ಗುರುವಾರ , ಆಗಸ್ಟ್ 11, 2022
23 °C

ಆಲೆಮನೆಗೆ ಹೊಸ ಆಯಾಮ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Prajavani

ಆಲೆಮಾವ ಕಬ್ಬಿನ ಗಾಣಕ್ಕೆ ಕೋಣ ಕಟ್ಟಿ ರಾಗಬದ್ಧವಾಗಿ ಹೊರಡಿಸುತ್ತಿದ್ದ ಧ್ವನಿಗೆ ಗಾಢ ನಿದ್ದೆಯಲ್ಲಿ ಇದ್ದವರೂ ಎಚ್ಚರಗೊಂಡು ಆಲೆಮನೆಯತ್ತ ಓಡುವಂತೆ ಮಾಡುತ್ತಿತ್ತು. ತಾಜಾಹಾಲು, ಜೋನಿಬೆಲ್ಲ... ಆಹಾ, ಅದರ ಮಜವೇ ಬೇರೆಯಾಗಿತ್ತು. ಆದರೆ, ಗಾಣ ಎಳೆಯುವ ಕೋಣಗಳ ಜಾಗದಲ್ಲಿ ಜಾಣ ಯಂತ್ರ ಬಂದಿದೆ. ಜೋನಿಬೆಲ್ಲವೇನೋ ಇದೆ. ಆದರೆ, ಮೊದಲಿನ ಮಾಧುರ್ಯ ಮಾಯವಾಗಿದೆ...

ಹು ಓ...ಯ್‌......ಯ್‌.... ಅಗಾಅಗಾ..... ಹೋಹೋ.. ಏಯ್‌...ಹುಓ..ಯಿ...

ಮನೆಯ ಗದ್ದೆಬೈಲಿನ  ಒಂದು ಅಂಚಿನಿಂದ ಆಲೆಮಾವನ ಏರುಧ್ವನಿಯೊಂದು ಮಾಗಿಯ ನಸುಕಿನ ಚುಮುಚುಮು ಚಳಿ, ದಟ್ಟನೆಯ ಮಂಜನ್ನು ಸೀಳಿಕೊಂಡು ಕಿವಿ ತಮಟೆಯನ್ನು ಬಡಿದಾಗ ಧುತ್ತೆಂದು ಎಚ್ಚರಾಗಿ ಎದ್ದು ಕೂತು ಬಿಡುತ್ತಿದ್ದೆ. ಮೆತ್ತಿನ (ಮಾಳಿಗೆ) ಮನೆಯ ಕಿಟಕಿಯತ್ತ ಕಣ್ಣು ಹಾಯಿಸಿದರೆ ಅಬ್ಬಾ ಕಗ್ಗತ್ತಲು. ಮನೆಯ ಸುತ್ತಲಿನ ಗಿಡ–ಮರಗಳಿಂದ ಹನಿಸುತ್ತಿದ್ದ ಮಂಜಿನ ಹನಿಗಳ ಪಟ್‌, ಪಟ್‌ ಸದ್ದು ಮಾತ್ರ ಕೇಳುವ ನೀರವ ಕತ್ತಲು. ಮತ್ತೆ ಲಯಬದ್ಧವಾಗಿ ಅಲೆ ಅಲೆಯಾಗಿ ಬರುತ್ತಿದ್ದ ಆಲೆಮಾವನ ಹಾಡು.. ನಡುನಡುವೆ ಏರುದನಿಯ ಜೋರು.

ಓ...ಆಲೆಮಾವ ಕಬ್ಬಿನ ಗಾಣಕ್ಕೆ ಕೋಣನ ಕಟ್ಟಿಯಾಗಿದೆ. ಅಂದ್ರೆ ನಾಲ್ಕು ಗಂಟೆ ಆಗಿದೆ. ಗಾಣ ಎಳೆಯುವ ಕೋಣ ಹೆಜ್ಜೆ ಹಾಕುವ ವೇಗವನ್ನು ತುಸು ತಗ್ಗಿಸಿದರೆ ಆಲೆಮಾವನ ಬೆದರಿಸುವ ದನಿ ಜೋರು ಪಡೆಯುತ್ತಿತ್ತು. ಗಾಣದ ಬಾಯಿಗೆ ಸಿಕ್ಕು ಚಿಲ್ಲಾಗಿ, ನುರಿದು, ರಸ ಕಳೆದುಕೊಂಡ ಕಬ್ಬಿನ ಸಿಪ್ಪೆ ಗಾಣದ ಹಿಂಭಾಗದಲ್ಲಿ ಶೇಖರಣೆಯಾಗುತ್ತಿದ್ದಂತೆ ಅದನ್ನೆತ್ತಿ ಹೊರಗಿಡಲು ಆಲೆಮಾವನೇ ಹೋಗಬೇಕು. ಆ ವೇಳೆ ನೋಡಿಯೇ ಕೋಣಗಳು ಕಳ್‌ಬೀಳೋದು. ನಡಿಗೆಯನ್ನು ನಿಧಾನ ಮಾಡೋದು. ಆಗಲೇ ಆಲೆಮಾವನ ಧ್ವನಿ ಜೋರಾಗೋದು.

ಎಷ್ಟು ಬೇಗ ಎದ್ದು ಕೈಯಲ್ಲಿ ಸೋಸುವ ಜರಡಿ, ದೊಡ್ಡದಾದ ಪಾತ್ರೆ ಹಿಡಿದು ಮನೆಯಿಂದ ಒಂದಷ್ಟು ದೂರ ಇರುವ ಆಲೆಮನೆಗೆ ಹೋಗಿ, ಕಬ್ಬಿನ ಹಾಲು ಹಿಡಿದು ಕುಡಿಯೋದು ಎಂಬ ತವಕ ಹೆಚ್ಚುತ್ತಲೇ ಇರುವ ಸುಸಮಯವದು. ಬೆಳಕು ಮೂಡಲು ಇನ್ನೂ ಎರಡು ತಾಸು ಬೇಕು. ಮಲಗಲು ಮನಸ್ಸೊಲ್ಲದು. ನಿದ್ದೆ ಬಾರದು... ಎರಡು ತಾಸು ಆಲೆಮಾವನ ಹಾಡು, ಕೋಣಗಳ ಕೊರಳಿಗೆ ಕಟ್ಟಿದ ಗಂಟೆಗಳ ನಿನಾದ, ಮಂಜಿನ ಹನಿಗಳ ಪಟಪಟ ಸದ್ದು ಆಲಿಸುತ್ತ ಮಲಗೋದೊಂದೆ ಉಳಿಯೋದು.


ಆಲೆಮನೆಯಲ್ಲಿ ಕೊಪ್ಪರಿಗೆಯಲ್ಲಿ ಬೆಲ್ಲದ ತಯಾರಿ

ಗಂಟೆ ಆರಾಗುತ್ತಲೇ ಎದ್ದು ಫಟಾಫಟ್‌ ಹಲ್ಲುಜ್ಜಿ ತುಸು ಕತ್ತಲು, ಚಳಿ ಇದ್ದರೂ ಲೆಕ್ಕಿಸಲೇ ಆಲೆಮನೆಗೆ ಓಡುವುದೇ  ಓಡುವುದು. ಕಬ್ಬಿನ ರಾಶಿಯಲ್ಲೇ ಒಳ್ಳೆ ಸಿಹಿಯಿರುವ ಒಂದೆರಡು ದಪ್ಪದ ಕಬ್ಬು ಆರಿಸಿ, ಗಾಣಕ್ಕೆ ಕಬ್ಬು ಕೊಡುವವರ ಕೈಗೆ ಕೊಟ್ಟು ಹಾಲು ಹಿಡಿಯಲು ತಲೆಬಾಗಿಸಿ ಕೂರಬೇಕು. ತಲೆತಗ್ಗಿಸದಿದ್ದರೆ ಗಾಣಕ್ಕೆ ಕಟ್ಟಿದ ನೊಗ ತಲೆಗೆ ಬಡಿಯಲಿದೆ. ಹಾಲು ಹಿಡಿದು ಆಲೆಮನೆಯ ಒಲೆ ಕಡೆಗೆ ಬಂದರೆ ಒಲೆಯಲ್ಲಿ ನಿಗಿನಿಗಿ ಉರಿಯುವ ಬೆಂಕಿ ಚಳಿ ಕಾಯಲು ಆಹ್ವಾನಿಸುತ್ತಿತ್ತು. ಲೋಟಕ್ಕೆ ಕಬ್ಬಿನ ಹಾಲು ಸುರಿದು, ಒಲೆ ಹತ್ತಿರ ಬಂದರೆ ಒಲೆ ಮೇಲಿನ ಕೊಪ್ಪರಿಗೆಯಲ್ಲಿ ರಾತ್ರಿ ಹಾಕಿದ ಹಾಲಿನ ಹೆಗ್ಗುದಿಯ ಮೆಲುಕಾಟ. ಅದನ್ನು ನೋಡುತ್ತ ತಣ್ಣನೆಯ ಕಬ್ಬಿನ ಹಾಲು ಕುಡಿಯುತ್ತಿದ್ದರೆ.. ಆಹಾ.. ಎಂಥ ಅನುಭವ. ಹೂಂಮ್‌....ಬೆಲ್ಲದ ಬೇಗುದಿಯಿಂದ ಹೊಮ್ಮುವ ಸುವಾಸನೆಗೆ ಸಾಟಿಯೇ ಇಲ್ಲ.


ಆಲೆಮನೆಯಲ್ಲಿ ಕೋಣ ಕಟ್ಟಿದ ಗಾಣದಿಂದ ಕಬ್ಬಿನ ಹಾಲು ತೆಗೆಯುತ್ತಿರುವುದು

ಇಷ್ಟಾದ ಸ್ವಲ್ಪ ಹೊತ್ತಿಗೆ ಆಲೆಮನೆಯತ್ತ ಬರುವ ಅಜ್ಜ, ಬೆಲ್ಲದ ಹದ ಪರೀಕ್ಷೆಗೆ ನಿಲ್ಲುವರು. ನನ್ನ ಹತ್ತಿರ ಬಟ್ಟಲಲ್ಲಿ ನೀರು ಹಾಕಿಕೊಂಡು ಹಿಡಿದು ನಿಲ್ಲಲು ಹೇಳುವರು. ನಾನು ಖುಷಿಯಿಂದ ಬಟ್ಟಲು ಹಿಡಿದು ನಿಂತರೆ ಬೆಲ್ಲ ಮಗಚುವ ದೊಡ್ಡ ಹುಟ್ಟನ್ನು ಬೆಲ್ಲದೊಳಗೆ ಇಳಿಸಿ, ಎತ್ತಿ, ಹೆಚ್ಚಿನ ಬೆಲ್ಲ ಇಳಿದುಹೋದ ಮೇಲೆ ನಾಲ್ಕೈದು ಹನಿಯಾಗುವಷ್ಟು ಬೆಲ್ಲವನ್ನು ನಾನು ಹಿಡಿದ ಬಟ್ಟಲಿಗೆ ಬಿಡುವರು. ನೀರಿನೊಂದಿಗೆ ಬೆರೆಯದೇ ಒಗ್ಗೂಡಿದರೆ ಬೆಲ್ಲ ಹದಕ್ಕೆ ಬಂತೆಂದೆ ಅರ್ಥ. ಹದ ಬಂದ ಕೂಡಲೆ ಕೊಪ್ಪರಿಗೆ ಇಳಿಸಲು ಏಳು ಮಂದಿ ಬೇಕೇಬೇಕು. ನಾಲ್ಕು ಮಂದಿ ಕೊಪ್ಪರಿಗೆ ಎತ್ತಲು, ಇಬ್ಬರು ಬೆಲ್ಲ ಸೋಸುವ ಪಂಚೆ ಹಿಡಿಯಲು, ಒಬ್ಬರು (ಅಜ್ಜ) ಬೆಲ್ಲವನ್ನು ತುಳುಕಿಸಲು. ಆ ಸಮಯ ಮಾತ್ರ ಆಲೆಮನೆಯಲ್ಲಿ ಗಡಿಬಿಡಿ ಸಮಯವೆಂದೇ ಹೇಳುವುದು.

ಕೊಪ್ಪರಿಗೆ ಇಳಿಸಿದ ಮೇಲೆ ನಮಗೆ ಬಿಸಿಬೆಲ್ಲ ತಿನ್ನುವ ತವಕ. ಒಂದು ಪಾತ್ರೆಯಲ್ಲಿ ನೊರೆನೊರೆ ಜೋನಿ ಬೆಲ್ಲ ತುಂಬಿಕೊಂಡು ಮನೆಗೆ ಕಾಲ್ಕಿತ್ತರೆ  ನಿಲ್ಲುವುದು ಅಡುಗೆ ಮನೆಯೊಳಗೆ. ಬಿಸಿಬಿಸಿ ದೋಸೆಗೆ ಹಚ್ಚಿ ತಿಂದರೆ...ವ್ಹಾರೇ..ವ್ಹಾ.. ಎಂಥ ಸ್ವಾದ. ಇದೇ ಗಡಿಬಿಡಿಯಲ್ಲಿ ಬೆಳಿಗ್ಗೆ ಒಂದಷ್ಟು ಜನರು ಕಬ್ಬಿನ ಹಾಲಿಗಾಗಿ ಬರುವರು. ಕೊಡ, ಐದು ಲೀಟರ್‌ ಕ್ಯಾನ್‌ಗಳನ್ನೇ ಹಿಡಿದು ಬರುವರು. ತಮ್ಮದೇ ಮನೆಯ ಗಾಣ ಎಂಬಂತೆ ಕೊಡಗಟ್ಟಲೆ ಹಾಲಿನೊಂದಿಗೆ ಐದಾರು ಕಬ್ಬುಗಳ ಹೊರೆಕಟ್ಟಿ ಅವರ ಪಾಡಿಗೆ ಹೋಗುವರು.


ಬಾಯಲ್ಲಿ ನೀರೂರಿಸುವ ಕೊಪ್ಪರಿಗೆಯೊಳಗಿನ ಕುದಿ ಬೆಲ್ಲ

ಸಂಜೆ ಮತ್ತೆ ಇದೇ ಹಾಡು. ನಾವು ಶಾಲೆ ಬಿಟ್ಟು ಬಂದವರೇ ಪಾಟಿಚೀಲವನ್ನು ಎಸೆದು, ಓಡುವುದು ಸೀದಾ ಆಲೆಮನೆಗೆ. ಮತ್ತೆ ಕಬ್ಬಿನ ಹಾಲು ಕುಡಿದು, ಬೆಲ್ಲ ತಿಂದು, ಕಬ್ಬು ತಿನ್ನಲು ಶುರು ಮಾಡಿದರೆ ಬರೋಬ್ಬರಿ ಒಂದು ತಾಸಾದರೂ ಬೇಕು. ಆಗಲೇ ಮನಸ್ಸಿಗೆ ಸಮಾಧಾನವಾಗೋದು. ನಮ್ಮ ಮನೆಯಲ್ಲಿ ಆಲೆಮನೆ ಬಂದಾಗ, ಊರಲ್ಲಿ ಢಂಗೂರ ಸಾರಿದ್ದಕ್ಕಿಂತಲೂ ಬಹುಬೇಗ ಸುದ್ದಿಯಾಗೋದು. ‘ಶೇರುಗಾರನ (ಊರಲ್ಲೆಲ್ಲ ನನ್ನ ಅಜ್ಜನನ್ನು ಶೇರುಗಾರ ಎಂದೇ ಕರೆಯೋದು) ಮನೇಲಿ ಆಲೆಮನೆಯಡ...’ ಅನ್ನೋ ಪ್ರಚಾರ ಊರಲೆಲ್ಲ ಹರಡುತ್ತಿತ್ತು. ಅದಕ್ಕೆ ವಾಕಿಂಗ್‌ ನೆಪಮಾಡಿಕೊಂಡು ಗುಂಪುಗುಂಪಾಗಿ ಜನ ಬಂದು ಮನಸೋಇಚ್ಛೆ ಹಾಲು ಕುಡಿದು, ಬೆಲ್ಲ ತಿಂದು ಒಂದೆರಡು ಕಬ್ಬಿನ ಜಲ್ಲೆ ಹಿಡಿದು ಖುಷಿಖುಷಿಯಾಗಿ ಹೋಗುವರು. ಆಲೆಮನೆ ಎಷ್ಟು ದಿನ ನಡೆಯುತ್ತದೆಯೋ ಅಷ್ಟು ದಿನವೂ ನಮಗೆ ಹಬ್ಬದ ಸಡಗರ. ಊರ ಮಂದಿಗೂ.

ಈ ಎಲ್ಲ ಸಂಭ್ರಮ 30–35 ವರ್ಷಗಳ ಹಿಂದಿನದ್ದು. ನನಗಂತೂ ಅದೆಲ್ಲ ಬಿಸಿ ಬೆಲ್ಲದಷ್ಟೇ ಸವಿಯಾದ, ನವಿರಾದ ನೆನಪು.

ಇತ್ತೀಚಿನ ವರ್ಷಗಳಲ್ಲಿ ಆಲೆಮನೆ ತನ್ನ ಮಗ್ಗುಲು ಬದಲಿಸಿದೆ. ಅದರ ಆಯಾಮ ಬದಲಾಗಿದೆ. ಕಬ್ಬಿನ ಬೆಳೆ ಕಡಿಮೆಯಾಗುತ್ತ ಬಂದು ಜೋಡಿ ಕೋಣ ಕಟ್ಟಿ ನಡೆಸುವ ಆಲೆಮನೆ ಮರೆಯಾಗುತ್ತ ಬಂದು, ಕೋಣಗಳ ಜಾಗದಲ್ಲಿ ಯಂತ್ರಗಳು ಬಂದಿವೆ. ಆಲೆಮಾವನ ಲಯಬದ್ಧ ಹಾಡಿರುವಲ್ಲಿ ಕಿವಿಗಡಚಿಕ್ಕುವ ಯಂತ್ರದ ಶಬ್ದ ನುಸುಳಿದೆ.  ದೊಡ್ಡದಾದ ಒಲೆಯಲ್ಲಿ ಉರಿಯಲು ಆಲೆಕುಂಟೆ ಜಾಗದಲ್ಲಿ ಕಬ್ಬಿನ ಸಿಪ್ಪೆ ಬಂದಿದೆ. ಇಷ್ಟೇ ಅಲ್ಲ; ಆಲೆಮನೆಯೊಳಗೂ ವ್ಯಾಪಾರ ನುಸುಳಿದೆ. ಆಲೆಮನೆ ಜೊತೆ ಹಬ್ಬವೆಂಬ ಪದ ಸೇರಿಕೊಂಡಿದೆ. ಮೊದಲೆಲ್ಲ ಆಲೆಮನೆಗೆ ಬಂದು ಉಂಡೂಹೋದ ಕೊಂಡೂ ಹೋದ ಎಂಬ ಧೋರಣೆ, ಧಾರಾಳತನ ಈಗ ಮರೆಯಾಗಿದೆ. ಈಗಿನ ಆಲೆಮನೆ ಹಬ್ಬದಲ್ಲಿ ದುಡ್ಡುಕೊಟ್ಟಿದ್ದಷ್ಟಕ್ಕೆ ತಿಂದು, ಕಟ್ಟಿಕೊಂಡು ಹೋಗಲು ಬೇಕಾದರೆ ಮತ್ತೆ ದುಡ್ಡು ಕೊಟ್ಟು ಹೋಗಿ ಎಂಬಲ್ಲಿಗೆ ಬಂತು ನಿಂತಿದೆ.

ಐದಾರು ವರ್ಷಗಳ ಹಿಂದೆ ಆಲೆಮನೆ ಹಬ್ಬ ನೆಂಟರು, ಸ್ನೇಹಿತರ ಸೇರುವಿಕೆಗೆ ಒಂದು ನೆಪವಾದರೂ ಮಾರನೇ ವರ್ಷದಿಂದಲೇ ವ್ಯಾಪಾರದ ಚುಂಗು ಹಿಡಿದಿದೆ. ಸಂಘ– ಸಂಸ್ಥೆಗಳು ‘ಆಲೆಮನೆ ಹಬ್ಬ’ ಎಂಬ ಆಚರಣೆಯಿಟ್ಟು ಒಬ್ಬರಿಗೆ ಇಂತಿಷ್ಟು ಎಂದು ಹಣ ಸಂಗ್ರಹಿಸಿ, ಸಂಭ್ರಮಿಸಿದೆ. ಕೆಲವು ಸಂಘಟನೆಗಳು ಪರ ಊರಲ್ಲೂ ಆಲೆಮನೆ ಹಬ್ಬ ಆಯೋಜಿಸಿ ಗಮನಸೆಳೆದಿವೆ. ಶಿರಸಿ ತಾಲ್ಲೂಕಿನ ‘ತವರುಮನೆ’ ಹೋಮ್‌ ಸ್ಟೇ ಈ ಆಲೆಮನೆ ಹಬ್ಬದಲ್ಲಿ ಒಂದು ಹೆಜ್ಜೆ ಮುಂದಿಟ್ಟು, ಕಬ್ಬಿನಹಾಲು, ಬಿಸಿ ಜೋನಿ ಬೆಲ್ಲ, ಸಂಜೆ ಸ್ನ್ಯಾಕ್ಸ್‌, ಮಿರ್ಚಿ, ಮಂಡಕ್ಕಿ, ಚಿಪ್ಸ್‌, ಖಾರ, ಬೋಟಿ ಜೊತೆಗೆ ಯಕ್ಷಗಾನ ಭಾಗವತಿಕೆಯ ಸವಿಯನ್ನೂ ಉಣಬಡಿಸಿದೆ. ಇದಕ್ಕೂ ಮಿಗಿಲಾಗಿ ಯಂತ್ರದ ಬದಲು ಗಾಣ ಬಳಸಿ ಮೂಲ ಆಲೆಮನೆಯ ಸಂಭ್ರಮವನ್ನು ಕಟ್ಟಿಕೊಟ್ಟಿದೆ. ಶಿರಸಿಯ ರೋಟರಿ ಸಂಸ್ಥೆಯು ಅಲ್ಲಿನ ವಿದ್ಯಾನಗರದ ರುದ್ರಭೂಮಿ ಅಭಿವೃದ್ಧಿ ಸಹಾಯಾರ್ಥ ರೋಟರಿ ಆಲೆಮನೆ ಉತ್ಸವವನ್ನು ಜ.22ರಿಂದ 26ರವರೆಗೆ ಹಮ್ಮಿಕೊಂಡಿದೆ. ಕಬ್ಬಿನ ಹಾಲಿನಿಂದ ಸಿದ್ಧಪಡಿಸಲಾಗುವ ತಿನಿಸುಗಳು, ವಿವಿಧ ತಂಡಗಳಿಂದ ಮನರಂಜನೆ, ವಿವಿಧ ವಸ್ತುಗಳ ಪ್ರದರ್ಶನ, ಮಾರಾಟವನ್ನು ಆಲೆಮನೆ ಉತ್ಸವದಲ್ಲಿ ಆಯೋಜಿಸಿದೆ.

‘ಆಲೆಮನೆ’ ಹೋಗಿ ‘ಆಲೆಮನೆ ಹಬ್ಬ’, ‘ಆಲೆಮನೆ ಉತ್ಸವ’ ಆಗಿ ಬದಲಾದರೂ ಮೂಲ ‘ಆಲೆಮನೆ’ಯ ಸಂಭ್ರಮ ಮನದಿಂದ ಮರೆಯಾಗದು.


ಸ್ನ್ಯಾಕ್ಸ್‌ ಜೊತೆ ಸಿಹಿಯಾದ ಕಬ್ಬಿನ ಹಾಲು .. ಒಳ್ಳೆ ಕಾಂಬಿನೇಷನ್‌

ಚಿತ್ರಗಳು: ರಾಮ್ ವೈದ್ಯ/ಕೃಷ್ಣಿ ಶಿರೂರ/ರಾಜಾರಾಂ ಹೆಗಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು