ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಲ್ಲೂ ಕುಂದದ ಕೈಮಗ್ಗ ಸೀರೆಗಳ ರಂಗು

ರಾಷ್ಟ್ರೀಯ ಕೈಮಗ್ಗ ದಿನಾಚರಣೆ
Last Updated 5 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಈಗಿನ ಹೆಣ್ಣುಮಕ್ಕಳು ಉಡುಪು, ಆ್ಯಕ್ಸೆಸರಿ ಮಾತ್ರವಲ್ಲ, ವೈಯಕ್ತಿಕ ಆಯ್ಕೆಯ ವಿಷಯ ಬಂದಾಗ ಶ್ರೇಷ್ಠವಾದದ್ದನ್ನು ಅರಸುವವರು. ಉಡುಪಿನ ವಿಷಯದಲ್ಲಂತೂ ಯಾವುದೇ ರೀತಿಯ ಹೊಂದಾಣಿಕೆ ಮಾಡಿಕೊಳ್ಳದೇ ಅತ್ಯುತ್ತಮವಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳುವ ಮನಸ್ಸು ಬಹುತೇಕರದ್ದು. ಸೀರೆಯ ವಿಷಯವನ್ನೇ ತೆಗೆದುಕೊಂಡರೆ ಅಂದಚೆಂದ, ರಂಗು, ಸ್ಟೈಲ್‌, ಆಧುನಿಕತೆಯ ಜೊತೆ ಸಂಪ್ರದಾಯದ ಮಿಶ್ರಣವನ್ನು ಬಯಸುವುದು ಸಹಜ. ಕಳೆದ ಕೆಲವು ವರ್ಷಗಳಿಂದ ಬಹುತೇಕ ಹೆಣ್ಣುಮಕ್ಕಳು ಕೈಮಗ್ಗದಲ್ಲಿ ನೇಯ್ದ ಸೀರೆಗಳತ್ತ ಮನಸ್ಸು ವಾಲಿಸಿರುವುದು ಗಮನಾರ್ಹ.

ಈಗಂತೂ ಹಬ್ಬಗಳ ಸಾಲು ಶುರುವಾಗಿದೆ. ಕೋವಿಡ್‌–19ನಿಂದ ಹಬ್ಬದ ಹುಮ್ಮಸ್ಸು ಕೊಂಚ ಕಡಿಮೆಯಾಗಿದ್ದರೂ, ಉಡುಪುಗಳ ಖರೀದಿಗೆ ಮನಸ್ಸು ಹಿಂದೇಟು ಹಾಕಿದರೂ ಆನ್‌ಲೈನ್‌ನಲ್ಲಿ ಬಹಳಷ್ಟು ಹೆಂಗಳೆಯರು ಹುಡುಕಾಡಿದ್ದು ಕೈಮಗ್ಗದ ಸೀರೆಗಳನ್ನು. ಅದರ ಆಕರ್ಷಣೆಯೇ ಹಾಗೆ.

ನೇಕಾರರ, ಕುಶಲಕರ್ಮಿಗಳ ಕೈಗಳಲ್ಲಿ ಅರಳುವ ಈ ಕೈಮಗ್ಗ ಸೀರೆಗಳು ಭಾರತದ ಪರಂಪರೆಯ ಹೆಗ್ಗುರುತು. ಅದ್ಭುತವಾದ ವಿನ್ಯಾಸದ ಒಂದು ಸೀರೆಯನ್ನು ನೇಯಲು ತಿಂಗಳುಗಳು ಹಿಡಿದರೂ ಅಡ್ಡಿಯಿಲ್ಲ. ಏಕೆಂದರೆ ವಿದ್ಯುತ್‌ ಮಗ್ಗದಲ್ಲಿ ಸಿದ್ಧಗೊಂಡ ಸೀರೆಗಿಂತ ಎಷ್ಟೋ ಪಟ್ಟು ಮಿಗಿಲಾದ ತೃಪ್ತಿಯನ್ನು ಅದು ಗ್ರಾಹಕರಿಗೆ ನೀಡಬಲ್ಲದು.

ಪಶ್ಮಿನಾದಿಂದ ಕಾಂಜೀವರಂವರೆಗೆ...
ಭಾರತೀಯ ಸಂಸ್ಕೃತಿಯಲ್ಲಿ ಹೇಗೆ ವೈವಿಧ್ಯ, ಬಹುತ್ವವಿದೆಯೋ ಹಾಗೆಯೇ ಇಲ್ಲಿಯ ಕೈಮಗ್ಗ ಉದ್ಯಮದಲ್ಲೂ ಸಾಕಷ್ಟು ವೈವಿಧ್ಯಗಳಿವೆ.

ಪ್ರತಿಯೊಂದು ರಾಜ್ಯವೂ ತನ್ನದೇ ಆದ ವಿಶಿಷ್ಟ ಸಾಂಪ್ರದಾಯಿಕ ವಿನ್ಯಾಸವನ್ನು ಹೊಂದಿದ್ದು, ಇದು ಹಲವಾರು ತಲೆಮಾರುಗಳಿಂದ ಮುಂದುವರಿಯುತ್ತಿದೆ. ಅದು ಕಾಶ್ಮೀರದ ಪಶ್ಮಿನಾ ಇರಲಿ ಅಥವಾ ತಮಿಳುನಾಡಿನ ಕಾಂಜೀವರಂ, ಒಡಿಶಾದ ಇಕಟ್‌, ಪಶ್ಚಿಮ ಬಂಗಾಳದ ಕಾಟನ್‌, ಮಸ್ಲಿನ್‌ ಜಾಮ್ದಾನಿ, ವಾರಾಣಸಿಯ ಬನಾರಸ್‌, ರಾಜಕೋಟ್‌ನ ಪಟೋಲ ಸೀರೆಗಳಿರಲಿ, ಪ್ರತಿಯೊಂದು ಕೈಮಗ್ಗದ ಸೀರೆಯೂ ತನ್ನದೇ ಆದ ಅಡ್ಡ ಮತ್ತು ಉದ್ದ ಎಳೆ (ಹಾಸು ಮತ್ತು ಹೊಕ್ಕು)ಗಳ ನೇಯ್ಗೆಯನ್ನು ಒಳಗೊಂಡಿರುವುದು ಇದರ ವೈಶಿಷ್ಟ್ಯ. ಅದು ಆಯಾ ಸ್ಥಳದ ಸಂಸ್ಕೃತಿ ಮತ್ತು ನೇಕಾರನ ಕೌಶಲದ ಪ್ರತಿಬಿಂಬವಾಗಿರುತ್ತದೆ.

ಕೈಮಗ್ಗ ಸೀರೆಗಳ ಆಕರ್ಷಕ ನೇಯ್ಗೆಯ ಹೊರತಾಗಿಯೂ ಒಂದೆರಡು ದಶಕಗಳ ಹಿಂದೆ ಗ್ರಾಹಕರು ಅದರ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದರು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಶೇಷವಾಗಿ ಯುವತಿಯರು ಮನ ಸೆಳೆಯುವ ರಂಗು, ಚಿತ್ತಾರ, ವಿನ್ಯಾಸವಿರುವ ಕೈಮಗ್ಗದ ಸೀರೆಗಳತ್ತ ಒಲವು ಬೆಳೆಸಿಕೊಂಡಿದ್ದು, ಈ ಉದ್ಯಮದ ಬೆಳವಣಿಗೆಗೆ ಕೊಡುಗೆ ನೀಡುತ್ತಿದ್ದಾರೆ ಎನ್ನಬಹುದು.

‘ಈ ಸೀರೆಗಳ ವಿನ್ಯಾಸ, ನಯ, ಉಟ್ಟಾಗ ಸಿಗುವ ಆರಾಮದಾಯಕ ಅನುಭವ ಬೇರೆ ಸೀರೆಗಳಲ್ಲಿ ಸಿಗಲಾರದು ಎಂಬುದು ಹಲವು ವರ್ಷಗಳಿಂದ ಇದನ್ನು ಉಡುತ್ತಿರುವವರ ಅನುಭವ. ಹತ್ತಿ, ರೇಷ್ಮೆಯಲ್ಲಿ ಲಭ್ಯವಿರುವ ಈ ಸೀರೆಗಳು ಪ್ರತಿಷ್ಠೆ ಹಾಗೂ ಮನಃಸ್ಥಿತಿಯ ದ್ಯೋತಕ’ ಎಂದೇ ವಿಶ್ಲೇಷಿಸುತ್ತಾರೆ ಖ್ಯಾತ ವಿನ್ಯಾಸಗಾರ್ತಿ ರೀತು ಕುಮಾರ್‌.

ನೋಡಲು ಮಾತ್ರವಲ್ಲ, ಉಡಲೂ ಆರಾಮದಾಯಕ ಈ ಕೈಮಗ್ಗದ ಸೀರೆಗಳು. ಭಾರತದಂತಹ ಸೆಕೆ ಹಾಗೂ ಒಣ ಹವೆ ಇರುವ ಪ್ರದೇಶದಲ್ಲಿ ಹಗುರವಾದ, ಗಾಳಿಯಾಡುವಂತಹ ಹತ್ತಿಯ ಕೈಮಗ್ಗ ಸೀರೆಗಳನ್ನು ಉಟ್ಟರೆ ತ್ವಚೆಗೂ ತೊಂದರೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT