ಗುರುವಾರ , ಜೂನ್ 4, 2020
27 °C

ನೋ ಬ್ರೇಕ್‌, ನೋ ಲಾಕ್‌!

ಚಂದ್ರಕಾಂತ ವಡ್ಡು Updated:

ಅಕ್ಷರ ಗಾತ್ರ : | |

Prajavani

ಲಾಕ್‌ಡೌನ್‌ ಕಾಲದಲ್ಲಿ ಸಿಕ್ಕಿದ ಹಳೇ ರಶೀದಿಯೊಂದು ಇಲ್ಲಿ ಲಾಕ್‌ ಮತ್ತು ಬ್ರೇಕಿಲ್ಲದ ಸೈಕಲ್‌ ಕಥೆಯೊಂದನ್ನು ಹೇಳುತ್ತಿದೆ!

ಎಂಬತ್ತರ ದಶಕದಲ್ಲಿ ನನ್ನನ್ನು ಬಳ್ಳಾರಿಯಲ್ಲಿ ನೋಡಿದ ಯಾರೂ ಸದಾ ನನ್ನೊಂದಿಗಿರುತ್ತಿದ್ದ ನೀಲಿ ಬಣ್ಣದ ಬಿಎಸ್ಎ ಸ್ಪೋರ್ಟ್ ಮಾದರಿ ಸೈಕಲ್ಲನ್ನು ಮರೆತಿರಲಾರರು. ವ್ಯಾಸಂಗ, ನಿರುದ್ಯೋಗ, ಅರೆ ಉದ್ಯೋಗ, ಸಾಹಿತ್ಯ, ವರದಿಗಾರಿಕೆ, ಸಿನಿಕತನ... ಹೀಗೆ ಹಲವು ವಿಧಗಳಲ್ಲಿ ಹರಡಿಕೊಂಡಿದ್ದ ನನ್ನ ಆ ಹತ್ತು ವರ್ಷಗಳ ಬದುಕಿಗೆ ಈ ಸೈಕಲ್‌ ಜೊತೆಯಾಗಿತ್ತು.

ಇದನ್ನು ಖರೀದಿಸಿದ ಹೊಸದರಲ್ಲಿ ಹರಿದ ಬನಿಯನ್‌ನಿಂದ ತಿಕ್ಕಿತಿಕ್ಕಿ ದಿನಂಪ್ರತಿ ಒರೆಸುತ್ತಿದ್ದೆ. ವಾರಕ್ಕೊಮ್ಮೆ ನೀರು ಸುರುವಿ ತೊಳೆಯುತ್ತಿದ್ದುದುಂಟು. ಬರುಬರುತ್ತ ಅದರತ್ತ ನನ್ನ ನಿರ್ಲಕ್ಷ್ಯ ಎಷ್ಟಾಯಿತೆಂದರೆ ಕೆಟ್ಟುಹೋದ ಬ್ರೇಕ್, ಮುರಿದುಬಿದ್ದ ಲಾಕ್ ಸರಿಪಡಿಸಲೂ ಮನಸ್ಸು ಮಾಡಲಿಲ್ಲ. ಕೆಲದಿನಗಳ ನಂತರ ಬೆಲ್ ಕೂಡ ಕಳಚಿಬಿತ್ತು. ಇದ್ದೊಂದು ಸೈಡ್ ಸ್ಟ್ಯಾಂಡು ಜೋತಾಡತೊಡಗಿತು. ಟ್ಯೂಬ್ ಪಂಕ್ಚರ್ ಆದಾಗ ನೆಹರೂ ಕಾಲೊನಿಯಲ್ಲಿದ್ದ ರಂಗನ ಅಂಗಡಿಗೆ ದಬ್ಬಿಕೊಂಡು ಹೋಗಿ ತಿದ್ದಿಸುವುದೇ ನಾನು ಆ ಅಮಾಯಕ ಸೈಕಲ್‌ಗೆ ಮಾಡುವ ಮಹಾದುಪಕಾರ ಎಂಬ ಧೋರಣೆ ನನ್ನದಾಗಿತ್ತು. ಒಬ್ಬರನ್ನು ಹೊತ್ತು ಸಾಗಲೇ ಏಗುತ್ತಿದ್ದ ಆ ಪುಟ್ಟ ಸೈಕಲ್ ಮೇಲೆ ಇನ್ನೊಬ್ಬರನ್ನು ಕುಳ್ಳಿರಿಸಿಕೊಂಡು ಸಾಗುತ್ತಿದ್ದ ನನ್ನ ನಿರ್ದಯವನ್ನೂ ಅದ್ಯಾವ ಕಾರಣಕ್ಕೋ ಅದು ಸಹಿಸಿಕೊಂಡಿತ್ತು. ಎಷ್ಟು ಒತ್ತಿದರೂ ಬ್ರೇಕ್ ಹಿಡಿಯುತ್ತಿರಲಿಲ್ಲ. ಆದರೆ, ಗೂಡ್ಸ್ ರೈಲು ನಿಲ್ಲುವಾಗ ಉಂಟಾಗುವಂತಹ ಕಿರ್ ರ್ ರ್... ಶಬ್ದ ಜೋರಾಗಿ ಹೊರಡುತ್ತಿತ್ತು. ಈ ಶಬ್ದ ಸುತ್ತಲಿನ ಕೇಳುಗರಿಗೆ ಅತೀವ ಕಿರಿಕಿರಿ ಉಂಟು ಮಾಡಿದರೂ ನನ್ನಿಂದ ತಪ್ಪಿಸಿಕೊಳ್ಳಬಯಸುವ ಕೆಲವು ಗೆಳೆಯರಿಗೆ ತುಂಬಾ ಖುಷಿಯ ವಿಷಯವಾಗಿತ್ತು. ಅವರಿಗೆಲ್ಲಾ ಈ ಬ್ರೇಕ್ ಶಬ್ದ ನನ್ನ ಬರುವಿಕೆಯ ಸುಳಿವು, ಎಚ್ಚರಿಕೆ ನೀಡುವ ಸೈರನ್ ಆಗಿ ಕೇಳಿಸಿ ಸ್ವರಕ್ಷಣೆಯ ವ್ಯೂಹ ರಚಿಸಿಕೊಳ್ಳುತ್ತಿದ್ದರು. ನಾನು ಈ ಮರ್ಮ ಅರಿಯದಷ್ಟು ಮುಗ್ಧನಾಗಿರಲಿಲ್ಲ; ಆದಷ್ಟೂ ಬ್ರೇಕ್ ಒತ್ತದೇ ಎರಡೂ ಕಾಲುಗಳನ್ನು ನೆಲಕ್ಕೆ ಊರುವ ಮೂಲಕ ಚಪ್ಪಲಿ ಸವೆಸಿ ಸೈಕಲ್‌ನ ವೇಗ ನಿಯಂತ್ರಿಸಿ, ನಿಲ್ಲಿಸುತ್ತಿದ್ದೆ.  

ಹೀಗೆ ಬ್ರೇಕ್ ರಹಿತ ಸೈಕಲ್‌ ನನಗೆ ಅಷ್ಟಿಷ್ಟು ಅಸಂತೋಷಕ್ಕೆ ಕಾರಣವಾದರೂ ಲಾಕ್ ಇಲ್ಲದಿರುವುದು ಮಾತ್ರ ಎಂದೂ ಸಮಸ್ಯೆಯಾಗಿ ಕಾಡಲಿಲ್ಲ. ನನ್ನ ಸೈಕಲ್‌ ನಮ್ಮ ಮನೆಯಲ್ಲಿ ಇದ್ದುದಕ್ಕಿಂತ ಪ್ರತಿದಿನ ಊರಿನ ಹತ್ತಾರು ಕಡೆ ತಳ ಊರಿದ್ದೇ ಹೆಚ್ಚು. ಅದೂ ಲಾಕ್ ಇಲ್ಲದೇ! ಓಪಿಡಿ ವೀರೇಶನ ಅಂಗಡಿ, ಶಾಂತಾರಾಮನ ಚಾ ದುಕಾನ್, ರಮೇಶನ ಬುಕ್‌ಸ್ಟಾಲ್ ಹಾಗೂ ಸಾರ್ವಜನಿಕ ಗ್ರಂಥಾಲಯದ ಬಳಿ ನನ್ನ ಸೈಕಲ್ ನಿಲ್ಲಿಸಿದ ಅವಧಿಗೆ ಗಂಟೆ ಲೆಕ್ಕದಲ್ಲಿ ಪಾರ್ಕಿಂಗ್ ಶುಲ್ಕ ಲೆಕ್ಕ ಹಾಕಿದ್ದರೆ ನಾನು ಆ ಸೈಕಲ್ಲನ್ನು ಸಾವಿರ ಸಲ ಮಾರಿ ಹಣ ಜೋಡಿಸಿದ್ದರೂ ತೀರುತ್ತಿರಲಿಲ್ಲ.

ನನ್ನನ್ನು ಹುಡುಕುವವರು ಮೊದಲು ರಾಯಲ್ ವೃತ್ತದ ಬಳಿಯ ಆರ್.ಟಿ.ಎಚ್. ಬಳಿ ಬರುತ್ತಿದ್ದರು. ಆ ಹೋಟೆಲ್ ಆವರಣದಲ್ಲಿ ನಾನಿರಬೇಕು, ಇಲ್ಲವೇ ಲಾಕ್ ಇಲ್ಲದ ನನ್ನ ಸೈಕಲ್‌. ಅನೇಕ ಸಂದರ್ಭಗಳಲ್ಲಿ ನಾನು ಬೇರೆ ಊರಿಗೆ ಹೋದರೂ ನನ್ನ ಸೈಕಲ್‌ ಸುರಕ್ಷಿತವಾಗಿ ಅಲ್ಲೇ ಕಾಯುತ್ತಿತ್ತು. ಅನೇಕರು ನನಗೆ ತಲುಪಿಸಬೇಕಾದ ಸಂದೇಶಗಳ ಚೀಟಿಗಳನ್ನು ಸೈಕಲ್‌ನ ಕ್ಯಾರಿಯರ್ ಬಳಿ ಸಿಕ್ಕಿಸಿ ಹೋಗಿರುತ್ತಿದ್ದರು.

ಮಟಮಟ ಬಿಸಿಲಲ್ಲಿ ಗಾಂಧಿನಗರದ ಮನೆಯಿಂದ ನನ್ನ ಸೈಕಲ್ ಸವಾರಿ ಹೊರಡುತ್ತಿತ್ತು. ಮೊದಲಿಗೆ ಬದರಿನಾರಾಯಣ ದೇವಸ್ಥಾನ ಓಣಿಯ ಅಣ್ಣಾರಾವ್ ಕಟ್ಟಡದಲ್ಲಿದ್ದ ಚಂದ್ರಮೌಳಿ, ಬಿಪಿನ್, ರಾಜೇಂದ್ರ, ಪ್ರಕಾಶ, ದೇಸಾಯಿ ಅವರ ರೂಮುಗಳ ಕದ ತಟ್ಟುತ್ತಿದ್ದೆ. ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕರೆ ಸಂಜೆಯವರೆಗೆ ಅಲ್ಲಿಯೇ ಠಿಕಾಣಿ; ಇಸ್ಪೀಟು, ಜೊತೆ ಜೊತೆಗೆ ಹರಟೆ, ಕೇಕೆ, ರಾತ್ರಿ ಗೆದ್ದವರು ಕೊಡಿಸುವ ಊಟ. ಮೊಬೈಲ್‌ಗಳಿಲ್ಲದ ಆ ಕಾಲದಲ್ಲೂ ಅದ್ಹೇಗೋ ಹಲವಾರು ಸಮಾನಾಸಕ್ತ ಗೆಳೆಯರನ್ನು ಒಂದೆಡೆ ಸೇರಿಸುವ ಕಲೆಯಲ್ಲಿ ನಾನು ನಿಷ್ಣಾತ. ಇದರ ಸಂಪೂರ್ಣ ಕ್ರೆಡಿಟ್ ಸಲ್ಲುವುದು ನನ್ನ ಶ್ರಮಿಕ ಸೈಕಲ್‌ಗೆ. ವಿವಿಧ ಆಸಕ್ತಿಯ ಗುಂಪುಗಳ ಹಲವಾರು ವಿಷಯಗಳಲ್ಲಿ ನನಗೆ ಸಮಾನಾಸಕ್ತಿ ಇದ್ದುದರಿಂದ ಗೆಳೆಯರ ಬಳಗ ಬಹಳ ದೊಡ್ಡದಿತ್ತು.

ಏಪ್ರಿಲ್ -ಮೇ ತಿಂಗಳ ರಣಬಿಸಿಲಿನಲ್ಲಿ ನಾನು ಸೈಕಲ್ ಏರಿ ಮನೆ ಬಿಟ್ಟರೆ, ದುರ್ಗಮ್ಮನ ಗುಡಿ ಬಳಿಯ ಅಂಡರ್ ಬ್ರಿಡ್ಜ್ ಇಳಿದತ್ತಿ ರಾಯಲ್ ವೃತ್ತ ತಲುಪುವಷ್ಟರಲ್ಲಿ ನೆತ್ತಿ ಸಿಡಿಸುವ ಬಿಸಿಲು ಮತ್ತು ನವರಂಧ್ರಗಳಿಂದ ಒಸರುವ ಬೆವರಿನಿಂದಾಗಿ ಹೊರಟಿದ್ದೆಲ್ಲಿಗೆ ಎಂಬುದೇ ಮರೆತು ಹೋಗುತ್ತಿತ್ತು. ಎದುರಿಗೆ ಗುಳುಂ ಎಂದು ನುಂಗಲು ಬಾಯ್ದೆರೆದು ನಿಂತ ಮೂರು ದಾರಿಗಳು. ಅನಂತರಪುರ ರಸ್ತೆ ಕಡೆ ತಿರುಗಿದರೆ ಪಂಚಣ್ಣನ ಹೀರೊ ಹೊಂಡಾ ಶೋ ರೂಂ; ಅಲ್ಲಿಗೆ ಹೋದರೆ ತನ್ನ ಕೆಲಸದಲ್ಲಿ ಮುಳುಗಿರುತ್ತಿದ್ದ ಮೌಳಿಗೆ ತಲೆನೋವು.

ಎರಡನೇ ಆಯ್ಕೆ ಬೆಂಗಳೂರು ರಸ್ತೆ; ನಟರಾಜ ಚಿತ್ರಮಂದಿರ ನಂತರ ನೆಲಮಹಡಿಯಲ್ಲಿ ಕೂತು ತಣ್ಣನೆಯ ಬೀರು ಹೀರಬಹುದು. ಆದರೆ, ಬೊಕ್ಕಣದಲ್ಲಿ ರೊಕ್ಕ ಇರಬೇಕಲ್ಲ? ಇನ್ನೊಂದು ಹಾದಿಯೇ ಸ್ಟೇಷನ್ ರೋಡ್; ಅಲ್ಲಿದ್ದದ್ದು ಶಾಂತಾರಾಮನ ಟೀ ಕಂ ಪಾನ್ ಅಂಗಡಿ. ಅಂತಿಮವಾಗಿ ಅತ್ತ ಕಡೆಯೇ ಹೊರಡುತ್ತೇನೆ. ಈ ಆಯ್ಕೆ ನನ್ನದೋ, ಸೈಕಲ್‌ನದೋ ಎಂದು ನಿರ್ಧರಿಸುವುದು ಕಷ್ಟ. ಅಂಗಡಿಯಲ್ಲಿ ಇಳಿಬಿಟ್ಟ ಪತ್ರಿಕೆಗಳನ್ನು ಮಾಲೀಕರಿಗೆ ನೋವಾಗದಂತೆ ಒಂದೊಂದಾಗಿ ನಯವಾಗಿ ಎಳೆದುಕೊಂಡು ಓದಿ, ಅಷ್ಟೇ ನಾಜೂಕಾಗಿ ಅದರ ಜಾಗಕ್ಕೆ ಸೇರಿಸುವುದು ನನಗೆ ಕರಗತವಾಗಿತ್ತು.

ಆಗ ರಾತ್ರಿ ಹೊತ್ತು ಸೈಕಲ್‌ಗೆ ಲೈಟ್ ಕಡ್ಡಾಯವಾಗಿತ್ತು. ಬೆಲ್ ಇಲ್ಲದಿದ್ದರೆ, ಡಬ್ಬಲ್ ರೈಡಿಂಗ್ ಹೊಡೆದರೆ ಪೊಲೀಸರು ಹಿಡಿದು ದಂಡ ಹಾಕುತ್ತಿದ್ದರು. ಅಲ್ಲದೆ ನಗರಸಭೆಗೆ ಶುಲ್ಕ ಪಾವತಿಸಿ ಸೈಕಲ್ ಲೈಸೆನ್ಸ್ ಪಡೆಯಬೇಕಿತ್ತು. ನಾನು ಲೈಸೆನ್ಸ್ ಪಡೆದಿದ್ದೆ. ಆದರೆ, ಲೈಸೆನ್ಸ್ ಬಿಲ್ಲೆಯನ್ನು ಸೈಕಲ್‌ನ ಹ್ಯಾಂಡಲ್ ಮಧ್ಯದಲ್ಲಿ ಫಿಕ್ಸ್ ಮಾಡದೆ ಮನೆಯಲ್ಲಿ ಬಿಟ್ಟಿದ್ದೆ. ಒಂದು ದಿನ ನಗರಸಭೆಯವರು ನನ್ನ ಸೈಕಲ್‌ ಅನ್ನು ಹಿಡಿದೇಬಿಟ್ಟರು. ಲೈಸೆನ್ಸ್ ಮನೆಯಲ್ಲಿದೆ, ಈಗಲೇ ತಂದು ತೋರಿಸುವೆ ಎಂದು ಪರಿಪರಿಯಾಗಿ ಬೇಡಿಕೊಂಡರೂ ಕೇಳದಷ್ಟು ಕರ್ತವ್ಯನಿಷ್ಠೆ ಅವರದಾಗಿತ್ತು. ಸೈಕಲ್ ಸೀಜ್ ಮಾಡಿ ದಂಡಕಟ್ಟಲು ಒತ್ತಾಯಿಸಿದರು. ನಾನೂ ಎದುರುಬಿದ್ದೆ.

‘ನಾನು ಲೈಸೆನ್ಸ್ ಹೊಂದಿದ್ದರೂ ನಗರಸಭೆ ಸಿಬ್ಬಂದಿ ಕಾನೂನುಬಾಹಿರವಾಗಿ, ದಬ್ಬಾಳಿಕೆಯಿಂದ ನನ್ನ ಸೈಕಲ್ ಕಸಿದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮಕೈಗೊಂಡು ನನ್ನ ಸೈಕಲ್ ಬಿಡಿಸಿಕೊಡಿ’ ಎಂದು ದೂರು ಬರೆದುಕೊಂಡು ಶಾಸ್ತ್ರೀನಗರ ವೃತ್ತದಲ್ಲಿರುವ ಎಸ್.ಪಿ. ಬಂಗಲೆಗೆ ಹೋಗಿ ಸುಭಾಸ್ ಭರಣಿ ಅವರನ್ನು ಭೇಟಿಯಾದೆ. ತಕ್ಷಣ ಸ್ಪಂದಿಸಿದ ಅವರು ನನ್ನನ್ನು ಪಿ.ಎಸ್.ಐ. ಜೊತೆಗೆ ಕಳುಹಿಸಿ ಸೈಕಲ್ ಬಿಡಿಸಿಕೊಟ್ಟರು. ಬಹುಶಃ ಐ.ಪಿ.ಎಸ್ ಹಂತದ ಅಧಿಕಾರಿಯೊಬ್ಬರು ತಮ್ಮ ವೃತ್ತಿಬದುಕಿನಲ್ಲಿ ಸ್ವತಃ ಪರಿಹರಿಸಬೇಕಾಗಿಬಂದ ಅತ್ಯಂತ ನಿಕೃಷ್ಟ ಪ್ರಕರಣ ಇದಾಗಿರಬೇಕು!

(ಕೊರೊನಾ ಕಾರಣಕ್ಕೆ ಮನೆ ಸೇರಿ ಹಳೆಯ ಕಡತಗಳನ್ನು ಪರಿಶೀಲಿಸುವಾಗ ತೇಲಿಬಂದ ಈ ಸೈಕಲ್ ಖರೀಸಿದ ದಾಖಲೆಯೊಂದು ನಿಮ್ಮನ್ನು ಇಷ್ಟೊಂದು ಗೋಳು ಹೊಯ್ದುಕೊಳ್ಳಲು ಕಾರಣವಾಯ್ತು, ಕ್ಷಮಿಸಿ! ಅಂದಹಾಗೆ ನಾನು ಆ ಸೈಕಲ್ ಖರೀದಿದ್ದು ದಿನಾಂಕ 02.02.1983ರಂದು. ಬಳ್ಳಾರಿಯ ಎಸ್.ಕೆ. ಬ್ರದರ್ಸ್ ಸೈಕಲ್ ಅಂಗಡಿಯಲ್ಲಿ. ಬೆಲೆ: ₹ 599. ಮೌಲ್ಯ: ಕಟ್ಟಲಾಗದು)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.