ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಮವಾದ್ಯಗಳ ಚರಮಗೀತೆ!

Last Updated 8 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""
""

ಮಂಡ್ಯದ ಕಸದ ತೊಟ್ಟಿಯಲ್ಲಿ ಹರಿದ ಚರ್ಮದ ಹಲಗೆಗಳು ಈಚೆಗೆ ಅನಾಥವಾಗಿ ಬಿದ್ದಿದ್ದವು. ಏನಿದರ ಮಜಕೂರು ಎಂದು ಹುಡುಕುತ್ತಾ ಹೋದರೆ ಚರ್ಮವಾದ್ಯಗಳ ಯುಗವೇ ಮುಗಿದು ಹೋಗುತ್ತಿರುವ ವಿದ್ಯಮಾನದ ವಿರಾಟ್‌ ರೂಪವನ್ನು ಅದು ದರ್ಶನ ಮಾಡಿಸಿತು. ಫೈಬರ್‌ ವಾದ್ಯಗಳ ಅಬ್ಬರ ಹೇಗಿದೆ ಎಂದರೆ ಯಾವುದೀ ನಾದ, ಎಲ್ಲಿಂದ ಹೊರಟಿತು ಶ್ರುತಿ ಎಂಬ ಗಲಿಬಿಲಿ ಈಗ...

ವಾದ್ಯಗಳ ತಯಾರಿಕೆಗೆ ಚರ್ಮವೇ ಆಧಾರವಾಗಿದ್ದ ಕಾಲವೊಂದಿತ್ತು. ಉಡದ ಚರ್ಮದಿಂದ ಕಂಜೀರ, ಮೇಕೆ ಚರ್ಮದ ತಮಟೆ, ಎಮ್ಮೆ ಚರ್ಮದ ಮೃದಂಗ, ದನದ ಚರ್ಮದ ತಬಲ, ಡೊಳ್ಳು, ಡೋಲಕ್‌, ಡ್ರಮ್ಸ್‌ಗಳಿಂದ ಇಂಪಾದ ಧ್ವನಿ ಮೂಡುತ್ತಿತ್ತು. ಗೋವಿನ ಚರ್ಮದ ನಗಾರಿ ದೇವಾಲಯಗಳಲ್ಲಿ ಮೊಳಗುತ್ತಿತ್ತು. ಕುದುರೆ ಬಾಲದ ಕೂದಲಿನಿಂದ ಪಿಟೀಲಿನ ಕಮಾನು (ಬೋ) ರೂಪಿಸಲಾಗುತ್ತಿತ್ತು. ಆನೆ ದಂತದಿಂದ ವಾದ್ಯಗಳ ಬಿರಡೆ ತಯಾರಿಸಲಾಗುತ್ತಿತ್ತು. ವಾದ್ಯಗಳ ಅಲಂಕಾರಕ್ಕೆ ಆನೆ ದಂತ ಹೇಳಿ ಮಾಡಿಸಿದಂತಿತ್ತು.

ಬೀದಿಯಲ್ಲಿ ‘ಏಕ್‌ ದೋ ತೀನ್‌ ಚಾರ್‌...’ ಹಾಡು ನುಡಿಸುತ್ತಾ ಕೋತಿಯಾಡಿಸುವ ವ್ಯಕ್ತಿ ತನ್ನ ಪಿಟೀಲನ್ನು ಕಪ್ಪೆ ಚರ್ಮದಿಂದ ತಯಾರಿಸಿಕೊಳ್ಳುತ್ತಿದ್ದ. ಬೆಂಕಿಯ ಉರಿಯಲ್ಲಿ ಕಾಯಿಸಿ ‘ಹೊಡೀರಿ ಹಲಗಿ...’ ಎಂದಾಗ ತಮಟೆಯ ಸದ್ದು ಹತ್ತೂರಿಗೆ ಕೇಳುತ್ತಿತ್ತು. ಹಬ್ಬ, ಜಾತ್ರೆ, ಮದುವೆಗಳಲ್ಲಿ ಚರ್ಮದ ಬ್ಯಾಂಡ್‌ಸೆಟ್‌ಗಳು ಕಿವಿಗಡಚಿಕ್ಕುತ್ತಿದ್ದವು.

ದೊಡ್ಡ ದೊಡ್ಡ ಸಂಗೀತ ವಿದ್ವನ್ಮಣಿಗಳು ಕೂಡ ಚರ್ಮವಾದ್ಯಗಳಲ್ಲೇ ನಾದಸುಧೆ ಹರಿಸುತ್ತಿದ್ದರು. ಬಹುತೇಕ ಘನವಾದ್ಯಗಳು (ತಾಳವಾದ್ಯಗಳು) ಚರ್ಮದಿಂದಲೇ ತಯಾರಾಗುತ್ತಿದ್ದವು. ಸ್ವರಗಳ ಶಕ್ತಿ ಹೆಚ್ಚಿಸುವುದಕ್ಕಾಗಿ ತತ್ (ತಂತಿ) ವಾದ್ಯಗಳಲ್ಲೂ ಚರ್ಮದ ತುಣುಕನ್ನು ಬಳಕೆ ಮಾಡಲಾಗುತ್ತಿತ್ತು. ಪ್ರಾಣಿಯ ಕರುಳು ತಂಬೂರಿಯ ತಂತಿಯಾಗುತ್ತಿತ್ತು. ಸಿತಾರ್‌ ತಂತಿಗಳನ್ನು ಜೋಡಿಸುವ ಸೇತುವೆ (ಬ್ರಿಜ್‌) ಸಾರಂಗದ ಕೋಡಿನಿಂದ ರೂಪಿತವಾಗುತ್ತಿತ್ತು. ಸರೋದ್‌, ಸಾರಂಗಿ, ದಿಲ್‌ರುಬಾ, ತಾವೂಸ್‌ ವಾದ್ಯಗಳಲ್ಲೂ ಚರ್ಮದ ಬಳಕೆ ಇತ್ತು.

ಆದರೆ ಈಗೇನಾಗಿದೆ? ಕಳೆದೊಂದು ದಶಕದಿಂದ ಚರ್ಮ ವಾದ್ಯಗಳ ತಯಾರಿಕಾ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಬಿಗಿಯಾದ ನಂತರ, ಅದರ ಪರಿಣಾಮ ವಾದ್ಯ ತಯಾರಿಕೆಯ ಮೇಲೂ ಬೀರಿದೆ. ಚರ್ಮದ ಜಾಗವನ್ನು ಫೈಬರ್‌, ಪ್ಲಾಸ್ಟಿಕ್‌, ನೈಲಾನ್‌ಗಳು ಆವರಿಸಿಕೊಂಡಿವೆ. ಹೊಸ ಕಾಲಘಟ್ಟಕ್ಕೆ ಅನುಗುಣವಾಗಿ ವಾದ್ಯ ತಯಾರಿಕೆಯ ಮಾಧ್ಯಮ ಬದಲಾಗಿದೆ. ಈ ರೂಪಾಂತರವನ್ನು ಸಂಗೀತಗಾರರು, ಸಂಶೋಧಕರು ‘ಇದು ವೆಜ್‌ ವಾದ್ಯಗಳ ಕಾಲ’ ಎಂದೇ ಬಣ್ಣಿಸುತ್ತಾರೆ.

ಚರ್ಮದಿಂದ ತಯಾರಿಸಿದ ತಮಟೆ

‘ಕೆಟ್ಟ ವಾಸನೆಯ ಚರ್ಮವನ್ನು ಹದ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ಉಪ್ಪು ನೀರಿನಿಂದ ಚರ್ಮ ತೊಳೆಯಬೇಕು, ಸುತ್ತಲೂ ಮೊಳೆ ಹೊಡೆದು ಎಳೆದು ಕಟ್ಟಬೇಕು, ನೀರಿನಲ್ಲಿ ನೆನೆ ಹಾಕಿ ಅದಕ್ಕೆ ರಬ್ಬರ್‌ ರೂಪ ನೀಡಬೇಕು. ನಂತರ ಅದನ್ನು ಕತ್ತರಿಸಿ ವಾದ್ಯಕ್ಕೆ ಅಳವಡಿಸಬೇಕು, ಶ್ರುತಿಗೊಳಿಸಬೇಕು. ತಲೆತಲಾಂತರದಿಂದ ಚರ್ಮದ ಕಾಯಕ ನಮ್ಮ ಕುಲಕಸುಬಾಗಿತ್ತು. ಆದರೆ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಜನರು ನಮ್ಮನ್ನು ನಿಕೃಷ್ಟವಾಗಿ ಕಾಣುತ್ತಿದ್ದರು. ಹೀಗಾಗಿ ಆ ಕೆಲಸ ತ್ಯಜಿಸಿದೆವು’ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಹೊನ್ನಾಯಕನಹಳ್ಳಿ ತಮಟೆ ತಯಾರಕ ನಿಂಗರಾಜು.

ಹಳ್ಳಿಹಳ್ಳಿಗಳಲ್ಲಿ ಚರ್ಮ ಹದ ಮಾಡಿ, ಸ್ಥಳೀಯ ವಾದ್ಯ ತಯಾರಿಸುವ ಕುಶಲಕರ್ಮಿಗಳಿದ್ದರು. ಪರಂಪರಾನುಗತವಾಗಿ ಚರ್ಮ ಹದ ಮಾಡುತ್ತಿದ್ದ ಕುಟುಂಬಗಳು ಈಗ ಅನ್ಯ ಉದ್ಯೋಗದತ್ತ ಮುಖ ಮಾಡಿದ್ದು, ಚರ್ಮರಹಿತ ವಾದ್ಯಗಳ ಹುಟ್ಟಿಗೆ ಕಾರಣವಾಗಿದೆ.

ವನ್ಯಜೀವಿ ಸಂರಕ್ಷಣೆ ಕಾಯ್ದೆಯು ಕಾಡುಪ್ರಾಣಿಗಳ ಚರ್ಮದ ಬಳಕೆಯನ್ನು ನಿಷೇಧಿಸಿದೆ. ಸಾಕುಪ್ರಾಣಿಗಳ ಚರ್ಮ ಬಳಕೆಗೆ ಅವಕಾಶವಿದ್ದರೂ ಹದ ಮಾಡುವವರು ಇಲ್ಲವಾಗುತ್ತಿರುವ ಕಾರಣ, ಅನ್ಯ ಮಾಧ್ಯಮದ ವಾದ್ಯಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಚೀನಾ ವಾದ್ಯಗಳು ಕೂಡ ಯುವ ಸಂಗೀತಾಸಕ್ತರ ಕೈಯಲ್ಲಿ ನುಡಿಯುತ್ತಿವೆ. ಇಷ್ಟಾದರೂ ಚರ್ಮವಾದ್ಯಗಳ ಕ್ಷೇತ್ರ ಸಂಪೂರ್ಣವಾಗಿ ಸತ್ತಿಲ್ಲ. ಕೆಲವು ಲೆದರ್‌ ಕಾರ್ಖಾನೆಗಳು ಚರ್ಮ ಸಂಸ್ಕರಣೆ ಮಾಡುತ್ತಿವೆ. ಆದರೆ, ಅದು ವಾದ್ಯದ ಮೂಲ ಧ್ವನಿಗೆ ಸರಿಸಾಟಿಯಾಗುತ್ತಿಲ್ಲ ಎಂಬ ಕೊರಗು ಕಲಾವಿದರಲ್ಲಿದೆ.

ಫೈಬರ್‌ ಶೀಟ್‌ನಿಂದ ಡೊಳ್ಳು ತಯಾರಿಸುತ್ತಿರುವ ಕುಶಲಕರ್ಮಿ

‘ಚರ್ಮವಾದ್ಯಗಳ ಬಾಳಿಕೆಯ ಅವಧಿ ಬಹಳ ಕಡಿಮೆ. ಆಗಾಗ ಚರ್ಮ ಬದಲಾವಣೆ ಮಾಡಿ ಅದನ್ನು ನಿರ್ವಹಣೆ ಮಾಡಬೇಕು. ಆದರೆ ಫೈಬರ್‌, ನೈಲಾನ್‌ ವಾದ್ಯಗಳ ಬಾಳಿಕೆ ಅವಧಿ ಹೆಚ್ಚಾಗಿರುವ ಕಾರಣ, ಇಂದಿನ ತಲೆಮಾರಿನ ಯುವಕರು ಹೊಸ ವಾದ್ಯಗಳನ್ನೇ ಇಷ್ಟಪಡುತ್ತಾರೆ. ಆದರೆ, ಹಳೆ ತಲೆಮಾರಿನ ಕಲಾವಿದರು ಚರ್ಮವಾದ್ಯ ಬಿಟ್ಟು ಬೇರೆ ವಾದ್ಯಗಳನ್ನು ನುಡಿಸುವುದಿಲ್ಲ. ಹೀಗಾಗಿ ಚರ್ಮವಾದ್ಯದ ಬೇಡಿಕೆ ಕಡಿಮೆಯಾಗಿಲ್ಲ’ ಎಂದು ಪುಣೆಯ ತಬಲ ತಯಾರಕ ಭರತ್‌ ಕಾಕಡೆ ಹೇಳುತ್ತಾರೆ.

ಇದು ಒಪ್ಪಿಗೆಯ ವಿಚಾರ
ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದ ಬಹುತೇಕ ಕಲಾವಿದರು ಹೊಸ ಮಾದರಿಯ ವಾದ್ಯಗಳನ್ನು ಒಪ್ಪಲು ಸಿದ್ಧರಿಲ್ಲ. ಅದರಲ್ಲೂ ತಬಲ ತಯಾರಿಕೆಯಲ್ಲಿ ಚರ್ಮಕ್ಕೆ ಪರ್ಯಾಯವಾದ ಇನ್ನೊಂದು ವಸ್ತು ಇರಲು ಸಾಧ್ಯವೇ ಇಲ್ಲ ಎಂದು ವಾದಕರು ವಾದಿಸುತ್ತಾರೆ. ತಬಲ ಮಾರುಕಟ್ಟೆಗೆ ಫೈಬರ್‌, ಪಾಲಿಸ್ಟರ್‌ ಶೀಟ್‌ ಬಂದಿದ್ದರೂ ಇಲ್ಲಿಯವರೆಗೆ ಹಿಂದೂಸ್ತಾನಿ ಕಛೇರಿಗಳಲ್ಲಿ ಯಾರೂ ಅವುಗಳನ್ನು ನುಡಿಸುವ ಪ್ರಯತ್ನ ಮಾಡಿಲ್ಲ. ಆದರೆ, ಕರ್ನಾಟಕ ಶಾಸ್ತ್ರೀಯ ಸಂಗೀತ, ಲಘು ಸಂಗೀತ, ನಾಟಕ, ರೆಕಾರ್ಡಿಂಗ್‌ ಸ್ಟುಡಿಯೊಗಳಲ್ಲಿ ಅನ್ಯ ವಾದ್ಯಗಳ ಬಳಕೆ ಇದೆ.

‘ಚರ್ಮದ ತಬಲದಲ್ಲಿ ಹೊಮ್ಮುವ ಶುದ್ಧ ನಾದ ಫೈಬರ್‌ ವಾದ್ಯಗಳಲ್ಲಿ ಸಿಗುವುದಿಲ್ಲ. ಹೊಸ ಮಾಧ್ಯಮದ ವಾದ್ಯಗಳಿಂದ ಕೃತಕ ಸ್ವರಗಳು ಸೃಷ್ಟಿಯಾಗುತ್ತವೆ. ಇದರಿಂದ ಕಲಾವಿದರಿಗೆ, ರಸಿಕರಿಗೆ ಕಿರಿಕಿರಿಯುಂಟಾಗುತ್ತದೆ. ತಬಲ ಇರುವವರೆಗೂ ಚರ್ಮದ ಬಳಕೆ ಇದ್ದೇ ಇರುತ್ತದೆ’ ಎಂದು ಧಾರವಾಡದ ತಬಲ ವಾದಕ ಪಂ. ಶ್ರೀಧರ ಮಾಂಡ್ರೆ ವಿಶ್ವಾಸದಿಂದ ಹೇಳುತ್ತಾರೆ.

‘ವಿದ್ವಾನ್‌ ಟಿ.ಎಂ.ಕೃಷ್ಣ ಅವರು ಚರ್ಮದ ಕೆಲಸ ಮಾಡುವ ಕುಶಲಕರ್ಮಿಗಳ ಪರಿಸ್ಥಿತಿಯ ಬಗ್ಗೆ ‘ಸೆಬಾಸ್ಟಿಯನ್‌ ಆ್ಯಂಡ್‌ ಸನ್ಸ್‌’ ಎಂಬ ಪುಸ್ತಕ ಬರೆದಿದ್ದಾರೆ. ಚರ್ಮದ ಕಾಯಕದಲ್ಲಾದ ರೂಪಾಂತರವನ್ನು ಅವರು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಈ ರೂಪಾಂತರ ಬೆರಗು ಮೂಡಿಸುತ್ತದೆ’ ಎನ್ನುತ್ತಾರೆ ಖ್ಯಾತ ಸಿತಾರ್‌ ವಾದಕ ಪಂ.ಅರಣ್ಯಕುಮಾರ್.

‘ಚರ್ಮದ ಬ್ಯಾಗ್‌, ಬೆಲ್ಟ್‌, ಚಪ್ಪಲಿ ತಯಾರಕರು ಪ್ರಾಣಿಗಳನ್ನು ಶೋಷಣೆ ಮಾಡಿರಬಹುದು. ಆದರೆ, ವಾದ್ಯ ತಯಾರಕರು ಎಂದಿಗೂ ಪ್ರಾಣಿಗಳನ್ನು ಶೋಷಿಸಿಲ್ಲ. ಸತ್ತ ಪ್ರಾಣಿಗಳ ಚರ್ಮ ತೆಗೆದು ವಾದ್ಯ ತಯಾರಿಸುತ್ತಾರೆ. ಹೀಗಾಗಿ ಸಂಗೀತ ವಾದ್ಯಕ್ಕೆ ಅವಶ್ಯವಿರುವ ಚರ್ಮದ ಬಳಕೆಗೆ ಸರ್ಕಾರಗಳು ಮುಕ್ತ ಅವಕಾಶ ನೀಡಬೇಕು. ಚರ್ಮೋದ್ಯೋಗ ಮಾಡುವವರಿಗೆ ಪ್ರೋತ್ಸಾಹ ನೀಡಬೇಕು’ ಎಂದು ಸಂಶೋಧಕ, ಗಾಯಕ ಪಂ.ವಿಜಯ್‌ಕುಮಾರ್‌ ಪಾಟೀಲ‌ ಆಗ್ರಹಿಸುತ್ತಾರೆ.

ಶ್ರೀ ಮೃದಂಗ

‘ಶ್ರೀ’ ಮೃದಂಗ ಸಂಶೋಧನೆ
ಕರ್ನಾಟಕ ಶಾಸ್ತ್ರೀಯ ಸಂಗೀತದ ಭಾಗವಾಗಿರುವ ಮೃದಂಗ ಹಲವು ಸಂಶೋಧನೆಗಳಿಗೆ ಒಳಗಾಗಿದೆ. ಬೆಂಗಳೂರಿನ ವಿಜ್ಞಾನಿ, ಶಾಸ್ತ್ರೀಯ ಗಾಯಕ ಡಾ.ಕೆ.ವರದರಂಗನ್‌ ಅವರು ಪಾಲಿಸ್ಟರ್‌ ಫಿಲ್ಮ್‌ ಶೀಟ್‌ನಿಂದ ಶ್ರೀ (ಎಸ್‌– ಸಿಂಥೆಟಿಕ್‌, ಆರ್‌– ರಿದಮ್‌, ಐ– ಇಂಡಿಯನ್‌) ಹೆಸರಿನ ಮೃದಂಗ ಹಾಗೂ ತಬಲ ತಯಾರಿಸಿದ್ದಾರೆ. 2015ರಿಂದಲೂ ಕರ್ನಾಟಕ ಶಾಸ್ತ್ರೀಯ ಸಂಗೀತ, ಲಘು ಸಂಗೀತದಲ್ಲಿ ಈ ಮೃದಂಗ, ತಬಲ ಬಳಕೆಯಲ್ಲಿವೆ.

‘ಹಿಂದೂಸ್ತಾನಿ ಸಂಗೀತ ಕಲಾವಿದರು ಕೂಡ ಶ್ರೀ ತಬಲವನ್ನು ಇಷ್ಟಪಟ್ಟಿದ್ದಾರೆ. ಆದರೆ, ಇಲ್ಲಿಯವರೆಗೆ ಕಛೇರಿಗಳಲ್ಲಿ ನುಡಿಸಲು ಯಾರೂ ಮುಂದಾಗಿಲ್ಲ. ಆದರೂ ವಾದ್ಯವು ಪ್ರಸಿದ್ಧಿ ಪಡೆದಿದ್ದು ವಿದೇಶಗಳಿಗೂ ರಫ್ತಾಗುತ್ತಿದೆ. ಪ್ರಾಣಿಗಳನ್ನು ಪ್ರೀತಿಸುವ ಹೊಸ ತಲೆಮಾರಿನ ಕಲಾವಿದರು ಚರ್ಮದ ವಾದ್ಯಗಳನ್ನು ತ್ಯಜಿಸುತ್ತಿದ್ದಾರೆ’ ಎಂದು ವರದರಂಗನ್‌ ಹೇಳುತ್ತಾರೆ.

ಚರ್ಮ, ಮರದಿಂದ ಮಾಡಿದ ಮೃದಂಗ 15 ಕೆ.ಜಿವರೆಗೆ ತೂಗುತ್ತದೆ. ಆದರೆ ಶ್ರೀ ಮೃದಂಗ, ತಬಲ ಕೇವಲ 4 ಕೆ.ಜಿ ಇವೆ. ಒಮ್ಮೆ ಶ್ರುತಿ ಮಾಡಿದರೆ ಮತ್ತೆ ಬದಲಾಗುವುದಿಲ್ಲ. ‘ಕಳೆದ ಮೂರೂವರೆ ವರ್ಷದಿಂದ ನಾನು ನೂರಾರು ಕಛೇರಿಗಳಲ್ಲಿ ಶ್ರೀ ಮೃದಂಗ ನುಡಿಸಿದ್ದೇನೆ. ಮೂಲ ಮೃದಂಗದ ಶೇಕಡ 99ರಷ್ಟು ನಾದ ಸಿಕ್ಕಿದೆ’ ಎಂದು ಮೃದಂಗ ವಿದ್ವಾನ್‌ಬಿ.ಎನ್‌.ರಮೇಶ್‌ ವಿವರಿಸುತ್ತಾರೆ.

ನೋವಿನ ಲಯದ ಸೆಬಾಸ್ಟಿಯನ್‌ ಆ್ಯಂಡ್‌ ಸನ್ಸ್‌
ಮೃದಂಗ ವಾದ್ಯವನ್ನು ತಯಾರು ಮಾಡುವವರ ಕುರಿತು ಖ್ಯಾತ ಗಾಯಕ ಟಿ.ಎಂ. ಕೃಷ್ಣ ಅವರು ಇತ್ತೀಚೆಗಷ್ಟೇ ‘ಸೆಬಾಸ್ಟಿಯನ್‌ ಆ್ಯಂಡ್‌ ಸನ್ಸ್‌’ ಎಂಬ ಕೃತಿಯನ್ನು ರಚಿಸಿದ್ದಾರೆ. ವಾದ್ಯ ತಯಾರಿಕೆಯ ಜತೆ ಹೇಗೆ ಜಾತಿ ತಳಕು ಹಾಕಿಕೊಂಡಿದೆ ಎಂಬುದನ್ನು ಅವರು ಸೊಗಸಾಗಿ ವಿವರಿಸಿದ್ದಾರೆ. ಕರ್ನಾಟಕ ಸಂಗೀತದ ಅವಿಭಾಜ್ಯ ಅಂಗವಾದ ಈ ಪಕ್ಕವಾದ್ಯವನ್ನು ತಯಾರು ಮಾಡುವುದು ದನ ಹಾಗೂ ಮೇಕೆಯ ಚರ್ಮದಿಂದ.

ವಾದ್ಯವನ್ನು ತಯಾರು ಮಾಡುವವರು ದಲಿತ ಸಮುದಾಯದವರು. ಆದರೆ, ಕರ್ನಾಟಕ ಸಂಗೀತದ ಪ್ರತಿಷ್ಠಿತ ಕಛೇರಿಗಳು ಕಲಾವಿದರು ಹಾಗೂ ವಾದಕರನ್ನು ಮಾತ್ರ ಹೀರೊಗಳಂತೆ ನೋಡುತ್ತವೆಯೇ ಹೊರತು, ಈ ವಾದ್ಯಗಳನ್ನು ತಯಾರಿಸಿಕೊಟ್ಟವರು ಸದಾ ನೇಪಥ್ಯದಲ್ಲಿ ಉಳಿಯುತ್ತಾರೆ. ಸಂಗೀತದ ಕುರಿತು, ವಾದ್ಯದ ಕುರಿತು ಪುಂಖಾನುಪುಂಖವಾಗಿ ಮಾತನಾಡುವ ಕಲಾವಲಯದ ಪರಿಧಿಯಲ್ಲಿ ತಯಾರಕರಿಗೆ ಜಾಗವೇ ಇಲ್ಲ. ಅಲ್ಲದೆ, ಅವರ ಬದುಕು ಸಹ ನಿಕೃಷ್ಟ ಸ್ಥಿತಿಯಲ್ಲಿಯೇ ಇದೆ ಎಂದು ಕೃಷ್ಣ ವಿವರಿಸುತ್ತಾ ಹೋಗುತ್ತಾರೆ. ವಾದ್ಯ ತಯಾರಕರಿಗೆ ಆರ್ಥಿಕ ನೆರವು ಒದಗಿಸಬೇಕು ಎಂದೂ ಅವರು ಪ್ರತಿಪಾದಿಸುತ್ತಾರೆ.

ಕಾರ್ಪೊರೇಷನ್‌ ತೊಟ್ಟಿ ಸೇರಿದ ಚರ್ಮದ ತಮಟೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT