ಶನಿವಾರ, ಡಿಸೆಂಬರ್ 4, 2021
20 °C

PV Web Exclusive | ಕಲ್ಲು ಒಡ್ಡರ ಬಾಳು; ಮುಗಿಯದ ಗೋಳು

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

ಹಾವೇರಿ ನಗರದ ಕೆಇಬಿ ಸಮುದಾಯ ಭವನದ ಮುಂಭಾಗ ರಸ್ತೆಬದಿಯಲ್ಲಿ ಒಳಕಲ್ಲು ಮತ್ತು ನಾಗರಕಲ್ಲು ತಯಾರಿಸುತ್ತಿರುವ ಕಲ್ಲುಒಡ್ಡರ ಸಮುದಾಯದ ಕುಟುಂಬ

ಹಾವೇರಿ: ಕಲ್ಲಿಗೆ ಕಲ್ಪನೆಯ ರೂಪ ನೀಡಿ, ಕಲೆಯನ್ನು ಸಾಕಾರಗೊಳಿಸುವ ಕುಶಲಮತಿಗಳಾದ ಕಲ್ಲು ಒಡ್ಡರ ಬದುಕು ಇಂದಿಗೂ ಶೋಚನೀಯವಾಗಿದೆ. ಬೆವರ ಬಸಿದು ಬದುಕುವ ಮಂದಿಯ ಬಾಳಿನಲ್ಲಿ ಗೋಳೇ ಹೆಚ್ಚು. 

ಹೆದ್ದಾರಿ ಬದಿಯ ನೆಲದ ಮೇಲೆ ಕಲ್ಲುಗಳನ್ನು ಸುರಿದುಕೊಂಡು, ವಾಹನದ ಹೊಗೆ ಮತ್ತು ದೂಳಿನ ನಡುವೆ ಕಣ್ಣುಗಳನ್ನು ಕಿರಿದಾಗಿಸಿಕೊಂಡು, ಹುಳಿಯ ಏಟು ಆಚೀಚೆ ಆಗದಂತೆ, ಏಕಾಗ್ರತೆಯಿಂದ ಕೆಲಸ ಮಾಡುವ ಈ ಶ್ರಮಜೀವಿಗಳ ಬದುಕೇ ಒಂದು ರೋಚಕ. ಕಗ್ಗಲ್ಲನ್ನು ಕಟೆದು ಶಿಲ್ಪಕಲಾಕೃತಿ ಅರಳಿಸುವ ಇವರ ಕಲೆಯೇ ಒಂದು ಸೋಜಿಗ. 

ಹಾವೇರಿ ನಗರದ ಹಳೇ ಪಿ.ಬಿ.ರಸ್ತೆಯ ಬದಿಯಲ್ಲಿ ಕೆ.ಇ.ಬಿ. ಸಮುದಾಯ ಭವನದ ಮುಂಭಾಗ ಸುಮಾರು 40 ವರ್ಷಗಳಿಂದ ಕಲ್ಲು ಕೆತ್ತನೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ ಕಾಳಮ್ಮ ಕಲ್ಲುಒಡ್ಡರ ಕುಟುಂಬಸ್ಥರು. ಇವರು ಶಿರಸಿ ಕಡೆಯಿಂದ ಬಂದು ಇಲ್ಲಿ ನೆಲೆ ಕಂಡುಕೊಂಡಿದ್ದಾರೆ. ‘ಕಾಯಕವೇ ಕೈಲಾಸ’ ಎಂಬುದು ಇವರ ದಿವ್ಯ ಮಂತ್ರ. ಅಮರಶಿಲ್ಪಿ ಜಕಣಾಚಾರಿ ಮತ್ತು ಶರಣ ಸಿದ್ಧರಾಮ ಇವರ ಪೂಜ್ಯನೀಯರು. 

ತರಹೇವಾರಿ ಕಲಾಕೃತಿಗಳು:

ಒಳಕಲ್ಲು, ರೊಟ್ಟಿ ಕಲ್ಲು, ಬೀಸುವ ಕಲ್ಲು, ಕುಟ್ಟುವ ಕಲ್ಲು ಹಾಗೂ ನಾಗರಕಲ್ಲುಗಳನ್ನು ತಯಾರಿಸುತ್ತಾರೆ. ಗೃಹಪ್ರವೇಶ, ಮದುವೆ, ಬಸವ ಜಯಂತಿ, ನಾಗರ ಹಬ್ಬದ ಸಂದರ್ಭ ಇವರ ವ್ಯಾಪಾರ ಚುರುಕಾಗುತ್ತದೆ. ಕೆತ್ತನೆಗೆ ಬೇಕಾದ ಕರೇಕಲ್ಲುಗಳನ್ನು ಗೋಕಾಕ್‌, ಶಿರಸಿ, ಹರಿಹರ ಕಡೆಗಳಿಂದ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ತರಿಸುತ್ತಾರೆ. ಆರಕ್ಕೇರದ ಮೂರಕ್ಕಿಳಿಯದ ಈ ವ್ಯಾಪಾರದಿಂದ ಸಿಗುವ ಆದಾಯ ಇವರ ಹೊಟ್ಟೆ–ಬಟ್ಟೆಗೆ ನೇರವಾಗುತ್ತದೆ.  

ತೆಂಗಿನ ಗರಿ, ಅಡಕೆ ದೆಬ್ಬೆ, ರೊಟ್ಟುಗಳಿಂದ ನಿರ್ಮಿತವಾಗಿರುವ ಶೆಡ್ಡೇ ಇವರ ವ್ಯಾಪಾರ ಕೇಂದ್ರ. ಚಳಿ–ಗಾಳಿ–ಮಳೆ ಎಂದು ಲೆಕ್ಕಿಸದೆ ಕಲ್ಲು ಕೆತ್ತನೆಯ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಬಡತನದ ಕಾರಣದಿಂದ ಹೈಸ್ಕೂಲ್‌ ದಾಟಿದವರೇ ಇವರ ಕುಟುಂಬದಲ್ಲಿಲ್ಲ. ಕಾಳಮ್ಮ ಅವರ ಪುತ್ರರಾದ ಮಂಜಪ್ಪ, ರವಿ, ಅಶೋಕ ಎಲ್ಲರೂ ಒಗ್ಗೂಡಿ ಶ್ರಮವಹಿಸಿ ದುಡಿಯುತ್ತಾರೆ. ಅಷ್ಟೇ ಅಲ್ಲ, ಪ್ರಾಮಾಣಿಕವಾಗಿ ನಗರಸಭೆಗೆ ವಾರಕ್ಕೆ ₹50 ತೆರಿಗೆಯನ್ನೂ ಕಟ್ಟುತ್ತಾರೆ. ‌

ವ್ಯಾಪಾರ ಇಳಿಮುಖ:

‘ವರ್ಷದಿಂದ ವರ್ಷಕ್ಕೆ ವ್ಯಾಪಾರ ಕಡಿಮೆಯಾಗುತ್ತಿದೆ. ತಿಂಗಳಿಗೆ ₹15ರಿಂದ ₹20 ಸಾವಿರ ವ್ಯಾಪಾರವಾಗುತ್ತದೆ. ಕುಟುಂಬದಲ್ಲಿ 11 ಮಂದಿ ಇದ್ದೇವೆ. ಮೂವರ ದುಡಿಮೆಯಿಂದ ಸಂಸಾರ ಸಾಗಬೇಕು. ಮಕ್ಕಳು ಶಾಲೆಗೆ ಹೋಗುತ್ತವೆ. ಪತಿ ತೀರಿಕೊಂಡು 25 ವರ್ಷವಾಯಿತು. ದುಡಿಮೆಯನ್ನು ನಂಬಿಕೊಂಡು ಬದುಕುತ್ತಿದ್ದೇವೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ’ ಎಂದು ಕಾಳಮ್ಮ ಸಮಸ್ಯೆ ತೋಡಿಕೊಂಡರು. 

‘ರೇಷನ್‌ ಕಾರ್ಡ್‌ನಲ್ಲಿ ಕುಟುಂಬದ ಎಲ್ಲ ಸದಸ್ಯರ ಹೆಸರುಗಳು ಸೇರಿಲ್ಲ. ಕಚೇರಿಗೆ ತಿರುಗಿ ತಿರುಗಿ ಕಾಲು ಬಿದ್ದು ಹೋಗಿವೆ. ಮೆಹಬೂಬ್‌ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೇವೆ. ಮನೆ ಸೌಲಭ್ಯಕ್ಕಾಗಿ ಅರ್ಜಿ ಹಾಕಿ ಐದಾರು ವರ್ಷಗಳಾಯಿತು. ಇಂದಿಗೂ ಮಂಜೂರಾಗಿಲ್ಲ’ ಎಂದು ಮಂಜಪ್ಪ ಗೋಳು ಹೇಳಿಕೊಂಡರು. 

‘ಒಂದು ನಾಗರಕಲ್ಲು ಮತ್ತು ಒಳಕಲ್ಲು ತಯಾರಿಗೆ ಇಡೀ ದಿನ ದುಡಿಯಬೇಕು. ಒಳಕಲ್ಲು ₹500ರಿಂದ ₹1200, ನಾಗರಕಲ್ಲು ₹350ರಿಂದ ₹600, ರೊಟ್ಟಿ ಕಲ್ಲು ₹300ರಿಂದ ₹500 ದರದಲ್ಲಿ ಮಾರಾಟ ಮಾಡುತ್ತೇವೆ. ಗ್ರಾಹಕರು ತೀರಾ ಚೌಕಾಸಿ ಮಾಡುವುದರಿಂದ ಲಾಭ ಅಷ್ಟಕ್ಕಷ್ಟೆ. ಲಾಕ್‌ಡೌನ್‌ ವೇಳೆ ಮೂರು ತಿಂಗಳು ದುಡಿಮೆಯಿಲ್ಲದ ಪಡಬಾರದ ಕಷ್ಟ ಪಟ್ಟಿದ್ದೇವೆ. ಚುನಾವಣೆ ಸಂದರ್ಭ ಮತಕ್ಕಾಗಿ ನಮ್ಮನ್ನು ಹುಡುಕಿಕೊಂಡು ಬರುವ ಜನಪ್ರತಿನಿಧಿಗಳು, ನಂತರ ನಮ್ಮ ಕಡೆ ತಿರುಗಿಯೂ ನೋಡುವುದಿಲ್ಲ’ ಎಂದು ರವಿ ಮತ್ತು ಅಶೋಕ ಸಹೋದರರು ಬೇಸರ ವ್ಯಕ್ತಪಡಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು