ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದುಪ್ರಾಣಿಯನ್ನು ಸಾಕುವ ಮುನ್ನ ಪ್ರೀತಿಯೊಂದಿಗೆ ಜವಾಬ್ದಾರಿಯೂ ಮುಖ್ಯ

Last Updated 2 ಅಕ್ಟೋಬರ್ 2021, 2:30 IST
ಅಕ್ಷರ ಗಾತ್ರ

ನಾಯಿ, ಬೆಕ್ಕು, ಮೊಲ, ಪಾರಿವಾಳ, ಗಿಳಿ.. ಹೀಗೆ ಸಾಕುಪ್ರಾಣಿ–ಪಕ್ಷಿಗಳನ್ನು ನೋಡಿದಾಕ್ಷಣ ಮನಸ್ಸಿಗೆ ಏನೋ ಖುಷಿ ಸಿಗುತ್ತದೆ. ಮುದ್ದಾದ ನಾಯಿಮರಿಯನ್ನೋ, ಬೆಕ್ಕನ್ನೋ ನೋಡಿದಾಗ ಅಪ್ಪಿ ಮುದ್ದಾಡಬೇಕು ಎನ್ನಿಸುತ್ತದೆ. ಮನೆಯಲ್ಲೂ ಇಂಥದ್ದೇ ಮುದ್ದಾದ ಮರಿ ಇದ್ದರೆ ಚೆನ್ನ ಎನ್ನಿಸಿ ಮನೆಗೆ ತಂದು ಸಾಕುತ್ತೇವೆ. ಸಾಕುಪ್ರಾಣಿಯ ಮೇಲಿನ ಪ್ರೀತಿಯಿಂದ ಮನೆಗೆ ತಂದರೆ ಸಾಲದು ಅವುಗಳನ್ನು ಅಷ್ಟೇ ಚೆನ್ನಾಗಿ ನೋಡಿಕೊಳ್ಳುವುದು ಅಗತ್ಯ. ಪ್ರಾಣಿಗಳನ್ನು ಸಾಕುವ ಮುನ್ನ ಮನೆಯಲ್ಲಿ ಅದರ ಜವಾಬ್ದಾರಿ ಯಾರು ತೆಗೆದುಕೊಳ್ಳುತ್ತಾರೆ ಎಂಬುದು ಮುಖ್ಯವಾಗುತ್ತದೆ. ಪ್ರೀತಿಯೊಂದಿಗೆ ಅವುಗಳ ಮೇಲೆ ಗಮನ ಹರಿಸುವುದು ಅವಶ್ಯ.

ಸಾಮಾಜಿಕ ಜವಾಬ್ದಾರಿ
ನಿಮ್ಮ ಸಾಕುಪ್ರಾಣಿಯನ್ನು ಮನೆಯ ಒಳಗೇ ಕೂಡಿ ಹಾಕುವುದು ಸರಿಯಲ್ಲ. ಅವುಗಳನ್ನು ಹೊರಗಡೆ ತಿರುಗಾಡಲು, ಆಡವಾಡಲು ಬಿಡಬೇಕು. ಹೊರಗೆ ಕರೆದುಕೊಂಡು ಹೋದಾಗ ಗಲೀಜು ಮಾಡದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಗಲೀಜು ಮಾಡಿದರೂ ಅದನ್ನು ಸ್ವಚ್ಛ ಮಾಡಲು ಬೇಕಾಗುವ ಪೇಪರ್‌, ಪ್ಲಾಸ್ಟಿಕ್‌ ಅನ್ನು ಜೊತೆಗೆ ತೆಗೆದುಕೊಂಡು ಹೋಗಿ. ಮನೆಯ ಒಳಗೆ ಗಲೀಜು ಮಾಡಿದರೆ ವಾಸನೆ ಎಂಬ ಕಾರಣಕ್ಕೆ ಹೇಗೆ ಸ್ವಚ್ಛ ಮಾಡುತ್ತೇವೋ ಹೊರಗಡೆ ಜನರಿಗೆ ವಾಸನೆಯಿಂದ ತೊಂದರೆ ಆಗುತ್ತದೆ ಎಂದು ಭಾವಿಸಿ ಸ್ವಚ್ಛ ಮಾಡುವುದು ಅಗತ್ಯ.

ಸಮಯ ನಿಗದಿ
ಪ್ರಾಣಿಗಳು ಮನೆಗೆ ಬಂದ ಮೇಲೆ ನಮಗೆ ಒಡನಾಡಿಗಳಾಗುತ್ತವೆ, ಹಾಗಾಗಿ ಅವುಗಳ ಮೇಲೆ ಸದಾ ಗಮನ ಹರಿಸಬೇಕು. ಅವುಗಳ ಜೊತೆಗೆ ಒಡನಾಡಲು, ಸಮಯ ಕಳೆಯಲೆಂದೇ ನಿರ್ದಿಷ್ಟ ಸಮಯ ನಿಗದಿ ಮಾಡಿಕೊಳ್ಳುವುದು ಉತ್ತಮ. ನೀವು ಸದಾ ಬ್ಯುಸಿಯಾಗಿದ್ದು ಅವುಗಳ ಜೊತೆ ಒಡನಾಡದಿದ್ದರೆ ಮಂಕಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದಿನದಲ್ಲಿ ಒಂದಿಷ್ಟು ಹೊತ್ತು ಅವುಗಳೊಂದಿಗೆ ಸಮಯ ಕಳೆಯುವುದು ಅವಶ್ಯ.

ಸುರಕ್ಷತೆಗೂ ಗಮನ ಕೊಡಿ
ಮುದ್ದು ಮಗುವಿನ ಸುರಕ್ಷತೆ ನಿಮ್ಮ ಕೈಯಲ್ಲೇ ಇದೆ. ಅಪಾಯಕಾರಿ ವಸ್ತುಗಳು ಅವಕ್ಕೆ ಸಿಗದಂತೆ ನೋಡಿಕೊಳ್ಳುವುದು, ಅವುಗಳನ್ನು ಸುರಕ್ಷಿತವಾದ ಜಾಗದಲ್ಲಿ ಇರಿಸಿ ರಕ್ಷಿಸುವುದು ನಿಮ್ಮ ಜವಾಬ್ದಾರಿ. ಅದೇ ರೀತಿ ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುವ ಯಾವುದೇ ಅಪಾಯಕಾರಿ ವಸ್ತುಗಳು ಅವುಗಳ ಕೈಗೆಟುಕದಂತೆ ಇರಿಸುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೇ ಅಂತಹ ವಸ್ತುಗಳನ್ನು ಮುಚ್ಚಿದ ಜಾಗದಲ್ಲಿ ಇರಿಸುವುದು ಅವಶ್ಯ.

ವ್ಯಾಯಾಮ ಮಾಡಿಸಿ
ನೀವು ಸಾಕುಪ್ರಾಣಿಯನ್ನು ಸಾಕುತ್ತಿದ್ದರೆ ಪ್ರತಿದಿನ ಅವುಗಳಿಗೆ ವ್ಯಾಯಾಮ ಮಾಡಿಸುವುದನ್ನು ಮರೆಯಬೇಡಿ. ವ್ಯಾಯಾಮ ಎಂದರೆ ಮನುಷ್ಯರಂತೆ ದೇಹ ದಂಡಿಸುವುದಲ್ಲ. ಬದಲಾಗಿ ಅವುಗಳಿಗೆ ಆಟವಾಡಿಸಬೇಕು, ವಾಕಿಂಗ್ ಮಾಡಿಸಬೇಕು. ಸಂಜೆ, ಬೆಳಿಗ್ಗೆ ಮೈದಾನ ಅಥವಾ ಪಾರ್ಕ್‌ನಲ್ಲಿ ವಾಕಿಂಗ್ ಮಾಡಿಸುವುದು ಅವಶ್ಯ.

ನಾಯಿಗಳಿಗೆ ಸಾಮಾಜಿಕ ನಡವಳಿಕೆ ಕಲಿಸಿ
ಯಾವುದೇ ಪ್ರಾಣಿಯನ್ನು ಸಾಕುವ ಮುನ್ನ ಅವುಗಳಿಗೆ ಸಾಮಾಜಿಕ ನಡವಳಿಕೆ ಕಲಿಸಲು ನಿಮ್ಮಿಂದ ಸಾಧ್ಯವೇ ಎಂದು ಯೋಚಿಸಬೇಕು. ನಾಯಿ, ಬೆಕ್ಕು ಯಾವುದೇ ಪ್ರಾಣಿ ಇರಲಿ ಬೇರೆಯವರ ಎದುರು ಹೇಗಿರಬೇಕು, ಸುಮ್ಮನೆ ಕಚ್ಚುವುದು, ಕೂಗುವುದು ಮಾಡಬಾರದು ಎಂಬುದನ್ನೆಲ್ಲಾ ಕಲಿಸಬೇಕು. ಆ ಕಾರಣಕ್ಕೆ ಸರಿಯಾದ ತರಬೇತುದಾರರ ಬಳಿ ತರಬೇತಿ ಕೊಡಿಸುವುದು ಮುಖ್ಯವಾಗುತ್ತದೆ. ಅವಕ್ಕೆ ಸರಿಯಾಗಿ ತರಬೇತಿ ನೀಡದಿದ್ದರೆ ಅನಪೇಕ್ಷಿತ ಅಪಘಾತಗಳಿಗೆ ಕಾರಣವಾಗುವುದಲ್ಲದೆ, ಮನೆ ಇಡೀ ರಾಡಿ ಮಾಡುತ್ತವೆ. ಸಾಕುಪ್ರಾಣಿಗಳನ್ನು ಇತರ ತಳಿಗಳೊಂದಿಗೆ ಬೆರೆಯಲು ಬಿಡಬೇಕು, ಇದರಿಂದ ಭಯ ಹಾಗೂ ಆತಂಕ ನಿವಾರಣೆಯಾಗಿ ಉತ್ತಮ ವ್ಯಕ್ವಿತ್ವ ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.

ಆರೋಗ್ಯಕರ ಡಯೆಟ್‌
ಮನುಷ್ಯ ತನ್ನ ಆರೋಗ್ಯ ಪಾಲನೆಗೆ ಡಯೆಟ್ ಕ್ರಮವನ್ನು ಹೇಗೆ ಪಾಲಿಸುತ್ತಾನೋ ಹಾಗೆಯೇ ಸಾಕುಪ್ರಾಣಿಗಳ ಆಹಾರಕ್ರಮದ ಮೇಲೆ ಗಮನ ಹರಿಸುವುದು ಅವಶ್ಯ. ಅವುಗಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಹೆಚ್ಚಲು, ಸರಿಯಾಗಿ ಬೆಳವಣಿಗೆ ಹೊಂದಲು ನಿರ್ಬಂಧಿತ ಹಾಗೂ ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಸಾಕುಪ್ರಾಣಿಗಳ ಆಹಾರಕ್ರಮದ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲು ಪಶುವೈದ್ಯರನ್ನು ಭೇಟಿ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT