ಭಾನುವಾರ, ಸೆಪ್ಟೆಂಬರ್ 20, 2020
21 °C
ಕುರಿಗಾರರ ವಿಶಿಷ್ಟ ಆಚರಣೆ

ಪಂಚಮಿ ಹಬ್ಬದಲ್ಲಿ ಕುರಿಗಳಿಗೆ ಪೂಜೆ

ಕುಬೇರ ಮಜ್ಜಿಗಿ Updated:

ಅಕ್ಷರ ಗಾತ್ರ : | |

ನಾಗರಪಂಚಮಿ ಹಬ್ಬದಲ್ಲಿ ಕೆಲವರು ಹುತ್ತಕ್ಕೆ ಹಾಲು ಎರೆದು ಪೂಜಿಸುತ್ತಾರೆ. ಇನ್ನೂ ಕೆಲವರು, ಹುತ್ತದ ಮಣ್ಣನ್ನು ಮನೆಗೆ ತಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡುವಂತಹ ಸಂಪ್ರದಾಯವಿದೆ.

ಕೊಪ್ಪಳ ಸೇರಿದಂತೆ, ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕುರಿಗಾರರ ಕುಟುಂಬಗಳು ನಾಗರಪಂಚಮಿ ಯಲ್ಲಿ ಹುತ್ತಗಳನ್ನು ಹುಡುಕಿಕೊಂಡು ಹೋಗಿ, ಅವುಗಳ ಜತೆಗೆ ಕುರಿಗಳಿಗೂ ಪೂಜಿಸುತ್ತಾರೆ. ಈ ಮೂಲಕ ಪಂಚಮಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಇದು ನಡೆಯುವುದು ಪಂಚಮಿ ಹಬ್ಬದ ಮಾರನೆಯ ದಿನ.

ಪಂಚಮಿ ಹಬ್ಬ ಸಮೀಪಿಸುತ್ತಿದ್ದಂತೆ, ಕುರಿಗಾರರು ಮೊದಲು ಹುತ್ತಗಳನ್ನು ಹುಡುಕುತ್ತಾರೆ. ಹುತ್ತಗಳು ಸಾಮಾನ್ಯವಾಗಿ ಮುಳ್ಳು ಕಂಟಿಗಳಿಂದ ಮುಚ್ಚಿ ಹೋಗಿರುತ್ತವೆ. ಅಂಥ ಹುಲ್ಲುಮುಳ್ಳುಗಳ ಪೊದೆಯನ್ನು ತೆಗೆದು ಸ್ವಚ್ಛಗೊಳಿಸುತ್ತಾರೆ. ನಂತರ ಅಲ್ಲಿಗೆ ಕುರಿ ಹಿಂಡನ್ನು ಹೊಡೆದುಕೊಂಡು ಹೋಗುತ್ತಾರೆ. ಹುತ್ತಕ್ಕೆ ನೀರು ಚಿಮುಕಿಸಿ ಮುಂದೆ ಕಂಬಳಿ ಹಾಸುತ್ತಾರೆ. ಕಂಬಳಿಯ ಮೇಲೆ ಪೂಜಾ ಸಾಮಗ್ರಿಗಳನ್ನು ಜೋಡಿಸುತ್ತಾರೆ. ಜತೆಗೆ, ತಾವು ಉಪಯೋಗಿಸುವ ಕೊಡಲಿ, ಉಣ್ಣೆ ಕತ್ತರಿಸುವ ಕತ್ತರಿ, ಕುರಿ ಕಾಯುವ ಕೋಲಿನಂತಹ ಪರಿಕರಗಳನ್ನು ಹುತ್ತದ ಮುಂದಿಡುತ್ತಾರೆ.

ಮೊದಲು ಹುತ್ತಕ್ಕೆ ಪೂಜೆ ಸಲ್ಲಿಸುತ್ತಾರೆ. ನಂತರ ಎರಡು ಕುರಿ ಹಾಗೂ ಎರಡು ಟಗರುಗಳನ್ನು ಹಿಡಿದು ತಂದು ಅವುಗಳಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ. ಕುರಿ ಕಾಯುವ ಪರಿಕರಗಳನ್ನೂ ಪೂಜಿಸುತ್ತಾರೆ. ಎಲ್ಲರೂ ಕುರಿಗಳ ಕಾಲಿಗೆ ನಮಸ್ಕರಿಸುತ್ತಾರೆ. ಈ ಪೂಜೆಗೆ ಮನೆಮಂದಿ ಯಷ್ಟೇ ಅಲ್ಲ, ಬಂಧು ಬಾಂಧವರನ್ನು ಆಹ್ವಾನಿಸುತ್ತಾರೆ. ಹುತ್ತ ಹಾಗೂ ಕುರಿ ಹಿಂಡಿನ ಸುತ್ತ ಚರಗ (ಭೂಮಿಗೆ ಪ್ರಸಾದ ನೈವೇದ್ಯ) ಚೆಲ್ಲುತ್ತಾರೆ. ಎಲ್ಲರೂ ಹುತ್ತಕ್ಕೆ ಹಾಲೆರೆಯುತ್ತಾ ಭಕ್ತಿ ಅರ್ಪಿಸುತ್ತಾರೆ.

ಕಳೆದ ವರ್ಷದಿಂದ ಈ ಹಬ್ಬದಂದು ಆಗಷ್ಟೇ ಹುಟ್ಟಿದ ಕುರಿಮರಿಗಳನ್ನು ಹಿಡಿದು ತಂದು ಬಾಲದ ತುದಿ ಕತ್ತರಿಸಿ, ಅದನ್ನು ಹುತ್ತದ ಪೂಜೆಗೆ ಇಡುತ್ತಿದ್ದಾರೆ. ‘ಈ ರೀತಿ ಬಾಲ ಕತ್ತರಿಸಿ ಪೂಜೆ ಸಲ್ಲಿಸುವುದರಿಂದ ಕುರಿ ಹಿಂಡು ಹುಲುಸಾಗಿ ಬೆಳೆಯುತ್ತದೆ. ರೋಗ ರುಜಿನಗಳು ಬರುವುದಿಲ್ಲ’ ಎನ್ನುವುದು ಕುರಿಗಾರರ ನಂಬಿಕೆ.

ಪೂಜೆಯ ನಂತರ, ಬಂಧು ಬಾಂಧವರು, ಆಪ್ತೇಷ್ಟರೊಂದಿಗೆ ಭೋಜನ ಸವಿಯುತ್ತಾರೆ. ಹೋಳಿಗೆ, ತುಪ್ಪ, ಕುರಿ ಹಾಲು, ಹಪ್ಪಳ, ಸಂಡಿಗೆ, ಕರಿದ ಮೆಣಸಿನಕಾಯಿ, ಬದನೆಕಾಯಿ ಪಲ್ಯ, ಉಂಡೆ, ಅನ್ನ, ಹೋಳಿಗೆ ಸಾರು ಇತ್ಯಾದಿ ತರಹೇವಾರಿ ಭಕ್ಷ್ಯಗಳಿರುತ್ತವೆ. ಹೋಳಿಗೆ ಊಟದಲ್ಲಿ ಕುರಿ ಹಾಲು ವಿಶೇಷ.

ಈ ಆಚರಣೆಗೊಂದು ಪೌರಾಣಿಕ ಕಥೆಯೂ ಇದೆ; ಮಾಳಿಂಗರಾಯ ಎನ್ನುವವರು ತಪಸ್ಸು ಮಾಡಿ ದೇವರನ್ನು ಒಲಿಸಿಕೊಳ್ಳುತ್ತಾರೆ. ಆಗ ದೇವರು ಪ್ರತ್ಯಕ್ಷವಾಗಿ ‘ನಿನ್ನಿಂದ ಹೊಸ ಜೀವಿ ಸೃಷ್ಟಿಯಾಗುತ್ತದೆ. ಅದು ಹುತ್ತದಿಂದ ಹುಟ್ಟಿ ಬರುತ್ತದೆ’ ಎಂದು ಹೇಳುತ್ತಾನೆ. ಆಗ ಹುತ್ತದಿಂದ ಕುರಿಗಳು ಉದ್ಭವಿಸುತ್ತವಂತೆ. ಇದೊಂದು ಪುರಾಣದ ಕಥೆ, ಜನರಲ್ಲಿರುವ ನಂಬಿಕೆ. ಈ ಕಾರಣಕ್ಕಾಗಿಯೇ ಹುತ್ತದ ಹತ್ತಿರ ಪಂಚಮಿ ಹಬ್ಬದ ಮಾರನೆಯ ದಿನ ಕುರಿಗಳಿಗೆ ಪೂಜೆ ಮಾಡಲಾಗುತ್ತದೆ ಎಂದು ಗಬ್ಬೂರು ಗ್ರಾಮದ ಅಣ್ಣಪ್ಪ ಪೂಜಾರ ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು