ಸೋಮವಾರ, ಡಿಸೆಂಬರ್ 6, 2021
27 °C

ಶಾಲೆಗಳಿಲ್ಲ, ಡೇಕೇರ್‌ ಸದ್ದಿಲ್ಲ ಪೋಷಕರ ಮುಂದಿರುವ ಆಯ್ಕೆಗಳೇನು?

ಸುಶೀಲಾ ಡೋಣೂರ Updated:

ಅಕ್ಷರ ಗಾತ್ರ : | |

Prajavani

ಶಾಲೆಗಳಿನ್ನೂ ಆರಂಭವಾಗಿಲ್ಲ, ಡೇಕೇರ್‌ಗಳೂ ಬಾಗಿಲು ತೆರೆದಿಲ್ಲ. ಕೆಲವು ಕಚೇರಿಗಳು ಕಾರ್ಯ ನಿರ್ವಹಿಸಲು ಆರಂಭಿಸಿವೆ. ಈ ಸಂದರ್ಭದಲ್ಲಿ ಪೋಷಕರು ಕೂಡ ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗಿದೆ.

ಶಾಲೆಗಳಿನ್ನೂ ಆರಂಭವಾಗಿಲ್ಲ, ಆರಂಭವಾದರೂ 5ನೇ ತರಗತಿಯ ನಂತರದ ತರಗತಿಗಳು ಮಾತ್ರ ಎನ್ನುವ ಮಾತಿದೆ. ಡೇಕೇರ್‌–ಪ್ಲೇಹೋಮ್‌ಗಳೂ ಬಾಗಿಲು ತೆರೆದಿಲ್ಲ. ಕೆಲಸದವರು ಬರುತ್ತಿಲ್ಲ, ಇತ್ತ ಕೊರೋನಾ ಕಾರಣದಿಂದ ಬಂಧುಗಳು–ಸಂಬಂಧಿಕರಿಂದಲೂ ನೆರವು ಸಿಗುತ್ತಿಲ್ಲ. ಆದರೆ ಕಚೇರಿಗೆ ಮರಳುವಂತೆ ಸಂಸ್ಥೆಗಳಿಂದ ಬುಲಾವ್‌ ಬರುತ್ತಿದೆ… ಚಿಕ್ಕ ಚಿಕ್ಕ ಮಕ್ಕಳನ್ನು ಮಡಿಲಲ್ಲಿಟ್ಟುಕೊಂಡು ಮನೆಯಿಂದ ಕಾರ್ಯನಿರ್ವಿಸುತ್ತಿರುವ ಪೋಷಕರು ಚಿಂತೆಗೆ ಬಿದ್ದಿದ್ದಾರೆ.

ಕಳೆದ ಸುಮಾರು ಆರು ತಿಂಗಳಿಂದ ಮಕ್ಕಳನ್ನೂ ನೋಡಿಕೊಳ್ಳುತ್ತ ಮನೆಯಿಂದಲೇ ಕಾರ್ಯನಿರ್ವಿಸುತ್ತಿರುವ ಪಾಲಕರ ಮುಂದೆ ಹೊಸ ಸವಾಲುಗಳು ಸಾಲುಗಟ್ಟಿವೆ. ಒಂದೆಡೆ ಕರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇನ್ನೊಂದೆಡೆ ಮಕ್ಕಳ ಪೋಷಣೆಗೆ ಪರ್ಯಾಯ ವ್ಯವಸ್ಥೆಗಳು ಸಿಗುತ್ತಿಲ್ಲ. ಕಚೇರಿಗೆ ಮರಳುವುದು ಹೇಗೆನ್ನುವ ಆತಂಕ ಸೃಷ್ಟಿಯಾಗಿದೆ.

 ಈ ಎಲ್ಲಾ ಕಾರಣಗಳಿಂದ ಪೋಷಕರು ಅದರಲ್ಲೂ ಅಮ್ಮಂದಿರು ತಮ್ಮ ಭವಿಷ್ಯದ ಕನಸನ್ನು ಬದಿಗೆ ಸರಿಸಿ ಮಕ್ಕಳ ಪೋಷಣೆಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ. ಮಕ್ಕಳ ಆರೈಕೆಯನ್ನೇ ಕಾರಣವಾಗಿಟ್ಟುಕೊಂಡು ಶೇ 13ರಿಂದ ಶೇ 15ರಷ್ಟು ಅಮ್ಮಂದಿರು ಕೆಲಸ ಬಿಡುವ ಅಥವಾ ಕೆಲಸದ ಸಮಯವನ್ನು ಕಡಿಮೆ ಮಾಡಿಕೊಳ್ಳುವ ಆಲೋಚನೆಯಲ್ಲಿದ್ದಾರೆ ಎನ್ನುತ್ತದೆ ಅಧ್ಯಯನವೊಂದು. ಶೇ 60ರಷ್ಟು ಪೋಷಕರು ಮಕ್ಕಳ ಆರೈಕೆಗಾಗಿ ಪರ್ಯಾಯ ವ್ಯವಸ್ಥೆಗಾಗಿ ಹುಡುಕಾಡುತ್ತಿದ್ದಾರೆ ಎಂದು ಸಮೀಕ್ಷೆಗಳು (ಕೇರ್‌.ಕಾಮ್‌ ಮತ್ತು ನಾರ್ಥ್‌ ಈಸ್ಟರ್ನ್‌ ವಿಶ್ವವಿದ್ಯಾಲಯ) ತಿಳಿಸಿವೆ.

ಪಾಲಕರಿಂದ ಬೆಂಬಲವಿಲ್ಲ
ಹೆಚ್ಚುತ್ತಿರುವ ಜೀವನ ನಿರ್ವಹಣೆಯ ವೆಚ್ಛಗಳು, ಐಡೆಂಟಿಟಿಯ ಹಂಬಲ, ಮಹಾತ್ವಾಕಾಂಕ್ಷೆ ಮುಂತಾದ ಕಾರಣಗಳು ಗಂಡ–ಹೆಂಡತಿ ಇಬ್ಬರೂ ದುಡಿಯಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿವೆ. ಆದರೆ ಇದಕ್ಕೆ ಕೊರೋನಾ ತಡೆಯೊಡ್ಡಿದ್ದು, ಮನೆಯಲ್ಲಿಯೂ ಹಿರಿಯರ ಬೆಂಬಲವಿಲ್ಲ ಎನ್ನುವುದೂ ನವಯುಗದ ಪಾಲಕರ ಗೋಳಾಟಕ್ಕೆ ಕಾರಣವಾಗಿದೆ. ಈ ಗುಂಪಿಗೆ ಸೇರುವವರ ಸಂಖ್ಯೆ ಕಡಿಮೆ ಏನಿಲ್ಲ, ಶೇ 80ರಷ್ಟು ಪೋಷಕರಿಗೆ ಹಿರಿಯರಿಂದ ಮಕ್ಕಳ ಪಾಲನೆಯಲ್ಲಿ ಬೆಂಬಲ ಸಿಗುತ್ತಿಲ್ಲ ಎನ್ನುತ್ತದೆ ಸಮೀಕ್ಷೆ.

‘ಡಿಸೆಂಬರ್‌ ಜನವರಿ ತಿಂಗಳಿಂದಲೇ ಈ ಸಮಸ್ಯೆ ಎದುರಿಸುತ್ತಿದ್ದೇವೆ. ಫೆಬ್ರುವರಿ ವೇಳೆಗೆ ಡೇಕೇರ್‌ನಲ್ಲಿ ಮಕ್ಕಳನ್ನು ಬಿಡುವುದು ಪಾಯಕಾರಿ ಎನಿಸಿತು. ಮಾರ್ಚ್‌ ವೇಳೆಗೆ ಮನೆಯಿಂದಲೇ ಕೆಲಸ ಆರಂಭವಾಯಿತು. ಈಗ ಕಚೇರಿಯಿಂದ ಫೋನ್‌ ಬಂದಿದೆ. ಆದರೆ ಮಕ್ಕಳನ್ನು ನೋಡಿಕೊಳ್ಳಲು ಯಾವ ದಾರಿಗಳೂ ಕಾಣುತ್ತಿಲ್ಲ. ಡೇಕೇರ್‌ ಸಹ ಸದ್ದಿಲ್ಲ. ಕೆಲಸದವರೂ ಸಿಗುತ್ತಿಲ್ಲ…’ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಾರೆ ನಾಗರಭಾವಿಯ ನಿವಾಸಿ ಚೈತ್ರಾ.

ಬೇಕಿದೆ ಉದ್ಯೋಗದಾತರ ಬೆಂಬಲ
ಸದ್ಯ ಪೋಷಕರ ಮುಂದಿರುವ ಆಯ್ಕೆಗಳೆಂದರೆ: ಯಾರಾದರೂ ಒಬ್ಬರು ಕೆಲಸ ಬಿಡುವುದು(ಕೆಲ ದಿನಗಳ ಮಟ್ಟಿಗೆ), ದೀರ್ಘ ರಜೆ ತೆಗೆದುಕೊಳ್ಳುವುದು, ಕೆಲಸದ ಅವಧಿಯನ್ನು ಕಡಿಮೆ ಮಾಡಿಕೊಳ್ಳುವುದು ಅಥವಾ ಗಂಡ–ಹೆಂಡತಿ ಶಿಫ್ಟ್‌ಗಳನ್ನು ಹೊಂದಿಸಿಕೊಳ್ಳುವುದು. ಆದರೆ ಇದಕ್ಕೆಲ್ಲಾ ಉದ್ಯೋಗದಾತರ ಸಹಕಾರ–ಬೆಂಬಲವೂ ಅಗತ್ಯವಾಗುತ್ತದೆ.

ಕೊರೋನಾ ಕಾಲದ ಈ ಹೊಸ ಬೇಡಿಕೆಗಳನ್ನು ಪೂರೈಸಲು ಉದ್ಯೋಗದಾತರೂ ತಮ್ಮ ಕೆಲಸದ ನೀತಿಗಳು, ಅವಧಿಗಳು ಮತ್ತು ಡೆಡ್‌ಲೈನ್‌ಗಳನ್ನು ಮರು ಹೊಂದಿಸಬೇಕಾಗುತ್ತದೆ. ಮೈಕ್ರೋಸಾಫ್ಟ್, ಗೂಗಲ್ ಮತ್ತು ಫೇಸ್‌ಬುಕ್ ಸೇರಿದಂತೆ ಕೆಲ ದಿಗ್ಗಜ ಸಂಸ್ಥೆಗಳು ಈ ಸಮಯದಲ್ಲಿ ಪೋಷಕರಿಗೆ ಬೆಂಬಲವಾಗುವಂತೆ ಪೋಷಕ ಸ್ನೇಹಿ ನೀತಿಗಳತ್ತ ಗಮನ ಹರಿಸಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು