ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋವಲ್ಲಿ ಮುಳುಗೆದ್ದ ‘ಸುಲ್ತಾನ್’

Last Updated 11 ಜುಲೈ 2020, 19:31 IST
ಅಕ್ಷರ ಗಾತ್ರ

‘ಜಬ್ ದಿಲ್ ಹೀ ಟೂಟ್ ಗಯಾ
ಹಮ್ ಜೀ ಕೆ ಕ್ಯಾ ಕರೆಂಗೆ..’

–ಪ್ರೀತಿಯಲ್ಲಿ ಸೋತ ಈ ಕವಿ ತನ್ನ ನೋವಿನಲ್ಲಿ ಪೆನ್ನು ಅದ್ದಿ ಹಾಡು ಬರೆಯುತ್ತಿದ್ದ. ಬಡವರ ನೋವು ಅವನ ಉಸಿರಿನಲ್ಲಿ ಜೀವಿಸುತ್ತಿತ್ತು. ಕಾರ್ಮಿಕರ ಬವಣೆ ಅವನೆದೆಯನ್ನು ಸುಡುತ್ತಿತ್ತು. ಜನರ ಮನದ ನೋವಿಗೆ ಮುಲಾಮಿನಂತಹ ಹಾಡುಗಳನ್ನು ಬರೆದ ಮಹಾನ್‌ ಕವಿ, ಗೀತೆ ರಚನೆಕಾರ ಮಜ್ರೂಹ್ ಸುಲ್ತಾನಪುರಿ, ಹಿಂದಿ ಚಲನಚಿತ್ರ ರಂಗದ ಮೇರು ಪ್ರತಿಭೆ.

ಮಾರ್ಕ್ಸ್ ಮತ್ತು ಲೆನಿನ್‌ರ ಕನಸುಗಳನ್ನು ಸಾಕಾರಗೊಳಿಸಿದ ಅಪ್ರತಿಮ ಕವಿ ಈತ. ಇಂದಿಗೂ ಸುಲ್ತಾನಪುರಿ ಅವರ ಹೆಸರೆತ್ತಿದರೆ ಸಾಕು, ನಮಗೆ ಗೊತ್ತಿಲ್ಲದೆಯೇ ಹಳೆಯ ಹಿಂದಿ ಚಲನಚಿತ್ರಗಳ ಸುಮಧುರ ಗೀತೆಗಳು ನಮ್ಮ ತುಟಿಗಳ ಮೇಲೆ ನಲಿದಾಡಲು ಪ್ರಾರಂಭಿಸುತ್ತವೆ. ಅವರ ಗೀತೆಗಳಲ್ಲಿ ಮಾನವ ಪ್ರೇಮ ಮತ್ತು ಸಾಮಾಜಿಕ ಕಾಳಜಿ ಎದ್ದು ಕಾಣುತ್ತದೆ. ಕೆ. ಎಲ್. ಸೆಹಗಲ್‌ರಿಂದ ಹಿಡಿದು ಅಮೀರ ಖಾನ್‌ವರೆಗೂ ಎಲ್ಲ ಪ್ರತಿಭಾವಂತರ ಜೊತೆಗೆ ಕಾರ್ಯನಿರ್ವಹಿಸಿದ ಹಿಂದಿ ಚಿತ್ರರಂಗದ ಏಕಮಾತ್ರ ಗೀತ ರಚನೆಕಾರ ಈತ. ‘ಪ್ರೊಗ್ರೆಸಿವ್‌ ರೈಟರ್ಸ್‌’ ಗುಂಪಿನ ಮಹತ್ವದ ಲೇಖಕರಾದ ಮಜ್ರೂಹ್ ಸುಲ್ತಾನಪುರಿ, ಆ ಕಾಲದ ರಾಜಕೀಯ ಅರಾಜಕತೆಯನ್ನು ಕವಿತೆಗಳ ಮೂಲಕ ಜನರಿಗೆ ಎತ್ತಿ ತೋರುತ್ತಾ ಸರ್ಕಾರವನ್ನು ಎಚ್ಚರಿಸಿದ ಪ್ರಾಮಾಣಿಕ ಕವಿ.

ಮಜ್ರೂಹ್ ಸುಲ್ತಾನಪುರಿಯವರ ನಿಜವಾದ ಹೆಸರು ಅಸರಾರ್ ಹಸನ್ ಖಾನ್. ಚಲನಚಿತ್ರ ಲೋಕ ಪ್ರವೇಶಿಸಿದ ನಂತರ ಗೆಳೆಯರು ಅವರಿಗೆ ‘ಮಜ್ರೂಹ್’ ಎಂಬ ಹೆಸರು ಸೂಚಿಸಿದರು. ಉರ್ದುವಿನಲ್ಲಿ ‘ಮಜ್ರೂಹ್’ ಎಂದರೆ ‘ಗಾಯಗೊಂಡವ’. ಒಂದರ್ಥದಲ್ಲಿ ಮಜ್ರೂಹ್ ಸುಲ್ತಾನಪುರಿ ನಿಜವಾಗಿಯೂ ಗಾಯಗೊಂಡ ಕವಿಯೇ ಹೌದು. ಹೀಗಾಗಿಯೇ ಅವರ ಕವಿತೆಗಳು ತನಗೆ ಮತ್ತು ಸಮಾಜಕ್ಕಾದ ಗಾಯಗಳನ್ನೇ ಬರೆಯಿಸಿಕೊಂಡವು. ಜನ ಅವುಗಳನ್ನು ತಮ್ಮದೇ ನೋವುಗಳು ಅನ್ನುವಷ್ಟರ ಮಟ್ಟಿಗೆ ಪ್ರೀತಿಸಿದರು.

ಉತ್ತರ ಪ್ರದೇಶದ ಸುಸಂಸ್ಕೃತ ಮುಸ್ಲಿಂ ಕುಟುಂಬದಲ್ಲಿ 1 ಅಕ್ಟೋಬರ್ 1919 ರಲ್ಲಿ ಜನಿಸಿದರು. ಇವರ ತಂದೆ ತನ್ನ ಮಗ ಒಬ್ಬ ಮೌಲ್ವಿಯಾಗಿ ಧಾರ್ಮಿಕ ಬೋಧನೆ ಮಾಡಲಿ ಎನ್ನುವ ಇಚ್ಚೆಯಿಂದ ಮದ್ರಸಾಗೆ ಸೇರಿಸಿದರು. ಆದರೆ ಮೂಲತಃ ಬಂಡುಕೋರ ಸ್ವಭಾವದ ಮಜ್ರೂಹ್‌ನಿಗೆ ಅಲ್ಲಿಯ ವಾತಾವರಣ ಹಿಡಿಸಲಿಲ್ಲ. ಮದರಸದ ಓದನ್ನು ಬಿಟ್ಟು ಯುನಾನಿ ಶಾಸ್ತ್ರದಲ್ಲಿ ಪದವಿ ಪಡೆದು ಹಕೀಮರಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಇದೇ ಸಂದರ್ಭದಲ್ಲಿ ಅವರ ಮೊದಲ ಪ್ರೇಮ ವಿಫಲಗೊಂಡು ಕವಿತೆಯನ್ನೇ ಪ್ರೀತಿಸತೊಡಗಿದರು. ಉರ್ದುವಿನ ಶ್ರೇಷ್ಠ ಕವಿ ಜಿಗರ್ ಮುರಾದಾಬಾದಿಯವರ ಪರಿಚಯ ಅವರ ಜೀವನದಲ್ಲಿ ಕವಿತೆಯನ್ನು ಮತ್ತಷ್ಟು ಪ್ರೀತಿಸುವ ಹಾಗೆ ಮಾಡಿತು. ಮುರಾದಾಬಾದಿಯ ಜೊತೆಗೂಡಿ ಉರ್ದು ಮುಷಾಯಿರಾಗಳಲ್ಲಿ ಭಾಗವಹಿಸತೊಡಗಿದರು.

ಮುಂಬೈಯ ಒಂದು ಮುಷಾಯಿರಾ ಕಾರ್ಯಕ್ರಮದಲ್ಲಿ, ಆ ಕಾಲದಲ್ಲಿ ಚಿತ್ರ ನಿರ್ಮಾಣ ಕ್ಷೇತ್ರದಲ್ಲಿ ಹೆಸರು ಮಾಡಿದ ಎ.ಆರ್. ಕಾರದಾರ ಇವರ ಕವಿತೆ ಕೇಳಿ ತಾವು ನಿರ್ಮಿಸುತ್ತಿರುವ ‘ಷಹಜಹಾನ್’ ಚಿತ್ರಕ್ಕೆ ಹಾಡುಗಳನ್ನು ಬರೆಯಲು ಆಹ್ವಾನಿಸಿದರು. ಪ್ರಾರಂಭದಲ್ಲಿ ಮಜ್ರೂಹ್‌ ಒಪ್ಪಿಕೊಳ್ಳಲಿಲ್ಲ ಆದರೆ ಜೀಗರ್ ಮುರಾದಾಬಾದಿಯವರು ತಿಳಿ ಹೇಳಿದ ನಂತರ ಹಾಡು ಬರೆಯಲು ಒಪ್ಪಿಕೊಂಡರು. ಹೀಗೆ ‘ಜಬ್ ದಿಲ್ ಹೀ ಟೂಟ್ ಗಯಾ’ ಹಾಡಿನ ಮುಖಾಂತರ ಅವರ ಚಲನಚಿತ್ರ ಕ್ಷೇತ್ರದ ಜೀವನ ಪ್ರಾರಂಭಗೊಂಡಿತು.

ಚಲನಚಿತ್ರಗಳಿಗೆ ಹಾಡು ಬರೆಯತೊಡಗಿದರೂ ಪ್ರಗತಿಶೀಲ ಸಾಹಿತ್ಯದ ನಂಟನ್ನು ಮಾತ್ರ ಬಿಡಲಿಲ್ಲ. ಹಸರತ್ ಜೈಪುರಿ, ಶೈಲೇಂದ್ರ, ಸಾಹಿರ್ ಲುಧಯಾನ್ವಿ, ಕೈಪಿ ಅಜ್ಮಿಯವರ ಜೊತೆ ಅವರ ಒಡನಾಟ ಮುಂದುವರೆದಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ‍್ಯ ಸಿಕ್ಕಾಗ ಸಾಮಾನ್ಯರು ಸರ್ಕಾರದಿಂದ ಏನೆಲ್ಲ ಅಪೇಕ್ಷೆ ಮಾಡುತ್ತಾರೆ ಎನ್ನುವುದನ್ನು ಲೇಖನವೊಂದರಲ್ಲಿ ದಾಖಲಿಸಿದರು. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿಯೇ ಪ್ರಗತಿಶೀಲ ಸಾಹಿತ್ಯ ಸಂಘ ಬಿದಿರಿನ ಕೋಲಿನಿಂದ ಮಾಡಿದ ದೊಡ್ಡದಾದ ಪೆನ್ನಿನ ಆಕೃತಿಯನ್ನು ಹಿಡಿದು ಮೆರವಣಿಗೆ ಹೊರಡಿಸಿತು. ಈ ಮೆರವಣಿಗೆ ಮುಖಾಂತರ ಅವರು ಲೇಖನಿಯನ್ನು ಕೂಡಾ ಸ್ವತಂತ್ರಗೊಳಿಸಬೇಕೆಂದು ಘೋಷಿಸಿದರು. ಯಾವಾಗಲೂ ಶ್ರಮಿಕರ,ಕಾರ್ಮಿಕರ ಪರ ನಿಲ್ಲುವ ಮಜ್ರೂಹ್ ಸುಲ್ತಾನಪುರಿ ಸಮಾಜದಲ್ಲಿ ಎಲ್ಲರನ್ನು ಸಮಾನರಾಗಿ ಕಾಣಬೇಕು, ವರ್ಗರಹಿತ ಸಮಾಜದ ನಿರ್ಮಾಣವಾಗಬೇಕೆಂದು ಹೇಳುತ್ತಲೇ ಕಾರ್ಮಿಕರ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾ ಶೇರ್ ಶಾಯರಿಗಳನ್ನು ಬರೆಯುತ್ತಿದ್ದರು.

ಇಂತಹದೇ ಒಂದು ಮೆರವಣಿಗೆಯಲ್ಲಿ ಕಾರ್ಮಿಕ ವಿರೋಧಿ ಸರ್ಕಾರವನ್ನು ಟೀಕಿಸಿ ಬರೆದ ಹಾಡಿಗಾಗಿ ಅವರನ್ನು ಆಗಿನ ಸರ್ಕಾರ ಜೈಲಿಗೆ ಅಟ್ಟಿತು. ಸರ್ಕಾರ ಕ್ಷಮೆ ಯಾಚಿಸಲು ಕೇಳಿತು. ಇವರು ಒಪ್ಪದೆ ಜೈಲು ಸೇರಿದರು. ಹಾಡು ಬರೆದ ಕಾರಣಕ್ಕೆ ಎರಡು ವರ್ಷಗಳ ಕಠಿಣ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಜೈಲಿನಲ್ಲಿದ್ದರೂ ಅವರ ಲೇಖನಿ ಮಾತ್ರ ನಿಲ್ಲಲಿಲ್ಲ. ಅಲ್ಲಿಂದಲೇ ಅನೇಕ ಲೇಖನ, ಹಾಡುಗಳನ್ನು ಬರೆದರು. ಜೈಲಿನಿಂದ ಹೊರಬಂದ ನಂತರವೂ ಅವರು ಸರ್ಕಾರದ ಕಿವಿ ಹಿಂಡುವ ಕಾರ್ಯವನ್ನು ಬಿಡಲಿಲ್ಲ. ಬಂಡಾಯ ಅವರ ಜೀವನಶೈಲಿಯೇ ಆಗಿತ್ತು.

ಹಿಂದಿ ಚಿತ್ರರಂಗದಲ್ಲಿ ಒಂದಕ್ಕಿಂತ ಒಂದು ಮಧುರ ಹಾಡುಗಳನ್ನು ಬರೆಯುತ್ತಾ 50 ವರ್ಷಗಳ ಕಾಲ ಜನರನ್ನು ಹಿಡಿದಿಟ್ಟವರು ಮಜ್ರೂಹ್‌ ಸುಲ್ತಾನ್‌ಪುರಿ. ನೋವು, ಹತಾಶೆ, ದುಃಖ, ಸಂತೋಷ, ಪ್ರೀತಿ, ಸೋಲು, ಗೆಲುವು ಎಲ್ಲದಕ್ಕೂ ಪದ ಸೇರಿಸಿ ಹಾಡು ಬರೆದರು. ಮನದ ನೋವಿಗೆ, ನಲಿವಿಗೆ ಔಷಧಿ ರೂಪದಲ್ಲಿ ಹಾಡುಗಳನ್ನು ನೀಡಿದರು. ಮಜ್ರೂಹ್‌ ಸುಲ್ತಾನ್‌ಪುರಿಯವರ ಅರ್ಧ ಶತಮಾನದ ಈ ಕವಿತಾ ಕೈಂಕರ್ಯಕ್ಕೆ ಅರ್ಹವಾಗಿಯೇ ಚಿತ್ರರಂಗದ ಪ್ರತಿಷ್ಠಿತ ‘ದಾದಾಸಾಹೇಬ್ ಫಾಲ್ಕೆ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಅವರು ಫಾಲ್ಕೆ ಪ್ರಶಸ್ತಿ ಪಡೆದ ಮೊದಲ ಗೀತ ರಚನೆಕಾರರು.

ಫಾಲ್ಕೆ ಪುರಸ್ಕಾರ ಸಮಾರಂಭದಲ್ಲಿ ಅವರು ‘ಈ ಪುರಸ್ಕಾರ ನಿಜವಾಗಿಯೂ ಸಲ್ಲಬೇಕಾದದ್ದು ಗೀತ ರಚನೆಕಾರ ಶೈಲೇಂದ್ರ ಅವರಿಗೆ’ ಎಂದು ಹೇಳಿ ಅಚ್ಚರಿ ಮೂಡಿಸಿದರು. ತಮ್ಮ ಜೊತೆಗಾರರ ಸಾಧನೆಯನ್ನೂ ಮೆಚ್ಚಿಕೊಳ್ಳುವ ನಿಷ್ಕಳಂಕ ಸ್ವಭಾವ ಅವರದ್ದಾಗಿತ್ತು. ನಿಜವಾದ ಬಂಡುಕೋರ ಕವಿಗಳು ಮಾತ್ರ ಹೀಗೆ ತಮ್ಮ ಜೊತೆಗಾರರನ್ನು ಗುರುತಿಸಬಲ್ಲರು. 20 ವರ್ಷಗಳ ಹಿಂದೆ (24 ಮೇ, 2000) ನಮ್ಮನ್ನು ಅಗಲಿದ ಮಜ್ರೂಹ್ ಸುಲ್ತಾನ್‌ಪುರಿ ಬರೆದ ಹೃದಯಸ್ಪರ್ಶಿ ಕವಿತೆಗಳು ಈಗಲೂ ‘ವಿವಿಧ್ ಭಾರತಿ’ಯಲ್ಲಿ ಮಾಧುರ್ಯ ತುಂಬಿ ಕೇಳಿಬರುತ್ತಿವೆ. ಬದುಕಿದ್ದರೆ ಈಗ ನೂರು ವರ್ಷ ದಾಟಿರುತ್ತಿದ್ದ ಕವಿ ಮಜ್ರೂಹ್‌, ಹಿಂದಿ ಚಿತ್ರರಂಗದ ನಿಜವಾದ ‘ಸುಲ್ತಾನ’ರೇ ಸರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT