ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೈರ ಸಮಜೂತಿ: ಸೃಜನಶೀಲ ವ್ಯಾಪಾರ ಮತ್ತು ಭಾಷೆಯೆಂಬ ಹತಾರ!

Last Updated 7 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹೆಸರು: ಗೈರ ಸಮಜೂತಿ (ಕಾದಂಬರಿ)
ಲೇಖಕ
: ರಾಘವೇಂದ್ರ ಪಾಟೀಲ
ಪು: 456
ಬೆ: ₹ 450
ಪ್ರಕಾಶನ: ಮನೋಹರ ಗ್ರಂಥಮಾಲಾ, ಧಾರವಾಡ
ದೂ: 0836 2441823 (www.granthamala.com)

***

ಕನ್ನಡಕ್ಕೆ ಹಲವು ಮಹತ್ವದ ಕಥೆಗಳನ್ನೂ ‘ತೇರು’ವಿನಂಥ ಕಾದಂಬರಿಯನ್ನೂ ಕೊಟ್ಟಿರುವ ಬಹುಮುಖ್ಯ ಲೇಖಕ ರಾಘವೇಂದ್ರ ಪಾಟೀಲ. ಅವರು ತಮ್ಮ ಹೊಸ ಕಾದಂಬರಿ ‘ಗೈರ ಸಮಜೂತಿ’ಯ ಮೂಲಕ ಕಥನವಿಸ್ತಾರ ಮತ್ತು ಕೃತಿಯ ಗಾತ್ರ ಎರಡು ದೃಷ್ಟಿಯಿಂದಲೂ ದೊಡ್ಡ ಜಿಗಿತಕ್ಕೆ ಪ್ರಯತ್ನಿಸಿದ್ದಾರೆ. ನಾಲ್ಕುನೂರಕ್ಕೂ ಮಿಕ್ಕಿ ಪುಟಗಳಿರುವ ಈ ಕೃತಿ ಮೂರು ತಲೆಮಾರುಗಳ ಕಥನವ್ಯಾಪ್ತಿಯನ್ನು ಹೊಂದಿದೆ. ಹಲವು ಪಾತ್ರಗಳು, ಹಲವು ನಿರೂಪಣಾ ತಂತ್ರಗಳು, ಹಲವು ಭಾವತೀವ್ರ ಘಟ್ಟಗಳನ್ನು ಹೊಂದಿರುವ ಈ ಕೃತಿಯ ಓದು ಕಥನಕಾಡಿನೊಳಗೆ ಅಡ್ಡಾಡಿದ ಅನುಭವವನ್ನು ಕೊಡುತ್ತದೆ. ಇಲ್ಲಿ ಬಳಕೆಯಾಗಿರುವ ಭಾಷೆ ಹರಿಯುವ ನೀರಲ್ಲಿ ಕಾಲುಬಿಟ್ಟು ಕುಳಿತು ಜುಳುಜುಳು ನಿನಾದ ಕೇಳುತ್ತಿರುವ ಖುಷಿಯನ್ನು ಕೊಡುವಷ್ಟು ಜೀವಂತವಾಗಿದೆ.

ಪಾಟೀಲರ ಬರವಣಿಗೆ ಸಾವಧಾನದ ಬೆನ್ನೇರಿದ ಗಟ್ಟಿ ನಡಿಗೆ. ತಾನು ಹೆಜ್ಜೆ ಊರಿದ ಜಾಗದಲ್ಲಿ ಬರೀ ಪಾದದ ಆಕಾರವಷ್ಟೇ ಅಲ್ಲ, ಐದು ಬೆರಳುಗಳು, ಅದರಲ್ಲಿನ ರೇಖೆಗಳ ಗುರುತೂ ಸ್ಪಷ್ಟವಾಗಿ ಮೂಡಬೇಕು ಎಂಬ ವ್ಯವಧಾನದಿಂದ ಅವರು ಬರೆಯುತ್ತಾರೆ. ಕಣ್ಣಿಗೆ ಕಾಣದ ಸಂದಿಗೊಂದಿಗಳಲ್ಲೆಲ್ಲವೂ ಹಗೂರ ಹರಿದು ತುಂಬ ತುಂಬಿಕೊಂಡು ಏರುವ ನೀರಿನಂತೆ ಸಣ್ಣಪುಟ್ಟ ವಿವರಗಳನ್ನು ತುಂಬಿಸುವ ಮೂಲಕವೇ ಕಥನವನ್ನು ವಿಸ್ತರಿಸುತ್ತ ಹೋಗುತ್ತಾರೆ. ಇದು ಹಲವೆಡೆ ತುಸು ಭಾರವೆನಿಸುವುದೂ ಇದೆ.

ಒಂದು ಸೃಜನಶೀಲ ಕೃತಿಯನ್ನು – ಪಾತ್ರಗಳನ್ನು ಲೇಖಕನ ವೈಯಕ್ತಿಕ ನಿಲುವುಗಳು ನಿಯಂತ್ರಿಸಬೇಕೇ ಅಥವಾ ಅದು ಲೇಖಕನನ್ನೂ ಮೀರಿ ಬೆಳೆಯಬೇಕೇ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಇದಕ್ಕೆ ಇದಮಿತ್ಥಂ ಎಂದು ಹೇಳುವುದು ಸಾಧ್ಯವಿಲ್ಲದಿರಬಹುದು. ಆದರೆ ಹೀಗೆ ಲೇಖಕ ತನ್ನ ವೈಯಕ್ತಿಕ ಸಿದ್ಧಾಂತ–ನಿಲುವುಗಳನ್ನು ಬಲವಂತವಾಗಿ ಕೃತಿಯ ಮೇಲೆ ಹೇರಲು ಯತ್ನಿಸಿದಾಗಲೆಲ್ಲ ಸೃಜನಶೀಲತೆ ಸೊರಗಿರುವುದಕ್ಕೆ ಸಾಕಷ್ಟು ಉದಾಹರಣೆಗಳು ದೊರಕುತ್ತವೆ. ಈ ಚರ್ಚೆಯ ಹಿನ್ನೆಲೆಯಲ್ಲಿಯೂ ‘ಗೈರ ಸಮಜೂತಿ’ಯನ್ನು ಗಮನಿಸಬಹುದು. ಕುತೂಹಲದ ಸಂಗತಿಯೆಂದರೆ ಈ ಕಾದಂಬರಿಯ ಒಳಗೂ (‘ಜಯಂತಿ’ ಕಚೇರಿಯಲ್ಲಿ ನಡೆಯುವ ಚರ್ಚೆ) ಸೃಜನಶೀಲ ವ್ಯಾಪಾರದ ಕುರಿತೂ ಚರ್ಚೆ ಇದೆ!

ಎರಡು ಸಾವುಗಳ ವ್ಯೂ ಪಾಯಿಂಟ್‌ನಲ್ಲಿ ನಿಂತು ಈ ಕಾದಂಬರಿಯ ಕಥನದ ಹರಿವನ್ನು ನೋಡಬಹುದು. ಮೊದಲನೇ ಸಾವು, ಬೆಟಗೇರಿ ಕುಟುಂಬದ ಶಾಮರಾಯರ ಮಗ ಅಚ್ಯುತನ ದಾರುಣ ಸಾವು. ಇನ್ನೊಂದು ಜೋಷಿ ಮನೆತನದ ಸತ್ಯಬೋಧಾಚಾರರ ಕರುಣಾಜನಕ ಸಾವು.

ಇಲ್ಲಿ ಓದುಗ ಮತ್ತು ಕಥನದ ನಡುವೆ ಒಬ್ಬ ನಿರೂಪಕ ಇದ್ದಾನೆ. ಕಾದಂಬರಿಯ ಆರಂಭದಲ್ಲಿ ಅವನು ಆಗೀಗ ಹಣಕಿ ಮಾತಾಡಿ ಹೋಗುತ್ತಿರುತ್ತಾನೆ. ಆದರೆ ಅವನು ಈ ಭಾಗದಲ್ಲಿ ಸೂತ್ರಧಾರನಲ್ಲ. ನಡೆದಿದ್ದನ್ನು ವಿವರಿಸುತ್ತ ಹೋಗುವ ಲಿಪಿಕಾರನಷ್ಟೆ. ಅವನು ಪೂರ್ತಿಯಾಗಿ ಓದುಗನ ಎದುರಿಗೆ ಬರುವುದು ಅಚ್ಯುತನ ಸಾವಿನ ದಾರುಣ ಸಂದರ್ಭದಲ್ಲಿ; ಅದೂ ಪೂರ್ತಿ ಅಸಹಾಯಕನಾಗಿ. ‘ಅಯ್ಯೋ ನಾ ವಲ್ಲಿನೆಪಾ! ಅಲ್ಲಿ ಮಡುಗಟ್ಟಿದ್ದೂ... ರಭಸದಿಂದ ಧುಮ್ಮಿಕ್ಕುವದೂ... ವಿಜೃಂಭಿಸುವ ಸೆಳವು ಸೆಳೆಕೊಂಡು ಹೋಗುವಂಥಾದ್ದೂ... ಹಿಂಗ ನಾನಾ ಸ್ವರೂಪದೊಳಗ... ಏಕಕಾಲದೊಳಗೇ ಅಸ್ತಿತ್ವದಲ್ಲಿ ಇರುವಂಥ... ಆ ಶೋಕವನ್ನು... ನಾನು, ನಾನೆಂಬ ಒಬ್ಬ ಗರೀಬ ಲೇಖಕ..! ಈ ಒಬ್ಬಂಟಿ ಮನಶಾ ಅನ್ನುವ ನಾನು ಹೆಂಗ ನಿಭಾಯಿಸಲ್ಯೋ..!’ ಎಂದು ತಾನು ಸೃಷ್ಟಿಸಿದ ಪಾತ್ರದ ದುರಂತವನ್ನು ತಾನೇ ತಡೆಯಲಾಗದ ಅಸಹಾಯಕತೆಯಲ್ಲಿ ದುಃಖಿಸುವ ನಿರೂಪಕ, ಆ ಸಾವಿನ ಗಾಢತೆಯನ್ನು ಎಷ್ಟು ತೀವ್ರವಾಗಿ ಚಿತ್ರಿಸುತ್ತಾನೆಂದರೆ ಪಾತ್ರಗಳ ಬಿಸಿಯುಸಿರು, ಉಗ್ಗಡಿಸುವ ದುಃಖದ ಕೊಸರು ನಮ್ಮನ್ನೂ ಕಾಡಿ ಕಂಗೆಡಿಸುತ್ತದೆ; ಹನಿಗಣ್ಣಾಗಿಸುತ್ತದೆ. ಲೇಖಕನ ನೋವು ನಮ್ಮದೂ ಆಗುತ್ತದೆ. ಸೃಜನಶೀಲತೆಯ ಸಾರ್ಥಕತೆ ಇರುವುದು ಇಲ್ಲಿಯೇ ಅಲ್ಲವೇ?

ಆದರೆ ‘ವಲ್ಲಿನೆಪಾ’ ಎಂದ ಅಸಹಾಯಕ ನಿರೂಪಕನೇ ಇಲ್ಲಿಂದ ಮುಂದೆ ಮೆಲ್ಲ ಮೆಲ್ಲಗೆ ಮುನ್ನೆಲೆಗೆ ಬರಲಾರಂಭಿಸುತ್ತಾನೆ. ಅಚ್ಯುತನ ಸಾವಿನ ಸಂದರ್ಭದಲ್ಲಿ ಪಾತ್ರಗಳ ದುರಂತಕ್ಕೆ ತತ್ತರಿಸಿಹೋಗಿದ್ದ ನಿರೂಪಕ ಮುಂದೆ ಸತ್ಯಬೋಧಾಚಾರರ ಸಾವಿನ ಹೊತ್ತಿಗೆ ಪೂರ್ತಿ ಬದಲಾಗಿದ್ದಾನೆ; ತನಗೆ ಬೇಕಾದ ದಾರಿಯಲ್ಲಿ ಕಥನವನ್ನು ಹರಿಸುವಷ್ಟು ಬಲಿಷ್ಠನಾಗಿದ್ದಾನೆ; ತನ್ನ ಮಾತುಗಳನ್ನು ಪಾತ್ರಗಳ ಮೇಲೆ ಹೇರುವಷ್ಟು ಬುದ್ಧಿವಂತನಾಗಿದ್ದಾನೆ. ಪೊಲಿಟಿಕಲಿ ಕರೆಕ್ಟ್ ಆಗಿದ್ದಾನೆ; ಸೃಜನಶೀಲ ವ್ಯಾಪಾರದ ದೃಷ್ಟಿಯಿಂದ ಕರಪ್ಟ್‌ ಕೂಡ ಆಗಿದ್ದಾನೆ. ತನಗೆ ಕಂಡಿದ್ದನ್ನು ಹೇಳುವಷ್ಟೇ ಸಲೀಸಾಗಿ ಕಾಣದ ಸಂಕೀರ್ಣ ಸಂಗತಿಗಳನ್ನೂ ಕಂಡಂತೆ ಕಪ್ಪು ಬಿಳುಪಾಗಿ ಬರೆಯಲು ಹಿಂಜರಿಯದಷ್ಟು ಮೈಚಳಿ ಬಿಟ್ಟಿದ್ದಾನೆ. ಈಗ ಭಾಷೆಯೆಂಬುದು ಅವನ ಕೈಯಲ್ಲಿ ಸಿಕ್ಕಿದ ಹರಿತ ಆಯುಧವಾಗಿದೆ. ಹಾಗಾಗಿಯೇ ಸತ್ಯಬೋಧಾಚಾರರ ಸಾವಿನ ಸನ್ನಿವೇಶವನ್ನು ನಿರೂಪಿಸುವಾಗ ನಿರೂಪಕನಿಗೂ ಭಾಷೆ ಸೋಲುತ್ತದೆ ಅನಿಸುವುದಿಲ್ಲ! ಹಾಗಾಗಿಯೇ ಅಚ್ಯುತನ ಸಾವಿನಷ್ಟು ಸತ್ಯಬೋಧಾಚಾರರ ಸಾವು ಗಾಢವಾಗಿ ತಟ್ಟುವುದಿಲ್ಲ. ಈ ನಿರೂಪಕನ ರಾಜಕೀಯವೂ ನಮಗೆ ಪರ್ಯಾಯವಾದ ಕಥನವೊಂದನ್ನೇ ಹೇಳುತ್ತಿರುವ ಹಾಗೆ ಭಾಸವಾಗುತ್ತದೆ. ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತದೆ.

‌ಸ್ವಾತಂತ್ರ್ಯ ಹೋರಾಟ ಮತ್ತು ಮಹಾತ್ಮ ಗಾಂಧಿ ಛಾಯೆ ಇಡೀ ಕಾದಂಬರಿಯುದ್ದಕ್ಕೂ ಅಲ್ಲಲ್ಲಿ ಬರುತ್ತ ಹೋಗುತ್ತದೆ. ಆದರೆ ಮೊದಲರ್ಧದಲ್ಲಿ ಬಂದಷ್ಟು ಸಹಜವಾಗಿ ದ್ವಿತೀಯಾರ್ಧದಲ್ಲಿ ಅದು ಕಥನದೊಳಗೆ ಹೆಣೆದಿಲ್ಲ. ಕಥನ ನಡೆಯುತ್ತಿರುವ ಜಗತ್ತಿಗೆ ಅನ್ಯ ಅಥವಾ ಪರೋಕ್ಷವಾದದ್ದನ್ನೇನೋ ಬಲವಾಗಿ ನುಗ್ಗಿಸುವ ಪ್ರಯತ್ನ ಮಾಡಿದಂತೆ ಭಾಸವಾಗುತ್ತದೆ. ಈ ಭಾವ ಹುಟ್ಟಲು ಕಾರಣ ಏನಿರಬಹುದು ಎಂದು ಯೋಚಿಸಿದರೆ ಮತ್ತೆ ಎದ್ದು ಕಾಣುವುದು ನಿರೂಪಕನ ರಾಜಕೀಯ. ನಿರೂಪಕನಿಗೆ ತಾನು ಗಾಂಧಿಭಕ್ತ (ಇವನು ಇಂದಿನ ಹಲವು ಸೋ ಕಾಲ್ಡ್ ಗಾಂಧಿವಾದಿಗಳನ್ನು ನೆನಪಿಸುತ್ತಾನೆ) ಎಂದು ಬಿಂಬಿಸಿಕೊಳ್ಳುವ ಹವಣಿಕೆ ಎದ್ದು ಕಾಣುತ್ತದೆ. ಅದಕ್ಕಿಂತ ಹೆಚ್ಚಾಗಿ, ಸಂಕೀರ್ಣ ಇತಿಹಾಸದ ನಡೆಗಳನ್ನು, ತನಗೆ ಬೇಕಾದಷ್ಟೇ ಎತ್ತಿಕೊಂಡು, ಬೇಕಾದ ಹಾಗೆ ಜೋಡಿಸಿಕೊಂಡು, ನ್ಯಾಯಾಧೀಶನ ಧ್ವನಿಯಲ್ಲಿ ನಿರೂಪಿಸುವ ಸೈದ್ಧಾಂತಿಕ ಉದ್ದೇಶವೂ ಇದೆ. ಹಾಗಾಗಿಯೇ ಗಾಂಧಿಯ ನೆರಳೊಂದಿಗೆ ಅನುಸಂಧಾನ ನಡೆಸಿದವರೂ ಆಡಲಾರದ ಮಾತುಗಳನ್ನು ಇಲ್ಲಿ ನಿರೂಪಕ ಆಡುತ್ತಾನೆ. ನಿರೂಪಕನ ಸೈದ್ಧಾಂತಿಕ ಬದ್ಧತೆ ಮುನ್ನೆಲೆಗೆ ಬರುತ್ತ ಹೋದ ಹಾಗೆಲ್ಲ ಕಾದಂಬರಿ ತನ್ನ ಬಿಗಿ ಕಟ್ಟುಗಳನ್ನು ಬಿಚ್ಚಿಕೊಳ್ಳುತ್ತ ಅಳ್ಳಕವಾಗುತ್ತ ಹೋಗುತ್ತದೆ. ಪಾತ್ರಗಳು ನಿರೂಪಕನ ಮಾತುಗಳನ್ನು ತಮ್ಮ ಬಾಯಲ್ಲಿ ಆಡುತ್ತ ಬಡವಾಗುತ್ತ ಹೋಗುತ್ತವೆ. ಗಾಢವಾದ ಅನುಭವದ ಮೂಲಕ ಜೀವನದರ್ಶನವನ್ನು ಕಾಣಿಸಬಹುದಾಗಿದ್ದ ಕೃತಿಯೊಂದು ಈ ವೈರುಧ್ಯದ ಬಿರುಕಿನಲ್ಲಿಯೇ ಕುಸಿಯುತ್ತದೆ. ಈ ಕುಸಿತದ ಮುಂದೆ, ಕೊನೆಯಲ್ಲಿ ಬರುವ ವಚ್ಚಕ್ಕನ ಭಾವಪೂರ್ಣ ಇಮೇಜ್ ಕೂಡ ಮಂಕಾಗಿಬಿಡುತ್ತದೆ.

ಪ್ರತಿಭಾವಂತ ಲೇಖಕನ ಸೃಜನಶೀಲತೆಯ ಜಿಗಿತ ಮತ್ತು ಕುಸಿತ ಎರಡನ್ನೂ ಅರಿಯಲು ‘ಗೈರ ಸಮಜೂತಿ’ ಒಳ್ಳೆಯ ಓದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT