ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಂಡಾಳಾ ಘಟ್ಟದಿಂದ ಕಂಡ ಶ್ರಾವಣ

Last Updated 8 ಆಗಸ್ಟ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಶ್ರಾವಣದ ಕುರಿತು ಕವಿ ಬೇಂದ್ರೆ ಅವರು ಬರೆದಿದ್ದು ಬರೋಬ್ಬರಿ ಒಂಬತ್ತು ಗೀತಗಳನ್ನು. ಇಷ್ಟಕ್ಕೂ ಶ್ರಾವಣ ಈ ಕವಿಯನ್ನು ಅಷ್ಟೊಂದು ಗಾಢವಾಗಿ ಕಾಡಿದ್ದು ಏಕೋ?

ಶ್ರಾವಣ ಎಂದೊಡನೆ ವರಕವಿ ದ.ರಾ. ಬೇಂದ್ರೆಯವರ ನೆನಪಾಗುತ್ತದೆ. ಶ್ರಾವಣದ ಕುರಿತು ಅವರು ಬರೆದಿರುವ ಕಾವ್ಯಗಳು, ಅವರ ಪ್ರಕೃತಿ ಆರಾಧನೆಯ ಮನೋಧರ್ಮವನ್ನೂ ಎತ್ತಿ ತೋರುತ್ತವೆ. ಕೃಷ್ಣ ಹುಟ್ಟಿದ್ದು ಶ್ರಾವಣ ಮಾಸದಲ್ಲಿ. ಹಾಗೆಯೇ ಬೇಂದ್ರೆ ಅವರ ಗುರು ಅರವಿಂದರು ಹುಟ್ಟಿದ್ದು ಶ್ರವಣಾ ನಕ್ಷತ್ರದಲ್ಲಿ. ಹೀಗಾಗಿ ಶ್ರಾವಣ ಎಂದರೆ ಅವರಿಗೆ ವಿಶೇಷವಾದ ಪ್ರೀತಿ. ಬೇಂದ್ರೆಯವರು ಕವಿ ಲಕ್ಷ್ಮೀಶನಂತೆ ಗಾನಲೋಲರು. ಅವರ ಕಾವ್ಯವು ಶ್ರವಣಕ್ಕೆ ಆನಂದ ನೀಡುವಂತಹದು. ಈ ಕಾರಣದಿಂದ ಕೂಡ ಅವರು ಅನ್ವರ್ಥಕವಾಗಿ ಶ್ರಾವಣ ಕವಿ. ಬೇಂದ್ರೆಯವರ ಕಂಠದಿಂದ ‘ಶ್ರಾವಣ ಗೀತ’ಗಳನ್ನು ಕೇಳಿದ ಗುಂಜಾರವ ಇನ್ನೂ ಕಿವಿಯಲ್ಲಿ ನಿನಾದಿಸುತ್ತಿದೆ.

ಬೇಂದ್ರೆಯವರ ‘ಶ್ರಾವಣ ಗೀತ’ಗಳು ಈ ಮಾಸದ ವೈಶಿಷ್ಟ್ಯಗಳನ್ನು ಎತ್ತಿ ತೋರಿಸುತ್ತವೆ ಎನ್ನುತ್ತಾರೆ ಜಿ.ಎಸ್.ಆಮೂರರು. ‘ಹರಿಹರರಿಬ್ಬರಿಗೂ ಪ್ರಿಯವಾದ ಈ ತಿಂಗಳು ಶ್ರುತಿ-ಕೃತಿಗಳ ಪುಣ್ಯ ಲಭಿಸುವ ಕಾಲ; ಕಾವ್ಯೋದ್ಯೋಗಕ್ಕೂ ಅಭಿಜಿದ್ಯೋಗಕ್ಕೂ ಅನುಕೂಲಕರ ವೇಳೆ; ಅಲ್ಲದೆ, ಇದು ಅರವಿಂದರ ಮಾಸ; ಸಾಂಖ್ಯಸೂತ್ರವನ್ನೇ ತಿರುವು-ಮುರುವು ಮಾಡಿ, ಪ್ರಕೃತಿ ಸಾಕ್ಷಿಯೆದುರು ಪುರುಷ ನಾಟ್ಯದ ನವೋನವ ವಿಚಿತ್ರ ಘಟಿಸುವ ಪರ್ವಕಾಲ. ಭಾರತ ಸ್ವಾತಂತ್ರ್ಯದ ವರ್ಧಂತಿಯೂ ಶ್ರಾವಣದಲ್ಲಿ ಬರುವುದು ಬೇಂದ್ರೆಯವರ ಎಣಿಕೆಯಲ್ಲಿ ಆಕಸ್ಮಿಕ ಘಟನೆಯಲ್ಲ. ಒಂದೇ ಜೀವನತತ್ವದ ಆವಿಷ್ಕಾರವನ್ನು ಅವರು ವ್ಯಕ್ತಿಯ ಬದುಕಿನಲ್ಲಿ, ರಾಷ್ಟ್ರದ ಜೀವನದಲ್ಲಿ, ಪ್ರಕೃತಿಯ ಪರಿವರ್ತನೆಯಲ್ಲಿ ಕಾಣುತ್ತಾರೆ’ (ಇಳಿದು ಬಾ ತಾಯಿ, ಪು.433).

ಬೇಂದ್ರೆಯವರ ಶ್ರಾವಣ ಗೀತಗಳ ವೈಭವದ ಒಂದು ಝಲಕ್‌ ನೋಡೋಣ.

‘ಶ್ರಾವಣ ಬಂತು ಕಾಡಿಗೆ’ (1946) ಪದ್ಯ ಮೊದಲು ‘ಹಾಡುಪಾಡು’ ಎಂಬ ಸಂಗ್ರಹದಲ್ಲಿ ಪ್ರಕಟವಾಯ್ತು. ಇದಕ್ಕೆ ‘ಶ್ರಾವಣಾ’ ಎಂಬ ಶೀರ್ಷಿಕೆ ಇತ್ತು. ‘ಔದುಂಬರ ಗಾಥೆ’ಯ ನಾಲ್ಕನೆಯ (ವಿನ್ಯಾಸ) ಸಂಪುಟದಲ್ಲಿ ಅದು ಪ್ರಕಟಗೊಂಡಾಗ ‘ಶ್ರಾವಣಾ ಬಂತು ಕಾಡಿಗೆ’ ಎಂಬ ಶೀರ್ಷಿಕೆ ಪಡೆಯಿತು. ಬೇಂದ್ರೆಯವರೇ ಭಾವ ಸಂದರ್ಭದಲ್ಲಿ ಹೇಳುವಂತೆ ಇದು ‘ಆನಂದ ಗೀತ’. ಒಂದು ಶ್ರಾವಣ ಮಾಸದಲ್ಲಿ ಖಂಡಾಳಾ ಘಟ್ಟದ ಮಾರ್ಗವಾಗಿ ಮುಂಬೈಗೆ ಹೊರಟಿದ್ದಾಗ, ಸೃಷ್ಟಿಯ ರಮಣೀಯ ದೃಶ್ಯ ಕಂಡು ಬರೆದ ಪದ್ಯವಿದು.

ಈ ಪದ್ಯದ ಬಗ್ಗೆ ಬರೆಯುವಾಗ ಇನ್ನೊಂದು ಮಾತು ನೆನಪಾಗುತ್ತದೆ. ಬೇಂದ್ರೆಯವರ ಆರೋಗ್ಯ ಹದಗೆಟ್ಟಾಗ (1981ರಲ್ಲಿ), ಅವರು ಮುಂಬೈಗೆ ಬರುವುದು ಅನಿವಾರ್ಯವಾಯಿತು. ತಮ್ಮ ಸಂಬಂಧಿಕ ಡಾ. ಮಾಧವ ನಾತು (ಬೇಂದ್ರೆಯವರ ಬಾಳಸಖಿ ಲಕ್ಷ್ಮಿಬಾಯಿಯವರ ಅಕ್ಕ ಗಂಗಾಬಾಯಿಯವರ ಮಗ) ಅವರೊಡನೆ ಮುಂಬೈ ಪ್ರವಾಸವನ್ನು ಅವರು ಮಾಡಬೇಕಾಯ್ತು. ಧಾರವಾಡದಿಂದ ರಾತ್ರಿ ಟ್ಯಾಕ್ಸಿಯಲ್ಲಿ ಮುಂಬೈಗೆ ಹೊರಟರು. ಹಗಲು ಆದಾಗ ದಾರಿಯಲ್ಲಿ ಖಂಡಾಳಾ ಘಟ್ಟ ಬಂತು. ವಿಪರೀತ ಮಳೆ ಇತ್ತು. ಅಲ್ಲಿ ತುಸು ಸಮಯ ಟ್ಯಾಕ್ಸಿ ನಿಲ್ಲಿಸುವಂತೆ ಡ್ರೈವರ್‌ಗೆ ಹೇಳಿದರು.

ಆಗ ಕೂಡ ಶ್ರಾವಣ ಮಾಸವಾಗಿತ್ತು. ಹಿಂದೆ 1946ರಲ್ಲಿ ಬರೆದ ಶ್ರಾವಣ ಗೀತ ಬೇಂದ್ರೆಯವರಿಗೆ ನೆನಪಾಯ್ತು. ಅಲ್ಲಿಯ ಗುಡ್ಡ ನೋಡಿದರು: ‘ಗುಡ್ಡ ಗುಡ್ಡ ಸ್ಥಾವರ ಲಿಂಗ| ಅವಕ ಅಭ್ಯಂಗ’ ಸಾಲು ನೆನಪಾಯ್ತು. ‘ಬೆಟ್ಟ ಕುತನಿಯ ಅಂಗಿ’ ತೊಟ್ಟ ದೃಶ್ಯವನ್ನು ಮತ್ತೆ ನೋಡಿದರು, ಭಾವಪರವಶರಾದರು. ಅವರ ಜೊತೆಗೆ ಮಗ ವಾಮನ ಬೇಂದ್ರೆ ಸಹ ಇದ್ದರು. ನಾನು ಬೇಂದ್ರೆಯವರನ್ನು ಕಾಣಲು ಶಿವಾಜಿ ಪಾರ್ಕಿನಲ್ಲಿದ್ದ ಡಾ. ನಾತು ಅವರ ಮನೆಗೆ ಹೋದಾಗ, ಈ ಎಲ್ಲ ಸಂಗತಿಯನ್ನು ಬೇಂದ್ರೆಯವರ ಬಾಯಿಯಿಂದ ಕೇಳುವ ಸೌಭಾಗ್ಯ ನನ್ನದಾಗಿತ್ತು. ತರುಣ ಟ್ಯಾಕ್ಸಿ ಡ್ರೈವರ್ ಹುಸೇನ್ ಎಂಬ ಹುಡುಗನ ಪ್ರಶಂಸೆಯನ್ನೂ ಅವರು ಮಾಡಿದ್ದರು. ಅಂಥ ಮಳೆಗಾಲದಲ್ಲಿ ಅವನು ಕಾರು ಓಡಿಸಿದ ರೀತಿಯನ್ನು ಮೆಚ್ಚಿದ್ದರು.

ಶ್ರಾವಣ ಕವಿತೆಯಲ್ಲಿ ರೂಪಕಗಳ ಮಾಲೆಯೇ ಇದೆ. ಶ್ರಾವಣ ಎಂದೊಡನೆ ಮಳೆಯ ಸಂಭ್ರಮ. ಶ್ರಾವಣದ ಮೋಡಗಳು ಮುಗಿಲು ಮುಟ್ಟಿವೆ, ಹಾಡೇ ಹಗಲು ರವಿ ಕಾಣದಾಗಿದ್ದಾನೆ. ಮಳೆ ನೀರಿನಿಂದಾಗಿ ಹೊಳೆಗಳು ತುಂಬಿ ಹರಿಯುತ್ತಿವೆ. ಹೊಳೆಗೆ ಮತ್ತು ಮಳೆಗೆ ಲಗ್ನವಾದಂತೆ ಕಾಣುತ್ತಿದೆ, ಇದುವೆ ಶುಭಗಳಿಗೆಯಾಗಿದೆ. ಶ್ರಾವಣ ಎಂದೊಡನೆ ನಾಗರಪಂಚಮಿ ಹಬ್ಬ ನೆನಪಾಗುತ್ತದೆ, ಜೋಕಾಲಿ ತೂಗುತ್ತದೆ. ಶ್ರಾವಣ ಮನೆಮನೆಗೂ ಬರುತ್ತದೆ, ಸಂತಸ ತರುತ್ತದೆ.

ಬೆಟ್ಟ, ಹಸಿರು ಕುತನಿಯ ಅಂಗಿ ತೊಟ್ಟಿರುವ ಕವಿ ಕಲ್ಪನೆ ಅದ್ಭುತ. ಬನಬನಗಳಲ್ಲಿ ಹೂವು ಅರಳಿದ್ದು ಕವಿಗಳಿಗೆ ಹೂವಿನ ಬಾಸಿಂಗ ಕಟ್ಟಿಕೊಂಡ ಮದುಮಗನಂತೆ ಕಾಣುತ್ತದೆ. ಹಸಿರು ಸೀರೆಯನ್ನುಟ್ಟ ಬಸುರಿಯಂತೆ ನೆಲಾ (ಭೂಮಿ) ಕಾಣುತ್ತದೆ. ಅರಿಷಿಣ ಬಣ್ಣ ಅಲ್ಲಿ ಬಂಗಾರದ ರಶ್ಮಿ ಚಿಮ್ಮಿದಂತೆ ಕಾಣುತ್ತದೆ.

ಗುಡ್ಡಗಳು ಸ್ಥಾವರ ಲಿಂಗದಂತೆ ಕಾಣುತ್ತವೆ, ಮಳೆ ಅವುಗಳಿಗೆ ಅಭ್ಯಂಗ ಸ್ನಾನ ಮಾಡಿಸುವುದು ವಿರಾಟ ಪ್ರತಿಮೆಯಂತೆ ಕಾಣುತ್ತದೆ, ಗುಡ್ಡಗಳ ಮೇಲೆ ಹರಿಯುವ ನೀರಿನ ಝರಿ, ಹಾಲಿನ ತೊರೆಯಂತೆ ಕಾಣುತ್ತದೆ. ಈ ಹಾಲನ್ನು ನೆಲಕ್ಕೆ ಕುಡಿಸಲು ಶ್ರಾವಣ ಬಂತು ಎನ್ನುತ್ತಾರೆ ವರಕವಿ.

ಈ ಕವಿತೆಯಲ್ಲಿ ಕವಿಯ ಕಲ್ಪನೆ ನೆಲ, ಬಾನು, ಎಲ್ಲ ದಿಶೆಗಳಲ್ಲಿ ಹಬ್ಬಿ, ಮನೆ, ರಾಜ್ಯಗಳನ್ನು, ಮನಮನಗಳನ್ನು ತಟ್ಟುವ ದೃಶ್ಯವು ಶ್ರಾವಣದ ಮಾಂತ್ರಿಕ ಪರಿಣಾಮವನ್ನು ಚಿತ್ರಿಸುತ್ತದೆ. ಇನ್ನೊಂದು ಪದ್ಯ ‘ಮತ್ತ ಶ್ರಾವಣಾ’ (1964, ‘ನಾಕು ತಂತಿ’). ‘ಔದುಂಬರ ಗಾಥೆ’ ಸಂಪಾದಿಸಿದ ಕವಿ ಪುತ್ರ ವಾಮನ ಬೇಂದ್ರೆಯವರು ಈ ಕವಿತೆಯ ಬಗ್ಗೆ ದೀರ್ಘ ಟಿಪ್ಪಣಿ ಬರೆಯದಿದ್ದರೆ, ಈ ಕವಿತೆಯು ಅರ್ಥವಾಗುತ್ತಿರಲಿಲ್ಲ. ಈಗ ಕೂಡ ಪೂರ್ತಿ ಅರ್ಥವಾಗಿದೆ ಎನ್ನುವ ಧೈರ್ಯ ನನಗಿಲ್ಲ. ಇಂಥ ಕವನಗಳು ‘ಕನಕನ ಮುಂಡಿಗೆ’ಯಂತೆ ಇವೆ. ಇವುಗಳನ್ನು ‘ಬೇಂದ್ರೆ ಮುಂಡಿಗೆ’ ಎಂದು ಕರೆಯಬಹುದು. ಈ ಕವನದ ಶೀರ್ಷಿಕೆ ‘ಮತ್ತ ಶ್ರಾವಣ’. ಈ ಕವಿತೆಯನ್ನು ನೋಡಿದರೆ ಇಲ್ಲಿ ಕಾವ್ಯೋನ್ಮತ್ತರಾಗಿಯೇ ಬೇಂದ್ರೆಯವರು ಬರೆದಂತೆ ತೋರುತ್ತದೆ.

ಇದಕ್ಕೆ ಬೇಂದ್ರೆ ಬರೆದ ಭಾವಸಂದರ್ಭ ಹೀಗಿದೆ: ‘1963, ಶ್ರಾವಣ ಬಂತು, ಸುಮ್ಮನಿದ್ದ ಮೌನದೊಳಗಿಂದ ಶ್ರಾವಣದ ಉನ್ಮಾದವು ಈ ಸಾಮಗೀತ ಬರೆಸಿತು. ‘ಕಾವ್ಯೋದ್ಯೋಗ’ ಮಾಡಿ ನನ್ನ ಕೆಲಸ ಮುಗಿಸಿದೆನಲ್ಲ ಎಂದುಕೊಂಡು ಬೇಂದ್ರೆ ವಿರಮಿಸಿದರೆ, ಮಧ್ಯಾಹ್ನ ಎರಡನೆಯ ಸಾಮಗೀತ ಪ್ರಾರಂಭವಾಯಿತು. ಉರ್ಮಿಯ ಉಕ್ಕು ನಿಲ್ಲಲೊಲ್ಲದು. ಶ್ರಾವಣ- ಆಗಸ್ಟ್ ಇದು ಅರವಿಂದರ ಮಾಸ.’ (ಅಂಬಿಕಾತನಯದತ್ತ ಮತ್ತು ಬೇಂದ್ರೆ ಒಬ್ಬ ಕವಿಯ ಎರಡು ಮುಖಗಳು. ಅಂಬಿಕಾತನಯ ಕೇಳಿದ ಶ್ರುತಿಯನ್ನು ಬೇಂದ್ರೆ ಬರೆದುಕೊಂಡ, ಮತ್ತೆ ವಿಶ್ರಮಿಸಿದ ಎಂದು ಇಲ್ಲಿಯ ಅರ್ಥ)

ಶ್ರಾವಣದ ಜೊತೆಗಿನ ಕವಿಯ ನಂಟಿನ ಕುರಿತು ವಾಮನ ಬೇಂದ್ರೆ ಬರೆಯುತ್ತಾರೆ: ‘ಶ್ರಾವಣ ಮಾಸ- ಬೇಂದ್ರೆಯವರ ಜೀವನದಲ್ಲಿಯ ಸುಖ-ದುಃಖ ಮಾಲೆಗಳ ಮಾಸ. ಆದುದರಿಂದ ಅಂಬಿಕಾತನಯದತ್ತರಿಗೆ ಶ್ರಾವಣದ ಚಿಂತನೆ ಸಹಜ. ಈ ಕವನ ಸಂಗ್ರಹದೊಳಗಿನ (‘ನಾಕು ತಂತಿ’) ಮೊದಲ ಎರಡು ಕವನಗಳಲ್ಲಿ ಶ್ರಾವಣಮಾಸದ ಬೋಧವನ್ನು ತಮಗಾದಂತೆ, ಕವಿ ವರ್ಣಿಸಿದ್ದಾರೆ. ಶ್ರಾವಣಕ್ಕೂ ಶ್ರವಣೇಂದ್ರಿಯಕ್ಕೂ ಏನೋ ಸಂಬಂಧವಿರಬೇಕು ಎಂದು ಕವಿಗೆ ತೋರಿದೆ. ಆದುದರಿಂದ ಕವಿ ಶ್ರುತಿಯತ್ತ ಗಮನಕೊಟ್ಟು ಕೃತಿ ರಚಿಸುವ ಹಂಬಲ ಉಳ್ಳವನಾಗಿದ್ದಾನೆ.’

(ಶ್ರಾವಣ ಸುಖ ದುಃಖಗಳ ಮಾಲೆಗಳ ಮಾಸವಾಗಲು ಕಾರಣ ಆಗಸ್ಟ್ ತಿಂಗಳಲ್ಲಿ ಬೇಂದ್ರೆಯವರ ಹಿರಿಯ ಮಗ ರಾಮ ತೀರಿಕೊಂಡ (1948). ಇನ್ನೊಬ್ಬ ಚಿಕ್ಕಮಗ ಆನಂದನನ್ನೂ ಕಳೆದುಕೊಂಡರು. ನಂತರ ಇಪ್ಪತ್ತೆಂಟು ವರ್ಷಗಳ ತರುವಾಯ ಆಗಸ್ಟ್ ತಿಂಗಳಲ್ಲೇ (1976) ಬೇಂದ್ರೆಯವರು ತಮ್ಮ ಬಾಳಸಖಿ ಮಡದಿಯನ್ನೂ ಕಳೆದುಕೊಂಡರು. ಶ್ರಾವಣ ಮಾಸ ಕೃಷ್ಣನ ಜನ್ಮದಿನ, ಗುರು ಅರವಿಂದರ ಜನ್ಮದಿನ, ಭಾರತಕ್ಕೆ ಸ್ವಾತಂತ್ರ್ಯ ತಂದ ದಿನ. ಆದರೆ, ಇಂತಹ ಸವಿಯೊಂದಿಗೆ ಬೇಂದ್ರೆಯವರಿಗೆ ಬಹಳ ದುಃಖದ ನೆನಪುಗಳನ್ನು ತಂದಂತಹ ಮಾಸವೂ ಅಹುದು.)

ಬೇಂದ್ರೆಯವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ, ಅವರ ‘ನಾಕು ತಂತಿ’ಯನ್ನು ಹಿಂದಿ ಭಾಷೆಗೆ ಅನುವಾದಿಸಲು ವಾಸು ಪುತ್ರನ್ ಮತ್ತೆ ನಾನು, ಬೇಂದ್ರೆಯವರ ಮನೆಗೆ ಹೋಗಿದ್ದೆವು. ಮೂರು ದಿನಗಳವರೆಗೆ ಅವರು ತಮ್ಮ ಕವನಗಳನ್ನು ವ್ಯಾಖ್ಯಾನಿಸಿದ್ದರು. ಆ ನೆನಪು ಇನ್ನೂ ಹಸಿರಾಗಿದೆ. ಈ ಪದ್ಯದ ಬಗ್ಗೆ ಅವರು ವಿವರವಾಗಿ ಹೇಳಿದ್ದರು. ನನ್ನ ಬಳಿಯಲ್ಲಿದ್ದ ‘ನಾಕು ತಂತಿ’ ಪುಸ್ತಕದ ಹಳೆಯ ಪ್ರತಿಯಲ್ಲಿ ಬೇಂದ್ರೆಯವರು ಹೇಳಿದ ಅನೇಕ ಮಾತುಗಳನ್ನು ಗುರುತು ಹಾಕಿಕೊಂಡಿದ್ದು ನೋಡಿದಾಗ ಈಗಲೂ ಹೊಸ ಅರ್ಥಗಳು ಹೊಳೆಯುತ್ತವೆ.

ದ.ರಾ. ಬೇಂದ್ರೆ

ಶ್ರಾವಣ ಸುರಿಸಿದ ನವರತ್ನಗಳು
ಬೇಂದ್ರೆಯವರು ಶ್ರಾವಣದ ಬಗ್ಗೆ ಒಟ್ಟು ಒಂಬತ್ತು ಕವಿತೆಗಳನ್ನು ಬರೆದಿದ್ದಾರೆ. ಅವು ಇಂತಿವೆ: 1. ಶ್ರಾವಣ ವೈಭವ (ಸಖೀಗೀತ, ರಚನೆ 1932, ಪ್ರಕಟಣೆ: 1937), 2. ಶ್ರಾವಣ (ನಾದಲೀಲೆ, ಪ್ರ.1938), 3. ಶ್ರಾವಣದ ಹಗಲು (ಉಯ್ಯಾಲೆ, ಪ್ರ.1938), 4. ಶ್ರಾವಣ ಬಂತು ಕಾಡಿಗೆ (ಹಾಡು-ಪಾಡು (ಶ್ರಾವಣಾ ಎಂಬ ಶೀರ್ಷಿಕೆ ಇತ್ತು), ಪ್ರ.1946), 5. ಬಂದಿಕಾರ ಶ್ರಾವಣ (ಗಂಗಾವತರಣ, ರಚನೆ 1944, ಪ್ರ.1951), 6. ಪ್ರತಿವರ್ಷದಂತೆ ಬಂತು ಶ್ರಾವಣ (ಸೂರ್ಯಪಾನ, ಪ್ರ.1956), 7. ಮತ್ತ ಶ್ರಾವಣ (ನಾಕು ತಂತಿ, ಪ್ರ.1964), 8. ಮತ್ತೆ ಶ್ರಾವಣಾ ಬಂದಾ (ನಾಕು ತಂತಿ, ಪ್ರ.1964), 9. ಮತ್ತೆ ಬಂತು ಶ್ರಾವಣಾ, (ಕವನ ಸಂಗ್ರಹ ‘ಮತ್ತೆ ಶ್ರಾವಣಾ ಬಂತು’, ರಚನೆ-1969, ಪ್ರ.1973). ಇವುಗಳಲ್ಲಿ ವೈವಿಧ್ಯ ಇದೆ, ಬೇಂದ್ರೆಯವರ ಪ್ರಾತಿಭ ಶಕ್ತಿ ಉಕ್ಕಿ ಹರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT