ಶನಿವಾರ, ಏಪ್ರಿಲ್ 4, 2020
19 °C

ಅಜ್ಜನ ‘ಗಂಟು’ ವೈವಿಧ್ಯದ ಗುಟ್ಟು!

ಹರ್ಷವರ್ಧನ ವಿ. ಶೀಲವಂತ  Updated:

ಅಕ್ಷರ ಗಾತ್ರ : | |

prajavani

‘ನಾ ಹಾಕೋ ಸರಗಂಟು ನೀವು ಬಿಚ್ಚಾಕ ಸಾಧ್ಯ ಇಲ್ಲ; ಕಗ್ಗಂಟು ಬಿಡಸಾಕ ಒಂದು ತಾಸು ಟೈಮ್ ಕೊಡ್ತೇನಿ.. ‘ಮುಲುವು’ ಬಿಚ್ರಿ ನೋಡೋಣು!?’

ಕೃಷಿ ಕಾಯಕದ ಅಜ್ಜ ಮಾರುತಿ ನಾಗಪ್ಪ ಧಾರವಾಡ ಹಗ್ಗ ಗಂಟು ಹಾಕಿ ನಮ್ಮ ಕೈಗೆ ಕೊಟ್ಟ್ರು. ಅವರು ಕೈ ಚಳಕದಿಂದ ಆ ಗಂಟು ಹಾಕುವ ಪರಿಯೇ ಸಮ್ಮೋಹನ ಗೊಳಿಸುವಂತಿತ್ತು! ಸವಾಲು ಮರೆತು ಮಕ್ಕಳು ದುಂಬಾಲು ಬಿದ್ದು.. ‘ಅಜ್ಜ ಆ ಗಂಟು ಹೆಂಗ ಹಾಕಿದ್ರಿ.. ನಮಗೂ ಕಲಿಸ್ರಿ..!’ ಅಂದ್ರು. 68 ವರ್ಷದ ಅಜ್ಜ ಮಾರುತಿ ಒಪ್ಪಲೇ ಇಲ್ಲ. ‘ಮೊದಲು ಮುಲುವು ಬಿಚ್ರೀ.. ಆ ಮ್ಯಾಲೆ ಹಾಕೋದು ಹೆಂಗ ಅಂತ ಕಲಸ್ತೇನಿ’ ಅಂದು ಸಾಗ ಹಾಕಿದರು.

ರೈತಾಪಿ ಬದುಕು ಕೃಷಿ ಕೆಲಸಗಳ ಅನಿವಾರ್ಯತೆಗೆ ತಕ್ಕಂತೆ ನಿತ್ಯ ರೈತನನ್ನು ಅನುಶೋಧನೆಗೆ ಒಡ್ಡುತ್ತದೆ. ಅನುಭವದ ಗರಡಿಯೊಳಗ ಅಜ್ಜ ಮಾರುತಿ ಅಂಥವರು ಲಭ್ಯ ವಸ್ತು ಬಳಸಿ ಕೆಲಸ ಸಾಗಿಸೋದು ಹೆಂಗ ಅಂತ ಕ್ಷಣಕ್ಕೊಮ್ಮೆ ಪಳಗ್ತಾರಂತೆ! ‘ಕೃಷಿ ಕಾಯಕ ಅನುಕೂಲದ್ದಲ್ಲ; ಸವಾಲುಗಳದ್ದು’ ಖಚಿತ ಅಭಿಪ್ರಾಯ ಮಾರುತಿ ಅಜ್ಜಂದು.

ಅಜ್ಜ ಮಾರುತಿ 28ಕ್ಕೂ ಹೆಚ್ಚು ನಮೂನೆಯ, ವಿವಿಧ ಮಾದರಿಯ ಗಂಟುಗಳನ್ನು ಹಾಕಬಲ್ಲರು. ಸರಮುಲುವು (ಸರಳ ಗಂಟು), ಕಗ್ಗಮುಲುವು (ಕಗ್ಗಂಟು) ಎರಡೂ ಅವರ ಬತ್ತಳಿಕೆಯಲ್ಲಿ ಉಂಟು!

ಧಾರವಾಡ ತಾಲ್ಲೂಕು ಹೊಲ್ತಿಕೋಟಿ ಅಜ್ಜರ ಊರು. ಚಿಕ್ಕವರಿದ್ದಾಗ ಹರದಾರಿ ಸೈಕಲ್ ಮೇಲೆ 6 ಕೊಡಪಾನ ನೀರು ತರ್ಲಿಕ್ಕೆ ‘ಕೊಡ ಮುಲುವು’ ಮೊದಲು ಕಲಿತದ್ದು. ದನ-ಕರುಗಳಿಗೆ ಮೇವು ಹೊತ್ತು ತರುವಾಗ ಹಗ್ಗ ಬಳಸಿ ‘ಗುದ್ದಿ ಮುಲುವು’ ಹಾಕುವುದನ್ನು ಅವರು ರೂಢಿ ಮಾಡಿಕೊಂಡರಂತೆ. ಹೊಟ್ಟಿನ ಕಲ್ಲಿ ಚಕ್ಕಡಿ, ಕುದುರೆ ಬಂಡಿ ಮತ್ತು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಹೇರಲಿಕ್ಕೆ ‘ಜಾಳಗಿ ಮುಲುವು’ ಕಟ್ಟುವುದು ಅನಿವಾರ್ಯ. ದನ-ಕರುಗಳನ್ನು ಹಕ್ಕಿಯೊಳಗೆ ಕಟ್ಟಲು ಕೊರಳಿನ ‘ಕಣ್ಣಿ ಮುಲುವು’. ರಾಸಿಗೆ ನಾಲು ಬಡಿಯುವಾಗ ನೆಲಕ್ಕೊರಗಿಸಲು ‘ಅಡಗಾಲ ಮುಲುವು’!

ಅಜ್ಜ ಮಾರುತಿ ಪಟ, ಪಟ ಅಂತ ಅರಳು ಹುರಿದ್ಹಾಂಗ, ಗ್ರಾಮ್ಯ ಸೊಗಡಿನ ಕನ್ನಡದಲ್ಲಿ ಹತ್ತಾರು ಗಂಟುಗಳ ಹೆಸರು ಮತ್ತು ಉಪಯೋಗ ತಿಳಿಸಿದರು! ವಿಶೇಷ ಅಂದರೆ, ಅದೇ ಅನುಭವ ಮತ್ತು ಜ್ಞಾನ ಬಳಸಿ ಅವರು ಹಳ್ಳಿಗೇರಿಯ ನೇಚರ್ ಫಸ್ಟ್ ಇಕೊ ವಿಲೇಜ್‍ನಲ್ಲಿ ಈಗ ಮಕ್ಕಳಿಗಾಗಿ ಮತ್ತು ದೊಡ್ಡವರಿಗಾಗಿ ಹತ್ತಕ್ಕೂ ಹೆಚ್ಚು ಸಾಹಸ ಕ್ರೀಡೆಗಳ ‘ಹಗ್ಗದಾಟ’ (ರೋಪ್ ಅಡ್ವೆಂಚರ್ಸ್) ರೂಪಿಸಿದ್ದಾರೆ. ರಿಪೇರಿ ಸೇರಿದಂತೆ ನಿತ್ಯ ನಿರ್ವಹಣೆಯೂ ಅವರದ್ದೇ.

‘ಅಯ್ಯೋ.. ಹುಷಾರು ಕಂದಾ.. ಬಿದ್ದೀ..’ ಅಂತ ಮಕ್ಕಳನ್ನು ತಾಯಂದಿರು ಎಚ್ಚರಿಸಿದಾಗಲೊಮ್ಮೆ, ಅಜ್ಜ ಮಾರುತಿ ಮುಗುಳ್ನಕ್ಕು, 'ಅವ್ವಾರ.. ಮಕ್ಕಳು ಬೀಳೋದು, ಏಳೋದು ಇರೋದ. ಆದ್ರ ಹಗ್ಗದ ಮುಲುವು ಅವ್ರು ಎಷ್ಟು ಹತ್ತಿನಿಂತ ಕುಣದು, ಜಗ್ಗಿದರೂ ಬಿಚ್ಚೋದಿಲ್ಲ. ಅವರು ಆಯತಪ್ಪಿ ಕೆಳಗ ಬೀಳೋದಿಲ್ಲ. ದೊಡ್ಡಾವ್ರು ಬೀಳಬಹುದು.. ಜೋಲಿ ತಪ್ಪಿ’ ಅಂದಾಗ ಎಲ್ಲೆಡೆ ನಗೆ ಬುಗ್ಗೆ!

5 ದಶಕಗಳ ಕೃಷಿ ಅನುಭವದ ಕೋಶದಂತಿರುವ ಅಜ್ಜ ಮಾರುತಿ, ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಹೊಂದಿಕೊಂಡು, ತಮ್ಮ ಜೀವನದ ಸಂಧ್ಯಾ ಕಾಲದಲ್ಲಿ ಈಗ ಮಕ್ಕಳ ಸಾಹಸ ಕ್ರೀಡೆಗೆ ಮೀಸಲಿರುವ ಎಲ್ಲ ಹಗ್ಗದಾಟಗಳನ್ನು ರೂಪಿಸಿ, ನಿರ್ವಹಿಸುತ್ತಿರುವುದು ‘ಕೌಶಲವಿದ್ದರೆ ಜಗತ್ತೇ ಹಿಂಬಾಲಿಸುತ್ತದೆ’ ಎನ್ನುವುದಕ್ಕೆ ಪುರಾವೆ. ಮುಲುವುಗಳ ಒಡೆಯ ಮಾರುತಿ ಅವರು ಈಗ ಮಕ್ಕಳ ಅಚ್ಚುಮೆಚ್ಚಿನ ಅಜ್ಜ.  

ಸಾಹಸ ಶಿಬಿರಗಳಲ್ಲಿ ಮಕ್ಕಳ ಸುರಕ್ಷತೆ ಎಲ್ಲರ ಕಾಳಜಿ ವಿಷಯ. ಹಗ್ಗದಾಟಗಳಲ್ಲಂತೂ ತಾಯಂದಿರ ಮುತುವರ್ಜಿ ವಿಪರೀತ. ಮೇಲಾಗಿ, ವಿವಿಧ ಕ್ರೀಡಾ ಮಾದರಿಗಳ ನಿತ್ಯ ನಿರ್ವಹಣೆ ಕೌಶಲ ಬಯಸುವ ಕೆಲಸ. ಕಳೆದ ಎರಡು ಮೂರು ವರ್ಷಗಳಿಂದ ಮಾರುತಿ ಅಜ್ಜ ತಮ್ಮ ಕಗ್ಗಂಟು, ಸರಗಂಟುಗಳ ಕೈಚಳಕ ಬಳಸಿ ರೂಪಿಸಿದ ಮಾದರಿ ಮಕ್ಕಳಿಗೆ ಅತ್ಯಂತ ಅಚ್ಚುಮೆಚ್ಚು. ವಾರಕರಿ ಸಂಪ್ರದಾಯಕ್ಕೆ ಸೇರಿದ ಮಾರುತಿ ಅಜ್ಜ ಒಬ್ಬ ಸಂತರು. ತುಳಸಿ ಮಾಲೆ ಧರಿಸಿದವರು. ದಿಂಡಿ ಉತ್ಸವದ ಪಾದಯಾತ್ರಿ. ‘ನಾವು ಕಗ್ಗಂಟ ಹಾಕೋತೇವಿ.. ಅವ (ಪಾಡುರಂಗ) ಮತ್ತ ಸರಗಂಟ ಮಾಡತಾನ..’ ಅವರ ಮಾತು ಮನನೀಯ.

- ಪಂಚಾಕ್ಷರಿ ಹಿರೇಮಠ, ಸಂಸ್ಥಾಪಕ ಸಿ.ಇ.ಓ. ನೇಚರ್ ಫಸ್ಟ್.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು