ಶುಕ್ರವಾರ, ಏಪ್ರಿಲ್ 10, 2020
19 °C

ಸಮಾನತೆಯೆಂಬ ಗಾಳಿ ಗುಳ್ಳೆ

ಪ್ರೀತಿ ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಅಮೆರಿಕದಂತಹ ದೇಶದಲ್ಲೇ ಪುರುಷ ಉದ್ಯೋಗಸ್ಥರು ಶೇಕಡ 66 ಇದ್ದರೆ ಮಹಿಳಾ ಉದ್ಯೋಗಿಗಳು ಅದಕ್ಕಿಂತ ಹತ್ತಿರತ್ತಿರ ಹನ್ನೆರಡು ಪರ್ಸೆಂಟ್ ಕಡಿಮೆ ಅಂದರೆ ಶೇಕಡ 54.6 ಇದ್ದಾರೆ.

***

‘ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...’ ಎಂಬ ಕವಿವಾಣಿಯಂತೆ ಈಗ ಪುನರಾವರ್ತನೆಯಾಗುತ್ತಿರುವುದು ಹಬ್ಬಗಳಷ್ಟೇ ಅಲ್ಲ, ಅಂತರರಾಷ್ಟ್ರೀಯ ದಿನಗಳೂ ಹಳತಾಗುವಷ್ಟು ಮರುಕಳಿಸುತ್ತವೆ.

ಆಗ ವಾಪಾಸು ಬರುವುದು ದಿನ, ದಿನಾಂಕ ಮಾತ್ರವೇ ಅಲ್ಲ; ಕಳೆದ ವರ್ಷದ ಉಲಿಯುವಿಕೆಗಳೂ, ಹಳಿಯುವಿಕೆಗಳೂ ಮತ್ತು ಹಳೇ ವಾದಗಳ ಮಂಡನೆಗಳೂ ಕೂಡ ಹೊಸ ವ್ಯಾಖ್ಯಾನದ ದಿರಿಸು ಧರಿಸಿ ನಿಲ್ಲುತ್ತವೆ. ಅಂಥದ್ದರಲ್ಲಿ ಮೇರು ಸಾಲಿನಲ್ಲಿ ನಿಲ್ಲುವುದು ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಎಂದು ನನಗೆ ಅನ್ನಿಸುತ್ತದೆ. ಮಹಿಳಾ ಸಮಾನತೆಯ ಕನಸು ಬಹಳ ಅಪ್ಯಾಯಮಾನವಾದದ್ದೇ. ಆದರೆ, ಇದು ಸಾಕಾರಗೊಳ್ಳುತ್ತಿರುವುದು ಮಾತ್ರ ವಿವಿಧ ಸ್ತರಗಳಲ್ಲಿ. ಸಮಾಜದ ಹಲವು ಹಂತಗಳಲ್ಲಿ ಸಮಾನತೆ ಸ್ವಲ್ಪ ಪ್ರಗತಿ ಸಾಧಿಸಿದ್ದರೆ ಇನ್ನು ಕೆಲವು ಕಡೆ ಮಹಿಳೆಯರ ಸ್ಥಿತಿ ಎಷ್ಟೂ ಉತ್ತಮವಾಗುತ್ತಿಲ್ಲ ಎನ್ನುವುದೂ ಅಷ್ಟೇ ವೈರುಧ್ಯಮಯ ಸತ್ಯ.

ಕಾರ್ಪೋರೇಟ್ ಕಂಪನಿಗಳಲ್ಲಿ ‘ಸಮಾನ ಅವಕಾಶ ಉದ್ಯೋಗ’ ಅಂದರೆ ‘ಈಕ್ವಲ್ ಆಪರ್ಚುನಿಟಿ ಎಂಪ್ಲಾಯ್‌ಮೆಂಟ್’ ಎಂದು ಜಾಹೀರಾತುಗಳು ಕಂಡಷ್ಟೇ ಸತ್ಯವಾಗಿ ಇನ್ನೊಂದು ಕಡೆ ‘ಈ ಕೆಲಸಕ್ಕೆ ಮಹಿಳೆಯರು ಮಾತ್ರ ಬೇಕು’ ಎಂದು ಕೇಳುವುದನ್ನು ಕಂಡು ನಾವೇನೂ ಸಂತೋಷಪಡಬೇಕಿಲ್ಲ. ಯಾಕೆಂದರೆ ಉದ್ಯೋಗ ಕೊಡುವವರಿಗೆ ‘ಅಂತಹ ಕೆಲಸಗಳನ್ನು ಮಾಡಲು ಮಹಿಳೆಯರೇ ಸೂಕ್ತ’ ಎನ್ನುವ ಪೂರ್ವಗ್ರಹ ನೆಲೆನಿಂತುಬಿಟ್ಟು ಎಷ್ಟೋ ಕೆಲಸಗಳು ಅರ್ಹತೆಯಿದ್ದರೂ ಪುರುಷರಿಗೆ ನಿರಾಕರಿಸಲ್ಪಡುತ್ತವೆ.

ಉದಾಹರಣೆಗೆ ‘ಫ್ರಂಟ್ ಆಫೀಸ್ ಅಸಿಸ್ಟೆಂಟ್’ ಅಂದರೆ ‘ರಿಸೆಪ್ಷನಿಸ್ಟ್’ ಎನ್ನುವುದಕ್ಕೆ ಆಧುನಿಕ ಪದಬಳಕೆ. ಇಂತಹ ಜಾಹೀರಾತುಗಳು ದಿನಬೆಳಗಾದರೆ ಎಲ್ಲಾ ಪತ್ರಿಕೆಗಳಲ್ಲೂ, ಅಂತರ್ಜಾಲದಲ್ಲೂ ಕಾಣಸಿಗುತ್ತವೆ. ಇದು ಇನ್ನೊಂದು ಬಗೆಯ ಭೇದ ಅಂತ ನನಗೆ ಅನ್ನಿಸುತ್ತದೆ. ಅರ್ಹತೆ ಇರುವ ಹುಡುಗನೊಬ್ಬ ಎಷ್ಟೇ ಚುರುಕಾಗಿದ್ದರೂ ಇಂತಹ ಕೆಲಸಕ್ಕೆ ಆಯ್ಕೆಯಾಗಲಾರ ಎನ್ನುವಾಗ ತಮಗಾಗಿ ಕಾದಿಟ್ಟ ಕೆಲಸಗಳ ಬಗ್ಗೆ ಮಹಿಳೆಯರು ಸಂತೋಷಪಡಬೇಕೋ ಅಥವಾ ಎಷ್ಟೇ ಪ್ರಗತಿ ಸಾಧಿಸಿದರೂ ನಮಗ್ಯಾಕೆ ಬರೀ ಇಂತಹ ಕೆಲಸಗಳು ಮಾತ್ರ ಮೀಸಲಾಗುತ್ತವೆ ಅಂತ ಯೋಚಿಸಬೇಕೋ ತಿಳಿಯದಾಗಿದೆ.

ಐಟಿ ಕಂಪನಿಯಲ್ಲಿ ಕೆಲಸ ಮಾಡುವ ನನ್ನ ಗೆಳತಿಯೊಬ್ಬಳು ಆಗಾಗ ವಾದಕ್ಕೆ ನಿಲ್ಲುತ್ತಾಳೆ. ‘ಸುಮ್ಮನೆ ಪುರುಷರಲ್ಲಿ ತಪ್ಪು ಕಾಣುತ್ತೀ. ನನ್ನ ಸುತ್ತಲೂ ಬರೀ ಅನುಕೂಲಸಿಂಧುತ್ವಕ್ಕೆ ತಾನು ಹೆಣ್ಣು ಎನ್ನುವ ಅಸ್ತ್ರವನ್ನು ಬಳಸಿಕೊಂಡ ಹೆಂಗಸರೇ ಕಾಣುತ್ತಾರೆ. ಆಗ ನನಗೆ ಪುರುಷರ ಬಗ್ಗೆ ನಿಜಕ್ಕೂ ಪಾಪ ಅನ್ನಿಸುತ್ತೆ. ಹಾಗೆ ನೋಡಿದರೆ ಈ ಸಮಾನತೆಯ ವಾದವನ್ನು ತೀರಾ ಅತಿರೇಕಕ್ಕೆ ಒಯ್ದು ನಿಲ್ಲಿಸುತ್ತೀರಿ. ಮನೆಯನ್ನು ಹೆಣ್ಣು ಮಕ್ಕಳು ಸಂಭಾಳಿಸಿದರೆ ತಪ್ಪೇನು’ ಅಂತ ಪಾಟೀ ಸವಾಲು ಒಗೆಯುತ್ತಾಳೆ.

ಪಾಪ ಇದರಲ್ಲಿ ಅವಳ ತಪ್ಪಿಲ್ಲ. ಶಿಕ್ಷಣ ಮುಗಿಯುತ್ತಲೇ ಆ ಮುಗ್ಧೆಗೆ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕಿದೆ. ಅದರಲ್ಲಿ ಶ್ರಮವಹಿಸಿ ಕೆಲಸ ಮಾಡಿ ಒಳ್ಳೆಯ ಹೆಸರುಗಳಿಸಿ ಪ್ರವರ್ಧಮಾನಕ್ಕೂ ಬಂದಿದ್ದಾಳೆ. ಹಾಗಾಗಿ, ಅವಳ ಮನಸ್ಸಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದರೆ ಪ್ರಗತಿ ಕಟ್ಟಿಟ್ಟಬುತ್ತಿ ಎನ್ನುವ ನಂಬಿಕೆ ಇದೆ. ಅವಳ ಸಾಮಾಜಿಕ, ನೈತಿಕ, ರಾಜಕೀಯಕ್ಕೆ ಸಂಬಂಧಪಟ್ಟ ಅಭಿಪ್ರಾಯಗಳೆಲ್ಲಾ ತನ್ನ ಕಂಪನಿ ತನಗೆ ಒದಗಿಸಿರುವ ಗಾಳಿಗುಳ್ಳೆಯಂಥಾ ವಾತಾವರಣದಿಂದ ಸೃಷ್ಟಿಯಾಗುತ್ತದೆ. ಅದೊಂದು ದೊಡ್ಡ ಮಿತಿ ಅಂತ ಯೋಚಿಸಲೂ ಸಾಧ್ಯವಿಲ್ಲದವಳು.

ಅವಳು ಮಹಿಳಾ ಗಾರ್ಮೆಂಟ್ ಕೆಲಸಗಾರರ ದಿನಚರಿಯ ಬಗ್ಗೆ ಕಿಂಚಿತ್ತೂ ತಿಳಿಯಳು. ದಿನಕ್ಕೆ ಎರಡು ಬಾರಿ ಮಾತ್ರ ಟಾಯ್ಲೆಟ್ ಬಳಸಬೇಕು. ಅದೂ ಐದು ನಿಮಿಷದ ಅವಧಿಗೆ ಮಾತ್ರ ಎಂಬ ಒಂದು ಅಲಿಖಿತ ನಿಯಮ ಎಷ್ಟು ಜನ ಮಹಿಳಾ ಕೆಲಸಗಾರರನ್ನು ನಾನಾ ರೀತಿಯ ದೌರ್ಜನ್ಯಕ್ಕೆ ಈಡು ಮಾಡಿದೆ ಎನ್ನುವ ಕಲ್ಪನೆ ಕೂಡ ಅವಳಿಗಿಲ್ಲ. ಮುಂದಿನ ವಿಷಯಗಳನ್ನು ಚರ್ಚಿಸುವುದೂ ನಿರರ್ಥಕ ಎನ್ನುವಷ್ಟು ಮೂಗಿನ ನೇರಕ್ಕೆ ಜಗತ್ತು ಕಾಣುತ್ತದೆ.

ಇದು ಒಂದು ರೀತಿಯ ಸ್ಟಾಕ್‌ಹೋಮ್ ಸಿಂಡ್ರೋಮ್ ಅನ್ನಬಹುದು. ತನಗೆ ಸಿಕ್ಕಿರುವ ಅವಕಾಶಗಳನ್ನು ಇನ್ಯಾವುದೋ ಗಂಡಸಿಗೆ ‘ನಿರಾಕರಿಸಿ’ ಕೊಡಲಾಗಿದೆ. ಅದರಿಂದ ಸಮಾಜದ ಸಮತೋಲನ ಹಾಳಾಗಿದೆ ಎಂದುಕೊಳ್ಳುವ ಅನವಶ್ಯಕ ಅಪರಾಧಿ ಪ್ರಜ್ಞೆ.

ಮಧ್ಯಮ ವರ್ಗ ಎನ್ನುವ ಹಂಸತೂಲಿಕಾತಲ್ಪ ಕೊಡುವ ಅತ್ಯಂತ ರೋಮಾಂಚಕಾರಿ ಭಾವನೆ ಎಂದರೆ ನಾವು ಮೇಲೆ ಬಂದಿರುವುದು ಕಷ್ಟಪಟ್ಟು ಕೆಲಸ ಮಾಡಿದ್ದಕ್ಕೆ ಸಿಕ್ಕ ಫಲಿತಾಂಶ ಎನ್ನುವುದು. ಅದಕ್ಕೆ ಪೂರಕ ವಾತಾವರಣ, ಕಡ್ಡಾಯ ಶಿಕ್ಷಣ, ಕಾಯ್ದೆಗಳು, ನಿಯಮಗಳು, ಸ್ವಲ್ಪಮಟ್ಟಿಗೆ ಕಂಪನಿಯ ಸಹೃದಯತೆ (ತನಗೆ ಅನುಕೂಲವಾಗುವಲ್ಲಿ) ಮತ್ತು ಮಾರುಕಟ್ಟೆಗಳಲ್ಲಿ ಹುಟ್ಟುತ್ತಿರುವ ಡಿಮಾಂಡ್ ಎನ್ನುವುದನ್ನೆಲ್ಲಾ ಬಹಳ ಸುಲಭವಾಗಿ ಬದಿಗೆ ಸರಿಸಿಬಿಡುತ್ತೇವೆ.

ಮಹಿಳಾ ದಿನಾಚರಣೆಯ ದಿನ ದಶಕಗಳ ಹಿಂದೆ ಸಾವಿರಾರು ಮಹಿಳೆಯರು ಸಮಾನ ವೇತನ, ಉತ್ತಮ ವಾತಾವರಣವನ್ನು ಬೇಡಿ ಯುರೋಪಿನಲ್ಲಿ ರಸ್ತೆಗಿಳಿದಿದ್ದರು. ಅದರ ಫಲವಾಗಿ ನಾವಿಂದು ಆಫೀಸುಗಳಲ್ಲಿ ನಮ್ಮ ಇರವನ್ನು ಕೆಲಸದ ಮೂಲಕವೇ ಸಾಬೀತುಪಡಿಸಲು ಅವಕಾಶ ನೀಡಲಾಗಿದೆ ಎನ್ನುವ ಕಟುವಾಸ್ತವ ಯಾಕೋ ಅಷ್ಟು ಪಚನ ಆಗುವುದಿಲ್ಲ.

‘ಯಾಕೆ ಸುಮ್ಮನೆ ಮಹಿಳೆಯರಿಗೆ ರಿಸರ್ವೇಶನ್ ಕೇಳುತ್ತೀರಿ? ಎಷ್ಟು ಜನ ಪುರುಷರಿಗೆ ಅನ್ಯಾಯ ಆಗುತ್ತೆ ಗೊತ್ತಾ?’ ಎಂದು ಪ್ರಶ್ನೆ ಮಾಡುವಾಗ ರಿಸರ್ವೇಶನ್ನೇ ಇಲ್ಲದೆ ಎಷ್ಟೋ ವರ್ಷಗಳ ಕಾಲ ಪ್ರತಿಭಾನ್ವಿತ ಮಹಿಳೆಯರು ತಮ್ಮ ಕೌಶಲಗಳನ್ನು ಮನೆಯಲ್ಲಿ ಸಾರಿಸಿ, ಗುಡಿಸಿ, ರಂಗೋಲೆಯ ಹುಡಿಯೊಂದಿಗೆ ಹೊಸ್ತಿಲ ಆಚೆಗೇ ಬಿಟ್ಟಿದ್ದನ್ನು ಮರೆತುಬಿಡುತ್ತೇವೆ.

ಅಮೆರಿಕದಂತಹ ದೇಶದಲ್ಲೇ ಪುರುಷ ಉದ್ಯೋಗಸ್ಥರು ಶೇಕಡ 66 ಇದ್ದರೆ ಮಹಿಳಾ ಉದ್ಯೋಗಿಗಳು ಅದಕ್ಕಿಂತ ಹತ್ತಿರತ್ತಿರ ಹನ್ನೆರಡು ಪರ್ಸೆಂಟ್ ಕಡಿಮೆ ಅಂದರೆ ಶೇಕಡ 54.6 ಇದ್ದಾರೆ. ಸಮಾನ ಜವಾಬ್ದಾರಿ ನಿರ್ವಹಿಸುತ್ತಿರುವ ಪುರುಷ ಮತ್ತು ಮಹಿಳಾ ಉದ್ಯೋಗಿಗಳ ಸಂಬಳವನ್ನು ನೋಡಿದಾಗ ತಾರತಮ್ಯ ಬಯಲಿಗೆ ಬರುತ್ತದೆ. ಪುರುಷರಿಗೆ 946 ಡಾಲರ್ ಸಂಬಳ ಬಂದರೆ, ಹೆಣ್ಣುಮಕ್ಕಳು ಪಡೆದ ಸಂಬಳ ಕೇವಲ 769 ಡಾಲರ್.

ಇನ್ನು ಭಾರತದ ಸ್ಥಿತಿ ದೇವರಿಗೇ ಪ್ರೀತಿ. ಸಮಾನ ಕೆಲಸವೊಂದಕ್ಕೆ ಪುರುಷರು ₹ 100 ಆದಾಯ ಪಡೆದರೆ, ಅದೇ ಕೆಲಸಕ್ಕೆ ಹೆಣ್ಣುಮಕ್ಕಳು ₹ 50-60 ಪಡೆಯುತ್ತಾರೆ. ಕೃಷಿ, ಜವಳಿ ಮತ್ತು ಮನೆಗೆಲಸಗಳಲ್ಲಿ ದುಡಿಯುವ ಹೆಣ್ಣುಮಕ್ಕಳ ಸಂಖ್ಯೆ ಬಹಳ ಹೆಚ್ಚು ಇದ್ದರೂ ಅವರ ಶ್ರಮಕ್ಕೆ ತಕ್ಕ ಬೆಲೆ ಇಲ್ಲ.

ಯುನೈಟೆಡ್ ನೇಷನ್ಸ್ ಅಂಕಿಅಂಶಗಳ ಪ್ರಕಾರ ಜಗತ್ತಿನ ಶೇಕಡ 75ರಷ್ಟು ಕೌಟುಂಬಿಕ ಮನೆವಾರ್ತೆಯ ಕೆಲಸಗಳನ್ನು ಮಾಡುವುದು ಹೆಣ್ಣುಮಕ್ಕಳು. ಇದಕ್ಕೆ ಅವರಿಗೆ ಯಾವ ಸಂಬಳವೂ ಇಲ್ಲ, ಇದನ್ನು ಕರ್ತವ್ಯ ಎಂದೇ ಪರಿಗಣಿಸಲಾಗುತ್ತದೆ.

‘ನಮ್ಮ ಮನೆ ಕೆಲಸದವಳು ಗಂಡನ ಕೈಲಿ ಹೊಡೆಸಿಕೊಂಡು ಬೈಸಿಕೊಂಡು ಬರ್ತಾಳೆ. ಅವನು ನೋಡಿದರೆ ಕುಡುಕ, ಜವಾಬ್ದಾರಿ ಇಲ್ಲದವ. ಇವಳ ಮೂಗುಬೊಟ್ಟನ್ನೂ ಮಾರಿಕೊಂಡು ಕುಡೀತಾನೆ. ಬಾರೇ ನಾನೂ ನಿನ್ನ ಜೊತೆ ಇರ್ತೀನಿ, ಪೊಲೀಸ್‌ ಕಂಪ್ಲೇಂಟ್ ಕೊಡೋಣ ಅಂದರೆ ಹೋಗಲಿ ಬಿಡಿ ಅಕ್ಕಾ ಅಂತ ಹಿಂಜರಿದುಬಿಟ್ಟಳು’ ಅಂತ ಕೆಲಸದವಳ ಸಬಲತೆಗೆ ಇಂಬು ಕೊಡಲು ತುದಿಗಾಲಲ್ಲಿ ನಿಂತಿರುವ ಮಧ್ಯಮವರ್ಗದ ಇವಳಿಗೆ, ತಾನು ಕೆಲಸದವಳಿಗೆ ಎಷ್ಟು ಸಂಬಳ ಕೊಡುತ್ತಿದ್ದೇನೆ. ಅದಕ್ಕೆ ಪ್ರತಿಯಾಗಿ ಅವಳು ಮಾಡುತ್ತಿರುವ ಕೆಲಸ ಎಷ್ಟು, ಅದರಿಂದ ತನ್ನ ಆದಾಯಕ್ಕೆ ಎಷ್ಟು ಸಹಾಯ ಆಗುತ್ತಿದೆ. ಅದರ ಒಂದು ಪಾಲನ್ನು ಅವಳೊಂದಿಗೆ ಹಂಚಿಕೊಳ್ಳಬಹುದಾ ಎನ್ನುವ ಆಲೋಚನೆಯೂ ಬಂದಿರಲಿಕ್ಕಿಲ್ಲ.

ಅವಳ ಕುಡುಕ ಗಂಡನ ಸಮಸ್ಯೆಗೆ ಪರಿಹಾರ ಒದಗಿಸುವ ಈ ಹೆಣ್ಣು ತನ್ನ ಸಂಬಳ, ಆಸ್ತಿ ಕೂಡ ತನ್ನ ಕೈಯಲ್ಲಿ ಇಲ್ಲ. ತಾನೂ ಮೇಲ್ನೋಟಕ್ಕೆ ಗ್ರಹಿಕೆಗೆ ಬಾರದ ರೀತಿಯಲ್ಲಿ ಪರತಂತ್ರಳು ಎನ್ನುವುದನ್ನು ಒಪ್ಪಲು ಸದ್ಯಕ್ಕೆ ತಯಾರಿಲ್ಲ.

ಇದು ಸಿನಿಕತನದ ಮಾತಾದೀತು ಅನ್ನುವ ಅಪಾಯವನ್ನು ಮನಗಂಡೇ ಈ ಮಾತನ್ನು ಹೇಳಬೇಕಿದೆ. ಮಹಿಳಾ ದಿನಾಚರಣೆಗೂ ವ್ಯಾಲೆಂಟೈನ್ಸ್ ಡೇಗೂ ವಯಸ್ಸಿನ ವ್ಯತ್ಯಾಸ ಅಷ್ಟೇ ಇರಬಹುದಾ ಅಂತ ಒಮ್ಮೊಮ್ಮೆ ಅನ್ನಿಸುತ್ತೆ. ಹೇಳುತ್ತಿರುವೆ. ಎರಡೂ ದಿನಗಳು ಮಧ್ಯಮವರ್ಗ ಉದ್ದ ಕಾಂಡದ ಗುಲಾಬಿ ತೆಗೆದುಕೊಂಡು ಬಾಯಿಚಪ್ಪರಿಸುವ ಊಟ ಉಂಡು ಮತ್ತೆ ಹೊಸದೊಂದು ಫ್ಯಾಡ್‌ಗಾಗಿ ಕಾಯುವ ದಿನಾಂಕಗಳಾ ಅಂತ ಆಲೋಚನೆ ಹುಟ್ಟುತ್ತದೆ. ಉತ್ತರದ ಕಾಯುವಿಕೆ ಮತ್ತೆ ಮುಂದಿನ ಮಾರ್ಚ್ 8 ಬರುವವರೆಗೂ ಮುಂದುವರಿಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು