ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Pv Web Exclusive| ಕಲಾಸಕ್ತರಿಗಾಗಿ ‘ನಂನಮ್‌ಮಂದಿ’ ಕಲಾತಂಡ

Last Updated 20 ನವೆಂಬರ್ 2020, 6:34 IST
ಅಕ್ಷರ ಗಾತ್ರ
ADVERTISEMENT
""
""
""
""

ಗಾಯಕರು ತಮ್ಮ ಕಂಠಸಿರಿ ಹೆಚ್ಚಿಸಿಕೊಳ್ಳಲು ಪ್ರತಿದಿನ ಸ್ವರಸಾಧನೆ ಮಾಡಲೇಬೇಕು. ಹಾಗೆಯೇ ಚಿತ್ರ ಕಲಾವಿದರಿಗೆ ಗೀಚುತ್ತಲೇ ಇರಬೇಕು;ಬಣ್ಣಗಳೊಂದಿಗೆ ಆಡುತ್ತಲೇ ಇರಬೇಕು. ಹಾಗಿದ್ದಾಗ ಮಾತ್ರ ಕಲೆಯೊಂದಿಗೆ ಅನುಸಂಧಾನ ಸಾಧ್ಯ. ಸಮಾನಮನಸ್ಕರ ತಂಡವಿದ್ದರಂತೂ ಕಲೆಯೊಂದಿಗಿನ ಆಟ ಮತ್ತಷ್ಟು ಕಳೆಗಟ್ಟುತ್ತದೆ. ಕಲಾಸಕ್ತರೊಂದಿಗೆ ಕಲಾಭ್ಯಾಸ, ಕಲಾ ವಿದ್ಯಾರ್ಥಿಗಳೊಂದಿಗೆ ಸ್ಥಳಕ್ಕೆ ತೆರಳಿ, ಅಲ್ಲಿನ ನೆರಳು–ಬೆಳಕಿನಾಟ, ಯಥಾ ದೃಶ್ಯ ರೂಪಿಸುವ ತಂತ್ರಗಾರಿಕೆ ವಿವರಿಸುತ್ತ, ಚರ್ಚಿಸುತ್ತ, ರೇಖಿಸುತ್ತ, ಕ್ಯಾನ್ವಾಸ್‌ ಮೇಲೆ ಬಣ್ಣಗಳೊಂದಿಗೆ ಸಂಭಾಷಿಸುತ್ತ ಕಲಾಕೃತಿ ರಚಿಸುವುದು ಕಲೆಯ ಬೆಳವಣಿಗೆಯ ದೃಷ್ಟಿಯಲ್ಲಿ ಬಹಳ ಮುಖ್ಯ.

ಕಲಾಕೃತಿ ರಚನೆಯಲ್ಲಿ ತೊಡಗಿರುವ ಕಲಾವಿದರು

ಇಂಥದ್ದೊಂದು ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಕಲಾವಿದರಿಂದ ಕಲಾವಿದರಿಗಾಗಿ, ಕಲಾಸಕ್ತರಿಗಾಗಿ, ಕಲಾವಿದ್ಯಾರ್ಥಿಗಳಿಗಾಗಿ ‘ನಂನಮ್‌ಮಂದಿ’ ಎಂಬ ಕಲಾ ತಂಡವೊಂದು ಹುಟ್ಟಿಕೊಂಡಿದೆ. ಕಲೆಯನ್ನು ಪ್ರೋತ್ಸಾಹಿಸುವುದೇ ಇದರ ಹಿಂದಿನ ಉದ್ದೇಶ.

ಪ್ರತಿ ಭಾನುವಾರ ಬೆಳಿಗ್ಗೆ ಹುಬ್ಬಳ್ಳಿ–ಧಾರವಾಡದ ಯಾವುದಾದರೊಂದು ಪ್ರಮುಖ ಐತಿಹಾಸಿಕ ಸ್ಥಳ, ಸ್ಮಾರಕ ಇಲ್ಲವೇ ನಗರದ ಪ್ರಮುಖ ಬೀದಿ ಬದಿಯಲ್ಲಿ ಕಲಾವಿದರೆಲ್ಲ ಒಂದೆಡೆ ಸೇರಿ ಕುಂಚ, ಕ್ಯಾನ್ವಾಸ್ ಕೈಗೆತ್ತಿಕೊಂಡು ಚಿತ್ರ ರಚನೆಯಲ್ಲಿ ತೊಡಗಿದ್ದಾರೆಂದರೆ ಅದು ಹುಬ್ಬಳ್ಳಿಯ ‘ನಂನಮ್‌ಮಂದಿ’ ಕಲಾತಂಡದ ಸದಸ್ಯರೇ ಎನ್ನಬಹುದು.

ಹುಬ್ಬಳ್ಳಿ ಕಲಾವಿದ ಮಂಜುನಾಥ ಕೆ.ಭಂಡಾರೆ ಅವರ ಜಲವರ್ಣ ಕಲಾಕೃತಿ

ಕಳೆದ ಎರಡು ತಿಂಗಳುಗಳಿಂದ ಹುಬ್ಬಳ್ಳಿಯ 9 ಕಲಾವಿದರು, ಚಿತ್ರ ಕಲಾಭ್ಯಾಸಿಗಳು ಸೇರಿಕೊಂಡು ಸ್ಥಳದಲ್ಲಿಯೇ ಚಿತ್ರರಚನೆ ಆರಂಭಿಸಿದ್ದಾರೆ. ಇದಕ್ಕಾಗಿ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ಮಾಡಿಕೊಂಡಿದ್ದಾರೆ. ಈ ಭಾನುವಾರ ಯಾವ ಸ್ಥಳದಲ್ಲಿ ಚಿತ್ರ ಬರೆಯುವುದು ಎನ್ನುವುದನ್ನು ಗ್ರೂಪ್‌ನಲ್ಲಿ ತಿಳಿಸುತ್ತಾರೆ. ಜತೆಗೆ ಫೇಸ್‌ಬುಕ್‌ ನಲ್ಲಿ ಸಹಿತ ಹಂಚಿಕೊಳ್ಳುತ್ತಾರೆ. ಅವರೊಂದಿಗೆ ಕಲಾವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೆ. ಜಿಲ್ಲೆಯ ಪುರಾತನ, ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳನ್ನು ಕುಂಚದಲ್ಲಿ ಸೆರೆಹಿಡಿಯುವ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಪ್ರಾರಂಭದಲ್ಲಿ ಹುಬ್ಬಳ್ಳಿಯ ಮಂಜುನಾಥ್ ಕೆ. ಭಂಡಾರೆ, ಚಿತ್ರಕಲಾ ಶಿಕ್ಷಕ ಸುರೇಶ ಅರ್ಕಸಾಲಿ, ಕಲಾವಿದ ಜಿ.ಬಿ. ಘಾಟಗೆ ಹಾಗೂ ರಾಘವೇಂದ್ರ ಪತ್ತಾರ ತೊಡಗಿಸಿಕೊಂಡಿದ್ದರು. ಇನ್ನೂ ಕೆಲವರು ಸೇರಿಕೊಂಡು ಜಲವರ್ಣದ ನಿಸರ್ಗ ಚಿತ್ರಕಲಾ ಶಿಬಿರ ಮತ್ತು ಕಲಾ ಪ್ರದರ್ಶನ ನಡೆಸುತ್ತಿದ್ದರು. ಆದರೆ ಕೊರೊನಾ ಲಾಕ್‌ಡೌನ್‌ ಬಳಿಕ, ಮಳೆಗಾಲದಿಂದಾಗಿ ಸುತ್ತಾಟ ನಿಂತಿತ್ತು. ಈಗ ಒಂಬತ್ತು ಜನ ಕಲಾವಿದರು ಒಗ್ಗೂಡಿದ್ದಾರೆ. ಅವರೊಂದಿಗೆ ಕಲಾ ವಿದ್ಯಾರ್ಥಿಗಳೂ ಜತೆಗೂಡಿದ್ದಾರೆ.

ಕಲಾವಿದ ಸುರೇಶ್ ಅರ್ಕಸಾಲಿ ಅವರು ರಚಿಸಿದ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಜಲವರ್ಣ ಚಿತ್ರ...

‘ಕಳೆದ 3–4 ವರ್ಷಗಳಿಂದ ನಾವು ನಾಲ್ಕೈದು ಕಲಾವಿದರು ಜಿಲ್ಲೆಯ ವಿವಿಧೆಡೆ ಪ್ರತಿ ಭಾನುವಾರ ಬೆಳಿಗ್ಗೆ ಹೋಗಿ ಸ್ಥಳದಲ್ಲಿಯೇ ಚಿತ್ರರಚನೆ ಮಾಡಿ ಬರುತ್ತಿದ್ದೆವು. ಆದರೆ ಈ ವರ್ಷ ಸಮಾನ ಮನಸ್ಕರು ಸೇರಿಕೊಂಡೆವು. ‘ನಂನಮ್‌ಮಂದಿ’ ಅಂತ ಹೆಸರಿಟ್ಟುಕೊಂಡು ಕಲಾಸಕ್ತ ವಿದ್ಯಾರ್ಥಿಗಳಿಗೆ, ಹವ್ಯಾಸಿಗಳಿಗೂ ಕಲೆಯ ಉಚಿತ ಮಾರ್ಗದರ್ಶನ ಮಾಡಲು ನಿರ್ಧರಿಸಿದೆವು. ನಾವೂ ಕಲಿಯುತ್ತ ಆಸಕ್ತರಿಗೂ ಕಲಿಸುವುದು ಇದರ ಉದ್ದೇಶ’ ಎನ್ನುತ್ತಾರೆ ಹುಬ್ಬಳ್ಳಿ ಕಲಾವಿದ ಜಿ.ಬಿ.ಘಾಟಗೆ.

‘ಅಲ್ಲದೇ ಈಗ ಕಲಾವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಕಲಾ ಶಿಕ್ಷಕರ ನೇಮಕಾತಿ ಕೂಡ ನಡೆಯುತ್ತಿಲ್ಲ. ಹೀಗಾಗಿ ಬಹಳಷ್ಟು ಕಲಾಸಕ್ತರು ಬೇಸರಗೊಂಡಿದ್ದಾರೆ. ಇದನ್ನು ತೊಡೆದುಹಾಕಲು ನಾವು ಸಮಾನ ಮನಸ್ಕರು ಸೇರಿ ಕಲಾತಂಡವನ್ನು ಕಟ್ಟಿಕೊಂಡಿದ್ದೇವೆ’ ಎನ್ನುತ್ತಾರೆ.

ಆನ್‌ಲೈನ್‌ ಕ್ಲಾಸ್‌ ದುಬಾರಿ

‘ಕಲಾಭ್ಯಾಸಕ್ಕಾಗಿ ನಾವೊಂದು ಆನ್‌ಲೈನ್‌ ಕ್ಲಾಸ್‌ ಸೇರಿಕೊಳ್ಳಲು ವಿಚಾರಿಸಿದಾಗ ಕೇವಲ ಮೂರು ಕ್ಲಾಸಿಗೆ ₹3,750 ಎಂದಿದ್ದರು. ಅಷ್ಟೊಂದು ಕೊಟ್ಟು ಸೇರಲು ಬಡ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ. ಹೀಗಾಗಿ ನಾವೇ ಆಸಕ್ತರಿಗೆ ಇಂಥದ್ದೊಂದು ಕಲಾ ತರಬೇತಿ ನೀಡಲು ಮುಂದಾದೆವು. ಎಲ್ಲವನ್ನೂ ಹಣಕ್ಕಾಗಿಯೇ ಮಾಡಲಾಗದು. ನಮ್ಮ ಕೈಲಾದ ಕಲಾಸೇವೆಯನ್ನು ಮಾಡಬೇಕು. ಆಸಕ್ತ ಯುವ ಕಲಾವಿದರಿಗೆ ನಾವು ಕಲೆಯನ್ನು ಉಚಿತವಾಗಿ ಹೇಳಿಕೊಡಲಿದ್ದೇವೆ. ಜೊತೆಗೆ ನಾವೂ ಕೂಡ ಕಲೆಯನ್ನು ಅಭ್ಯಾಸ ಮಾಡುತ್ತೇವೆ’ ಎನ್ನುತ್ತಾರೆ ಹುಬ್ಬಳ್ಳಿ ಕಲಾವಿದ ಮಂಜುನಾಥ ಕೆ. ಭಂಡಾರೆ.

ಕಲಾವಿದ ಜಿ. ಬಿ. ಘಾಟಗೆ ಜಲವರ್ಣದಲ್ಲಿ ಚಿತ್ರಿಸಿದ ಹುಬ್ಬಳ್ಳಿ ಮೂರುಸಾವಿರಮಠದ ಮಹಾದ್ವಾರ...

‘ಆಯಾ ಸ್ಥಳಕ್ಕೆ ಹೋಗಿ ಚಿತ್ರಿಸುವುದು ಕಲಾಭ್ಯಾಸದ ದೃಷ್ಟಿಯಿಂದ ಬಹಳ ಮುಖ್ಯ. ನೆರಳು ಬೆಳಕು, ಯಥಾ ದೃಶ್ಯ ರೂಪಿಸುವುದು (persepective) ಇವೆಲ್ಲ ಕಲಿಕೆಯಲ್ಲಿ ಬಹಳ ಮುಖ್ಯ. ಕೇವಲ ಕಲಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕೂಡ ಈ ಕಲಿಕೆ ಬಹಳ ನೆರವಾಗುತ್ತದೆ. ಹೀಗಾಗಿ ನಮ್ಮ ಬಳಿ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳು ಈ ಕಲಾತಂಡವನ್ನು ಬಂದು ಸೇರಿಕೊಳ್ಳಬಹುದು’ ಎಂದು ಅವರು ತಿಳಿಸಿದರು.

ಆರಂಭದಲ್ಲಿ ಹುಬ್ಬಳ್ಳಿಯ ಮೂರು ಸಾವಿರ ಮಠ, ದುರ್ಗದ ಬೈಲ್‌, ಚನ್ನಮ್ಮ ವೃತ್ತ, ನೀರ ಸಾಗರ, ಧಾರವಾಡದ ಹಲವು ಸ್ಥಳಗಳು, ಹುಬ್ಬಳ್ಳಿಯ ಚಂದ್ರಮೌಳೆಶ್ವರ ಗುಡಿಯನ್ನು ಸ್ಥಳದಲ್ಲಿಯೇ ಚಿತ್ರಿಸಿದ ಕಲಾವಿದರು ಜಿಲ್ಲೆಯ ಇನ್ನಿತರ ಪುರಾತನ ಹಾಗೂ ಪ್ರೇಕ್ಷಣೀಯ ಸ್ಥಳವನ್ನು ಚಿತ್ರಿಸಲು ಮುಂದಾಗಿದ್ದಾರೆ.

ಪ್ರತಿವಾರ ಹತ್ತಾರು ಕಲಾವಿದರು ಬರೆಯುವ ಈ ಚಿತ್ರಗಳನ್ನೆಲ್ಲ ಒಂದೆಡೆ ಸಂಗ್ರಹಿಸಿ ಕಲಾಪ್ರದರ್ಶನ ಮಾಡುವ ಮೂಲಕ ಜಿಲ್ಲೆಯ ಪ್ರಮುಖ ಸ್ಥಳಗಳನ್ನು ಕಲಾಪ್ರಿಯರ ಮುಂದೆ ಪ್ರದರ್ಶಿಸುವ ಉದ್ದೇಶವೂ ಈ ತಂಡಕ್ಕಿದೆ.

‘ನಂನಮ್‌ಮಂದಿ’ ಕಲಾತಂಡ

ಮಂಜುನಾಥ್ ಕೆ. ಭಂಡಾರೆ , ಜಿ.ಬಿ. ಘಾಟಗೆ, ಸುರೇಶ ಅರ್ಕಸಾಲಿ, ರಾಘವೇಂದ್ರ ಪತ್ತಾರ ಹವ್ಯಾಸಿ ಕಲಾವಿದ ವಿಜಯಕುಮಾರ್ ಗಾಯಕವಾಡ ಚಿತ್ರಕಲಾ ಶಿಕ್ಷಕ , ಕಲಘಟಗಿ, ಎಂ. ಎನ್. ಪಾಟೀಲ ಚಿತ್ರಕಲಾ ಶಿಕ್ಷಕ, ಮತ್ತಿಗಟ್ಟಿ , ದೇವೆಂದ್ರ ಬಡಿಗೇರ ಚಿತ್ರಕಲಾ ಶಿಕ್ಷಕ ಹುಬ್ಬಳ್ಳಿ , ರಾಮಪ್ಪಾ ಒಣರೊಟ್ಟಿ ಹವ್ಯಾಸಿ ಕಲಾವಿದ ಕುಂದಗೋಳ.

ಚಿತ್ರಕಲೆ ಕಲಿಕೆಯ ಆಸಕ್ತಿ ಇರುವವರು ಭಾನುವಾರದ ಕಲಾ ಶಿಬಿರದಲ್ಲಿ ಪಾಲ್ಗೊಳ್ಳಬೇಕಿದ್ದರೆ ವಾಟರ್‌ ಕಲರ್ಸ್, ಡ್ರಾಯಿಂಗ್‌ ಪೇಪರ್‌, ಪೆನ್ಸಿಲ್‌, ಬ್ರಶ್‌ ಒಯ್ಯುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT