ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕನಿಂದ ಗೋಡೆಗಳಲ್ಲಿ ಬಣ್ಣಗಳ ಚಿತ್ತಾರ, ಮಕ್ಕಳ ಸೆಳೆಯಲು ಬಣ್ಣದ ಬೆಸುಗೆ!

ಸುಂಕಸಾಲೆ ಸರ್ಕಾರಿ ಶಾಲೆ
Last Updated 8 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""
""

ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಶಿಕ್ಷಕರು ಏನು ಮಾಡಬಹುದು ಎಂಬ ಪ್ರಶ್ನೆಗೆ, ಮಕ್ಕಳನ್ನು ಪ್ರೀತಿಯಿಂದ ಕಾಣುವುದು, ಮಕ್ಕಳ ಮನಃಸ್ಥಿತಿ ಅರಿತುಕೊಂಡು ಶೈಕ್ಷಣಿಕವಾಗಿ ಅವರಿಗೆ ನೆರವಾಗಬಹುದು ಎಂಬ ಉತ್ತರಗಳು ಸದಾ ಸಿದ್ಧವಾಗಿರುತ್ತವೆ.

ಏಕೋಪಾಧ್ಯಾಯ ಕಾಂತರಾಜ್

ಆದರೆ, ಕಳಸ ತಾಲ್ಲೂಕಿನ ಸುಂಕಸಾಲೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಏಕೋಪಾಧ್ಯಾಯ ಕಾಂತರಾಜ್ ಇವೆಲ್ಲದರ ಜೊತೆಗೆ ಶಾಲೆಯನ್ನು ಬಣ್ಣಗಳಿಂದ ಸಿಂಗರಿಸಿ, ಗೋಡೆಗಳ ಮೇಲೆ ಚಿತ್ತಾರ ಬರೆದು, ಮಕ್ಕಳಲ್ಲಿ ಹುರುಪು ತುಂಬುವ ಪ್ರಯತ್ನ ಮಾಡುತ್ತಿದ್ದಾರೆ.

1ರಿಂದ 5ನೇ ತರಗತಿವರೆಗಿನ ಈ ಶಾಲೆಯಲ್ಲಿ ಸದ್ಯ 12 ಮಕ್ಕಳು ಮಾತ್ರ ಕಲಿಯುತ್ತಿದ್ದಾರೆ. ಕಾಂತರಾಜ್ ಇದೇ ಶಾಲೆಯಲ್ಲಿ 14 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ 7ನೇ ತರಗತಿವರೆಗೆ ಇದ್ದ ಈ ಶಾಲೆಯಲ್ಲಿ ಮಕ್ಕಳ ಕೊರತೆ ಕಾರಣಕ್ಕೆ ಒಬ್ಬ ಶಿಕ್ಷಕರನ್ನು ಬೇರೆ ಶಾಲೆಗೆ ನಿಯೋಜಿಸಲಾಗಿದೆ. ಆದ್ದರಿಂದ ಈ ಶಾಲೆಗೆ ಮತ್ತೆ ಮಕ್ಕಳನ್ನು ಆಕರ್ಷಿಸಿ 7ನೇ ತರಗತಿವರೆಗೂ ಶಿಕ್ಷಣ ವಿಸ್ತರಿಸಬೇಕು ಎಂಬ ಆಶಯದಿಂದ ಕಾಂತರಾಜ್ ಶಾಲೆಯ ಪರಿಸರವನ್ನೇ ಬದಲಿಸುವ ಸಾಹಸಕ್ಕೆ ಕೈಹಾಕಿ, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ನೆರೆ ಪರಿಹಾರದಲ್ಲಿ ಶಾಲೆಗೆ ಸಿಕ್ಕ ಮೊತ್ತದಲ್ಲಿ ಶಾಲೆಯ ಇಡೀ ಚಾವಣಿಯನ್ನು ಹೊಸದಾಗಿ ನಿರ್ಮಿಸಿದರು. ಆನಂತರ ಶಾಲೆಗೆ ಕಾಂಕ್ರಿಟ್ ರಸ್ತೆ ನಿರ್ಮಾಣ ಕೂಡ ಆಯಿತು. ಆನಂತರ ಉಳಿದ ₹50 ಸಾವಿರದಲ್ಲಿ ಶಾಲೆಯ ಎಲ್ಲ ಗೋಡೆಗಳಿಗೂ ಬಣ್ಣದ ಚಿತ್ತಾರ ಮೂಡಿಸಲು ಕಾಂತರಾಜ್ ನಿರ್ಧರಿಸಿದರು.

ಯೂಟ್ಯೂಬ್ ನೆರವಿನಿಂದ ವಿಶೇಷ ಚಿತ್ರಗಳನ್ನು ಬರೆಯುವುದನ್ನು ಕಲಿತ ಕಾಂತರಾಜ್ ಸ್ವತಃ ಕಲಾವಿದರಾಗಿ ಎರಡು ತಿಂಗಳಿನಿಂದ ಶಾಲೆಯಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ. ಆಲ್ದೂರಿನಿಂದ ಸುಂಕಸಾಲೆಗೆ ಪ್ರತಿದಿನ ಹೋಗಿಬರುವ ಕಾಂತರಾಜ್, ಲಾಕ್‌ಡೌನ್ ಅವಧಿಯಲ್ಲೂ ಪೊಲೀಸರ ಮನವೊಲಿಸಿ ಬೈಕ್‌ ಮೂಲಕ ಸುಂಕಸಾಲೆಗೆ ಬಂದು ಚಿತ್ರ ಬಿಡಿಸುವ ಕೆಲಸವನ್ನು ಯಶಸ್ವಿಯಾಗಿ ಮುಗಿಸಿದ್ದಾರೆ. ಬಣ್ಣ ಬಣ್ಣದ ಚಿತ್ರಗಳಿಂದ ತುಂಬಿರುವ ಶಾಲೆಯನ್ನು ಕಂಡ ಮಕ್ಕಳಲ್ಲಿ ಈಗ ಅಚ್ಚರಿ ಮತ್ತು ಸಂತಸ.

ನಿಮಗೆ ಈ ಪ್ರೇರಣೆ ಹೇಗೆ ಬಂತು ಎಂಬ ಪ್ರಶ್ನೆಗೆ ಕಾಂತರಾಜ್ ಉತ್ತರಿಸಿದ್ದು ಹೀಗೆ: ‘ಶಾಲೆಗೆ ಹೆಚ್ಚು ಮಕ್ಕಳು ಬರಲಿ ಎಂದು ಈ ಕೆಲಸ ಮಾಡಿದ್ದೇನೆ. ಮಾಸ್ತಿಕಾನು, ಸುಂಕಸಾಲೆ ಬಲಿಗೆಯ ತೋಟ ಕಾರ್ಮಿಕರ ಮಕ್ಕಳು ಮಾತ್ರ ನಮ್ಮ ಶಾಲೆಗೆ ಬರುತ್ತಾರೆ. ಅವರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾದರೆ 7ನೇ ತರಗತಿವರೆಗೂ ಇಲ್ಲೇ ಕಲಿಯಬಹುದು. ದೂರದ ಜಾವಳಿಗೆ ಹೋಗುವುದು ತಪ್ಪುತ್ತದೆ ಎಂದು ಈ ಕೆಲಸ ಆರಂಭಿಸಿದೆ. ಊರ ಜನರು ಕೂಡ ಈಗ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ’ ಎಂದರು.

ಸುಂಕಸಾಲೆಯ ಸರಕಾರಿ ಪ್ರಾಥಮಿಕ ಶಾಲೆ ಬಣ್ಣಗಳಿಂದ ಕಂಗೊಳಿಸುತ್ತಿರುವ ದೃಶ್ಯ

ಎರಡು ತಿಂಗಳಲ್ಲಿ ಕಾಂತರಾಜ್ ಮೂರು ಕೊಠಡಿಗಳು, ಒಂದು ಅಡಿಗೆ ಕೋಣೆ ಮತ್ತು ಒಂದು ಸಂಗ್ರಹಣಾ ಕೊಠಡಿಯ ಒಳಗೆ ಮೂಡಿಸಿರುವ ಬಣ್ಣದ ವಿನ್ಯಾಸಗಳು ಕಣ್ಮನ ಸೆಳೆಯುತ್ತವೆ. ಶಾಲಾ ಕೊಠಡಿಯ ಒಳಗೆ ಗುಣಮಟ್ಟದ ದುಂಡನೆಯ ಟೇಬಲ್, ಕುರ್ಚಿ ಮತ್ತು ಪರಿಕರಗಳನ್ನೂ ಕೂಡ ಸಜ್ಜಾಗಿ ಇಡಲಾಗಿದೆ.

‘ಈ ವರ್ಷದಿಂದ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿ ಕನಿಷ್ಠ 20 ಮಕ್ಕಳು ದಾಖಲಾದರೆ ಇನ್ನೊಬ್ಬ ಶಿಕ್ಷಕರು ಇಲ್ಲಿಗೆ ಕಾಯಂ ಆಗಿ ಸಿಗುತ್ತಾರೆ. ಆಗ ನನ್ನ ಶ್ರಮಕ್ಕೆ ಬೆಲೆ ಸಿಕ್ಕಿದಂತೆ’ ಎನ್ನುವ ಕಾಂತರಾಜ್, ಈ ಕೆಲಸಕ್ಕೆ ₹35 ಸಾವಿರದಷ್ಟು ಸ್ವಂತ ಹಣವನ್ನು ವೆಚ್ಚ ಮಾಡಿರುವುದು ವಿಶೇಷ.

ಈ ಶಾಲೆಗೆ ಇನ್ನಷ್ಟು ಮೂಲಸೌಕರ್ಯಗಳು ಸಿಗಬೇಕು. ಸ್ಥಳೀಯ ದಾನಿಗಳು ಆ ಬಗ್ಗೆ ಆಸಕ್ತಿ ತೋರಬೇಕು ಎನ್ನುವುದಷ್ಟೇ ಅವರ ಕೋರಿಕೆ!

ಸುಂಕಸಾಲೆ ಸರ್ಕಾರಿ ಪ್ರಾಥಮಿಕ ಶಾಲೆಯ ಗೋಡೆಗಳ ವಿನ್ಯಾಸ

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT