ಶನಿವಾರ, ಅಕ್ಟೋಬರ್ 16, 2021
22 °C

ಪುಸ್ತಕ ವಿಮರ್ಶೆ: ಸಿನಿ ಮಾಯಾಲೋಕದಲ್ಲಿ ಹಗುರ ವಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಸರು: ಸಿನಿಮಾಯಾಲೋಕ
ಲೇಖಕಿ:
ಎನ್. ಸಂಧ್ಯಾರಾಣಿ
ಪು: 208 ಬೆ: ₹ 200
ಪ್ರಕಾಶನ: ಸಾವನ್ನಾ
ದೂರವಾಣಿ: 9036312786
ವೆಬ್‌ಸೈಟ್: www.sawannabooks.com

ಕನ್ನಡದ ಬಹುತೇಕ ಸಿನಿಕರ್ಮಿಗಳಿಗೆ ಬರವಣಿಗೆ ಅಥವಾ ಸಾಹಿತ್ಯ ಎನ್ನುವುದು ಮುಖ್ಯ ಎಂದು ಅನಿಸಿಲ್ಲ ಎಂಬುದು ಎಷ್ಟು ಸತ್ಯವೋ, ಕನ್ನಡದ ಬಹುತೇಕ ಸಾಹಿತಿಗಳು ಸಿನಿಮಾ ಮಾಧ್ಯಮವನ್ನು ನಿರ್ಲಕ್ಷ್ಯದಿಂದ ನೋಡುತ್ತಾರೆ ಎಂಬುದೂ ಅಷ್ಟೇ ಸತ್ಯ. ಹಾಗಾಗಿಯೇ ಇರಬೇಕು, ಕನ್ನಡದಲ್ಲಿ ಸಿನಿಮಾ ಕುರಿತು ಸಾಹಿತ್ಯ ಬಹಳೇ ಅನ್ನುವಷ್ಟು ಕಡಿಮೆ. ಹಾಗೊಮ್ಮೆ ಬಂದಿರುವ ಕೆಲವೇ ಕೆಲವು ಒಳ್ಳೆಯ ಪುಸ್ತಕಗಳ ಬಗ್ಗೆ ಚರ್ಚೆ ನಡೆದಿದ್ದು ಇಲ್ಲವೇ ಇಲ್ಲ ಎನ್ನುವಷ್ಟು ಅಪರೂಪ. 

ಎನ್‌. ಸಂಧ್ಯಾರಾಣಿ ಅವರು ಬರೆದಿರುವ ‘ಸಿನಿ ಮಾಯಾಲೋಕ’ ಪುಸ್ತಕ ಈ ದೃಷ್ಟಿಯಿಂದ ಗಮನಾರ್ಹ ಕೃತಿಯಾಗಿದೆ. ಇವು ಸಿನಿಮಾದ ಬಗೆಗಿನ ಪ್ರೀತಿಯಿಂದ, ಆ ಪ್ರೀತಿಯನ್ನು ಇತರರಿಗೂ ಹಂಚುವ ಉದ್ದೇಶದಿಂದ ಹುಟ್ಟಿಕೊಂಡ ಬರಹಗಳು. ಇದನ್ನು ಬರೆದಿದ್ದು ‘ಲೇಖಕಿ’ ಎನ್ನುವುದನ್ನೂ ಒತ್ತಿ ಹೇಳಲೇಬೇಕು.

ಒಟ್ಟು ಮೂವತ್ತು ಸಿನಿಮಾಗಳ ಕುರಿತಾದ ಬರಹಗಳು ಇಲ್ಲಿವೆ. ವಿಮರ್ಶೆಯಾಗಲಿ, ಸಿನಿಮಾ ಪ್ರಕಾರದ ಗಂಭೀರ ಮೌಲ್ಯಮಾಪನವಾಗಲಿ ಈ ಬರಹಗಳ ಉದ್ದೇಶ ಅಲ್ಲ. ಯಾವುದೋ ಒಳ್ಳೆಯ ಸಿನಿಮಾ ನೋಡಿ ಬಂದಾಗ ಮನೆಯಲ್ಲಿ ಎಲ್ಲರ ಎದುರೂ ಆ ಸಿನಿಮಾದ ಕುರಿತು ಹೇಳುತ್ತೇವಲ್ಲ, ಆ ಆಪ್ತಧಾಟಿಯಲ್ಲಿ ಈ ಬರಹಗಳಿವೆ. ಹಾಗಾಗಿಯೇ ಲೇಖಕಿಗೆ ನಿರ್ದೇಶಕನ ಇಂಗಿತ ಏನಿರಬಹುದು ಎಂಬ ಕುತೂಹಲದಷ್ಟೇ ಸಿನಿಮಾದ ಕಥೆಯೂ ಮುಖ್ಯ. ತಾಂತ್ರಿಕ ಅಂಶಗಳು, ನಟನೆ, ನಿರೂಪಣಾ ಕ್ರಮ ಇಂಥ ಸಿನಿಮಾ ವ್ಯಾಕರಣಕ್ಕಿಂತ ಎಲ್ಲ ಎಲ್ಲೆಗಳ ಮೀರಿ ಮನಸೊಳಗೆ ಇಳಿಯುವ ಸನ್ನಿವೇಶಗಳು ಮುಖ್ಯ.

ಲೇಖಕಿ ಮುನ್ನುಡಿಯಲ್ಲಿಯೇ ಹೇಳಿಕೊಂಡಂತೆ, ಸಿನಿಮಾಗಳನ್ನು ಭೇದವಿಲ್ಲದೆ ನೋಡುವ ಗುಣ ಈ ಬರಹಗಳಲ್ಲಿಯೂ ಎದ್ದು ಕಾಣುತ್ತದೆ. ಹಾಗಾಗಿಯೇ ‘96’ನಂಥ ವ್ಯಾಪಾರಿ ಗೆಲುವಿನ ಸಿನಿಮಾವನ್ನೂ, ಅಸ್ಗರ್ ಫರ್ಹಾದಿಯ ಸಿನಿಮಾಗಳನ್ನೂ ಅಷ್ಟೇ ಉತ್ಸುಕತೆಯಿಂದ ಎದುರಾಗಲು ಸಾಧ್ಯವಾಗಿದೆ. ಎಲ್ಲ ಬಗೆಯ ಸಿನಿಮಾಗಳನ್ನೂ ಅವರು ನೋಡುವುದು ಕಾವ್ಯದ ಕಣ್ಣಿನಿಂದಲೇ ಎನ್ನುವುದಕ್ಕೆ ಇಲ್ಲಿನ ಬರಹಗಳ ಶೀರ್ಷಿಕೆಯೇ ಪುರಾವೆಯೊದಗಿಸುತ್ತದೆ.

‘ಈ ಬರಹಗಳ ಜೊತೆಯಲ್ಲಿ ನನ್ನ ಬದುಕಿನ ಒಂದು ಭಾಗವನ್ನೂ ಕೊಡುತ್ತಿದ್ದೇನೆ. ದಯವಿಟ್ಟು ಒಪ್ಪಿಸಿಕೊಳ್ಳಿ...’ ಎಂಬ ಲೇಖಕಿಯ ಮಾತು ಅವರ ಸಿನಿಮಾ ಪ್ರೀತಿಯನ್ನು ಎತ್ತಿತೋರಿಸುವಂತಿದೆ. ಈ ಭಾಗದಲ್ಲಿ ಕನ್ನಡ ಸಿನಿಮಾಗಳ ಪಾಲನ್ನೂ ಸೇರಿಸಿ ಕೊಟ್ಟಿದ್ದರೆ ಅದರ ಸೊಬಗು ಇನ್ನಷ್ಟು ಹೆಚ್ಚುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು