ಶುಕ್ರವಾರ, ಮೇ 29, 2020
27 °C
ಭಾರತೀಯ ಸಂಜ್ಞೆ ಭಾಷೆಯಲ್ಲಿ ‘ಸಿ’ ಹಂತ ಪೂರ್ಣಗೊಳಿಸಿದ ಮೊದಲ ವ್ಯಕ್ತಿ ರಾಜಶೇಖರ್

ಮೂಕಹಕ್ಕಿಯ ಸಾಧನೆಯ ಗಾನ

ಎಚ್‌. ಅನಿತಾ Updated:

ಅಕ್ಷರ ಗಾತ್ರ : | |

Prajavani

ರಾಜಶೇಖರ್ ಸಾಧನೆ ಬಗ್ಗೆ ಮಾಹಿತಿ ತಿಳಿದ ಮೇಲೆ ಅವರನ್ನು ಮಾತನಾಡಿಸಬೇಕೆಂದೇ, ಅವರು ಪಾಠ ಮಾಡುತ್ತಿದ್ದ ಶಾಲೆಗೆ ಹೋದೆ. ‘ಮಾತು ಬಾರದ’ದವರಿಂದ ಮಾಹಿತಿ ಪಡೆಯುವುದು ಹೇಗೆ ಎಂಬ ಯೋಚನೆಯೊಂದಿಗೆ ಹೆಜ್ಜೆ ಹಾಕುತ್ತಿದ್ದ ನನಗೆ ಶಾಲಾ ಕೊಠಡಿಯಲ್ಲಿ ಅವರು ಎದುರಾದರು. ಅವರ ಜತೆ ಅಂಗವಿಕಲ ಶಿಕ್ಷಕಿ ಸಾವಿತ್ರಾ ಕೂಡ ಇದ್ದರು. ನಾವೆಲ್ಲ ಒಂದೆಡೆ ಕುಳಿತೆವು. ನಾನು ಮಾತು ಆರಂಭಿಸಿದೆ. ರಾಜಶೇಖರ್‌ ಅವರು ‘ಬೆರಳುಗಳಲ್ಲೇ’ ಸಂಜ್ಞೆ ಮಾಡುತ್ತಾ ನನ್ನ ಮಾತುಗಳಿಗೆ ಪ್ರತಿಕ್ರಿಯಿಸಿದರು. ಆ ಸಂಜ್ಞೆ ಭಾಷೆ ಅರ್ಥವಾಗದಿದ್ದಾಗ, ಸಾವಿತ್ರಾ ಅವರ ಕಡೆ ನೋಡಿದೆ. ಅವರು ಬೆರಳುಗಳ ನಡುವೆ ಮೂಡುತ್ತಿದ್ದ ‘ಭಾಷೆ’ಯನ್ನು ನನಗೆ ಅರ್ಥ ಮಾಡಿಸುತ್ತಾ ಹೊರಟರು.

ದಾವಣಗೆರೆ ನಗರದ ಬಸವನಾಳ ಗ್ರಾಮದ ಬಿ.ಕೆ.ಪರಮೇಶ್ವರಪ್ಪ ಮತ್ತು ಗಿರಿಜಮ್ಮ ಪುತ್ರ ರಾಜಶೇಖರ್. ಈ ದಂಪತಿಗೆ ಹತ್ತು ಮಕ್ಕಳು. ಅವರಲ್ಲಿ ಇವರೊಬ್ಬರಿಗೆ ಮಾತ್ರ ವಾಕ್‌ ಮತ್ತು ಶ್ರವಣದೋಷವಿತ್ತು. ಈ ಸಮಸ್ಯೆ ಇದೆ ಎನ್ನುವ ಕಾರಣಕ್ಕೆ ಬಾಲ್ಯದಲ್ಲಿ ರಾಜಶೇಖರ್‌ ಅವರನ್ನು ಪೋಷಕರು ಹೊರಗೆ ಬಿಡುತ್ತಿರಲಿಲ್ಲ. ಮಗ ಹೀಗಾದ ಎಂಬ ನೋವು ಒಂದು ಕಡೆ, ಇನ್ನೊಂದು ಕಡೆ  ಜನರಿಂದ ಮೂಗ, ಕಿವುಡ ಎಂದೆಲ್ಲ ಮೂದಲಿಕೆ ಕೇಳಬೇಕಾದ ಪರಿಸ್ಥಿತಿ. ‘ಇವೆಲ್ಲದರ ನಡುವೆಯೂ, ತಾಯಿ ನನ್ನನ್ನು ಅಂಗನವಾಡಿಗೆ ಸೇರಿಸಿದ್ದರು. ಹೆಚ್ಚಿನ ವಿದ್ಯಾಭ್ಯಾಸಕ್ಕೂ ಪ್ರೋತ್ಸಾಹಿಸಿದರು’ ಎಂದು ಪ್ರಾಥಮಿಕ ಶಿಕ್ಷಣದ ಆರಂಭವನ್ನು ನೆನಪಿಸಿಕೊಂಡರು ರಾಜಶೇಖರ್‌. ಈ ವೇಳೆ ಶಿಕ್ಷಕಿಯೊಬ್ಬರು ಅಂಗವಿಕಲ ಮಗುವಿಗೆ ಸಿಗಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಟ್ಟಿದ್ದನ್ನು ಅವರು ಉಲ್ಲೇಖಿಸಲು ಮರೆಯಲಿಲ್ಲ. 

ಅಂಗನವಾಡಿ ನಂತರ ರಾಜಶೇಖರ್‌ ಪ್ರಾಥಮಿಕ ಶಾಲೆಯಿಂದ 10ನೇ ತರಗತಿವರೆಗೆ ದಾವಣಗೆರೆಯ ಶ್ರೀಮೌನೇಶ್ವರಿ ವಾಕ್‌ ಮತ್ತು ಶ್ರವಣ ದೋಷ ಮಕ್ಕಳ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ನಂತರ ಮೈಸೂರಿನ ಜೆಎಸ್‌ಎಸ್‌ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್‌ ಅಂಡ್‌ ಫಿಟ್ಟರ್‌ ವಿಷಯದಲ್ಲಿ ಡಿಪ್ಲೊಮಾ ಇನ್‌ ಐಟಿಐ ಪೂರ್ಣಗೊಳಿಸಿದರು.

ವಿದ್ಯಾಭ್ಯಾಸ ಮುಗಿಸಿ ಊರಿಗೆ ಬಂದ ರಾಜಶೇಖರ್‌ ಅವರ ಭವಿಷ್ಯದ ಬೆಳವಣಿಗೆಗೆ ನೆರವಾಗಿದ್ದು ಬೆಂಗಳೂರಿನ ಅಸೋಸಿಯೇಷನ್‌ ಆಫ್‌ ಪೀಪಲ್‌ ವಿತ್‌ ಡಿಸೆಬಿಲಿಟಿ ಸಂಸ್ಥೆ (ಎಪಿಡಿ). ಪ್ರತಿ ಅಂಗವಿಕಲನೂ ಸಮಾಜದ ಮುಖ್ಯವಾಹಿನಿಗೆ ಸೇರಬೇಕು. ಅವರು ಎಲ್ಲರಂತೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು. ಅಂಥವರಿಗೆ ನೆರವು ನೀಡುವುದು ಈ ಸಂಸ್ಥೆಯ ಗುರಿ. ರಾಜಶೇಖರ್, ಈ ಸಂಸ್ಥೆ ಆಯೋಜಿಸುತ್ತಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಗೆಳೆಯ ಮಂಜು ಜತೆ  ಪಾಲ್ಗೊಳ್ಳುತ್ತಿದ್ದರು. ಇವರ ಆಸಕ್ತಿ ಗಮನಿಸಿದ ಸಂಸ್ಥೆಯ ಶಿವಾ ಹಿರೇಮಠ ಅವರು ರಾಜಶೇಖರ್‌ ಅವರನ್ನು ಸಂಸ್ಥೆಗೆ ಸೇರಿಸಿಕೊಂಡರು.

ಮುಂದೆ ಇದೇ ಸಂಸ್ಥೆ ವಾಕ್‌ ಮತ್ತು ಶ್ರವಣ ದೋಷವಿರುವವರಿಗೆ ಅನುಕೂಲವಾಗುವಂತಹ ‘ಸಂಜ್ಞೆ ಭಾಷೆ’ ಕಲಿಯಲು ರಾಜಶೇಖರರನ್ನು ಮಧ್ಯಪ್ರದೇಶಕ್ಕೆ ಕಳುಹಿಸಿತು. ಕಲಿಕೆಯ ಜತೆಗೆ ವೇತನವನ್ನೂ ನೀಡಿ ಪ್ರೋತ್ಸಾಹಿಸಿತು. ಎರಡೂವರೆ ವರ್ಷಗಳ ಕಾಲ ಭಾರತೀಯ ಸಂಜ್ಞೆ ಭಾಷೆ ಕಲಿತ ರಾಜಶೇಖರ್, ಅದರಲ್ಲಿ ‘ಎ’, ‘ಬಿ’ ಮತ್ತು ‘ಸಿ’ ಹಂತವನ್ನು ಪೂರ್ಣಗೊಳಿಸಿದರು. ಈ ಮೂಲಕ ‘ಮಾತು ಬಾರದಿರುವುದು ಸಾಧನೆಗೆ ಅಡ್ಡಿಯಾಗದು’ ಎಂಬುದನ್ನು ನಿರೂಪಿಸಿದರು.

ಸಂಜ್ಞೆ ಭಾಷೆ ಕಲಿತ ಸಾಧನೆಯೊಂದಿಗೆ ದಾವಣಗೆರೆಗೆ ವಾಪಸಾದ ಅವರು, ಜಿಲ್ಲೆಯಲ್ಲಿ ವಾಕ್‌ ಮತ್ತು ಶ್ರವಣ ದೋಷವಿರುವ ಮಕ್ಕಳಿಗೆ ಅದೇ ಸಂಜ್ಞೆ ಭಾಷೆಯನ್ನು ಹೇಳಿಕೊಡುತ್ತಿದ್ದಾರೆ. ಅಷ್ಟೇ ಅಲ್ಲ, ನಗರದ  15 ಶಾಲೆಗಳಲ್ಲಿ ಅಂಗವಿಕಲ ಮಕ್ಕಳಿಗಾಗಿ ಎಪಿಡಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿಯಾಗಿ ನಡೆಸುತ್ತಿರುವ ಮಾದರಿ ಸಮನ್ವಯ ಶಾಲೆಗಳಲ್ಲಿ (2015ರಿಂದ) ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಾಕ್‌ ಮತ್ತು ಶ್ರವಣ ದೋಷವಿರುವ ಮಕ್ಕಳ ಜತೆಗೆ ಸಾಮಾನ್ಯ ಮಕ್ಕಳು ಹಾಗೂ ಶಿಕ್ಷಕರಿಗೆ, ಸರ್ಕಾರದ ವಿವಿಧ ಇಲಾಖೆಗಳ ಸಿಬ್ಬಂದಿಗೆ, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರಿಗೆ ಸಂಜ್ಞೆ ಭಾಷೆ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿ ರೂಪುಗೊಂಡಿದ್ದಾರೆ.

‘ವಾಕ್‌ ಮತ್ತು ಶ್ರವಣ ದೋಷವಿರುವ ಮಕ್ಕಳು ಉತ್ತಮ ಸಂವಹನ ನಡೆಸುವಂತಾಗಬೇಕು. ಜತೆಗೆ, ಸಾಮಾನ್ಯರಿಗೂ ಈ ಸಂಜ್ಞೆ ಭಾಷೆಯನ್ನು ಕಲಿಸಬೇಕೆನ್ನುವುದು ನನ್ನ ಗುರಿ’ ಎನ್ನುತ್ತಾರೆ ರಾಜಶೇಖರ್‌. ‘ಸದ್ಯಕ್ಕೆ ಶ್ರವಣ ದೋಷವಿರುವ ಮಕ್ಕಳಿಗೆ ಮಾತನ್ನಷ್ಟೇ ಕಲಿಸುತ್ತಾರೆ. ಇದರ ಜತೆಗೆ ಸಂಜ್ಞೆ ಭಾಷೆ ಕಲಿಸುವುದೂ ಅತ್ಯಗತ್ಯ. ಈ ಭಾಷೆಯಿಂದ ಎಲ್ಲವನ್ನೂ ಸುಲಭವಾಗಿ ಅರಿಯಲು ಸಾಧ್ಯವಾಗುತ್ತದೆ’ ಎನ್ನುವುದು ಅವರ ಅಭಿಪ್ರಾಯ.

ವಾಕ್‌ಶ್ರವಣ ದೋಷವಿರುವ ಮಕ್ಕಳು, ಸಾಮಾನ್ಯ ಮಕ್ಕಳ ಜತೆ ಕಲಿಯಲು ಅವಕಾಶವಿರಬೇಕು. ಇಂಥ ಮಕ್ಕಳಿಗೆ ವಾರಕ್ಕೊಮ್ಮೆ ಪ್ರತ್ಯೇಕ ತರಗತಿ ನಡೆಸಬೇಕು. ಡಿ.ಇಡಿ, ಬಿ.ಇಡಿ ಕಲಿಯುವವರಿಗೆ ಸಂಜ್ಞೆ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವ ನೀತಿಯನ್ನು ಸರ್ಕಾರ ಜಾರಿಗೊಳಿಸಬೇಕು. ಇದೆಲ್ಲ ಸಾಧ್ಯವಾದಾಗ ಮಾತ್ರ ವಿಶೇಷ ಮಕ್ಕಳೂ ಎಲ್ಲರಂತೆ ಬದುಕು ರೂಪಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ರಾಜಶೇಖರ್.

ಕುಟುಂಬಕ್ಕೂ ಸಂಜ್ಞೆ ಭಾಷೆ

ರಾಜಶೇಖರ್‌ ತನ್ನಂತೆಯೇ ಸಮಸ್ಯೆ ಹೊಂದಿರುವ ಸಹಪಾಠಿಯನ್ನೇ ಪ್ರೀತಿಸಿ ಮದುವೆಯಾಗಿದ್ದಾರೆ. ಈ ದಂಪತಿಗೆ ಇಬ್ಬರು ಆರೋಗ್ಯವಂತ ಮಕ್ಕಳಿದ್ದಾರೆ. ಆರಂಭದಲ್ಲಿ ಪತ್ನಿ ಮನೆಯಲ್ಲಿದ್ದ ವಿರೋಧಾಭಾಸಗಳು ಕರಗಿವೆ. ಈಗ ಎರಡೂ ಕುಟುಂಬದವರಿಗೆ ರಾಜಶೇಖರ್‌ ಸಂಜ್ಞೆ ಭಾಷೆ ಕಲಿಸಿದ್ದಾರೆ. ಸಿಆರ್‌ಸಿಯಲ್ಲಿ ಶಿಕ್ಷಕನ ಹುದ್ದೆಗೆ ಅರ್ಜಿ ಸಲ್ಲಿಸಿದ್ದು, ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಇದು ಸಾಧ್ಯವಾದರೆ ವಾಕ್‌ ಮತ್ತು ಶ್ರವಣ ದೋಷ ಹೊಂದಿರುವವರ ಪರವಾಗಿ ಸರ್ಕಾರದ ಮಟ್ಟದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬಹುದು ಎಂಬುದು ಅವರ ಹೆಬ್ಬಯಕೆ.

ಸಂಜ್ಞೆ ಭಾಷೆ ಕುರಿತ ಮಾಹಿತಿಗಾಗಿ ಸಂಪರ್ಕ ಸಂಖ್ಯೆ: ರವಿ ಆರ್. ಕಾರ್ಯಕ್ರಮ ವ್ಯವಸ್ಥಾಪಕರು- ಸಮನ್ವಯ ಶಿಕ್ಷಣ, ಎಪಿಡಿ ಬೆಂಗಳೂರು– 9900371241.

ಚಿತ್ರಗಳು: ಸತೀಶ ಬಡಿಗೇರ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು