ಸೋಮವಾರ, ಸೆಪ್ಟೆಂಬರ್ 28, 2020
21 °C

ಕುಡಿಯರ ಕೂಸು ಮತ್ತು ಗುಡ್ಡ ಕುಸಿತ

ಸಹನಾ ಕಾಂತಬೈಲು Updated:

ಅಕ್ಷರ ಗಾತ್ರ : | |

Prajavani

‘ಕುಡಿಯರ ಕೂಸು’ ಕೃತಿಯನ್ನು ಕಾರಂತರು ಬರೆದದ್ದು 1951ನೇ ಇಸವಿಯಲ್ಲಿ. ಅಂದರೆ ಸುಮಾರು 68 ವರ್ಷಗಳ ಹಿಂದೆ. ಈಗ ಮತ್ತು ಎರಡು ವರ್ಷದ ಹಿಂದೆ ಕೊಡಗಿನಲ್ಲಿ ಆದ ಗುಡ್ಡ ಕುಸಿತದ ಯಥಾವತ್ ಚಿತ್ರ ಅದರ 17ನೇ ಅಧ್ಯಾಯದಲ್ಲಿ ಬಂದಿದೆ. ಅವರು ಅದನ್ನು ಕಣ್ಣಿಗೆ ಕಟ್ಟಿದಂತೆ ಬರೆಯಬೇಕಾದರೆ ಅನುಭವಿಸಿಯೇ ಬರೆದದ್ದು ಇರಬಹುದು.

‘ಕಾರಂತರ ಕುಡಿಯರ ಕೂಸು’ ಕಾದಂಬರಿ ಓದಿದ್ದೀಯಾ? ಅಲ್ಲಿ ಬರುವ ಮಲೆಗಳು ಈಗ ಹೇಗಿವೆ ಎಂದು ನೋಡಬೇಕೆನಿಸಿದೆ. ಕೊರೊನಾ ಬಿಸಿ ಆರಿದ ಮೇಲೆ ಹೋಗಬೇಕೆಂದಿದ್ದೇನೆ. ಬರುತ್ತೀಯಾ?’ ಎಂದು ಗೆಳತಿ ನಾಗವೇಣಿ ಅವರು ಈಚೆಗೆ ಕರೆಮಾಡಿ ಕೇಳಿದರು. ಮೊದಲೇ ಪ್ರವಾಸ ಎಂದರೆ ನಾನು ಜೀವ ಬಿಡುವವಳು. ಮತ್ತೆ ಕೇಳಬೇಕೇ? ತಕ್ಷಣ ಒಪ್ಪಿಕೊಂಡೆ.

‘ಕುಡಿಯರ ಕೂಸು’ ಕೃತಿಯನ್ನು ನಾನು ಹಿಂದೆ ಓದಿರಲಿಲ್ಲ. ಆ ಕಾರಣಕ್ಕಾಗಿಯೇ ಅದನ್ನು ಮಗನ ಮುಖಾಂತರ ಆನ್‍ಲೈನ್‍ನಲ್ಲಿ ತರಿಸಿ ಎರಡೇ ದಿನದಲ್ಲಿ ಓದಿ ಮುಗಿಸಿದೆ. ಅದನ್ನು ಓದುತ್ತಾ ಹೋದ ಹಾಗೆ ಅಲ್ಲಿ ಬರುವ ಮಲೆಗಳೆಲ್ಲವೂ ನನ್ನ ಮನೆ ಸುತ್ತಮುತ್ತ ಇರುವಂಥವು. ಛೆ! ನಾನು ಮೊದಲೇ ಓದಬೇಕಿತ್ತು ಎಂದು ನನಗೆ ಇನ್ನಿಲ್ಲದಂತೆ ಅನಿಸಿತು. ಕಾರಂತರು ಅದನ್ನು ಬರೆದದ್ದು 1951ನೇ ಇಸವಿಯಲ್ಲಿ. ಅಂದರೆ ಸುಮಾರು 68 ವರ್ಷಗಳ ಹಿಂದೆ. ಈಗ ಮತ್ತು ಎರಡು ವರ್ಷಗಳ ಹಿಂದೆ ನನ್ನೂರು ಕೊಡಗಿನಲ್ಲಿ ಆದ ಗುಡ್ಡ ಕುಸಿತದ ಯಥಾವತ್ ಚಿತ್ರ ಅದರ 17ನೇ ಅಧ್ಯಾಯದಲ್ಲಿ ಬಂದಿದೆ. ಅವರು ಅದನ್ನು ಕಣ್ಣಿಗೆ ಕಟ್ಟಿದಂತೆ ಬರೆಯಬೇಕಾದರೆ ಅನುಭವಿಸಿಯೇ ಬರೆದದ್ದು ಇರಬಹುದು. ಕಲ್ಪನೆ ಆಗಿರಲಿಕ್ಕಿಲ್ಲ.

ನಾನು ಇದನ್ನು ಯಾಕೆ ಹೇಳಿದೆನೆಂದರೆ ಕೊಡಗಿನಲ್ಲಿ ಈ ಹಿಂದಿನ ಗುಡ್ಡ ಕುಸಿತ ಘಟನೆಗೆ ಅರಣ್ಯಹನನ, ಜನಸಂಖ್ಯೆ ಹೆಚ್ಚಳ, ಹೋಂ ಸ್ಟೇ- ರೆಸಾರ್ಟ್ ಅಬ್ಬರ, ಬೆಟ್ಟದ ತುದಿಯಲ್ಲಿ ನೀರಿನ ಬೃಹತ್ ಟ್ಯಾಂಕ್‌ ನಿರ್ಮಾಣ, ಲಾರಿಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸರಕು ಸಾಗಣೆ ಇತ್ಯಾದಿ ಕಾರಣಗಳನ್ನು ಪರಿಸರತಜ್ಞರು, ವಿಜ್ಞಾನಿಗಳು ಕೊಟ್ಟಿದ್ದರು. ಆಗ ನನಗನಿಸಿತ್ತು- ಈ ಕಾರಣಗಳಿಂದಾಗಿಯೇ ಅಷ್ಟೇ ಗುಡ್ಡ ಕುಸಿದಿಲ್ಲ. ಮಳೆ ವಿರಾಮ ತೆಗೆದುಕೊಳ್ಳದೆ ಸತತವಾಗಿ ಸುರಿದು ಗುಡ್ಡದಲ್ಲೆಲ್ಲ ಒರತೆಯಾಗಿ ಮಣ್ಣು ನೆನೆದು ಅದು ಜರಿಯಿತು ಎಂದು. ನನ್ನ ಈ ನಂಬಿಕೆ ಕಾರಂತರ ‘ಕುಡಿಯರ ಕೂಸು’ ಓದಿದ ಮೇಲೆ ಬಲವಾಯಿತು.

ಕಾರಂತರು ಬೆಟ್ಟ ಕುಸಿತದ ಬಗ್ಗೆ ಕೊಟ್ಟ ವಿವರಣೆಯಲ್ಲಿ ಕೆಲವನ್ನು ಹೆಕ್ಕಿ ಇಲ್ಲಿ ಯಥಾವತ್ ಉದ್ಧರಿಸಿದ್ದೇನೆ: ‘ಆ ಮಳೆಗಾಲವೆಂದರೆ ಮಳೆಗಾಲವೇ! ಬೇಸಗೆಯಲ್ಲಿ ತೊಡಗಿದ ಮಳೆ ಒಂದು ದಿನವೂ ಬಿಡದೆ ಹುಚ್ಚು ಕಟ್ಟಿ ಅಹರ್ನಿಶಿ ಬಡಿಯಬೇಕೇ? ಕರಿಯಮಲೆ ಮುಗಿಲಿನಿಂದ ಕವಿಯದಿದ್ದಂಥ ದಿನವಿಲ್ಲ, ರಾತ್ರಿಯಿಲ್ಲ; ಮಳೆಯ ಆರ್ಭಟ ಕೇಳದ ಗಳಿಗೆಯಿಲ್ಲ. ಒಂದು ವರ್ಷದ ಕೃಷಿಯೆಲ್ಲ ವ್ಯರ್ಥವಾಯಿತು. ಈ ವರ್ಷ ಕೆಳಗಿನವರು ತಮಗೆ ಭತ್ತ ಕೊಟ್ಟರೆ ಉಂಟು ಎಂದು ಚಿಂತಿಸಬೇಕಾಯಿತು ತಿಮ್ಮ, ಕರಿಯರು. ಮಳೆ ಹೆಚ್ಚಾದುದರಿಂದ ಏಲಕ್ಕಿ ಬುಡಗಳೆಲ್ಲವೂ ಬರಿದಾಗಿದ್ದವು. ಬೇಸರ ಕಳೆಯುವುದಕ್ಕೂ ಹೊರಗೆ ಅಡ್ಡಾಡಲು ಬಾರದಷ್ಟು ಗಾಳಿ, ಮಳೆ. ಒಂದು ದಿನವಾದರೂ ಬಿಸಿಲು ಕಾಣುವುದಕ್ಕಿಲ್ಲ’.

ಗುಡ್ಡ ಕುಸಿದ ಚಿತ್ರಣವನ್ನು ಕಾರಂತರು ಕಟ್ಟಿಕೊಡುವುದು ಹೀಗೆ: ‘ಅಲ್ಲಲ್ಲಿ ಬುಡಮೇಲಾಗಿ ಉರುಳಿದ ಮರಗಳ ಸಂಖ್ಯೆ ಅಪರಿಮಿತವಾಗಿತ್ತು. ಆಚೀಚಿನ ಮಲೆಗಳಲ್ಲಿ ಹರಿಯುತ್ತಿದ್ದ ಅಬ್ಬಿಗಳು, ಜಲಪಾತಗಳು ನಿತ್ಯಕ್ಕಿಂತ ಹತ್ತುಮಡಿ ಉಕ್ಕಿನಿಂದ ಬೀಳುತ್ತಿದ್ದುವು. ಅಷ್ಟೇ ಅಲ್ಲ, ಸಂಪೂರ್ಣ ಹಸಿರಾದ ಬೆಟ್ಟದ ಗೋಡೆಗಳಲ್ಲಿ ಕೆಂಪು ಬಣ್ಣದ ಮುಕ್ಕುಗಳು ಹಲವೆಡೆ ಕಾಣಿಸುತ್ತಿದ್ದವು. ಮಳೆ ಹೆಚ್ಚಿ ನೀರ ಒರತೆ ಪ್ರಾಪ್ತಿಸಿ, ಬೆಟ್ಟದ ಮಗ್ಗುಲುಗಳು ಎಷ್ಟೋ ಕಡೆಗಳಲ್ಲಿ ಜರಿದು ಹೀಗೆ ಕುಸಿದು ಮುಕ್ಕುಗೊಂಡಿದ್ದುವು. ಇಂದ್ರ ತನ್ನ ವಜ್ರಾಯುಧ ಹಿಡಿದು ಬೆಟ್ಟಕ್ಕೆ ಬಡಿದುಂಟಾದ ಹೊಸ ಗಾಯಗಳಂತೆ ಕಾಣುತ್ತಿದ್ದುವು. ಯಾವ ವರ್ಷವೂ ಇಷ್ಟು ಹೆಚ್ಚಾಗಿ ಘಟ್ಟದ ಬರೆಗಳು ಜರಿದದ್ದೆಂಬುದಿಲ್ಲ. ಕರಿಯನಿಗೆ ನೆಲ ಕುಸಿದದ್ದು ಕಾಣಿಸುತ್ತಿತ್ತು.

‘ನೂರಾರು ಎಕ್ರೆ ವಿಶಾಲವಾದ ಕಾಡಿನ ಭಾಗ ಭೂಕಂಪದಿಂದ ಅದುರಿ ಕುಸಿದಂತೆ ಕಾಣಿಸುತ್ತಿತ್ತು. ಆತ ನಿಂತ ಜಾಗಕ್ಕೂ, ಕುಸಿದ ಭಾಗಕ್ಕೂ ನೂರಿನ್ನೂರು ಅಡಿಗಳ ಅಂತರವನ್ನುಂಟುಮಾಡಿತ್ತು. ಕುಸಿದ ಬೆಟ್ಟದ ಮಗ್ಗುಲು, ಕೆಂಪು ಕೋಟೆಯ ಗೋಡೆಯಂತೆ ಕಾಣುತ್ತಿತ್ತು. ಅದರ ಮೇಲಿನ ಸಂಸ್ತರ ಕೆಂಪಾಗಿದ್ದರೆ, ಕೆಳಗಿನ ಅಂಚೆಲ್ಲ ಬಿಳಿ ಜೇಡಿಯ ಮಣ್ಣಿನದು. ಕಾಡಿಗೆ ಕಾಡೇ ಕುಸಿದು ಕುಕ್ಕರಳ್ಳಿಯ ಬಯಲಿನ ತನಕವೂ ಚಾಚಿ ನೀಡಿದ ವಿಚಿತ್ರ ನೋಟ ಕಾಣಿಸಿತು. ಈತ ನಡೆಯುತ್ತಿದ್ದ ಅಂಚಿನಲ್ಲಿದ್ದ ಎಷ್ಟೋ ಮರಗಳು ಅಲ್ಲಲ್ಲಿ ಅರ್ಧಮರ್ಧ ಮಗುಚಿ ಬಿದ್ದಿದ್ದುವು. ಹಳ್ಳದ ನೀರು ಬೆಟ್ಟದ ಮಣ್ಣನ್ನೆಲ್ಲ ಕಲಸಿಕೊಂಡು, ಕೆಂಪಾದ ಕೆಸರಾಗಿ ಬರುತ್ತಿತ್ತು.  

‘ಆ ಕೆಂಪು ಮಣ್ಣಿನ ರಾಡಿಯಲ್ಲಿ ಉರುಳಿದ ಬಂಡೆಗಳು, ಹೂತ ಬಂಡೆಗಳು, ನಿಂತ ಮರಗಳೂ ಕಾಣಿಸಿದುವು. ಮಲೆ ಕುಸಿದುದರ ಪರಿಣಾಮವಾಗಿ ಹಳ್ಳಿಯ ಹಳ್ಳವೊಂದು ದಾರಿ ತಪ್ಪಿ, ಅದರ ಬಯಲಿನ ಒಂದು ಭಾಗವನ್ನೇ ಕೊಚ್ಚಿಕೊಂಡು ಹೋಗಿತ್ತು. ಅದು ದೋಚಿ ತಂದಂಥ ಮಣ್ಣಿನಿಂದ, ಬೆಳೆದ ಹೊಲ ಗದ್ದೆಗಳನ್ನು ಮಣ್ಣಿನಿಂದ ತುಂಬಿಸಿತ್ತು. ನೆಲ ಜರಿದು ದಿನಗಳು ಮೂರಾದವು. ಆ ರಾತ್ರಿಯೇ ಕಾಡು ಮುರಿದು, ಜರಿದು ಬೀಳುವ ಆರ್ಭಟ ಕೇಳಿ ಭೂಕಂಪವಾಗುತ್ತಿದೆ ಎಂದುಕೊಂಡಿದ್ದೆವು. ಮೂರು ದಿನಗಳಿಂದ ಹೊಳೆಯೂ ದಾರಿ ತಪ್ಪಿ ಕೆಸರು ಮಣ್ಣನ್ನು ತಂದು ತುಂಬಿಸುತ್ತಿದೆ. ಹಳ್ಳದ ಮಣ್ಣು ಬಂದು, ಹೊಲ ತುಂಬಿ ಒಂದು ವರ್ಷ ದುಡಿದರೂ ಮುಗಿಯದ ಕೆಲಸವಿದೆ’.

ಈ ಮೇಲಿನ ಚಿತ್ರಣಗಳೆಲ್ಲವೂ ಎರಡು ವರ್ಷದ ಹಿಂದೆ ಮತ್ತು ಈಗ ಕೊಡಗಿನಲ್ಲಿ ನಡೆದ ಬೆಟ್ಟ ಕುಸಿತದ ರೀತಿಯಲ್ಲೇ ಇವೆ. ‘ಕುಡಿಯರ ಕೂಸು’ ರಚನೆಗೊಂಡ ಆ ಕಾಲದಲ್ಲಿ ಅರಣ್ಯನಾಶ ಮಾಡುವವರು ಇರಲಿಲ್ಲ. ಹೋಂ ಸ್ಟೇ - ರೆಸಾರ್ಟ್‌ಗಳೂ ಇರಲಿಲ್ಲ. ಜನಸಂಖ್ಯೆಯೂ ವಿರಳ. ಸರಿಯಾದ ರಸ್ತೆಯೂ ಇರಲಿಲ್ಲ. ಆದರೂ ಪ್ರಕೃತಿ ಮುನಿಸಿಕೊಂಡಿತ್ತು. ಕಾಡನ್ನು ಆಪೋಶನ ತೆಗೆದುಕೊಂಡಿತ್ತು. ಇದಕ್ಕೆ ಪರಿಸರತಜ್ಞರು, ವಿಜ್ಞಾನಿಗಳು ಏನೆನ್ನುತ್ತಾರೆ? ಹಾಗೆಂದು ನಾನು ಅರಣ್ಯ ಅತಿಕ್ರಮಣಕ್ಕೆ ಬೆಂಬಲ ಕೊಡುತ್ತೇನೆ ಎಂದು ಇದರ ಅರ್ಥವಲ್ಲ (ನಾನು ಕಾಡಿನ ಮಗಳು. ಕಾಡಲ್ಲಿ ಬದುಕು ಕಟ್ಟಿಕೊಂಡಿರುವವಳು). ಹಿಂದೆ ಆದಂತೆ ಈಗಲೂ ಬೆಟ್ಟ ಕುಸಿದಿದೆ ಎಂದಷ್ಟೇ ನಾನು ಪ್ರತಿಪಾದಿಸುತ್ತಿರುವುದು. ತಿಳಿದವರು ಇನ್ನಷ್ಟು ಬೆಳಕು ಚೆಲ್ಲಬೇಕು.

ಪ್ರಳಯ, ನೆರೆ, ಭೂಕುಸಿತ, ಬರ ಇವೆಲ್ಲ ಪ್ರಕೃತಿಯಲ್ಲಿ ಸಂಭವಿಸುತ್ತಲೇ ಇರುತ್ತವೆ. ಅದು ಸಹಜ. ಪ್ರಕೃತಿ ಇಂದು ಇದ್ದಂತೆ ನಾಳೆ ಇರುವುದಿಲ್ಲ. ಬದಲಾಗುತ್ತಲೇ ಇರುವುದು ಅದರ ಗುಣ. ಅದರೊಂದಿಗೆ ಹೊಂದಿಕೊಂಡು ಬಾಳುವುದನ್ನು ಕಲಿಯೋಣ. ಪ್ರಕೃತಿಯನ್ನು ಉಳಿಸುವುದು, ಪ್ರೀತಿಸುವುದನ್ನು ನಮ್ಮ ಧ್ಯೇಯವಾಗಿಸಿಕೊಳ್ಳೋಣ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.