ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾನರಿ ರಸ್ತೆಯ ಬಿಲಾಲ್‌ ಬಾಗ್‌ ದಕ್ಷಿಣದ ‘ಶಾಹೀನ್‌ ಬಾಗ್‌’!

Last Updated 20 ಫೆಬ್ರುವರಿ 2020, 3:03 IST
ಅಕ್ಷರ ಗಾತ್ರ

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತುರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ವಿರೋಧಿಸಿ ದೆಹಲಿಯ ಶಾಹೀನ್‌ ಬಾಗ್‌ ಮಾದರಿಯಲ್ಲಿ ನಗರದ ಟ್ಯಾನರಿ ರಸ್ತೆಯ ಬಿಲಾಲ್‌ ಬಾಗ್‌ನಲ್ಲಿ ಆರಂಭವಾಗಿರುವ ಅನಿರ್ದಿಷ್ಟಾವಧಿ ಹೋರಾಟ ದಿನದಿಂದ ದಿನಕ್ಕೆ ಹೊಸದಾದ ಸಾಂಸ್ಕೃತಿಕ ಸ್ವರೂಪ ಪಡೆದುಕೊಳ್ಳುತ್ತಿದೆ.

‘ಪ್ರಜಾಪ್ರಭುತ್ವ ರಕ್ಷಿಸಿ ಮತ್ತು ದೇಶ ರಕ್ಷಿಸಿ’ ಎಂಬ ಧ್ಯೇಯದೊಂದಿಗೆ ಆರಂಭವಾಗಿರುವ ಬಿಲಾಲ್ ಬಾಗ್‌ ಹೋರಾಟ ದೆಹಲಿಯ ಶಾಹೀನ್‌ ಬಾಗ್‌ ರೀತಿಯಲ್ಲಿಯೇ ಜನರ ಗಮನ ಸೆಳೆಯುತ್ತಿದೆ. ಕಳೆದ ಹತ್ತು ದಿನದಲ್ಲಿ ಟ್ಯಾನರಿ ರಸ್ತೆಯ ಬಿಲಾಲ್‌ಬಾಗ್‌ಎಲ್ಲರಿಗೂ ಚಿರಪರಿಚಿತ ಸ್ಥಳವಾಗಿ ಮಾರ್ಪಟ್ಟಿದೆ.

‘ಬಿಲಾಲ್ ಬಾಗ್’ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ

ಶಾಹೀನ್‌ ಬಾಗ್‌ದಂತೆ ಬಿಲಾಲ್ ಬಾಗ್‌ ಹೋರಾಟ ಒಂದು ಪ್ರತಿಭಟನೆಯಾಗಿ ಉಳಿದಿಲ್ಲ. ಮೊದ,ಮೊದಲು ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್‌ ಕಾಯ್ದೆ ವಿರುದ್ಧದ ರಾಜಕೀಯ ಪ್ರತಿಭಟನೆಯಾಗಿ ಬಿಂಬಿಸಲಾಗಿತ್ತು. ಆದರೆ, ಸಮಾಜದ ಎಲ್ಲ ವರ್ಗಗಳ ಜನರ ಒಳಗೊಳ್ಳುವಿಕೆಯಿಂದಾಗಿ ಸಾಂಸ್ಕೃತಿಕ ಸ್ವರೂಪ ಪಡೆದುಕೊಂಡಿದೆ. ಬಹುತ್ವದ ನೆಲೆಯಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಮಹಿಳೆಯರು, ವಿದ್ಯಾರ್ಥಿಗಳು, ರೈತ ಸಂಘಟನೆಗಳ ಪ್ರತಿನಿಧಿಗಳು, ವಕೀಲರು, ಕಲಾವಿದರು ಹೀಗೆ ಬಿಲಾಲ್‌ ಬಾಗ್‌ ಒಡಲು ಸೇರುತ್ತಿದ್ದಾರೆ. ಧರಣಿ ಸ್ಥಳದಲ್ಲಿ ಪ್ರತಿನಿತ್ಯ ಒಂದಿಲ್ಲ ಒಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿವೆ. ಹಗಲು, ರಾತ್ರಿಆರೋಗ್ಯಕರ ಮಾತುಕತೆ, ಚರ್ಚೆ, ಸಂಗೀತ ಮತ್ತು ವಿಭಿನ್ನ ಕಲಾತ್ಮಕ ಕಾರ್ಯಕ್ರಮಗಳಿಗೆ ಈ ಸ್ಥಳ ವೇದಿಕೆಯಾಗಿದೆ.

ಪುಸ್ತಕ ಓದು, ಕಾವ್ಯ ಸಂಜೆ, ಮುಶಾಯರಾ,ಹಾಡು, ಗಾಯನ, ಸಂಗೀತ ಕಾರ್ಯಕ್ರಮಗಳಿಂದ ಬಿಲಾಲ್ ಬಾಗ್‌ಗೆ ಹೊಸ ರಂಗು ಬಂದಿದ್ದು, ಸಾಂಸ್ಕೃತಿಕ ಮತ್ತು ವಿಚಾರ ವಿನಿಮಯ ತಾಣವಾಗಿ ಮಾರ್ಪಟ್ಟಿದೆ.

ಧರಣಿ ನಿರತ ಮಹಿಳೆಯರು

ಪ್ರಸಿದ್ಧ ಬಾಲಿವುಡ್‌ ನಟ ನಾಸೀರುದ್ದೀನ್ ಶಾ, ಇತಿಹಾಸಕಾರ ರಾಮಚಂದ್ರ ಗುಹಾ, ಗುಜರಾತ್‌ನ ಯುವ ರಾಜಕಾರಣಿ ಜಿಗ್ನೇಶ್ ಮೆವಾನಿ, ಯುವ ವಕೀಲ ವಲೀ ರಹ್ಮಾನಿ, ಮಹಿಳಾ ಹಕ್ಕು ಹೋರಾಟಗಾರ್ತಿ ದೇವಕಿ ಜೈನ್ ಹಾಗೂ ಸ್ವಾತಂತ್ರ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ,ಅಂಕಣಕಾರ ಆಕಾರ್ ಪಟೇಲ್, ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಸಂಸ್ಥೆ ಸದಸ್ಯರು ಸೇರಿದಂತೆ ಹಲವು ಖ್ಯಾತನಾಮರು ಬಿಲಾಲ್‌ ಬಾಗ್‌ಹೋರಾಟ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜೆಎನ್‌ಯು, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ ಸೇರಿದಂತೆ ದೇಶದ ವಿವಿಧ ಪ್ರತಿಷ್ಠಿತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಕೀಲರು, ಹೋರಾಟಗಾರರು ಹಾಗೂ ಹಲವು ಸಂಘಟನೆಗಳ ಮುಖಂಡರು ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಗಾಯಕರಾದ ಎಂ.ಡಿ. ಪಲ್ಲವಿ, ಬಿಂದು ಮಾಲಿನಿ, ವಾಸು ದೀಕ್ಷಿತ್ ಮತ್ತು ವಾನಂದಫ್ ಮತ್ತಿತರ ಸಂಗೀತಗಾರರುಗಾಯನ, ಸಂಗೀತದ ಮೂಲಕ ಹೋರಾಟದ ಕಿಚ್ಚು ಹೆಚ್ಚಿಸಿದ್ದಾರೆ. ‘ಅವರು ದೇಶ ಒಡೆಯುವವರು, ನಾವು ಭಾರತೀಯರು, ಮನಸ್ಸು ಕಟ್ಟುವವರು’ ಎಂಬ ಘೋಷಣೆಗಳು ನಿತ್ಯ ಮೊಳಗುತ್ತಿವೆ. ಈ ಹೋರಾಟದಿಂದಾಗಿ ಬಿಲಾಲ್‌ ಬಾಗ್‌ ಹೊಸ ಸಾಂಸ್ಕೃತಿಕ ನೆಲೆಯಾಗಿ ಬದಲಾಗಿದೆ.

‘ದೆಹಲಿ ಮಾದರಿ ಹೋರಾಟ’
ಜಾಗತಿಕ ಮಟ್ಟದಲ್ಲಿ ಗಮನ ಸೆಳೆದ ದೆಹಲಿಯ ಶಾಹೀನ್‌ ಬಾಗ್‌ ಮಾದರಿಯಲ್ಲಿಯೇ ಬೆಂಗಳೂರಿನ ಬಿಲಾಲ್‌ ಬಾಗ್‌ನಲ್ಲಿ ಹೋರಾಟ ನಡೆಸುವ ಮೂಲಕ ರಾಷ್ಟ್ರದ ಗಮನ ಸೆಳೆಯುವುದು ನಮ್ಮ ಉದ್ದೇಶ. ಈಗಾಗಲೇ ನಮ್ಮ ಹೋರಾಟಕ್ಕೆಅನೇಕರು ಬೆಂಬಲ ಸೂಚಿಸಿದ್ದಾರೆ. ಸರ್ಕಾರ ಕಾಯ್ದೆ ಕೈಬಿಡುವವವರೆಗೂ ಹೋರಾಟ ಮುಂದುವರಿಯಲಿದೆ’ ಎನ್ನುತ್ತಾರೆ ಧರಣಿಯಆಯೋಜಕರಲ್ಲಿ ಒಬ್ಬರಾದ ಸೈಯ್ಯದ್‌ ಸಮೀವುದ್ದೀನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT