ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ಇಲ್ಲಿದೆ ಪ್ರೇಮಕವಿಯ ಸಿರಿಗೆರೆ, ಬಿರಿದ ತಾವರೆ...!

ಕೆಎಸ್‌ನ ಕಾವ್ಯ ಸ್ಫೂರ್ತಿ ಅರಸುತ್ತಾ ಹೊರಟಾಗ ಕಿಕ್ಕೇರಿ ಕೆರೆ, ಅವರು ಹುಟ್ಟಿದ ಮನೆಯ ದರ್ಶನ
Last Updated 12 ನವೆಂಬರ್ 2020, 7:42 IST
ಅಕ್ಷರ ಗಾತ್ರ
ADVERTISEMENT
""
""
""
""

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ ಕೆಂಪಾಗಿ ನಿನ್ನ ಹೆಸರು
ಗುಡಿಯ ಗೋಪುರದಲ್ಲಿ ನೆರೆವ ದೀಪಗಳಲ್ಲಿ ಬೆಳಕಾಗಿ ನಿನ್ನ ಹೆಸರು
ನಿನ್ನ ಹೆಸರು…

ಪ್ರೇಮಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರ ಬಹುತೇಕ ಒಲವಿನ ಕವಿತೆಗಳಲ್ಲಿ ಸಿರಿಗೆರೆಯ ನೀರು ಹರಿಯುತ್ತದೆ. ತಾವರೆ ಹೂವಿನ ಸೌಂದರ್ಯ ಕಣ್ಣಿಗೆ ಕಟ್ಟುತ್ತದೆ. ಮೈಸೂರು ಮಲ್ಲಿಗೆಯ ಪರಿಮಳ ಮನಸ್ಸಿಗೆ ಮುದ ನೀಡುತ್ತದೆ. ಕೆರೆಯ ಏರಿಯ ಮೇಲೆ ಬಂಡಿಗಳು ಸಾಗುವಾಗ ತೆಂಗುಗಳು ತಲೆದೂಗಿ ಬಾಳೆಗಳು ತೋಳ ಬೀಸುತ್ತವೆ. ನವಿಲೂರ ಹಾದಿಯಲ್ಲಿ ಬಳೆಗಾರ ಚೆನ್ನಯ್ಯ ನುಡಿಯೊಂದ ಆಡುತ್ತಾನೆ. ಶಾನುಭೋಗರ ಮಗಳು ಕೆರೆಯ ನೀರು ತರುವಾಗ ಗಂಡನ ಹೆಸರು ಕೇಳಿ ನಾಚಿ ನೀರಾಗುತ್ತಾಳೆ, ಜೋಯಿಸರ ಬೀದಿಯ ಹೂವಿನ ತೋಟದಲ್ಲಿ ಪುಷ್ಪಗಳು ನೃತ್ಯ ಮಾಡುತ್ತವೆ...

ಕೆ.ಎಸ್‌.ನರಸಿಂಹಸ್ವಾಮಿ

ಪ್ರೇಮಕವಿಯ ಭಾವಕ್ಕೆ ಸ್ಫೂರ್ತಿಯಾಗಿದ್ದ ಕಾವ್ಯದ ವಸ್ತುಗಳು ಗ್ರಾಮೀಣ ಬದುಕಿನ ದೃಶ್ಯಕಾವ್ಯ ಸೃಷ್ಟಿಸಿವೆ. ಕೆಎಸ್‌ನ ಅವರ ಆ ಸ್ಫೂರ್ತಿಯನ್ನರಸಿ ಹೊರಟರೆ ಹಾದಿಯು ಮಂಡ್ಯ ಜಿಲ್ಲೆ, ಕೆ.ಆರ್‌.ಪೇಟೆ ತಾಲ್ಲೂಕು ಕಿಕ್ಕೇರಿ ಎಂಬ ಸುಂದರ ಊರಿಗೆ ಬಂದು ನಿಲ್ಲುತ್ತದೆ. ಕಿಕ್ಕೇರಿ ಕೆರೆಯ ಸೌಂದರ್ಯ ಪ್ರೇಮಕವಿಗೆ ಬಲುದೊಡ್ಡ ಪ್ರೇರಣೆಯಾಗಿತ್ತು. ಈಗಲೂ ಕಿಕ್ಕೇರಿ ಕೆರೆ ತಟದಲ್ಲಿ ನಿಂತು ನೋಡಿದರೆ ಕೆಎಸ್‌ನ ಭಾವ ಎದ್ದು ಕಾಣುತ್ತದೆ. ಅರಳಿರುವ ತಾವರೆ ಹೂವುಗಳು ‘ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ’ ಗೀತೆ ನಾಲಗೆ ಮೇಲೆ ಬರುತ್ತದೆ.

ಸುಂದರ, ವಿಶಾಲವಾಗಿರುವ ಈ ಕೆರೆಯನ್ನು ತಮ್ಮ ಕವಿತೆಗಳಲ್ಲಿ ಅವರು ‘ಸಿರಿಗೆರೆ’ ಎಂದು ಕರೆದಿದ್ದರು. ಕೆರೆಯ ತಟದಲ್ಲಿರುವ ಐತಿಹಾಸಿಕ ಬ್ರಹ್ಮೇಶ್ವರ ದೇವಾಲಯ ಹಲವು ಕವಿತೆಗಳಲ್ಲಿ ಭಕ್ತಿಭಾವ ಸೃಷ್ಟಿಸುತ್ತದೆ. ಸುರಳಿಯಾಕಾರದಲ್ಲಿ ಇರುವ ಕೆರೆಯ ಏರಿ, ತೆಂಗಿನ ಮರಗಳ ಸಾಲು, ಬಾಳೆ, ಮಲ್ಲಿಗೆ ತೋಟಗಳು ಅವರ ಕವನಗಳಲ್ಲಿ ಅನಾವರಣಗೊಂಡಿವೆ. ಕೆರೆಯ ತಟದಲ್ಲಿ ನವಿಲುಗಳು ಓಡಾಡತ್ತಿದ್ದ ಕಾರಣ ಕಿಕ್ಕೇರಿಯನ್ನು ಕವಿ ಹೃದಯ ನವಿಲೂರು ಎಂದು ಕರೆದಿತ್ತು.

ಕೆಎಸ್‌ನ ಕಾವ್ಯ ಅವರ ಬದುಕಿನ ಕನ್ನಡಿಯಾಗಿತ್ತು. ಈ ಬಗ್ಗೆ ‘ಮೈಸೂರು ಮಲ್ಲಿಗೆ’ ಚಲನಚಿತ್ರ, ರಂಗಪ್ರಯೋಗಗಳು ಜನಮಾನಸಲ್ಲಿ ಅಚ್ಚಳಿಯದಂತೆ ಉಳಿದಿವೆ. ಪ್ರೇಮಕ್ಕೆ, ಪತಿ–ಪತ್ನಿಯ ಬಾಂಧವ್ಯಕ್ಕೆ ನವೋದಯ ಸಾಹಿತ್ಯದಲ್ಲಿ ಸ್ಥಾನ ಕೊಡಿಸಿದ ಅವರು ರೊಮ್ಯಾಂಟಿಕ್‌ ಚಳವಳಿಯನ್ನೇ ಸೃಷ್ಟಿಸಿದ್ದರು. ಕಡೆಯವರೆಗೂ ಬಡತನದಲ್ಲೇ ಬೆಂದು ಹೋದ ಕೆಎಸ್‌ನ ಅವರು ತಮ್ಮ ಕವಿತೆಗಳಲ್ಲಿ ಪ್ರೀತಿಯೊಳಗೆ ಹುದುಗಿರುವ ನೋವಿನ ದರ್ಶನವನ್ನೂ ಮಾಡಿಸಿದರು.

ಕಿಕ್ಕೇರಿಯಲ್ಲಿರುವ ಕೆಎಸ್‌ನ ಹುಟ್ಟಿದ ಮನೆ

1915, ಜ.26ರಂದು ಹುಟ್ಟಿದ ಕಿಕ್ಕೇರಿ ಸುಬ್ಬರಾವ್‌ ನರಸಿಂಹಸ್ವಾಮಿ ಅವರು ತಮ್ಮ ಬಾಲ್ಯವನ್ನು ಕಿಕ್ಕೇರಿಯ ಸುಂದರ ಪರಿಸರದಲ್ಲೇ ಕಳೆದಿದ್ದಾರೆ. ಕಿಕ್ಕೇರಿ ಪೋಸ್ಟ್‌ ಆಫೀಸ್‌ ಬೀದಿಯ ಬಳಿಯಿದ್ದ ಅವರ ಮನೆಗೆ ಗಾವುದ ದೂರದಲ್ಲೇ ಕಿಕ್ಕೇರಿ ಕೆರೆ ಇದೆ. ಕಿಕ್ಕೇರಿ, ಲಕ್ಷ್ಮಿಪುರ, ಭುವನಹಳ್ಳಿ, ಸೊಳ್ಳೆಪುರಗಳ ನಡುವೆ ಚಾಚಿಕೊಂಡಿದ್ದ ಈ ವಿಶಾಲ ಕೆರೆ ಬಾಲ್ಯದ ಬದುಕಿಗೆ ಜೀವಸೆಲೆಯಾಗಿತ್ತು. ಅಗ್ರಹಾರದಂತಿದ್ದ ಅವರು ವಾಸಿಸುತ್ತಿದ್ದ ಬೀದಿಯಲ್ಲಿ ಮಲ್ಲಿಗೆ ಹೂವಿನ ಗಿಡಗಳಿಗೆ ಕೊರತೆ ಇರಲಿಲ್ಲ. ಕಿಕ್ಕೇರಿಯ ಕೋಟೆ, ಜನಾರ್ಧನಸ್ವಾಮಿ ದೇವಾಲಯ (ಈಗ ಒತ್ತುವರಿಗೆ ಒಳಗಾಗಿವೆ), ಯೋಗ ನರಸಿಂಹಸ್ವಾಮಿ ದೇವಾಲಯ ಅವರಲ್ಲಿ ಸುಂದರ ಕನಸನ್ನು ಹೃದಯದಲ್ಲಿ ಇರಿಸಿದ್ದವು.

ಕಾವ್ಯಕ್ಕೆ ಕಿಕ್ಕೇರಿ ಪರಿಸರ ಸ್ಫೂರ್ತಿಯಾದ ಬಗೆಯನ್ನು ಅವರೇ ಹೇಳಿಕೊಂಡಿರುವುದು ದಾಖಲಾಗಿದೆ. ಮೈಸೂರಿನಲ್ಲಿ ಶಿಕ್ಷಣ, ಬೆಂಗಳೂರಿನಲ್ಲಿ ನೌಕರಿ ಮಾಡಿದ ಅವರು ಕಡೆಗೆ ಬೆಂಗಳೂರಿನಲ್ಲೇ ನೆಲೆ ನಿಂತರು. ಆದರೂ ಅವರು ಹುಟ್ಟೂರನ್ನು, ಅಲ್ಲಿಯ ಸುಂದರ ಪರಿಸರವನ್ನು ಮರೆಯಲಿಲ್ಲ. ಕಿಕ್ಕೇರಿಗೆ ಬಂದಾಗಲೆಲ್ಲಾ ಕೆರೆಯ ಏರಿಯ ಮೇಲೆ ಓಡಾಡುತ್ತಿದ್ದರು. ಸೋಪಾನ ಕಟ್ಟೆಯ ಬಳಿಯಿರುವ ಅಶ್ವತ್ಥ ಕಟ್ಟೆಯ ಮೇಲೆ ಕುಳಿತು ಕವನ ಕಟ್ಟುತ್ತಿದ್ದರು.

ಕೆಎಸ್‌ನ ಕುಳಿತುಕೊಳ್ಳುತ್ತಿದ್ದ ಅಶ್ವತ್ಥ ಕಟ್ಟೆ

‘ಕೆಎಸ್‌ನ ಅವರ ಕಾವ್ಯದಲ್ಲಿ ನಾಯಕಿಯ ಚಿತ್ರಣವನ್ನೂ ಗ್ರಾಮೀಣ ಪರಿಸರದಲ್ಲೇ ವರ್ಣಿಸಿದ್ದಾರೆ. ನಗರದಲ್ಲಿ ನೆಲೆನಿಂತ ನಂತರ ಗ್ರಾಮೀಣ ಭಾಗದಿಂದ ನಗರ ಜೀವನಕ್ಕೆ ಪರಿವರ್ತನೆಗೊಂಡ ಚಿತ್ರಣವನ್ನು ಅವರ ಕಾವ್ಯದಲ್ಲಿ ಕಾಣಬಹುದು. ಮೈಸೂರು ಮಲ್ಲಿಗೆ, ಇರುವಂತಿಗೆ ಸಂಕಲನಗಳಲ್ಲಿ ಬರುವ ಗ್ರಾಮೀಣ ಚಿತ್ರಣ ಕಿಕ್ಕೇರಿ ಭಾಗದ್ದೇ ಆಗಿದೆ’ ಎಂದು ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌ ಅಧ್ಯಕ್ಷ, ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದರು.

‘ಮೈಸೂರು ಮಲ್ಲಿಗೆ ಕವನ ಸಂಕಲನದಲ್ಲಿ ಹುಟ್ಟೂರಿನ ಪರಿಸರವನ್ನು ಕೆಎಸ್‌ನ ಅವರು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಕಿಕ್ಕೇರಿಯಲ್ಲಿ 2 ಬಾರಿ ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ ಮಾಡಿದ್ದೇವೆ. ಅವರು ಕವನ ಕಟ್ಟುತ್ತಿದ್ದ ಅಶ್ವತ್ಥ ಕಟ್ಟೆಯ ಮೇಲೆ ಅವರ ಕವಿತೆಗಳನ್ನು ಹಾಡಿದ್ದೇವೆ’ ಎಂದು ಮೈಸೂರು ಮಲ್ಲಿಗೆ ನಾಟಕ ನಿರ್ದೇಶಕ, ನಟ ಬಿ.ವಿ.ರಾಜಾರಾಂ ಹೇಳಿದರು.

ಮನೆ ಹೇಗಿದೆ ಗೊತ್ತಾ?: ಕೆ.ಎಸ್‌.ನರಸಿಂಹಸ್ವಾಮಿ ಹುಟ್ಟಿದ ಮನೆ ಈಗಲೂ ಕಿಕ್ಕೇರಿಯ ಪೋಸ್ಟ್‌ ಆಫೀಸ್‌ ಬೀದಿಯಲ್ಲಿದೆ. ಆಶ್ಚರ್ಯಕರ ಸಂಗತಿ ಏನೆಂದರೆ ಅವರು ಇದ್ದಾಗ ಮನೆ ಹೇಗಿತ್ತೋ ಈಗಲೂ ಅದೇ ಸ್ಥಿತಿಯಲ್ಲೇ ಉಳಿದಿದೆ. ಮಣ್ಣಿನ ಗೋಡೆಗಳು, ನಾಡಹೆಂಚಿನ ಹೊದಿಕೆ, ಮನೆ ಮುಂದೆ ಜಗುಲಿ ಈಗಲೂ ಇವೆ. ಪಕ್ಕದಲ್ಲೇ ಕೈತೋಟವಿದ್ದು ಇತ್ತೀಚಿನವರೆಗೂ ಅಲ್ಲಿ ಮಲ್ಲಿಗೆ ಹೂವಿನ ಗಿಡಗಳು ಇದ್ದವು ಎಂದು ಸ್ಥಳೀಯರು ಹೇಳುತ್ತಾರೆ.

ಕೆಎಸ್‌ನ ಸಂಬಂಧಿಕರು ಆ ಮನೆಯನ್ನು ದೇವರಾಜ್‌ ಎನ್ನುವವರಿಗೆ ಮಾರಾಟ ಮಾಡಿದ್ದಾರೆ. ದೇವರಾಜ್‌ ಕುಟುಂಬ ಸದಸ್ಯರು ಮನೆಯನ್ನು ಮೂಲಕ್ಕೆ ಧಕ್ಕೆಯಾಗದಂತೆ ನೊಡಿಕೊಂಡಿದ್ದಾರೆ. ಕೆಎಸ್‌ನ ಅವರ ಕಾವ್ಯ ಹಾಗೂ ಬದುಕನ್ನು ಹುಟ್ಟೂರಿನಲ್ಲಿ ಜೀವಂತವಾಗಿ ಇಡಬೇಕು ಎಂಬ ಉದ್ದೇಶದಿಂದ ಸಮಾನ ಮನಸ್ಕರ ಒತ್ತಾಯದ ಮೇರೆಗೆ ಸರ್ಕಾರ ಕೆ.ಎಸ್‌.ನರಸಿಂಹಸ್ವಾಮಿ ಟ್ರಸ್ಟ್‌ ರಚನೆ ಮಾಡಿದೆ. ಜಿಲ್ಲೆಯವರೇ ಆದ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯಂ ಟ್ರಸ್ಟ್‌ ಅಧ್ಯಕ್ಷರಾಗಿದ್ದಾರೆ. ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಸಾಹಿತಿ ಕಿಕ್ಕೇರಿ ನಾರಾಯಣ, ಕೆಎಸ್‌ನ ಅವರ ಮೊಮ್ಮಗಳು ಮೇಕಲಾ ಹಾಗೂ ಸ್ಥಳೀಯರು ಟ್ರಸ್ಟ್‌ ಸದಸ್ಯರಾಗಿದ್ದಾರೆ.

ಕೆಎಸ್‌ನ ಅವರಿಗೆ ಸ್ಫೂರ್ತಿಯಾಗಿದ್ದ ಕಿಕ್ಕೇರಿ ಕೆರೆಯನ್ನು ‘ಕೆಎಸ್‌ನ ಸರೋವರ’ವನ್ನಾಗಿ ರೂಪಿಸಬೇಕು ಎಂಬ ಕನಸನ್ನು ಟ್ರಸ್ಟ್‌ ಹೊಂದಿದೆ. ಖಾಸಗಿ ಸ್ವಾದೀನದಲ್ಲಿರುವ ಅವರ ಮನೆಯನ್ನು ಖರೀದಿ ಮಾಡಿ ಸ್ಮಾರಕವನ್ನಾಗಿ ರೂಪಿಸಿ, ಗ್ರಂಥಾಲಯ, ವಸ್ತು ಸಂಗ್ರಹಾಲಯ ರೂಪ ಕೊಡುವ ಕನಸು ಟ್ರಸ್ಟ್‌ ಸದಸ್ಯರಿಗೆ ಇದೆ. ಕೆಎಸ್‌ನ ಉದ್ಯಾನ ನಿರ್ಮಿಸುವ ಪ್ರಸ್ತಾಪವೂ ಉಂಟು.

ಡಾ.ರಾಜ್‌ಕುಮಾರ್‌ ಅವರೊಂದಿಗೆ ಕೆ.ಎಸ್‌.ನರಸಿಂಹಸ್ವಾಮಿ

ಇದಕ್ಕೆ ಮೊದಲ ಹೆಜ್ಜೆಯಾಗಿ ಟ್ರಸ್ಟ್‌ ವತಿಯಿಂದ ಕೆರೆಯಲ್ಲಿ ತೆಪ್ಪ ನಿರ್ಮಿಸಿ ಅಲ್ಲಿ ಕೆಎಸ್‌ನ ಕವಿತೆಗಳ ಗಾಯ, ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. 2 ವರ್ಷ ‘ಕಿಕ್ಕೇರಿ ಹಬ್ಬ’ ಆಯೋಜನೆ ಮಾಡಲಾಗಿತ್ತು. ಕಿಕ್ಕೇರಮ್ಮನ ದೇವಾಲಯದಿಂದ ನವಗ್ರಹ ದೇವಾಲಯದವರೆಗೆ ಕೆರೆ ಅಭಿವೃದ್ಧಿಪಡಿಸಿ, ವಾಕಿಂಗ್‌ ಪಾತ್‌ ರೂಪಿಸಿ, ಕೆಎಸ್‌ನ ಅವರ ಕವಿತೆಗಳನ್ನು ಅಳವಡಿಸುವ ಉದ್ದೇಶವೂ ಇತ್ತು. ಸರ್ಕಾರ ಕೂಡ ಮೊದಲ ಹಂತದಲ್ಲಿ ₹ 5.6 ಕೋಟಿ ಹಣವನ್ನೂ ಬಿಡುಗಡೆ ಮಾಡಿತ್ತು.

ಕೆರೆ ಅಭಿವೃದ್ಧಿ ಕಾಮಗಾರಿ ಜವಾಬ್ದಾರಿಯನ್ನು ಟ್ರಸ್ಟ್‌ಗೆ ನೀಡದೇ ಸರ್ಕಾರ ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ಖಾಸಗಿ ಏಜೆನ್ಸಿಗೆ ವಹಿಸಿತ್ತು. ಆದರೆ, ಆ ಹಣದಲ್ಲಿ ಟ್ರಸ್ಟ್‌ ಸದಸ್ಯರ ಕನಸುಗಳು ಈಡೇರಲಿಲ್ಲ. ಹಣವನ್ನು ಕೆರೆ ಹೂಳೆತ್ತಲು ವಿನಿಯೋಗಿಸಿ ಅಧಿಕಾರಿಗಳು, ಗುತ್ತಿಗೆದಾರರು ಕೈತೊಳೆದುಕೊಂಡರು. ಮುಂದಿನ ಕೆಲಸ ಆಗದೆ ಇಡೀ ಕಾಮಗಾರಿ ನನೆಗುದಿಗೆ ಬಿತ್ತು. ಇದಕ್ಕೆಲ್ಲಾ ಸ್ಥಳೀಯ ರಾಜಕಾರಣವೂ ಕಾರಣವಾಗಿತ್ತು.

‘ನರಸಿಂಹಸ್ವಾಮಿ ಹುಟ್ಟಿದ ಊರು ಒಂದು ಪ್ರವಾಸಿ ತಾಣವಾಗಿ ರೂಪಗೊಳ್ಳಬೇಕು. ಸಮೀಪದಲ್ಲೇ ಶ್ರವಣಬೆಳಗೊಳ, ಮೇಲುಕೋಟೆಗಳಿವೆ. ಅಲ್ಲಿಗೆ ಹೋಗುವ ಜನರು ಕಿಕ್ಕೇರಿಗೂ ಬಂದು ನರಸಿಂಹಸ್ವಾಮಿ ಅವರು ಹುಟ್ಟಿದ ಮನೆ, ಸ್ಫೂರ್ತಿ ಪಡೆದ ಸಿರಿಗೆರೆಯ ಸೌಂದರ್ಯ ಕಣ್ತುಂಬಿಕೊಳ್ಳುವಂತಾಗಬೇಕು’ ಎಂದು ಕಿಕ್ಕೇರಿ ನಾರಾಯಣ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT