ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನುವಾರದ ಬಾಡೂಟ

Last Updated 27 ಜೂನ್ 2020, 19:30 IST
ಅಕ್ಷರ ಗಾತ್ರ

ಕುವೆಂಪು ಅವರ ‘ಕಾನೂರು...’ ಮತ್ತು ‘ಮಲೆಗಳಲ್ಲಿ...’ ಎರಡೂ ಕಾದಂಬರಿಗಳು ನನಗೆ ಬಹಳ ಅಚ್ಚುಮೆಚ್ಚು. ಅದರಲ್ಲೂ ‘ಕಾನೂರು ಹೆಗ್ಗಡಿತಿ’ಯಲ್ಲಿ ಬರುವ ಬಾಡುಗಳ್ಳ ಸೋಮನಂತೂ ನನ್ನ ಪ್ರೀತಿ ಪಾತ್ರ. ಅವನ ಪಾತ್ರ ಚಿತ್ರಣ ಓದಿದಾಗೆಲ್ಲಾ ‘ಈತ ಖಂಡಿತಾ ನನ್ನ ಪೂರ್ವಜನ್ಮದ ಯಾರೋ ಆತ್ಮಬಂಧುವೇ ಇರಬೇಕು’ ಎಂದೇ ಅನ್ನಿಸುತ್ತದೆ. ಕುವೆಂಪು ಪ್ರಕಾರ ಆತನಿಗೆ ಮಾಂಸದೆಡೆಗೆ ಇದ್ದದ್ದು ಶುದ್ಧ ಲೋಭ ಮಾತ್ರ. ಆದರೆ, ನನಗೋ ಬಾಡೂಟದ ಕುರಿತು ಲೋಭದ ಜೊತೆಗೆ ಮೋಹ, ಪ್ರೀತಿ, ಆದರ ಎಲ್ಲವೂ ಇದೆ.

ಅದೇನೋ ಸಸ್ಯಾಹಾರವೆಂದರೆ ನನಗೆ ಸ್ವಲ್ಪ ಅಷ್ಟಕಷ್ಟೇ. ಊಟದ ಜೊತೆಗೆ ಒಂದೆರಡು ತುಂಡು ಬಾಡಿದ್ದರೆ ಅದರ ರುಚಿಯೇ ಬೇರೆ. ಇದು ಚಿಕ್ಕಂದಿನಲ್ಲೇ ಆಗಿರುವ ರೂಢಿ. ಅದು ಏನಾಯಿತು ಅಂದ್ರೆ, ನಮ್ಮಮ್ಮ ಮಾಂಸದಡಿಗೆ ಮಾಡುತ್ತಿದ್ದಾಗ ಅವರ ಸಹಾಯಕ್ಕೆ ಅಂತ ಸೇರಿಕೊಂಡು, ಮಾಡುತ್ತಾ ಬೇಗನೆ ಕಲಿತು ಬಿಟ್ಟೆ. ಅಡುಗೆ ಮಾಡುತ್ತಲೇ, ‘ಬೆಂದಿದೆಯ ನೋಡು, ಉಪ್ಪು ಖಾರ ಹಿಡಿದಿದೆಯಾ ನೋಡು’ ಅಂತ ಅಮ್ಮ ತಿನ್ನಲು ಕೊಟ್ಟು ನನಗೂ ಚೆನ್ನಾಗಿ ತಿನ್ನುವ ಅಭ್ಯಾಸವಾಯಿತು. ಕೋಳಿ, ಕುರಿ, ಆಡು ಎಲ್ಲದರ ಮಾಂಸವೂ ನನಗೆ ಪ್ರಿಯವೇ. ಆದರೆ, ಮೀನು ಯಾಕೋ ರುಚಿಸಲಿಲ್ಲ. ಅದೊಂದಿಲ್ಲದಿದ್ದರೆ ಏನಾಯಿತು ಬಿಡಿ, ಉಳಿದವು ಸಾಕಲ್ಲವೇ.

ಬರೀ ಮಾಂಸ ತಿನ್ನುವ ಅಭ್ಯಾಸವಾದರೆ ಸಾಲದು. ಯಾವ ಪ್ರಾಣಿಯ ಯಾವ ಅಂಗ ಹೆಚ್ಚು ರುಚಿಕರ ಮತ್ತು ಅದರ ಅಡುಗೆ ಮಾಡುವ ವಿಭಿನ್ನ ವಿಧಾನಗಳೇನು ಎನ್ನುವುದನ್ನೂ ಕಲಿತಿರಬೇಕು. ನನಗಂತೂ ನಾಟಿ ಕೋಳಿಯ ತಲೆ, ಲಿವರ್, ಗುಂಡುಕಾಯಿ ಅಂದರೆ ಪಂಚಪ್ರಾಣ. ಇನ್ನು ಆಡು, ಕುರಿಗಳ ಬೋಟಿ ಗೊಜ್ಜಿಗಾಗಿ ನಾನು ನನ್ನ ಅರ್ಧ ಸಾಮ್ರಾಜ್ಯವನ್ನೇ ಕೊಟ್ಟು ಬಿಟ್ಟೇನು.

ಅಂದಹಾಗೆ ಆಡು, ಕುರಿಗಳ ತಲೆ, ಕಾಲು, ಮಾಂಸದ ಸಾರು ಮಾಡುವುದಕ್ಕೇ ಒಂದು ವಿಶಿಷ್ಟ ವಿಧಾನವಿದೆ. ರಾತ್ರಿಯ ಹೊತ್ತು ಸಾರಿನ ತಪ್ಪಲೆಯನ್ನು, ಒಂದು ಮಣ್ಣಿನ ಒಲೆಯ ಮೇಲಿಟ್ಟು ಮಾಂಸಕ್ಕೆ ಎಲ್ಲಾ ಹದ ಹಾಕಿ, ಮಸಾಲೆ, ಖಾರಾ ಎಲ್ಲಾ ಹಾಕಿ ಒಗ್ಗರಣೆ ಕೊಡಬೇಕು. ಗಟ್ಟಿಯಾಗಿ ಮುಚ್ಚಿ, ಘಮ ಆರಿ ಹೋಗದಂತೆ ಮುಚ್ಚಳದ ಮೇಲೆ ಒಂದು ಭಾರವಾದ ಪಾತ್ರೆಯೋ, ಸಣ್ಣ ಗುಂಡು ಕಲ್ಲೋ ಇಡಬೇಕು.ಒಲೆಗೆ ಚೆನ್ನಾಗಿ ಸೌದೆ ತುಂಬಿ ಸಣ್ಣದಾಗಿ ಉರಿಯುವಂತೆ ಮಾಡಿ, ರಾತ್ರಿ ಇಡೀ ಬಿಡಬೇಕು. ಬೆಳಿಗ್ಗೆ ಆಗುವಷ್ಟರಲ್ಲಿ ಹದವಾಗಿ ಬೆಂದ ತಲೆ ಕಾಲಿನ ಸಾರಿನ ಜೊತೆ ಅಕ್ಕಿರೊಟ್ಟಿ ಮಾಡಿಕೊಂಡು ತಿಂದು ನೋಡಿ. ಇಡೀ ದಿನ ಕೈ ಮೂಸಿಕೊಂಡೇ ಇರಬಹುದು.

ಅವರೆಕಾಳಿನ ಕಾಲದಲ್ಲಿ ಸೊಗಡವರೆ ತಂದು ಸುಲಿದು, ಕಾಳು ಚಿಲುಕಿಸಿ, ಚಿಲುಕವರೆ ಕಾಳಿನ ಸಾರಿಗೆ ಕೈಮಾ ಉಂಡೆಗಳನ್ನು ಹಾಕಿ ಸಾರು ಮಾಡಿದರೆ ತಿನ್ನಲು ಒಂದು ಕೈ ಸಾಲದು.ಚಿಕ್ಕ ಮಕ್ಕಳಿಗೆ ತರಕಾರಿ, ಸೊಪ್ಪು ತಿನ್ನುವಂತೆ ಮಾಡುವುದು ಎಲ್ಲಾ ತಾಯಂದಿರ ಒಂದು ದೊಡ್ಡ ತಲೆನೋವು. ಅದಕ್ಕೆ ನನ್ನ ಗೆಳತಿ ಒಂದು ಒಳ್ಳೆಯ ಉಪಾಯ ಹೇಳಿಕೊಟ್ಟಿದ್ದಾಳೆ. ಯಾವುದೇ ತರಕಾರಿಯ ಒಗ್ಗರಣೆ ಪಲ್ಯ ಮಾಡಿ ಅದಕ್ಕೆ ಒಂದೆರಡು ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಹುರಿದ್ರೆ ಸಾಕು, ಮಕ್ಕಳು ಕಮಕ್ ಕಿಮಕ್ ಅನ್ನದೆ ಹೊಡೆಯುತ್ತವೆ.

ಈಗ ಎಲ್ಲ ಕಡೆ ಅಗ್ಗವಾಗಿ ಬ್ರಾಯ್ಲರ್‌ ಕೋಳಿಗಳು ಸಿಗುತ್ತವೆ. ಬೇಯಿಸಲೂ ಸುಲಭ. ಯಾರೇ ನೆಂಟರು ಬಂದರೂ ಒಂದು ಗಂಟೆಯಲ್ಲಿ ಬಿರಿಯಾನಿ, ಕಬಾಬ್‌, ಚಿಕನ್ ಗೊಜ್ಜು ಅಂತ ಫಟಾಫಟ್‌ ತಯಾರಿಸಿ ಸತ್ಕರಿಸಿ ಕಳಿಸಿ ಬಿಡಬಹುದು. ಆದರೆ, ನಾವು ಚಿಕ್ಕವರಿದ್ದಾಗ ಕೋಳಿ ಅಂದ್ರೆ ಮನೆಗಳಲ್ಲಿ ಸಾಕುತ್ತಿದ್ದ ನಾಟಿ ಕೋಳಿಗಳೇ. ಇವು ಬೇಯುವುದು ಸ್ವಲ್ಪ ಕಷ್ಟ, ಹಾಗಾಗಿ ಬೇರೆ ವ್ಯಂಜನಗಳಿಗಿಂತ ಸಾರು ಮಾಡುವುದೇ ಸರಿ.

ನಾಟಿಕೋಳಿ ಸಾರಿಗೆ ಹೊಂದಿಕೆಯಾಗುವುದು ಅಂದರೆ ರಾಗಿ ಮುದ್ದೆ ಇಲ್ಲವೇ ಒತ್ತು ಶಾವಿಗೆ. ಊರ ಕಡೆ ನೆಂಟರಿಗೆ, ಹೊಸ ಅಳಿಮಯ್ಯನಿಗೆ ಔತಣ ಅಂದ್ರೆ ಇದೇ ಅಡುಗೆ. ಮನೆಗಳಲ್ಲಿ ಬಾಣಂತಿಯರು ಇದ್ದರೆ ಅವರಿಗೇ ಅಂತ ಚಿಕ್ಕ ಚಿಕ್ಕ ಕೋಳಿಗಳನ್ನು ಕುಯ್ಯದೆ ಬಿಟ್ಟುಕೊಂಡು, ಬಾಣಂತಿಗೆ ಊಟಕ್ಕೆ ಅಂತ ಕೋಳಿಯನ್ನು ಕುಯ್ದು ಅಡುಗೆ ಮಾಡಿ, ಒಂದಿಡೀ ಕೋಳಿ ಮಾಂಸವನ್ನು ಅವಳಿಗೇ ಊಟಕ್ಕೆ ಇಕ್ಕುತ್ತಿದ್ದರು. ಬಾಣಂತಿಗೆ ಚೆನ್ನಾಗಿ ಮೈ ಪುಷ್ಟಿಯಾಗಬೇಕಲ್ಲವೇ? ಹಾಗೆಯೇ, ನನ್ನ ಎರಡೂ ಬಾಣಂತನಗಳಲ್ಲಿ ಸಾಕಷ್ಟು ನಾಟಿ ಕೋಳಿಗಳ ಜೀವಕ್ಕೆ ನಾನು ಎರವಾಗಿದ್ದೇನೆ.

ಬ್ರಾಯ್ಲರ್‌ ಕೋಳಿಯೂ ನನಗೆ ಪ್ರಿಯವೇ. ಇವರು ಮದುವೆಯಾಗಲು ತೆಳ್ಳಗಿರುವ ಹುಡುಗಿಯನ್ನು ಹುಡುಕುತ್ತಿದ್ದರಂತೆ. ತೆಳ್ಳಗಿದ್ದ ನನ್ನನ್ನು ನೋಡಿ ಒಪ್ಪಿ ಮದುವೆಯಾಗಿದ್ದರು. ಆದರೆ, ಮದುವೆಯಾದ ಬಳಿಕ ನನ್ನ ಗಾತ್ರಕ್ಕೂ, ನಾನು ತಿನ್ನುವ ಚಿಕನ್‌ ಪ್ರಮಾಣಕ್ಕೂ ಹೊಂದಿಕೆಯಾಗದೆ ಇವರಿಗೆ ಅಚ್ಚರಿಯೋ ಅಚ್ಚರಿ. ಒಮ್ಮೊಮ್ಮೆ ತಂದದ್ದನ್ನೆಲ್ಲ ಒಂದೇ ಹೊತ್ತಿಗೆ ತಿಂದು ಮುಗಿಸುವ ನನ್ನ ಚಪಲಕ್ಕೆ, ‘ನೋಡೇ, ಎಲ್ಲವನ್ನೂ ನೀನೊಬ್ಬಳೇ ತಿನ್ನು, ನನಗೆ ಒಂದು ಪೀಸ್ ಕೂಡ ಕೊಡಬೇಡ. ಆದ್ರೆ ಸ್ವಲ್ಪ ಸ್ವಲ್ಪವೇ ಬಿಡುವು ಕೊಟ್ಟು ತಿನ್ನು. ಎಲ್ಲಾ ಹೀಗೆ ಒಟ್ಟಿಗೆ ಮುಕ್ಕಿದರೆ ಆರೋಗ್ಯದ ಗತಿಯೇನು?’ ಎಂದು ಎಚ್ಚರ ಹೇಳುವುದುಂಟು. ನಾನು ಕೇಳಿಸಿಕೊಳ್ಳುವುದುಂಟೆ? ತಿನ್ನಬೇಕಾದರೆ ಚೆನ್ನಾಗಿ ಬಿಸಿ ಬಿಸಿ ಇರುವಾಗಲೇ ತಿನ್ಬೇಕಪ್ಪಾ... ತಂಗಳು ತಿಂದರೆ ಏನು ಮಜಾ ಇರುತ್ತೆ ಹೇಳಿ?

ಮದುವೆಯಾದ ಬಳಿಕ ಕೊಡಗಿನಲ್ಲಿ ವಾಸ. ತರತರಹದ ಮಾಂಸದ ಅಡುಗೆಗಳಿಗೆ ಹೆಸರಾಗಿರುವ ಕೊಡಗು ನಿಜಕ್ಕೂ ಸ್ವರ್ಗ ಸಮಾನ. ಆದರೆ, ಕೊಡಗಿನಲ್ಲಿ ಪ್ರಸಿದ್ಧವಾದ ಕಡುಬು, ಪಂದಿ ಕರಿ ನಾನು ತಿನ್ನಲಾರದ ನಿರಾಶೆ ನನಗಿದೆ. ಏಕೆಂದರೆ ನಮ್ಮ ಮನೆದೇವರಿಗೆ ಹಂದಿ ಮಾಂಸ ಆಗಿ ಬರೋದಿಲ್ಲವಂತೆ! ವಿಚಿತ್ರವೆಂದರೆ ಇದು ಮನೆ ಹೆಂಗಸರಿಗೆ ಮಾತ್ರ ಅನ್ವಯ, ಗಂಡಸರಿಗೆ ಏನೂ ‘ಕಟ್ಟು’ ಇಲ್ಲ!

ಸಸ್ಯಾಹಾರದ ಅಡುಗೆಗಳಿಗೆ ಹೋಲಿಸಿದರೆ ಮಾಂಸದೂಟ ತಯಾರಿಸುವುದು ಸುಲಭ. ಹೆಚ್ಚು ಕಡಿಮೆ ಎಲ್ಲ ವಿಧದ ಮಾಂಸಾಹಾರದ ಅಡುಗೆಗಳಿಗೂ ಅದೇ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕರಿಮೆಣಸು, ಹಸಿಮೆಣಸು, ಗರಂಮಸಾಲ, ಮೆಣಸಿನಕಾಯಿ ಪುಡಿ, ಧನಿಯ ಪುಡಿ ಇದ್ದರೆ ಸಾಕು. ಬೇರೆ ಬೇರೆ ಅಡುಗೆಗೆ ಸ್ವಲ್ಪ ಮಸಾಲೆಗಳ ಅನುಪಾತ ಹೆಚ್ಚು ಕಮ್ಮಿ ಮಾಡಿಕೊಳ್ತೀವಿ. ಕೆಲವೊಂದು ಅಡುಗೆಗೆ ಇನ್ನೊಂದೆರಡು ಮೂರು ಬೇರೆ ಏನಾದ್ರೂ ಸಾಮಗ್ರಿ ಬೇಕಾಗಬಹುದು ಅಷ್ಟೇ. ವೈವಿಧ್ಯ ಬೇಕಿದ್ದರೆ ಹುರಿಯುವುದು, ಕರಿಯುವುದು, ಬಾಡಿಸುವುದು, ಬೇಯಿಸುವುದು, ಸುಡುವುದು ಇದ್ದೇ ಇದೆ!

ನೆಂಟರು ಬಂದಾಗ ಸಸ್ಯಾಹಾರದ ಅಡುಗೆ ಮಾಡುವುದು ನನಗಂತೂ ಕಿರಿಕಿರಿಯೇ. ಬರೀ ಅನ್ನ ಸಾರು ಬಡಿಸಿ ಕಳಿಸಲು ಸಾಧ್ಯವೇ? ತರತರಹದ ವ್ಯಂಜನ, ಸಿಹಿ ಎಲ್ಲಾ ಮಾಡಬೇಕು.ಪಾಯಸ, ಪಲ್ಯ, ಹಪ್ಪಳ, ಉಪ್ಪಿನಕಾಯಿ, ಮೊಸರು ಗೊಜ್ಜು, ಕೋಸಂಬರಿ ಹೀಗೆ ಹನುಮಂತನ ಬಾಲದಂತೆ ಪಟ್ಟಿ ಬೆಳೆಯುತ್ತದೆ. ಅದೇ ಬಾಡೂಟವಾದರೆ, ಒಂದು ತುಪ್ಪದನ್ನದ ಜೊತೆಗೆ ಚಿಕನ್ ಗೊಜ್ಜು ಮಾಡಿದರೆ ಮುಗೀತು. ನೆಂಟರು ತೃಪ್ತಿಯಿಂದ ಉಂಡು ಹೋಗುತ್ತಾರೆ.ಮಟನ್ ಸಾರು ಬೇಕಾದರೆ ಜೊತೆಗೆ ರಾಗಿ ಮುದ್ದೆ, ಅನ್ನ ಮಾಡಿದರೆ ಆಯಿತು.

ನನ್ನ ಗಂಡ ಪರಮ ದೈವಭಕ್ತ. ವಾರದ ಏಳು ದಿನಗಳಲ್ಲಿ ಅವರಿಗೆ ನಾಲ್ಕು ದಿನವಾದರೂ ‘ದೇವರ ದಿನ’ಗಳು ಬರುತ್ತವೆ. ಹಾಗಾಗಿ ನನಗಿಷ್ಟ ಇದ್ದರೂ ದಿನವೂ ಮಾಂಸದಡುಗೆ ಮಾಡುವಂತಿಲ್ಲ. ಸೋಮ, ಶುಕ್ರ, ಗುರು ಮತ್ತು ಶನಿವಾರಗಳಂದು ಬೇರೆ ಬೇರೆ ದೇವರ ದಿನಗಳು; ಅವತ್ತು ಮಾಂಸದಡುಗೆ ಇಲ್ಲ. ಬುಧವಾರ ವಾರದ ಮಧ್ಯೆ ಆದ್ದರಿಂದ ಯಾರಿಗೂ ಪುರುಸೊತ್ತಿಲ್ಲ. ಹಾಗಾಗಿ, ನಮ್ಮಲ್ಲಿ ಭಾನುವಾರವೇ ಬಾಡೂಟಕ್ಕೆ ಸೈ. ಕೆಲವು ಪಂಗಡಗಳಲ್ಲಿ ಶ್ರಾವಣ, ಕಾರ್ತಿಕ ಮಾಸಗಳಲ್ಲಿ ನಾನ್‌ವೆಜ್‌ ತಿನ್ನೋದಿಲ್ಲ. ನನ್ನ ಪುಣ್ಯಕ್ಕೆ ನಮ್ಮ ಮನೆಯಲ್ಲಿ ಆ ಪದ್ಧತಿ ಇಲ್ಲ.

ನನ್ನ ಗಂಡನ ಪ್ರಕಾರ, ವಾರದಲ್ಲಿ ನಾಲ್ಕು ದೇವರ ದಿನಗಳು ಇರುವುದು ಒಳ್ಳೆಯದೇ. ‘ಇಲ್ಲದಿದ್ದರೆ, ಇವಳು ತಿನ್ನೋ ಪ್ರಮಾಣಕ್ಕೆ ಭೂಮಿ ಮೇಲೆ ಯಾವ ಪ್ರಾಣಿ, ಪಕ್ಷಿಗಳಿಗೂ ಉಳಿಗಾಲ ಇರುತ್ತಿರಲಿಲ್ಲ. ಸಾಕಷ್ಟು ಪ್ರಾಣಿ ಪ್ರಭೇದಗಳು ಕಣ್ಮರೆಯೇ ಆಗುತ್ತಿದ್ದವು’ ಎಂದು ಮಕ್ಕಳ ಜೊತೆ ಸೇರಿ ನಗೆಯಾಡುತ್ತಾರೆ.

ಸರಿ ಕಣ್ರೀ.. ಮಟನ್‌ ಮಾರ್ಕೆಟ್ಟಿಗೆ ಹೋಗಿರುವ ಇವರು ಬರೋ ಹೊತ್ತಾಯಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT