ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ವರ್ಷದ ‘ಬೆಳಗು’

Last Updated 6 ಜುಲೈ 2019, 19:30 IST
ಅಕ್ಷರ ಗಾತ್ರ

ಒಂದು ಕವಿತೆಯು ನೂರು ವರ್ಷಗಳ ಕಾಲ ಜನಮಾನಸದಲ್ಲಿ ‘ಹೀಗೆ’ ಜೀವಂತವಾಗಿ ಉಳಿಯುತ್ತದೆ ಎನ್ನುವುದೇ ಬೆರಗಿನ ಸಂಗತಿ. ‘ಇದು ಕವಿತೆಗೆ ಕಾಲವಲ್ಲ’, ‘ಕವಿತೆಯು ಸತ್ತು ಹೋಯಿತು/ ಹೋಗುತ್ತಿದೆ’ ಮುಂತಾದ ಮಾತುಗಳನ್ನು ನಾವು ಮತ್ತೆ ಮತ್ತೆ ಕೇಳುತ್ತಿರುತ್ತೇವೆ. ‘ನಿಜವಾದ ಕವಿತೆ’ಯು ತನ್ನಷ್ಟಕ್ಕೆ ತಾನೇ ಉಳಿದಿದೆ ಮತ್ತು ಉಳಿಯುತ್ತದೆ ಎಂಬುದಕ್ಕೆ ಹಲವು ಕವಿತೆಗಳು ನಿದರ್ಶನವಾಗಿ ನಮ್ಮ ಮುಂದಿವೆ.

ಪ್ರತಿಯೊಂದು ಕಾಲವೂ ಕಳೆದ ಕಾಲದ ಕವಿತೆಗಳನ್ನು ಓದುವ, ಮೆಚ್ಚುವ, ಬೆಲೆಗಟ್ಟುವ ಬಗೆಯಲ್ಲಿ ಸ್ವತಃ ತನ್ನ ಕಾಲದ ಕವಿತೆಯ ಒಳದನಿಗಳನ್ನು ತೋರಿಸಿಕೊಳ್ಳುತ್ತದೆ. ಈ ದೃಷ್ಟಿಯಲ್ಲಿ ಬೇಂದ್ರೆಯವರ ಕವಿತೆಗಳು ನಮ್ಮ ಕಾಲದ ಕಾವ್ಯಪ್ರೇಮಿಗಳ ಮನಸ್ಸಿನಲ್ಲಿ ಮನೆ ಮಾಡಿರುವ ರೀತಿಯ ಅಧ್ಯಯನವು ನಮಗೇ ಹಿಡಿದುಕೊಂಡ ಕನ್ನಡಿಯೂ ಹೌದು. ಬೇಂದ್ರೆಯವರ ‘ಬೆಳಗು’ ಕವಿತೆ ಇಂತಹುದೇ ಒಂದು ಕನ್ನಡಿ.

ನವೋದಯದ ಹಿರಿಯ ಕವಿ ಬೇಂದ್ರೆಯವರು ಮತ್ತು ಅವರ ಸಮಕಾಲೀನ ಕವಿಗಳು ಕಂಡ, ಕಟ್ಟಿದ ‘ಬೆಳಗು’ಗಳು ಕೇವಲ ಐಂದ್ರಿಯಿಕ ಅನುಭವಗಳ ಕಥನವಾಗದೆ, ಆ ಕಾಲದ ಗಾಳಿಯಲ್ಲಿಯೇ ಹುದುಗಿದ್ದ ಸಂಸ್ಕೃತಿ ಮತ್ತು ಭಾಷೆಗಳ ಮರುಹುಟ್ಟಿಗೆ ಒಡ್ಡಿದ್ದ ಸಂಕೇತಗಳೂ ಆಗಿದ್ದವು. ಕನ್ನಡದ ಅಂತರಗಂಗೆಯನ್ನು ಹುಡುಕಿದ ಈ ಕವಿಗಳು ನುಡಿಯನ್ನು ಮುರಿದು ಕಟ್ಟಿದರು; ಕವಿತೆಯ ಹೊಸ ಬೆಳಗಿಗೆ ಕಾರಣವಾದರು. ಈ ಹಿನ್ನೆಲೆಯಿಂದ ‘ಬೆಳಗು’ ಏಕಕಾಲದಲ್ಲಿ ಕವಿಯ ಅಂತರಂಗ, ಬಹಿರಂಗ ಮತ್ತು ಸಮುದಾಯದಲ್ಲಿ ನಡೆಯುವ ಪಯಣಗಳ ಕಥನವಾಗಿದೆ. ಅದು ಆಸ್ತಿಕತೆಯ ಜಡವಾಸ್ತವಕ್ಕೆ ಆಧುನಿಕತೆಯ ಆಯಾಮ ಸೇರಿಸಿ ಭಕ್ತಿಯನ್ನು ಬೆರಗಾಗಿ ಮಾಡಿ, ಕವಿತೆಯಾಗಿ ಬದಲಿಸುತ್ತದೆ.

‘ಬೆಳಗು’ ಕವಿತೆಯ ತಾತ್ವಿಕತೆ, ಚಿಂತನೆ, ದರ್ಶನ ಇತ್ಯಾದಿಗಳ ಬಗೆಗೆ ಈಗಾಗಲೇ ಹಲವಾರು ಅಧ್ಯಯನಗಳು ನಡೆದಿವೆ. ಆದರೆ, ಕವಿತೆಯಲ್ಲಿ ಬಳಸಿರುವ ಭಾಷೆಯಿಂದಲೇ ಹೊರಹೊಮ್ಮುವ ದರ್ಶನದ ಬಗ್ಗೆ ಆಗಿರುವ ಚಿಂತನೆಯು ಕಡಿಮೆ. ಪ್ರತಿಯೊಂದು ಭಾಷೆಗೂ ತನ್ನನ್ನು ತಾನು ತನ್ನ ಎಲ್ಲ ಸಾಧ್ಯತೆಗಳಲ್ಲಿಯೂ ಅಭಿವ್ಯಕ್ತಿಗೊಳಿಸಿಕೊಳ್ಳುವ ತಹತಹವು ಯಾವಾಗಲೂ ಇರುತ್ತದೆ. ಯಾವುದೇ ಕವಿಯು ತಾನು ಬಳಸುವ ಭಾಷೆಗೆ ಸಹಜವಾದ, ಅದರಲ್ಲಿಯೇ ಅಡಗಿ ಕುಳಿತಿರುವ ಸಾಧ್ಯತೆಗಳನ್ನು ಹೊರತರಬಲ್ಲನೇ ಹೊರತು ಆ ಭಾಷೆಯ ಸ್ವರೂಪಕ್ಕೆ ಒಗ್ಗದ ಹೊಸ ಸಾಧ್ಯತೆಗಳನ್ನು ಸೃಷ್ಟಿಸಲಾರ.

ಆದರೆ, ಬಾಹ್ಯ ಕಾರಣಗಳಿಂದ ಪ್ರತಿಯೊಂದು ಭಾಷೆಯೂ ಬದಲಾಗುತ್ತಿರುತ್ತದೆ. ಕಾಲಕ್ಕೆ ತಕ್ಕಂತೆ ಭಾಷೆ ಬದಲಾದಾಗ ಕಾವ್ಯಭಾಷೆಯ ಸಾಧ್ಯತೆಗಳೂ ಹಿಗ್ಗುತ್ತವೆ. ಬೇಂದ್ರೆಯಂಥ ಕವಿಗಳು ಹೊಸಗನ್ನಡದ, ಜನಪದ ಭಾಷೆಯ ಸಾಧ್ಯತೆಗಳನ್ನು ಹೀಗೆ ಮೊದಲ ಬಾರಿಗೆ ಸೂರೆ ಮಾಡಿದರು. ‘ಬೆಳಗು’ ಕವಿತೆಯ ಭಾಷೆ, ಆಕೃತಿ ಮತ್ತು ಛಂದಸ್ಸು ಇದಕ್ಕೆ ಸಾಕ್ಷಿಯಾಗಿವೆ. ಕವಿತೆಯ ಮೊದಲ ಮತ್ತು ಕೊನೆಯ ಅಕ್ಷರಗಳೇ ಇಂತಹದ್ದೊಂದು ಭಾಷಿಕ ಸೂಚನೆಯನ್ನು ಕೊಡುತ್ತಿರುವಂತೆ ಕಾಣುತ್ತದೆ:

‘ಮೂಡಲ ಮನೆಯಾ ಮುತ್ತಿನ ನೀರಿನ
ಎರಕsವ ಹೊಯ್ದಾ...’

ಎಂದು ಮೊದಲಾಗುವ ಕವಿತೆ,

‘ಇದು ಬರಿ- ಬೆಳಗಲ್ಲೋ ಅಣ್ಣಾ’ ಎಂದು ಮುಗಿಯುತ್ತದೆ.

‘ಮೂ’ ಮತ್ತು ‘ಣ್ಣಾ’ ಎಂಬ ದೀರ್ಘಾಕ್ಷರಗಳು ತೆರೆದ ಹಕ್ಕಿರೆಕ್ಕೆಗಳ ಹಾಗೆ ಕೆಲಸ ಮಾಡುತ್ತ, ಕವಿತೆಯ ಒಳಗಿನ ಇತರೆ ದೀರ್ಘಸ್ವರಗಳಿಗೆ ಆಸರೆಯನ್ನು ನೀಡುತ್ತಿವೆ. ಇಡೀ ಕವಿತೆಯಲ್ಲಿ ಇಡಿಕಿರಿದಿರುವ ದೀರ್ಘಸ್ವರಗಳು ಮತ್ತು ದೀರ್ಘಾಕ್ಷರಗಳು, ನಾವು ಕವಿತೆಯನ್ನು ವೇಗವಾಗಿ, ಒಂದೇ ಉಸಿರಿನಲ್ಲಿ ಓಡುತ್ತ ಓದಲು ಬಿಡದೆ, ಅಲ್ಲಲ್ಲಿ ತಡೆಹಿಡಿಯುತ್ತವೆ: ‘...ನುಣ್ಣ-ನ್ನೆರಕsವ ಹೊಯ್ದಾ/ ಬಾಗಿಲ ತೆರೆದೂ ಬೆಳಕು ಹರಿದೂ/ ಜಗವೆಲ್ಲಾ ತೊಯ್ದಾ/ಹೋಯ್ತೋ-ಜಗವೆಲ್ಲಾ ತೊಯ್ದಾ’. ಹೀಗೆ ಉಸಿರು ಹಿಡಿಯುತ್ತ, ಮತ್ತೆ ಬಿಡುತ್ತ, ಮತ್ತೆ ಹಿಡಿಯುತ್ತಾ ಉಸಿರಿನ ಆಟವನ್ನು ಆಡಿಸುತ್ತ ಕವಿತೆಯು ವಿಶಿಷ್ಟ ಗತಿಯನ್ನು ಪಡೆದುಕೊಳ್ಳುತ್ತದೆ.

ಪ್ರತಿ ದೀರ್ಘಸ್ವರದ ನಂತರ ಬರುವ ನಿಲುಕಡೆಯಿಂದಾಗಿ ಇದು ಸಾವಧಾನವನ್ನು ಸೃಷ್ಟಿಸುವ ಲಯ; ಆಲೋಚನೆಗೆ ಅವಕಾಶ ಕೊಡುವ ಗತಿ. ಅಂತೆಯೇ ಇರುಳಿನ ಕತ್ತಲೆಯಲ್ಲಿ ತನ್ನ ಆಕಾರ ಹಾಗೂ ಬಣ್ಣ ಬೆಡಗುಗಳನ್ನು ಕಳೆದುಕೊಂಡು ಕರಗಿಹೋಗಿರುವ ಇಡೀ ಲೋಕವು, ಬೆಳಕು ಹರಿದಂತೆ ಚೂರುಚೂರೇ ನಿಧಾನವಾಗಿ ಕಾಣಿಸುತ್ತಾ ಕೊನೆಗೆ ತುಂಬು ಬೆಳಕಿನಲ್ಲಿ ಸ್ಪಷ್ಟವಾದ ರೂಪವನ್ನು ಪಡೆಯುವ ಲಯ. ಹೀಗೆ ಬೆಳಗಾಗುವ ಪ್ರಕ್ರಿಯೆಯಲ್ಲಿ ತನ್ನದೇ ಆದ ಚಲನೆಯಿದೆ, ಪುಟಪುಟನೆ ಪುಟಿಯುವ ಕಾರಂಜಿ, ಪಟಪಟನೆ ಒಡೆಯುವ ಮೊಗ್ಗುಗಳೂ ಹಾಗೆಯೇ. ಅವು ನಿಸರ್ಗದ ಲಯದ ಮರುಸೃಷ್ಟಿಗಳು. ಆದ್ದರಿಂದಲೇ ಕವಿತೆಯು ಅನುಭವದ ನಿರೂಪಣೆಯಲ್ಲ, ಅದು ಅನುಭವದ ಮರುಕಟ್ಟುವಿಕೆ, ಶಬ್ದಸೃಷ್ಟಿ.

ಏಳು ಚರಣಗಳ ಈ ಕವಿತೆಯಲ್ಲಿ ಒಂದೊಂದು ಚರಣವೂ ಒಂದೊಂದು ಲಯದಲ್ಲಿದೆ- ಏಳು ಸ್ವರಗಳು ಕೂಡುತ್ತ ಒಂದು ಸ್ವರವಾಗುವುದನ್ನು, ಏಳು ಬಣ್ಣಗಳು ಸೇರಿ ಬಿಳಿ (ಬೆಳಗು) ಬಣ್ಣವಾಗುವುದನ್ನು ಸೂಚಿಸುವಂತಿದೆ ಈ ಲಯವೈವಿಧ್ಯ. ಕೊನೆಯಲ್ಲಿ ಕವಿತೆಯ ಗತಿಯು ಪ್ರೀತಿ- ಶಾಂತಿಗಳಲ್ಲಿ ವಿರಮಿಸುತ್ತದೆ. ಕವಿಯು ವರ್ಣಿಸುತ್ತಿರುವ ಬೆಳಗು ಹೊತ್ತಿನ ಬೇರೆ ಬೇರೆ ವಿದ್ಯಮಾನಗಳು ಒಂದರೊಳಗೊಂದು ಬೆರೆತು ಕಡೆಯ ಸಾಲಿನ ಹೊತ್ತಿಗೆ ಎಲ್ಲಕ್ಕಿಂತ ಭಿನ್ನವಾದ ಹೊಸತೊಂದು ಧ್ವನಿಯು ನಮ್ಮೆದುರು ತೆರೆದುಕೊಳ್ಳುತ್ತದೆ: ‘ಅರಿಯದು ಅಳವು ತಿಳಿಯದು ಮನವು/ ಕಾಣsದೋ ಬಣ್ಣ/ ಕಣ್ಣಿಗೆ-ಕಾಣsದೋ ಬಣ್ಣಾ...’ ಎನ್ನುವ ಸಾಲುಗಳು ಯಾವ ನಿರ್ದಿಷ್ಟ ಬಣ್ಣವೂ ಕಾಣದೆ, ಬೆಳ್ಳಂಬೆಳಕಿನಂತಾಗಿರುವ ಮನಸ್ಸಿನ ಚಿತ್ರಕ್ಕೆ ಪೂರಕವಾಗಿ ಕಾಣಿಸುತ್ತವೆ. ಏಕಕಾಲಕ್ಕೆ ಗಿಡಗಂಟೆ, ಹಕ್ಕಿಗಳ ಕೊರಳು, ಮೊಗ್ಗು, ಎಲೆ, ಗಾಳಿ, ಇವನ್ನೆಲ್ಲ ನೋಡುವ ಕಣ್ಣು, ಕೇಳುವ ಕಿವಿ, ಎಲ್ಲೆಡೆಯೂ ಆಗುತ್ತಿರುವ ಬೆಳಗಿನ ಸೂಚಕದಂತೆಯೆ ಇದು ಕಾವ್ಯಸೃಷ್ಟಿಯಲ್ಲೂ ಆದ ಬೆಳಗು. ಆದ್ದರಿಂದ ಇದು ಬೆರಗಿನಿಂದ ಬೆರಗಿನ ಕಡೆಗೇ ಮಾಡಿದ ಪಯಣ; ಅನುಭವವು ಅನುಭವವನ್ನೇ ಸೃಷ್ಟಿಸುವ ಸೋಜಿಗ.

ಸೃಷ್ಟಿಯಲ್ಲಿ ತನ್ನಷ್ಟಕ್ಕೆ ತಾನೇ, ಯಾರದೇ ಕರ್ತೃತ್ವವಿಲ್ಲದೆ ಜರುಗುತ್ತಿರುವ ಹಲವು ಸಂಗತಿಗಳನ್ನು ನೋಡುತ್ತ ಬೆರಗುಗೊಂಡ ಮನಸ್ಸಿನ ಸ್ಥಿತಿಯ ನಿರೂಪಣೆ ಈ ಕವಿತೆಯದು. ‘ರತ್ನದ ರಸದಾ ಕಾರಂಜೀಯೂ/ಪುಟಪುಟನೇ ಪುಟಿದು/ತಾನೇ-ಪುಟಪುಟನೇ ಪುಟಿದು/ಮಘಮಘಿಸುವಾ ಮುಗಿದ ಮೊಗ್ಗೀ/ ಪಟಪಟನೇ ಒಡೆದು/ ತಾನೇ-ಪಟಪಟನೇ ಒಡೆದು’. ಎನ್ನುವಲ್ಲಿ ಇದೆಲ್ಲವೂ ತಾನೇ ತಾನಾಗಿ ಹೇಗೆ ಆಗುತ್ತಿದೆ ಎನ್ನುವ ಬೆರಗಿದೆ: ‘ಎಲೆಗಳ ಮೇಲೇ ಹೂಗಳ ಒಳಗೇ/ಅಮೃತsದ ಬಿಂದು/ ಕಂಡವು-ಅಮೃತsದ ಬಿಂದು/ಯಾರಿರಿಸಿರುವರು ಮುಗಿಲs ಮೇಲಿಂ-/ದಿಲ್ಲಿಗೇ ತಂದು,/ ಈಗ-ಇಲ್ಲಿಗೇ ತಂದು.” ಈ ಸಾಲುಗಳಲ್ಲಿ ‘ಯಾರು?’ ಎನ್ನುವ ಬೆರಗಿದೆ.

‘ಹಾರಿಸಿ ಬಿಟ್ಟರು ತುಂಬಿಯ ದಂಡು’ ಎಂದಾಗ ಬರುವ ಬಹುವಚನ ಕೂಡ ‘ಯಾರೋ ಹಾರಿಸಿ ಬಿಟ್ಟಿದ್ದಾರಲ್ಲ!’ ಎಂಬ ವಿಸ್ಮಯದ್ದು. ಹೀಗೆ ಆಲೋಚಿಸುವಾಗ, ಮೊದಲ ಚರಣದಲ್ಲಿ ಬರುವ, ‘ಹೊಯ್ದಾ’, ‘ತೊಯ್ದಾ’ ಎಂಬ ಪದಗಳು ಈ ವಿಸ್ಮಯ ಅಥವಾ ಬೆರಗಿಗೆ ಡಿಕ್ಕಿ ಹೊಡೆಯುವ ಹಾಗೆ ಕಂಡರೆ ಆಶ್ಚರ್ಯವಿಲ್ಲ. ಮೂಡಲ ಮನೆಯಲ್ಲಿ ಈಗಾಗಲೇ ಇರುವ ಮುತ್ತಿನ ನೀರಿನ ಎರಕವನ್ನು ಯಾರೋ ‘ಹೊಯ್ದರು’ ಎನ್ನುವುದು ಹೇಗೆ? ಬಾಗಿಲು ತೆರೆದು, ಬೆಳಕು ಹೊರಗೆ ಹರಿದು ‘ಜಗವೆಲ್ಲಾ ತೊಯ್ದಾ’ ಎನ್ನುವಾಗ ಯಾರೋ ಒಬ್ಬರು ಜಗವನ್ನೆಲ್ಲ ತೋಯಿಸಿದರು ಎನ್ನುವುದು ಸರಿಯೇ? ಕರ್ತೃವಿಲ್ಲದೆ ಸಹಜವಾಗಿ ನಡೆಯುತ್ತಿರುವ ಕ್ರಿಯೆಗೆ ಕರ್ತೃವನ್ನು ಆರೋಪಿಸುವುದು ಸರಿಯೇ? ಮುಂತಾದ ಪ್ರಶ್ನೆಗಳು ಏಳುತ್ತವೆ.

1967ರಲ್ಲಿ ಈ ಕವಿತೆಯನ್ನು ಚಿತ್ರಗೀತೆಯಾಗಿಸಿದ ‘ಬೆಳ್ಳಿಮೋಡ’, ‘ಬಾಗಿಲು ತೆರೆದೂ ಬೆಳಕು ಹರಿದೂ/ ಜಗವೆಲ್ಲಾ ತೊಯ್ದಾ/ ಹೋಯ್ತೋ- ಜಗವೆಲಾ ತೊಯ್ದಾ’ ಸಾಲನ್ನು ‘ದೇವನು ಜಗವೆಲ್ಲಾ ತೊಯ್ದಾ’ ಎಂದು ಬದಲಿಸಿ ಕವಿತೆಯಲ್ಲಿ ಇಲ್ಲದೆ ಇರುವ ‘ದೇವರು’ ಎಂಬ ಕರ್ತೃವನ್ನು ಸೃಷ್ಟಿಸಿದೆ. ಅದನ್ನು ಒಪ್ಪಿಕೊಂಡರೆ ಇಡೀ ಕವಿತೆಯನ್ನು ಆವರಿಸಿರುವ ಮತ್ತು ಅದು ನಮ್ಮಲ್ಲಿ ಉಂಟು ಮಾಡುವ ವಿಸ್ಮಯದ ಭಾವವು ಇಲ್ಲವಾದಂತಾಗುತ್ತದೆ. ತಾನೇ ‘ಆಗುತ್ತಿರುವ’ ಕವಿತೆಯೊಳಗಿನ ಬೆಳಗು ಮತ್ತು ಆ ಬೆಳಗಿನಿಂದ ಹೊಸತಾಗಿರುವ ಕವಿ ಮತ್ತು ಕವಿತೆಗಳ ಬೆರಗಿನ ಕಣ್ಣನ್ನು ಕಿತ್ತು ನಾವೇ ಅದನ್ನು ಕುರುಡು ಮಾಡಿದ ಹಾಗೆ ಈ ಕೆಲಸ.

ಇವೇ ಸಾಲುಗಳನ್ನು ಕುರಿತಂತೆ ಬೇಂದ್ರೆ ಸಾಹಿತ್ಯದ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸ ಜಿ.ಎಸ್.ಆಮೂರರು ತಮ್ಮ ‘ಭುವನದ ಭಾಗ್ಯ’ ಕೃತಿಯಲ್ಲಿ ‘...ಇಲ್ಲಿ ಕವಿ ವರ್ಣಿಸುತ್ತಿರುವ ಕ್ರಿಯೆ ಅರುಣೋದಯ ಸೂರ್ಯೋದಯದಲ್ಲಿ ಪರಿಣಮಿಸುತ್ತಿರುವ ಕ್ರಿಯೆ. ಅದನ್ನು ರೂಪಕದ ಭಾಷೆಯಲ್ಲಿ ಮೂಡಲ ಮನೆಯ ಮುತ್ತಿನ ನೀರಿನಲ್ಲಿ ಎರಕಹೊಯ್ದ ಬಾಗಿಲು ತೆರೆದು, ಬೆಳಕು ಹರಿದು ಜಗವೆಲ್ಲ ತೊಯ್ದುಹೋಯಿತು ಎಂದು ಕವಿ ವರ್ಣಿಸುತ್ತಾನೆ. ಹಾಡಿನ ಲಯ ಕವಿತೆಗಿರುವುದರಿಂದ ‘ಹೊಯ್ದ’ ಎನ್ನುವುದು ‘ಹೊಯ್ದಾ’ ಆಗಿಯೂ ‘ತೋಯ್ದ’ ಎನ್ನುವುದು ‘ತೋಯ್ದಾ’ ಎಂದೂ ಆಗುತ್ತದೆ. ಈ ಭಾಷಾ ಪ್ರಕ್ರಿಯೆಯನ್ನು ಯಾರೂ ಗಮನಿಸಿದಂತಿಲ್ಲ’ ಎನ್ನುತ್ತಾರೆ. ಎಚ್ಚರದಿಂದ ಗುರುತಿಸಿಕೊಳ್ಳದೆ ಹೋದರೆ ನುಸುಳಿ ಒಳಬರುವ ಹೊರಗಿನ ‘ದೇವರ’ ಸಮಸ್ಯೆಯನ್ನು ಈ ವಿಶ್ಲೇಷಣೆಯು ಎಷ್ಟು ಚೆನ್ನಾಗಿ ಪರಿಹರಿಸಿದೆ!

ಕವಿತೆಯಲ್ಲಿ ‘ದೇವರ’ ಆಗಮನವಾಗುವುದು ಕೊನೆ ಕೊನೆಯಲ್ಲಿ- ‘ಕಂಡಿತು ಕಣ್ಣು ಸವಿದಿತು ನಾಲಗೆ/ ಪಡೆದೀತೀ ದೇಹ/ ಸ್ಪರ್ಶಾ-ಪಡೆದೀತೀ ದೇಹ./ ಕೇಳಿತು ಕಿವಿಯು ಮೂಸಿತು ಮೂಗು/ ತನ್ಮಯವೀ ಗೇಹಾ/ ದೇವರ- ದೀ ಮನಸಿನ ಗೇಹಾ” ಎಂಬ ಸಾಲುಗಳಲ್ಲಿ. ನನ್ನ ಒಳಗಿರುವ ದೇವರು ತನ್ನ ಹೊರಗಿನದ್ದನ್ನು ಅನುಭವಿಸಲು ನಾನು ಒಂದು ಉಪಕರಣ ಎನ್ನುವುದನ್ನು ಸೋಂಕಿನಂತೆ ಸೂಚಿಸುವ ಈ ಸಾಲುಗಳೊಂದಿಗೆ ಕವಿತೆಯು ಮುಗಿಯುವುದಿಲ್ಲ. ಕವಿಯು ಮುಂದುವರೆದು, ‘ಅರಿಯದು ಅಳವು ತಿಳಿಯದು ಮನವು/ ಕಾಣsದೋ ಬಣ್ಣಾ/ ಕಣ್ಣಿಗೆ-ಕಾಣsದೋ ಬಣ್ಣಾ’ ಎನ್ನುತ್ತಾನೆ. ಎರಡು ಗಳಿಗೆಯ ಹಿಂದೆ ಬಣ್ಣವನ್ನು ‘ಕಂಡ’ ಕಣ್ಣಿಗೆ ಈಗ ‘ಬಣ್ಣಾ’ ಕಾಣದಾಗಿದೆ.

‘ದೇವರ-ದೀ ಮನಸಿನ ಗೇಹಾ’ ಎಂದ ಮನಸ್ಸು ಈಗ ‘ತಿಳಿಯದು ಮನವು’ ಎನ್ನುತ್ತದೆ. ಇದು ಪ್ರತಿಯೊಂದು ಜೀವದೊಳಗೂ ಇರುವ ದ್ವಂದ್ವ ಮತ್ತು ಇದನ್ನು ಗ್ರಹಿಸಬಲ್ಲ ಕಣ್ಣುಳ್ಳವನು ಮಾತ್ರ ಕವಿ. ಕಾಣುವ ಕಣ್ಣೇ ಕಾಣದ ಕಣ್ಣೂ ಆಗುವುದು ಲೌಕಿಕತೆಗೆ ಹೊರತಾದ ಪ್ರೀತಿ ಮತ್ತು ಮುಗ್ಧತೆಯಲ್ಲಿ ಮಾತ್ರ. ಆಗ ಬುದ್ಧಿ ಕೊಡುವ ತೀರ್ಮಾನವನ್ನು ಮೀರಿದ ಏನೋ ಒಂದು ನಮ್ಮ ನಡವಳಿಕೆಯನ್ನು ರೂಪಿಸುತ್ತದೆ. ಹಾಗೆ ನೋಡಿದರೆ, ‘ಎರಕ’ ಎನ್ನುವ ಪದಕ್ಕೆ ‘ಪ್ರೀತಿ’ ಎನ್ನುವ ಅರ್ಥವೂ ಇದೆ. ಹೀಗಿರುವುದರಿಂದಲೆ ಕವಿ ‘ಕಾಣುವ’ ಮತ್ತು ‘ಕಾಣಿಸುವ’ ನಿಜದ ಬೆಳಗು ಇದು: ‘ಶಾಂತೀರಸವೇ ಪ್ರೀತಿಯಿಂದಾ/ ಮೈದೋರಿತಣ್ಣಾ/ ಇದು ಬರಿ- ಬೆಳಗಲ್ಲೋ ಅಣ್ಣಾ’. ಇವೇ ಸಾಲುಗಳನ್ನು ಕುರಿತು ತಮ್ಮ ಜ್ಞಾನಪೀಠ ಪ್ರಶಸ್ತಿ ಸ್ವೀಕೃತಿಯ ಭಾಷಣದಲ್ಲಿ ಬೇಂದ್ರೆಯವರು, ‘ಈ ಶಾಂತಿಯೆಂಬುದು ಪ್ರೀತಿಯೊಳಗಿಂದಲೇ ಹೊರಹೊಮ್ಮಿ ಬರುತ್ತದೆ. ಅದು ಕೇವಲ ಭೌತಿಕ ಪ್ರಭಾತವಲ್ಲ. ಆ ‘ಬೆಳಗ’ನ್ನು ಇಂದಿಗೂ ನಾನು ಕಾಣುತ್ತಲಿದ್ದೇನೆ’ ಎನ್ನುತ್ತಾರೆ.

‘ಬೆಳಗು’ ತನ್ನ ಹೊಸ ಛಂದಸ್ಸು ಮತ್ತು ಭಿನ್ನ ನೋಟ ಕ್ರಮದಿಂದ ಹಾಕಿಕೊಟ್ಟ ಮಾದರಿಯು ಕನ್ನಡ ಕಾವ್ಯಲೋಕದಲ್ಲಿ ಹೊಸ ಬೆಳಗನ್ನು ತಂದಿತು. ಕವಿತೆಯು ಬೇಂದ್ರೆಯವರು ಬೆಳಗಿನ ಪ್ರಕ್ರಿಯೆಯನ್ನು ಕುರಿತು ಬರೆದದ್ದು ಎಂದಷ್ಟೆ ಹೇಳಿದರೆ, ಅದು ನಾವು ಕವಿ ಮತ್ತು ಕವಿತೆ ಎರಡಕ್ಕೂ ಮಾಡುವ ಅಪಚಾರ. ಈ ಮಾತಿಗೆ ಕಲಶಪ್ರಾಯವಾಗಿ ಕವಿತೆಯ ಕಡೆಯ ಸಾಲಾದ ‘ಇದು ಬರಿ-ಬೆಳಗಲ್ಲೋ ಅಣ್ಣಾ’ದಲ್ಲಿ ‘ಬರಿ’ ಪದವು ಕವಿತೆಯ ಕೀಲಿಕೈಯನ್ನು ತನ್ನೊಳಗೆ ಅಡಗಿಸಿಕೊಂಡು ಇಡೀ ಕವಿತೆಯನ್ನು ಹಿಡಿದಾಡಿಸುತ್ತ, ‘ಇದು ಬರಿ ಬೆಳಗಲ್ಲದಿದ್ದರೆ ಮತ್ತೇನು?’ ಎನ್ನುವ ಪ್ರಶ್ನೆಯನ್ನು ಓದುಗನಲ್ಲಿ ಹುಟ್ಟಿಸುವ ಮೂಲಕ ಹುಡುಕಾಟಕ್ಕೆ ಹಚ್ಚುವ ಸೋಜಿಗವಾಗಿದೆ.

ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ

ಕನ್ನಡ ಕಾವ್ಯಲೋಕವನ್ನು ನೂರು ವರ್ಷಗಳ ಕಾಲ ಆವರಿಸಿರುವ ‘ಬೆಳಗು’ ಕವಿತೆಯ ಇಂತಹ ಇನ್ನೂ ಹಲವು ಧ್ವನಿಸಾಧ್ಯತೆಗಳಲ್ಲಿ ಕನ್ನಡ ಕಾವ್ಯ ಬದುಕಿದೆ ಎನ್ನುವ ವಿನಯದಲ್ಲಿ ಈ ಕವಿತೆಯು ತಾನೂ ಬೆಳೆದಿದೆ, ಕನ್ನಡವನ್ನು ಬೆಳಗಿದೆ. ನಮಗೆ ಅನ್ನಿಸಿದ್ದನ್ನು ಹೇಳಿ ಬಿಡಬೇಕು ಎನ್ನುವ ತವಕ ನಮ್ಮದೆಷ್ಟಿರುತ್ತದೆಯೋ, ಹಾಗನ್ನಿಸಿದ್ದನ್ನು ತಾನು ತನ್ನ ಬಗೆಯಲ್ಲಿ ಹೇಳಬೇಕೆನ್ನುವ ತವಕದೊಳಗೆ ಭಾಷೆಯ ಜೀವಕೋಶವೂ ಹಿಗ್ಗುತ್ತಿರುತ್ತದೆ. ಕವಿ, ಕವಿತೆ ಮತ್ತು ಭಾಷೆಯದ್ದು ರಕ್ತಮಾಂಸದ ಸಂಬಂಧ, ಒಂದರ ಒಳಹೊಕ್ಕು ಇನ್ನೊಂದು ಬದುಕಬೇಕು, ಬೆಳೆಯಬೇಕು. ನಮ್ಮೊಳಗು ತೋರ್ಪಡುವುದೇ ನಾವು ಬಳಸುವ ಭಾಷೆಯ ಮೂಲಕ ಎಂಬುದಕ್ಕೆ ಈ ಕವಿತೆ ‘ಬರಿ’ ಉದಾಹರಣೆಯಷ್ಟೆ ಅಲ್ಲ.

‘ಗರಿ’ ಸಂಕಲನದ ಮೊದಲ ಕವನ
‘ಬೆಳಗು’ ಕವಿತೆಯು ಮೊದಲು ಪ್ರಕಟಗೊಂಡದ್ದು ಧಾರವಾಡದಿಂದ ಪ್ರಕಟಗೊಳ್ಳುತ್ತಿದ್ದ ‘ಸ್ವಧರ್ಮ’ ಎನ್ನುವ ಪತ್ರಿಕೆಯಲ್ಲಿ. ಇದು 1932ರಲ್ಲಿ ಪ್ರಕಟಗೊಂಡ ಬೇಂದ್ರೆಯವರ ಗರಿ ಸಂಕಲನದ ಮೊದಲ ಕವನ. ಕವಿತೆಯು ರಚನೆಗೊಂಡದ್ದು 1919ರಲ್ಲಿ. ಬೇಂದ್ರೆಯವರೇ ಹೇಳುವಂತೆ ಈ ಕವಿತೆಯು ಅವರ ‘ಮೊದಲ ನೂತನ ಛಂದಃ ಪ್ರಯೋಗ’. ‘ಬೆಳಗು’ ಮತ್ತು ಇತರೆ ಕೆಲವು ಕವಿತೆಗಳು ಪತ್ರಿಕೆಗಳಲ್ಲಿ ‘ಸದಾನಂದಿ ಜಂಗಮ’ ಎನ್ನುವ ಹೆಸರಿನಲ್ಲಿ ಪ್ರಕಟವಾಗಿತ್ತು ಎನ್ನುವುದು ಕುತೂಹಲಕಾರಿ ವಿಚಾರ.

ಕನ್ನಡದ ಅತ್ಯುತ್ತಮ ಮುನ್ನುಡಿಗಳಲ್ಲಿ ಬೇಂದ್ರೆಯವರ ‘ನಾದಲೀಲೆ’ ಸಂಕಲನಕ್ಕೆ ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದ ಮುನ್ನುಡಿಯೂ ಒಂದು. ಕವಿತೆಯ ದರ್ಶನದ ಕುರಿತಾಗಿ ಆಡಿರುವ ಮಾಸ್ತಿಯವರ ಮಾತುಗಳು ತಮ್ಮಷ್ಟಕ್ಕೆ ತಾವು ಕಾವ್ಯದರ್ಶನವುಳ್ಳವು. ಕವಿತೆಯ ಅನುಭವ ಕವಿಯಷ್ಟೇ ಓದುಗನದ್ದೂ ಆದಾಗ ಮಾತ್ರ ಸಂಭವಿಸುವಂತಹ ಸೋಜಿಗ ಎಂತಹದ್ದೆಂಬುದನ್ನು ಈ ‘ಮುನ್ನುಡಿ’ಯು ಕಾಣಿಸುವಂತಿದೆ. ಬೆಳಗು ಪ್ರತಿನಿತ್ಯವೂ ಆಗುತ್ತದೆ. ಆ ನಿತ್ಯದ ಬೆಳಗು ನನ್ನೊಳಗೂ ಆದಾಗ ಮಾತ್ರ ಹೊರ- ಒಳಗಿನ ಬೆಳಗು ಮತ್ತು ಬೆಳಕು ಎರಡಕ್ಕೂ ಅರ್ಥ ಹುಟ್ಟುತ್ತದೆ ಎಂದು ತಿಳಿಹೇಳುವ ಕವಿತೆ ಮತ್ತು ವಿಮರ್ಶೆಗಳು ಇಲ್ಲಿ ಒಡಗೂಡಿವೆ.

ಬೆಳಗು
1
ಮೂಡಲ ಮನೆಯಾ ಮುತ್ತಿನ ನೀರಿನ
ಎರಕ$ವ ಹೊಯ್ದಾ
ನುಣ್ಣ-ನ್ನೆರಕsವ ಹೊಯ್ದಾ
ಬಾಗಿಲ ತೆರೆದೂ ಬೆಳಕು ಹರಿದೂ
ಜಗವೆಲ್ಲಾ ತೊಯ್ದಾ
ಹೋಯ್ತೋ-ಜಗವೆಲ್ಲಾ ತೊಯ್ದಾ.

2
ರತ್ನದ ರಸದಾ ಕಾರಂಜೀಯೂ
ಪುಟಪುಟನೇ ಪುಟಿದು
ತಾನೇ-ಪುಟಪುಟನೇ ಪುಟಿದು
ಮಘಮಘಿಸುವಾ ಮುಗಿದ ಮೊಗ್ಗೀ
ಪಟಪಟನೇ ಒಡೆದು
ತಾನೇ-ಪಟಪಟನೇ ಒಡೆದು.

3
ಎಲೆಗಳ ಮೇಲೇ ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-ಅಮೃತ$ದ ಬಿಂದು
ಯಾರಿರಿಸಿಕರುವರು ಮುಗಿಲsಮೇಲಿಂ-
ದಿಲ್ಲಿಗೇ ತಂದು
ಈಗ-ಇಲ್ಲಿಗೇ ತಂದು.

4
ತಂಗಾಳಿಯಾ ಕೈಯೊಳಗಿರಿಸೀ
ಎಸಳೀನಾ ಚವರಿ
ಹೂವಿನ-ಎಸಳೀನಾ ಚವರಿ
ಹಾರಿಸಿಬಿಟ್ಟರು ತುಂಬಿಯ ದಂಡು
ಮೈಯೆಲ್ಲಾ ಸವರಿ
ಗಂಧಾ-ಮೈಯೆಲ್ಲಾ ಸವರಿ.

5
ಗಿಡಗಂಟೆಯಾ ಕೊರಳೊಳಗಿಂದ
ಹಕ್ಕೀಗಳ ಹಾಡು
ಹೊರಟಿತು-ಹಕ್ಕೀಗಳ ಹಾಡು.
ಗಂಧರ್ವರಾ ಸೀಮೆಯಾಯಿತು
ಕಾಡಿನಾ ನಾಡು
ಕ್ಷಣದೊಳು-ಕಾಡಿನಾ ನಾಡು.

6
ಕಂಡಿತು ಕಣ್ಣು ಸವಿದಿತು ನಾಲಗೆ
ಪಡೆದೀತೀ ದೇಹ
ಸ್ಪರ್ಶಾ-ಪಡೆದೀತೀ ದೇಹ.
ಕೇಳಿತು ಕಿವಿಯು ಮೂಸಿತು ಮೂಗು
ತನ್ಮಯವೀ ಗೇಹಾ
ದೇವರ-ದೀ ಮನಸಿನ ಗೇಹಾ.

7
ಅರಿಯದು ಅಳವು ತಿಳಿಯದು ಮನವು
ಕಾಣ$ದೋ ಬಣ್ಣಾ
ಕಣ್ಣಿಗೆ-ಕಾಣsದೋ ಬಣ್ಣಾ
ಶಾಂತೀರಸವೇ ಪ್ರೀತಿಯಿಂದಾ
ಮೈದೋರಿತಣ್ಣಾ
ಇದು ಬರಿ-ಬೆಳಗಲ್ಲೋ ಅಣ್ಣಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT