ಶನಿವಾರ, ಸೆಪ್ಟೆಂಬರ್ 25, 2021
23 °C

ಮರೆತುಹೋದ ಸ್ವಾತಂತ್ರ್ಯ ಹೋರಾಟಗಾರ್ತಿ

ಜ್ಯೋತಿ Updated:

ಅಕ್ಷರ ಗಾತ್ರ : | |

Prajavani

ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ, ಕರ್ನಾಟಕ ಮೂಲದ ಹೋರಾಟಗಾರರಲ್ಲಿ ಒಂದು ಅಪ್ರತಿಮ ಹೆಸರೆಂದರೆ, ಅದು ಉಮಾದೇವಿ ಕುಂದಾಪುರ ಅವರದು. ವರ್ತಮಾನದ ಪೀಳಿಗೆಗಂತೂ ಪರಿಚಯವೇ ಇಲ್ಲದ ಉಮಾದೇವಿಯವರ ದೇಶಸೇವೆ ಅನನ್ಯವಾದುದು. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದ ಅವರು ‘ಭಗಿನಿ ಮಂಡಲ್’ ಸ್ಥಾಪಿಸಿದರು. ಹಿಂದೂಸ್ತಾನಿ ‘ಸೇವಾದಳ’ದ ಮಹಿಳಾ ವಿಭಾಗದ ಮುಖ್ಯಸ್ಥೆಯಾಗಿದ್ದರು. ಮನೆ ಮನೆಗೆ ಭೇಟಿ ನೀಡಿ, ಮಹಿಳೆಯರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಒತ್ತಾಯದ ಕರೆ ನೀಡುತ್ತಿದ್ದರು.

ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದ ಅವರು ಚರಿತ್ರೆಕಾರರ ಗಮನಕ್ಕೆ ಅಷ್ಟಾಗಿ ಬೀಳಲಿಲ್ಲ. ಹಲವಾರು ಉನ್ನತ ಹುದ್ದೆಗಳು ಮತ್ತು ಪುರಸ್ಕಾರಗಳು ಅವರನ್ನು ಹುಡುಕಿಕೊಂಡು ಬಂದರೂ ನಯವಾಗಿ ನಿರಾಕರಿಸಿ, ಕೊನೆ ಗಳಿಗೆಯವರೆಗೆ ದೇಶ ಸೇವೆಯನ್ನು ಮಾಡಿದವರು ಅವರು.

ಮಂಗಳೂರಿನ ಗೋಳಿಕೇರಿ ಕೃಷ್ಣರಾವ್ ಮತ್ತು ತುಂಗಾಬಾಯಿ ದಂಪತಿಯ ಪುತ್ರಿಯಾಗಿ 1892ರಲ್ಲಿ ಅವರು ಜನಿಸಿದರು. ಆಗ ಅವರಿಗಿಟ್ಟ ಹೆಸರು ಭವಾನಿ ಎಂದು. ಗೋಳಿಕೇರಿ ಅವರ ಕುಟುಂಬ ಮುಂಬೈಗೆ ವಲಸೆ ಹೋಗಿತ್ತು. ಹೀಗಾಗಿ ಉಮಾಬಾಯಿಯವರು ಬಾಲ್ಯ ಕಳೆದಿದ್ದು ಅದೇ ಊರಿನಲ್ಲಿ. ಅವರ 13ನೇ ವಯಸ್ಸಿನಲ್ಲಿ ಸಂಜೀವ್ ರಾವ್ ಕುಂದಾಪುರ ಅವರೊಂದಿಗೆ ವಿವಾಹ ಮಾಡಲಾಯಿತು. ಅದೃಷ್ಟವಶಾತ್, ಅವರ ಮಾವ ಆನಂದ್ ರಾವ್, ಮಹಿಳಾ ಸಬಲೀಕರಣದಲ್ಲಿ ಅತೀವ ವಿಶ್ವಾಸ ಇಟ್ಟಿದ್ದರು. ಅವರ ಬೆಂಬಲದಿಂದಾಗಿ, ಉಮಾಬಾಯಿ, ವಿವಾಹ ನಂತರ ಶಿಕ್ಷಣ ಮುಂದುವರಿಸಿ, ಮೆಟ್ರಿಕ್ಯುಲೇಶನ್ ವಿದ್ಯಾಭ್ಯಾಸ ಮುಗಿಸಿದರು.

ಅತ್ತೆಯ ಸಹಾಯದೊಂದಿಗೆ ಮನೆಯಲ್ಲಿಯೇ ಮಹಿಳೆಯರಿಗೆ ಶಿಕ್ಷಣ ನೀಡುವ ಕಾಯಕವನ್ನು ಅವರು ಆರಂಭಿಸಿದರು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ್ ತಿಲಕ್ 1920ರಲ್ಲಿ ತೀರಿಹೋದಾಗ ಅವರ ಅಂತಿಮಯಾತ್ರೆಯನ್ನು ವೀಕ್ಷಿಸಲು ಬಂದಿದ್ದ ಜನಸಾಗರವನ್ನು ಕಣ್ಣಾರೆ ಕಂಡ ಉಮಾಬಾಯಿಯವರ ಬದುಕಿನ ದಿಕ್ಕೇ ಬದಲಾಯಿತು. ಇನ್ನುಮುಂದೆ ನಾನೂ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಯಂಸೇವಕಿಯಾಗಿ ತೊಡಗಿಸಿಕೊಳ್ಳಬೇಕು ಎಂದು ದೃಢ ಸಂಕಲ್ಪ ಮಾಡಿದರು. ಅನಂತರದ ದಿನಗಳಲ್ಲಿ, ಮಹಿಳಾ ಸ್ವಯಂ ಸೇವಕರೊಂದಿಗೆ ಮನೆ ಮನೆಗೆ ತೆರಳಿ, ಖಾದಿಯ ಪ್ರಚಾರ ಮಾಡುತ್ತಾ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವಂತೆ ಮಹಿಳೆಯರನ್ನೂ ಹುರಿದುಂಬಿಸಿದರು. ಈ ನಡುವೆ, ತಮ್ಮ 25ನೇ ವಯಸ್ಸಿನಲ್ಲಿ, ಕ್ಷಯರೋಗಕ್ಕೆ ತುತ್ತಾದ ಗಂಡನನ್ನು ಕಳೆದುಕೊಂಡು ವಿಧವೆಯಾದರು.

ಮಗನ ಮರಣಾನಂತರ ಆನಂದ ರಾವ್, ಹುಬ್ಬಳ್ಳಿಗೆ ಕುಟುಂಬ ಸಮೇತ ಬಂದರು. ಸೊಸೆಯಲ್ಲಿ ಆತ್ಮಸ್ಥೈರ್ಯ ತುಂಬಿ, ಸ್ವಾವಲಂಬಿಯಾಗಿ ಮಾಡಲು ‘ಕರ್ನಾಟಕ ಮುದ್ರಣಾಲಯ’ ಆರಂಭಿಸಿದರು. ಜೊತೆಗೆ, ಹೆಣ್ಣುಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ‘ಭಗಿನಿ ಮಂಡಲ್’ ಎನ್ನುವ ಸ್ವಯಂ ಸೇವಾ ಸಂಘಟನೆಯನ್ನು ಸ್ಥಾಪಿಸಿದರು. ಈ ಚಟುವಟಿಕೆಗಳ ಮಧ್ಯೆಯೂ ಉಮಾಬಾಯಿ ರಾಜ್ಯದಾದ್ಯಂತ ಪ್ರವಾಸ ಮಾಡಿ, ಮಹಿಳೆಯರನ್ನು ಸ್ವಾತಂತ್ರ್ಯ ಚಳವಳಿಗೆ ಕರೆತರಲೆಂದೇ ಬೀದಿ ನಾಟಕಗಳನ್ನು ಪ್ರದರ್ಶಿಸಿದರು. ಸಂಪ್ರದಾಯಸ್ಥ ಧಾರವಾಡದ, ವಿಧವಾ ಮಹಿಳೆಯರನ್ನೂ ಕೂಡ ಚಳವಳಿಗೆ ಕರೆತರುವ ಮೂಲಕ ಉಮಾಬಾಯಿ ತನ್ನ ಸಂಘಟನಾ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದರು.

ಅಮೆರಿಕದಿಂದ ವಾಪಸಾಗಿದ್ದ ಡಾ.ನಾ.ಸು.ಹರ್ಡಿಕರ್, ಯುವ ಜನತೆಯನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಉದ್ದೀಪನಗೊಳಿಸಲು 1921ರಲ್ಲಿ ‘ಹಿಂದೂಸ್ತಾನಿ ಸೇವಾ ದಳ’ವನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಿದರು. ಈ ಸಂಘಟನೆ ಸೇರಿಕೊಂಡ ಉಮಾಬಾಯಿ, ತಮ್ಮ ಕಾರ್ಯಕ್ಷಮತೆಯಿಂದ ಗಮನಸೆಳೆದು, ಮುಂದೆ ಅದರ ಮಹಿಳಾ ಘಟಕದ ಮುಖ್ಯಸ್ಥರಾಗಿ ನೇಮಕಗೊಂಡರು. ಹರ್ಡಿಕರ್ ಆರಂಭಿಸಿದ ‘ತಿಲಕ್ ಕನ್ಯಾ ಶಾಲೆ’ ಶಾಲೆಯ ಸಂಪೂರ್ಣ ಉಸ್ತುವಾರಿಯನ್ನೂ ಅವರು ವಹಿಸಿಕೊಂಡರು.

1924ರಲ್ಲಿ ಬೆಳಗಾವಿಯಲ್ಲಿ ಗಾಂಧೀಜಿಯ ಅಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದ ಸಂಘಟನಾ ಉಸ್ತುವಾರಿಯನ್ನು ಹರ್ಡಿಕರ್ ಮತ್ತು ಉಮಾಬಾಯಿಯವರಿಗೆ ವಹಿಸಲಾಗಿತ್ತು. ಉಮಾಬಾಯಿ ರಾಜ್ಯದಾದ್ಯಂತ ಪ್ರವಾಸ ಮಾಡಿ 150ಕ್ಕೂ ಹೆಚ್ಚಿನ ಮಹಿಳಾ ಸ್ವಯಂಸೇವಕರನ್ನು ನೇಮಿಸಿಕೊಂಡರು. ಇವರ ಶಿಸ್ತುಬದ್ಧ ಸಂಘಟನೆಗೆ ಮಾರುಹೋದ ಇನ್ನೊಬ್ಬ ಕನ್ನಡತಿ ಕಮಲಾದೇವಿ ಚಟ್ಟೋಪಾಧ್ಯಾಯ, ‘ನಾನು ಉಮಾಬಾಯಿಯವರ ಸಂಘಟನಾ ವೈಖರಿಯನ್ನು ನೋಡಿದಾಗಿನಿಂದ, ಅವರ ಕಟ್ಟಾ ಅನುಯಾಯಿಯಾಗಿದ್ದೇನೆ’ ಎಂದಿದ್ದರು.

ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ ಉಮಾಬಾಯಿಯವರನ್ನು ಯೆರವಾಡ ಜೈಲಿಗೆ ಹಾಕಲಾಯಿತು. ಅಲ್ಲಿ ಸರೋಜಿನಿ ನಾಯ್ಡು ಅವರ ಜೊತೆಯಲ್ಲಿದ್ದರು. ಆ ಸಮಯದಲ್ಲಿ, ಅವರಿಗೆ ಸದಾ ಬೆಂಬಲವಾಗಿದ್ದ ಅವರ ಮಾವ ತೀರಿಹೋಗಿದ್ದರು. ಜೈಲಿನಿಂದ ಬಿಡುಗಡೆಯಾದ ಉಮಾಬಾಯಿ ಅವರಿಗೆ ಬ್ರಿಟಿಷ್ ಸರ್ಕಾರ ಹಲವಾರು ನಿರ್ಬಂಧಗಳನ್ನು ಹಾಕಿತು. ಅವರ ಮುದ್ರಣಾಲಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಬಾಲಕಿಯರ ಶಾಲೆಯನ್ನು ಮುಚ್ಚಲಾಯಿತು ಹಾಗೂ ‘ಭಗಿನಿ ಮಂಡಲ್’ಅನ್ನು ಕಾನೂನು ಬಾಹಿರ ಸಂಘಟನೆಯೆಂದು ಘೋಷಿಸಲಾಯಿತು. ಈ ಎಲ್ಲಾ ತೊಂದರೆಗಳ ನಡುವೆ, ಅವರು ತಮ್ಮ ಚಿಕ್ಕ ಮನೆಯನ್ನೇ, ಮನೆಯಿಂದ ಪರಿತ್ಯಜಿಸಲ್ಪಟ್ಟ, ನಿರಾಶ್ರಿತ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಆಶ್ರಯತಾಣವನ್ನಾಗಿಸಿ, ಹೋರಾಟವನ್ನು ಮುಂದುವರಿಸಿದರು. 

ಬಿಹಾರದಲ್ಲಿ ಭೂಕಂಪದ ಸಂಭವಿಸಿದಾಗ ತಮ್ಮ ಸಂಘಟನೆಯ ಸದಸ್ಯರೊಂದಿಗೆ ಅಲ್ಲಿಗೆ ತೆರಳಿದ ಉಮಾಬಾಯಿ, ನಿರಾಶ್ರಿತರ ಬಿಡಾರದಲ್ಲಿಯೇ ಉಳಿದುಕೊಂಡು ರಾತ್ರಿ ಹಗಲೆನ್ನದೆ ಅವರ ಶುಶ್ರೂಶೆ ಮಾಡಿದರು. ಮುಂದೆ, 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ, ಉಮಾಬಾಯಿಯವರಿಗೆ ಅನಾರೋಗ್ಯದ ಕಾರಣದಿಂದ ಸ್ವತಃ ಭಾಗವಹಿಸಲಾಗದಿದ್ದರೂ, ಬ್ರಿಟಿಷ್ ಸರಕಾರದ ಕಣ್ಗಾವಲಿನಿಂದ ತಪ್ಪಿಸಿಕೊಂಡು ಭೂಗತರಾಗಿದ್ದ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಆಹಾರ ಪೂರೈಕೆ, ಹಣಕಾಸು ನೆರವು ಮತ್ತು ಆಶ್ರಯ ನೀಡುವ ಮೂಲಕ ಸಹಾಯ ಮಾಡಿದರು.

1946ರಲ್ಲಿ ಗಾಂಧೀಜಿ, ಉಮಾಬಾಯಿಯವರನ್ನು ಕಸ್ತೂರ್‌ಬಾ ಟ್ರಸ್ಟಿನ ಕರ್ನಾಟಕ ಶಾಖೆಯ ಮುಖ್ಯಸ್ಥರನ್ನಾಗಿ ನೇಮಿಸಿದರು. ಈ ಟ್ರಸ್ಟ್ ಅನ್ನು, ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ, ಮಕ್ಕಳ ಹಿತ ರಕ್ಷಣೆ ಮತ್ತು ಶಿಕ್ಷಣ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶದಿಂದ ಸ್ಥಾಪಿಸಲಾಗಿತ್ತು. ಯಾವುದೇ ಹಣಕಾಸಿನ ನೆರವು ಲಭ್ಯವಿಲ್ಲದ ಕಾರಣ, ಉಮಾಬಾಯಿ ತಾವೇ ಸ್ವತಃ ಬೀದಿಗಿಳಿದು ದೇಣಿಗೆಯನ್ನು ಸಂಗ್ರಹಿಸಿದರು. ಈ ಮೂಲಕ, ಅನೇಕ ಅನಾಥರು, ನಿರ್ಗತಿಕರು ಮತ್ತು ವಿಧವೆಯರಿಗೆ ವಿವಿಧ ವೃತ್ತಿ ಆಧಾರಿತ ಕೌಶಲ ತರಬೇತಿಗೆ ವ್ಯವಸ್ಥೆ ಮಾಡಿದರು.

ಉಮಾಬಾಯಿ ಇಷ್ಟೆಲ್ಲಾ ದೇಶ ಸೇವೆ ಮಾಡಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರೂ ಸ್ವಾತಂತ್ರ್ಯ ನಂತರ ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸುವ ಇಚ್ಛೆ ವ್ಯಕ್ತಪಡಿಸದೇ, ಸಮಾಜ ಸೇವೆಯನ್ನು ಮುಂದುವರಿಸುತ್ತಾ, ಅದರಲ್ಲಿಯೇ ತಮ್ಮನ್ನು ಗುರುತಿಸಿಕೊಂಡರು. ಹಾಗೆಯೇ ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಕೊಡುವ ತಾಮ್ರಪತ್ರ ಪ್ರಶಸ್ತಿ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊಡುವ ಪಿಂಚಣಿಯನ್ನೂ ನಿರಾಕರಿಸಿದರು. ಅತ್ಯಂತ ಸರಳವಾಗಿ ಬದುಕಿದ ಉಮಾಬಾಯಿ 1992ರಲ್ಲಿ, ನೂರನೇ ವಯಸ್ಸಿನಲ್ಲಿ, ಹುಬ್ಬಳ್ಳಿಯ ತಮ್ಮ ಪುಟ್ಟಮನೆಯಲ್ಲಿ ಅಸ್ತಂಗತರಾದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು