ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಷ್ಟೊಂದು ಚಂದಿತ್ತು ನಂಬಾಲ್ಯ!

Last Updated 12 ನವೆಂಬರ್ 2022, 14:39 IST
ಅಕ್ಷರ ಗಾತ್ರ

ಮಣ್ಣಾಗ ಆಡ್ತಿದ್ವಿ/ ಮುಳ್ಳಾಗ ತಿರುಗ್ತಿದ್ವಿ/ ಬಿಸಲಾಗ ಸುತ್ತಾಡ್ತಿದ್ವಿ/ ಆದ್ರೂ ಏನೂ ಆಗ್ತಿರ್ಲಿಲ್ಲ/ ಎಲ್ರೂ ಚನ್ನಾಗಿರ್ತಿದ್ವಿ/ ಎಷ್ಟೊಂದು ಚಂದಿತ್ತು ನಂಬಾಲ್ಯ!

ಹೌದು! ಏನೂ ಆಗ್ತಿರ್ಲಿಲ್ಲ ನಮಗೆ. ನೆಗಡಿ, ಕೆಮ್ಮು, ಜ್ವರ ಮತ್ತಿನ್ಯಾವ ಕಾಯಿಲೆ ನಮ್ಮ ಹತ್ತಿರ ಸುಳಿಯುತ್ತಿರಲಿಲ್ಲ. ವರ್ಣನೆಗೆ ನಿಲುಕದ ಜೀವನವದು ನಂಬಾಲ್ಯ. ಬಿಡುವಿಲ್ಲದ ಆಟ, ಮನ ತಣಿಯದ ನೋಟ, ವಾರಿಗೆಯವರ ಕೂಟ, ದಣಿವರಿಯದ ತಿರುಗಾಟ ಮಜವೋ ಮಜ. ಜಾತಿ, ಧರ್ಮ, ಮೇಲು ಕೀಳು, ಬಡವ ಬಲ್ಲಿದ, ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದೆ ಕೂಡಿ ಇರುವ, ಕೂಡಿ ಕಲಿಯುವ, ಕೂಡಿ ಉಣ್ಣುವ, ಕೂಡಿ ನಲಿಯುವ ವಯಸ್ಸು ಅದು. ಉಡಲು ಒಂದೇ ಚಡ್ಡಿ, ಓದಲು ಚಿಮಣಿ ಬುಡ್ಡಿ, ಬರೆಯಲು ಪಾಟಿ, ಓದಲು ಹರಿದ ಪುಸ್ತಕ, ತಿನ್ನಲು ಪೇಪರಮಟ್ಟಿ, ಉಣ್ಣಲು ಸಜ್ಜಿ ರೊಟ್ಟಿ, ಹಾಸಲು ಚಾಪಿ, ಹೊದೆಯಲು ಕೌದಿ, ಕಾಡುವ ಹುರುಕು ಕಜ್ಜಿ, ಹೀಗಿತ್ತು ನಮ್ಮ ಕಾಲದ ಬಾಲ್ಯದ ಬದುಕು.

ಹಳ್ಳಿಗಳಲ್ಲಿ ಭಾಗಶಃ ಮಣ್ಣಿನ ಮನೆಗಳಿದ್ದವು. ಎಲ್ಲೋ ಒಂದೆರಡು ಕಲ್ಲು–ಮಣ್ಣು ಮಿಶ್ರಿತ ಮನೆಗಳನ್ನು ಕಾಣಬಹುದಾಗಿತ್ತು. ರಸ್ತೆಗಳಂತೂ ದೂಳು ತುಂಬಿಕೊಂಡಿರುತ್ತಿದ್ದವು. ಸೈಕಲ್‌ ಆಗಿನ ಏರೋಪ್ಲೇನ್. ರೇಡಿಯೊ ಬಹು ಬೇಡಿಕೆಯ ಸಮೂಹ ಮಾಧ್ಯಮ. ಎಚ್‌ಎಂಟಿ ಗಡಿಯಾರ ಧರಿಸಿದವನೇ ಆಗಿನ ಹೀರೊ! ಟೇಪ್ ರೆಕಾರ್ಡರ್ ಇದ್ದವರ ಮನೆ ರಂಜನೀಯ ತಾಣ. ಕೆಂಪು ಬಸ್ಸು ಪ್ರಯಾಣಿಕರ ಐರಾವತ, ಬಿಳಿಕಾರು ಯಮದೂತ, ರಾಜದೂತ, ಎಜ್ಡಿ ಮೋಟರ ಸೈಕಲ್‌ಗಳು ಸ್ಥಿತಿವಂತರ ಶೋಕಿ. ಹಿಪ್ಪಿ ಕಟಿಂಗ್, ಬೆಲ್ ಬಾಟಂ ಪ್ಯಾಂಟ್, ದೊಡ್ಡ ಕಾಲರಿನ ಶರ್ಟ್, ಲಂಗಾ ದಾವಣಿ ಆಗಿನ ಫ್ಯಾಷನುಗಳಾಗಿದ್ದವು.

ಅವಿಭಕ್ತ ಕುಟುಂಬಗಳೇ ಹೆಚ್ಚಾಗಿರುವ ಕಾಲವದು. ಮನೆ ತುಂಬ ಜನ! ಮನೆ ಚಿಕ್ಕದು ಮಕ್ಕಳು ಬಹಳ. ಮನಸ್ಸು ಮಾತ್ರ ದೊಡ್ಡದು. ಅಜ್ಜ–ಅಜ್ಜಿ ಅಂದ್ರೆ ಮೊಮ್ಮಕ್ಕಳಿಗೆ ಪಂಚಪ್ರಾಣ. ಹೆತ್ತವರು ಹೊಲ, ಮನೆ, ಕೂಲಿ ಕೆಲಸದಲ್ಲಿಯೇ ದಿನ ಕಳೆಯುತ್ತಿದ್ದರು. ಊರ ಜಾತ್ರೆಗೊಮ್ಮೆ ಹೊಸ ಬಟ್ಟೆ, ದೊಡ್ಡ ಹಬ್ಬಗಳಿಗೊಮ್ಮೆ ಹೋಳಿಗೆ, ಚಪಾತಿ, ಅಕ್ಕಿ ಅನ್ನದ ಊಟ. ಉಳಿದ ದಿನಗಳಲ್ಲಿ ಸಜ್ಜಿರೊಟ್ಟಿ, ಹೊಲದಲ್ಲಿ ಪುಕ್ಕಟೆ ಸಿಗುವ ಚವಳಿ, ಪುಂಡಿ, ಗೋಳಿ, ರಾಜಗಿರಿ, ಕಿರಸಗಾನಿ, ಕುಂಬಳ, ಹೀರೆ, ತಿಪರಿ, ಹಾಗಲ ತರಕಾರಿ–ಸೊಪ್ಪಿನ ಜೊತೆಗೆ ಹುರುಳಿ, ಮೂಕಣಿ, ಹೆಸರು, ಅಲಸಂದಿ ಕಾಳುಕಡಿ ಕೂಲಿಯಿಂದ ಪಡೆದು ತಂದು, ಅಡುಗೆ ಮಾಡಿ ಅಮ್ಮ ಮನೆ ಮಂದಿಯ ಹೊಟ್ಟೆ ತುಂಬಿಸುತ್ತಿದ್ದಳು. ಒಂದ್ಹೊತ್ತು ಎಲ್ಲರಿಗೆ ತೃಪ್ತಿಯಾಗುವಷ್ಟು ಸಿಗುತ್ತಿತ್ತು. ರಾತ್ರಿ ಹೊತ್ತು ಗುಗ್ಗರಿ, ನುಚ್ಚು, ನವಣೆ ಅನ್ನ ಉಂಡು ಮಲಗಬೇಕಾಗಿತ್ತು.

ತೂಗುವ ಗಿಡಗಳು, ಹಾಡುವ ಹಕ್ಕಿಗಳು, ಅರಳುವ ಹೂಗಳು, ಮೊಳೆಯುವ ಸಸಿಗಳು, ಹರಿವ ತೊರೆಗಳು, ತೇಲುವ ಮೋಡಗಳು, ಇವುಗಳೊಂದಿಗೆ ನಮ್ಮ ಬಾಲ್ಯದ ಆಕರ್ಷಣೆ ಮತ್ತು ಹರ್ಷದ ಕ್ಷಣಗಳು ಮಿಳಿತಗೊಂಡಿದ್ದವು.

1, 2, 5, 10, 20, 25, 50 ಪೈಸೆ (ನಾಣ್ಯ)ಗಳು ಹಾಗೂ 1, 2, 5 ಮತ್ತು ಅದಕ್ಕಿಂತಲೂ ಹೆಚ್ಚು ಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಹೊಲದಲ್ಲಿ ಬೆಳೆದ ಹತ್ತಿ, ಹಸಿ ಶೇಂಗಾ, ಸಜ್ಜೆ, ಜೋಳ ಇಂಥವುಗಳನ್ನೇ ಕೊಟ್ಟು ಅಂಗಡಿಗಳಲ್ಲಿ ದಿನಸಿ ಕೊಳ್ಳುತ್ತಿದ್ದರು. ಬೆಲ್ಲ, ಪುಟಾಣಿ, ಚುರಮುರಿ ಉಂಡಿ, ಪೆಪ್ಪರಮೆಂಟು, ಬಿಸ್ಕತ್ತು, ದಪ್ಪನೆಯ ಬ್ರೆಡ್ಡು, ಲಿಂಬಿ ಗೋಳಿ, ಜುನ್ ಜುನ್ ಗೋಳಿ, ಶೇಂಗಾ ಗೋಳಿ, ಹುರಕಡ್ಲಿ, ವಟಾಣಿ ಇಂಥವುಗಳೇ ನಮ್ಮ ತಿಂಡಿಗಳಾಗಿದ್ದವು. ಅವುಗಳನ್ನು ಅಂಗಿ, ಚಡ್ಡಿ ಕಿಸೆಯಲ್ಲಿ ಹಾಕಿಕೊಂಡು ತಿನ್ನುತ್ತಾ ಮೈಮರೆಯುತ್ತಿದ್ದೆವು. ಜೇಬೆಲ್ಲ ಜಿಬಿಜಿಬಿಯಾಗಿ ರಾತ್ರಿ ಮಲಗಿದಾಗ ಇರುವೆಗಳು ಮೆತ್ತಿಕೊಂಡು ಕಿರಿಕಿರಿ ಉಂಟುಮಾಡುತ್ತಿದ್ದವು.

ಫೋನು, ಮೊಬೈಲು, ಕಂಪ್ಯೂಟರ್ ಇಲ್ಲದ ಕಾಲದಲ್ಲಿ ನಮ್ಮ ಬಾಲ್ಯ ಅರಳುತ್ತಿತ್ತು.‌ ಪಿಜ್ಜಾ, ಬರ್ಗರ್, ಲಾಲಿಪಪ್ಪು ನಮ್ಮ ಕನಸಲ್ಲೂ ಬಾರದ ತಿಂಡಿಗಳಾಗಿದ್ದವು. ಖಾಲಿ ಕಡ್ಡಿ ಪೆಟ್ಟಿಗೆಗಳೇ ಮೊಬೈಲು, ಗರ್ದಿಗಮ್ಮತ್ತೇ ಸಿನಿಮಾ ಥೇಟರ್, ಮುಟಗಿ, ಥಾಲಿಪಟ್ಟಿಗಳೇ ಫಿಜ್ಜಾ ಬರ್ಗರ್, ಹುಂಚಿ ಕಡ್ಡಿಯೇ ಲಾಲಿಪಪ್ಪು, ಹಾಲು, ಮಜ್ಜಿಗೆಗಳೇ ಕೂಲ್ಡ್ರಿಂಕ್ಸ್ ಆಗಿದ್ದವು.

ನೆರೆ ಹೊರೆ, ಬಂಧು ಬಳಗ, ಗುರು ಹಿರಿಯರು ಹೀಗೆ ಇರುವ ಸಂಬಂಧಗಳು ದಟ್ಟವಾಗಿರುವ ಕಾಲದಲ್ಲಿ ನಮಗೇನೂ ಆಗುತ್ತಿರಲಿಲ್ಲ. ಪಾಟಿ ಪೆನ್ಸಿಲು, ಅರ್ಧಬೆಲೆಗೆ ಕೊಂಡ ಪುಸ್ತಕಗಳು, ಹಾಳೆ ಹರಿಯುವ ಮಸಿ ಪೆನ್ನುಗಳು, ತಗಡಿನ ಕಂಪಾಸು ಮೊದಲಾದವುಗಳನ್ನು ತುಂಬಿಸಿಕೊಂಡ ವಾಯರಿನ ಚೀಲ (ಪಾಟಿಚೀಲ) ಭುಜಕ್ಕೇರಿಸಿ ಶಾಲೆಗೆ ಹೋಗುವ ನಮ್ಮ ಹುರುಪು ನೋಡುಗರಿಗೆ ಖುಷಿ.

ಪಾಟಿಯ ಒಂದು ಭಾಗದಲ್ಲಿ ಶಬ್ದ, ಕ ಕಾ ಬಳ್ಳಿ, ಶುದ್ಧ ಬರಹ, ಇನ್ನೊಂದು ಕಡೆ ಮಗ್ಗಿ, ಲೆಕ್ಕ ಬರೆದು ರಾತ್ರಿ ಮನೆಯ ಗೋಡೆಯಲ್ಲಿ ತೂಗು ಹಾಕುತ್ತಿದ್ದೆವು. ಮರುದಿನ ಅವೆಲ್ಲ ಅಳಿಸಿ ಹೋಗದಂತೆ ಜತನದಿಂದ ಒಯ್ದು ಗುರುಗಳಿಗೆ ತೋರಿಸಿ ಪ್ರಶಂಸೆ ಪಡೆದುಕೊಳ್ಳುತ್ತಿದ್ದೆವು. ಹೆಚ್ಚಿನ ವರ್ಗಕ್ಕೆ ಹೋದಂತೆ ಪೆನ್ನು, ನೋಟುಪುಸ್ತಕ ಬಳಕೆ. ಬಡ ಮಕ್ಕಳು ಅಂಗಡಿಗೆ ಹೋಗಿ 5 ಪೈಸೆ ಕೊಟ್ಟು ಪೆನ್ನಿಗೆ ಮಸಿ ತುಂಬಿಸಿಕೊಳ್ಳುತ್ತಿದ್ದರು. ತಮ್ಮ ಅಂಗಡಿಗೇ ಮಕ್ಕಳು ಬರಲಿ ಎಂಬ ಉದ್ದೇಶದಿಂದ ಅಂಗಡಿಕಾರರು ಚೂರು ಬೆಲ್ಲ ಕೊಟ್ಟು ಕಳಿಸುತ್ತಿದ್ದರು. ನಾವು ದಿನಸಿ ಕೊಂಡಾದ ಮೇಲೆ ಕೈ ಮುಂದೆಮಾಡಿ ‘ಜರಾ ಬೆಲ್ಲ ಕೊಡ್ರಿ’ ಎಂದು ಕೇಳಿದ ನೆನಪು ಈಗಲೂ ಹಾಗೇ ಇದೆ.

ಪ್ರತೀ ಶನಿವಾರಕ್ಕೊಮ್ಮೆ ಶಾಲೆಯ ವರ್ಗ ಕೋಣೆಗಳನ್ನು ಸೆಗಣಿಯಿಂದ ಸಾರಿಸುವ ಕಾರ್ಯಾನುಭವ. ಹುಡುಗರು ಸೆಗಣಿ ಸಂಗ್ರಹಿಸಿ ತಂದರೆ, ಹುಡುಗಿಯರು ಚೆನ್ನಾಗಿ ಸಾರಿಸುತ್ತಿದ್ದರು. ಗುರುಗಳ ಸಂಖ್ಯೆ ಕಡಿಮೆ, ಅವರ ಮೇಲೆ ಭಕ್ತಿ, ಗೌರವ ಅಪಾರ. ಬೆಳಗ್ಗೆ ಪಾಠ, ಮಧ್ಯಾಹ್ನ ಕಂಠಪಾಟ, ಆಟ ಹೀಗಿತ್ತು ಕಲಿಕೆ. ಪಠ್ಯದಲ್ಲಿನ ಹಾಡುಗಳು, ಮಗ್ಗಿಗಳನ್ನು ಪ್ರತಿಯೊಬ್ಬ ವಿದ್ಯಾರ್ಥಿ ಬಾಯಿಪಾಠ ಮಾಡಲೇಬೇಕು. ಇಲ್ಲದಿದ್ದರೆ ಹಿರೇಮಣಿಗಳಿಂದ ಕಪಾಳಮೋಕ್ಷ ತಪ್ಪಿದ್ದಲ್ಲ. ಬಿಸಿಯೂಟ ಆಗ ಇರಲಿಲ್ಲ. ಆದರೆ, ಒಳ್ಳೆ ಪರಿಮಳಯುಕ್ತ ಉಪ್ಪಿಟ್ಟು ಇರುತ್ತಿತ್ತು. ಅದನ್ನು ಹಿರಿಯ ವಿಧ್ಯಾರ್ಥಿಗಳು ತಯಾರಿಸುತ್ತಿದ್ದರು. ಗುರುಗಳು ತಮ್ಮ ಸ್ವಂತ ಊರುಗಳಿಂದ ಸೈಕಲ್ ಇಲ್ಲವೇ ಕಾಲ್ನಡಿಗೆಯಿಂದಲೆ ಬರುತ್ತಿದ್ದರು. ಅವರ ಬರುವಿಕೆಯನ್ನು ನೋಡುವುದೇ ಬಲು ಚಂದ. ಅವರು ಬರದಿದ್ದರಂತೂ ಚಂದವೋ ಚಂದ.

ಋತುಮಾನಕ್ಕೆ ತಕ್ಕಂತೆ ನಮ್ಮ ಬಾಲ್ಯದ ಶೈಲಿ ಬದಲಾಗುತ್ತಿತ್ತು. ಬೇಸಿಗೆ ರಜೆ ಬಿಟ್ಟರೆ ಸಾಕು, ನಮ್ಮನ್ನು ದನಕರು ಕಾಯಲಿಕ್ಕೆ ಹಚ್ಚುತ್ತಿದ್ದರು. ಆ ವೇಳೆ ಗೆಳೆಯರ ಜೊತೆ ದನ, ಎಮ್ಮೆ, ಆಡು, ಕುರಿ ಮೇಯಿಸಿಕೊಂಡು ಬರಲು ಅಡವಿಗೆ ಹೋಗಿ ಮಧ್ಯಾಹ್ನದ ಕಡು ಬಿಸಿಲಿನಲ್ಲಿ ಅವುಗಳನ್ನು ನೆರಳಿಗೆ ಬಿಟ್ಟು ಕೆರೆ, ಬಾವಿ, ಹಳ್ಳಗಳಲ್ಲಿ ಈಜಾಡುವುದು, ಗಿಡಮಂಗನ ಆಟ ಆಡುವುದು, ಅಡವಿಯಲ್ಲಿ ಸಿಗುವ ಹುಲ್ಲಿಕಾಯಿ, ಕವಳಿ ಹಣ್ಣು, ಸಿಂಬಳಕಾಯಿ, ಮುಳ್ಳುಗಳ್ಳಿ ಹಣ್ಣು, ಗೆಣಸು, ಮಾವಿನಕಾಯಿ ಹುಡುಕಿ ತಿನ್ನುವುದು, ಮುಳ್ಳು ಕಂಟಿ ಪೊದೆಗಳಲ್ಲಿನ ಜೇನು ಬಿಡಿಸಿ ಸವಿಯುವುದು. ಹೋಗುವಾಗ, ಬರುವಾಗ ಎಮ್ಮೆ ಮೇಲೆ ಕುಳಿತು ಸವಾರಿ ಮಾಡುವುದು, ದಾರಿಯಲ್ಲಿ ಚಲಿಸುವ ಎತ್ತಿನ ಬಂಡಿ ಜಿಗಿದು ಹತ್ತುವುದು ಹೀಗೆ ಮಾಡುತ್ತಿರುವಾಗ ಹಲವು ಅವಘಡಗಳು ಸಂಭವಿಸಿದರೂ ಏನೂ ಆಗದವರಂತೆ ಮನೆ ಸೇರುತ್ತಿದ್ದೆವು. ಅಂಥ ಪೆಟ್ಟುಗಳು ಈಗ ನೋವಾಗಿ ಕಾಡಿದರೂ ನೆನಪುಗಳು ನಗು ತರಿಸುತ್ತವೆ.

ಮಳೆಗಾಲವಂತೂ ನಮಗೆ ಹಿಗ್ಗಿನ ಬುಗ್ಗೆಯಾಗುತ್ತಿತ್ತು. ಜೋರು ಮಳೆಯಿಂದ ಹರಿವ ನೀರಿಗೆ ಒಡ್ಡು ಕಟ್ಟಿ ಅಲ್ಲಲ್ಲಿ ಸಣ್ಣ ತೂತು ಕೊರೆದು ನೀರು ಹರಿಸಿ ಕೆಳಗಡೆ ಮಾಡಿದ ತೋಟಕ್ಕೆ ನೀರಣಿಸಿ ಬೆಳೆ ಬೆಳೆಯುವುದು, ಬಾವಿ, ಕೆರೆ, ಹೊಳೆ ತುಂಬಿ ಹರಿಯುವುದನ್ನು ಓಡೋಡಿ ಹೋಗಿ ಮನ ತಣಿಯುವವರೆಗೆ ನೋಡುವುದು, ತಪತಪನೆ ತೊಯ್ದು ನಿಂತ ಮರಗಿಡಗಳ ಕೆಳಗೆ ನಿಂತು ರೆಂಬೆ ಜಾಡಿಸಿ ಮೈ ತೊಯ್ಸಿಕೊಂಡು ಸಂತಸಪಡುವುದು, ತಿಪ್ಪೆಗಳಲ್ಲಿ ಮೊಳೆತ ಸಸಿಗಳನ್ನು ತಂದು ಮನೆಯಂಗಳದಲ್ಲಿ ನೆಟ್ಟು ಬೆಳೆಸುವುದು ಹೀಗೆಲ್ಲ ಮಾಡಿ ಒಬ್ಬರಿಗೊಬ್ಬರು ನಮ್ಮ ನಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೆವು. ಎಷ್ಟೇ ಚಳಿ ಇದ್ದರೂ ಅದಕ್ಕಂಜದೆ ಚಳಿಗಾಲವನ್ನು ಅನುಭವಿಸುತ್ತಿದ್ದೆವು, ಗೆಳೆಯರೊಂದಿಗೆ ಸೇರಿ ಅವರ ಹೊಲ ತೋಟಗಳಿಗೆ ಹೋಗಿ ಸೀತನಿ, ಕಬ್ಬು, ಸುಲಗಾಯಿ, ಬಾರಿಹಣ್ಣು, ಸೌತೆಕಾಯಿ, ಪುಟ್ಟಿಕಾಯಿ ಇಂಥವುಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆವು.

ಕಾರ ಹುಣ್ಣುಮೆ ಎತ್ತುಗಳ ಓಟ, ಮಣ್ಣೆತ್ತಿನ ಅಮವಾಸ್ಯೆಯ ಮಣ್ಣಿನ ಎತ್ತುಗಳು, ಕಡ್ಲಿಕಡಬು ಹುಣ್ಣಮೆಯ ಕಡಬು ಕರ್ಚಿಕಾಯಿ, ನಾಗರಪಂಚಮಿಯ ಜೋಕಾಲಿ, ನೂಲು ಹುಣ್ಣಿಮೆ ರಾಖಿ, ಬೆನಕನ ಅಮವಾಸೆಯ ಗಣಪತಿ, ಅನಂತನ ಹುಣ್ಣಿಮೆ ವೃತ, ಮಹಾನವಮಿಯ ಬನ್ನಿ ಬಂಗಾರ, ಸೀಗಿ ಹುಣ್ಣಿಮೆ ಭೂಮಿ ಪೂಜೆ, ದೀಪಾವಳಿ ಪಟಾಕಿ, ಗೌರಿ ಹುಣ್ಣಿಮೆ ಸಕ್ರಿ ಆರತಿ, ಛಟ್ಟಿ ಅಮವಾಸ್ಯೆ ಜಾತ್ರೆ, ಎಳ್ಳು ಅಮವಾಸ್ಯೆಯ ಚರಗ, ಸಂಕ್ರಂತಿ ಕುಸುರೆಳ್ಳು, ಬನದ ಹುಣ್ಣಿಮೆ ಬಾದಾಮಿ ಬನಶಂಕರಿ ಜಾತ್ರೆ, ಭಾರತ ಹುಣ್ಣಿಮೆ ಸವದತ್ತಿ ಯಲ್ಲಮ್ಮನ ಜಾತ್ರೆ, ಶಿವರಾತ್ರಿ ಜಾಗರಣೆ, ಹೋಳಿ ಹಣ್ಣಿಮೆ ಬಣ್ಣ, ಯುಗಾದಿ ಬೇವು ಬೆಲ್ಲ, ದವನದ ಹುಣ್ಣಿಮೆ ಹನುಮ ನಮಗೆ ಎಷ್ಟೊಂದು ಹಬ್ಬಗಳು.

ಇಂಥ ಬಾಲ್ಯ ಈಗೀನ ಮಕ್ಕಳಿಗೆ ಎಲ್ಲಿದೆ? ಅವರ ಬಾಲ್ಯ ಮೊಬೈಲ್, ಕಂಪ್ಯೂಟರ್, ಹೋಂವರ್ಕ್‌ಮಯವಾಗಿದೆ. ಕಣ್ಣಾ ಮುಚ್ಚಾಲೆ, ಚಿಣ್ಣಿದಾಂಡು, ಹಪ್ಪೆದುಪ್ಪೆ, ಗೋಲಿ, ಕುಂಟಾಬಿಲ್ಲೆ, ಆಣಿಕಲ್ಲು, ಹುಲಿಮನೆ, ಚೌಕಾಬಾರಾ, ಲಗೋರಿ, ಕಾನ್ ಕಾನ್ ಉತ್ತತ್ತಿ, ಬಡಿಗೆ ಚಿಮ್ಮುವಿಕೆ, ಸರಗೆರಿ, ಕಬಡ್ಡಿ, ಅಂಡ್ಯಾಳ, ಆಕಳ ಪತ್ತಾ, ಬಳಚೂರ, ಗಾಲಿ ಉರುಳಿಸುವುದು, ಲಗೋರಿ ಆಟಗಳೆಲ್ಲ ತೆರೆಮರೆಗೆ ಸರಿದಿವೆ. ಮೊಬೈಲ್‌ ಒಂದೇ ಅಂಗೈಯೊಳಗಿನ ಆಟದ ಅಂಗಳವಾಗಿದೆ. ಏಯ್‌, ಈಗೇನಿಲ್ಲ ತಗೀರಿ. ಎಷ್ಟೊಂದು ಚಂದಿತ್ತು ನಂಬಾಲ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT