ಗುರುವಾರ , ಜೂನ್ 4, 2020
27 °C

ಕೊರೊನಾಗೆ ಹೇಳಿ ಬಾಯ್‌ ಬಾಯ್‌: ಹಂಸಲೇಖಾ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಮುಟ್ಟುವ ಸಂಗೀತ, ರಸವತ್ತಾದ ಸಾಹಿತ್ಯದ ಮೂಲಕ ಪ್ರೇಮಿಗಳ ಪಾಲಿಗೆ ಲವ್‌ಗುರು ಆಗಿರುವ ಹಂಸಲೇಖಾ ಅವರ ಸಂಗೀತಕ್ಕೆ ಮಾರು ಹೋಗದವರಿಲ್ಲ. ಚಂದನವನದಲ್ಲಿ ಸಂಗೀತದ ಹೊಸಯುಗವನ್ನು ಆರಂಭಿಸಿದ ಕೀರ್ತಿ ಅವರದು. 

ಈಗ ‘ಕೊರೊನಾಗೆ ಹೇಳಿ ಬಾಯ್‌ ಬಾಯ್‌– ಗುಡ್‌ ಬಾಯ್‌ ಕೊರೊನಾ’ ಎಂಬ ಹಾಡೊಂದನ್ನು ಹಂಸಲೇಖಾ ಅವರು ರಚಿಸಿ, ಹಾಡಿ, ಅದನ್ನು ಯೂಟ್ಯೂಬ್‌ನಲ್ಲಿ ಹರಿಯಬಿಟ್ಟಿದ್ದಾರೆ. 3 ನಿಮಿಷದ ಈ ಹಾಡನ್ನು ಇಲ್ಲಿಯವರೆಗೂ 17 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಂಸಲೇಖಾ, ಅವರ ಪತ್ನಿ ಲತಾ ಹಂಸಲೇಖಾ ಹಾಗೂ ಮಗಳು ನಂದಿನಿ ಹಂಸಲೇಖಾ ಅವರು ಈ ಹಾಡನ್ನು ಹಾಡಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದು, ಸಂಗೀತ ನಿರ್ದೇಶನ ಮಾಡಿರುವುದು ಹಂಸಲೇಖಾ ಅವರೇ.

‘ಮನೆಯಲ್ಲೇ ಇದ್ದುಕೊಂಡು ಕೊರೊನಾ ಹೊಡೆದೋಡಿಸಿ, ಕೊರೊನಾ ನೀನು ಬೇಗ ತೊಲಗು’ ಎಂದು ಹಾಡಿನ ಮೂಲಕ ಎಲ್ಲರೂ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ’ ಎಂದು ಹಂಸಲೇಖಾ ಸಂದೇಶ ನೀಡಿದ್ದಾರೆ.  ಕರ್ಫ್ಯೂ ಸಮಯದಲ್ಲಿ ಮನೆಯಲ್ಲೇ ಇರುವ ಅವರು, ಪತ್ನಿ, ಮಗಳ ಜೊತೆ ಸೇರಿಕೊಂಡು ಈ ಹಾಡು ಕಟ್ಟಿದ್ದಾರೆ. 

‘ಇದು ಸಣ್ಣ ಮಕ್ಕಳಿಗಾಗಿ ಮಾಡಿರುವ ಹಾಡು. ಹಾಡಿನ ಮೂಲಕ ಕೊರೊನಾ ಏನು? ಮನೆಯಲ್ಲಿದ್ದುಕೊಂಡು ಏನು ಮಾಡಬೇಕು? ಎಂಬುದನ್ನೂ ಕೂಡ ಹೇಳಿದ್ದೇವೆ. ಪುಟಾಣಿಗಳಿಗೆ ಈ ಹಾಡನ್ನು ಅರ್ಪಿಸುತ್ತೇವೆ’ ಎಂದು ಹಾಡಿನ ಬಗ್ಗೆ ಹೇಳಿದರು ನಂದಿನಿ ಹಂಸಲೇಖಾ. 

‘ನಾವು ಕಟ್ಟುನಿಟ್ಟಾಗಿ ಕರ್ಫ್ಯೂ ಪಾಲಿಸುತ್ತಿದ್ದೇವೆ. ಮನೆ ಮಂದಿ ಒಟ್ಟಿಗೆ ಸಮಯ ಕಳೆಯುತ್ತಿದ್ದೇವೆ. ಹಾಗೇ ಚರ್ಚೆ ಮಾಡುತ್ತಾ ಇಂತಹದೊಂದು ಹಾಡನ್ನು ನಾವು ಯಾಕೆ ಮಾಡಬಾರದು ಎಂದು ಮಾತನಾಡಿಕೊಂಡೆವು. ಅಪ್ಪ ಸಾಹಿತ್ಯ ಬರೆದು ಸಂಗೀತ ನಿರ್ದೇಶನ ಮಾಡಿದರು’ ಎಂದು ಅವರು ಹಾಡು ಹುಟ್ಟಿದ ಸಂದರ್ಭ, ಕಾರಣವನ್ನು ಅವರು ತಿಳಿಸಿದರು. 

ನಂದಿನಿ ಹಂಸಲೇಖಾ ‘ಸಿಕ್ಸರ್‌’, ‘ನವಶಕ್ತಿ ವೈಭವ’, ‘ನಾನು ನನ್ನ ಕನಸು’, ‘ಸೌಂದರ್ಯ’ ಸೇರಿದಂತೆ ಅನೇಕ ಚಿತ್ರಗಳಿಗೆ ಹಿನ್ನೆಲೆ ಗಾಯನ ನೀಡಿದ್ದಾರೆ. 

ಈ ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ‘ಕೊರೊನಾ’ ಹಿಟ್‌ ಹಾಡುಗಳ ಪಟ್ಟಿಗೆ ಇದೂ ಸೇರಿದೆ. ಕೊರೊನಾ ಬಗ್ಗೆ ಚಂದನ್‌ ಹಾಗೂ ನಿವೇದಿತಾ ಜೋಡಿ ಹಾಡಿರುವ ಹಾಡೂ ಸಹ ಭಾರಿ ವೈರಲ್‌ ಆಗಿದೆ. 

ಮನೆಯಲ್ಲೇ ಇರುವ ಹಂಸಲೇಖಾ ಅವರು ಪತ್ನಿ, ಮಗಳ ಜೊತೆ ಹಳೆ ಹಾಡುಗಳನ್ನು ಹಾಡುತ್ತಾ, ಸಂಗೀತದ ಬಗ್ಗೆ ಚರ್ಚೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರಂತೆ. ಅವರ ಸ್ನೇಹಿತರು, ಸಿನಿಮಾ ತಂಡದವರ ಜೊತೆ ಮುಂದಿನ ಕೆಲಸ, ಸಂಗೀತ ನಿರ್ದೇಶನದ ಬಗ್ಗೆ ಮಾತನಾಡುತ್ತಾರೆ. ಉಳಿದಂತೆ ನಾವೆಲ್ಲಾ ಜೊತೆಯಾಗಿಯೇ ಕಾಲ ಕಳೆಯುತ್ತಿದ್ದೇವೆ ಎಂದು ನಂದಿನಿ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು