ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ಎರಡು ಭಿನ್ನ ಬಿಂಬಗಳು... ಮತ್ತೆ ಕೆಡವುವ, ಕಟ್ಟುವ ಆಟ ಶುರುವಾಗುತ್ತಾ?

Last Updated 1 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
"ಫಾತಿಮಾ ರಲಿಯಾ"

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇನ್ನೇನು ಭೂಮಿಪೂಜೆ ನೆರವೇರಲಿದೆ. ದೇಶವನ್ನು ದಶಕಗಳ ಕಾಲ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಕಾಡಿದ ವಿಷಯಗಳಲ್ಲಿ ಈ ವಿವಾದವೂ ಒಂದು. ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿರುವ ಈ ಹೊತ್ತಿನಲ್ಲಿ ಸಾಂಸ್ಕೃತಿಕ ಲೋಕದ ಪ್ರತಿಕ್ರಿಯೆ ಹೇಗಿದ್ದೀತು? ಭಿನ್ನ ನಿಲುವುಗಳನ್ನು ಹೊಂದಿದ ಇಬ್ಬರು ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳ ಮುಂದೆ ‘ಪ್ರಜಾವಾಣಿ’ ಐದು ಪ್ರಶ್ನೆಗಳನ್ನು ಕಥೆಗಾರ್ತಿ ಫಾತಿಮಾ ರಲಿಯಾ ಅವರೇ ಆ ಪ್ರತಿನಿಧಿ. ಅವರು ಕೊಟ್ಟ ಉತ್ತರಗಳು ಇಲ್ಲಿವೆ. ಅಯೋಧ್ಯೆಯ ಎರಡು ಭಿನ್ನ ಬಿಂಬಗಳೂ ಅದರಲ್ಲಿ ಕಾಣುತ್ತಿವೆ...

ಪ್ರಜಾವಾಣಿ ಕೇಳಿದಐದು ಪ್ರಶ್ನೆಗಳು

* ದೇಶದ ಸೌಹಾರ್ದಕ್ಕಿಂತ ಧಾರ್ಮಿಕ ನಂಬಿಕೆಯೇ ಮುಖ್ಯವಾಗಿದ್ದು ಸರಿಯೇ? ಆ ನಂಬಿಕೆಯ ಸಂಕೇತವಾದ ಸ್ಥಳಕ್ಕಾಗಿ ಅಷ್ಟೊಂದು ವಿವಾದ-ಹೋರಾಟ ಅನಿವಾರ್ಯವಾಗಿತ್ತೇ?

* ಮಂದಿರ-ಮಸೀದಿಯ ಸುದೀರ್ಘ ಇತಿಹಾಸ ಹಿಂದಿದೆ. ಸುಪ್ರೀಂ ಕೋರ್ಟ್ ತೀರ್ಪು ಎದುರಿಗಿದೆ. ಮುಂದಿನ ಹಾದಿ ಯಾವ ಮೌಲ್ಯವನ್ನು ಎತ್ತಿ ಹಿಡಿಯಲಿದೆ?

* ರಾಮ ಜನ್ಮಭೂಮಿ ಹೋರಾಟವನ್ನು ಬಿಜೆಪಿಯ ಉತ್ಥಾನದ ಕಾಲ ಎಂದು ವ್ಯಾಖ್ಯಾನಿಸಲಾಗಿದೆ. ಅದು ನಿಜವಾದರೆ ದೇಶ ರಾಜಕೀಯವಾಗಿ ಪಡೆದುಕೊಂಡಿದ್ದೇನು? ಕಳೆದುಕೊಂಡಿದ್ದೇನು?

* ಕಾಂಗ್ರೆಸ್ ಸಹ -ಅದರಲ್ಲೂ ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ- ಮಂದಿರ ನಿರ್ಮಾಣದ ಹೋರಾಟವನ್ನು ಮೌನವಾಗಿ ಬೆಂಬಲಿಸಿತು ಎಂದು ಹೇಳಲಾಗುತ್ತದೆ. ಇದು ನಿಜವೇ? ಹೌದಾದರೆ, ವಿವಾದ ತೀವ್ರಗೊಳ್ಳಲು ಅದರ ಕೊಡುಗೆಯೂ ಇದೆಯೇ?

* ಅಯೋಧ್ಯೆಯಲ್ಲಿ ಮಂದಿರವೇನೋ ಆಗುತ್ತಿದೆ. ಮುರಿದ ಮನಸ್ಸುಗಳನ್ನು ಮತ್ತೆ ಕೂಡಿಸಿ ಕಟ್ಟುವುದು ಹೇಗೆ? ದೇಶದಲ್ಲಿ ಮತ್ತೆ ಯಾವ ಬೆಳವಣಿಗೆಗಳಿಗೆ ಈ ನಿರ್ಮಾಣ ಕಾರಣವಾಗಲಿದೆ?

ಫಾತಿಮಾ ರಲಿಯಾ ಅವರು ಕೊಟ್ಟ ಉತ್ತರಗಳು

1. ಖಂಡಿತಾ ಸರಿಯಲ್ಲ. ನಂಬಿಕೆಗಳು ಸೌರ್ಹಾದದ ಬಳ್ಳಿಗೆ ನೀರೆರೆಯಬೇಕೇ ಹೊರತು ಅದನ್ನು ಕತ್ತರಿಸಿ ಬಿಸಾಡುವಂತಿರಬಾರದು. ಒಂದಿಡೀ ತಲೆಮಾರನ್ನು ಅಕ್ಷರಶಃ ಅಪನಂಬಿಕೆ, ಅಸಹನೆಯ ಬೆಂಕಿಯ ಗೂಡಲ್ಲಿಟ್ಟ ಹೋರಾಟ, ಕಾಲದ ಬೇಡಿಕೆ ಆಗಿರಲೇ ಇಲ್ಲ.

ಫಾತಿಮಾ ರಲಿಯಾ

2. 1980-90ರ ದಶಕದಲ್ಲಿ ಅಯೋಧ್ಯೆಯ ವಿಷಯಕ್ಕಿದ್ದ ಕಾವು, ಧಾರ್ಮಿಕ ನಂಟು ಈಗಿಲ್ಲ. ಈಗೇನಿದ್ದರೂ ಅಯೋಧ್ಯೆ ಪ್ರತಿಷ್ಠೆಯ ವಿಚಾರ. ಹಾಗಾಗಿಯೇ ಈ ತೀರ್ಪು ಸೌಹಾರ್ದದ ಮೌಲ್ಯವನ್ನು ಎತ್ತಿ ಹಿಡಿಯಲಿ ಅಂದುಕೊಳ್ಳುತ್ತೇನೆ. ಆದರೆ, ಹಾಗಾಗುತ್ತಾ? ಅಥವಾ ಮತ್ತೊಂದು ಮಸೀದಿ, ಮತ್ತೊಂದು ಮಂದಿರ ಅಂತ ಮತ್ತೊಮ್ಮೆ ಕೆಡವುವ, ಕಟ್ಟುವ ಆಟ ಶುರುವಾಗುತ್ತಾ? ದೇಶದೊಳಗಿನ ಅಪನಂಬಿಕೆ ಈ ತೀರ್ಪಿನೊಂದಿಗೇ ಕೊನೆಯಾಗುತ್ತಾ?ಧರ್ಮ, ಧಾರ್ಮಿಕ ನಂಬಿಕೆಗಳು ಚುನಾವಣಾ ರಾಜಕೀಯಕ್ಕೆ ಬಳಕೆಯಾಗುವುದು ನಿಲ್ಲುತ್ತಾ?

ಧರ್ಮ ಮತ್ತು ಧಾರ್ಮಿಕತೆಯು ಕೆಟ್ಟ ರಾಜಕೀಯದ ಒಳಸುಳಿಯಿಂದ ಹೊರಬಂದು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಮಹತ್ತರ ಬದಲಾವಣೆಯೊಂದು ಈ ತೀರ್ಪಿನಿಂದ ಘಟಿಸಲಿ, ರಾಜಕೀಯಕ್ಕೆ ಧರ್ಮವನ್ನು ಬೆರೆಸುವ ಹೀನ ಪ್ರವೃತ್ತಿ ಇಲ್ಲಿಗೇ ಕೊನೆಯಾಗಲಿ. ಮಂದಿರ, ಮಸೀದಿಗಾಗಿ ದೇಶದ ಬೀದಿಗಳಲ್ಲಿ ಹರಿದ ನೆತ್ತರಿನ‌ ಕಮಟನ್ನು ಇನ್ನೂ ಎದೆಯೊಳಗೆ ಕಾಪಿಟ್ಟುಕೊಂಡು ಮರುಗುವ ಕೋಟ್ಯಂತರ ಮಂದಿ, ತೀರ್ಪನ್ನು ಯಾವ ಒರೆಗಲ್ಲಿಗೂ ಹಚ್ಚದೆ ಸ್ವೀಕರಿಸಿದ್ದಾರೆ. ಮತ್ತಷ್ಟು ಕೋಟಿ ಮಂದಿ ತೀರ್ಪು ಯಾರ ಪರ ಬಂದರೂ ಸ್ವೀಕರಿಸುತ್ತೇವೆ ಎನ್ನುವ ಅಚಲ ನಿರ್ಧಾರದಲ್ಲಿದ್ದವರು. ಅವರೆಲ್ಲರ ಸಾಮುದಾಯಿಕ ಪ್ರಜ್ಞೆಗೆ, ಸಾಮಾಜಿಕ ಬದ್ಧತೆಗೆ ತೀರ್ಪಿನ ನಂತರದ ದಿನಗಳು‌ ನ್ಯಾಯ ಒದಗಿಸಲಿ.

3. ಬಿಜೆಪಿ ರಥಯಾತ್ರೆ ಹಮ್ಮಿಕೊಂಡದ್ದು 1990ರಲ್ಲಿ. ಅಷ್ಟರಲ್ಲಾಗಲೇ ಇಂದಿರಾ ಯುಗ ಮುಗಿದಿತ್ತು. ಭಾರತದ ರಾಜಕಾರಣ ನಿಧಾನವಾಗಿ ಮತ್ತೊಂದು ಮಗ್ಗಲಿನತ್ತ ಸರಿಯುತ್ತಿತ್ತು. ಹಾಗಿದ್ದೂ ಈ ದೇಶದ ಬಹುಸಂಖ್ಯಾತರ ಒಲವು ಬಿಜೆಪಿ ಕಡೆಗಿರಲಿಲ್ಲ. ಆ ಪಕ್ಷ ಇಲ್ಲಿ ಒಂದು ಸ್ಪಷ್ಟ ನೆಲೆ ಪಡೆದುಕೊಂಡದ್ದೇ ರಥಯಾತ್ರೆಯ ನಂತರ. ಆದರೆ, ಅದಕ್ಕಾಗಿ ದೇಶ ತೆತ್ತ ಬೆಲೆ ಮಾತ್ರ ಅಗಾಧ. ಎರಡು ಕೋಮುಗಳ ಮಧ್ಯೆ ಹೊತ್ತಿ ಉರಿದ ದಳ್ಳುರಿ ಇವತ್ತಿಗೂ ಪೂರ್ತಿ ಆರಿಲ್ಲ. ಅಪನಂಬಿಕೆ ಹೋಗಿಲ್ಲ. ಶುದ್ಧಾನುಶುದ್ಧ ನಂಬಿಕೆಯೊಂದನ್ನು ರಾಜಕಾರಣವು ತನ್ನ ಹಿತಾಸಕ್ತಿಗಾಗಿ ಬಳಸಿಕೊಂಡಾಗ ಆಗುವ ಎಲ್ಲಾ ಅನಾಹುತಗಳು ಇಲ್ಲೂ ಘಟಿಸಿದವು. ನಂಬಿಕೆಯು ಅಸ್ತಿತ್ವ ಮತ್ತು ಪ್ರತಿಷ್ಠೆಯ ಪ್ರಶ್ನೆ ಆದದ್ದೇ ಆನಂತರ.

4. ಶಾಬಾನು ಪ್ರಕರಣದಲ್ಲಿ ತಾವು ತೆಗೆದುಕೊಂಡ ನಿರ್ಧಾರದಿಂದಾಗಿ ಹಿಂದೂ ಮಧ್ಯಮ ವರ್ಗ ನಿಧಾನವಾಗಿ ಬಿಜೆಪಿಯತ್ತ ವಾಲುತ್ತಿರುವುದನ್ನು ಮನಗಂಡ ರಾಜೀವ್ ಗಾಂಧಿ ಅವರು ಮಂದಿರ ತೆರೆದು ಪೂಜೆಗೆ ಅವಕಾಶ ಕೊಟ್ಟರು. ಒಂದು ಹಂತದಲ್ಲಿ ಮಂದಿರದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೂ ಅವರು ಬಯಸಿದ್ದರು ಎನ್ನುವ ವರದಿಗಳಿವೆ. ಅವೆಲ್ಲವುಗಳ ಸತ್ಯಾಸತ್ಯತೆ ಏನಿದ್ದರೂ ಈ ಎರಡು ಪ್ರಮುಖ ಪಕ್ಷಗಳ ರಾಜಕೀಯ ಲಾಭಕ್ಕಾಗಿ ಬೀದಿಗೆ ಬಿದ್ದದ್ದು ಸಾಮಾನ್ಯ ಭಾರತೀಯರ ಬದುಕು, ಭಾವನೆಗಳು ಮತ್ತು ಜೀವ. ಕಾಂಗ್ರೆಸ್ ಮೌನವಾಗಿ ಬೆಂಬಲಿಸಿತು ಅನ್ನುವುದಕ್ಕಿಂತ ರಾಜಕೀಯ ನಿರ್ಲಜ್ಜತನ ಪ್ರದರ್ಶಿಸಿತು ಅನ್ನಬಹುದು. ನಂಬಿಕೆಯ ಸಂಘರ್ಷ ಉಚ್ಛ್ರಾಯ ಸ್ಥಿತಿಗೆ ತಲುಪಲು ಒಂದು ರೀತಿಯಲ್ಲಿ ಕಾಂಗ್ರೆಸ್ಸೇ ಕಾರಣ.

5. ಅಯೋಧ್ಯೆಯಲ್ಲಿ ಮಸೀದಿಗೆ ಅಂತ ಮೀಸಲಿಟ್ಟ ಜಾಗದಲ್ಲಿ ಎರಡೂ ಧರ್ಮದವರು ರಾಜಕೀಯವನ್ನು ಬದಿಗಿಟ್ಟು ಮಸೀದಿ ನಿರ್ಮಾಣಕ್ಕೆ ಕೈ ಜೋಡಿಸಿದರೆ, ನೆಲದೊಂದಿಗಿನ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿದರೆ, ಎರಡೂ ಕಡೆಯವರು ತಮ್ಮೊಳಗಿನ ಕರ್ಮಠತನವನ್ನು ತೊರೆದು ಪರಸ್ಪರ ಸಹಕರಿಸಿದರೆ ತೊಂಬತ್ತರ ದಶಕದಲ್ಲಿನ ತಲೆಮಾರಿನ ನೋವು ಚೂರಾದರೂ ಮಾಸೀತೇನೋ? ಆದರೆ, ಅವೆಲ್ಲಾ ಈಗ ಸಾಧ್ಯಾನಾ? ನ್ಯಾಯಾಲಯದ ತೀರ್ಪಿನ ಬಗೆಗಿನ ಅಸಮಾಧಾನ ಮತ್ತು ಅಸಮ್ಮತಿಯನ್ನು ಬದಿಗಿಟ್ಟು ತೀರ್ಪನ್ನು ಸ್ವೀಕರಿಸಿರುವವರಲ್ಲೂ ಮುಂದೆ ಇದು ಇನ್ನೆಷ್ಟು ಪ್ರಕರಣಗಳ ತೀರ್ಪುಗಳಲ್ಲಿ ಪಾತ್ರವಹಿಸುತ್ತದೋ ಎನ್ನುವ ಆತಂಕ ಇದ್ದೇ ಇದೆ. ಇದರ ಮಧ್ಯೆ ಸುಮಾರು 800 ಕಿ.ಮೀ ಬರಿಗಾಲಲ್ಲೇ ಅಯೋಧ್ಯೆವರೆಗೆ ನಡೆಯುವ ಸಂಕಲ್ಪ ಮಾಡಿರುವ ಛತ್ತೀಸ್‌ಗಡದಮೊಹಮ್ಮದ್ ಫೈಜ್ ಖಾನ್ ಎನ್ನುವ ರಾಮಭಕ್ತನನ್ನು ಸ್ವಾಗತಿಸುವ ಪೋಸ್ಟರ್ ಜೊತೆಗೆ ಆತನನ್ನು ರಾಮಜನ್ಮಭೂಮಿಗೆ ಕಾಲಿಡಲು ಬಿಡಬಾರದು ಎನ್ನುವ ಟ್ವಿಟ್ಟರ್ ಅಭಿಯಾನವೂ ನಡೆಯುತ್ತಿದೆ. ತೀರ್ಪು ಬಂದಾಗ ಅದನ್ನು ಸ್ವೀಕರಿಸಬೇಕು ಅಂದು ಜಾಲತಾಣದಲ್ಲಿ ಟ್ರೋಲ್‌ಗೆ ಒಳಗಾದವರ ಸಂಖ್ಯೆಯೂ ಕಡಿಮೆಯದಲ್ಲ. ಈ ತೀರ್ಪಿನಿಂದ ದ್ವೇಷ ಸತ್ತು, ಸೌಹಾರ್ದ ನೆಲೆಗೊಳ್ಳುತ್ತದೆ ಅಂದುಕೊಂಡರೆ ಇಂತಹ ಒಂದೊಂದು ಘಟನೆಯೂ ದಟ್ಟ ನಿರಾಸೆಯನ್ನು ಉಂಟು ಮಾಡುತ್ತದೆ.

ಎರಡೂ ಕಡೆಯ ಅತಿರೇಕಿಗಳು ಸಹನೆ, ಸಹಿಷ್ಣುತೆ ತಂದುಕೊಂಡರೆ ಎಲ್ಲವೂ ತಹಬಂದಿಗೆ ಬರುತ್ತದೆ. ನಿರುದ್ಯೋಗದಂತಹ ಬದುಕಿನ ಗಹನ ಸವಾಲುಗಳನ್ನು ಎದುರುಗೊಳ್ಳುತ್ತಿರುವಯುವಸಮೂಹ ಈಗ ಬೆಕ್ಕಿಗೆ ಗಂಟೆ ಕಟ್ಟಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT