ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾವಲಂಬನೆಯ ಬದುಕಿನ ಕೋಲ್ಮಿಂಚು

Last Updated 11 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ತಮ್ಮ ಅನುಭವ ಮತ್ತು ತಿಳಿವಳಿಕೆಗಳನ್ನು ಆಧರಿಸಿ ಮಹಿಳಾ ಲೋಕದ ಒಳಹೊರಗನ್ನು ಕಾಣಿಸಲು ಕನ್ನಡ ಹದಿನಾರು ಮಂದಿ ಜನಪ್ರಿಯ ಲೇಖಕಿಯರು ಈ ಕೃತಿಯಲ್ಲಿ ವಿಭಿನ್ನ ಪ್ರಯತ್ನವೊಂದನ್ನು ನಡೆಸಿದ್ದಾರೆ.

ಇಲ್ಲಿನ ಬಹುತೇಕ ಎಲ್ಲ ಬರಹಗಳಲ್ಲೂ ಕಾಣುವ ಒಂದು ಸಾಮಾನ್ಯ ಸಂಗತಿ ಎಂದರೆ, ಮಹಿಳೆಯರು ಶಿಕ್ಷಣ, ಆರ್ಥಿಕ ಸ್ವಾವಲಂಬನೆ ಎಟುಕಿಸಿಕೊಂಡರೆ ಎಲ್ಲ ಸವಾಲುಗಳನ್ನೂ ಎದುರಿಸಬಹುದೆಂಬ ಒಂದು ಅದಮ್ಯ ಭರವಸೆ. ತಮ್ಮಲ್ಲಿನ ಅರಿವನ್ನು ಜಾಗೃತಗೊಳಿಸಿದ ಘಟನೆ, ವ್ಯಕ್ತಿ, ವಿಷಯಗಳ ಬಗ್ಗೆ ಇಲ್ಲಿ ದಾಖಲಿಸಿದ್ದಾರೆ.ಲೇಖಕಿಯರು ಯಾರಿಂದ ಹೇಗೆ ಸ್ಫೂರ್ತಿ ಪಡೆದಿದ್ದಾರೆ, ಪಡೆಯುತ್ತಿದ್ದಾರೆ, ಅವರ ಬರಹಗಳಿಗೆ ಸ್ಫೂರ್ತಿಯಾದ ವಿಷಯಗಳಾದರೂ ಏನು ಎಂಬ ಕುತೂಹಲವನ್ನು ಈ ಹೊತ್ತಗೆ ತಣಿಸುತ್ತದೆ.

‘ನಿನ್ನ ನೀನು ಬದಲಾಯಿಸಿಕೊಳ್ಳಬಲ್ಲೆಯಾದರೆ ಮುನ್ನಡೆ’ ಸಂದೇಶ ನೀಡುವ ನೀಡಾ ಫಜ್ಲಿ ಅವರ ‘ಸಫರ್‌ ಮೆ ಧೂಪ ತೋ ಹೋಗಿ..’ ಗಝಲ್‌ನೊಂದಿಗೆ ಮುಕ್ತಾಯವಾಗುವ ತೇಜಸ್ವಿನಿ ಹೆಗಡೆ ಅವರ ‘ದಾರಿ ನೂರಾರಿವೆ ಬೆಳಕಿನರಮನೆಗೆ’ ಲೇಖನ; ಎಲ್ಲಿಯವರೆಗೆ ಪುರುಷರ ಎದೆಯೊಳಗೆ ಮನುಷ್ಯತ್ವದ ಸೆಲೆಯನ್ನು ಉಕ್ಕಿಸುವುದಿಲ್ಲವೋ, ಎಲ್ಲಿಯವರೆಗೆ ಹೆಣ್ಣು ಕೂಡ ಒಂದು ಜೀವ ಎಂದು ಬೆಳೆಸುವುದಿಲ್ಲವೋ ಅಲ್ಲಿಯವರೆಗೆ ಇದು ಸರಿಯಾಗುವುದಿಲ್ಲ, ಅಂದರೆ ಸಮಾಜ ಸರಿಹೋಗುವುದಿಲ್ಲ ಎಂಬ ವಿಷಾದವನ್ನು ಧ್ವನಿಸುವದೀಪ್ತಿ ಭದ್ರಾವತಿ ಅವರ ‘ನೆವಗಳು ಸಾಕೆನ್ನಿಸುವ ಹೊತ್ತಿದು’ ಗೆಳತಿಗೆ ಬರೆದ ಪತ್ರ ಸ್ವರೂಪದ ಲೇಖನ ಚಿಂತನಾರ್ಹವಾಗಿದೆ. ಹಾಗೆಯೇ ಎಲ್ಲವನ್ನೂ ಹೃದಯದಿಂದ ಯೋಚಿಸುವ ಬದಲು ಮೆದುಳಿನಿಂದಲೂ ಯೋಚಿಸೋಣ, ಈ ಅರಿವಿನ ಎಳೆಯೊಂದನ್ನು ಎದೆಯೊಳಗಿಳಿಸಿಕೊಳ್ಳುವುದೇ ಎಲ್ಲದರ ಆರಂಭ ಎನ್ನುವ ದೀಪಾ ಹಿರೇಗುತ್ತಿ ಅವರ ‘ನಾವೆಲ್ಲ ಅನನ್ಯವಾದವರು’ ಬರಹ ಓದಿನ ಆಪ್ತತೆಯನ್ನು ಹೆಚ್ಚಿಸುತ್ತದೆ.

ಸಾಕು ಹೆಣ್ಣುಮಗಳ ಶಾಪದ ಉಪಕಥೆಯಿಂದ ಆರಂಭಿಸುವ ಸಂಧ್ಯಾರಾಣಿಯವರ ‘ಅಗ್ನಿದಿವ್ಯದಲ್ಲಿ ಹುಟ್ಟುವ ನಗುವಿನ ನತ್ತು’ ಬರಹಹೆಣ್ಣಾಗಿ ಹುಟ್ಟಿದ್ದಕ್ಕೆ ಅನುಭವಿಸುವ ಸಂಕಟವನ್ನು ತೆರೆದಿಡುತ್ತದೆ. ಹೆಣ್ಣು ಮನಸು ಮಾಡಿದರೆ ಏನೆಲ್ಲ ಅಸಾಧಾರಾಣಗಳನ್ನು ಸಾಧ್ಯವಾಗಿಸುತ್ತಾಳೆ ಎನ್ನುವುದನ್ನು ಅನಾವರಣಗೊಳಿಸುತ್ತದೆ.

ನಂದಿನಿ ಹೊಸದುರ್ಗ ಅವರ ‘ಶಾಲು ಮತ್ತು ಸಬಲೆ’ ಬರಹ ಹೆಣ್ಣಿನ ಒಡಲಾಳದ ನೋವನ್ನು ಹೊರಗೆಡವುತ್ತಲೇ ಸಬಲೀಕರಣದ ಹಾದಿಯ ಕೋಲ್ಮಿಂಚನ್ನು ತೋರುತ್ತದೆ. ಪ್ರಿಯಾ ಕೆರ್ವಾಸೆ ಅವರ ‘ನಾ ಕಂಡ ಮೊದಲ ಜೀವವೇ ನನಗೆ ಸ್ಫೂರ್ತಿ’ ಲೇಖನ ಹೃದಯ ತಟ್ಟುತ್ತದೆ. ಹೀಗೆ ಈ ಕೃತಿಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಬರಹಗಳು ಓದಿನ ಸುಖವನ್ನು ದ್ವಿಗುಣಗೊಳಿಸುತ್ತವೆ. ಪುರುಷ ಪ್ರಧಾನಮನಸಿನಚಿಂತನೆಗಳು ಬದಲಾಗಬೇಕೆಂಬ ಸಂದೇಶವನ್ನು ಈ ಕೃತಿಯಲ್ಲಿರುವ ಪ್ರತಿ ಬರಹವೂ ಒಕ್ಕೊರಲಿನಿಂದ ಸಾರಿ ಹೇಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT