ಬುಧವಾರ, ಫೆಬ್ರವರಿ 19, 2020
18 °C

ಹಬ್ಬಾ ಖಾತೂನ್‌ ಕಾಶ್ಮೀರದ ನೈಟಿಂಗೇಲ್‌

ಸುಮಂಗಲಾ Updated:

ಅಕ್ಷರ ಗಾತ್ರ : | |

Prajavani

ಹಬ್ಬಾ ಖಾತೂನ್ ಹದಿನೈದನೇ ಶತಮಾನದಲ್ಲಿ ಅಚ್ಚರಿಯಾಗುವಷ್ಟು ದಿಟ್ಟತನದಿಂದ ಕಾವ್ಯದಲ್ಲಿ ತನ್ನೊಳಗನ್ನು ಅಭಿವ್ಯಕ್ತಿಗೊಳಿಸಿದಳು. ಮೌಖಿಕ ಪರಂಪರೆಯಲ್ಲಿ ತಲೆಮಾರುಗಳಿಗೆ ಹಾದು ಬಂದ ಆಕೆಯ ಕವನಗಳನ್ನು ಇಂದಿಗೂ ಕಾಶ್ಮೀರಿಗರು ಬಹುಪ್ರೀತಿಯಿಂದ ಹಾಡುತ್ತಾರೆ.

ಕಾಶ್ಮೀರವನ್ನು ಆಳಬೇಕೆಂಬ ದೆಹಲಿ ಆಡಳಿತಗಾರರ ಮಹತ್ವಾಕಾಂಕ್ಷೆ, ಕನಸು ಕೇವಲ ಇಂದಿನದಲ್ಲ, -ಹದಿನೈದನೇ ಶತಮಾನದಿಂದಲೂ ಇದ್ದ ಕನಸದು. ಬಾಬರ್‌ ಮತ್ತು ಹುಮಾಯೂನ್ ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಆಗ ಗುರೆಜ್ ಕಣಿವೆಯ ಚಕ್ ಬುಡಕಟ್ಟಿನವರು ಕಾಶ್ಮೀರವನ್ನು ಆಳುತ್ತಿದ್ದರು. ಚಕ್‍ಗಳನ್ನು ಸೋಲಿಸಿ, ಕಾಶ್ಮೀರವನ್ನು ಕೈವಶ ಮಾಡಿಕೊಳ್ಳಲೆಂದು ಅಕ್ಬರ್‌ ಎರಡು ಬಾರಿ ಪ್ರಯತ್ನಿಸಿ, ಮುತ್ತಿಗೆ ಹಾಕುತ್ತಾನೆ. ಆದರೆ, ಬಹಳ ಬಲಶಾಲಿಯಾಗಿದ್ದ ಚಕ್‍ ಸೈನ್ಯ ಅಕ್ಬರ್‌ನನ್ನು ಮಣ್ಣುಮುಕ್ಕಿಸುತ್ತದೆ.

ಕಾಶ್ಮೀರವನ್ನು ನೇರಾನೇರ ಯುದ್ಧದಿಂದ ಗೆಲ್ಲಲು ಆಗುವುದಿಲ್ಲ. ಕುಟಿಲ ದಾರಿಯಿಂದ ಪ್ರಯತ್ನಿಸಬೇಕೆಂದುಕೊಂಡ ಅಕ್ಬರ್ ಸಂಧಾನದ ಮಾತುಕತೆಗೆ ದೆಹಲಿಗೆ ಬರುವಂತೆ ಯೂಸುಫ್ ಶಾಹ್ ಚಕ್‍ನನ್ನು ಆಹ್ವಾನಿಸುತ್ತಾನೆ. ಆಹ್ವಾನದ ಹಿಂದೇನಾದರೂ ಕುತುಂತ್ರವಿದ್ದಿರಬಹುದೇ ಎಂದು ಯೂಸುಫ್ ಶಾಹ್ ಮತ್ತು ಅವನ ರಾಣಿಗೆ ಅನುಮಾನವಾದರೂ ರಾಜಿಯಾಗದೇ ಇರಲೂ ಸಾಧ್ಯವಿರಲಿಲ್ಲ. ಏಕೆಂದರೆ ಮೊದಲೆರಡು ಯುದ್ಧದಲ್ಲಿ ಚಕ್‍ಗಳಿಗೂ ಸಾಕಷ್ಟು ಹಾನಿಯಾಗಿತ್ತು. ಮೂರನೇ ಬಾರಿಯ ಆಕ್ರಮಣಕ್ಕೆ ಚಕ್ ಸೈನ್ಯ ಸಿದ್ಧವಿರಲಿಲ್ಲ. ಹಾಗೆ ದೆಹಲಿಗೆ ಬಂದ ಯೂಸುಫ್‍ನನ್ನು ಅಕ್ಬರ್ ಬಂಧಿಸಿ, ಮೊದಲು ಬಂಗಾಳದಲ್ಲಿ ಸೆರೆಯಿಡುತ್ತಾನೆ. ನಂತರ ಬಿಹಾರಕ್ಕೆ ಗಡೀಪಾರು ಮಾಡುತ್ತಾನೆ. ನಳಂದ ಜಿಲ್ಲೆಯಲ್ಲಿ ಚಿಕ್ಕ ಪ್ರಾಂತ್ಯವೊಂದನ್ನು ನೀಡಿ, ಕೇವಲ 500 ಸೈನಿಕರ ತುಕಡಿಯನ್ನು ಮಾತ್ರ ಇಟ್ಟುಕೊಳ್ಳಲು ಒಪ್ಪಿಗೆ ನೀಡುತ್ತಾನೆ. ಆತ ಹಾಗೆ ಬಿಹಾರದಲ್ಲಿ ಗಡೀಪಾರು ರಾಜನಾಗಿ ನೆಲೆ ನಿಂತ ಜಾಗವನ್ನು ಕಾಶ್ಮೀರಿ ಚಕ್ ಎಂದು ಕರೆಯುತ್ತಾರೆ. 1592ರಲ್ಲಿ ಆತ ತೀರಿಕೊಳ್ಳುತ್ತಾನೆ. ಸ್ವತಂತ್ರ ಕಾಶ್ಮೀರದ ಕೊನೆಯ ದೊರೆ ಯೂಸುಫ್ ಶಾಹ್ ಚಕ್.

‘ಅಕ್ಬರ್ ಯೂಸುಫ್‍ ಶಾಹ್‍ನನ್ನು ಸೆರೆಯಲ್ಲಿಟ್ಟಿದ್ದು, ವಿಶ್ವಾಸಘಾತುಕತನ ತೋರಿದ್ದು ದೆಹಲಿ ಮತ್ತು ಶ್ರೀನಗರದ ಸಂಬಂಧಕ್ಕೆ ಒಂದು ರೂಪಕದಂತೆ ಇದೆ. ಯೂಸುಫ್ ಶಾಹ್ ಚಕ್ ನಂತರ, ಕಾಶ್ಮೀರ ಎಂದಿಗೂ ಸ್ವತಂತ್ರವಾಗಲೇ ಇಲ್ಲ’ ಎನ್ನುತ್ತಾರೆ ಪತ್ರಕರ್ತ ಬಶರತ್ ಪೀರ್.

ಇತ್ತ ಕಾಶ್ಮೀರದಲ್ಲಿ ರಾಜ ಮರಳುತ್ತಾನೆ ಎಂದು ಕಾಯುತ್ತಿದ್ದ ರಾಣಿ ಹಬ್ಬಾ ಖಾತೂನಳಿಗೆ ಅಕ್ಬರ್‌ ಆತನನ್ನು ಸೆರೆಯಲ್ಲಿಟ್ಟಿದ್ದು ಕೇಳಿ ಆಘಾತವಾಗುತ್ತದೆ. ನಂತರ 1589ರಲ್ಲಿ ಅಕ್ಬರ್ ಕಾಶ್ಮೀರವನ್ನು ಪೂರ್ಣವಾಗಿ ವಶಪಡಿಸಿಕೊಳ್ಳುತ್ತಾನೆ. ಹಬ್ಬಾ ಅರಮನೆಯನ್ನು ಬಿಟ್ಟು ತವರೂರಾದ ಗುರೆಜ್ ಕಣಿವೆಗೆ ಹಿಂತಿರುಗುತ್ತಾಳೆ. ರಾಣಿಯಾದ ಹಳ್ಳಿಯ ಚಂದಿರ ರಾಜನಾಗಿದ್ದ ಯೂಸುಫ್ ಶಾಹ್ ಮತ್ತು ಗುರೆಜ್ ಕಣಿವೆಯಲ್ಲಿ ಸಾಮಾನ್ಯ ರೈತ ಕುಟುಂಬದ ಹುಡುಗಿಯಾಗಿದ್ದ ಹಬ್ಬಾ ಖಾತೂನ್ ಮದುವೆಯಾಗಿದ್ದರ ಕುರಿತು ಹಲವಾರು ಕಥೆಗಳಿವೆ.

ಪ್ರಚಲಿತ ಕಥೆ ಹೀಗಿದೆ

ಶ್ರೀನಗರದ ಹೊರವಲಯದ ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿದ್ದ ಆಕೆಯ ಮೊದಲ ಹೆಸರು ಜೂನ್ ಅಥವಾ ಜುನ್ ಅಂದರೆ ಚಂದ್ರ. ತುಂಬ ಮುದ್ದಾಗಿದ್ದ ಜೂನ್ ಚಿಕ್ಕವಯಸ್ಸಿನಲ್ಲಿಯೇ ಊರಿನಲ್ಲಿದ್ದ ಮೌಲ್ವಿಯೊಬ್ಬರ ಸಹಾಯದಿಂದ ಓದುವುದನ್ನು ಕಲಿತಿದ್ದಳು. ಕಾವ್ಯವೆಂದರೆ ಹಾತೊರೆಯುವ ಜೀವ ಆಕೆಯದ್ದು. ತಂದೆ–ತಾಯಿಯು ಹತ್ತಿರದ ರೈತ ಕುಟುಂಬದ ಹುಡುಗನೊಂದಿಗೆ ಮದುವೆ ಮಾಡುತ್ತಾರೆ. ಮದುವೆಯ ನಂತರ ಅತ್ತಿಗೆ ಮತ್ತು ಅತ್ತೆ ‘ಎಲ್ಲ ಹೆಣ್ಣುಮಕ್ಕಳಂತೆ ಇರು’ವಂತೆ ಪುಟ್ಟ ಜೂನ್‍ಳಿಗೆ ಇನ್ನಿಲ್ಲದ ಕಿರುಕುಳ, ಒತ್ತಡ ಹೇರಲಾರಂಭಿಸುತ್ತಾರೆ. ಮದುವೆ ಮುರಿದು ಬಿತ್ತು. ಖಾತೂನ್ ತವರಿಗೆ ಮರಳಿದಳು. ಒಮ್ಮೆ ಬೇಟೆಗೆಂದು ಆ ಹಳ್ಳಿಯ ಮೂಲಕ ಹಾದುಹೋಗುತ್ತಿದ್ದ ದೊರೆ ಯೂಸುಫ್ ಶಾಹ್ ತನ್ನಷ್ಟಕ್ಕೆ ಹಾಡಿಕೊಳ್ಳುತ್ತಿದ್ದ ಜೂನ್‍ಳನ್ನು ನೋಡುತ್ತಾನೆ. ಅವಳ ಸೌಂದರ್ಯ, ಸ್ವರಮಾಧುರ್ಯಕ್ಕೆ ಸೋತುಹೋದ ದೊರೆ ಅವಳೆದುರು ಮಂಡಿಯೂರಿ, ಪ್ರೇಮ ನಿವೇದಿಸಿ ಕೊಳ್ಳುತ್ತಾನೆ. ಜೂನ್‍ಳನ್ನು ಮದುವೆಯಾಗುತ್ತಾನೆ.

ನಂತರ ಯಾವುದೋ ಸಂದರ್ಭದಲ್ಲಿ ಆಕೆಯ ಹೆಸರನ್ನು ಹಬ್ಬಾ ಖಾತೂನ್ ಎಂದು ಬದಲಿಸುತ್ತಾನೆ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದ ಈ ದಾಂಪತ್ಯಕ್ಕೆ ಕೊಡಲಿಯೇಟು ನೀಡಿದ್ದು ಅಕ್ಬರನ ಕುಟಿಲ ರಾಜನೀತಿ. ಪ್ರೀತಿಯ ಸಂಗಾತಿ ಸೆರೆಮನೆಯಲ್ಲಿ ಬಂದಿಯಾದ ನಂತರ ಅರಮನೆಯ ಐಷಾರಾಮವನ್ನು ತ್ಯಜಿಸಿ, ತವರೂರಿಗೆ ಮರಳಿದ ಹಬ್ಬಾ ತನ್ನೆಲ್ಲ ನೋವು, ಏಕಾಂಗಿತನವನ್ನು ಕವನಗಳಲ್ಲಿ ಹೊರಹೊಮ್ಮಿಸುತ್ತಾಳೆ.

ಹಬ್ಬಾ ಖಾತೂನ್ ಆ ಕಾಲಘಟ್ಟದ ಉಳಿದವರಿಗಿಂತ ಹತ್ತುಹಲವು ವಿಚಾರದಲ್ಲಿ ಭಿನ್ನಳಾಗಿದ್ದಳು. ಒಂದರ್ಥದಲ್ಲಿ ಆಕೆ ಆ ಎಲ್ಲ ಪುರುಷ ಕವಿಕೋವಿದರು ಬರೆಯುತ್ತಿದ್ದ ಕಾವ್ಯ ಛಂದಸ್ಸಿನ ವಿರುದ್ಧ ಬಂಡೆದ್ದವಳು. ಆಗಿನ ಕವಿಗಳು ರಚಿಸುತ್ತಿದ್ದ ಆಧ್ಯಾತ್ಮಿಕವೆನ್ನಿಸುವ, ವ್ಯಕ್ತಿಯ ಆತ್ಮೋದ್ದಾರದಲ್ಲಿಯೇ ಉಸಿರುಗಟ್ಟಿದ್ದ ಕಾವ್ಯಕ್ಕೆ ಬೇರೆಯದೇ ಸ್ಪರ್ಶ ನೀಡಿದಳು. ತನ್ನ ಚಿಂತನೆಗಳು, ವಿಷಾದ ಮಡುಗಟ್ಟಿದ ಭಾವನೆಗಳನ್ನು, ಮಧುರ ಯಾತನೆಯಂತೆ ಚಿತ್ರಿಸಿ, ಓದುಗರಿಗೆ ಅರೆ, ಇದು ನನ್ನಾಳದ ನೋವೂ ಹೌದಲ್ಲ ಎನ್ನಿಸುವಂತೆ ಮಾಡಿದವಳು.

ಕಾಶ್ಮೀರದ ನೈಟಿಂಗೇಲ್

ಆಕೆಯ ಕವನಗಳನ್ನು ಮುಖ್ಯವಾಗಿ ಪ್ರಭಾವಿಸಿದ್ದು ಮೊದಲ ಮದುವೆಯ ವೈಫಲ್ಯ ಮತ್ತು ಅಪಾರವಾಗಿ ಪ್ರೀತಿಸುತ್ತಿದ್ದ ರಾಜ ಸೆರೆಯಾಳಾಗಿ ಹೋದ ನಂತರದ ಏಕಾಂಗಿತನದ ನೋವು. ಆಕೆಯ ಸಮಕಾಲೀನರ ಆಧ್ಯಾತ್ಮಿಕ ದನಿಗಿಂತ ಬೇರೆಯಾಗಿ, ಪ್ರೀತಿಯ ಬಗ್ಗೆ ವಾಸ್ತವತೆಯ ದನಿಯಲ್ಲಿವೆ ಆಕೆಯ ಹಾಡುಗಳು. ‘ಕಾಶ್ಮೀರದ ನೈಟಿಂಗೇಲ್’ ಎಂದು ಹೆಸರಾದ ಆಕೆ ಅನ್ನಿಸಿದ್ದನ್ನು ನೇರವಾಗಿ ಸರಳವಾಗಿ ಕವನಗಳಲ್ಲಿ ಕಟ್ಟಿಕೊಟ್ಟವಳು.

‘ನಾನು ಎಂಟು ಹತ್ತು ವರ್ಷದವನಿದ್ದಾಗಲೇ ನನ್ನಜ್ಜ, ಅಜ್ಜಿ ಹಬ್ಬಾ ಖಾತೂನಳ ಬಗ್ಗೆ ಮಾತಾಡುವುದನ್ನು, ಆಕೆ ಬಹುದೊಡ್ಡ ಅನುಭಾವೀ ಕವಿ ಅಂತ ಹೇಳುವುದನ್ನು ಕೇಳಿಸಿಕೊಂಡಿದ್ದೆ. ಆಗೆಲ್ಲ ಅಷ್ಟು ಅರ್ಥವಾಗ್ತಿರಲಿಲ್ಲ. ಕಾಶ್ಮೀರದಲ್ಲಿ ಈಗಲೂ ಮದುವೆ, ಹಬ್ಬಗಳು ಇನ್ನಿತರ ಸಂದರ್ಭಗಳಲ್ಲಿ ಆಕೆಯ ಹಾಡುಗಳನ್ನು ಹಾಡ್ತಾರೆ. ಜನಪದ ಗೀತೆಗಳನ್ನು ಹಾಡುವವರಿಂದ ಹಿಡಿದು ಮ್ಯೂಸಿಕ್ ಆಲ್ಬಂ ಹೊರತರುವ ಹಾಡುಗಾರರವರೆಗೆ ಎಲ್ಲರಿಗೂ ಆಕೆಯ ಹಾಡುಗಳು ಬೇಕು. ಈಗಲೂ ಕಾಶ್ಮೀರದಲ್ಲಿ ಆಕೆಯ ಹಾಡುಗಳನ್ನು ತುಂಬ ಪ್ರೀತಿಯಿಂದ ಆಲಿಸುತ್ತಾರೆ’ ಎಂದು ವಿವರಿಸುತ್ತಾರೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಶ್ರೀನಗರದ ನವಾಬ್ ಅಹಮದ್ ರೇಶಿ.

ಆಕೆ ಬದುಕಿದ್ದ ಕಾಲಘಟ್ಟ ಮತ್ತು ಆಗಿನ ಸಂದರ್ಭವನ್ನು ಪರಿಗಣಿಸಿದರೆ, ಅಚ್ಚರಿಯಾಗುವಷ್ಟು ದಿಟ್ಟತನದಿಂದ ಬರೆಯುತ್ತಿದ್ದಳು ಎನ್ನಬೇಕು. ಆಕೆಗಿಂತ ಮೊದಲಿನ ಅಥವಾ ನಂತರದ ಕವಯತ್ರಿಯರು ಕೂಡ ಆಧ್ಯಾತ್ಮಿಕತೆ ಮತ್ತು ಅನುಭಾವಿ ಕಾವ್ಯವನ್ನು ಬರೆದರೆ, ಹಬ್ಬಾ ಕಾಶ್ಮೀರಿ ಕವಿತೆಗಳಿಗೆ ಭಾವಗೀತಾತ್ಮಕತೆಯ ಲೇಪ ಕೊಟ್ಟವಳು. ಸ್ತ್ರೀಯರೆಂದರೆ ಕೇವಲ ಭೋಗದ ವಸ್ತುಗಳು, ಕೊಟ್ಟ ಪ್ರೀತಿಯನ್ನು ಮರುಮಾತಿಲ್ಲದೇ ಸ್ವೀಕರಿಸುವವರು ಎಂದು ಪರಿಗಣಿಸಿದ ಕಾಲದಲ್ಲಿ ಹೀಗೆ ತನ್ನ ಪ್ರಿಯಕರನನ್ನು ಹೆಸರಿಸಿ, ತನ್ನ ವಿರಹದ ಬೇಗೆಯ ಕುರಿತು ಬರೆಯುವ ಛಾತಿ ತೋರಿದ ಹಬ್ಬಾ ಖಾತೂನ್ ಆ ಅರ್ಥದಲ್ಲಿ ಪಾತ್ರಗಳನ್ನು ಅದಲುಬದಲಾಗಿಸಿದವಳು. ಆಗಿನ ಕಾಲದಲ್ಲಿ ಪುರುಷರು ಮಾತ್ರವೇ ಅಭಿವ್ಯಕ್ತಿಸುತ್ತಿದ್ದ ಮೈಮನಗಳ ಬಯಕೆಯನ್ನು ಆಕೆ ಬಹುಸುಂದರವಾಗಿ ತನ್ನ ಕವನಗಳಲ್ಲಿ ಅಭಿವ್ಯಕ್ತಿಸುವ ಧೈರ್ಯ ತೋರಿದಳು.

ಬಾಗಿಲ ಸಂದಿಯಿಂದ ಅವ ನನ್ನ ದಿಟ್ಟಿಸಿದ

ಅರೆ... ನಾನಿಲ್ಲಿರುವೆ ಎಂದು ಯಾರು ತೋರಿದರು ಅವನಿಗೆ

ಕಣಕಣದೊಳು ಪ್ರೀತಿಯಿಂದ ನೋಯುತಿಹ,

ಬಯಕೆಯೊಳು ಬೇಯುತಿಹ ಚಿರಯುವತಿ ನಾನೆಂದು

ನೀನೆನ್ನ ಹೃದಯ ಕದ್ದೊಯ್ದೆ...

ಹೂಪ್ರೀತಿಯವನೇ... ಮರಳಿ ಬಾ... ಬಾ

ವಿದ್ವಾಂಸ ಶ್ರೀಅಮಿನ್ ಕಮಿಲ್ ಹೇಳುವಂತೆ ಸುಮಾರು ಇಪ್ಪತ್ತು ಹಾಡುಗಳನ್ನು ಆಕೆ ನಿಜವಾಗಿಯೂ ಬರೆದಿರಬಹುದು, ಕಾಲಾಂತರದಲ್ಲಿ ಹಲವಾರು ಕವನಗಳನ್ನು ಆಕೆಯ ಹೆಸರಿನಲ್ಲಿ ರಚಿಸಲಾಗಿರಬಹುದು ಎನ್ನುತ್ತಾರೆ.

ಆಕೆ ಕಾಶ್ಮೀರಿ ಕಾವ್ಯದಲ್ಲಿ ‘ಲಾಲ್’ ಎಂಬ ಪ್ರಕಾರವನ್ನು ಪರಿಚಯಿಸಿದಳು ಎನ್ನಲಾಗುತ್ತದೆ. ಲಾಲ್ ಎಂದರೆ ಒಂದು ಕಿರು ಚಿಂತನೆಯನ್ನು ಭಾವಗೀತಾತ್ಮಕವಾಗಿ ಅಕ್ಷರಗಳಲ್ಲಿ ಪಡಿಮೂಡಿಸುವುದು ಎನ್ನಬಹುದು. ಕ್ರಿ.ಶ. 1500ರಿಂದ 1800ರವರೆಗೆ ಕಾಶ್ಮೀರಿ ಸಾಹಿತ್ಯದಲ್ಲಿ ಆದ ಮಹತ್ತರ ಬೆಳವಣಿಗೆಗಳಲ್ಲಿ ಹಲವಾರು ಮಹತ್ವದ ಕವಿ, ಕವಯತ್ರಿಯರಲ್ಲಿ ಹಬ್ಬಾ ಖಾತೂನ್ ಕೂಡ ಒಬ್ಬಳು. ಆಕೆ 1609ರ ಸುಮಾರಿಗೆ ತೀರಿಕೊಳ್ಳುತ್ತಾಳೆ.

ಹಾಡುಗಳ ರೂಪದಲ್ಲಿ ಮೌಖಿಕ ಪರಂಪರೆಯಲ್ಲಿ ತಲೆಮಾರಿನಿಂದ ತಲೆಮಾರಿಗೆ ದಾಟಿ ಬಂದ ಹಬ್ಬಾ ಖಾತೂನಳ ಕವನಗಳು ಈಗ ಅಕ್ಷರಗಳನ್ನು ಹೊದ್ದುಕೊಂಡು, ಕಾಶ್ಮೀರಿಗರ ಎದೆಯಲ್ಲಿ ಅಳಿಸಲಾಗದ ಸಾಲುಗಳಾಗಿ ಭದ್ರವಾಗಿವೆ.

ಹೊಳೆದಾರಿಯೊಳು ಅಲೆದಾಡುತ ನಿನ್ನ ಅರಸುವೆ...

ಮತ್ತೆ ನಾವು ಸೇರಬೇಕೆಂದು ಮೊರೆಯಿಡುವೆ

ಮಲ್ಲಿಗೆಯರಳಿದತ್ತ ಹೊರಳಿ ನಿನ್ನ ಅರಸುವೆ...

ಹೇಳದಿರು ಎನಗೆ ಮತ್ತೆಂದೂ ನಾವು ಸೇರಲಾರೆವೆಂದು

ಅಗಲಿಕೆಯ ನೋವು, ಬೇಗುದಿಯ ಸಹಿಸದೆ ಹಬ್ಬಾ ಖಾತೂನ್ ಅಂದು ಆರ್ದ್ರಳಾಗಿ ಕವನದಲ್ಲಿ ಮೊರೆಯಿಟ್ಟಿದ್ದು ಪ್ರಭುತ್ವದ ಕ್ರೌರ್ಯಕ್ಕೆ ಪ್ರೀತಿಯ ಜೀವಗಳು ಬಲಿಯಾಗುವ ಈಗಿನ ಕಾಲಕ್ಕೂ ಸಲ್ಲುವ ಸಾಲುಗಳಾಗಿ ಉಳಿದಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)