ಶುಕ್ರವಾರ, ಜುಲೈ 30, 2021
24 °C

ಚಾಕೊಲೇಟ್, ಕುಟ್ಟಂಡಿ ದೆವ್ವದ ಕಥೆ ಇತ್ಯಾದಿ...

ಸಾವಿತ್ರಿ ಸಿರ್ಸಿ Updated:

ಅಕ್ಷರ ಗಾತ್ರ : | |

Prajavani

ಇಂದಿನ ಮಕ್ಕಳು, ಚಾಕೊಲೇಟ್, ಮ್ಯಾಗಿ, ಪಾಸ್ತಾ ಇತ್ಯಾದಿಗಳನ್ನು ಪಿಚಿ, ಪಿಚಿ ಎಂದು ಜಗಿಯುವುದನ್ನು ನೋಡುವಾಗ ಅಯ್ಯೋ ಪಾಪ ಎನಿಸುತ್ತದೆ. ನಮ್ಮ ಚಿಕ್ಕಂದಿನ ನೆನಪುಗಳು ಕಾಡುತ್ತವೆ. ಹಲಸಿನ ಬೀಜ ಸುಟ್ಟ ಪರಿಮಳ, ಎಲ್ಲೆಲ್ಲೂ ಪಸರಿಸ ತೊಡಗುತ್ತದೆ. ರಜೆಯಲ್ಲಿ ಅಜ್ಜಿ ಮನೆಗೆಂದು ಹಾತೊರೆದು ಹೋಗುತ್ತಿದ ದಿನಗಳು ಎಷ್ಟು ಸೊಗಸಾಗಿರುತ್ತಿದ್ದವು. ನಾವೇ ಕಿತ್ತು ತಂದು ದಾರಕ್ಕೆ ಕಟ್ಟಿಡುತ್ತಿದ್ದ, ಮುತ್ತುಗದ ಎಲೆ, ಚಿಕ್ಕಮ್ಮ ಹಲಸಿನ ಹಣ್ಣು ಬಿಡಿಸಿ ತೊಳೆಗಳನ್ನು ಮುತ್ತುಗದ ಎಲೆಯ ಮೇಲೆ ಎಲ್ಲರಿಗೂ ಸಮನಾಗಿ ಹಂಚಿಕೊಡುತ್ತಿದ್ದರು. ಬೀಜಗಳನ್ನು ಬೆಂಬೂದಿಯಲ್ಲಿ ಸುಟ್ಟು ತಿನ್ನುತ್ತಿದ್ದ ರುಚಿ ಇಂದಿನ ಮಕ್ಕಳಿಗೆ ಪರಿಚಯವೇ ಇಲ್ಲ. ಅಡಿಗೆ ಮನೆಯಿಂದ ಹುಣಸೇ ಹಣ್ಣು ಕದ್ದುತಂದು ಅದಕ್ಕೆ, ಉಪ್ಪು, ಜೀರಿಗೆ, ಚೂರು ಬೆಲ್ಲ ಹಾಕಿ ಕುಟ್ಟಿ ಕಡ್ಡಿಗೆ ಅಂಟಿಸಿ ಚೀಪಿದ ಕುಟ್ಟಂಡಿ ಆಹಾ...  

ಬೆಳಿಗ್ಗೆ ಬೇಗೆದ್ದು, ಗಂಗರೈತ ಕಟ್ಟಿದ ಎತ್ತಿನ ಗಾಡಿಯಲ್ಲಿ ಕೂತು ಹೊಲಕ್ಕೆ ಹೋಗಿ, ಅವರೆಕಾಯಿ ಬಿಡಿಸಿತಂದು, ತರಚಿದ ಕೈಕಾಲುಗಳಿಗೆ, ಎಣ್ಣೆ ಸವರಿ, ಉರಿಯಾದರೂ, ಊಟಕ್ಕೆ, ಅವರೆ ಕಾಯಿ ಹುಳಿ, ಮುದ್ದೆ ನುಂಗುವಾಗ, ಖುಷಿಯೋ, ಖುಷಿ. ಅಜ್ಜಿ ಆರಿಸಿ ಕೊಟ್ಟ ಎಳೆಯ ಅವರೇ ಕಾಳುಗಳನ್ನು ಕಡ್ಡಿಗೆ ಪೋಣಿಸಿ, ಅದನ್ನು ಕೆಂಡದ ಮೇಲೆ ಸುಟ್ಟು ಉಪ್ಪು, ತುಪ್ಪ ಸವರಿ ಸವಿಯುತ್ತಿದ್ದೆವು.

ಅಂದಿನ ದಿನಗಳಲ್ಲಿ, ಕಾಫಿ, ಮೈಲಿಗೆಯೆಂದು ಅದಕ್ಕೆ ಅಡಿಗೆ ಮನೆಗೆ ಪ್ರವೇಶವಿರಲಿಲ್ಲ. ಕೊಟ್ಟಿಗೆಯ ಪಕ್ಕದಲ್ಲಿದ್ದ ಕೋಣೆಯಲ್ಲಿ, ಪುಟ್ಟ ಅಗ್ಗಿಷ್ಟಿಕೆ ಇಟ್ಟು, ಚಿಕ್ಕಮ್ಮ ನಮಗೆಲ್ಲಾ ಬೆಲ್ಲ ಹಾಕಿದ ಕಾಫಿ ಮಾಡಿಕೊಡುತ್ತಿದ್ದಳು. ನಾವೊಮ್ಮೆ ನವಜಾತ ಎಮ್ಮೆ ಕರುವಿಗೆ ಕಾಫಿ ರುಚಿ ತೋರಿಸಿ ಬೈಸಿಕೊಂಡಿದ್ದೆವು. ಅಜ್ಜಿಯಿಂದ ಹಣ ಪಡೆದು, ಸಂತೆಗೆ ಹೋಗಿ, ಬಣ್ಣ, ಬಣ್ಣದ ಜ್ಯೂಸ್‌ಗಳನ್ನು ಕುಡಿದು, ಸಂಭ್ರಮಿಸುತ್ತಿದ್ದೆವು. ಸಂಜೆ, ಎಮ್ಮೆಗೆ ಸ್ನಾನ ಮಾಡಿಸಲು ಕೆಲಸದ ದೊಡ್ಡಿ ಹೊರಟಾಗ, ಚಿಕ್ಕಮ್ಮಂದಿರು, ಬುಟ್ಟಿಯಲ್ಲಿ ತೊಳೆಯುವ ಪಾತ್ರೆ ತುಂಬಿ ಹೊರಡುತ್ತಿದ್ದರು. ಅವರ ಹಿಂದೆ ನಾವುಗಳು, ಸದಾ ಹಾಜರ್, ಉಜ್ಜಿ ಕೊಟ್ಟ ಪಾತ್ರೆಗಳನ್ನು ಗಲಬರಿಸಿ, ಎಮ್ಮೆ ಬಾಲದ ಕೂದಲಿಗೆ ಜಡೆಹೆಣೆದು, ಬಟ್ಟೆಯೆಲ್ಲಾ ಒದ್ದೆ ಮಾಡಿಕೊಳ್ಳುತ್ತಿದ್ದೆವು. ಮನೆಗೆ ಹಿಂದಿರುಗಿ, ಉಯ್ಯಾಲೆ ಮಣೆ ಮೇಲೆ ಫಳ, ಫಳ, ಹೊಳೆಯುವ ಹಿತ್ತಾಳೆ ಪಾತ್ರೆಗಳನ್ನು ಅಜ್ಜಿಯ ಆಣತಿಯಂತೆ ಜೋಡಿಸುತ್ತಿದ್ದೆವು.

ಒಮ್ಮೊಮ್ಮೆ, ಕಬ್ಬು ಅರೆಯುವ ಆಲೇಮನೆಗೆ ಚೊಂಬು ತೆಗೆದುಕೊಂಡು ಹೋಗಿ, ಬೇಕಾದಷ್ಟು ಕಬ್ಬಿನ ಹಾಲು ಕುಡಿದು ಸಂತೃಪ್ತರಾಗುತ್ತಿದ್ದೆವು. ಮನೆಯ ಹಿಂದುಗಡೆಯಿದ್ದ ಮಾವಿನ ತೋಪಿಗೆ ಹೋಗಿ, ಕಾಯಿ ಕಿತ್ತುತಂದು, ಕತ್ತರಿಸಿ, ಉಪ್ಪು, ಖಾರಾ ಹಾಕಿ ತಿಂದು, ತಾತನಿಂದ ಬೈಗುಳ ಪಡೆಯುತ್ತಿದ್ದೆವು. ಟೆಂಟ್ ಟಾಕೀಸಿನಲ್ಲಿ, ಚಾಪೆ ಹಿಡಿದುಕೊಂಡು ಹೋಗಿ, ಕೂತು, ಮಲಗಿ ಸಿನಿಮಾಗಳನ್ನು ನೋಡಿದ ನೆನಪುಗಳು ಮರೆಯುವಂತೆಯೇ ಇಲ್ಲ.

ರಾತ್ರಿ ಜಗಲಿ ಕಟ್ಟೆಯ ಮೇಲೆ ತಾತ ನಡೆಸುತ್ತಿದ್ದ ಬೈಠಕ್‌ಗಳಿಗಿಂತ, ಬೃಂದಾವನ ಬಳಿ ಕೆಂಪು ಸೀರೆಯುಟ್ಟ, ಮುತ್ತಜ್ಜಿ ಮತ್ತು ಅವರ ಗೆಳತಿ ಹೇಳುತ್ತಿದ ದೆವ್ವದ ಕಥೆಗಳೇ ಆಕರ್ಷಕವಾಗಿರುತ್ತಿದ್ದವು. ದೆವ್ವಗಳು ಕಾಲನ್ನೇ ಒಲೆಯಲ್ಲಿಟ್ಟು ಉರಿಸಿ ಅಡಿಗೆ ಮಾಡುತ್ತಿದ್ದವು, ಎಂಬ ಕಥೆ ಕೇಳಿ ಹೆದರುತ್ತಿದ್ದೆವು.

ಶಾಲೆಯಲ್ಲಿ ಪ್ರಾಧ್ಯಾಪಕಿಯಾಗಿದ್ದ ಚಿಕ್ಕಮ್ಮ ಊಟ ಮುಗಿದ ನಂತರ, ನಮ್ಮೆಲ್ಲರಿಗೂ ಉತ್ತಲೇಖನ ಬರೆಸುತ್ತಿದ್ದಳು. ಅಗ್ಗಿಷ್ಟಿಕೆ ಎಂದು ಹೇಳಿದಾಗ, ಅಪ್ಪಿಷ್ಟ, ಆಶೀರ್ವಾದಕ್ಕೆ ಅರ್ಶಿವಧೆ, ಇತ್ಯಾದಿ ಬರೆದ ತಪ್ಪಿಗೆ ಹತ್ತು ಬಾರಿ ಅದನ್ನೇ ಬರೆಯುವ ಶಿಕ್ಷೆ ಪಡೆಯುತ್ತಿದ್ದೆವು. ರಾತ್ರಿ ಉದ್ದಕ್ಕೆ ಹಾಸಿದ ಹಾಸಿಗೆಯಲ್ಲಿ ಎಲ್ಲರೂ ಒಟ್ಟಿಗೆ ಮಲಗಿದಾಗ, ಬುಡ್ಡಿ ದೀಪದ ನೆರಳುಗಳು ದೆವ್ವಗಳಾಗಿ ಕಂಡು, ಮುಸುಕು ಬೀರಿ ಮಲಗುತ್ತಿದ್ದೆವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು