ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ಗ್ರಾಮ ಭಾರತದ ಕೋವಿಡ್‌ ಡೈರಿ

Last Updated 25 ಮಾರ್ಚ್ 2023, 23:15 IST
ಅಕ್ಷರ ಗಾತ್ರ

ಕೃತಿ: ಅನ್ನದಾತ
ಲೇ: ಜಾಣಗೆರೆ ವೆಂಕಟರಾಮಯ್ಯ
ಪ್ರ: ಕಿರಂ ಪ್ರಕಾಶನ
ಸಂ: 7090180999

ಕೋವಿಡ್‌ ಕಾಲಘಟ್ಟ ಹಿರಿಯ ಪತ್ರಕರ್ತ, ಕಾದಂಬರಿಕಾರ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಬಹುವಾಗಿ ಕಾಡಿದಂತಿದೆ. ಈ ಸಂದರ್ಭದ ನೋವು–ಸಂಕಟಗಳಿಗೆ ಅವರ ಸೃಜನಶೀಲ ಮನಸ್ಸು ಯಾವ ಪರಿಯಲ್ಲಿ ಸ್ಪಂದಿಸಿದೆ ಎನ್ನುವುದಕ್ಕೆ ಇದೇ ಕಾಲಘಟ್ಟದಲ್ಲಿ ಬಂದ ಅವರ ಮೂರು ಕಾದಂಬರಿಗಳೇ ಸಾಕ್ಷಿ. ‘ಜಲಯುದ್ಧ’ ಮತ್ತು ‘ಭೂಮ್ತಾಯಿ’ ಕಾದಂಬರಿಗಳ ಮೂಲಕ ಸಹೃದಯರ ಮನಸೂರೆಗೊಂಡಿದ್ದ ಅವರೀಗ ‘ಅನ್ನದಾತ’ನ ಮೂಲಕ ಓದುಗರ ಮುಂದೆ ಬಂದಿದ್ದಾರೆ.

ಕೋವಿಡ್‌ ಕಾಲಘಟ್ಟ, ಮನುಷ್ಯತ್ವವನ್ನು ಪ್ರಸ್ತುತ ಸಮಾಜ ಎಷ್ಟೊಂದು ನಿಕೃಷ್ಟವಾಗಿ ಕಾಣುತ್ತಿದೆ ಎಂಬುದನ್ನು ಬಹು ಢಾಳಾಗಿ ತೋರಿಸಿದ ಸಂದರ್ಭವೂ ಆಗಿದೆ. ಕೊರೊನಾ ಕಾಟದಲ್ಲಿ ನಗರ, ಪಟ್ಟಣ ಪ್ರದೇಶಗಳ ಗೋಳಾಟಗಳೇನೋ ಕಣ್ಣಿಗೆ ಕುಕ್ಕುವಂತೆ ಎದ್ದುಕಂಡವು. ಆದರೆ, ಗ್ರಾಮಭಾರತವನ್ನು ಬಹುವಾಗಿ ನಿರ್ಲಕ್ಷಿಸಲಾಯಿತು. ಲಾಕ್‌ಡೌನ್‌ ಜಾರಿಯಾದಾಗಲೆಲ್ಲ ರೈತರು ಬೆಳೆದ ಹೂವು, ಹಣ್ಣು, ತರಕಾರಿ ಮಾರುಕಟ್ಟೆ ತಲುಪದೆ ಕೊಳೆತು ಹೋಗುತ್ತದೆ. ಬೆಳೆದ ಬೆಳೆಗಳು ಕಣ್ಣಮುಂದೆಯೇ ಮಣ್ಣು ಪಾಲಾದಾಗ ಅನ್ನದಾತನ ಕರುಳು ಚುರ‍್ರ್‌ ಎಂದಿದ್ದು ಯಾರ ಅನುಭವಕ್ಕೂ ದಕ್ಕದೇ ಹೋಯಿತು. ಇಂತಹ ಗ್ರಾಮಭಾರತ ಎಳೆ ಹಿಡಿದುಕೊಂಡ ರಚಿತವಾದ ಕಾದಂಬರಿಯೇ ‘ಅನ್ನದಾತ’.

ಆರಂಭದಲ್ಲಿ ಸಿನಿಮಾ ಕಥೆಯಂತೆ ಐ.ಟಿ. ಕಂಪನಿಯಲ್ಲಿ, ಉದ್ಯೋಗದ ಬದುಕಿನಲ್ಲಿರುವ ಬ್ಯುಸಿ ಬ್ಯುಸಿ ಪಾತ್ರಗಳಿಂದ ತೆರೆದುಕೊಳ್ಳುವ ಕಾದಂಬರಿ ಮುಂದೆ ಆರ್ದ್ರವಾಗುತ್ತಾ ಹೋಗಿದೆ. ಹಳ್ಳಿ ಜಗತ್ತಿನ ಕಡೆಗೆ ತಿರುಗಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೆಗೇರಿದರೂ ಗ್ರಾಮಪರ ಕಾಳಜಿ ಇರುವ ಕಥಾ ನಾಯಕ ಅವನ ಪ್ರಬುದ್ಧತೆಯನ್ನು ನಿರೂಪಿಸುತ್ತಾ ಹೋಗಿದೆ. ಅದರೊಳಗೆ ಸಾಂಸಾರಿಕ ಕಥನಗಳು ತೆರೆದುಕೊಂಡಿವೆ.ಇದ್ದಕ್ಕಿದ್ದಂತೆಯೇ ಘೋಷಣೆಯಾಗುವ ಲಾಕ್‌ಡೌನ್‌. ಅತಂತ್ರರಾಗುವ ರೈತರು, ಕೂಲಿಕಾರ್ಮಿಕರು, ಕಾಡುವ ಹಸಿವು, ಬದುಕಿನ ಹಪಹಪಿಕೆ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಕಾದಂಬರಿ ಕಟ್ಟಿಕೊಟ್ಟಿದೆ.

ಕಥಾನಾಯಕನ ನೇತೃತ್ವದಲ್ಲಿ ಆರಂಭವಾಗುವ ಕೋವಿಡ್‌ ಕಾಲದ ದಾಸೋಹಕ್ಕೆ ಊರಿನ ಮಂದಿಯೆಲ್ಲಾ ಕೈಜೋಡಿಸುವ ಸನ್ನಿವೇಶವಿದೆ. ಸರ್ಕಾರ, ನಮ್ಮನ್ನಾಳುವ ಮಂದಿ ಕೈ ಬಿಟ್ಟರೂ ಪರಸ್ಪರ ಕೈ ಹಿಡಿದುಕೊಂಡು ಬಾಳೋಣ ಎಂಬ ತಿರುಳನ್ನು ಈ ಸನ್ನಿವೇಶ ಕಟ್ಟಿಕೊಟ್ಟಿದೆ. ರೈತರ, ಜನರ ಸಂಕಷ್ಟಕ್ಕೆ ಉಡಾಫೆಯಿಂದ ಪ್ರತಿಕ್ರಿಯಿಸುವ ಜನಪ್ರತಿನಿಧಿಗಳ ಬಗ್ಗೆ ಪಾತ್ರಗಳು ಸಾತ್ವಿಕ ಆಕ್ರೋಶವನ್ನು ಹೊರಹಾಕುವ ಪರಿ ಚೆನ್ನಾಗಿ ಮೂಡಿಬಂದಿದೆ. ನಗರವಾಸಿ ಉದ್ಯಮಿಯೊಬ್ಬ ಹಳ್ಳಿಯಲ್ಲಿ ತನ್ನ ಅಸ್ತಿತ್ವ ಸ್ಥಾಪಿಸಿಕೊಳ್ಳುವುದು ಸುಲಭವಲ್ಲ. ಅವನು ಸಾಕಷ್ಟು ಅಡೆತಡೆಗಳನ್ನು ಎದುರಿಸಲೇಬೇಕಾಗುತ್ತದೆ. ತನ್ನವರು ಎನಿಸಿಕೊಂಡವರಿಂದಲೇ ಊಹಾತೀತ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ರಾಜಕಾರಣಕ್ಕಿಳಿದ ಕಥಾ ನಾಯಕನಿಗೆ ಕೊನೆಗೆ ದ್ರೋಹ ಎಸಗಿದವರು ತನ್ನವರೇ ಎಂದು ತಿಳಿಯುತ್ತದೆ. ಆಗ ಆತ ಎದುರಿಸುವ ಆಘಾತ ಊಹಾತೀತ.

ಗ್ರಾಮ ಭಾರತದಲ್ಲಿ ಏನೇನೋ ಅನಿವಾರ್ಯತೆಗೆ ಒಳಗಾಗಿ ರೈತರು ಭೂಮಿ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗುವ ಪ್ರಸಂಗಗಳೂ ಅಲ್ಲಲ್ಲಿ ಇಣುಕಿವೆ. ಇಲ್ಲಿ ಸಾಲ ಅಥವಾ ಇನ್ಯಾವುದೇ ಸಂಕಷ್ಟಕ್ಕೊಳಗಾಗಿ ಭೂಮಿಯ ಮಾರಾಟ ನಡೆಯುವುದಲ್ಲ. ಹಳ್ಳಿಗರ ಮುಂದಿನ ಪೀಳಿಗೆ ನಗರಮುಖಿಗಳಾಗಿ ಅಲ್ಲಿಯೇ ಬದುಕು ಕಟ್ಟಿಕೊಳ್ಳುವುದು, ಮೂಲ ಬೇರು ಮರೆತುಬಿಡುವುದೂ ರೈತರ ಭೂಮಿ ಮಾರಾಟಕ್ಕೆ ಕಾರಣ ಎನ್ನುವುದು ಮನಸ್ಸಿಗೆ ನಾಟುತ್ತದೆ.

ಕಾದಂಬರಿಯ ನಿರೂಪಣೆ ಅಲ್ಲಲ್ಲಿ ಲಂಬವಾದಂತಿದೆ. ಆದರೆ, ಕೋವಿಡ್‌ ಎರಡು ಅಲೆಗಳ ಕಾಲದ ಗ್ರಾಮ ಭಾರತದ ನೆನಪಿನ ಡೈರಿಯಂತೆ, ಅನ್ನದಾತರ ಭಾವನೆಗಳ ದಾಖಲೆಯಂತೆ, ಸಂಕಷ್ಟಕಾಲದಲ್ಲಿ ಉಳ್ಳವರ ಜವಾಬ್ದಾರಿ ನೆನಪಿಸುವ ಫಲಕದಂತೆ ಈ ಕಾದಂಬರಿ ಭಾಸವಾಗುತ್ತದೆ. ಬರಹದ ಜನಪರ ಆಶಯಕ್ಕೆ ತಕ್ಕಂತೆ ಈ ಕೃತಿಯನ್ನು ‘ಪ್ರಜಾವಾಣಿ’ಗೆ ಅರ್ಪಿಸಿದ್ದು ಗಮನಾರ್ಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT