದ ಆನಂದ, ಭಯ, ಭಕ್ತಿ ನಿಜಕ್ಕೂ ಒಂದು ರೀತಿಯ ಪುಳಕ ಉಂಟು ಮಾಡುತ್ತಿದ್ದುದಂತೂ ಸತ್ಯ.

ಕ್ರಿಕೆಟ್ ಅವರಿಗೆ ಪ್ರಿಯವಾದ ಆಟ. ಕ್ರಿಕೆಟ್ ನೋಡಲೆಂದೆ ಟಿ.ವಿ.ಯನ್ನು ಆ ಏರಿಯಾದಲ್ಲೆ ಚಿಕ್ಕಪ್ಪ ಮೊದಲು ಮನೆಗೆ ತಂದವರು ಎಂಬ ಜಂಭ ನಮಗೆ. ಆದರೆ, ರಾತ್ರಿಯೆಲ್ಲಾ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವತಿಕೆ ಮಾಡಿ ದಣಿದಿರುತ್ತಿದ್ದ ಚಿಕ್ಕಪ್ಪ ಪ್ರಾರಂಭದಲ್ಲಷ್ಟೇ ಮ್ಯಾಚ್ ನೋಡುತ್ತಿದ್ದರು. ಮ್ಯಾಚ್ ನೋಡುವಾಗ ಅವರ ಕಾಲನ್ನು ನನ್ನ ತೊಡೆಯ ಮೇಲಿಟ್ಟು ಅವರ ಪಾದದ ಮೇಲಿನ ಗಂಟನ್ನು ಒತ್ತಲು ಹೇಳುತ್ತಿದ್ದರು.

ಯಾಕೆಂದರೆ ಭಾಗವತಿಕೆ ಮಾಡುವಾಗ ಕೂತೂ ಕೂತೂ ಪಾದದ ಮೇಲಿನ ಗಂಟು ಜಡ್ಡು ಹಿಡಿದಿದ್ದರಿಂದ ಅದನ್ನು ತಿಕ್ಕಲು ಹೇಳುತ್ತಿದ್ದರು. ಹಾಗೆಯೇ ನಿದ್ರೆಗೆ ಜಾರುತ್ತಿದ್ದರು. ಮಧ್ಯ ಎಚ್ಚರವಾದಾಗ ಸ್ಕೋರ್ ಕೇಳಿ ಮತ್ತೆ ಮಲಗುತ್ತಿದ್ದರು.

ನಮ್ಮ ಮನೆ ಅಂಗಳದಲ್ಲಿ ಆಚಾರ್ ಮನೆ ಮಕ್ಕಳನ್ನು ಸೇರಿಸಿಕೊಂಡು ಕ್ರಿಕೆಟ್ ಆಡುತ್ತಿದ್ದುದು ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ನಾನು ಹಾಗೂ ನನ್ನ ತಂಗಿ ಮಮತಾ ಚಿಕ್ಕಪ್ಪನ ಟೀಮ್ನ ಕಾಯಂ ಸದಸ್ಯರು. ಬ್ಯಾಟಿಂಗ್ ಹೆಚ್ಚು ಇಷ್ಟಪಡುತ್ತಿದ್ದ ಚಿಕ್ಕಪ್ಪ ಆಸ್ಟ್ರೇಲಿಯಾದ ಪ್ರಸಿದ್ಧ ಸ್ಟೈಲಿಷ್ಟ್ ಬ್ಯಾಟ್ಸ್ಮನ್ ಡೇವಿಡ್ ಬೂನ್ ಅವರನ್ನು ಅನುಕರಣೆ ಮಾಡುತ್ತಾ ಆಡುತ್ತಿದ್ದರು.

ಬೂನ್ ಅವರ ಮೆಚ್ಚಿನ ಆಟಗಾರ. ಬೌಂಡರಿ, ಸಿಕ್ಸರ್ಗಳ ಸುರಿಮಳೆಯನ್ನೇ ಸಿಡಿಸುತ್ತಾ ಮ್ಯಾಚ್ ಗೆಲ್ಲಿಸುತ್ತಿದ್ದುದೇ ಹೆಚ್ಚು. ಈಗ ಊರಿಗೆ ಹೋದಾಗ ಮನೆ ಅಂಗಳ ನೋಡಿದಾಗ ಹಳೆಯ ನೆನಪುಗಳು ಹಾಗೇ ಬಂದು ಕಣ್ಣಾಲಿಗಳನ್ನು
ತೇವಗೊಳಿಸುತ್ತವೆ.

ಹೊರಗೆ ಗಂಭೀರ ವದನರಾಗಿ ಕಂಡುಬಂದರೂ ಅವರದು ಮಗುವಿನಂತಹ ಮನಸು. ಮನೆಗೆ ಅವರನ್ನು ಮಾತನಾಡಿಸಲು ಬಂದವರನ್ನು ಹಾಗೆಯೇ ಕಳುಹಿಸುತ್ತಿರಲಿಲ್ಲ. ಹೊಟ್ಟೆ ತುಂಬಾ ಊಟ ಹಾಕಿಯೇ ಕಳುಹಿಸುವುದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ. ಚಿಕ್ಕಪ್ಪ ಮನೆಯಲ್ಲಿದ್ದರೆಂದರೆ ಅಲ್ಲಿ ಕಲಾವಿದರು, ಅಭಿಮಾನಿಗಳು, ಸ್ನೇಹಿತರು ಬರುವುದು ಸರ್ವೇ ಸಾಮಾನ್ಯ. ನಮಗೂ ಒಂದು ತರಹದ ಹಬ್ಬ. ಮಾತು, ಹರಟೆ, ಹಾಸ್ಯಕ್ಕೆ ಕೊರತೆ ಇರುತ್ತಿರಲಿಲ್ಲ.

ಸಮೀಪದಲ್ಲಿ ಎಲ್ಲಾದರೂ ಯಕ್ಷಗಾನವಾದಾಗ ಅಪರೂಪಕ್ಕೊಮ್ಮೆ ಚಿಕ್ಕಪ್ಪ ನನ್ನನ್ನು ಹಾಗೂ ಅಕ್ಕನನ್ನು ತಮ್ಮ ಯೆಜ್ಡಿ ಬೈಕ್ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ವೇದಿಕೆಯ ಮುಂಭಾಗದಲ್ಲೇ ನಮ್ಮನ್ನು ಕೂರಿಸುತ್ತಿದ್ದರು. ಎಲ್ಲಾದರೂ ನಾವು ಕೂರುಮಂಡೆ ಹಾಕಿದರೆ, ಅವರ ಹಾಡಿನಲ್ಲೇ ನಮ್ಮ ಹೆಸರು ಸೇರಿಸಿ ಎಚ್ಚರಿಸುತ್ತಿದ್ದರು. ನಾವು ಚಿಕ್ಕಪ್ಪನ ಹೆದರಿಕೆಗೆ ನಿದ್ರೆ ಬರುತ್ತಿದ್ದರೂ ಕಷ್ಟಪಟ್ಟು ತಡೆದುಕೊಂಡು ಆಟ ನೋಡುತ್ತಿದ್ದೆವು.

ಮನೆಯವರೆಲ್ಲರೂ ಯಕ್ಷಗಾನ ನೋಡಲು ಹೋಗುವುದಾದರೆ ಮೇಳದ ವ್ಯಾನ್ ನಮ್ಮನ್ನು ಕರೆದು ಕೊಂಡು ಹೋಗಲು ಬರುತ್ತಿತ್ತು. ಮೇಳದ ಡೇರೆಯಲ್ಲಿ ನಮಗೆ ವಿಶೇಷವಾದ ಗೌರವ ಸಿಗುತ್ತಿತ್ತು. ನಮಗೋ ವಿವಿಐಪಿ ಸೀಟಲ್ಲಿ ಕೂರುವ ಅವಕಾಶ ಬೇರೆ. ರಾತ್ರಿ 12ರಿಂದ 12.30ರ ವೇಳೆಗೆ ಚಿಕ್ಕಪ್ಪ ತಮ್ಮ ಭಾಗವತಿಕೆಗೆ ವೇದಿಕೆಗೆ ಬರುತ್ತಿದ್ದರು. ಆ ಸಮಯ ಬರುತ್ತಿದ್ದಂತೆ ಪ್ರೇಕ್ಷಕರಿಂದ ಕಾಳಿಂಗ ನಾವಡರು ಬರಲೀ ಎಂಬ ಅಭಿಮಾನದ ಕೂಗು. ಬರುವುದು ತಡವಾಯ್ತೆಂದರೆ ಮುಗಿದೇ ಹೋಯಿತು. ಯಕ್ಷಗಾನ ಮುಂದುವರಿಯಲು ಅವಕಾಶವನ್ನೇ ಪ್ರೇಕ್ಷಕರು ಕೊಡುತ್ತಿರಲಿಲ್ಲ. ಅವರ ಆಗಮನವಾಯ್ತೆಂದರೆ ಸಾಕು ಸಿಳ್ಳೆ, ಚಪ್ಪಾಳೆ, ಹರ್ಷೋದ್ಘಾರ ನಿಲ್ಲುತ್ತಲೇ ಇರಲಿಲ್ಲ.

ಅನಿವಾರ್ಯ ಕಾರಣದಿಂದ ನಾವು ನಮ್ಮ ಊರು ಗುಂಡ್ಮಿಯ ಮನೆಯನ್ನು ಬಿಟ್ಟು ಸಾಗರದಲ್ಲಿ ನೆಲೆ ನಿಲ್ಲಬೇಕಾದ ಸಂದರ್ಭ ಬಂತು. ನನ್ನ ತಂದೆ ಸಾಗರದ ಖಾಸಗಿ ಸಾರಿಗೆ ಕಂಪನಿಯಾದ ಗಜಾನನ ಟ್ರಾನ್ಸ್ಪೋರ್ಟ್ನಲ್ಲಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಸಾಗರದಲ್ಲಿ ಯಕ್ಷಗಾನ ಪ್ರದರ್ಶನ ಇದ್ದಾಗ ಚಿಕ್ಕಪ್ಪ ನಮ್ಮ ಮನೆಗೆ ಬರುವುದನ್ನು ತಪ್ಪಿಸುತ್ತಲೇ ಇರಲಿಲ್ಲ. ನನ್ನ ತಾಯಿ ಕೂಡ ಅವರು ಬರುತ್ತಾರೆಂದು ತಿಳಿಸಾರು ಮಾಡಿರುತ್ತಿದ್ದರು. ಚಿಕ್ಕಪ್ಪ ಬರುವಾಗ ನನ್ನ ತಂದೆಗೆ ಒಂದು ‘ನೈಂಟಿ ಬಾಟೆಲ್’ ತಪ್ಪದೇ ತರುತ್ತಿದ್ದರು. ನಮ್ಮ ಕುಟುಂಬದ ಬಗ್ಗೆ ಅವರಿಗಿದ್ದ ಪ್ರೀತಿ ಅಪಾರ.

ಚಿಕ್ಕಪ್ಪನ ಬದುಕಿನ ಕಡೆಯ ಯಕ್ಷಗಾನ ಆಗಿದ್ದು ಸಾಗರದಲ್ಲೇ. ರಾತ್ರಿ ಅವರು ಬರುವುರೆಂದು ಕಾದ ನಮಗೆ ಬರದೇ ಇದ್ದುದು ನಿರಾಸೆ ತಂದಿತ್ತು. ಸಾಗರ ಯಕ್ಷಗಾನ ಮುಗಿಸಿ ಬೆಳಗಿನ ಜಾವ ಊರಿಗೆ ಹೋಗುವ ಸಮಯದಲ್ಲಿ ನಮ್ಮ ಮನೆಗೆ ಬಂದು ನಮ್ಮನ್ನು ಮಾತನಾಡಿಸಿ ‘ಮನೆ ಕಟ್ಟಿಸ್ತಿದ್ದೆ. ಅದರ ಓಡಾಟ ಇದೆ. ಅದ್ಕೆ ಅರ್ಜೆಂಟ್ ಹೋಗಬೇಕು...’ ಎಂದು ಒಂದು ಲೋಟ ಕಾಫಿಯನ್ನೂ ಕುಡಿಯದೇ ಹೊರಟು ಬಿಟ್ಟರು.

ಅವರು ಹಾಗೆ ಹೋದರಲ್ಲ ಎಂಬ ಬೇಸರದಲ್ಲೇ ಇದ್ದ ನಮಗೆ ಸಂಜೆಯ ಹೊತ್ತಿಗೆ ಬರಸಿಡಿಲಿನಂತೆ ಬಂದಿದ್ದು ಅವರ ಅಗಲುವಿಕೆಯ ಸುದ್ದಿ. ರಾತ್ರೋ ರಾತ್ರಿ ಜಡಿಮಳೆಯಲ್ಲಿ ನಾವು ಊರಿಗೆ ಹೊರಟೆವು. ನನ್ನ ತಾಯಿಗೆ ಅವರ ಸಾವಿನ ಸುದ್ದಿ ತಿಳಿಸಿರಲಿಲ್ಲ. ಯಾಕೆಂದರೆ ಸಹೋದರನಿಗಿಂತಲೂ ಹೆಚ್ಚು ಅವರ ಬಗ್ಗೆ ಕಾಳಜಿ ಇದ್ದುದರಿಂದ ಎಲ್ಲಿ ಈ ವಿಷಯ ಕೇಳಿ ಗಾಬರಿಯಾಗುವರೋ ಎಂದು, ‘ಅಪಘಾತವಾಗಿದೆ ಆರಾಮಿದ್ದಾರೆ’ ಎಂದಷ್ಟೇ ಹೇಳಿ ಊರಿಗೆ ಹೊರಟೆವು. ಆ ವರುಣನಿಗೂ ಆಘಾತವಾಯಿತೋ ಏನೊ? ಊರಿಗೆ ಹೋದಾಗ ಅವನೂ ಕೂಡ ಮಳೆಯ ಅಶ್ರುಧಾರೆಯನ್ನು ಬಿಡದೇ ಸುರಿಸುತ್ತಿದ್ದ.

ಬೆಳಗಿನ ಜಾವದಲ್ಲೇ ಮನೆಯ ಮುಂದೆ ಜನಸಾಗರ ನೆರೆದಿತ್ತು. ಮಣಿಪಾಲ ಆಸ್ಪತ್ರೆಯಿಂದ ವಾಹನದಲ್ಲಿ ಬರುತ್ತಿದ್ದ ನನ್ನ ಚಿಕ್ಕಪ್ಪನ ಪಾರ್ಥೀವ ಶರೀರ ನೋಡಲು ಮಣಿಪಾಲದಿಂದ ನಮ್ಮ ಗುಂಡ್ಮಿ ಮನೆವರೆಗೂ ಅವರ ಅಭಿಮಾನಿಗಳು ನೆರೆದಿದ್ದರು. ಅವರ ಮೇಲೆ ಯಕ್ಷ ಪ್ರೇಮಿಗಳಿಗಿದ್ದ ಪ್ರೀತಿ, ಗೌರವ ಅವರ ಅಗಲುವಿಕೆಯ ನೋವನ್ನು ಸಹಿಸಲಾಗದೇ ಬಿಕ್ಕಿಬಿಕ್ಕಿ ಅಳುತ್ತಿದ್ದ ಆ ಚಿತ್ರಣವೇ ಸಾಕ್ಷಿ.

ಮನೆಯ ಒಳ ಹೆಬ್ಬಾಗಿಲಿನಲ್ಲಿ ಚಿರನಿದ್ರೆಗೆ ಜಾರಿದ ಚಿಕ್ಕಪ್ಪನ ಆ ಶಾಂತ ಚಿತ್ತ ಎಲ್ಲಾರ ಕಣ್ಣಾಲಿಗಳನ್ನು ತೋಯಿಸಿತ್ತು.

ನನ್ನ ಕಂಕುಳಲ್ಲಿ 3 ವರ್ಷದ ಕಾಳಿಂಗ ಚಿಕ್ಕಪ್ಪನ ಮಗ ಆಗ್ನೇಯ ಏನೊಂದು ತಿಳಿಯದೇ ಅಪ್ಪನನ್ನೆ ದಿಟ್ಟಿಸುತ್ತಾ ‘ಅಪ್ಪ ಯಾಕೆ ಮಲಗಿದ್ದಾರೆ? ಯಾಕಿಷ್ಟು ಜನ?’ ಎನ್ನುವ ಪ್ರಶ್ನೆಗೆ ಏನೂ ಉತ್ತರಿಸಲಾಗದ ನಾನು ಮೂಕನಾಗಿದ್ದೆ. ಅವರ ಅಭಿಮಾನಿ ಒಬ್ಬರು ಹೃದಯಾಘಾತಕ್ಕೂ ಒಳಗಾಗಿದ್ದು ನಿಜಕ್ಕೂ ಎಷ್ಟು ಅಭಿಮಾನವನ್ನು ಆ ಮಹಾನ್ ಕಲಾವಿದನ ಬಗ್ಗೆ ಜನರು ಇಟ್ಟಿದ್ದರೆನ್ನುವುದಕ್ಕೆ ಸಾಕ್ಷಿಯಾಗಿತ್ತು. ಚಿಕ್ಕಪ್ಪ ಕಂಡ ಹೊಸ ಮನೆಯ ಕನಸು ಅನಾಥವಾಗಲು ಬಿಡದ ಅವರ ಅಭಿಮಾನಿಗಳು ಪ್ರೀತಿಯಿಂದ ನೀಡಿದ ಧನ ಸಹಾಯದಿಂದ ‘ಭಾಗವತ’ ಮನೆ ಸಂಪೂರ್ಣಗೊಂಡಿತಾದರೂ ಮನೆಯ ಯಜಮಾನನೇ ಇಲ್ಲದೇ ಅನಾಥವಾಗಿದೆ.

ಇಂದಿಗೂ ಬೆಂಗಳೂರಿನಲ್ಲಿ ನಮ್ಮ ಊರಿನ ಕಡೆಯವರ ಹೋಟೆಲ್, ಅಂಗಡಿಗಳಲ್ಲಿ ಅವರ ಫೋಟೊ ಇದ್ದೇ
ಇರುತ್ತದೆ. ಅವರು ನನ್ನ ಚಿಕ್ಕಪ್ಪ ಎಂದು ನಾವು ಪರಿಚಯಿಸಿಕೊಂಡರಂತೂ ಕಾಫಿ, ಟೀ ನಮಗೆ ಉಚಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.