ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರೆಯೆನ್ನುವುದು ಎದೆಯಾಳದ ಕರೆ

Last Updated 27 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಜಗತ್ತಿನ ಬೇರೆ ಬೇರೆ ಧಾರ್ಮಿಕ ಮತ, ಪಂಥ, ನಂಬುಗೆಗಳಲ್ಲಿ ಎಷ್ಟೆಲ್ಲ ವೈವಿಧ್ಯ ಮತ್ತು ಭಿನ್ನತೆಗಳಿದ್ದಾಗ್ಯೂ ಪ್ರಾರ್ಥನೆ ಅನ್ನುವ ಒಂದು ಅಂಶ ಮಾತ್ರ ಎಲ್ಲದರಲ್ಲಿಯೂ ಸಾಮಾನ್ಯವಾಗಿ ಕಂಡುಬರುತ್ತದೆ. ಪ್ರಾರ್ಥನೆಯ ವಿಧಾನಗಳೇನೋ ಹಲವಿವೆಯಾದರೂ ಅವುಗಳೆಲ್ಲದರ ಒಳ ಮರ್ಮ ಒಂದೇ – ಕಾಮನಾಪೂರ್ತಿ ಅನ್ನುವುದು. ಬರಿಯ ಕಾಮನಾಪೂರ್ತಿಯ ಮಟ್ಟಕ್ಕೆ ನಿಂತಿದ್ದರೆ ಯಾವ ಸಮಾಜದಲ್ಲೂ ಪ್ರಾರ್ಥನೆಯೆನ್ನುವುದು ದೊಡ್ಡ ಸಂಗತಿಗಾಗಿ ಬೆಳೆಯುತ್ತಿರಲಿಲ್ಲವೇನೋ. ಅಲ್ಲಿ ಕೋರಿಕೆಗಳ ಜೊತೆಗೆ ನಿವೇದನೆಯಿದೆ. ಈ ನಿವೇದನೆ ಅನ್ನುವುದೇನಿದೆಯಲ್ಲ, ಅದು ಒಳಗನ್ನು ಒಪ್ಪಗೊಳಿಸುವ ತಿಳಿಯಾದ ಗಂಗೆ. ಮತ್ತದು ಪ್ರಾರ್ಥನೆಗೆ ಮಹತ್ತಿನ ಸ್ಥಾನವನ್ನು ದೊರಕಿಸಿಕೊಟ್ಟಿದೆ.

ಸುಸಂಸ್ಕೃತ ಸಮಾಜವು ಸದಾ ವ್ಯಕ್ತಿಗಳ ಮತ್ತು ಒಟ್ಟಂದದ ಬದುಕನ್ನು ಎಲ್ಲ ಕೋನಗಳಲ್ಲೂ ಚಂದಗೊಳಿಸಿಕೊಳ್ಳುವ ನಿರಂತರ ಪ್ರಯತ್ನದಲ್ಲಿರುತ್ತದೆ. ಸೃಷ್ಟಿಯ ಇತರ ಜೀವಿಗಳಿಂದ ಮಾನವನ ಬದುಕು ಭಿನ್ನವೂ ಸಂಕೀರ್ಣವೂ ಆಗಿರುವುದಕ್ಕೆ ಈ ಪ್ರಜ್ಞೆಯೇ ಕಾರಣ. ಇರುವ ಮನೆ, ಉಣ್ಣುವ ಆಹಾರ, ತೊಡುವ ಬಟ್ಟೆ, ನುಡಿವ ಮಾತು, ನಡೆವ ನಡೆ, ಪೂಜಿಸುವ ಶಕ್ತಿ - ಹೀಗೆ ಬದುಕಿನೆಲ್ಲವನ್ನೂ ಅಲಂಕರಿಸಿಕೊಳ್ಳುವ ಮನಸ್ಸು ಮಾನವನದು. ಪ್ರಾರ್ಥನೆಯೂ ಇದಕ್ಕೆ ಹೊರತಲ್ಲ. ಪ್ರಾರ್ಥನೆಯನ್ನು ಬರಿಯ ಬಯಕೆಯ ಪಟ್ಟಿಯಾಗಿರಿಸದೆ ಅದನ್ನು ಚಂದಗೊಳಿಸುವ ಅಂಶಗಳಲ್ಲಿ ನಿವೇದನೆ ಒಂದು, ಇನ್ನೊಂದು ಸ್ತುತಿ.

ಸ್ತುತಿ ಮಾಡಿಸಿಕೊಳ್ಳುವುದು ಯಾರಿಗೆ ಪ್ರಿಯವಲ್ಲ ಹೇಳಿ!? ಮಾನವ ಮಾತ್ರನಾದವನಿಗೆ ಹೊಗಳಿಕೆ ಇಷ್ಟ, ಮೆಚ್ಚುಗೆಯೆಂದರೆ ಮೆಚ್ಚು. ಆದರೆ ಭಕ್ತನೊಬ್ಬ ಹೊಗಳಿಸಿಕೊಳ್ಳುವುದರಲ್ಲ ಅಲ್ಲ, ಬದಲಾಗಿ ತನ್ನ ಇಷ್ಟದೇವತೆಯನ್ನು ಹೊಗಳುವುದರಲ್ಲಿ ಆನಂದ ಪಡೆಯುತ್ತಾನೆ. ತನ್ನ ಹೊಗಳಿಕೆಗಳಿಂದ ತನ್ನಿಷ್ಟದ ದೇವರು ಖುಷಿಗೊಳ್ಳುತ್ತಾನೆ ಮತ್ತು ತನ್ನ ಬೇಡಿಕೆಗಳನ್ನು ಈಡೇರಿಸುತ್ತಾನೆ ಎಂದು ನಂಬುತ್ತಾನೆ. ಇದು ದೇವತೆಗಳ ಹಂತದಲ್ಲಿ ಮಾತ್ರವಲ್ಲ, ನಮ್ಮ ದೈನಂದಿನ ಬದುಕಿನಲ್ಲೂ ಸತ್ಯ. ದೇವರು ಅನ್ನುವ ಸಂಗತಿಯನ್ನು ಹೊಗಳುವುದು, ಅಂದರೆ ಸ್ತುತಿಮಾಡುವುದು ಭಾರತೀಯ ಉಪಾಸನಾ ಮಾರ್ಗಗಳಲ್ಲಿ ಮಾತ್ರವಲ್ಲ, ಭಾರತೇತರ ಪದ್ಧತಿಗಳಲ್ಲೂ ಇದೆ. ಭಾರತದಲ್ಲಿ ಸ್ತುತಿಯ ಹೊರತಾಗಿಯೂ ದೇವತೆಗಳನ್ನು ಪ್ರೀತಗೊಳಿಸುವ ಹಲವಾರು ವಿಧಾನಗಳಿವೆ. ಯಜ್ಞ, ದಾನ, ತಪಸ್ಸು, ತರ್ಪಣ, ಎಲ್ಲವೂ ದೇವತಾ ಪ್ರೀತಿ ಸಂಪಾದನೆಯ ಅನ್ಯಾನ್ಯ ಮಾರ್ಗಗಳು. ಯಾರನ್ನು ಕುರಿತು ಪ್ರಾರ್ಥಿಸುತ್ತೇವೋ ಅವರನ್ನು ಮೊದಲು ಪ್ರೀತಿಗೊಳಿಸಿ, ಆಮೇಲೆ ಬೇಕಿದ್ದನ್ನು ಕೇಳುವುದು ತರ್ಕಶುದ್ಧವಾಗಿದೆಯಷ್ಟೆ. ಪ್ರೀತಿಗೊಳಿಸುವುದು ಜೀವನದ ಬಹುಮುಖ್ಯವಾದ ಸಂಗತಿ.

ಪ್ರಾರ್ಥನೆಯ ಅಂಗವಾಗಿ ಸ್ತುತಿಯು ಭಾರತೀಯ ಸಾಹಿತ್ಯದಲ್ಲಿ ಸೃಜಿಸಿದ ಸೌಂದರ್ಯವು ಅನುಪಮವಾದ್ದು. ಋಗಾದಿ ವೇದಗಳಲ್ಲೂ ಸ್ತುತಿಯ ಮಹಾಪೂರವೇ ಇದೆ. ಸ್ತುತಿಯ ಅಂದಗಾಣಿಕೆಗಾಗಿ ಶಬ್ದ ಮತ್ತು ಅರ್ಥಗಳ ಅಲಂಕಾರಗಳ ದುಡಿಮೆಯಿದೆ. ಆಮೇಲೆ ಭಕ್ತಿ ಸಾಹಿತ್ಯದಲ್ಲಂತೂ ಸ್ತುತಿಯ ರಾಶಿಯನ್ನೇ ಕಾಣುತ್ತೇವೆ. ಒಟ್ಟಿನಲ್ಲಿ ಸ್ತುತಿ ನಮ್ಮ ಪ್ರಾರ್ಥನೆಯನ್ನು ಶ್ರೀಮಂತವಾಗಿಸಿದೆ. ಸ್ತುತಿಸಿ ಕರೆದರೆ ಬಾರದಿರುವ ದೇವನಾರು? ಗಜೇಂದ್ರಮೋಕ್ಷದ ಕಥೆಯಿರಬಹುದು, ದ್ರೌಪದಿಯ ವಸ್ತ್ರಾಪಹರಣದ ಸಂದರ್ಭವಿರಬಹುದು ಅಥವಾ ದೈವೀ ಸಹಾಯ ಒದಗಿಬಂದ ಬೇರಾವುದೇ ಆಖ್ಯಾಯಿಕೆಯಿರಬಹುದು, ಅದರ ಹಿಂದೆ ಕೇಳಿಸಿಕೊಳ್ಳದಿರಲಾಗದ ಸ್ತುತಿಪೂರ್ವಕವಾದ ಗಾಢವಾದ ಮೊರೆಯಿದೆ.

ಅಗ್ನಿಮೀಡೇ ಅನ್ನುವ ಋಗ್ವೇದದ ಮೊದಲ ಮಂತ್ರದಿಂದಾರಂಭಿಸಿ ಜಾನ್ ಹೆನ್ರಿ ನ್ಯೂಮನ್ನನ lead kindly light ಅನ್ನುವ ಸಾಲಿನವರೆಗೆ, ಅಥವಾ ಕನ್ನಡದ ಕೆ. ಎಸ್. ನ. ಅವರ ದೀಪವು ನಿನ್ನದೆ ಅನ್ನುವ ಹಾಡಿನವರೆಗೆ ಪ್ರಾರ್ಥನೆಯ ಸಾಗರದಲ್ಲಿ ಅಸಂಖ್ಯ ಅನರ್ಘ್ಯ ಮುತ್ತುಗಳಿವೆ. ಎದೆಯನ್ನು ನಿರುಮ್ಮಳಗೊಳಿಸುವ ಆ ಸಾಲುಗಳನ್ನು ಆಗಾಗ ನೇವರಿಸಿ ಪ್ರಾರ್ಥನೆಯ ಸುಖ ಅನುಭವಿಸುವ ಭಾಗ್ಯ ನಮ್ಮದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT