ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಶಾ ಏರಿದ್ರ ಮಾತ್ರ ಕವಿತಾ ಹುಟ್ಟೋದೇನ್ರಿ?!

Last Updated 25 ಜೂನ್ 2022, 19:30 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಎಲ್ಲ ಸಂಸ್ಕೃತಿಗಳಲ್ಲಿ ಸುರೆ–ಗಾಂಜಾ ಮೊದಲಾದ ಮಾದಕ ದ್ರವ್ಯಗಳನ್ನು ಸೃಜನಶೀಲತೆಯ ಜೊತೆಜೊತೆಗೇ ಗುರ್ತಿಸಲಾಗಿದೆ. ನಶೆ ಏರುವುದೆಂದರೆ ಕವಿತೆ ಹೊರಡುವ ಸಮಯ ಬಂದಿತು ಎಂದೂ ನಂಬಲಾಗಿದೆ. ಹಾಗಾದರೆ ಇದೆಲ್ಲ ನಿಜವೇನು? ಹೀಗೊಂದು ನಿಶಾ ಮೀಮಾಂಸೆ...

ಕಾರ್ಯಾಗಾರವೊಂದರಲ್ಲಿ, ಬಿ.ಎ. ಓದುತ್ತಿದ್ದ ಹುಡುಗನೊಬ್ಬ ಕೇಳಿದ ಪ್ರಶ್ನೆಯು ಮನಸ್ಸನ್ನು ಮತ್ತೆ ಮತ್ತೆ ಕಾಡುತ್ತಿತ್ತು. ಸೃಜನಶೀಲತೆಯ ಅಭಿವ್ಯಕ್ತಿಗಳಾದ ಕವಿತೆ-ಕಥೆ-ಸಾಹಿತ್ಯ, ನೃತ್ಯ-ಸಂಗೀತ-ಚಿತ್ರಕಲೆ-ನಾಟಕಗಳೆಲ್ಲವನ್ನೂ ಒಟ್ಟುಗೂಡಿಸಿ, ನನ್ನೊಳಗಿನ ಮನೋವೈದ್ಯೆ-ಕಲಾವಿದೆ ಇಬ್ಬರಿಗೂ ಆ ಮುಗ್ಧ ಹುಡುಗನ ಪ್ರಶ್ನೆ ಹಲವು ಚಿಂತನೆಗಳನ್ನು ಮೂಡಿಸಿತ್ತು.

ಕಲಾವಿದರಲ್ಲಿ, ಸಾಹಿತಿಗಳಲ್ಲಿ ‘ನಶೆ’ಯ ಬಗೆಗಿನ ಈ ಗ್ರಹಿಕೆ ಹೊಸತೇನಲ್ಲ. ಬಹು ಪುರಾತನವಾದದ್ದು. ಜಗತ್ತಿನಾದ್ಯಂತ ಎಲ್ಲ ಸಂಸ್ಕೃತಿಗಳಲ್ಲಿ ಸುರೆ-ಗಾಂಜಾ ಮೊದಲಾದ ಮಾದಕ ದ್ರವ್ಯಗಳನ್ನು ‘ಸೃಜನಶೀಲತೆ’ಯ ಜೊತೆಜೊತೆಗೇ ಗುರುತಿಸಲಾಗಿದೆ.

ಡಾನ್ ಪ್ಯಾನ್ ಎಂಬ ಸಮಾಜಶಾಸ್ತ್ರಜ್ಞ-ಲೇಖಕ ಹೇಳಿರುವಂತೆ ಸಾಂಪ್ರದಾಯಿಕ ಚೀನೀ ಸಂಸ್ಕೃತಿಯಲ್ಲಿ ವೈನ್‌ನ ನಶೆ ಏರುತ್ತಲೇ ಸೃಜನಶೀಲ ಕಲ್ಪನೆಯನ್ನು ಅರಳಿಸುತ್ತದೆ ಎಂದು ಬಲವಾಗಿ ನಂಬಲಾಗುತ್ತದೆ. ಅಂದರೆ ನಶೆ ಏರುವುದೆಂದರೆ, ಕವಿತೆ ಹೊರಡುವ ಸಮಯ ಬಂದಿತು ಎಂದೇ! ಪುರಾತನ ಚೀನೀ ಕವಿಗಳಲ್ಲಿ ಕಾವ್ಯಮಾಲೆಯನ್ನೇ ‘ಮತ್ತೇರಿದಾಗ ಬರೆದದ್ದು’ ಎಂದು ಉಲ್ಲೇಖಿಸಿದವರಿದ್ದಾರೆ! ಕ್ರಿ.ಪೂ. 667ರಿಂದ 730ರವರೆಗೆ ಕಾವ್ಯರಚನೆ ಮಾಡಿದ್ದ ಚ್ಯಾಂಗ್ ಯೂ ಹೀಗೆ ಬರೆಯುತ್ತಾನೆ:

‘ಒಮ್ಮೆ ಪಾನಮತ್ತನಾದರೆ ನನ್ನ ಆನಂದಕ್ಕೆ ಪಾರವೇ ಇಲ್ಲ

ನಾನು ಕುಡಿಯುವ ಮುನ್ನ ಇದ್ದದ್ದಕ್ಕಿಂತ ಹೆಚ್ಚು ಹುರುಪು

ನನ್ನ ಚಲನೆ-ಭಾವನೆ ಎಲ್ಲದರಲ್ಲೂ ಕುಣಿತದ ಒನಪು

ನನ್ನ ಬಾಯಿಂದ ಹೊರಡುವ ಪ್ರತಿ ಪದವೂ ಒಂದು ಕವಿತೆ!’

ಇದನ್ನು ಓದಿದವರಿಗೆ ಗ್ರೀಕ್ ಪುರಾತನ ಹೇಳಿಕೆ ನೆನಪಾಗದೆ ಇರದು. ‘ನೀವು ನಿಮ್ಮ ಗಾಜು ಲೋಟಗಳನ್ನು ನೀರಿನಿಂದ ತುಂಬಿದರೆ, ನೀವು ಚಂದದ ಏನನ್ನಾದರೂ ಬರೆದೀರೆಂಬ ನಿರೀಕ್ಷೆ ಸುಳ್ಳೇ! ಅದೇ ನೀರಿನ ಬದಲು ಮದ್ಯವನ್ನು ತುಂಬಿದರೆ, ಅದು ಪರ್ನಾಸಸ್‍ಗೆ ಹೋಗಲು ಕುದುರೆ ಏರಿ ಕುಳಿತಂತೆ, ಅದು ಕವಿಯನ್ನು ಆಗಸಕ್ಕೊಯ್ಯುವ ಅಶ್ವ!’ ಎನ್ನುತ್ತದೆ ಈ ಹೇಳಿಕೆ. ಪರ್ನಾಸಸ್ ಎಂದರೆ ಕವಿತಾ ಕೇಂದ್ರ ಅಥವಾ ಸೃಜನಶೀಲತೆಯ ದೇವತೆಯ ಮುಖ್ಯ ಪವಿತ್ರ ಸ್ಥಳ.

‘ಕ್ವಾಸಿರ್’ ಎಂಬ ಸೃಜನಶೀಲತೆಯ ಆಂಗ್ಲೊ ಸ್ಯಾಕ್ಸನ್ ದೇವತೆಯ ಹೆಸರು ಬಂದಿರುವುದು ಎಲ್ಲಿಂದ? ನಾರ್ಸ್ ಪುರಾಣಗಳ ಪ್ರಕಾರ ಕ್ವಾಸಿರ್‌ನನ್ನು ಕೊಂದು ಆತನ ರಕ್ತವನ್ನು ಮದ್ಯದ ಜೊತೆಗೆ ಮಿಶ್ರಣ ಮಾಡಲಾಯಿತು. ಇದು ‘Mead of inspiration’ ಸ್ಫೂರ್ತಿಯ ಮದ್ಯ.

ಯಾರೇ ಈ ಮಾಂತ್ರಿಕ ಮದ್ಯವನ್ನು ಕುಡಿದರೆ ಕವಿತೆಯನ್ನು ಬರೆಯಬಹುದಿತ್ತು. ಜಾಣರಾಗಿ ಮಾತನಾಡಬಹುದಿತ್ತು! ‘ಕ್ವಾಸಿರ್’ ಅರ್ಥವೇ ಪ್ರಬಲವಾದ ಮದ್ಯ! ಸೂಫಿ ಸಂತರ, ಹಲವು ಹಿಂದೂ ಸಂತರ, ‘ಬೀಟ್’ ಕವಿಗಳ, ಜಾಜ್ ಸಂಗೀತಗಾರರ ಸ್ಫೂರ್ತಿ ಗಾಂಜಾ ಆದ ಬಗೆಗೆ ಹಲವು ಉಲ್ಲೇಖಗಳು ದೊರೆಯುತ್ತವೆ. ಕುಬ್ಲಾ ಖಾನ್ ಎಂಬ ಪ್ರಸಿದ್ಧ ಕವಿತೆಯನ್ನಂತೂ ಕೊಲೆರಿಜ್ ಅಫೀಮಿನ ಅಮಲಿನಲ್ಲಿಯೇ ಸೃಷ್ಟಿಸಿದನಂತೆ.

ನಮ್ಮ ಸುತ್ತಮುತ್ತಲಲ್ಲೇ ಸ್ವಲ್ಪ ಕಣ್ಣು ಹಾಯಿಸಿ ನೋಡೋಣ. ತತ್‍ಕ್ಷಣಕ್ಕೆ ಹತ್ತು ಜನ ಸಂಗೀತಗಾರರು/ನಾಟಕ ಕಲಾವಿದರು/ನೃತ್ಯ ಕಲಾವಿದರು/ಬರಹಗಾರರು ವಿವಿಧ ಮಾದಕ ದ್ರವ್ಯಗಳನ್ನು ಉಪಯೋಗಿಸುವವರನ್ನು ನಾವು ನೆನಪಿಸಿಕೊಳ್ಳಬಲ್ಲೆವು. ಗುಂಡು ಒಳಗೆ ಹೋಗದೆ ತಲೆ ಓಡುವುದಿಲ್ಲ/ಸಿಗರೇಟು ಹಚ್ಚದೆ ಕೈ ಮುಂದೆ ಸಾಗುವುದಿಲ್ಲ/ಅವರು ಕುಡಿದು ವೇದಿಕೆ ಮೇಲೆ ಬಂದರೆ ಮಾತ್ರ ನಾಟಕ ಮಾಡುತ್ತಾರೆ/ಹಾಡುತ್ತಾರೆ. ಹೀಗೆ ಹಲವು ಸತ್ಯಗಳು / ಊಹಾಪೋಹಗಳು ಜನರ ಮಧ್ಯೆ ಓಡಾಡುತ್ತವೆ.

ಸೃಜನಶೀಲತೆಗೂ-ಮಾದಕದ್ರವ್ಯಗಳಿಗೂ ಇರುವ ಸಂಬಂಧವನ್ನು ಎಚ್ಚರದಿಂದ ನಾವು ಗಮನಿಸಬೇಕಾಗುತ್ತದೆ. ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸತ್ಯಗಳನ್ನೂ ಊಹೆಯನ್ನೂ ಮಿಥ್ಯೆಗಳನ್ನೂ ಬೇರ್ಪಡಿಸಬೇಕಾಗುತ್ತದೆ. ಏಕೆಂದರೆ ಸೃಜನಶೀಲತೆ-ಮಾದಕದ್ರವ್ಯಗಳಿಗೆ ಇತಿಹಾಸದ ಕೆಲವು ಘಟನೆಗಳನ್ನಷ್ಟೇ ಗಮನಿಸಿ ನಾವು ನಂಟನ್ನು ಕಲ್ಪಿಸಿಬಿಟ್ಟರೆ ಅದರಿಂದ ಹಲವು ಅಪಾಯಗಳಿವೆ. ಮೊದಲನೆಯದು ಬಿ.ಎ. ವಿದ್ಯಾರ್ಥಿ ನನ್ನನ್ನು ಪ್ರಶ್ನಿಸಿದ ಹಾಗೆ ‘ಕವಿತೆ/ಕಥೆ ಹುಟ್ಟಬೇಕೆನಿಸಿದರೆ ನಶೆ ಬೇಕೇ ಬೇಕು’ ಎಂಬ ಭಾವನೆ ಜನರ ವಿಶೇಷವಾಗಿ ಯುವಜನರ ಮನಸ್ಸಿನಲ್ಲಿ ಕುಳಿತುಬಿಡಬಹುದು. ಅದರ ಪರಿಣಾಮ ಯುವಜನರು ಕವಿತೆ -ಕತೆ ಬರೆಯುತ್ತಾರೋ ಇಲ್ಲವೋ, ಮಾದಕದ್ರವ್ಯಗಳ ನಶೆಯಲ್ಲಿ ತೇಲುವಂತೆ ಆಗಿಬಿಟ್ಟರೆ?!

ಮತ್ತೊಂದು ಅಪಾಯವೆಂದರೆ, ತಮ್ಮ ಸೃಜನಶೀಲತೆಗೆ ಮಾದಕವಸ್ತು ಬೇಕೇ ಬೇಕು ಎಂದು ನಂಬಿ, ಕವಿಗಳು-ಕಲಾವಿದರು ಮಾದಕದ್ರವ್ಯಗಳಿಗೆ ಬಲಿಯಾಗಿ ಕುಟುಂಬ-ಆರೋಗ್ಯ-ಪ್ರಾಣ ಎಲ್ಲವನ್ನೂ ಕಳೆದುಕೊಳ್ಳುವುದು. ಇದೇ ನಂಬಿಕೆಯ ನೇರ ಪ್ರಭಾವವೇ ತಮ್ಮ ಮಾದಕದ್ರವ್ಯ ಬಳಸುವಿಕೆಯಿಂದ ಸಾಕಷ್ಟು ಸಮಸ್ಯೆಗಳಿದ್ದರೂ, ಅದರಿಂದ ಹೊರಬರಲು ಚಿಕಿತ್ಸೆಯ ಲಭ್ಯವಿದೆಯೆಂದರೂ, ಸಮಾಜದ ಈ ಕೆನೆಪದರ ವೈದ್ಯಕೀಯ ಸಲಹೆ ಪಡೆಯಲು ಹಿಂಜರಿಯುವುದು. ನಾವು ಗಮನಿಸದಿರುವ ಮತ್ತೊಂದು ಸಮಸ್ಯೆಯೆಂದರೆ, ಜನರು ತಮ್ಮ ಮಕ್ಕಳಿಗೆ ಕಾವ್ಯ-ಕಲೆಯ ಪ್ರತಿಭೆಗಳಿದ್ದರೂ, ಕಲೆಯ ಜಾಡಿನ ಜೊತೆ ಕೆಟ್ಟ ಹಾದಿಯನ್ನೂ ಹಿಡಿದರೆ ಎಂಬ ಭಯದಿಂದ ಕಲೆ-ಕಾವ್ಯ-ಸಾಹಿತ್ಯ ರಚನೆಗೇ ತಡೆಯೊಡ್ಡುವುದು. ಇತ್ತೀಚೆಗಿನ ಸಿನಿಮಾರಂಗದ ಮಾದಕವಸ್ತು ಹಗರಣಗಳನ್ನು ನೋಡಿದರೆ ಇದರಲ್ಲಿ ಸತ್ಯಾಂಶವೂ ಇದೆ ಎನಿಸದಿರದು.

ತಮ್ಮ ವ್ಯಸನವನ್ನು ಮುಕ್ತವಾಗಿ ಒಪ್ಪಿಕೊಂಡವರು, ಮುಚ್ಚಿಟ್ಟು-ಆತ್ಮೀಯರೆದುರಿಗೆ ಮಾತ್ರ ತೆರೆದಿಟ್ಟು ಒಳಗೊಳಗೇ ನರಳುವವರು, ತಮ್ಮ ವ್ಯಸನವನ್ನೇ ಗರ್ವವಾಗಿಸಿಕೊಂಡವರು, ವ್ಯಸನದಿಂದ ಅಕಾಲಿಕವಾಗಿ ಮರಣ ಹೊಂದಿದವರು - ಹೀಗೆ ವಿವಿಧ ವರ್ಗದವರನ್ನು ಕಲಾ ಜಗತ್ತಿನ ತುಂಬೆಲ್ಲ ನೋಡಬಹುದು. ಆಗಲೇ ನನಗನ್ನಿಸುವುದು, ಇವರೆಲ್ಲರ ವ್ಯಸನಕ್ಕೆ ಹಲವು ಆಯಾಮಗಳಿವೆ. ಒಮ್ಮೆ ಕಲಾಕ್ಷೇತ್ರಕ್ಕೆ ಕಾಲಿರಿಸಿ, ಪ್ರಸಿದ್ಧಿ ಬರಲಾರಂಭಿಸಿದಂತೆ ಕಲಾವಿದ/ಕವಿ ಜನರಿಂದ ಬೇರೆಯಾಗಿ, ಎದ್ದು ನಿಲ್ಲುತ್ತಾನೆ. ಮೇಲೇರಿದಂತೆ ಒಂಟಿತನವೂ ಹೆಚ್ಚಾಗುತ್ತದೆ. ‘ಮೇಲೆ’ಯೇ ಇರಬೇಕಾದ ಒತ್ತಡ ಹೆಚ್ಚುತ್ತದೆ. ಸಂತೋಷದ ದಾರಿ, ಪ್ರಸಿದ್ಧಿಯ ಹಾದಿ ಎರಡೂ ಒಂದೇ ಆಗಿರುವುದು ಕಡಿಮೆಯೇ. ಹಾಗೆಯೇ ಪ್ರಸಿದ್ಧಿಯೇ ಒಂದು ಮಾದಕ ದ್ರವ್ಯದಂತೆಯೇ ಕೆಲಸ ಮಾಡಲೂ ಸಾಧ್ಯವಿದೆ!

ಮಾದಕ ದ್ರವ್ಯಗಳ ಲಭ್ಯತೆ ಸುಲಭವಾಗುತ್ತದೆ; ಸಾಮಾಜಿಕವಾಗಿ ತನ್ನದೇ ರೀತಿಯ ಜನರೊಡನೆ ಬೆರೆತಾಗ, ಮಾದಕ ದ್ರವ್ಯ ಸೇವನೆ ಮಾಮೂಲು ಎನಿಸುತ್ತದೆ. ಬೇರೆ ವೃತ್ತಿಗಳಲ್ಲಿ-ಸಾಮಾನ್ಯ ಜನರಲ್ಲಿಯೂ ಸಾಧ್ಯವಿರಬಹುದಲ್ಲ? ಇರಬಹುದು. ಆದರೆ ಕವಿಗಳು-ಕಲಾವಿದರನ್ನು-ಪ್ರಸಿದ್ಧರನ್ನು ನಾವು ಗಮನಿಸುವುದು, ಕುತೂಹಲದಿಂದ ಅವರ ಬಗ್ಗೆ ಓದುವುದು, ನಾವು ಓದುತ್ತೇವೆಂದು ಮಾಧ್ಯಮಗಳು ಸುದ್ದಿ ಮಾಡುವುದು ಹೆಚ್ಚಷ್ಟೆ. ಹಾಗಾಗಿ ಇರುವ ಪ್ರಮಾಣಕ್ಕಿಂತ ಹೆಚ್ಚು ಸುದ್ದಿಯಾಗುವುದು ಮಾದಕ ದ್ರವ್ಯ ಮತ್ತು ಕಲೆಯ ವಿಷಯದಲ್ಲಿಯೂ ಕಂಡುಬರುತ್ತದೆ. ಹಿಂದಿ ಸಿನಿಮಾ ನಟಿ ಪೂಜಾಭಟ್ ಹೇಳಿರುವ ಮಾತುಗಳು ನೆನಪಾಗುತ್ತವೆ. ‘ಬಣ್ಣದ-ಬೆಳಕಿನ ಬದುಕು, ಒತ್ತಡದ ವೃತ್ತಿಗಳ ನಡುವೆ ಮದ್ಯ ಸಂಭ್ರಮಿಸುವ, ವೈಫಲ್ಯದಿಂದ ಚೇತರಿಸಿಕೊಳ್ಳುವ ಸಾಧನವಾಗಿಬಿಡುತ್ತದೆ. ಫಿಲ್ಮ್ ಹಿಟ್ಟಾದರೆ ಶ್ಯಾಂಪೇನ್‍ನಲ್ಲಿ ಸಂಭ್ರಮ, ಫ್ಲಾಪ್ ಆಯಿತೆಂದರೆ ನೋವು ಮರೆಯಲು ಸಿಂಗಲ್ ಮಾಲ್ಟ್‌ನಲ್ಲಿ ಮುಳುಗುವುದು’.

ನಿಜವಾಗಿಯೂ ಮಾದಕ ದ್ರವ್ಯಗಳು ಸೃಜನಶೀಲತೆಯನ್ನು ಅರಳಿಸಬಲ್ಲವೆ ಎಂಬ ಬಗ್ಗೆ ಅಧ್ಯಯನಗಳು ನಡೆದಿವೆ. ಎಲ್‍ಎಸ್‍ಡಿ-ಗಾಂಜಾಗಳ ಸೇವನೆಯಲ್ಲಿ ಅನುಭವವಾಗುವ ‘ಸಂಗೀತವನ್ನು ನೋಡುವ’, ‘ಬಣ್ಣವನ್ನು ಕೇಳುವ’ ಪ್ರಕ್ರಿಯೆಗಳು ಸೃಜನಶೀಲ ಯೋಚನೆಗಳನ್ನು ಮತ್ತಷ್ಟು ತೀವ್ರವಾಗಿಸಬಹುದು ಎಂದು ತೋರಿಸಿದೆ. ಆದರೆ ಸೃಜನಶೀಲತೆಗೆ ಅತ್ಯವಶ್ಯಕವಾದ Divergent thinking - ‘ಭಿನ್ನವಾದ ಯೋಚನಾರೀತಿ’ಯಲ್ಲಿ ಕೊರತೆಯುಂಟಾಗುತ್ತದೆ ಎಂದೂ ಅಧ್ಯಯನಗಳು ತೋರಿಸಿವೆ.

ಅಷ್ಟೇ ಅಲ್ಲ, ಕವಿತೆ ಹುಟ್ಟಲಾಗಲಿ, ಕೃತಿಯ ಸೃಷ್ಟಿಗಾಗಲಿ ಆ ತಕ್ಷಣದ ಸ್ಫೂರ್ತಿಯೊಂದೇ ಕಾರಣವಾಗದಷ್ಟೆ. ಆಯೋಜನೆ-ವರ್ಗೀಕರಣ-ಭೇದನಗಳ (Organize - categolize- differentiate) ಮೂಲಕ ಜಾಗೃತ ಅನುಭವವನ್ನು ವಿಶ್ಲೇಷಿಸುವ ಸೃಜನಶೀಲತೆಯ ಅಂಶಗಳು ಮಾದಕದ್ರವ್ಯಗಳ ಪರಿಣಾಮದಿಂದ ಬಹುವಾಗಿ ಧಕ್ಕೆಗೆ ಒಳಗಾಗುತ್ತವೆ. ಹಾಗಾಗಿ ಸೃಜನಶೀಲತೆ ಹೆಚ್ಚುವುದರ ಬದಲು ಕುಗ್ಗುತ್ತದೆ. ಸಂಗೀತ-ಸಾಹಿತ್ಯ-ಕಲಾಸೃಷ್ಟಿ ಸಾಕಷ್ಟು ಒತ್ತಡ ತರಲು ಸಾಧ್ಯವಿದೆ. ಅಂತಹ ಒತ್ತಡದಿಂದ ಹೊರಬರಲು, ವಾಸ್ತವದಿಂದ ದೂರವಾಗಲು ಕಲಾವಿದರು ಮಾದಕ ದ್ರವ್ಯಗಳನ್ನು ಉಪಯೋಗಿಸುವ ಸಾಧ್ಯತೆಯೇ ಹೆಚ್ಚು. ತಮ್ಮ ಕಲೆಯ ಸಾಧನವಾಗಲ್ಲ!

ಸುರಾದೇವಿಯ ಬಗೆಗೆ ಮಾತನಾಡುವಾಗ ಕಲೆಯ ತಾಯಿ ಸರಸ್ವತಿಯ ಬಗೆಗೂ ನಾವು ನೆನಪಿಸಿಕೊಳ್ಳಬೇಕು! ಎಸ್.ಎಲ್. ಭೈರಪ್ಪನವರ ‘ದೂರ ಸರಿದರು’ ಕಾದಂಬರಿಯ ನಾಯಕ ಕಥೆಗಾರ ಸಚ್ಚಿದಾನಂದ ತನ್ನ ಟಿಪ್ಪಣಿಯಲ್ಲಿ ಹೀಗೆ ಬರೆಯುತ್ತಾನೆ, ‘ಜೀವನದಲ್ಲಿ ನಿರಾಶರಾದವರು ಸಾಮಾನ್ಯವಾಗಿ ಮದ್ಯಪಾನದಲ್ಲಿ ಮರೆಯುತ್ತಾರಂತೆ. ಅದರ ಬದಲು ಅವರು ನನ್ನಂತೆ ಕುಳಿತು ಯಾಕೆ ಓದಬಾರದು? ಸುರಾದೇವಿ, ಸರಸ್ವತಿ, ಇಬ್ಬರಲ್ಲಿಯೂ ಒಂದೇ ಗುಣವಿದೆ. ನಮಗೆ ಮರೆಯುವ ಶಕ್ತಿ ಕೊಡುವುದು’.

ಸೃಜನಶೀಲತೆಯನ್ನು ಮನೋವೈದ್ಯ ವಿಜ್ಞಾನಿ ಯೂಂಗ್ ಹೆಣ್ಣು ಗುಣವೆನ್ನುತ್ತಾನೆ. ಒಂದು ಗರ್ಭಧಾರಣೆ ನಡೆದು, ದೀರ್ಘಕಾಲ ಗರ್ಭದೊಳಗಿಂದ ಶಿಶು ರೂಪುಗೊಳ್ಳುವ ಹಾಗೆ ಕವಿತೆಯ ಹುಟ್ಟು ಎನ್ನುತ್ತಾನೆ. ಮನೋವೈದ್ಯೆಯಾಗಿ ನನಗೆ ಮದ್ಯ-ಮಾದಕ ದ್ರವ್ಯಗಳು ಗರ್ಭಿಣಿಯ -ಗರ್ಭಸ್ಥ ಶಿಶುವಿನ ಮೇಲೆ ಬೀರುವ ದುಷ್ಪರಿಣಾದಂತೆಯೇ ‘ಕವಿತೆ’ ಎಂಬ ಮಗು, ‘ಕವಿ’ ಎಂಬ ತಾಯಿಯ ಮೇಲೂ ಬೀರಬಹುದು ಎನಿಸುತ್ತದೆ!

ಪಂಡಿತ ಭೀಮಸೇನ ಜೋಶಿಯವರನ್ನು ಕುರಿತು ಡಾ. ನಾಗರಾಜರಾವ್ ಹವಾಲ್ದಾರ್ ಬರೆದಿರುವ ಪುಸ್ತಕದಲ್ಲಿ ‘ವಿಲಂಬಿತದಿಂದ ‘ಮದ್ಯ’ ಲಯದೆಡೆಗೆ’ ಎಂಬ ಅಧ್ಯಾಯ ಕಲೆ-ಕಲಾವಿದ-ಮಾದಕ ದ್ರವ್ಯ ವ್ಯಸನಗಳ ಬಗೆಗೆ ಹಲವು ಸಂಗತಿಗಳನ್ನು ತೆರೆದಿಡುತ್ತದೆ. ಭೀಮಸೇನ ಜೋಶಿಯವರ ಮಗಳು ಶುಭದಾ ಮುಳಗುಂದ ಅವರ ‘ಹೊರಗಿನವರಿಗೆ ರಂಜಕ-ರೋಚಕ-ಕಾಲಹರಣ ಗಾಸಿಪ್. ಆದರೆ ಮನೆಯವರಿಗೆ ಗಂಭೀರ ಸಮಸ್ಯೆ’ ಎಂಬ ಮಾತುಗಳು ಮನ ಮುಟ್ಟುತ್ತವೆ. ನಂತರ ಯಶಸ್ವಿಯಾಗಿ ಚಿಕಿತ್ಸೆ ಪಡೆದು, ಅವರು ವ್ಯಸನಮುಕ್ತರಾಗಿ ‘ಸಂಗೀತ-ಕಲಿಕೆ-ಸಾಧನೆಗಳೇ ಅಮಲಾಗಿದ್ದನ್ನೂ’ ಹವಾಲ್ದಾರ್ ಅವರು ಬಣ್ಣಿಸಿರುವುದು ವಿಶೇಷವೇ!

ಹಾಸ್ಯಗಾರ ಅರ್ಥರ್ ಕ್ರ್ಯಾಮರ್ Homily for Art students (ಕಲಾ ವಿದ್ಯಾರ್ಥಿಗಳಿಗೊಂದು ಧರ್ಮೋಪದೇಶ) ಎಂದು ಪ್ರಕಟಿಸಿರುವ ಸಾಲುಗಳು ನನಗೆ ಅರ್ಥಪೂರ್ಣ ಎನಿಸುತ್ತವೆ.

ಟರ್ನರ್ಸ್‌ಡ್ಯೂರರ್ಸ್‌ ಅಥವಾ ಬೆಲ್ಲಿನಿಸ್

‘ಡ್ರೈ ಮಾರ್ಟಿನಿ’ಗಳಿಂದ ಬರಲಾರರು

ಗೋಯಾನ ಜೀನಿಯಸ್ ರೂಬೆನ್‍ನ ಬಲ

ಹುಳಿ ವಿಸ್ಕಿಯಿಂದ ಹೊರ ಬರದು.

ಬಿಸಿ ಮಾಡುವ ಬ್ರಾಂಡಿ, ಬಲವಾದ ಸಿಡರ್

ಹಾಲ್ಬೀನ್-ರೈಡರ್ಸ್‌ನ್ನು ತರಲು ಸಾಧ್ಯವಿಲ್ಲ.

ಪೆರುಗಿನೋ, ಇಂಗ್ರೆಸ್, ಗಿಯೋಟ್ಟೋ

ಡಬಲ್ ಸ್ಕಾಚ್‍ಗಳಿಂದ ಹುಟ್ಟಲಿಲ್ಲ

ಕುಡಿಯುವುದು ‘ಕ್ರಿಯೇಟಿವಿಟಿ’ಯಲ್ಲ!

ಸುರಾದೇವಿ ಸರಸ್ವತಿಯಾಗಲು ಸಾಧ್ಯವಿಲ್ಲ! ‘ನಶೆ’ಯಲ್ಲಿ ಕವಿತೆ ಹುಟ್ಟುವುದೋ, ಇಲ್ಲವೋ, ಅನಾರೋಗ್ಯ-ಅಪಾರ ನೋವು, ನಶೆ ಏರಿದವರಿಗೆ, ಅವರ ಆತ್ಮೀಯರಿಗೆ ಕಾಡುವುದು ಖಂಡಿತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT