ಶನಿವಾರ, ಅಕ್ಟೋಬರ್ 31, 2020
18 °C

PV Web Exclusive: ಸರಳ ‘ರೇಖೆ’ಯಂಥ ಬಾಪೂಜಿ...

ರಾಮಕೃಷ್ಣ ಸಿದ್ರಪಾಲ Updated:

ಅಕ್ಷರ ಗಾತ್ರ : | |

Prajavani

ಗಾಂಧೀಜಿ ಮರಳಿ ನೆನಪಾಗುವ ದಿನ ಇಂದು. ಬಾಲ್ಯದಲ್ಲಿಯಂತೂ ದಸರಾ ರಜೆ ಆರಂಭವಾಗುವ ದಿನ. ಶಾಲೆಯಲ್ಲಿ ಸರಸ್ವತಿ ಪೂಜೆ ಮುಗಿಸಿ ಒಂದು ತಿಂಗಳು ರಜಾ ಮಜಾ ಅನುಭವಿಸುವ ಸಮೃದ್ಧ ಕಾಲ. ಅಂದಿನಿಂದ ಒಂದು ತಿಂಗಳು ರಜೆ ಆರಂಭವಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಬಹುಶಃ  ನಮಗೆಲ್ಲ ಬಾಲ್ಯದಲ್ಲಿ ಬಾಪೂಜಿ ಅಷ್ಟೊಂದು ಪ್ರಿಯರಾಗಿದ್ದರು...

ನಮ್ಮ ಶಾಲೆಯ ಮುಖ್ಯಶಿಕ್ಷಕರ ಕೊಠಡಿಯಲ್ಲಿ ಅವರು ಕುಳಿತುಕೊಳ್ಳುತ್ತಿದ್ದಲ್ಲೇ ಮೇಲ್ಗಡೆ ‘ನೆಹರು ಮತ್ತು ಗಾಂಧಿ’ ಭಾವಚಿತ್ರ– ಅದಕ್ಕೊಂದು ಅಡಿಬರಹ  ‘ಆರಾಮ್‌ ಹರಾಮ್‌ ಹೈ’. ಚಾಚಾ ನೆಹರು ಕೊಟ್ಟ ಮಂತ್ರವಾಗಿತ್ತು ಅದು. ‘ನಾವು ಎಂದಿಗೂ ಸೋಮಾರಿಗಳಾಗಬಾರದು’ ಎನ್ನುವ ಅರ್ಥವಿದ್ದ ಈ ಮಾತನ್ನು ನಾವೆಲ್ಲ ಆಗ ಗಂಭೀರವಾಗಿ ತೆಗೆದುಕೊಳ್ಳದಿದ್ದರೂ, ಪರಸ್ಪರ ತಮಾಷೆಯಾಗಿ ಹೇಳಿಕೊಂಡು ನಗುತ್ತಿದ್ದ ಕಾಲವಂತೂ ಖಂಡಿತ ‘ಗಾಂಧಿ ಯುಗವೇ’!

ಶಾಲೆಯಲ್ಲಿದ್ದ ಈ ಫೋಟೊ ಪಕ್ಕದಲ್ಲಿಯೇ ಇನ್ನೊಂದು ಫೋಟೊ ಕೂಡ ನೆನಪಿದೆ. ಮಗುವೊಂದರ ಮೂಗಿಗೆಮೂಗು ತಾಗಿಸುತ್ತ ಬೊಚ್ಚು ಬಾಯಲ್ಲಿ ನಗುವ ಬಾಪು. ಗಾಂಧಿ ಜಯಂತಿ ಬಂದಾಗೆಲ್ಲ ಅನುಗಾಲವೂ ಮೂಡುವ ಸ್ಮರಣಚಿತ್ರ ಇದೇ.

ಬಾಲ್ಯದಲ್ಲಿ ದಸರಾ ರಜೆಯ ಕಾಲದಲ್ಲಿ ಸದಾ ನೆನ‍ಪಾಗುತ್ತಿದ್ದ ಗಾಂಧೀಜಿ ನಂತರದ ದಿನಗಳಲ್ಲಿ ನೆನಪಾಗಿದ್ದು  ದೇಶದ ಪ್ರಸಿದ್ಧ ವ್ಯಂಗ್ಯಚಿತ್ರಕಾರ ‘ರಂಗಾ’ ( 1925-2002) ಅವರ ರೇಖೆಗಳಲ್ಲಿ ನಲಿದಾಡಿದಾಗಲೇ.

ಕೋಲು ಹಿಡಿದು ನಮಗೆ ಬೆನ್ನು ಹಾಕಿ ಸಾಗುತ್ತಿದ್ದ ಗಾಂಧೀಜಿಗೆ ಕಾಲುಗಳಿರಲಿಲ್ಲ! ದೇಹದ ಕೆಳಭಾಗ ಭಾರತ ನಕಾಶೆಯಾಗಿತ್ತು. ಆ ಚಿತ್ರವನ್ನು ದಿನವಿಡೀ ನೋಡಿ, ಹತ್ತಾರು ಅದನ್ನೇ  ರೇಖಿಸಿ ಸಂಭ್ರಮಿಸಿದ್ದೆ. ರಂಗಾ ಅವರು ಆ ಚಿತ್ರ ರೇಖಿಸಿದ್ದು ಕನಿಷ್ಠ ರೇಖೆಗಳಲ್ಲಿ...ಅದು ಅವರ ಮಾಸ್ಟರ್‌ ಪೀಸ್‌! ಗಣರಾಜ್ಯೋತ್ಸವದ 50 ನೇ ವರ್ಷದ ನಿಮಿತ್ತ  ಭಾರತೀಯ ಅಂಚೆ ಇಲಾಖೆ ಹೊರತಂದ ವಿಶೇಷ ಅಂಚೆ ಚೀಟಿಯಲ್ಲಿ ಈ ಚಿತ್ರ ಬಳಸಿಕೊಂಡು ಕಲಾವಿದನಿಗೆ ಗೌರವ ಸಲ್ಲಿಸಿದೆ.

ರಂಗಾ (ಎನ್‌.ಕೆ.ರಂಗಾ) ಅವರ ವಿಶ್ಲೇಷಣೆಯಲ್ಲಿ ಗಾಂಧೀಜಿ ಅಂದರೆ G- GENEROSITY -ಉದಾರತೆ, A- AGITATION - ಚಳವಳಿ, N- NON VIOLENCE -ಅಹಿಂಸೆ, D- DEDICATION-ಸಮರ್ಪಣೆ, H- HONESTY- ಪ್ರಾಮಾಣಿಕತೆ, I- INTEGRITY -ಏಕತೆ. ಇದನ್ನೇ ಆಧರಿಸಿ ಅವರು ಸರಣಿ ಚಿತ್ರಗಳನ್ನೇ ರೇಖಿಸಿದ್ದರು.

ಗಾಂಧೀಜಿ ಅವರ ಸರಳತೆಯನ್ನು ರೇಖೆಗಳಲ್ಲಿ ಹೇಗೆ ಹಿಡಿದಿಡಬಹುದು ಎನ್ನುವುದನ್ನು ರಂಗಾ ಅವರ ಚಿತ್ರಗಳು ನಮಗೆಲ್ಲ ತೋರಿಸಿಕೊಟ್ಟವು. ಗಾಂಧೀಜಿ ಅವರಿಗಿಂತ ಸರಳತೆ ರಂಗಾ ಅವರಿಗಿಂತ ಸರಳವಾಗಿ ರೇಖಿಸುವುದು; ಇವರೆಡೂ ಯಾವ ಕಾಲದಲ್ಲಿಯೂ ಅಸಾಧ್ಯವೇನೋ!


ಹುಬ್ಬಳ್ಳಿ ಅಯೋಧ್ಯಾನಗರದಲ್ಲಿರುವ ಗಾಂಧಿ ಚಿತಾಭಸ್ಮ ಸ್ಮಾರಕ

ಗಾಂಧಿ ಸ್ಮೃತಿ...
ಇನ್ನೊಂದು, ಪ್ರತಿ ಶುಕ್ರವಾರ ಆಕಾಶವಾಣಿ ಕೇಂದ್ರದಿಂದ ಮೂಡಿಬರುತ್ತಿದ್ದ ‘ಗಾಂಧಿ ಸ್ಮೃತಿ’ ನಮ್ಮ ಬಾಲ್ಯದ ನೆನಪುಗಳೊಂದಿಗೆ ಗಾಢವಾಗಿ ಬೆಸೆದಿದೆ. ಗಾಂಧಿ ಅವರ ಬದುಕಿನ ಕಥೆಕೇಳುವ ಮುನ್ನ ಆರಂಭಿಕ ಗೀತೆಯಾಗಿ ಕೇಳಿಬರುತ್ತಿದ್ದದ್ದು ಅದೇ ಭಜನ್...

ವೈಷ್ಣವ ಜನತೋ ತೇನೇ ಕಹಿಯೇ ಜೆ

ಪೀಡ್ ಪರಾಯೀ ಜಾನೇ ರೆ...

ಕಿವಿಯಲ್ಲಿನ್ನೂ ಗುಂಯ್‌ ಗುಡುತ್ತಿದೆ. ನಂತರದಲ್ಲಿ ಗಾಂಧಿ ಬದುಕಿನ ಚಿತ್ರಣ. ‘ಗಾಂಧಿ ಸ್ಮೃತಿ’ ಮುಗಿದ ಬಳಿಕ ಕೊನೆಯಲ್ಲಿ ಲತಾ ಮಂಗೇಶ್ಕರ್ ಅವರಿಂದ ತುಲಸೀದಾಸರ ಭಜನ್. ಅದು ಮುಗಿಯುವಷ್ಟರಲ್ಲಿ ಸ್ಕೂಲ್‌ ಬ್ಯಾಗ್‌ ಬೆನ್ನಿಗೆ ಅಂಟಿಸಿ ಓಡುತ್ತಿದ್ದದ್ದು ಮರೆಯಲುಂಟೆ...

* * *

‘ವೈಷ್ಣವ ಜನತೋ...’ ಭಜನ್‌...ಚಿತಾಭಸ್ಮ ಸ್ಮಾರಕ

ಮತ್ತೆ ಈ ‘ವೈಷ್ಣವ ಜನತೋ...’ ಭಜನ್‌ ಕೇಳಿ ಬಂದಿದ್ದು ಹುಬ್ಬಳ್ಳಿ ಮಹಿಳಾ ವಿದ್ಯಾಪೀಠದ ಅನಾಥಾಶ್ರಮದ ಮಕ್ಕಳು ಇದನ್ನು ಪ್ರಾರ್ಥನಾ ಗೀತೆಯಾಗಿ ಹಾಡಿದಾಗ...

1948ರಲ್ಲಿ ಗಾಂಧೀಜಿ ತೀರಿಕೊಂಡಾಗ ಅವರ ಚಿತಾಭಸ್ಮದ ಕರಂಡಿಕೆ ತಂದು ಹುಬ್ಬಳ್ಳಿಯ ವಿದ್ಯಾನಗರದ ಮಹಿಳಾ ವಿದ್ಯಾಪೀಠದ ಪ್ರಾರ್ಥನಾ ಮಂದಿರದಲ್ಲಿಟ್ಟು ಬಾಪೂಜಿಗೆ ಗೌರವ ಸಲ್ಲಿಸಲಾಗಿದೆ. ಈಗಲೂ ಇಲ್ಲಿನ ಅನಾಥಾಶ್ರಮದ ಮಕ್ಕಳು ಬೆಳಿಗ್ಗೆ ಹಾಗೂ ಸಂಜೆ ಗಾಂಧೀಜಿಗೆ ಪ್ರಿಯವಾದ ಪ್ರಾರ್ಥನೆ ಸಲ್ಲಿಸುವುದನ್ನು ತಪ್ಪಿಸುವುದಿಲ್ಲ.

ಮಹಿಳಾ ವಿದ್ಯಾಪೀಠದ ಸ್ಥಾಪಕರಾದ ಸರ್ದಾರ್ ವೀರನಗೌಡ ಪಾಟೀಲ ಹಾಗೂ ನಾಗಮ್ಮ ಪಾಟೀಲ (ಸ್ವಾತಂತ್ರ್ಯ ಹೋರಾಟಗಾರ್ತಿ,ಬಾಂಬೇ ಕರ್ನಾಟಕದ ಮೊದಲ ಶಾಸಕಿ)ಅವರಿಗೆ ಗಾಂಧೀಜಿ ಅವರ ಮೇಲೆ ಅಪರಿಮಿತ ಗೌರವ. ಮಹಾತ್ಮರ ಮಾರ್ಗದರ್ಶನದಿಂದಲೇ ದಲಿತ ಮಕ್ಕಳಿಗೆ ಪಾಠಶಾಲೆ ಆರಂಭಿಸುವ ಕೆಲಸವನ್ನು 1934ರಲ್ಲಿಯೇ ಆರಂಭಿಸಿದ್ದರು.  

ಗಾಂಧೀಜಿ ಅವರ ತತ್ವ, ಆದರ್ಶಗಳ ಪ್ರಭಾವ, ಅಭಿಮಾನ, ಪ್ರೀತಿ, ಶ್ರದ್ಧೆ ಗಾಂಧೀಜಿ ಬದುಕಿದ್ದಾಗಲೂ ಇತ್ತು, ಅವರು ಹುತಾತ್ಮರಾದಾಗಲೂ ಇತ್ತು. ಹೀಗಾಗಿಯೇ ರಾಷ್ಟ್ರ ಹಾಗೂ ರಾಜ್ಯದ ಹಲವೆಡೆಗಳಲ್ಲಿ ಅವರ ಚಿತಾಭಸ್ಮದ ಕರಂಡಿಕೆಯನ್ನಿಟ್ಟು ಸ್ಮಾರಕ ನಿರ್ಮಾಣ ಮಾಡಲಾಯಿತು.

ಹಳೇ ಹುಬ್ಬಳ್ಳಿ, ಅಯೋಧ್ಯಾನಗರದ ದಲಿತಕೇರಿಯಲ್ಲಿ ಕೂಡ ಗಾಂಧೀಜಿ ಚಿತಾಭಸ್ಮ ಸ್ಮಾರಕವಿದೆ.  1963ರಲ್ಲಿಇದನ್ನು ಉದ್ಘಾಟಿಸಲಾಯಿತು. ಗಾಂಧಿವಾದಿಗಳಾಗಿದ್ದ ಹುಬ್ಬಳ್ಳಿಯ ಚನ್ನಪ‍್ಪ ಭದ್ರಾಪುರ ಹಾಗೂ ಅವರ ಪತ್ನಿ‌ ನೀಲಮ್ಮ ಭದ್ರಾಪುರ ಚಿತಾಭಸ್ಮ ಕರಂಡಿಕೆ ತಂದಿದ್ದರು. 1963ರ ಅಕ್ಟೋಬರ್‌ನಲ್ಲಿ ಆಗಿನ ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ಡಿ. ಸಂಜೀವಯ್ಯ ಉದ್ಘಾಟಿಸಿದರು.

ನಂತರ 1972ರಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನದಂದು ಚಿತಾಭಸ್ಮ ಇಟ್ಟಿದ್ದ ಗದ್ದುಗೆ ಮೇಲೆ ಗಾಂಧೀಜಿ ಪುತ್ಥಳಿಯನ್ನು ಮೂರು ಸಾವಿರ ಮಠದ ರಾಜಯೋಗೀಂದ್ರ ಸ್ವಾಮೀಜಿ ಅನಾವರಣ ಮಾಡಿದ್ದರು. 


ಹುಬ್ಬಳ್ಳಿ ವಿದ್ಯಾಪೀಠದ ಮಹಾತ್ಮಗಾಂಧಿ ಪ್ರಾರ್ಥನಾ ಮಂದಿರದಲ್ಲಿರುವ ಗಾಂಧಿ ಚಿತಾಭಸ್ಮ ಕರಂಡಕ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು