ಭಾನುವಾರ, ಸೆಪ್ಟೆಂಬರ್ 26, 2021
28 °C

ಚಳಿಯಲ್ಲೊಂದು ಚಾರಣ

ಸರೋಜಾ ಪ್ರಕಾಶ Updated:

ಅಕ್ಷರ ಗಾತ್ರ : | |

prajavani

ಸ್ವೀಡಿಶ್‌ ಕಲಿಕಾ ಕೇಂದ್ರದಲ್ಲಿ ಓದುತ್ತಿರುವಾಗ ನಮ್ಮ ಮಗಳಿಗೆ ಪರಿಚಯವಾದವರು ಸೆಲ್ವಿ ಮತ್ತವಳ ಗಂಡ ನೀಲ್ಸ್. ಅವರಿಬ್ಬರೂ ಪ್ರತಿವಾರ ಚಾರಣ, ಪಿಕ್‌ನಿಕ್ ಅಂತ ಕಾಡಿನಲ್ಲಿ ಓಡಾಡ್ತಾರಂತೆ ಎಂದು ಮಗಳು ಹೇಳಿದಾಗ ಮೊದಲಿಗೆ ನಗು ಬಂದಿತ್ತು. ಈ ಚಳಿ ದೇಶದಲ್ಲಿ, ಅದೂ ಜೋರು ಚಳಿ ಆರಂಭವಾದಂತಿರುವ ಈ ಕಾಲದಲ್ಲಿ, ಅಲ್ಲದೆ ಮೂರು ಮತ್ತೊಂದು ವಿಧದ ಮರಗಳಿರುವಲ್ಲಿ ಅದೇನು ಚಾರಣವೋ ಅಂತ.

ಸ್ಟಾಕ್‌ಹೋಮಿನ ನಮ್ಮ ಮೂರು ತಿಂಗಳ ಪ್ರವಾಸ ಮುಗಿಯುತ್ತಾ ಬಂದಿತ್ತು. ಅಂದು ಶನಿವಾರ ಮುಂಜಾನೆಯೇ ‘ಬರ್ತೀರಾ, ನೆಕ್ಕಾ ರಿಸರ್ವ್ ಫಾರೆಸ್ಟಿಗೆ ಹೋಗೋಣ...’ ಎಂದು ಸೆಲ್ವಿಯ ಸಂದೇಶ ಬಂದಾಗ ಮಕ್ಕಳ ಬದಲು ನಾವು ತಯಾರಾಗಿ ನಿಂತೆವು. ಸ್ವೀಡನ್, ನಾರ್ವೆಯಂತಹ ಚಳಿ ದೇಶಗಳಲ್ಲಿ ಜನರು ಬೆಳಿಗ್ಗೆ ಹೊರಗೆ ಹೊರಡುವ ಮುನ್ನ ಹವಾಮಾನ ವರದಿಯನ್ನು ಗಮನಿಸಿ ಹೊರಡುತ್ತಾರೆ. ಅದಕ್ಕೆ ತಕ್ಕಂತೆ ದಿರಿಸು, ಕೋಟು, ಕೊಡೆಗಳ ಶೃಂಗಾರ. ರಜಾದಿನಗಳಂದು ಬಿಸಿಲು ಬಿದ್ದಿತೆಂದರೆ ಜನರು ತಿಂಡಿ, ಮಕ್ಕಳು, ಜಮಖಾನ ಎಲ್ಲವನ್ನೂ ಕಟ್ಟಿಕೊಂಡು ಪಿಕ್‌ನಿಕ್ ಹೊರಡುತ್ತಾರೆ. ಅಂದೂ ಹೊರಗೆ ಮೈನಸ್ ಎರಡು ಡಿಗ್ರಿ ಸೆಂಟಿಗ್ರೇಡ್. ಹಾಗಾಗಿ ನಾವು ಮೂರು ಪದರ ಬಟ್ಟೆ ಏರಿಸಿ ದಪ್ಪಗಾಗದೆ ವಿಧಿಯೇ ಇರಲಿಲ್ಲ.

ಮಕ್ಕಳ ತಿಂಗಳ ಪಾಸು ಹಿಡಿದು ರೈಲಿನಲ್ಲಿ ಎರಡು, ಮೆಟ್ರೊದಲ್ಲಿ ಎರಡು ಸ್ಟೇಷನ್ ಪಯಣಿಸಿ, ಬರೀ ಅರ್ಧಗಂಟೆಯಲ್ಲಿ ಸ್ಲುಸೆನ್ ಜಂಕ್ಷನ್ ಸೇರಿ ಐದು ನಿಮಿಷವಾಗುವಷ್ಟರಲ್ಲಿ ಸೆಲ್ವಿ ಮತ್ತು ನೀಲ್ಸ್ ಹಾಜರಾದರು. ಉಭಯಕುಶಲೋಪರಿಯೊಂದಿಗೆ ಸಮೀಪದ ಬಸ್‌ಸ್ಟ್ಯಾಂಡ್ ಸೇರಿ ಅಲ್ಲಿ ಹೆಲ್ಲಸ್ ಗಾರ್ಡನ್‌ಗೆ ಬಸ್ ಹತ್ತಿದೆವು. ಇಪ್ಪತ್ತು ನಿಮಿಷಗಳ ಪಯಣದ ನಂತರ ನಮ್ಮಂತೆ ಇನ್ನೂ ಹತ್ತಾರು ಜನ ಬೆನ್ನಿನ ಬ್ಯಾಗಿನೊಂದಿಗೆ ಇಳಿದರು.

ನೆಕ್ಕಾ ರಕ್ಷಿತ ಅರಣ್ಯ ಸ್ವೀಡನ್ ಸರ್ಕಾರಕ್ಕೆ ಸೇರಿದ್ದು. ‘ಇಲ್ಲಿ ಯಾರೂ ಕಾಡಿಗೆ ಪ್ರವೇಶ ಮಾಡದಂತೆ ನಿರ್ಬಂಧ ಹಾಕುವ ಹಾಗಿಲ್ಲ ಗೊತ್ತೇ...’ ಎಂದರು ನೀಲ್ಸ್. ಮನೆಯ ಹಿತ್ತಿಲ ಹಿಂದೆ ನೀವು ದಟ್ಟ ಗಿಡ, ಮರ ಬೆಳೆಸಿದ್ದು ಅದು ಚಿಕ್ಕ ಕಾಡಿನ ರೂಪದಲ್ಲಿದ್ದರೆ ಅಲ್ಲಿ ನಾಗರಿಕರು ಯಾರೂ ಬಂದು ಅಡ್ಡಾಡಬಹುದು. ಒಂದು ರಾತ್ರಿ ಉಳಿಯಲೂಬಹುದು. ಹೆಚ್ಚು ದಿನ ವಿಶ್ರಮಿಸುವ ಯೋಚನೆ ಇದ್ದರೆ ಮಾತ್ರ ಅನುಮತಿ ಪಡೆಯಬೇಕಾಗುತ್ತದೆ.


ಸ್ವೀಡನ್ ಕಾಡು

ಮೊದಲು ಎದುರಾಗಿದ್ದು ವಿಶಾಲವಾದ ಷೆಲ್ ಟೋಪರ್ಸ್‌ಹನ್ ಕೆರೆ. ಆ ಕೆರೆಯನ್ನು ಬಳಸಿದ ಕಾಲುದಾರಿಯಲ್ಲಿ ಹೊರಟೆವು. ಕೆರೆಯಂಚಿನ ನೀರಿನ ಪದರವೊಂದು ಚಳಿಗೆ ಮಂಜುಗಡ್ಡೆಯಾಗುತ್ತ, ಬಿಸಿಲು ಬಿದ್ದಂತೆ ಕರಗುತ್ತ ಚಿನ್ನಾಟವಾಡುತ್ತಿತ್ತು. ಕೆರೆಯ ಒಳಗೂ ಪ್ರವೇಶಿಸುವಂತೆ ಹಾಕಿದ ಮೂರಡಿ ಅಗಲದ ಹಲಗೆಯ ಸೇತುವೆ ಮೇಲೂ ಹಿಮಹಾಸು. ಎಚ್ಚರಿಕೆಯಿಂದ ಹೆಜ್ಜೆ ಇಡುತ್ತ ಆ ಹಲಗೆಯ ತುದಿಯವರೆಗೆ ಸಾಗಿ, ನಿಂತು ಸುತ್ತಲ ಜಲರಾಶಿಯನ್ನು ಕಣ್ಮನ ತುಂಬಿಕೊಂಡು ಹಿಂದೆ ಬಂದೆವು.

ಕೆರೆಯ ಒಂದು ಮಗ್ಗುಲಿನಲ್ಲಿ ಬೆಟ್ಟ. ‘ಈ ಬೆಟ್ಟ ಹತ್ತೋಣವೇ...’ ಎನ್ನುತ್ತ ಮುಂದೆ ಸಾಗಿದ ನೀಲ್ಸ್ ಹಿಂದೆ ಉತ್ಸಾಹದಿಂದ ಹೊರಟೆವು. ಆದರೆ, ಅದು ಸುಲಭವಾಗಿರಲಿಲ್ಲ. ಬಿಸಿಲು ಬಿದ್ದಿದ್ದರಿಂದ ಬೆಟ್ಟದ ಮೇಲಿನಿಂದ ಹಿಮ ಕರಗಿ ಪುಟ್ಟ ಪುಟ್ಟ ಝರಿಯಾಗಿ ರಾಡಿನೀರು ಹರಿಯುತ್ತಿತ್ತು. ಕೆಲವು ಕಡೆ ಹಿಮ ಮಂಜುಗಡ್ಡೆಯಾಗಿ ಕಾಲಿಟ್ಟಲ್ಲೆಲ್ಲ ಪಸ್... ಎಂದು ಜಾರುತ್ತಿತ್ತು. ನಮ್ಮೂರಲ್ಲಿ ಎಂಥೆಂಥ ಬೆಟ್ಟ ಏರಿದ್ದರೂ ಇಲ್ಲಿ ಶೂ ಹಾಕಿದ ಕಾಲು ಅಂಜುತ್ತ ಹೆಜ್ಜೆ ಊರಿತ್ತು. ಆಚೀಚೆಗೆ ಬೆತ್ತಲೆ ಮರಗಳ ವಿರೂಪವನ್ನು ಹಿಮ ಮರೆಮಾಚಿತ್ತು.

ಓಡಾಡುವ ದಾರಿ ಹೊರತುಪಡಿಸಿ ಅಲ್ಲಿದ್ದ ಗಿಡ, ಪೊದೆ, ಹುಲ್ಲು, ಮರಗಳ ಅಡ್ಡಡ್ಡ ಬೀಸಿದ ಕೈಗಳು ಎಲ್ಲರಿಗೂ ಬಿಳಿ ಅಂಗಿ. ಪೈನ್, ಓಕ್, ಸ್ಪ್ರೂಸ್ ಹೀಗೆ ಕೆಲವೇ ಕೆಲವು ಜಾತಿಯ ಮರಗಳು ಅಲ್ಲಿದ್ದವು. ನೀಲ್ಸ್ ಅವುಗಳನ್ನು ಪರಿಚಯಿಸುತ್ತಾ ಹೋದರು. ಕೆಲವು ಬೃಹದಾಕಾರದ ಮರಗಳು ನೂರಾರು ವರ್ಷ ಹಿಂದಿನವು. ಪೈನ್ ಮರಗಳು ಮಾತ್ರ ಎಲೆ ಉದುರಿಸದೆ ಹಾಗೇ ನಿಂತಿದ್ದವು. ಅಲ್ಲಲ್ಲಿ ಪೊದೆ ಪೊದೆಯಾಗಿದ್ದ ಗಿಡಗಳನ್ನು ತೋರಿಸಿ ಇವು ಬ್ಲೂಬೆರ‍್ರಿ ಗಿಡಗಳು ಎಂದು ತೋರಿಸಿದರು. ಕೆಲವು ಹಣ್ಣುಗಳು ಇಣುಕಿದವು. ಒಂದೆರಡನ್ನು ಕೊಯ್ದು ಬಾಯಿಗೆ ಹಾಕಿದೆ. ಆದರವು ಬರೀ ಐಸ್ ತುಣುಕುಗಳು! ಬೇಸಿಗೆಯಲ್ಲಿ ಈ ಕಾಡುಹಣ್ಣುಗಳನ್ನು ಕೊಯ್ಯಲೆಂದೇ ಜನರು ಬರುತ್ತಾರೆ. ಹಿರಿಯ ಜನರು ಮನೆಯಲ್ಲಿಯೇ ವಿಧವಿಧ ಬೆರ‍್ರಿಗಳ ಜಾಮ್, ಜೆಲ್ಲಿ, ಉಪ್ಪಿನಕಾಯಿ ತಯಾರಿಸುತ್ತಾರೆ.

ಕೆಲವೇ ನಿಮಿಷಗಳಲ್ಲಿ ಬೆಟ್ಟದ ತುದಿ ತಲುಪಿದೆವು. ಮೇಲೆ ಮಟ್ಟಸವಾದ ಜಾಗ, ಬೆಟ್ಟದ ತುದಿಯ ಚೂಪು ಭಾಗವನ್ನು ಕತ್ತರಿಸಿ ತೆಗೆದಿದ್ದಾರೋ ಎಂಬಂತೆ. ಅಲ್ಲಿ ಜೋರಾಗಿ ಬೀಸುತ್ತಿದ್ದ ಗಾಳಿ. ಸುತ್ತಲೂ ದೂರದವರೆಗಿನ ನಯನ ಮನೋಹರ ಬಿಳುಪು ದೃಶ್ಯ. ಎಲ್ಲೆಲ್ಲೂ ಶಾಂತಿಯ ಭಾವ. ಯಾರಿಗೂ ಮಾತು ಬೇಕಿರಲಿಲ್ಲ. ಒಂದಿಷ್ಟು ಹೊತ್ತು ಹಾಗೆಯೇ ಕಳೆಯಿತು. 

ಅಲ್ಲೇ ಒಂದೆಡೆ ಸ್ವಲ್ಪ ತಗ್ಗಿನ, ಗಾಳಿ ಬೀಸದ ಜಾಗ ಹುಡುಕಿ ಜಮಖಾನ ಹಾಸಿದರು ನೀಲ್ಸ್ ಮತ್ತು ಸೆಲ್ವಿ. ಮಧ್ಯಾಹ್ನ ಒಂದು ಗಂಟೆ. ಸೂರ್ಯ ಆಗಲೇ ಜಾರುವ ಹವಣಿಕೆಯಲ್ಲಿದ್ದ. ಬಿಸಿಲಿಗೆ ಮುಖ ಒಡ್ಡಿ ನಾಲ್ವರೂ ಹಾಯಾಗಿ ಕುಳಿತೆವು. ಬೆಚ್ಚನೆಯ ಬಿಸಿಲು ಜೊತೆಗೆ ಬಿಸಿ ಬಿಸಿ ಚಹಾ, ಬ್ರೆಡ್, ಅವಲಕ್ಕಿ ಸವಿದೆವು. ಬೆಟ್ಟ ಇಳಿಯುವಾಗ ಮತ್ತೆ ಜಾರುತ್ತ ಸರ್ಕಸ್ ನಡೆಸುತ್ತ ಇಳಿದು ಬಂದೆವು. ಮರಳಿ ಬಸ್‌ ಹಿಡಿಯುವಾಗ ಇನ್ನೂ ಮಧ್ಯಾಹ್ನದ ಎರಡು ಗಂಟೆ ಅಷ್ಟೆ. ಆದರೆ, ಸೂರ್ಯ ಬೆಟ್ಟದ ಆಚೆ ಆಗಲೇ ಮರೆಯಾಗಿದ್ದ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು