ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವ್ಯವಹಾರ ಚತುರ’ ಉಲುವಾಟು ಮಂಗಗಳು

Last Updated 4 ಜುಲೈ 2020, 19:30 IST
ಅಕ್ಷರ ಗಾತ್ರ

ಉಲುವಾಟು ಇಂಡೊನೇಷ್ಯಾದ ದಕ್ಷಿಣ ಬಾಲಿಯಲ್ಲಿನ ಸುಂದರ ಸ್ಥಳ. ಅದು ಅಲ್ಲಿರುವ ಪ್ರಾಚೀನ ದೇವಾಲಯ ಹಾಗೂ ಸುಂದರ ಕಡಲತಡಿಗೆ ಹೆಸರುವಾಸಿ. ಭಾರತದ ಹಲವಾರು ದೇವಾಲಯಗಳಲ್ಲಿ ಮಂಗಗಳು ಜನರ ಕೈಯಲ್ಲಿನ ಆಹಾರ ಕದಿಯುವುದು ಸಾಮಾನ್ಯವಾಗಿರುವಂತೆ ಇಲ್ಲಿಯೂ ಮಂಗಗಳು ಭಕ್ತರಿಗೆ, ಪ್ರವಾಸಿಗರಿಗೆ ತೊಂದರೆ ನೀಡುತ್ತವೆ! ಇಲ್ಲಿರುವ ಮಂಗಗಳು ಮಕಾಕ್ ಪ್ರಭೇದಕ್ಕೆ ಸೇರಿದ ಬಾಲಿ ಮಕಾಕ್‍ಗಳು ಹಾಗೂ ಅವುಗಳ ವೈಜ್ಞಾನಿಕ ಹೆಸರು ಮಕಾಕ ಫ್ಯಾಸಿಕ್ಯುಲಾರಿಸ್.

ಇಲ್ಲಿನ ಮಂಗಗಳ ಕದಿಯುವ ಪ್ರವೃತ್ತಿ ವಿಶಿಷ್ಟವಾದುದು. ಅವು ‘ವ್ಯವಹಾರ ಚತುರ’ ಕೂಡ. ಸುತ್ತಮುತ್ತಲೂ ಮಂಗಗಳಿರುವುದರಿಂದ ಅಲ್ಲಿಗೆ ಬರುವ ಜನ ಸಾಮಾನ್ಯವಾಗಿ ತಿಂಡಿ ತಿನಿಸುಗಳನ್ನು ಮಂಗಗಳಿಗೆ ಕಾಣದಂತೆ ಬಚ್ಚಿಟ್ಟುಕೊಂಡಿರುತ್ತಾರೆ. ಸುಮಾರು 30 ವರ್ಷಗಳಿಂದ ಉಲುವಾಟು ಮಂಗಗಳು ಆಹಾರ ಪಡೆಯಲು ಹೊಸ ‘ವ್ಯಾವಹಾರಿಕ’ ವಿಧಾನವೊಂದನ್ನು ಕಲಿತಿವೆ. ಅವು ಜನರ ಬಳಿಯಿರುವ ಕನ್ನಡಕ, ಟೋಪಿ, ಮೊಬೈಲ್, ಚಪ್ಪಲಿ ಇತರ ಯಾವುದೇ ಅಮೂಲ್ಯ ವಸ್ತುಗಳನ್ನು ಕದಿಯುತ್ತವೆ. ಅವುಗಳನ್ನು ಕದ್ದು ದೂರ ಓಡಿಹೋಗುವುದಿಲ್ಲ, ಬದಲಿಗೆ ಅಲ್ಲೇ ಮರ ಏರಿ ಕೂರುತ್ತವೆ. ನೀವು ಏನಾದರೂ ತಿಂಡಿ ನೀಡಿದರೆ, ಆ ತಿಂಡಿ ಅವುಗಳಿಗೆ ಇಷ್ಟವಾಗುವ ಗುಣಮಟ್ಟ ಅಥವಾ ಪ್ರಮಾಣದಲ್ಲಿದ್ದರೆ ಕದ್ದ ವಸ್ತುವನ್ನು ಕೈಯಿಂದ ಜಾರಿಸಿ ತಿಂಡಿ ತೆಗೆದುಕೊಂಡು ಓಡುತ್ತವೆ.

ಈ ವ್ಯವಹಾರವನ್ನು ಅರ್ಥಶಾಸ್ತ್ರದಲ್ಲಿ ವಸ್ತುವಿನಿಮಯ ಅಥವಾ ಬಾರ್ಟರಿಂಗ್ ಎನ್ನುತ್ತಾರೆ. ಹಣದ ಆವಿಷ್ಕಾರವಾಗುವ ಮೊದಲು ಮನುಷ್ಯ ಮಾಡುತ್ತಿದ್ದುದು ಇದೇ ರೀತಿಯ ವ್ಯವಹಾರವನ್ನು. ನಮ್ಮ ಬಾಲ್ಯದ ದಿನಗಳಲ್ಲಿ ಹಳ್ಳಿಗಳಲ್ಲಿ ದವಸಧಾನ್ಯ ನೀಡಿ ಮಡಿಕೆ, ಕಬ್ಬಿಣದ ಸಲಕರಣೆಗಳನ್ನು ಈ ರೀತಿಯಲ್ಲಿ ವಸ್ತುವಿನಿಮಯ ಪದ್ಧತಿಯಲ್ಲಿ ‘ಖರೀದಿ’ ಮಾಡುತ್ತಿದ್ದುದನ್ನು ನಾವು ಕಂಡಿದ್ದೇವೆ.

ನಾವು ಉಲುವಾಟುವಿಗೆ ಭೇಟಿ ನೀಡಿದಾಗ ನಮ್ಮ ಕಾರಿನ ಡ್ರೈವರ್ ನಮ್ಮ ಕನ್ನಡಕ, ಟೋಪಿ ಇತ್ಯಾದಿ ವಸ್ತುಗಳ ಬಗ್ಗೆ ಎಚ್ಚರಿಕೆ ನೀಡಿದ್ದ. ನಾವು ಎಪ್ಪತ್ತು ಮೀಟರ್ ಕಡಿದಾದ ಎತ್ತರದಿಂದ ಸಾಗರವನ್ನು ವೀಕ್ಷಿಸುತ್ತ ಮೈಮರೆತಿದ್ದಾಗ ನನ್ನ ಪಕ್ಕದಲ್ಲಿ ಮಂಗವೊಂದು ತಾಳ್ಮೆಯಿಂದ ಕೂತಿರುವುದನ್ನು ನೋಡಿ ಪ್ರವಾಸಿಗನೊಬ್ಬ ಎಚ್ಚರಿಸಿದ. ನಾನು ನೋಡುತ್ತಿರುವಂತೆ ಮರದ ಮೇಲೆ ಕೂತಿದ್ದ ಮಂಗವೊಂದು ಅದರ ಕೆಳಗೆ ಹಾದುಹೋದ ಪ್ರವಾಸಿ ಮಹಿಳೆಯ ತಲೆಯ ಮೇಲೆ ಸಿಕ್ಕಿಸಿಕೊಂಡಿದ್ದ ಕನ್ನಡಕವನ್ನು ಕಸಕ್ಕನೆ ಕಸಿದು ಬಾಯಲ್ಲಿ ಕಚ್ಚಿಕೊಂಡು ಮರದ ಎತ್ತರಕ್ಕೆ ಏರಿತು. ಆಕೆ ಗಾಬರಿಯಾಗಿ ತಡವರಿಸುತ್ತಿದ್ದಾಗ ಅಂತಹ ಸಮಸ್ಯೆಗಳನ್ನು ಪರಿಹರಿಸಲು ಅಲ್ಲಿಯೇ ಇದ್ದ ದೇವಸ್ಥಾನದ ಸಿಬ್ಬಂದಿ ಮಹಿಳೆಯೊಬ್ಬಳು ತನ್ನ ಕೈಯಲ್ಲಿದ್ದ ಚೀಲದಿಂದ ಚಾಕೊಲೇಟ್ ತೆರೆದು ಮರದ ಮೇಲಿರಿಸಿದಳು. ಮಂಗ ಮಿಸುಕಾಡಲಿಲ್ಲ. ನಂತರ ಹಣ್ಣೊಂದನ್ನು ಇರಿಸಿದಳು. ಮಂಗ, ಕನ್ನಡಕ ಬೀಳಿಸಿ ಚಾಕೊಲೇಟ್ ತೆಗೆದುಕೊಂಡು ತಿನ್ನತೊಡಗಿತು. ಆ ವಿದೇಶಿ ಮಹಿಳೆ ಧನ್ಯವಾದ ಹೇಳಿ ಆ ಸಿಬ್ಬಂದಿ ಮಹಿಳೆಗೆ ಟಿಪ್ಸ್ ಕೊಟ್ಟಳು.

ಉಲುವಾಟು ಮಂಗಗಳ ಈ ರೀತಿಯ ವಸ್ತುವಿನಿಮಯ ‘ವ್ಯಾವಹಾರಿಕ’ ನಡವಳಿಕೆ ಸುದ್ದಿಯಾಗಿತ್ತೇ ವಿನಾ ಅದರ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿರಲಿಲ್ಲ. 2010ರಲ್ಲಿ ಬೆಲ್ಜಿಯಂನ ಲೀಜ್ ವಿಶ್ವವಿದ್ಯಾನಿಲಯದ ನಡವಳಿಕೆ ಜೀವಶಾಸ್ತ್ರ ವಿಭಾಗದ ಫ್ಯಾನಿ ಬ್ರಾಟ್‍ಕಾರ್ನ್ ಇತರ ವಿಜ್ಞಾನಿಗಳೊಂದಿಗೆ ನಾಲ್ಕು ತಿಂಗಳು ಅಲ್ಲೇ ನೆಲೆಸಿ ಅಧ್ಯಯನ ಮಾಡಿ ಅದರ ಫಲಿತಾಂಶಗಳನ್ನು ವಿಜ್ಞಾನ ಪತ್ರಿಕೆಯೊಂದರಲ್ಲಿ ಪ್ರಕಟಿಸಿದರು.

ನಡವಳಿಕೆಯ ಕಲಿಕೆಗಳು ಸಮುದಾಯಗಳಲ್ಲಿ ಅಥವಾ ತಲೆಮಾರಿನಿಂದ ತಲೆಮಾರಿಗೆ ವರ್ಗಾವಣೆಯಾಗುವುದು ‘ಪ್ರಜ್ಞೆ’ ಇರುವ ಮಾನವನಲ್ಲಿ ಮಾತ್ರ ಎಂದು ಬಹಳ ದಿನಗಳವರೆಗೂ ನಂಬಲಾಗಿತ್ತು. ಹಲವಾರು ಮಂಗ ಮತ್ತು ವಾನರ (Primates)ಗಳಲ್ಲಿ ಕೆಲವು ಸಲಕರಣೆಗಳ ಬಳಕೆಯ ಕಲಿಕೆ ದಾಖಲಾಗಿದೆ. ಹೊಸದಾಗಿ ಕಲಿತ ನಡವಳಿಕೆಯನ್ನು ಇತರ ಮಂಗಗಳು ನೋಡಿ ಕಲಿತು ಅವುಗಳನ್ನು ಪ್ರಾಕೃತಿಕ ಪರಿಸರದಲ್ಲಿ ಅನುಕರಿಸುತ್ತಿರುವುದು ಬಹುಶಃ ಇದೇ ಮೊದಲ ಗಮನಿಕೆಯಾಗಿರಬಹುದು. ಪ್ರಯೋಗಾಲಯಗಳಲ್ಲಿ ಮಂಗಗಳಿಗೆ ಈ ರೀತಿಯ ಅನುಕರಣೆಯನ್ನು ಹೇಳಿಕೊಟ್ಟು ಕಲಿಸಲಾಗಿರುವ ಉದಾಹರಣೆಗಳಿವೆ. ಪ್ರಕೃತಿಯಲ್ಲಿ ಒಂದು ಪ್ರಭೇದದ ಜೀವಿಯು ಮತ್ತೊಂದು ಪ್ರಭೇದದ ಜೀವಿಯಿಂದ ಆಹಾರವನ್ನು ಕದಿಯುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಮಾನವನನ್ನು ಹೊರತುಪಡಿಸಿ ಒಂದು ಜೀವಿಯು ಮತ್ತೊಂದು ಪ್ರಭೇದದ ಜೀವಿಯಿಂದ ವಸ್ತುವನ್ನು ಕದ್ದು ಅದನ್ನು ಅದೇ ಪ್ರಭೇದದ ಜೀವಿಯೊಂದಿಗೆ ವಸ್ತುವಿನಿಮಯ ಮಾಡಿಕೊಳ್ಳುವ ‘ಸಾಂಸ್ಕೃತಿಕ ನಡವಳಿಕೆ’ ವಿಜ್ಞಾನಿಗಳಿಗೆ ಹೊಸ ವಿಷಯ.

ತಮ್ಮ ನಾಲ್ಕು ತಿಂಗಳ ಅಧ್ಯಯನದಲ್ಲಿ ಫ್ಯಾನಿ ಬ್ರಾಟ್‍ಕಾರ್ನ್ ಮತ್ತು ತಂಡದವರು ಈ ರೀತಿ ಕದಿಯುವ ಮತ್ತು ವಸ್ತುವಿನಿಮಯ ಮಾಡಿಕೊಳ್ಳುವ 201 ಘಟನೆಗಳನ್ನು ದಾಖಲಿಸಿದರು. ಅವರ ಅಧ್ಯಯನದ ಸಮಯದಲ್ಲಿ ಉಲುವಾಟುವಿನಲ್ಲಿ ತಲಾ 30ರಿಂದ 50 ಮಂಗಗಳ ನಾಲ್ಕು ಗುಂಪುಗಳಿದ್ದು ಅವುಗಳಲ್ಲಿ ಎರಡು ಗುಂಪುಗಳು ಈ ರೀತಿಯ ನಡವಳಿಕೆಯನ್ನು ಹೆಚ್ಚು ಪ್ರದರ್ಶಿಸುತ್ತಿದ್ದವು. ಆ ಅಧ್ಯಯನದ ಸಮಯದಲ್ಲಿಯೇ ಅಲ್ಲಿಗೆ ಆಗಮಿಸಿದ್ದ ಹೊಸ ಮಂಗಗಳ ಗುಂಪೊಂದು ಪ್ರಾರಂಭದಲ್ಲಿ ಈ ರೀತಿಯ ನಡವಳಿಕೆ ಪ್ರದರ್ಶಿಸಲಿಲ್ಲ. ಆದರೆ ಕ್ರಮೇಣ ಇತರ ಮಂಗಗಳನ್ನು ನೋಡಿ ಅವುಗಳಲ್ಲಿ ಕೆಲ ಮಂಗಗಳು ಆ ನಡವಳಿಕೆಯನ್ನು ಅನುಕರಿಸಲು ಪ್ರಯತ್ನಿಸಿದವು. ಕೆಲವು ಮಂಗಗಳು ತಮಗೆ ವಿನಿಮಯವಾಗಿ ಸಿಗುವ ಆಹಾರದ ಪ್ರಮಾಣದ ಆಧಾರದ ಮೇಲೆ ಕದ್ದಿರುವ ವಸ್ತುವನ್ನು ಹಿಂದಿರುಗಿಸಿದರೆ, ಕೆಲವು ಅವುಗಳ ಗುಣಮಟ್ಟ ನೋಡಿ ಹಿಂದಿರುಗಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುತ್ತಿದ್ದವು.

ಅವರ ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆಂದರೆ, ಗಂಡು ಮಂಗಗಳು ಹೆಚ್ಚು ಕದಿಯುತ್ತಿದ್ದವು ಹಾಗೂ ಹದಿಹರೆಯದ ಗಂಡು ಮಂಗಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದವು. ವಿಜ್ಞಾನಿಗಳು ಹೇಳುವಂತೆ ಹದಿಹರೆಯದ ಮಂಗಗಳು ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ನಡವಳಿಕೆ ಹೊಂದಿರುತ್ತವೆ. ಈ ರೀತಿಯ ನಡವಳಿಕೆಯನ್ನು ಉಲುವಾಟು ಮಂಗಗಳು ಮೊದಲಿಗೆ ಹೇಗೆ ಕಲಿತವು ಎಂಬುದೇ ಅಚ್ಚರಿಯ ವಿಷಯ. ಬಹುಶಃ ಪ್ರಾರಂಭದಲ್ಲಿ ಮನುಷ್ಯರ ಪ್ರಭಾವವಿದ್ದರೂ ಇರಬಹುದು. ಆದರೆ, ನಂತರ ಅದು ಹೇಗೆ ಒಂದು ‘ಸಾಂಸ್ಕೃತಿಕ ನಡವಳಿಕೆ’ಯಾಗಿ ಸಮುದಾಯದಲ್ಲಿ ಪ್ರಸಾರವಾಗಿದೆ ಎನ್ನುವುದರ ಕುರಿತು ಇನ್ನೂ ಹೆಚ್ಚಿನ ಮನೋವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಫ್ಯಾನಿಯವರು.

ಈ ರೀತಿಯ ಕಾರ್ಯಕ್ಕೆ ಮಂಗಗಳಿಗೆ ಧೈರ್ಯ ಬೇಕು. ಏಕೆಂದರೆ, ಅವು ಮನುಷ್ಯನನ್ನು ಆ ಸಮಯದಲ್ಲಿ ಮುಟ್ಟಬೇಕು ಮತ್ತು ಎಲ್ಲ ಮಂಗಗಳೂ ಆ ರೀತಿಯ ಧೈರ್ಯ ತೋರುವುದಿಲ್ಲ. ಅಲ್ಲದೆ ಕದ್ದನಂತರ ತಮಗೆ ಬೇಕಾಗಿರುವ ವಸ್ತು ಹಿಂದಿರುಗಿಸುವವರೆಗೂ ತಾಳ್ಮೆ ಮತ್ತು ಸ್ವ-ನಿಯಂತ್ರಣ ಹೊಂದಿರಬೇಕು. ಮಂಗಗಳು ಕದಿಯುವುದಷ್ಟೇ ಅಲ್ಲ, ಈ ರೀತಿಯ ಕೌಶಲವನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ಕದ್ದ ವಸ್ತು ಹಾನಿಗೊಳಗಾದರೆ ತಾವು ನಿರೀಕ್ಷಿಸಿದ ಆಹಾರ ಸಿಗದೇ ಹೋಗಬಹುದು. ಆದರೆ ತಿಂಡಿ ಸಿಕ್ಕನಂತರ ಬಹಳಷ್ಟು ಸಾರಿ ಕೆಳಕ್ಕೆ ಬೀಳಿಸುವ ಕನ್ನಡಕ ಇತ್ಯಾದಿ ಮುರಿದು ಹಾಳಾಗುತ್ತವೆ. ಅವರ ಪ್ರಕಾರ ಈ ಕೌಶಲ ರೂಢಿಸಿಕೊಳ್ಳಲು ಮಂಗಗಳಿಗೆ ಸುಮಾರು ಐದಾರು ವರ್ಷಗಳೇ ಬೇಕಾಗಬಹುದು.

ಮಂಗಗಳಿಗೆ ತಮ್ಮ ನಡವಳಿಕೆಯ ಅರಿವಿದೆಯೇ? ಅವು ತಮ್ಮ ಭವಿಷ್ಯದ ಕುರಿತು ಯೋಚಿಸುತ್ತವೆಯೆ? ಈ ಅಧ್ಯಯನಗಳಿಂದ ಮಾನವನ ಬಾಹ್ಯ ಜಗತ್ತಿನ ಗ್ರಹಿಕೆಯ ಸಾಮರ್ಥ್ಯದ ವಿಕಾಸದ ಕುರಿತು ಹಾಗೂ ಮಾನವನ ನಡವಳಿಕೆಯ ವಿಕಾಸದ ಕುರಿತೂ ಅರಿಯಬಹುದೆನ್ನುತ್ತಾರೆ ಅವರು. ಬಾಲಿಯ ಉಲುವಾಟುವಿನಲ್ಲಿನ ಮಂಗಗಳು ಮಾತ್ರ ಈ ನಡವಳಿಕೆ ಕಲಿತಿವೆ. ಬಾಲಿಯ ಇತರೆಡೆ ಇದೇ ಪ್ರಭೇದದ ಮಂಗಗಳಿದ್ದರೂ ಅವು ಇದನ್ನು ಕಲಿತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT