ಭಾನುವಾರ, ಅಕ್ಟೋಬರ್ 25, 2020
22 °C

ಜಿಹ್ವಾರಸ ಉಕ್ಕಿಸುವ ಮೀನೂಟದ ಪರಿಮಳ

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಸಾಹಿತ್ಯದ ಮಂದ್ರವಾದ ಹೊನಲಿನ ಹರಿವಿಗೆ ಪ್ರವಾಸ ಕಥನಗಳೆಂಬ ತೊರೆಗಳು ಯರ‍್ರಾಬಿರ್‍ರಿಯಾಗಿ ಬಂದು ಸೇರುತ್ತಿರುವುದು ಇತ್ತೀಚಿನ ವರ್ಷಗಳ ವಿದ್ಯಮಾನ. ಹೊಸ ನೀರಿನಿಂದ ಹೊನಲಿನ ಹರಿವೇನೋ ಹೆಚ್ಚುವುದು, ನಿಜ. ಆದರೆ, ಆ ‘ಪ್ರವಾಹ’ದ ‘ಕೊಚ್ಚೆ–ಕೆಸರು’ ಮಾತ್ರ ಪಾತ್ರದೊಳಗಡೆ ಹಾಗೇ ಉಳಿದುಬಿಡುತ್ತದೆ. ಹಾಗೆ ಕೆಸರಾಗಿ ಉಳಿಯದೆ ಹೊನಲಿನ ಸೊಬಗನ್ನೂ ಹೆಚ್ಚಿಸುವ ಒಂದು ಅಪರೂಪದ ಪ್ರವಾಸ ಕಥನದ ತೊರೆಯೇ ಸಮಂತ್‌ ಸುಬ್ರಮಣಿಯನ್‌ ಅವರ ‘ಫಾಲೋಯಿಂಗ್‌ ಫಿಶ್‌’. ಇಂಗ್ಲಿಷ್‌ನ ಈ ಮೀನು ಇದೀಗ ಕನ್ನಡದ ಕೊಳವನ್ನೂ ಹುಡುಕಿಕೊಂಡು ಬಂದಿದೆ.       

ಬಂಗಾಲ ಕೊಲ್ಲಿಯ ಕೋಲ್ಕತ್ತದಿಂದ ಮೀನಿನ ಜಾಡನ್ನು ಹಿಡಿದು ಶುರುವಾಗುವ ಸಮಂತ್‌ ಅವರ ಪರ್ಯಟನ, ಹಿಂದೂ ಮಹಾಸಾಗರವನ್ನೂ ದಾಟಿಕೊಂಡು ಗುಜರಾತ್‌ನ ಅರಬ್ಬಿ ತೀರದ ಮಾಂಗ್ರೋಳ್‌ವರೆಗೂ ಬಂದು ನಿಲ್ಲುತ್ತದೆ. ಭಾರತದ ಕರಾವಳಿಗುಂಟ ಮೀನಿನ ಸಂಸ್ಕೃತಿಯನ್ನು ಶೋಧಿಸುತ್ತಾ ಸಾಗುವ ಈ ಪ್ರವಾಸ ಕಥನದಲ್ಲಿ ಕಿಕ್ಕಿರಿದ ವಿವರಗಳು ಓದುಗರಿಗೆ ಕಚಗುಳಿ ಇಡುತ್ತಾ ಹೋಗುತ್ತವೆ; ಮಾತ್ರವಲ್ಲ, ಕರಾವಳಿಯಲ್ಲಿ ಮೀನಿಗೆ ಅರೆಯುವ ವಿಧ ವಿಧದ ಮಸಾಲೆಗಳ ಪರಿಮಳವು ನೇರವಾಗಿ ಮೂಗಿನ ಒಳಭಾಗಕ್ಕೇ ಹೊಕ್ಕಂತಾಗಿ ಜಿಹ್ವಾರಸವೂ ಉಕ್ಕಿ ಹರಿಯುವಂತೆ ಮಾಡುತ್ತವೆ. ಎಂದಿಗೂ ಮೀನೂಟ ಮಾಡದವರನ್ನೂ ಮೀನು ಕರಿಯನ್ನೋ, ರವಾ ಫ್ರೈಯನ್ನೋ ಹುಡುಕಿಕೊಂಡು ಹೋಗುವಂತೆಯೂ ಪ್ರೇರೇಪಿಸುತ್ತವೆ!

ನಮ್ಮ ದೇಶದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಬಿಡಿ, ಜಿಲ್ಲೆಯಿಂದ ಜಿಲ್ಲೆಗೂ ಸಂಸ್ಕೃತಿಯಲ್ಲಿ ಅದೆಷ್ಟೊಂದು ವ್ಯತ್ಯಾಸ ಇದೆ, ಅಲ್ಲವೇ? ಆದರೆ, ದೇಶದ ಇಡೀ ಕರಾವಳಿಯನ್ನು ಸುತ್ತಿಬಂದ ಲೇಖಕರಿಗೆ ತಮಿಳುನಾಡಿನ ಮೀನುಗಾರನೊಬ್ಬ ಗುಜರಾತಿನ ಮೀನುಗಾರನಂತೆಯೇ ಕಂಡಿದ್ದಾನೆ. ಸಮುದ್ರ ತೀರದಗುಂಟ ವಾಸಿಸುವ ಜನರ ಬದುಕಿನ ಲಯ ಮತ್ತು ಅಭ್ಯಾಸ ಬಹುಮಟ್ಟಿಗೆ ಒಂದೇ ತೆರನಾಗಿ ಗೋಚರಿಸಿವೆ. ಹಾಗೆಯೇ ತೀರದುದ್ದಕ್ಕೂ ಸಾಂಪ್ರದಾಯಿಕ ಮೀನುಗಾರರ ಕುಟುಂಬಗಳು ತಮ್ಮ ಉದ್ಯೋಗ, ವ್ಯಾಪಾರದಿಂದ ದೂರ ಸರಿಯುತ್ತಿರುವ ವಿಷಾದವೂ ಅವರನ್ನು ಕಾಡಿದೆ.

ಪ್ರವಾಸವನ್ನು ಹೀಗೂ ಮಾಡಬಹುದೇ ಎಂದು ಬೆರಗುಗೊಳಿಸುವ ಈ ಕೃತಿಯು ತೆರೆದಿಡುತ್ತಿರುವ ಲೋಕವಂತೂ ಅನನ್ಯವಾದುದು, ಅನ್ಯಾದೃಶವಾದುದು. ಬಂಗಾಲ ಕೊಲ್ಲಿಯ ಭಾಗದ ಊಟದಲ್ಲಿ ಹಿಲ್ಸಾ ಮೀನಿಗೇ ಅಗ್ರಸ್ಥಾನವಂತೆ. ಅದರಲ್ಲೂ ಹಿಲ್ಸಾ ಬಳಸಿ ತಯಾರಿಸುವ ಖಾದ್ಯಗಳಲ್ಲಿ ‘ಶೋರ್ಶೆ ಇಲ್ಲಿಶ್‌’ ಅತ್ಯಂತ ಜನಪ್ರಿಯವಂತೆ. ಶೋರ್ಶೆ ಇಲ್ಲಿಶ್‌ ಅನ್ನು ಸವಿದ ಸಮಂತ್, ಅದನ್ನು ಹೇಗೆ ತಯಾರಿಸುತ್ತಾರೆ ಎಂಬುದನ್ನು ಬಣ್ಣಿಸುವುದು ಹೀಗೆ: ‘ಮೀನಿನ ತುಂಡುಗಳನ್ನು ಸಾಸಿವೆ ಮಸಾಲೆಯಲ್ಲಿ ಹಾಕಿ, ಸಣ್ಣ ಉರಿಯಲ್ಲಿ ಕುದಿಸಬೇಕು. ಸಾಸಿವೆ ಕಾಳು, ಮೊಸರು, ಮೆಣಸು, ಅರಿಶಿಣ, ಲಿಂಬೆಹುಳಿಯ ಅದ್ಭುತ ಮಿಶ್ರಣವಾದ ಮಸಾಲೆಯ ಆ ದಟ್ಟ ಹಳದಿ ಬಣ್ಣವನ್ನು ಇಲ್ಲಿ ಬಿಟ್ಟರೆ ಭಿತ್ತಿಪತ್ರಗಳಿಗೆ ಬಳಿಯುವ ಬಣ್ಣದ ಡಬ್ಬಗಳಲ್ಲಷ್ಟೇ ಕಾಣಲು ಸಾಧ್ಯ’.

ಸಮಂತ್‌ ಕೇವಲ ಮೀನೂಟ ಹುಡುಕಿಕೊಂಡು ಹೋಗುವುದಿಲ್ಲ. ಉಂಡಮೇಲೆ ಅಡುಗೆ ಮನೆಯನ್ನೂ ಹುಡುಕಿಕೊಂಡು ಹೋಗುತ್ತಾರೆ. ಬೋಗುಣಿಯಲ್ಲಿ ಕೊತಕೊತ ಕುದಿಯುವ ಶೋರ್ಶೆ ಇಲ್ಲಿಶ್‌ ಅನ್ನೋ, ಬಾಣಲೆಯಲ್ಲಿ ಕರಿಸಿಕೊಳ್ಳುತ್ತಿರುವ ರವಾ ಫ್ರೈಯನ್ನೋ ಕಣ್ಣರಳಿಸಿ ನೋಡಿ, ಖಾದ್ಯ ತಯಾರಿಸುವ ವಿಧಾನ, ಬಳಸುವ ಪದಾರ್ಥದ ವಿವರವನ್ನೂ ನೋಟ್‌ ಮಾಡಿಕೊಳ್ಳುತ್ತಾರೆ. ಬಳಿಕ ಮೀನಿನ ಮೂಲವನ್ನೂ ಶೋಧಿಸುತ್ತಾ ಹೋಗುತ್ತಾರೆ. ಬಾಂಗ್ಲಾದಿಂದ ಕೋಲ್ಕತ್ತಕ್ಕೆ ಬೆಳ್ಳಂಬೆಳಿಗ್ಗೆ ಬರುವ ಹಿಲ್ಸಾಗಳ ಮೆರವಣಿಗೆಯನ್ನು ನೋಡಲು ನಸುಕಿನಲ್ಲೇ ಹೌರಾ ಮಾರುಕಟ್ಟೆಗೆ ಹೋಗಿ ಕಾಯುತ್ತಾರೆ. ಮೀನಿನ ಕ್ರೇಟುಗಳನ್ನು ಎಳೆದಾಗ ಅದರ ತಳಭಾಗವು ನೆಲವನ್ನು ಕೆರೆಯುವ ಸದ್ದು, ದರ ಕೂಗುವಾಗ ಸ್ವರದಲ್ಲಾಗುವ ಏರಿಳಿತ, ತಕ್ಕಡಿಯ ತಟ್ಟೆಗಳು ಬಡಿದುಕೊಳ್ಳುವಾಗಿನ ಖಣಿಲು ಅವರಿಗೆ ಪಿಟೀಲಿನ ಶ್ರುತಿಯಂತೆ ಕೇಳುತ್ತದೆ. ಶಾಲೆಯಲ್ಲಿ ಗಲಾಟೆ ಮಾಡುತ್ತಿದ್ದಾಗ ಶಿಕ್ಷಕರು ಕೇಳುತ್ತಿದ್ದ ‘ನೀವೇನು ಮೀನು ಮಾರ್ಕೆಟ್‌ನಲ್ಲಿ ಇದೀರಿ ಅಂದ್ಕೊಂಡಿದೀರಾ’ ಎಂಬ ಮಾತಿಗೆ ಈ ಕಲ್ಪನೆ ಎಷ್ಟೊಂದು ತದ್ವಿರುದ್ಧ!

ಸಮುದ್ರವೇ ಇಲ್ಲದ ಹೈದರಾಬಾದ್‌ಗೂ ಲೇಖಕರ ಸವಾರಿ ಬರುತ್ತದೆ. ಆಸ್ತಮಾದಿಂದ ಬಳಲುವವರಿಗೆ ಜೀವಂತ ಮೀನನ್ನು ನುಂಗಿಸುತ್ತಿದ್ದ ಬಥಿನಿ ಗೌಡರ ಕುಟುಂಬದ ‘ಮತ್ಸ್ಯಚಿಕಿತ್ಸೆ’ ಕುರಿತು ತಿಳಿದುಕೊಳ್ಳುವ ಕುತೂಹಲ ಅವರಿಗೆ. ಚಿಕಿತ್ಸೆ ಪಡೆಯಲು ಬಂದ ಜೈನ ಕುಟುಂಬವೊಂದಕ್ಕೆ ಮೀನು ನುಂಗಿ ಆಸ್ತಮಾದಿಂದ ಪಾರಾಗುವುದೋ ಅಥವಾ ಸಸ್ಯಾಹಾರಿಯಾಗಿ ಉಳಿಯುವುದೋ ಎನ್ನುವ ಗೊಂದಲ. ಮೀನು ನುಂಗುವವರ ಇಂತಹ ಹಲವು ಗೊಂದಲಗಳು ಕಚಗುಳಿ ಇಟ್ಟು, ನಗು ಉಕ್ಕಿಸುತ್ತವೆ.

ತಮಿಳುನಾಡಿನ ಸಮುದ್ರ ತೀರದಲ್ಲಿ ಓಡಾಡುವಾಗ ಸಿಕ್ಕ ಮೀನಿನ ಪೋಡಿಯ ಕಥೆಯೂ ಅಷ್ಟೇ ಸ್ವಾರಸ್ಯಕರ. ಇಡುಕಿರಿದ ಚಿತ್ರಕಥೆಯೊಂದರಿಂದ ಪ್ರಬಲ ನಟರು ಹೊರಹೊಮ್ಮುವ ಹಾಗೆ ಬಂಗುಡೆಗಳ ತುಂಡುಗಳು ಪೋಡಿಯ ಮಸಾಲೆ ಆವರಣದಿಂದ ಹೊರಬರುತ್ತಿದ್ದವಂತೆ! ಕೇರಳದಲ್ಲಿ ಕಳ್ಳು ಕುಡಿಯುವಾಗ ಮೀನಿನ ಬಗೆಬಗೆಯ ಭಕ್ಷ್ಯಗಳ ಸಾಂಗತ್ಯ ಸಿಕ್ಕಿದ್ದು, ಮಂಗಳೂರಿನಲ್ಲಿ ಅತ್ಯುತ್ತಮ ರವಾ ಫ್ರೈ ಮತ್ತು ಮೀನು ಕರ‍್ರಿಯನ್ನು ಹುಡುಕಿ ಸವಿದಿದ್ದು ಮೊದಲಾದ ಪ್ರಸಂಗಗಳನ್ನು ಓದುತ್ತಾ ಹೋದಂತೆ ನಾವೇ ಅದನ್ನು ಆಸ್ವಾದಿಸುತ್ತಿದ್ದೇವೇನೋ ಎನ್ನುವಂತಹ ಖುಷಿಯ ಅಲೆಯೊಂದು ಏಳುತ್ತದೆ.

ವಿಮಾನ, ರೈಲು, ಬಸ್ಸು, ಮೋಟಾರ್‌ ಸೈಕಲ್‌, ಸೈಕಲ್‌, ಆಟೊ, ದೋಣಿ ಹೀಗೆ ಅವರ ಪ್ರಯಾಣದ ಸಾಧನಗಳು ಹಲವು. ಎಲ್ಲ ಅವಧಿಯಲ್ಲೂ ಅವರು ಒಬ್ಬಂಟಿಯಾಗಿಯೇ ಪ್ರವಾಸ ಕೈಗೊಂಡಿದ್ದರಂತೆ. ಮೀನೂಟದ ವಿವರಗಳಷ್ಟೇ ಅಲ್ಲದೆ ಅಲ್ಲಿನ ಬದುಕು, ಸಂಸ್ಕೃತಿಗಳು ಕೂಡ ಅವರ ಪ್ರವಾಸದ ಕಥನದಲ್ಲಿ ಮಡುಗಟ್ಟಿವೆ.

‘ಸೂರ್ಯನ ನೆರಳು’ ಕೃತಿಯ ಮೂಲಕ ಓದುಗರ ಮನ ಗೆದ್ದಿರುವ ಸಹನಾ ಹೆಗಡೆ ಅವರು ಈ ಕಥನವನ್ನು ಮೂಲಕೃತಿಯಷ್ಟೇ ಲಾಲಿತ್ಯಪೂರ್ಣವಾಗಿ ಕನ್ನಡಕ್ಕೆ ತಂದಿದ್ದಾರೆ. ಸಮಂತ್‌ ಅವರ ಬರಹದ ಕಾವ್ಯಾತ್ಮಕ ಗುಣವನ್ನೂ ಅವರು ಯಥಾವತ್ತಾಗಿ ಎತ್ತಿಕೊಂಡು ಬಂದಿದ್ದಾರೆ.

ರಾಮಚಂದ್ರ ಗುಹಾ ಅವರ ಈ ಮಾತುಗಳು ಕೃತಿಯ ಮಹತ್ವವನ್ನು ಅತ್ಯಂತ ಸೊಗಸಾಗಿ ಹಿಡಿದಿಡುತ್ತವೆ: ‘ಈ ಅನನ್ಯ ಪ್ರವಾಸ ಕಥನವು, ಸೃಜನಶೀಲ ಪರಿಕಲ್ಪನೆ ಮತ್ತು ಕೌಶಲಪೂರ್ಣ ನಿರ್ವಹಣೆ ಹೊಂದಿದೆ. ಭಾರತ ಭೂಖಂಡದಲ್ಲಿ ಮೀನುಗಾರಿಕೆ ಮತ್ತು ಮೀನೂಟದ ಕ್ರಮವು ಹೇಗೆ ತನ್ನದೇ ಆದ ಸಂಸ್ಕೃತಿ ಹಾಗೂ ಪರಿಸರ ರೂಪಿಸಿದೆ ಎಂಬುದನ್ನು ಅದ್ಭುತ ಒಳನೋಟಗಳನ್ನುಳ್ಳ ಲೇಖನಗಳ ಮೂಲಕ ಸಮಂತ್‌ ಕಟ್ಟಿಕೊಟ್ಟಿದ್ದಾರೆ. ಹದಮೀರದ ಇಲ್ಲಿಯ ಅಭಿರುಚಿಪೂರ್ಣ ಭಾಷೆ ಮತ್ತು ನುಡಿಗಟ್ಟುಗಳು ಘನತೆಯಿಂದ ಕೂಡಿವೆ’. ಹೌದು, ಕೃತಿ ಓದಿದ ಎಲ್ಲರೂ ಹೌದೌದು ಎನ್ನುವ ಅಭಿಪ್ರಾಯ ಇದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು