ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀರೊ ಹೋರಿಗಳು ಮತ್ತು ಕನ್ಯಾಮಣಿಗಳ ಕಣ್ಮಣಿಗಳು

Last Updated 1 ಮೇ 2021, 19:30 IST
ಅಕ್ಷರ ಗಾತ್ರ

ಹೋರಿ ಬೆದರಿಸುವ ಸ್ಪರ್ಧೆ ನಡೆಯಲಿದ್ದ ಹಾವೇರಿ ಜಿಲ್ಲೆಯ ಕಮಾಟಗೇರಿಯನ್ನು ನಾನು ತಲುಪಿದಾಗ ಇನ್ನೂ ಬೆಳಕು ಹರಿದಿರಲಿಲ್ಲ. ಬ್ಯಾಕ್‌ಪ್ಯಾಕ್‌ನಲ್ಲಿದ್ದ ಕ್ಯಾಮೆರಾಕ್ಕೋ ಬೇಗ ಹೊರಗೆ ಬರುವ ತವಕ. ರಾಜ್ಯದ ನಾನಾ ಭಾಗಗಳಿಂದ, ಅಷ್ಟೇ ಏಕೆ ಹೊರರಾಜ್ಯಗಳಿಂದಲೂ ಹೋರಿಗಳನ್ನು ಹೊತ್ತು ತಂದ ಮಿನಿ ಲಾರಿಗಳು ರಸ್ತೆಯುದ್ದಕ್ಕೂ ನಿಂತಿದ್ದವು. ಮುಂದೆ ನಿಂತ ಲಾರಿಗಳಿಂದ ಹೋರಿಗಳನ್ನು ಕೆಳಗಿಳಿಸುವ ಗಡಿಬಿಡಿ. ಹಾಗೆಯೇ ಹೆಸರು ಬರೆಯಿಸಿ, ಟೋಕನ್‌ ಪಡೆಯುವ ಧಾವಂತ.

ಸ್ಪರ್ಧೆ ನಡೆಯಲಿದ್ದ ಟ್ರ್ಯಾಕ್‌ ಹೇಗಿದೆ, ಎಲ್ಲಿಂದ ಆ್ಯಕ್ಷನ್‌ ಚಿತ್ರಗಳು ಸಿಗಲಿವೆ ಎಂದು ನೋಡಿಬರಲು ಸ್ಪರ್ಧಾ ಬಯಲಿನತ್ತ ಹೋದೆ. ಹೋರಿಯನ್ನು ಓಡಲು ಬಿಡುವ ಟ್ರ್ಯಾಕ್‌ನ ದ್ವಾರ ನೋಡಿಕೊಂಡು ಹಾಗೆಯೇ ಸುತ್ತಲೂ ಕಣ್ಣಾಡಿಸಿದೆ. ಓಟದ ಮಾರ್ಗದ ಉದ್ದಕ್ಕೂ ಕಟ್ಟಿಗೆ ಹಾಗೂ ಬಿದಿರುಗಳಿಂದ ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಆ ಮಾರ್ಗದ ಎರಡೂ ಬದಿಯಿದ್ದ ಇಳಿಜಾರು ದಿನ್ನೆಗಳು ನಿಸರ್ಗನಿರ್ಮಿತ ಪ್ರೇಕ್ಷಕರ ಗ್ಯಾಲರಿಗಳಾಗಿದ್ದವು. ಹೋರಿಯ ಓಟದ ವೇಗವನ್ನು ದಾಖಲಿಸುವ ತೀರ್ಪುಗಾರರಿಗೆ ಅಟ್ಟಣಿಗೆಯನ್ನೂ ನಿರ್ಮಾಣ ಮಾಡಲಾಗಿತ್ತು.

ಸ್ಪರ್ಧೆಯ ಬಯಲಿನಲ್ಲಿ ಹೀಗೆ ಒಂದೆರಡು ಸುತ್ತು ಹಾಕಿ ಬರುವಷ್ಟರಲ್ಲಿ ದಿನ್ನೆಗಳ ನಡುವಿನ ಆ ಟ್ರ್ಯಾಕ್‌ ಮೇಲೆ ಹೊಂಬಣ್ಣದ ಹೊನಲೇ ಹರಿಯುತ್ತಿದೆಯೇನೋ ಎನ್ನುವಂತೆ ಎಳೆಬಿಸಿಲು ಬಿದ್ದಿತ್ತು. ‘ಸ್ಪರ್ಧೆ ಇನ್ನೇನು ಶುರುವಾಗಲಿದೆ’ ಎಂಬ ಘೋಷಣೆ ಧ್ವನಿವರ್ಧಕದಿಂದ ಹೊರಬೀಳುತ್ತಿದ್ದಂತೆ ಕೈಯಲ್ಲಿದ್ದ ಕ್ಯಾಮೆರಾಕ್ಕೆ ಭಾರೀ ಪುಳಕ.

ಮುಗ್ಗರಿಸಿ ಬಿದ್ದರೂ ಏಳಬೇಕು, ಎದ್ದು ಮುನ್ನುಗ್ಗಬೇಕು
ಮುಗ್ಗರಿಸಿ ಬಿದ್ದರೂ ಏಳಬೇಕು, ಎದ್ದು ಮುನ್ನುಗ್ಗಬೇಕು

ಪ್ರೇಕ್ಷಕರ ಗ್ಯಾಲರಿಗಳು ಇನ್ನೂ ಅಷ್ಟಾಗಿ ತುಂಬಿರಲಿಲ್ಲ. ಅಷ್ಟರಲ್ಲಿ ‘ದೇವರ ಗೂಳಿ’ಯನ್ನು ಟ್ರ್ಯಾಕ್‌ ಮೇಲೆ ಓಡಲುಬಿಟ್ಟರು. ‘ದೇವರ ಗೂಳಿ’ಯ ಹೆಜ್ಜೆ ಗುರುತುಗಳು ಮೂಡಿದ ಮೇಲೆಯೇ ಸ್ಪರ್ಧೆ ಆರಂಭಿಸಬೇಕು ಎನ್ನುವುದು ಇಲ್ಲಿನ ನಿಯಮ. ಆ ಗೂಳಿ ಸ್ಪರ್ಧೆಗೆ ಬಂದದ್ದಲ್ಲ ನೋಡಿ, ತುಸು ನಿಧಾನವಾಗಿಯೇ ಓಡಿತು. ಭಕ್ತಿಯಿಂದ ಕೈಮುಗಿದ ಜನಸ್ತೋಮ, ಮುಂದಿನ ರೋಚಕ ಕ್ಷಣಗಳಿಗೆ ಕಣ್ಣರಳಿಸಿ ಅಣಿಯಾಗಿ ನಿಂತಿತು. ಆಮೇಲೆ ಶುರುವಾಗಿದ್ದು ಮಾತ್ರ ಸೂರ್ಯಾಸ್ತದವರೆಗಿನ ಕೊನೆಯಿಲ್ಲದ ಓಟ.

ಕ್ರಮಸಂಖ್ಯೆಗೆ ಅನುಗುಣವಾಗಿ ಒಂದೊಂದು ಹೋರಿ ಓಡುತ್ತಾ ಬರುವಾಗಲೂ ಅದೆಂತಹ ರೋಮಾಂಚನ. ಹೊತ್ತು ಏರುತ್ತಿದ್ದಂತೆ ನೆತ್ತಿ ಸುಡುವ ಬಿಸಿಲು. ಅಷ್ಟರಲ್ಲಿ ಸ್ಪರ್ಧೆ ಇನ್ನೂ ‘ಕಾವು’ ಪಡೆದುಕೊಂಡಿತ್ತು. ಟ್ರ್ಯಾಕ್‌ ಸುತ್ತಲಿನ ಗ್ಯಾಲರಿಗಳು ಖಚಾಖಚ್‌ ಭರ್ತಿಯಾಗಿದ್ದವು. ಹತ್ತಿರದ ಮರಗಳನ್ನೂ ಜನ ಏರಿ ಕುಳಿತಿದ್ದರು. ರಿಬ್ಬನ್‌, ಬಲೂನ್‌, ಪ್ಲಾಸ್ಟಿಕ್‌ ಹೂವು, ಒಣಕೊಬ್ಬರಿ ಸರದಿಂದ ಮದುಮಗನಂತೆ ಸಿಂಗಾರಗೊಂಡ ಹೋರಿಗಳು ಓಟಕ್ಕೆ ನಿಂತಾಗ ಟ್ರ್ಯಾಕ್‌ ಸುತ್ತ ನೆರೆದ ಯುವಕರಲ್ಲಿ ವೀರರಸ ಉಕ್ಕಿ ಹರಿಯುತ್ತಿತ್ತು. ಹೋರಿಗಳ ಕಣ್ಣಿಗೆ ಕುಕ್ಕುವ ಆ ಪೌರುಷ, ಆ ನೆಗೆತ, ಆ ಮಿಂಚಿನ ಓಟ... ಆಹಾ, ಅದನ್ನು ನೋಡಿಯೇ ಅನುಭವಿಸಬೇಕು ಬಿಡಿ.

ಬಾಹುಬಲಿ ಬಂದ ದಾರಿಬಿಡಿ...
ಬಾಹುಬಲಿ ಬಂದ ದಾರಿಬಿಡಿ...

ಅಖಾಡಕ್ಕೆ ಕರೆತಂದು ನಿಲ್ಲಿಸಿ, ಅದರ ಮಾಲೀಕ ಮೂಗುದಾರದ ಹಗ್ಗವನ್ನು ಬಿಚ್ಚಿ ಬಿಡುವುದೇ ತಡ ಬಿಲ್ಲಿನಿಂದ ಚಿಮ್ಮಿದ ಬಾಣದಂತೆ ಹೋರಿ ಚೆಂಗನೆ ನೆಗೆಯುತ್ತಿತ್ತು. ಅದರ ನೆಗೆತದ ಆ ಕ್ಷಣದಲ್ಲಿ ಇಡೀ ದೇಹ ಗಾಳಿಯಲ್ಲಿ ತೇಲುತ್ತಿತ್ತು. ಆಗ ನೆರೆದವರ ಕೂಗಾಟ, ಚೀರಾಟ, ಸಿಳ್ಳೆ, ಕೇಕೆಗಳ ಅಬ್ಬರ. ರೋಷಗೊಂಡ ಹೋರಿ ಬಲು ರಭಸದಿಂದ ಜಿಗಿಯುತ್ತ, ನೆಗೆಯುತ್ತ, ನೆರೆದವರ ಮೇಲೆರಗುತ್ತ ಸಾಗುತ್ತಿತ್ತು. ಅಂತಹ ರೋಷಾವೇಶದ ಹೋರಿಯನ್ನು ತಡೆದು ನಿಲ್ಲಿಸಿದವರು ವಿಜೇತರಾಗಿ ಮೆರೆಯುತ್ತಿದ್ದರು. ಅದರಂತೆಯೇ ನೆರೆದವರ ಹಾಗೂ ನಿರ್ಣಾಯಕರ ಮನಮೆಚ್ಚಿದ ಹಾಗೂ ಯಾರ ಕೈಗಳಿಗೂ ಸಿಗದೇ ಗುರಿ ಮುಟ್ಟಿದ ಹೋರಿಗಳೂ ವಿಜೇತವಾಗಿ ಬಹುಮಾನವನ್ನು ಪಡೆಯುತ್ತಿದ್ದವು. ವಿಜೇತ ಹೋರಿಗಳ ಮಾಲೀಕರಿಗೆ ಚಿನ್ನ, ಬೆಳ್ಳಿ ಇನಾಮು ಸಿಕ್ಕರೆ, ಹೋರಿಯನ್ನು ತಡೆದ ಯುವಕರಿಗೆ ಬೈಕ್‌ಗಳ ಬಹುಮಾನ!

‘ಈ ಹೋರಿಗಳಲ್ಲಿ ಇಷ್ಟೊಂದು ಸಾಮರ್ಥ್ಯ ಮೈದಳೆಯುವುದು ಹೇಗೆ’ ಎಂಬ ಪ್ರಶ್ನೆ ಕಾಡುತ್ತಿತ್ತು. ಹೋರಿ ಕರೆತಂದಿದ್ದ ರೈತರೊಬ್ಬರನ್ನು ತಡೆದು ನಿಲ್ಲಿಸಿ, ಕೇಳಿಯೇಬಿಟ್ಟೆ. ‘ಹಿಂಡಿ, ಹತ್ತಿಕಾಳು, ಹಸಿಹುಲ್ಲನ್ನು ಬರೋಬ್ಬರಿ ಮೇಯಿಸಿ ತಯಾರ್‌ ಮಾಡ್ತೀವ್ರಿ ಸಾಹೇಬ್ರ. ಅವುಗಳಿಗೆ ಈಜೂ ಹೊಡಿಸ್ತೀವಿ, ಮಸಾಜ್‌ ಬ್ಯಾರೆ ಮಾಡಿಸ್ತೀವಿ. ಓಟದ ತರಬೇತಿಯನ್ನೂ ಕೊಡಿಸ್ತೀವ್ರಿ ಮತ್ತ’ ಎಂದು ಹೇಳಿದರು. ಅಬ್ಬಬ್ಬಾ! ಠಾಕುಠೀಕಿನಿಂದ ಬರುತ್ತಿದ್ದ ಆ ಹೋರಿಗಳ ಗತ್ತಿನ ವರ್ಣನೆ ಪದಗಳಿಗೆ ನಿಲುಕಲಾರದಂಥದ್ದು ಎಂದಷ್ಟೇ ಹೇಳಬಲ್ಲೆ.

ಸೆಲೆಬ್ರಿಟಿಗಳ ಸುತ್ತ ಅಭಿಮಾನಿಗಳು ನೆರೆಯುವಂತೆ ಒಂದೊಂದು ಹೋರಿಯ ಸುತ್ತಲೂ ನೂರಾರು ಜನ ಅಭಿಮಾನದಿಂದ ನೆರೆದಿದ್ದರು. ಅವುಗಳಿಗೆ ತರಹೇವಾರಿ ಹೆಸರುಗಳು ಬೇರೆ. ಹಾವೇರಿ ಡಾನ್‌ (ಈ ಹೋರಿ ತಮಿಳುನಾಡಿನಿಂದಲೂ ಪ್ರಶಸ್ತಿ ಬಾಚಿಕೊಂಡು ಬಂದಿದೆ), ಬಾಹುಬಲಿ, ಹೆಬ್ಬುಲಿ, ಬಸವಾ, ಶಿವಾ, ಬುಲೆಟ್‌, ಪೀಪಿ ಮೊದಲಾದ ಹೋರಿಗಳು ಅಲ್ಲಿ ಹವಾ ಎಬ್ಬಿಸಿದ್ದವು. ಅವುಗಳು ಓಡುವಾಗ ಕೆಂದೂಳು ಸಹ ಏಳುತ್ತಿತ್ತು ಎನ್ನಿ. ಹಾವೇರಿ ಡಾನ್‌ ಓಡುವಾಗ ನೆರೆದಿದ್ದ ಹತ್ತಾರು ಸಾವಿರ ಜನರಲ್ಲಿ ಅದೆಂತಹ ಸಂಭ್ರಮ ಅಂತೀರಿ. ಪೀಪಿ ಓಡುವಾಗ ಸಿಳ್ಳೆ ಸದ್ದೇಸದ್ದು. ಹೋರಿಯನ್ನು ಹಿಡಿಯುವ ಸಾಹಸದಲ್ಲಿ ಅನೇಕ ಅನಾಹುತಗಳೂ ಆಗುವುದುಂಟು. ಕೆಲವೊಮ್ಮೆ ಪ್ರಾಣಾಪಾಯವಾಗಿರುವ ಉದಾಹರಣೆಗಳು ಸಹ ಇವೆ. ಹೀಗಾಗಿ ಆಯೋಜಕರು ಮುಂಜಾಗ್ರತೆಯಾಗಿ ಜೀವ ವಿಮೆ ಮಾಡಿಸುವುದುಂಟು.

ನೀವು ಬೆದರಿಸಿದರೂ ನಾನು ಬಗ್ಗುವುದಿಲ್ಲ. ಗುರಿ ಮುಟ್ಟಲು ದಾರಿ ಹುಡುಕುವೆ... ಜನಸ್ತೋಮದ ನಡುವೆ ರೋಷಾವೇಶದ ಹೋರಿ
ನೀವು ಬೆದರಿಸಿದರೂ ನಾನು ಬಗ್ಗುವುದಿಲ್ಲ. ಗುರಿ ಮುಟ್ಟಲು ದಾರಿ ಹುಡುಕುವೆ... ಜನಸ್ತೋಮದ ನಡುವೆ ರೋಷಾವೇಶದ ಹೋರಿ

ಕರ್ನಾಟಕದ ಈ ಹೋರಿಹಬ್ಬ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಎಂದೇ ಜನಪ್ರಿಯ. ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯ ದೇವಗಿರಿ, ಅಕ್ಕಿಆಲೂರು, ಹಾನಗಲ್‌ ಭಾಗಗಳಲ್ಲಿ ನಡೆಯುವ ಹೋರಿಹಬ್ಬ ತುಂಬಾ ಪ್ರಸಿದ್ಧ. ಹಬ್ಬದ ಆ ವೈಭವವನ್ನು ಕಣ್ತುಂಬಿಕೊಳ್ಳಲು ಮತ್ತು ಅದರಲ್ಲಿ ಭಾಗವಹಿಸಲು ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಉತ್ಸಾಹಿ ಯುವಕರು, ರೈತರು ಬರುವುದು ರೂಢಿ. ಹತ್ತಾರು ಸಾವಿರ ಜನ ಕಿಕ್ಕಿರಿಯುವ ಈ ಹಬ್ಬದಲ್ಲಿ ಸಾರಾಯಿ–ಕಳ್ಳಿನ ಘಮಲು ಬೇರೆ. ಏಪ್ರಿಲ್‌ ಮಧ್ಯದವರೆಗೆ ಜೋರಾಗಿ ನಡೆದ ಹೋರಿಹಬ್ಬಗಳಿಗೆ ಈಗ ಕೊರೊನಾ ಮಂಕು.

ನೆರೆದಿರುವ ಸಾವಿರಾರು ಜನರ ಮಧ್ಯ ಬುಲೆಟ್ ವೇಗದಲ್ಲಿ ನುಗ್ಗುವ, ದಿಕ್ಕು ತೋಚದೆ, ಗಾಬರಿಯಿಂದ ನೆರೆದ ಪ್ರೇಕ್ಷಕರ ಮೇಲೆ ಅಡ್ಡಾದಿಡ್ಡಿಯಾಗಿ ಎಗರುವ ಹೋರಿಗಳ ಆರ್ಭಟ, ಅದನ್ನು ಹಿಡಿಯಲೆಂದು ಮುನ್ನುಗ್ಗುವ ಯುವಕರ ದೊಡ್ಡಾಟ – ಇವುಗಳ ನಡುವೆ ಕೂದಲೆಳೆಯ ಅಂತರದಲ್ಲಿ ಛಾಯಾಗ್ರಹಣ ಮಾಡುವುದು ಸವಾಲಿನ ಕೆಲಸ. ಸ್ವಲ್ಪ ಆಚೀಚೆಯಾದರೂ ಫ್ರೇಮ್‌ನಿಂದ ‘ಆ್ಯಕ್ಷನ್‌’ ಮಿಸ್‌ ಆಗಿಬಿಡುವ ಅಪಾಯ. ಪದೇ ಪದೇ ಲೆನ್ಸ್‌ ಬದಲಿಸಲು ಅವಕಾಶವಿಲ್ಲ. ಸೂಕ್ತ ಸ್ಥಳ ಸಿಗಲು ಸಹ ಅದೃಷ್ಟ ಬೇಕು. ಅರೆಕ್ಷಣದಲ್ಲಿ ನಡೆಯುವ ವಿದ್ಯಮಾನವನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಕ್ಲಿಕ್ಕಿಸಿ, ಸೆರೆ ಹಿಡಿಯಬೇಕು. ಕ್ರೀಡಾಕೂಟಗಳಲ್ಲಾದರೆ ಓಟಗಾರರು ಮೈಮೇಲೆ ನುಗ್ಗಿಬರುವ ಹೆದರಿಕೆ ಇಲ್ಲ. ಇಲ್ಲಿ ಹಾಗಲ್ಲ. ಯಾವಾಗ, ಯಾವ ಹೋರಿ ಎತ್ತ ನೆಗೆಯುವುದೋ ಬಲ್ಲವರಾರು?

ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಗೆದ್ದು ಬಂದ ಜಲ್ಲಿಕಟ್ಟು ಕ್ರೀಡೆಗೂ ನಾನು ಸಾಕ್ಷಿ ಆಗಿರುವೆ. ಅಲ್ಲಿನ ಹೋರಿಗಳಿಗೆ ಮೂಗುದಾರ ಇರುವುದಿಲ್ಲ. ಹಲವು ತಿಂಗಳ ಕಾಲ ಚೆನ್ನಾಗಿ ಮೇಯಿಸಿ, ಕೊಬ್ಬಿಸಿದ ಮಜಬೂತಾದ ಹೋರಿಗಳು ಅವು. ಗೆದ್ದು ಗುರಿಮುಟ್ಟುವ ಹೋರಿಗಳು ಹೀರೊಗಳಾದಂತೆಯೇ ಹೋರಿಗಳನ್ನು ಹಿಡಿದು ಕೇಕೆ ಹಾಕುವ ಯುವಕರೂ ಅಲ್ಲಿನವರ, ಅದರಲ್ಲೂ ಕನ್ಯಾಮಣಿಗಳ, ಅಚ್ಚುಮೆಚ್ಚಿನ ಹೀರೊಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT