ಶುಕ್ರವಾರ, ಮೇ 20, 2022
23 °C

ಕನ್ನಡದ ಕೆಲಸ: ಆಹಾ! ಕನ್ನಡಂಗಳ್‌!

ಪ್ರೊ.ಎಂ.ಕೃಷ್ಣೇಗೌಡ Updated:

ಅಕ್ಷರ ಗಾತ್ರ : | |

Prajavani

ಟಿವಿಯಲ್ಲೊಂದು ಅಡುಗೆ ಕಾರ್ಯಕ್ರಮ ಬರ‍್ತಾ ಇತ್ತು. ನನಗೂ ಮಾಡೋದಕ್ಕೆ ಘನವಾದ ಕೆಲಸಗಳೇನೂ ಇಲ್ಲವಾದ್ದರಿಂದ ಹಾಗೇ ನೋಡ್ತಾ ಇದ್ದೆ. ಕೊರಳು ಬೆರಳುಗಳ ತುಂಬೆಲ್ಲಾ ಬಗೆಬಗೆ ಬಂಗಾರದ ಆಭರಣ ಧರಿಸಿಕೊಂಡು ಮೊಗಕ್ಕೆ ಮಂದವಾಗಿ ಮೇಕಪ್ಪು ಮಾಡಿಕೊಂಡ ಮಹಿಳೆಯೊಬ್ಬಳು ಅದ್ಯಾವುದೋ ಲೋಕೋತ್ತರವಾದ ತಿಂಡಿಯೊಂದನ್ನು ಬಾಣಸುಗೈವ ಕ್ರಮಗಳನ್ನು ವಿವರಿಸುತ್ತಿದ್ದಳು.

ನಮ್ಮ ಜನಪದರು ಯಾವುದಾದರೂ ಕತೆಯೊಂದನ್ನೋ ಮತ್ತೊಂದನ್ನೋ ಹೇಳುವಾಗ ಅಲ್ಲೊಬ್ಬ ಹೌದಪ್ಪಾ, ಆಹಾಹಾ, ಭಲೆ ಭಲೆ, ಶಹಬಾಸ್‌ ಅನ್ನುತ್ತಾ ಇರುತ್ತಾನಲ್ಲ? ಹಾಗೆಯೇ ಆ ಕಾರ್ಯಕ್ರಮದ ನಿರೂಪಕಿಯು ಆ ಮಹಿಳೆಯ ಮಾತಿನ ಮಧ್ಯೆ ಮಧ್ಯೆ ವಾಹ್‌, ಆSSಸ್ಸಮ್‌, ಲವ್‌ಲಿ, ಫೆಂಟಾಸ್ಟಿಕ್‌, ಅಮೇಜಿಂಗ್‌ ಎಂಬಿತ್ಯಾದಿಯಾಗಿ ಉದ್ಗರಿಸುತ್ತಿದ್ದಳು. ನೀವು ಕನ್‌ಫ್ಯೂಸ್‌ ಆಗದಿರಲಿ ಅಂತ ಮೊದಲೇ ಹೇಳಿಬಿಡ್ತೀನಿ. ಅದು ಕನ್ನಡ ಚಾನೆಲ್‌. ಕಾರ್ಯಕ್ರಮದ ನಿರೂಪಣೆಯೆಲ್ಲವೂ ಫ್ರಮ್‌ ಬಿಗಿನಿಂಗ್‌ ಟು ಎಂಡ್‌ ಪ್ಯೂರ್‌ ಕನ್ನಡದಲ್ಲೇ. ಆ ಮಹಿಳೆ ಹೇಳಿಕೊಟ್ಟ ಅಡುಗೆ ಪಾಠ ನನ್ನ ನೆನಪಿನಲ್ಲಿ ಇಲ್ಲವಾದರೂ ಆಕೆಯ ಕನ್ನಡ ಮಾತುಗಳು ಬಿಟ್ಸ್‌ ಆ್ಯಂಡ್‌ ಪೀಸಸ್‌ನಲ್ಲಿ ಒಂದಿಷ್ಟು ನೆನಪಿನಲ್ಲಿವೆ. ನಾನು ಹೇಳ್ತೀನಿ ಯು ಪ್ಲೀಸ್‌ ಲಿಸನ್‌...

‘ನಾನಿವತ್ತು ಪ್ರಿಪೇರ್‌ ಮಾಡ್ತಾ ಇರೋ ಡಿಷ್‌ ತುಂಬಾ ಸಿಂಪಲ್‌ ಆಗಿದೆ. ಸ್ಟೆಪ್‌ ಬೈ ಸ್ಟೆಪ್‌ ಹೇಳ್ತೀನಿ. ಪ್ಲೀಸ್‌ ಫಾಲೋ ಮಾಡಿ. ಇದಕ್ಕೆ ಬೇಕಾಗಿರೋ ಇನ್‌ಗ್ರೀಡಿಯಂಟ್ಸ್‌ ತುಂಬಾ ಏನಿಲ್ಲ. ತ್ರಿ ಆರ್‌ ಫೋರ್‌ ಮೀಡಿಯಂ ಸೈಜ್‌ ಪೊಟ್ಯಾಟೊ, ಒಂದು ಕಪ್‌ ಗ್ರೀನ್‌ ಪೀಸ್‌, ಒಂದು ಸ್ಪೂನ್‌ನಷ್ಟು ಪೆಪ್ಪರ್‌ ಪೌಡರ್‌, ಸೇಮ್‌ ಕ್ವಾಂಟಿಟಿ ಆಫ್‌ ಜೀರಾ, ಒನ್‌ ಸ್ಮಾಲ್‌ ಬಿಟ್‌ ಆಫ್‌ ಜಿಂಜರ್‌, ಒಂದು ಹೋಳು ಕೋಕೊನಟ್‌ (ಬರೀ ಓಳು), ಒಂದು ಸ್ಮಾಲ್‌ ಬಂಡಲ್‌ (!) ಕೊರಿಯಾಂಡರ್‌ ಲೀವ್ಸ್‌. ಒಂದು ಟೂ ಹಂಡ್ರೆಡ್‌ ಗ್ರಾಮ್ಸ್‌ ಫ್ರೆಷ್‌ ಪನೀರ್‌, ಟೆನ್‌ ಎಮ್ಮೆಲ್‌ ಸೋಯಾ ಸಾಸ್‌, ಒಂದೆರಡು ಚಿಟಿಕೆ ಟರ್ಮರಿಕ್‌ ಪೌಡರ್‌, ಒನ್‌ ಸ್ಪೂನ್‌ ಟೇಬಲ್‌ ಸಾಲ್ಟ್‌, ಟು ಸ್ಮಾಲ್‌ ಆನಿಯನ್ಸ್‌, ಲಿಟ್ಲ್‌ ಗಾರ್ಲಿಕ್‌ ಪೇಸ್ಟ್‌, ಇಷ್ಟೆ. ದಟ್ಸ್‌ ಆಲ್‌.

(ಮೇಲಿನ ಫುಲ್‌ಸ್ಟಾಪು, ಕಾಮಾಗಳ ಜಾಗದಲ್ಲಿ ನಿರೂಪಕಿಯ ಗ್ರೇಟ್‌, ನೈಸ್‌, ಓಕೆ, ಅಮೇಜಿಂಗ್‌ ಇತ್ಯಾದಿಯಿಂದ ಉದ್ಗಾರಗಳನ್ನು ನೀವೇ ಸೇರಿಸಿಕೊಂಡು ಓದಿಕೊಳ್ಳತಕ್ಕದ್ದು)

ಇನ್ನು ಆ ‘ಮ್ಯಾಮ್‌’ ಹೇಳುವ ಅಡುಗೆ ವಿಚಾರ ಮುಂದುವರಿಯುತ್ತದೆ.

‘ಒಂದು ರೌಂಡ್‌ ಬಾಟಮ್‌ ವೆಸೆಲ್‌ನಲ್ಲಿ ಪೊಟ್ಯಾಟೊ ಕುಕ್‌ ಮಾಡಿ. ಅದರ ಔಟರ್‌ ಲೇಯರ್‌ ಎಲ್ಲ ಪೀಲ್‌ ಮಾಡಿ. ಲೈಟ್‌ ಆಗಿ ಸ್ಮ್ಯಾಷ್‌ ಮಾಡಿ, ಒಂದು ಸೈಡಲ್ಲಿ ಇಟ್ಕೋಬೇಕು. ಕೋಕೊನಟ್‌ನ ಗ್ರೇಟ್‌ ಮಾಡಿ, ಮಿಕ್ಸಿಯಲ್ಲಿ ಗ್ರೈಂಡ್‌ ಮಾಡಿ. ಅದನ್ನು ಇನ್ನೊಂದು ಸೈಡಲ್ಲಿ ಇಟ್ಕೋಬೇಕು. ಗ್ರೀನ್‌ಪೀಸ್‌ನ ಬಾಯ್ಲ್‌ ಮಾಡಿ ಅದರ ವಾಟರ್‌ ಎಲ್ಲಾ ಪೋರ್‌ ಮಾಡಿ ಇನ್ನೊಂದು ಸೈಡಲ್ಲಿ ಇಟ್ಕೊಳ್ಳಿ. ಒಂದು ರೌಂಡ್‌ ಬಾಟಮ್‌ ಪ್ಯಾನ್‌ನಲ್ಲಿ ಸ್ವಲ್ಪಾನೆ ಆಯಿಲ್‌ ಹಾಕ್ಕೊಂಡು ಕಟ್‌ ಮಾಡಿರೋ ಆನಿಯನ್‌, ಟರ್ಮರಿಕ್‌ ಪೌಡರ್‌, ಪೆಪ್ಪರ್‌ ಪೌಡರ್‌, ಜೀರಾ, ಗ್ರೇಟೆಡ್‌ ಜಿಂಜರ್‌ ಎಲ್ಲಾ ಹಾಕ್ಕೊಂಡು ಲೈಟ್‌ ಆಗಿ ಸ್ಮಾಲ್‌ ಫ್ಲೇಮ್‌ ಇಟ್ಕೊಂಡು ಫ್ರೈ ಮಾಡ್ಬೇಕು. ಆಮೇಲೆ ಅದಕ್ಕೆ ಸ್ಮ್ಯಾಷ್ಡ್‌ ಪೊಟ್ಯಾಟೊ, ಬಾಯಿಲ್ಡ್‌ ಗ್ರೀನ್‌ಪೀಸ್‌, ಸೋಯಾ ಸಾಸ್‌, ಗಾರ್ಲಿಕ್‌ ಪೇಸ್ಟ್‌ ಎಲ್ಲಾ ಮಿಕ್ಸ್ ಮಾಡ್ಬೇಕು. ಆಮೇಲೆ...’

ಸಾಕು ಬಿಡಿ ಸದ್ಯಕ್ಕೆ ಇಷ್ಟು ಕನ್ನಡ ತಡ್ಕೊಳ್ಳಿ ನೀವು. ಇದೂ ಸಾಕಾಗಿಲ್ಲ ಅಂತಾದರೆ ನಮ್ಮ ಯಾವುದಾದರೂ ಎಫ್‌.ಎಂ. ರೇಡಿಯೊ ತಿರುಗಿಸಿ ಸಾಕು. ‘ನಮ್ಮ ಕನ್ನಡ’ ಆರ್‌ಜೆಗಳ ನಾನ್‌ ಸ್ಟಾಪ್‌ ಕನ್ನಡಕ್ಕೆ ಕಿವಿಕೊಡಿ.

‘ಹಾಯ್‌ ಹಲೋ ಮೈ ಡಿಯರ್‌ ಡಿಯರ‍್ರ್... ಫ್ರೆಂಡ್ಸ್‌, ಗುಡ್‌ ಗುಡರ್‌, ಗುಡ್ಡೆಸ್ಟ್‌ ಮಾರ್ನಿಂಗ್‌! ಹೌ ಆರ್‌ ಯೂ ದಿಸ್‌ ಮಾರ್ನಿಂಗ್‌, ಹೋಪ್‌ ಯು ಆರ್‌ ಆಲ್‌ ಡೂಯಿಂಗ್‌ ವೆರಿಗುಡ್‌. ಏನಪ್ಪಾ ಅಂದ್ರೆ ಈವತ್ತು ಫೆಂಟಾಸ್ಟಿಕ್‌ ಫ್ರೈಡೇ. ಐ ನೋ ಯು ಆರ್‌ ಲುಕಿಂಗ್‌ ಫಾರ್ವರ್ಡ್‌ ಫಾರ್‌ ಎ ಗ್ರೇಟ್‌ ವೀಕೆಂಡ್‌. ಮತ್ತೆ ಏನ್‌ ಸಮಾಚಾರ? ವೀಕೆಂಡ್‌ಗೆ ವಾಟ್‌ ಆರ್‌ ಯುವರ್‌ ಪ್ಲಾನ್ಸ್‌? ಅದನ್ನು ನನಗೆ ಕಾಲ್‌ ಮಾಡಿ ಹೇಳಿ. 9448506825ಗೆ ಕಾಲ್‌ ಮಾಡಿ ಅಥವಾ ವಾಟ್ಸ್ಆ್ಯಪ್‌ ಮಾಡಿ. ಅಲ್ಲಿವರೆಗೂ ಕೀಪ್‌ ಲಿಸ್‌ನಿಂಗ್‌ ಟು ದಿಸ್‌ ವಂಡರ್‌ ವಂಡರ್‌ಫುಲ್‌ ಕನ್ನಡ ಸಾಂಗ್‌ ಬೈ ನನ್‌ ಅದರ್‌ ದ್ಯಾನ್‌ ನಮ್ಮ್ ಅಣ್ಣಾವ್ರು. ಪ್ಲೀಸ್‌ ಸ್ಟೇ ಟ್ಯೂನ್ಡ್‌ ಕೇಳಿ ಕೇಳ್ಸಿ... ಸೂಪರ‍್ರ್‌ ಆಗಿ ಎಂಜಾಯ್‌ ಮಾಡಿ ಅಣ್ಣಾವ್ರ ಈ ಸಾಂಗ್‌. ಡು ಯು ನೋ ಫ್ರಮ್‌ ವಿಚ್‌ ಮೂವಿ? ವಾವ್‌! ಚಲ್ಲೀ...ಸ್ಸು..ವ... ಮೋssಡ್ಡಗಳು!!

ಜೇನಿನ ಹೊಳೆಯೋ ಹಾಲಿನ ಮಳೆಯೋ

ಸುಧೆಯೋ ಕನ್ನಡ ಸವಿ ನುಡಿಯೋ
ವಾಣಿಯ ವೀಣೆಯ ಸ್ವರಮಾಧುರ್ಯವೋ

ಸುಮಧುರ ಕನ್ನಡ ನುಡಿಯೋ – ಆಹಾ!

ಅಂತೂ ಜೇನಿನ ಹೊಳೆ ಹಾಲಿನ ಮಳೆ ಕನ್ನಡ ಸವಿನುಡಿಯು ನಮ್ಮ ಕಾಂಟೆಂಪೊರರಿ ಕನ್ನಡದ ಸಂದುಗೊಂದಿಗಳಲ್ಲೇ ಹರಿಯಬೇಕು.

ನವೆಂಬರ್‌ ತಿಂಗಳು ಬಂತು ಅಂತ ಅಭಿಮಾನಕ್ಕೆ ಹೇಳುವ ಮಾತಲ್ಲ. ನಂಬಿ, ಒಪ್ಪಿಕೊಳ್ಳಿ. ಕನ್ನಡವೆಂಬುದು ಒಂದು ಅದ್ಭುತವಾದ ಭಾಷೆ. ಎರಡು ಸಾವಿರ ವರ್ಷಗಳಿಗೂ ಮಿಗಿಲಾಗಿ ಬಾಳಿ, ಬದುಕಿ, ಬೆಳೆದು, ಮೆರೆದು ಬಂದಿರುವ ಭಾಷೆ ಇದು. ಕೋಟ್ಯಂತರ ನಾಲಗೆಗಳ ಮೇಲೆ ಹೊರಳಿ, ಅರಳಿ ಅನಂತ ಬಗೆಯ ಅನುಭವಗಳಿಗೆ ವಾಹಕವಾಗಿ ಬಂದ ಭಾಷೆ ಇದು. ನಾವು ಈ ಬಗೆಗೆ ತಂದುಕೊಂಡು ಭಾವಿಸಬೇಕಾದ್ದೊಂದಿದೆ, ಅದೇನೆಂದರೆ ಇಂದು ನಮ್ಮ ನಾಲಗೆಯ ಮೇಲೆ, ನಮ್ಮ ಪುಸ್ತಕಗಳಲ್ಲಿ ಅಚ್ಚಾಗಿರುವ ಭಾಷೆ ಇಂದಿನದ್ದಷ್ಟೇ ಅಲ್ಲ. ಎಲ್ಲಿಂದಲೋ ಹುಟ್ಟಿ ಎಲ್ಲೆಲ್ಲೋ ಹರಿಯುವ ಹೊಳೆ, ಅದು ಹರಿದುಬಂದ ನೆಲದ ವಾತಾವರಣದ ಸಸ್ಯ, ಪ್ರಾಣಿ ಸಂಕುಲದ ಯಾವ್ಯಾವುದೋ ಗುಣಗಳನ್ನೆಲ್ಲ ಮೈದುಂಬಿಕೊಂಡು ಹರಿಯುವ ಹಾಗೆ ನಮ್ಮ ಕನ್ನಡ ಭಾಷೆಯು ತನ್ನ ಸಹಸ್ರಾರು ವರ್ಷಗಳ ಹರಿವಿನ ಜನುಮದಿನದ ಅರಿವು, ಅನುಭವ, ಜ್ಞಾನಗಳನ್ನೆಲ್ಲ ಮೈದುಂಬಿಕೊಂಡಿದೆ. ನಮ್ಮ ಪೂರ್ವಿಕರೆಲ್ಲರ ನಾಲಗೆಯ ನೆನಪು ನಮ್ಮ ಕನ್ನಡದೊಳಗೇ ಇದೆ. ನಮ್ಮ ಕನ್ನಡವನ್ನು ಯಾವುದೇ ನಾಗರಿಕ ಕಾರಣಗಳಿಗಾಗಿ ನಾವು ತಿರಸ್ಕರಿಸಿದರೆ, ಧಿಕ್ಕರಿಸಿದರೆ, ಆ ಭಾಷೆಯೊಳಗೆ ನಿಹಿತವಾಗಿರುವ ಸರ್ವ ಸಂಪನ್ಮೂಲಗಳನ್ನೂ ನಾವು ಧಿಕ್ಕರಿಸಿದಂತೆ.

ನಾನು ಕನ್ನಡದ ವಿದ್ಯಾರ್ಥಿ, ಕನ್ನಡದ ಮೇಷ್ಟ್ರು. ಸಹಜವಾಗಿ ಕನ್ನಡದ ಈ ಸಂಪನ್ಮೂಲಕ್ಕೆ ತೆರೆದುಕೊಂಡವನು ನಾನು. ಸತ್ಯವಾಗಿಯೂ ಕನ್ನಡ ಭಾಷೆಗಿರುವ ಸೊಗಡು, ರುಚಿ, ಶಕ್ತಿ ನನ್ನ ವ್ಯಕ್ತಿತ್ವವನ್ನು ಕಟ್ಟಿವೆ. ನಮ್ಮ ಪೂರ್ವಿಕ ಪ್ರಮುಖರಲ್ಲೊಬ್ಬರಾದ ಬೆನಗಲ್‌ ನರಸಿಂಹರಾವ್‌ ಕನ್ನಡದ ಬಗ್ಗೆ ಏನು ಹೇಳಿದ್ದಾರೆ ನೋಡಿ...

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ

ಕನ್ನಡವೇ ಎನ್ನುಸಿರು ಪೆತ್ತೆನ್ನ ತಾಯಿ

ಕನ್ನಡವೇ ಧನದಾನ್ಯ ಕನ್ನಡವೇ ಮನೆ ಮಾನ್ಯ

ಕನ್ನಡವೇ ಎನಗಾಯ್ತು ಕಣ್ಣು, ಕಿವಿ ಬಾಯಿ

ಈ ಪದ್ಯವನ್ನು ಕೀರ್ತಿಶೇಷ ಬೆನಗಲ್‌ ನರಸಿಂಹರಾಯರು ನನಗಾಗಿಯೇ, ನನ್ನಂಥವರಿಗಾಗಿಯೇ ಬರೆದುಕೊಟ್ಟರಾ ಅನ್ನಿಸುತ್ತಿದೆ.

ಕನ್ನಡವನ್ನೇ ವೃತ್ತಿಯನ್ನಾಗಿಯೂ ಬದುಕಾಗಿಯೂ ಮಾಡಿಕೊಂಡ ನನ್ನಂಥವರಿಗೆ ಧನ, ಧಾನ್ಯ, ಮನೆ, ಮಾನ್ಯ ಎಲ್ಲ ಸೌಭಾಗ್ಯಗಳನ್ನು ಕನ್ನಡವೇ ಪ್ರಸಾದಿಸಿದೆ. ಕನ್ನಡದ ಶಕ್ತಿಯ ಕಿಂಚಿತ್‌ ಅರಿವಿರುವ ನನ್ನಂಥವರ ಸರ್ವೇಂದ್ರಿಯಗಳನ್ನೂ ಕನ್ನಡವೇ ತುಂಬಿಕೊಂಡಿದೆ.

‘ಕನ್ನಡವೆನೆ ಕುಣಿದಾಡುವುದೆನ್ನೆದೆ’ ‘ಕನ್ನಡ ಕನ್ನಡ ಹಾ ಸವಿ ಕನ್ನಡ’ ಎಂದು ಹಾಡಿದ ಕವಿ ಕೇವಲ ಅಭಿಮಾನಕ್ಕೋ, ಹೊಟ್ಟೆಪಾಡಿಗೋ ಹಾಗೆ ಹಾಡಿರಲಾರರು ಎಂದು ನಾವು ನಂಬಬೇಕಿದೆ. ಅಂಥ ನಂಬುಗೆ ಒಡಮೂಡಬೇಕೆಂದರೆ ಮೊದಲನೆಯದು, ನಮ್ಮ ಭಾಷೆಯನ್ನು ನಾವು ಪ್ರೀತಿಸಬೇಕು. ಎರಡನೆಯದು ಅದರ ಶಕ್ತಿ ಸಂಪನ್ಮೂಲಕ್ಕೆ ನಮ್ಮನ್ನು ತೆರೆದುಕೊಳ್ಳಬೇಕು.

ಭಾರತ ದೇಶದ ಬಹುದೊಡ್ಡ ವೈಶಿಷ್ಟ್ಯವೆಂದರೆ ಅದರ ‘ವೈವಿಧ್ಯ’. ಇಡೀ ಜಗತ್ತಿನಲ್ಲಿರುವ ಭಾಷೆಗಳ ಪೈಕಿ ಅರ್ಧಕ್ಕಿಂತ ಹೆಚ್ಚುಭಾಷೆಗಳು ನಮ್ಮ ಭಾರತದಲ್ಲೇ ಇವೆ. ಭಾಷೆಯೊಂದೇ ಅಲ್ಲ. ಇಲ್ಲಿಯ ಸಂಸ್ಕೃತಿ, ನಡವಳಿಕೆ, ಆಚಾರ ವಿಚಾರಗಳು, ಧರ್ಮ, ಜಾತಿ, ಆಹಾರ, ಬಟ್ಟೆಬರೆ, ಕಸುಬು, ಕಲೆಗಾರಿಕೆ ಒಂದಾ ಎರಡಾ? ಇಲ್ಲಿರುವಷ್ಟು ವೈವಿಧ್ಯ, ಜಗತ್ತಿನ ಯಾವ ದೇಶಕ್ಕೂ ಇಲ್ಲ, ಇಲ್ಲವೇ ಇಲ್ಲ. ‘ವಿವಿಧತೆಯಲ್ಲಿ ಏಕತೆ ಅನ್ನುವುದು ಈ ದೇಶದ ಮಹಾನ್‌ ಆದರ್ಶ. ಈ ವಿವಿಧತೆಯನ್ನು ಒಪ್ಪಿಕೊಳ್ಳದೇ ಗೌರವಿಸದೇ ನಮ್ಮ ದೇಶಕ್ಕೆ ಅನ್ಯ ಮಾರ್ಗವೇ ಇಲ್ಲ. ಹಾಗೊಂದು ವೇಳೆ ನಮ್ಮಿಂದ ಅನ್ಯವಾದುದನ್ನು ನಾವು ಟೀಕೆ ಮಾಡುತ್ತೇವೆಂದರೆ, ವಿಮರ್ಶೆ ಮಾಡುತ್ತೇವೆಂದರೆ ಅದು ಸಂಘರ್ಷಕ್ಕೆ, ಸರ್ವನಾಶಕ್ಕೆ ಮುಖ ಮಾಡಿದಂತೆ. ಕವಿ ಕುವೆಂಪು ಹೇಳುವ ಮಾತನ್ನು ನಾವು ಕೇಳಬೇಕು. ‘ನಾವು ವಿರೋಧ, ವಿಮರ್ಶೆ ಮಾಡಬೇಕೆಂದರೆ ಅದು ನಮ್ಮಿಂದಲೇ ಆರಂಭವಾಗಬೇಕು’. ಆ ಮಾತಿರಲಿ. ನಾವು ಕನ್ನಡದ ಕಡೆಗೆ ಬರೋಣ.

ಭಾರತದಲ್ಲಿ ಎಷ್ಟೆಲ್ಲ ವೈವಿಧ್ಯಗಳಿರುವಂತೆಯೇ ಆ ಭಾರತ ಜನನಿಯ ತನು ಜಾತೆಯಲ್ಲವೇ ಕನ್ನಡ ನಾಡು! ನಮ್ಮ ನಾಡಿನಲ್ಲೂ ನಮ್ಮ ಭಾಷೆಯಲ್ಲೂ ವೈವಿಧ್ಯವಿದೆ. ಅದಕ್ಕೆ ನಮ್ಮ ಪೂರ್ವಸೂರಿಗಳು ‘ಕನ್ನಡಂಗಳ್‌‘ ಎಂಬ ಮಾತನ್ನು ಆಡಿದ್ದು. ಕನ್ನಡದಲ್ಲೇ ಎಷ್ಟು ಕನ್ನಡಗಳಿವೆಯಲ್ಲಾ? ಕನ್ನಡಕ್ಕೆ ಶಿಷ್ಟ ಭಾಷೆ, ಗ್ರಂಥ ಭಾಷೆ ಅಂತ ಒಂದಿರುವ ಹಾಗೆ ಬೇಕಾದಷ್ಟು ಆಡುಭಾಷೆಗಳಿವೆ. ಭಾಷೆಗೊಂದು ಲಯ, ಸೊಗಸು, ಸೊಗಡು ಅಂತ ಇರುತ್ತದೆಯಲ್ಲ, ಅದು ಗ್ರಂಥ ಭಾಷೆಗಿಂತ ಆಡು ಭಾಷೆಗಳಲ್ಲೇ ಹೆಚ್ಚು (Dialects).

ಆಡುಭಾಷೆ ಎಂದರೆ, ಆ ಪರಿಕಲ್ಪನೆ ಹೇಳುವ ಹಾಗೆ ಅದು ಆಡುವ ಭಾಷೆ. ಬರೆಯುವ ಭಾಷೆ ಅಲ್ಲ. ಬರೆಯಲು ಪ್ರಯತ್ನಿಸಬಹುದೇ ವಿನಾ ಅದರ ಬಾಗು, ಬಳುಕು, ಬನಿ ಬೆರಗುಗಳೆಲ್ಲಾ ಬರಹಕ್ಕಿಳಿಸುವುದು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ವರ್ಣಮಾಲೆಗೆ ಆಡುಭಾಷೆಗಳನ್ನು ಹಿಡಿಯುವುದು ಆಗುವುದೇ ಇಲ್ಲ. ಇದು ಕನ್ನಡಕ್ಕೆ ಮಾತ್ರ ಹೇಳುವ ಮಾತಲ್ಲ. ಯಾವ ಭಾಷೆಯಲ್ಲೂ ಅದರ ಆಡುಭಾಷೆಯನ್ನು ಅಕ್ಷರಗಳಲ್ಲಿ ಹಿಡಿಯುವುದಕ್ಕಾಗುವುದಿಲ್ಲ. ಅಷ್ಟು ಮಾತ್ರವಲ್ಲ, ಆಡುಭಾಷೆಯ ಅರ್ಥಗಳನ್ನು ನಿಘಂಟಿನಲ್ಲಿ ಹಿಡಿಯುವುದೂ ಕಷ್ಟವೇ. ಯಾಕೆಂದರೆ ಆಡುಭಾಷೆಗೆ ಅದರ ಅರ್ಥಕ್ಕಿಂತ ಅಭಿಪ್ರಾಯ ಮುಖ್ಯ.

ನಮ್ಮಲ್ಲಿ ಎಷ್ಟೊಂದು ಆಡುಭಾಷೆಗಳಿವೆ ನೋಡಿ. ಸ್ತೂಲವಾಗಿ ಹೇಳಬೇಕೆಂದರೆ ಬಯಲುಸೀಮೆ ಕನ್ನಡ, ಕರಾವಳಿ ಕನ್ನಡ, ಧಾರವಾಡ ಕನ್ನಡ, ಹೈದರಾಬಾದ್‌ ಕರ್ನಾಟಕ ಕನ್ನಡ, ಮುಂಬೈ ಕರ್ನಾಟಕದ ಕನ್ನಡ, ಕೊಡಗಿನ ಕನ್ನಡ, ಘಟ್ಟದ ಕನ್ನಡ... ಇದೇನೂ ಶಾಸ್ತ್ರೀಯ ವಿಭಾಗವಲ್ಲ. ಹಾಗೆಯೇ ಒಂದೊಂದರಲ್ಲೂ ಮತ್ತೆ ಬಗೆಬಗೆ ಆಡುಭಾಷೆಗಳಿವೆ. ಬಯಲುಸೀಮೆ ಕನ್ನಡದಲ್ಲೇ ಮಂಡ್ಯದ ಕನ್ನಡ, ಮೈಸೂರಿನ ಕನ್ನಡ, ಹಾಸನದ ಕನ್ನಡ, ತುಮಕೂರಿನ ಕನ್ನಡ, ಬೆಂಗಳೂರಿನ ಕನ್ನಡ ಇವೆಲ್ಲಾ ಬೇರೆ ಬೇರೆ. ಮಂಡ್ಯದ ಕನ್ನಡದಲ್ಲೂ ಶ್ರೀರಂಗಪಟ್ಟಣ – ಪಾಂಡವಪುರದ ಕನ್ನಡ ಬೇರೆ, ಮಂಡ್ಯ–ಮದ್ದೂರಿನ ಕನ್ನಡ ಬೇರೆ, ನಾಗಮಂಗಲ‌ದ ಕನ್ನಡ ಬೇರೆ, ಮಳವಳ್ಳಿ ಕನ್ನಡ ಬೇರೆ, ಕೆ.ಆರ್‌.ಪೇಟೆ ಕನ್ನಡ ಬೇರೆ, ಇನ್ನು ಈ ಕನ್ನಡಗಳಲ್ಲೇ ಬ್ರಾಹ್ಮಣರ ಕನ್ನಡ ಬೇರೆ, ಒಕ್ಕಲಿಗರ ಕನ್ನಡ ಬೇರೆ, ದಲಿತರ ಕನ್ನಡ ಬೇರೆ, ಮುಸ್ಲಿಮರ ಕನ್ನಡ ಬೇರೆ, ಒಕ್ಕಲಿಗರಲ್ಲೂ ಕನ್ನಡ ಬೇರೆ, ಮರಸು ಒಕ್ಕಲಿಗರು ರೆಡೊಕ್ಕಲಿಗರ ಕನ್ನಡ ಬೇರೆ.

ಕರಾವಳಿಗೆ ಹೋದರೆ ಮಂಗಳೂರು ಕನ್ನಡವೇ ಬೇರೆ, ಸುಳ್ಯ, ಪುತ್ತೂರುಗಳ ಕನ್ನಡವೇ ಬೇರೆ, ಕುಂದಾಪುರ ಕನ್ನಡವಂತೂ ಬೇರೆಯೇ. ಹಾಗೇ ಉತ್ತರ ಕನ್ನಡದ ಕನ್ನಡ ಬೇರೆ. ಇನ್ನು ಈ ವಿವರವನ್ನು ಲಂಬಿಸಲಾರೆ. ಜಿಲ್ಲೆಗೊಂದು ಕನ್ನಡ, ತಾಲ್ಲೂಕಿಗೊಂದು ಕನ್ನಡ, ಊರಿಗೊಂದು ಕನ್ನಡ, ಜಾತಿಗೊಂದು ಕನ್ನಡ, ಕಸುಬಿಗೊಂದು ಕನ್ನಡ, ಎಷ್ಟು ಕನ್ನಡಗಳು!

ಮತ್ತೆ ನಮ್ಮ ಕಲಾ ಪ್ರಕಾರಗಳ ಕನ್ನಡವನ್ನೂ ಯೋಚಿಸಿ. ಕಥೆ ಹೇಳುವುದಕ್ಕೊಂದು ಕನ್ನಡ. ಪದ ಹೇಳುವುದಕ್ಕೊಂದು ಕನ್ನಡ, ಯಕ್ಷಗಾನಕ್ಕೊಂದು ಕನ್ನಡ, ಸಾಮಗಾನಕ್ಕೊಂದು ಕನ್ನಡ, ಭಜನೆಗೊಂದು ಕನ್ನಡ, ಹರಿಕತೆಗೊಂದು ಕನ್ನಡ, ಪೌರಾಣಿಕ ನಾಟಕಗಳಿಗೊಂದು ಕನ್ನಡ, ಐತಿಹಾಸಿಕ, ಸಾಮಾಜಿಕ ನಾಟಕಗಳಿಗೆ ಬೇರೆಯದೇ ಕನ್ನಡ. ಯಾವ ಕನ್ನಡ ಸರಿ? ಯಾವುದು ಸರಿಯಲ್ಲ? ಯಾವುದು ಮೇಲು? ಯಾವುದು ಕೀಳು? ವೈವಿಧ್ಯವನ್ನು ಗೌರವಿಸುವ, ಪ್ರೀತಿಸುವ ಮನಸ್ಸಿಗೆ ಇದು ಕೇಳಬೇಕಾದ ಪ್ರಶ್ನೆಯೇ ಅಲ್ಲ.

ಆಯಾ ಆಡುಭಾಷೆಗಳೆಲ್ಲವೂ ಆಯಾ ಜನಬದುಕಿನ ಸರ್ವ ಅನುಭವಗಳನ್ನೂ ಸೆರೆಹಿಡಿದುಕೊಂಡಿರುತ್ತವೆ. ನಮ್ಮ ಜೀವಕೋಶಗಳಲ್ಲಿರುವ ವಂಶವಾಹಿಗಳಲ್ಲಿ (Genes) ನಮ್ಮ ಮನುಕುಲದ ನಮ್ಮ ವಂಶದ ನಮ್ಮ ರಕ್ತಧಾರೆಯ ಗುಣಗಳೆಲ್ಲವೂ ಮುದ್ರೆಗೊಂಡಿರುವ ಹಾಗೆ.

ಕನ್ನಡದ ಶಿಷ್ಟ ಸಾಹಿತ್ಯವನ್ನು ಓದಿ ಆನಂದಿಸುವ ಹಾಗೆಯೇ ಕನ್ನಡದ ಆಡುಭಾಷೆಗಳನ್ನೂ ಕೇಳಿ ಆನಂದಿಸಿದರೆ, ಗೌರವಿಸಿದರೆ ಕನ್ನಡಾನುಭವದ ನಿಧಿಯೊಂದು ತೆರೆದುಕೊಳ್ಳುತ್ತದೆ.

‘ಇಂಗಿ ಹೋಗುತ್ತಿದೆ ಇಂಗ್ಲಿಷಿನ ಮರುಭೂಮಿಯಲಿ

ನಮ್ಮ ಮಕ್ಕಳ ಬುದ್ಧಿ ಶಕ್ತಿ ಪ್ರತಿಭಾ!

– ಕುವೆಂಪು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು