ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೃಷ್ಟಿಸಿದ ಸಮಾನತೆ

Last Updated 21 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಸಾಹಿತಿ ಯು.ಆರ್.ಅನಂತಮೂರ್ತಿ ಅವರ ‘ಸಂಸ್ಕಾರ’ ಕಾದಂಬರಿಯಲ್ಲಿ, ಸಾಂಕ್ರಾಮಿಕ ರೋಗವೊಂದರ ಸುಳಿಗೆ ಸಿಲುಕುವ ದೂರ್ವಾಸಪುರದ ಬ್ರಾಹ್ಮಣರಿಗೆ ಅಸ್ತಿತ್ವದ ಪ್ರಶ್ನೆ ಎದುರಾಗುತ್ತದೆ. ಅವರು ಬಹುವಾಗಿ ನಂಬಿಕೊಂಡು ಬಂದಿದ್ದ ಧಾರ್ಮಿಕ ನಂಬಿಕೆಗಳು ಹಾಗೂ ಆಚರಣೆಗಳು ಪರೀಕ್ಷೆಗೆ ಒಳಗಾಗುತ್ತವೆ. ಮಡಿವಂತ ಬ್ರಾಹ್ಮಣರಾದ ಪ್ರಾಣೇಶಾಚಾರ್ಯ, ಅಲ್ಲಿನ ಬ್ರಾಹ್ಮಣ ಸಮುದಾಯಕ್ಕೆ ಎದುರಾದ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

ಪ್ರಾಣೇಶಾಚಾರ್ಯರ ಮನೆಯ ಪಕ್ಕದಲ್ಲೇ ಇರುವ ಬಂಡಾಯ ಮನೋಭಾವದ, ಮಾಂಸ ತಿನ್ನುವ, ಕೆಳಜಾತಿಯ ವೇಶ್ಯೆ ಚಂದ್ರಿಯನ್ನು ಇಟ್ಟುಕೊಂಡಿರುವ ನಾರಣಪ್ಪ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿ, ಸಾವನ್ನಪ್ಪುತ್ತಾನೆ. ನಾರಣಪ್ಪನ ಮೃತದೇಹ ಕೊಳೆಯುವ ಸ್ಥಿತಿ ತಲುಪಿದರೂ ಅದಕ್ಕೆ ಅಂತ್ಯಸಂಸ್ಕಾರ ನಡೆಸಲು ಅಗ್ರಹಾರದ ಬ್ರಾಹ್ಮಣರು ಸಿದ್ಧರಿರುವುದಿಲ್ಲ. ಸಮುದಾಯದ ಮೌಲ್ಯಗಳನ್ನು ಧಿಕ್ಕರಿಸಿ ಬದುಕಿದ ನಾರಣಪ್ಪನ ಶವದ ಅಂತ್ಯಸಂಸ್ಕಾರ ನಡೆಸಿದರೆ ತಾವು ದೇವರ ಕೋಪಕ್ಕೆ ತುತ್ತಾಗಬಹುದು ಅಥವಾ ಮಠದವರು ತಮ್ಮನ್ನು ಬಹಿಷ್ಕರಿಸಬಹುದು ಎಂಬುದು ಅವರಲ್ಲಿನ ಭೀತಿ.

ಶಾಸ್ತ್ರದಲ್ಲಿ ಏನು ಹೇಳಿದೆ ಎಂಬುದನ್ನು ಪರಿಶೀಲಿಸಿ, ಈ ಸಮಸ್ಯೆಗೆ ಪರಿಹಾರ ಹೇಳುವಂತೆ ಬ್ರಾಹ್ಮಣರೆಲ್ಲ ಪ್ರಾಣೇಶಾಚಾರ್ಯರಲ್ಲಿ ಕೇಳುತ್ತಾರೆ. ಶಾಸ್ತ್ರಗಳು ಏನು ಹೇಳಿವೆ ಎಂಬುದನ್ನು ನೋಡಲು ‍ಪ್ರಾಣೇಶಾಚಾರ್ಯರು ಗ್ರಂಥಗಳ ಪುಟಗಳನ್ನು ತಿರುವಿಹಾಕುತ್ತಾರೆ. ದೇವರ ಮೊರೆ ಹೋಗುತ್ತಾರೆ. ಆದರೆ, ಅವರಿಗೆ ಪರಿಹಾರ ಸಿಗುವುದಿಲ್ಲ. ಸಮಯ ಕಳೆಯುತ್ತ ಹೋದಂತೆ ಅಗ್ರಹಾರದಲ್ಲಿ ಇಲಿಗಳು ನೂರಾರು ಸಂಖ್ಯೆಯಲ್ಲಿ ಸತ್ತು ಬೀಳುತ್ತವೆ, ನಾರಣಪ್ಪನ ಮನೆಯ ಮೇಲೆ ಹದ್ದುಗಳು ಹಾರಾಡುವುದು ಶುರುವಾಗುತ್ತದೆ. ಅಗ್ರಹಾರದಲ್ಲಿಯೂ ಕೆಲವರು ಸಾಯುತ್ತಾರೆ. ಸಾಂಕ್ರಾಮಿಕ ರೋಗ ಯಾವ ಬೇಧವನ್ನೂ ಮಾಡದೆ ಎಲ್ಲರನ್ನೂ ಕಾಡುತ್ತದೆ.

ನಾರಣಪ್ಪನ ಶವಸಂಸ್ಕಾರ ಆಗುವವರೆಗೆ ಅಗ್ರಹಾರದ ಬ್ರಾಹ್ಮಣರು ಏನನ್ನೂ ಸೇವಿಸುವಂತಿಲ್ಲ. ದಲಿತರು ಅಗ್ರಹಾರ ಪ್ರವೇಶಿಸುವಂತಿಲ್ಲ. ಅವರೂ ಮೃತದೇಹ ಎತ್ತಲು ಒಲ್ಲೆ ಎನ್ನುತ್ತಾರೆ... ಕಾದಂಬರಿಯಲ್ಲಿ ಇರುವ ಗಟ್ಟಿಯಾದ ಕಥೆಯು ಮೇಲ್ಜಾತಿ ಜನರ ಇಬ್ಬಂದಿತನ, ಹೃದಯಹೀನ ಧೋರಣೆಯನ್ನು ತೋರಿಸುತ್ತದೆ. ಜೊತೆಯಲ್ಲೇ, ದಲಿತರು ಮತ್ತು ದುಡಿಯುವ ವರ್ಗದ ಜನರಲ್ಲಿನ ಹೃದಯವೈಶಾಲ್ಯತೆಯನ್ನು ತೋರಿಸುತ್ತದೆ.

‘ಸಂಸ್ಕಾರ’ಕ್ಕಿಂತ ಭಿನ್ನವಾದ ಕಾಲಘಟ್ಟ ಹಾಗೂ ಪರಿಸರದ ವಸ್ತುವನ್ನು ಹೊಂದಿರುವುದು ಆಲ್ಬರ್ಟ್‌ ಕಾಮು ಬರೆದಿರುವ ‘ದಿ ಪ್ಲೇಗ್’. ಅಲ್ಜೀರಿಯಾದ ಒರಾನ್ ಎನ್ನುವ ನಗರದಲ್ಲಿ ಬ್ಯುಬೊನಿಕ್ ಪ್ಲೇಗ್‌ ಸಾಂಕ್ರಾಮಿಕ ತಲೆ ಎತ್ತುತ್ತದೆ. ನಗರದಲ್ಲಿ ಇಲಿಗಳು ಮತ್ತು ಮನುಷ್ಯರು ಸತ್ತು ಬೀಳುವುದು ಹೆಚ್ಚಾಗುತ್ತದೆ. ಸಾವಿನ ವಿಚಾರದಲ್ಲಿ ಉದಾಸೀನ ಧೋರಣೆ ತೋರುವ ಆಡಳಿತಾರೂಢರು, ಜನ ಮನೆಗಳಿಂದ ಹೊರಬರಬಾರದು ಎಂದು ಆದೇಶಿಸುತ್ತಾರೆ. ಜನರಿಗೆ ತಮ್ಮನ್ನು ರಾತ್ರೋರಾತ್ರಿ ಬಂಧಿಸಲಾಗಿದೆ ಎಂದು ಅನಿಸಲು ಶುರುವಾಗುತ್ತದೆ. ಪ್ಲೇಗ್‌ ಹರಡುತ್ತಿರುವುದರ ಪ್ರಯೋಜನ ಪಡೆದುಕೊಳ್ಳುವ ಪಾದ್ರಿಯೊಬ್ಬ ತನ್ನ ದೇವರ ಹೆಸರು ಹೇಳಿಕೊಳ್ಳುತ್ತ, ಈ ಮಾರಣಾಂತಿಕ ಮಾರಿಯಿಂದ ತಪ್ಪಿಸಿಕೊಳ್ಳಲು ಧರ್ಮದ ಮೊರೆ ಹೋಗುವಂತೆ ಉಪದೇಶ ಮಾಡುತ್ತಾನೆ.

‘ದಿ ಪ್ಲೇಗ್’ ಕಾದಂಬರಿಯನ್ನು ಬೇರೆ ಬೇರೆ ರೀತಿಯಲ್ಲಿ ಓದಿಕೊಳ್ಳಬಹುದು. ನೈಸರ್ಗಿಕ ವಿಕೋಪವೊಂದು ನಗರವನ್ನು ಅಪ್ಪಳಿಸಿ, ಎಲ್ಲರನ್ನೂ ಕಷ್ಟಕ್ಕೆ ಸಿಲುಕಿಸಿದಾಗ ಮನುಷ್ಯನ ಸ್ಥಿತಿ ಹೇಗಿರುತ್ತದೆ ಎಂಬುದನ್ನು ಇದು ಚಿತ್ರಿಸಿದೆ. ಸಾವಿಗೆ ಎದುರಾಗುವಾಗ ತ್ಯಾಗ, ಪ್ರೀತಿ, ಸ್ನೇಹ, ಔದಾರ್ಯ ಮತ್ತು ಒಬ್ಬರಿಗೊಬ್ಬರು ನೆರವಾಗಿ ನಿಲ್ಲುವ ರೀತಿಯನ್ನೂ ಇದು ಚಿತ್ರಿಸಿದೆ.

ಸಮುದಾಯದ ವಿಚಾರದಲ್ಲಿ ತಾವು ಹೊಂದಿರುವ ಜವಾಬ್ದಾರಿಯಿಂದ ನುಣುಚಿಕೊಳ್ಳುವವರ ಹೇಡಿತನದ ಬಗ್ಗೆಯೂ, ಸಣ್ಣತನದ ಬಗ್ಗೆಯೂ ಈ ಕೃತಿ ಮಾತನಾಡುತ್ತದೆ. ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ನಾಜಿ ಆಕ್ರಮಣದ ವಿರುದ್ಧ ಫ್ರೆಂಚರು ತೋರಿದ ಪ್ರತಿರೋಧವನ್ನು ಕೂಡ ಸೂಚ್ಯವಾಗಿ ಹೇಳುತ್ತದೆ.

ಹಿಟ್ಲರನ ಅವಧಿಯಲ್ಲಿ ಯಹೂದಿಗಳಿಗೆ ಆದಂತೆ, ದುಷ್ಟತನದ ಮನುಷ್ಯರೂಪದಂತೆ ಇರುವ ಸರ್ವಾಧಿಕಾರಿಗಳ ಆಡಳಿತದಲ್ಲಿ ಸಿಲುಕಿದಾಗ, ಜೀವನ ಹಾಗೂ ಸಾವುಗಳೆರಡೂ ಅನಿಶ್ಚಿತವಾಗಿದ್ದಾಗ, ಭಾರತದ ವಿಭಜನೆಯಂತಹ ಕಾಲಘಟ್ಟದಲ್ಲಿ ಸಿಲುಕಿದಾಗ, 1984ರಲ್ಲಿ ದೆಹಲಿಯಲ್ಲಿ ನಡೆದ ಸಿಖ್ ಹತ್ಯಾಕಾಂಡ ಅಥವಾ 2002ರಲ್ಲಿ ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದಂತಹ ಪರಿಸ್ಥಿತಿಗಳಲ್ಲಿ ಸಿಕ್ಕಿಹಾಕಿಕೊಂಡಾಗ, ಅಡಗಿ ಕುಳಿತುಕೊಳ್ಳಲೂ ಸ್ಥಳ ಇಲ್ಲದಿದ್ದಾಗ, ದ್ವೇಷದ ಸುನಾಮಿಯಡಿ ಸಿಲುಕಿ ಕೊಚ್ಚಿಹೋದೇವೆಯೇ ಎಂಬ ಭಾವನೆ ಜನರಲ್ಲಿ ಮೂಡಬಹುದು.

ಸಾಯುವುದು ನಿಶ್ಚಿತ, ಜೀವ ಉಳಿಸಿಕೊಳ್ಳುವ ಅವಕಾಶ ತುಸು ಮಾತ್ರವೇ ಇದ್ದಿರಬಹುದು. ನಿಮ್ಮ ಮನೆ, ಅಂಗಡಿ, ಕಾರ್ಖಾನೆ ನೀವು ಯಾವ ಜಾತಿ– ಸಮುದಾಯಕ್ಕೆ ಸೇರಿದವರು ಎಂಬುದರ ಆಧಾರದಲ್ಲಿ ಕೋಮು ಜ್ವಾಲೆಗೆ ಸಿಲುಕಿ ಸುಟ್ಟು ಬೂದಿಯಾಗಬಹುದು. ಇದ್ದಕ್ಕಿದ್ದಂತೆ ಹೊತ್ತಿಕೊಳ್ಳಬಹುದಾದ ದ್ವೇಷದ ಜ್ವಾಲೆಯು ಒಂದು ಪ್ರದೇಶದಾದ್ಯಂತ ವ್ಯಾಪಿಸಿಕೊಂಡ ಸಂದರ್ಭದಲ್ಲಿ ಮುಸ್ಲಿಂ ಬಾಹುಳ್ಯದ ಮೊಹಲ್ಲಾದ ಹಿಂದುವಿನ, ಹಿಂದೂ ಬಾಹುಳ್ಯದ ಜಿಲ್ಲೆಯ ಮುಸ್ಲಿಮನ, ಮೇಲ್ಜಾತಿಯವರು ಹೆಚ್ಚಿರುವ ಸ್ಥಳದಲ್ಲಿನ ದಲಿತನ ಸ್ಥಿತಿ ಕಷ್ಟ ಹೇಳತೀರದು. ಇಂತಹ ಸ್ಥಿತಿಯಲ್ಲಿ ವ್ಯಕ್ತಿಯ ಜೀವ ಉಳಿಯುತ್ತದೆಯೋ ಇಲ್ಲವೋ ಎಂಬುದನ್ನು ಆ ವ್ಯಕ್ತಿಯ ಜಾತಿ, ಧರ್ಮಗಳು ತೀರ್ಮಾನ ಮಾಡುತ್ತವೆ.

‘ಮನುಷ್ಯನ ವಿಚಾರದಲ್ಲಿ ಅತಿಹೆಚ್ಚು ಅಮಾನವೀಯವಾಗಿ ನಡೆದುಕೊಂಡಿದ್ದು ಮನುಷ್ಯನೇ ವಿನಾ, ನಿಸರ್ಗವಲ್ಲ’ ಎಂಬ ಮಾತೊಂದು ಇದೆ.ಸಾಂಕ್ರಾಮಿಕಗಳು, ಸುನಾಮಿ, ಭೂಕಂಪ ಅಥವಾ ಪ್ರವಾಹ ಮನುಕುಲದ ಮೇಲೆ ದಾಳಿ ನಡೆಸಿದಾಗ ಎಲ್ಲರೂ ತೊಂದರೆಗೆ ಒಳಗಾಗುತ್ತಾರೆ. ಮಕ್ಕಳು, ಮುದುಕರು, ಪುರುಷರು, ಮಹಿಳೆಯರು, ಆರೋಗ್ಯವಂತರು, ಅನಾರೋಗ್ಯಪೀಡಿತರು, ಎಲ್ಲ ಸಮುದಾಯಗಳಿಗೆ ಸೇರಿದವರು, ಎಲ್ಲ ರಾಜಕೀಯ ಗುಂಪುಗಳಿಗೆ ಸೇರಿದವರು... ಇವರೆಲ್ಲರೂ ಈ ದಾಳಿಗೆ ಸಿಲುಕುತ್ತಾರೆ.

ಕೋಮು ಗಲಭೆ ಅಥವಾ ಜನಾಂಗೀಯ ಗಲಭೆಯ ಸಂದರ್ಭದಲ್ಲಿ ಉದ್ರಿಕ್ತರಿಗೆ ತಾವು ಮಾಡುವುದೆಲ್ಲ ತಮ್ಮ ಸಮುದಾಯದ ಒಳಿತಿಗಾಗಿ ಎಂದು ಅನಿಸಬಹುದು. ಆದರೆ, ಕೊನೆಯಲ್ಲಿ ಆ ದ್ವೇಷವು ಎಲ್ಲರನ್ನೂ ಆಪೋಶನ ತೆಗೆದುಕೊಂಡಿರುತ್ತದೆ. ಇಂಥವು ನೈಸರ್ಗಿಕ ವಿಕೋಪಗಳಿಗಿಂತಲೂ ಹೆಚ್ಚು ನಷ್ಟ ತಂದಿಡುತ್ತವೆ.

ಇಂತಹ ಪಿಡುಗುಗಳನ್ನು ಒದ್ದೋಡಿಸಲು ನಾವೆಲ್ಲರೂ ಒಂದಾಗಬೇಕು. ಅವು ಈಗ ಎದುರಾಗಿರುವ ಕೋವಿಡ್‌–19 ಸಾಂಕ್ರಾಮಿಕ ರೋಗವೇ ಆಗಿರಬಹುದು ಅಥವಾ ಕೆಲವರ ದ್ವೇಷದಿಂದ ಸೃಷ್ಟಿಯಾಗುವ ಗಲಭೆಗಳೇ ಇರಬಹುದು; ಅವು ಕೊನೆಯಲ್ಲಿ ನಮ್ಮೆಲ್ಲರನ್ನೂ ತಿಂದುಹಾಕುತ್ತವೆ ಎಂಬುದನ್ನು ಮರೆಯುವಂತಿಲ್ಲ.

ಕವಿ ಜಾನ್‌ ಡನ್ ಹೇಳಿರುವುದು ಎಷ್ಟು ಸತ್ಯ!

ಯಾವ ಮನುಷ್ಯನೂ ದ್ವೀಪವಲ್ಲ,

ಎಲ್ಲ ಮನುಜರೂ ಒಂದು ಖಂಡದ ಒಂದೊಂದು ಭಾಗ

ಪೂರ್ಣವೆಂಬುದರ ಒಂದು ತುಣುಕು

ಯಾವುದೇ ಮನುಷ್ಯನ ಸಾವು ನನ್ನನ್ನು ಕುಗ್ಗಿಸುತ್ತದೆ

ಏಕೆಂದರೆ ನಾನು ಮಾನವತ್ವದ ಭಾಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT