ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಸಣ್ಣದರೊಳಗಿನ ಸಂಭ್ರಮ

Last Updated 7 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಹಲವು ಬಂಧಗಳನ್ನು ಹೆಣೆದ ಬೆಳಗೊಂದರಿಂದ ದಿನವೊಂದು ಆರಂಭಗೊಳ್ಳದೇ ಹೋದರೆ ಬದುಕೆಷ್ಟು ಶೂನ್ಯವೆನಿಸುತ್ತದೆ. ಅನಾಮಿಕತೆಯ ಗೂಡಿನಲ್ಲಿರುವ ಚಿರಪರಿತವೆನಿಸುವ ಮುಖಗಳಿಂದಲೇ ಸಣ್ಣ ಸಣ್ಣ ಖುಷಿ ದಕ್ಕುವುದು. ಇವುಗಳಿಂದಲೇ ಬದುಕಿನ ಸೊಬಗು ಹೆಚ್ಚುವುದು.

ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆಯದೆ ಅಲ್ಲಿಗೆ ಓಡ್ತೀನಿ. ಟೀ ಅಂಗಡಿ ಚಾಚಾ ಬಿಸಿಬಿಸಿ ಕಾಫಿ ಜೊತೆಗೆ ಅಷ್ಟೇ ಬಿಸಿಯಾದ ಪತ್ರಿಕೆ ಕೊಡ್ತಾನೆ. ಚುಮು ಚುಮು ಚಳಿಯ ಜೊತೆಯಲ್ಲಿ ಕಾಫಿ ಮತ್ತು ಪತ್ರಿಕೆ ಎರಡನ್ನು ಮುಗ್ಸತೀನಿ. 'ಚಾಚಾ ಬರ್ತೀನಿ ಡ್ಯೂಟಿಗೆ ಲೇಟಾಗುತ್ತೆ..' ಅಂತ ಹೇಳಿ ಜಾಚನ ಕೈಯಲ್ಲಿ ಹಣ ಇಟ್ಟು ಹೊರಡ್ತೀನಿ. ಚಾಚಾ ಒಂದು ನಗು ಕೊಡ್ತಾರೆ. ದಿನವೊಂದು ಅದ್ಭುತವಾಗಿ ತೆರೆದುಕೊಳ್ಳುತ್ತದೆ. ಈ ನಡುವೆ ಚಾಚಾ ಒಂದು ವಾರದಿಂದ ಕಾಣಿಸಲಿಲ್ಲ. ನಾನು ಮತ್ತು ನನ್ನ ಬೆಳಗು ಸಂಪೂರ್ಣವಾಗಿ ಅನಾಥರಾದೆವು.

***

ಬೆಳಿಗ್ಗೆ ಪೂಜೆಯ ಹೊತ್ತಿಗೆ ಹಾಲ್ ನಲ್ಲಿರುವ ಗಣೇಶನ ಮುಂದೆ ಬೊಗಸೆಯಷ್ಟು ಮಲ್ಲಿಗೆ ಮೊಗ್ಗುಗಳಿರ್ತವೆ. ಮನೆ ತುಂಬಾ ಸೊಗಸಾದ ಕಂಪು. ಮಲ್ಲಿಗೆ ಕಂಪಿಗೆ ಎಳೆ ಬಿಸಿಲಿಗೂ ಒಳಗೆ ಬರುವ ಕಾತರ. ಹಳ್ಳಿಯಿಂದ ಹೂ ತಂದು ಕೊಡುತ್ತಿದ್ದ ಆಕೆ ಮಗಳ ಮದುವೆಯೆಂದು ನಾಲ್ಕು ದಿನ ಬರಲಿಲ್ಲ. ಅವಳು ಹೂ ಕೊಡುವಾಗ ಮಾಡುತ್ತಿದ್ದ ಕಾಳಜಿಯು ಹೂವಿನ ಘಮದಷ್ಟೇ ಚಂದವಿತ್ತು. ಅವಳ ಹೂವಿನ ಘಮವಿಲ್ಲದೆ ಇಡೀ ಮನೆ ಮತ್ತು ಎಳೆ ಬಿಸಿಲು ಅನಾಥವಾದವು. ಎಳೆ ಬಿಸಿಲು ಈಗ ಒಳಗೆ ಬರಲು ಯೋಚಿಸುತ್ತಿಲ್ಲ

***

ನಾನು ಇದುವರೆಗೂ ಒಮ್ಮೆಯೂ ಡ್ಯೂಟಿಗೆ ತಡವಾಗಿ ಹೋಗಿಲ್ಲ. ತಡವಾಗಿ ಹೋಗಲು ಪ್ರಯತ್ನ ಪಟ್ಟರೂ ಆಗಿಲ್ಲ. ..ಹಾಗೆ ಹೋಗಲು ಅವನು ಬಿಡಬೇಕಲ್ಲ! ಸರಿಯಾಗಿ 9 ಗಂಟೆಗೆ ಮನೆ ಮುಂದೆ ನಿಂತು ಹಾರ್ನ್ ಒತ್ತುತ್ತಲೇ ಇರ್ತಾನೆ. ಹೊರಗೆ ಬರುವವರೆಗೂ ಬಿಡುವುದಿಲ್ಲ. ಆಟೊನಿಲ್ಲಿಸಿಕೊಂಡು ಆತ ಹೊರಗೆ ಕಾಯುವುದು ನನಗೆ ಸೇರುವುದಿಲ್ಲ. ಅದಕ್ಕೆಂದೇ ಅವನಿಗಿಂತ ಮೊದಲೇ ರೆಡಿಯಾಗ್ತಿನಿ. ಬಂದವನೇ ಒಮ್ಮೆ ನಕ್ಕು ‘ಗುಡ್ ಮಾರ್ನಿಂಗ್' ಹೇಳ್ತಾನೆ. ತುಂಬಾ ಆತ್ಮೀಯವಾಗಿ ಮಾತಾಡ್ತಾನೆ. 9:15ಕ್ಕೆ ಬಸ್ ಸ್ಟ್ಯಾಂಡ್ ಗೆ ತಲುಪಿಸಿ 'ಹುಷಾರ್ ಸಾರ್' ಅಂತಾನೆ. ಈ ನಡುವೆ ಅವನಿಲ್ಲ. ಕೆಲಸ ಬಿಟ್ಟು ಊರಿಗೆ ಹೋಗಿದ್ದಾನಂತೆ. ನಿತ್ಯದ ಬೆಳಗು ಈಗ ಕಸಿವಿಸಿಯೊಂದಿಗೆ ಆರಂಭ. ಡ್ಯೂಟಿಗೆ ಬರಿ ಲೇಟು. ಒಂದು ಆತ್ಮೀಯತೆ ಭಾವದ ಕೊರತೆ, ಅದರ ಅನಾಥತೆ.

ಬರೀ ಬೆಳಗೊಂದೇ ನನ್ನ ದಿನವೊಂದನ್ನು ಚಂದಗಾಣಿಸಲು ಇಷ್ಟು ಬಂಧಗಳನ್ನು ಹೆಣೆದಿದೆ‌. ಅದರಲ್ಲಿ ಯಾರೊ ಒಬ್ರು ಇಲ್ಲ ಅಂದ್ರೂ ಅದೆಂತಹ ಅನಾಥ ಭಾವ. ಆ ಕಾಫಿ, ಮಲ್ಲಿಗೆ, ಆಟೋದವ ಕೊಡುವ ಚಿಕ್ಕ ಪುಟ್ಟ ಭಾವಗಳು... ಅದೆಂಥ ಸೊಗಸು ಮೂಡಿಸುತ್ತವೆ. ನೋಡಿ, ಪ್ರತಿಯೊಬ್ಬರ ದಿನಗಳು ಇಂತಹ ಸಣ್ಣದರಿಂದಲೇ ಕಳೆ ಕಟ್ಟಿರುತ್ತವೆ, ಕೈ ಹಿಡಿದಿರುತ್ತವೆ. ಬಸ್ ಕಂಡಕ್ಟರ್, ಆಫೀಸ್‌ನಲ್ಲಿ ಫೈಲ್ ಎತ್ತಿ ಕೊಡುವ ಸಹಾಯಕ, ಕೇಬಲ್ ಹುಡುಗ, ಮನೆಕೆಲಸದವರು.. ಹೀಗೆ ಇವರಿಂದಲೇ ನಮ್ಮ ಚಂದದ ಬದುಕು.

ನಾವು ಬಹುತೇಕ ಬಾರಿ ಇಂಥವರ ಬಗ್ಗೆ ಉಡಾಫೆ ಮಾಡ್ತೀವಿ. ದುಡ್ಡು ಕೊಟ್ಟೆ ಅವನು ಕಾಫಿ ಕೊಟ್ಟ ಅಂತೀವಿ. ಆದರೆ ಅವರ ಆ ನಿಷ್ಕಲ್ಮಶ ನಗು ದುಡ್ಡಿಗೆ ಸಿಗಲ್ಲ. ಆಟೊದ ಹುಡುಗ ’ಹುಷಾರ್ ಸರ್‘ ಎನ್ನುವುದು ನಾನು ಕೊಡುವ ಕೇವಲ ಮೂವತ್ತು ರೂಪಾಯಿಗೆ ಅಲ್ಲ, ದುಡ್ಡಿಗೆ ಅಂತಹ ಕಾಳಜಿ ದಕ್ಕುವುದಿಲ್ಲ. ಹೂವು ಕೊಡುವ ಆ ತಾಯಿ ಇಲ್ಲದೆ ಬಂಗ್ಲೆಯೊಂದು ಕಳೆ ಇಲ್ಲದೆ ಹಠ ಹಿಡಿದು ಮಲಗಿ ಬಿಡುತ್ತದೆ. ಯಾವ ದುಬಾರಿ ಹವಾನಿಯಂತ್ರಿತ ಉಪಕರಣವೂ ಸಮಾಧಾನಿಸಲು ಆಗುವುದಿಲ್ಲ. ಅದಕ್ಕೆ ಬೇಕಿರುವುದು ಒಂದು ಬೊಗಸೆ ಮಲ್ಲಿಗೆ ಮತ್ತು ಅದರ ಘಮ. ಬದುಕು ಸಣ್ಣ ಸಣ್ಣದರಿಂದಲೇ ಆದ ನಿತ್ಯ ಜಾತ್ರೆ. ದೊಡ್ಡ ಮಾರಿಹಬ್ಬ ಅಲ್ಲ. ಅದು ಬರೀ ಶೋಕಿ. ಆದರೆ ಬದುಕು ಒಂದು ದಿನದಲ್ಲ ನೋಡಿ.

ಮನುಷ್ಯ ಅನಾಥನಾಗುವುದು ಕೇವಲ ತಂದೆ, ತಾಯಿ, ಹೆಂಡತಿ ಮಕ್ಕಳು ಇಲ್ಲ ಅನ್ನುವ ಕಾರಣಕ್ಕಷ್ಟೇ ಅಲ್ಲ! ಊರು ಬಿಟ್ಟು, ಊರಿನ ಮಣ್ಣನ್ನು ಅಲ್ಲೆ ತೊಳೆದುಕೊಂಡು, ತನ್ನವರನು ತೊರೆದು ಬದುಕು ಕಟ್ಟಿಕೊಳ್ಳೊಕೆ ಅಂತ ದೊಡ್ಡ ನಗರಕ್ಕೆ ಬರ್ತೀವಿ.‌ ಅಪ್ಪ ಅಮ್ಮ ಅಣ್ಣ ತಂಗಿ ಯಾರೂ ಇರುವುದಿಲ್ಲ.‌ ಇಲ್ಲಿ ಸಿಗುವ ಪ್ರತಿಯೊ ಬ್ಬರಲ್ಲೂ ಅವರನ್ನು ಹುಡುಕಿಕೊಳ್ಳಬೇಕು.ಪ್ರತಿ ಸಣ್ಣದರಲ್ಲೂ ಬದುಕಿನ ಸೊಬಗನ್ನು ಕಾಣಬೇಕು. ನನ್ನವರು, ನನ್ನೊಂದಿಗೆ ಇರುವವರು ಯಾರೂ ಇಲ್ಲವೆಂದಾಗಲೂ ಕೂಡ. ಬಾಸ್ ಮಾತನಾಡಿಸಿದಾಗ ಆಗುವ ಖುಷಿಗಿಂತ ಆಟೊದವನ ಗುಡ್ ಮಾರ್ನಿಂಗ್ ಆಪ್ತವೆನಿಸುತ್ತದೆ. ಬಾಸ್‌ನಲ್ಲಿ ಏನೋ ಒಂದು ಪ್ಲಾನ್ ಇರುತ್ತದೆ, ಆದರೆ, ಆಟೊದವನಲ್ಲಿ ಬರೀ ಪ್ರೀತಿ ಇರುತ್ತದೆ.

ಹೌದು, ಬದುಕು ಸಣ್ಣದರ ಸಂತೆ. ಅವುಗಳಿಂದಲೇ ಬದುಕನ್ನು ಸಿಂಗರಿಸಿಕೊಳ್ಳಬೇಕು ಆಗ ಬದುಕು ನಿಜಕ್ಕೂ ಸಂಭ್ರಮಿಸುತ್ತದೆ. ಬದುಕು ಸಣ್ಣದೊರಳಗೆ ಅವಿತು ಕೂತ ದೊಡ್ಡ ಸಂಭ್ರಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT