ಮಂಗಳವಾರ, ಜನವರಿ 19, 2021
17 °C

ಸಂಬಂಧ: ಪ್ರೀತಿಯ ಗಾಳಿಯು ಬೀಸುತಿದೆ; ಹಟ್ಟಿ–ಮೊಹಲ್ಲಾಗಳ ನಡುವೆ...

ಕೆ.ಎಂ.ಸತೀಶ್‌ ಬೆಳ್ಳಕ್ಕಿ Updated:

ಅಕ್ಷರ ಗಾತ್ರ : | |

Prajavani

ಗದಗ ನಗರದಲ್ಲಿ ಕುವೆಂಪು ಅವರ ಜನ್ಮದಿನದಂದು ನಡೆದ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ನಡೆಯಲಿರುವ ‘ಸಂವಿಧಾನ ಸಾಕ್ಷಿ’ ಮದುವೆಗಳಿಗೆ ಫುಲೆ ದಂಪತಿಯ ವಿಚಾರಧಾರೆಗಳೇ ಸ್ಫೂರ್ತಿ. ಅವರ ಕ್ರಾಂತಿಕಾರಕ ನಿಲುವುಗಳಿಂದ ಇಂದು ಹಟ್ಟಿ ಮೊಹಲ್ಲಾಗಳ ನಡುವೆ ಕೂಡ ಪ್ರೀತಿಯ ಗಾಳಿ ಬೀಸುತಿದೆ. ಗಡಿಗಳನ್ನು ಮೀರಿ ಗೆಳೆತನ ಚಿಗುರುತಿದೆ.

ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನದಂದು ಅಂತರ್ಜಾತಿ ವಿವಾಹ ಮಾಡಿಸುತ್ತಿರುವ ಗದುಗಿನ ಗೆಳೆಯರು ಈವರೆಗೆ 20ಕ್ಕೂ ಹೆಚ್ಚು ಸರಳ ವಿವಾಹ ನೆರವೇರಿಸಿದ್ದಾರೆ. ಫುಲೆ ಅವರ ವಿಚಾರಧಾರೆಗಳನ್ನು ತಳ ಸಮುದಾಯದ ಜನರಿಗೆ ಮುಟ್ಟಿಸಬೇಕು ಎಂಬ ಉದ್ದೇಶದಿಂದ ‘ಸಾವಿತ್ರಿಬಾಯಿ ಫುಲೆ’ ಪುಸ್ತಕದಲ್ಲಿಯೇ ಲಗ್ನ ಪತ್ರಿಕೆ ಮುದ್ರಿಸಿ ಹಂಚುವ ಮೂಲಕ ವಿಭಿನ್ನತೆ ಮೆರೆಯುತ್ತಿದ್ದಾರೆ.

ಸಾಮಾಜಿಕ ಸುಧಾರಣೆಯ ಆಶಯದಿಂದ 19ನೇ ಶತಮಾನದಲ್ಲಿ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿ ಹೊತ್ತಿಸಿದ ಕ್ರಾಂತಿಯ ಬೆಳಕು ಇಂದಿಗೂ ಅಲ್ಲಲ್ಲಿ ಪ್ರಜ್ವಲಿಸುತ್ತಿದೆ. ಸಂಪ್ರದಾಯಬದ್ಧ ಮದುವೆಗಳ ಬಗ್ಗೆ ಆಕ್ಷೇಪ ಎತ್ತಿದ ಅವರು, ಅಂತರ್ಜಾತಿ ವಿವಾಹದ ಪ್ರತಿಪಾದಕರಾಗಿದ್ದರು. ಫುಲೆ ಅವರ ಕ್ರಾಂತಿಕಾರಿ ವಿಚಾರಧಾರೆಗಳಿಂದ ಪ್ರೇರಿತರಾಗಿ ಇಂದು ಅನೇಕರು ಅಂತರ್ಜಾತಿ ವಿವಾಹಕ್ಕೆ ಮುಂದಾಗುತ್ತಿದ್ದಾರೆ.

ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದ ಸಾವಿತ್ರಿಬಾಯಿ ಫುಲೆ, ಅವಿವಾಹಿತ ಮಹಿಳೆಯರಿಗೆ ಜನಿಸಿದ ಮಕ್ಕಳನ್ನೂ ಸಾಕಿ ಸಲುಹಿದರು. ಇದರ ಜತೆಗೆ ‘ಸತ್ಯಶೋಧನಾ ಸಮಾಜ’ದ ವತಿಯಿಂದ ಸಾಂಪ್ರದಾಯಿಕವಲ್ಲದ ಹಾಗೂ ಸಂಪ್ರದಾಯಗಳನ್ನು ವಿರೋಧಿಸುವಂತಹ ರೀತಿಯಲ್ಲಿ ಸರಳ ಮದುವೆಗಳನ್ನು ಮಾಡಿಸಿದರು. 12ನೇ ಶತಮಾನದ ಶರಣ ಚಳವಳಿಯ ನಂತರ ವಿವಾಹ ಮತ್ತು ಕೌಟುಂಬಿಕ ವ್ಯವಸ್ಥೆ ಒಳಗೆ ಆಗಿರುವಂತಹ ಬಹುದೊಡ್ಡ ಬದಲಾವಣೆಯಾಗಿ ಈ ಬೆಳವಣಿಗೆಯನ್ನು ಗುರುತಿಸಬಹುದು.

ಸರಳ ವಿವಾಹ ನೆರವೇರಿಸಲು ಅಂದು ಫುಲೆ ದಂಪತಿ ಒಂದು ವಿವಾಹ ಸಂಹಿತೆ ರಚಿಸಿದ್ದರು. ಗದುಗಿನ ಗೆಳೆಯರ ಬಳಗದವರು ‘ಸಂವಿಧಾನ ಸಾಕ್ಷಿ’ ವಿವಾಹ ನಡೆಸುವ ವೇಳೆ ಬೋಧಿಸುವ ಪ್ರಮಾಣವಚನವನ್ನು ಕೂಡ ಫುಲೆ ಹಾಗೂ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹ ಸಂಹಿತೆ ಸಮೀಕರಿಸಿ ರಚಿಸಲಾಗಿದೆ.

‘ಫುಲೆ ಅವರು ಸತ್ಯಶೋಧನಾ ಸಮಾಜದ ವತಿಯಿಂದ ಪ್ರಾರಂಭಿಸಿದ ಸರಳ ಹಾಗೂ ಅಂತರ್ಜಾತಿ ವಿವಾಹಗಳು ಇಂದಿನ ಅಗತ್ಯ. ಈಗ ಎಲ್ಲರೂ ಸ್ಪರ್ಧೆಗೆ ಬಿದ್ದವರಂತೆ ಮದುವೆಗಳಿಗೆ ದುಂದುವೆಚ್ಚ ಮಾಡುತ್ತಾರೆ. ಸ್ವಜಾತಿ ಒಳಗೇ ಮಾಡುವಂತಹ ಮದುವೆಗಳು ಕೂಡ ಅನೇಕರಿಗೆ ಇಂದು ಉಸಿರು ಕಟ್ಟಿಸುತ್ತಿವೆ. ನಮ್ಮೊಳಗೆ ಪ್ರೀತಿ, ಪ್ರೇಮ ಮೊಳೆತಿದ್ದರೂ ಅದನ್ನು ಮೀರಲಿಕ್ಕೆ ಆಗದಂತಹ ವಾತಾವರಣ ಸಮಾಜದಲ್ಲಿ ಇದೆ. ಎಷ್ಟೋ ಜನರು ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರೇಮ ವಿವಾಹ ಪ್ರೋತ್ಸಾಹಿಸಲು ಹಾಗೂ ಇಡೀ ಸಮಾಜದ ಕಟ್ಟುಗಳನ್ನು ಮೀರಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಮುಂದೆ ಬರುವವರಿಗೆ ನೆರವು ನೀಡುವ ಉದ್ದೇಶದಿಂದ ಸಂವಿಧಾನ ಸಾಕ್ಷಿ ವಿವಾಹ ಮಾಡುತ್ತಿದ್ದೇವೆ’ ಎನ್ನುತ್ತಾರೆ ಲಡಾಯಿ ಪ್ರಕಾಶನದ ಬಸು. ಗದಗ ಭಾಗದಲ್ಲಿ ಸರಳ ವಿವಾಹಗಳು ನಡೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ಇದು ರಾಜ್ಯ, ದೇಶದೆಲ್ಲೆಡೆಗೆ ವಿಸ್ತರಿಸಬೇಕು. ಕುವೆಂಪು ಸರಳ ವಿವಾಹ ಪದ್ಧತಿ ರೂಪಿಸಿದರು. ಅದನ್ನು ಅನೇಕರು ಮುಂದುವರಿಸಿಕೊಂಡು ಹೋಗುತ್ತಿರುವುದು ಆಶಾದಾಯಕ ಬೆಳವಣಿಗೆ ಎಂಬುದು ಅವರ ವಿವರಣೆ.

ವಿವಾಹ ಎಂಬುದು ಸಂಪ್ರದಾಯ, ಮತ ಧರ್ಮಗಳ ನಡುವೆ ಸಿಕ್ಕಿಹಾಕಿಕೊಂಡು ಸನಾತನ ವ್ಯವಸ್ಥೆಯಾಗಿ, ಆಚರಣೆಗಳೇ ಪ್ರಧಾನ ಎನ್ನುವಂತಾಗಿದೆ. ಸಾವಿತ್ರಿಬಾಯಿ ಫುಲೆ ಅದನ್ನು ನಿರಾಕರಿಸುವ ಕೆಲಸ ಮಾಡಿದರು. 12ನೇ ಶತಮಾನದಲ್ಲಿ ಶರಣರು ಮಾಡಿದ ಕೆಲಸಗಳನ್ನು ಕುವೆಂಪು ಅವರು ಮುಂದುವರಿಸಿದರು. ಅವರು ಆರಂಭಿಸಿರುವ ಪರಂಪರೆಯನ್ನು ಮುಂದುವರಿಸುವ ಹಿನ್ನೆಲೆಯಲ್ಲಿ ‘ಸಂವಿಧಾನ ಸಾಕ್ಷಿ’ ಮದುವೆಗಳು ನಡೆಯುತ್ತಿದ್ದು, ಈ ಮೂಲಕ ಕಲ್ಯಾಣ ಕ್ರಾಂತಿಯ ಮರು ಸ್ಥಾಪನೆಯ ಉದ್ದೇಶ ಹೊಂದಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು